ಪಹಲ್ಗಾಮ್ ಭಯೋತ್ಪಾದಕ ದಾಳಿ-ಪ್ರಮುಖ ಭದ್ರತಾ ವೈಫಲ್ಯದ ಫಲಿತಾಂಶ ಹೊಣೆ ನಿರ್ಧರಿಸಬೇಕು-ಸರಿಪಡಿಕೆ ಕ್ರಮಗಳನ್ನು ಕೈಗೊಳ್ಳಬೇಕು-ಸಿಪಿಐ(ಎಂ) ಪೊಲಿಟ್‍ಬ್ಯುರೊ

ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ತೆಗೆದುಕೊಂಡ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ದು:ಖದಲ್ಲಿ ಮತ್ತು ಅದನ್ನು ಖಂಡಿಸುವಲ್ಲಿ  ಇಡೀ ದೇಶ ಒಂದಾಗಿ ನಿಂತಿದೆ. ಕೊಲೆಗಡುಕರನ್ನು ಪತ್ತೆಹಚ್ಚಲು ಮತ್ತು ಶಿಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಭಯೋತ್ಪಾದಕ ದಾಳಿಯು ಪ್ರಮುಖ ಭದ್ರತಾ ಲೋಪದ ಫಲಿತಾಂಶವಾಗಿದೆ. ಇದನ್ನು ತನಿಖೆ ಮಾಡಬೇಕು ಮತ್ತು ಸರಿಪಡಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ  ಹೊಣೆಗಾರಿಕೆಯನ್ನು  ನಿಗದಿಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಅತ್ಯಂತ ಮಹತ್ವದ ಸಂಗತಿಯೆಂದರೆ, ಕಾಶ್ಮೀರದ ಜನರು ಈ ದಾಳಿಯನ್ನು ಪ್ರತಿಭಟಿಸಲು ಮತ್ತು ಖಂಡಿಸಲು ಹೊರ ಬಂದಿರುವ ರೀತಿ. ಕಣಿವೆಯಲ್ಲಿ ಕೆಲಸ-ಕಾರ್ಯಗಳೆಲ್ಲ ಸ್ಥಗಿತಗೊಂಡವು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಅಂಶಗಳನ್ನು ಮೂಲೆಗುಂಪು ಮಾಡಲು ಈ ಜನ ಭಾವನೆಯನ್ನು ಗಟ್ಟಿಗೊಳಿಸಬೇಕು. ಭಯೋತ್ಪಾದಕರ ಮನೆಗಳನ್ನು ಕೆಡವುವಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು, ಇದು ಮುಗ್ಧ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜನರನ್ನು ಪರಕೀಯಗೊಳಿಸುತ್ತದೆ ಎಂದು ಮೇ 3ರಂದು ನವದೆಹಲಿಯಲ್ಲಿ ಸಭೆ ಸೇರಿದ ನಂತರ ಪ್ರಕಟಿಸಿರುವ ಪೊಲಿಟ್‍ಬ್ಯುರೊ ಹೇಳಿಕೆಯಲ್ಲಿ ಹೇಳಲಾಗಿದೆ.

ಸಭೆಯ ಆರಂಭದಲ್ಲಿ ಈ ದಾಳಿಯಲ್ಲಿ ಹತ್ಯೆಗೀಡಾದ 26 ಜನರ ಸಾವಿಗೆ ಸಂತಾಪ ಸೂಚಿಸಿ ಪೊಲಿಟ್‍ಬ್ಯುರೊ ಒಂದು ನಿಮಿಷ್ಟ ಮೌನ ಆಚರಿಸಿತು.

ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರು ಮತ್ತು ಕಾಶ್ಮೀರಿಗಳ ವಿರುದ್ಧ ದ್ವೇಷ ಅಭಿಯಾನ ಮತ್ತು ವೈಯಕ್ತಿಕ ನಾಗರಿಕ ವ್ಯಕ್ತಿಗಳ ಮೇಲೆ ಕೆಲವು ದಾಳಿಗಳು ನಡೆದಿರುವುದನ್ನು  ಪೊಲಿಟ್‌ಬ್ಯುರೊ ಖಂಡಿಸುತ್ತ ಇಂತಹ ಅಂಶಗಳು ಜನರನ್ನು ವಿಭಜಿಸುವ ಭಯೋತ್ಪಾದಕ ಗುರಿಗೆ ನೆರವಾಗುತ್ತವಷ್ಟೇ  ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ನೆಲೆಯಾಗಿರುವ ಭಯೋತ್ಪಾದಕ ಸಂಘಟನೆಗಳನ್ನು ನಿಗ್ರಹಿಸಲು ಸರ್ಕಾರವು ಅದರ ವಿರುದ್ಧ ಕೆಲವು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ದಾಳಿ ನಡೆಸಿದವರನ್ನು ಮತ್ತು ಅವರ ನಿರ್ವಾಹಕರನ್ನು ಗುರುತಿಸಲು ಮತ್ತು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಇಡಲು ಒಂದು ಪೂರ್ವಾಪರ ದಸ್ತಾವೇಜ(ಡೋಸಿಯರ್‍)ನ್ನು ಸಿದ್ಧಪಡಿಸುವುದಕ್ಕೆ  ಆದ್ಯತೆ ನೀಡಬೇಕು. ಹಣಕಾಸು ಕಾರ್ಯಾಚರಣೆ  ಕಾರ್ಯಪಡೆ (FATF) ಯೊಂದಿಗೆ ಸೂಕ್ತ ಹಸ್ತಕ್ಷೇಪಕ್ಕಾಗಿ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು. ಮಿಲಿಟರಿ ಪ್ರತಿಸ್ಪಂದನೆ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಗ್ರಹಿಸುವ ಉದ್ದೇಶವನ್ನು ಪೂರೈಸುತ್ತದೆಯೇ ಮತ್ತು ಅದನ್ನು ಪ್ರತಿಬಂಧಿಸುವ ಕಾರ್ಯನಿರ್ವಹಿಸುತ್ತದೆಯೇ ಎಂದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.

ಜಾತಿ ಜನಗಣತಿಸಕಾರಾತ್ಮಕ ನಿರ್ಧಾರ

ಸಾಮಾನ್ಯ ಜನಗಣತಿಯ ಜೊತೆಗೆ ಜಾತಿ ಜನಗಣತಿಯನ್ನು ನಡೆಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿರುವುದು ಒಂದು ಸಕಾರಾತ್ಮಕ ನಿರ್ಧಾರವಾಗಿದೆ, ಇದನ್ನು ನಾವು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದೇವೆ ಎನ್ನುತ್ತ ಪೊಲಿಟ್ ಬ್ಯುರೊ,   ಸರ್ಕಾರವು ಜಾತಿ ದತ್ತಾಂಶ ಮತ್ತು ಇತರ ವಿವರಗಳನ್ನು ಹೇಗೆ ಸಂಗ್ರಹಿಸಲು ಉದ್ದೇಶಿಸಿದೆ ಎಂಬುದರ ವಿಧಾನಗಳನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಬಹಳ ಹಿಂದೆಯೇ ನಡೆಸಬೇಕಾಗಿದ್ದ  ಸಾಮಾನ್ಯ ಜನಗಣತಿಯ ನಡೆಸುವ ವೇಳಾಪಟ್ಟಿಯನ್ನು ಸರ್ಕಾರ ತಕ್ಷಣ ಘೋಷಿಸಬೇಕು ಎಂದು ಆಗ್ರಹಿಸಿದೆ.

ವಕ್ಫ್ ಕಾನೂನು ಮತ್ತು ಕೋಮು ದಾಳಿಗಳುಬಿಜೆಪಿ ನಿಜ ಆಶಯ ಬಯಲು

ಬಿಜೆಪಿ ಸರ್ಕಾರವು ವಕ್ಫ್ (ತಿದ್ದುಪಡಿ) ಮಸೂದೆ 2025 ಅನ್ನು ಜಾರಿಗೆ ತಂದ ನಂತರ, ವಿವಿಧ ನಗರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಕೋಮು ದಾಳಿಗಳು ನಡೆದಿವೆ. ಮುಸ್ಲಿಮರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಸುಟ್ಟುಹಾಕಲಾಯಿತು. ಬಿಜೆಪಿ ಈ ಮಸೂದೆಯನ್ನು ಜನರನ್ನು ಮತೀಯವಾಗಿ ಧ್ರುವೀಕರಿಸಲು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಲು ಬಳಸುತ್ತಿದೆ ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಪೊಲಿಟ್‍ಬ್ಯುರೊ ಹೇಳಿದೆ. ವಕ್ಫ್ ಮಸೂದೆಯ ನಂತರ, ಚರ್ಚ್ ಒಡೆತನದ ಆಸ್ತಿಗಳ ಕಡೆಗೆ ಗಮನ ಹರಿಸಬೇಕು ಎಂದು ಕೆಲವು ಬಿಜೆಪಿ ನಾಯಕರು ಹೇಳಿದ್ದಾರೆ. ಇದು ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಮತ್ತು ಅವರಿಗೆ ಸಾಂವಿಧಾನಿಕವಾಗಿ ಖಾತರಿಪಡಿಸಿದ ಹಕ್ಕುಗಳು ಮತ್ತು ರಕ್ಷಣೆಗಳನ್ನು ಕಸಿದುಕೊಳ್ಳುವ ಅವರ ನಿಜವಾದ ಉದ್ದೇಶವನ್ನು ಬಯಲಿಗೆ ತರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ,  ಮುಸ್ಲಿಂ ಉಗ್ರಗಾಮಿ ಸಂಘಟನೆಗಳು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಮತ್ತು ಈ ಮೂಲಕ ಹಿಂದುತ್ವ ಕೋಮು ಶಕ್ತಿಗಳ ಆಟಕ್ಕೆ ನೆರವಾಗುತ್ತಿವೆ ಎಂದು ಖೇದ ವ್ಯಕ್ತಪಡಿಸಿದೆ.

ರಾಜ್ಯಪಾಲರ ಅಧಿಕಾರಗಳ ಕುರಿತು ಸುಪ್ರೀಂ ಕೋರ್ಟ್ ತೀರ್ಪು

ರಾಜ್ಯಪಾಲರ ಅಧಿಕಾರಗಳ ಕುರಿತು ಸುಪ್ರೀಂ ಕೋರ್ಟ್ ತೀರ್ಪು ವಿರೋಧ ಪಕ್ಷಗಳ ಆಳ್ವಿಕೆಯ ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸಲು ಅವರನ್ನು ಬಳಸುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಒಂದು ಹೊಡೆತವಾಗಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.  ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಕಾಲಮಿತಿಯ ಮಾರ್ಗಸೂಚಿಗಳನ್ನು ನಿಗದಿಪಡಿಸಿದೆ ಮತ್ತು ಅವರು ರಾಜಕೀಯ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಬಾರದು, ಬದಲಿಗೆ ಸಾಂವಿಧಾನಿಕ ಮುಖ್ಯಸ್ಥರಾಗಿ  ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.

ಆದರೆ ಮೋದಿ ಸರ್ಕಾರವು ತೀರ್ಪನ್ನು ಸ್ವೀಕರಿಸುವ ಮತ್ತು ರಾಜ್ಯ ಶಾಸನ ಸಭೆಗಳ ಆಶಯಗಳನ್ನು ಗೌರವಿಸುವುದನ್ನು ಖಚಿತಪಡಿಸಿಕೊಳ್ಳುವ ಬದಲು, ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸುವ ಬಗ್ಗೆ ಯೋಚಿಸುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು. ತೀರ್ಪಿನ ವಿರುದ್ಧ ಉಪ ರಾಷ್ಟ್ರಪತಿಗಳು ಮತ್ತು ಕೆಲವು ಬಿಜೆಪಿ ನಾಯಕರು ಮಾಡಿದ ಕೆಲವು ಹೇಳಿಕೆಗಳು ನ್ಯಾಯಾಲಯಗಳ ನ್ಯಾಯಾಂಗ ಅಧಿಕಾರಕ್ಕೆ ಒಂದು ನೇರ ಸವಾಲಾಗಿದ್ದು, ಅವುಗಳನ್ನು ಖಂಡಿಸಬೇಕು ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಆದಿವಾಸಿಗಳ ಬದುಕಿನಲ್ಲಿ ಭಯ ಸೃಷ್ಟಿಸುವ ಆಪರೇಷನ್ ಕಗಾರ್

ಛತ್ತೀಸ್‌ಗಢದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾವೋವಾದಿಗಳನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಆಪರೇಷನ್ ಕಗಾರ್ ಆದಿವಾಸಿಗಳ ಜೀವನದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದೆ. ಮಾವೋವಾದಿಗಳು ಸರ್ಕಾರದೊಂದಿಗೆ ಒಂದು ಸಂವಾದದ  ಪ್ರಸ್ತಾಪವಿಟ್ಟಿದ್ದಾರೆ. ಸರ್ಕಾರಿ ಪಡೆಗಳು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಮುಗ್ಧ ಆದಿವಾಸಿಗಳ ಜೀವಗಳು ಕಳೆದುಹೋಗದಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ  ಶಸ್ತ್ರಾಸ್ತ್ರಗಳ ಬಳಕೆಯ ಮೂಲಕ ಮಾತ್ರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲವಾದ್ದರಿಂದ ಸರ್ಕಾರ ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದೆ.

ಯುಎಸ್ ಸುಂಕ ಯುದ್ಧ

ಯುಎಸ್ ಬಹುತೇಕ ಎಲ್ಲಾ ದೇಶಗಳ ಮೇಲೆ ಸುಂಕಗಳನ್ನು ಹೆಚ್ಚಿಸಿದೆ, ಆದರೆ ನಂತರ ಚೀನಾವನ್ನು ಹೊರತುಪಡಿಸಿ 90 ದಿನಗಳವರೆಗೆ ವಿರಾಮ ಘೋಷಿಸಿ ಹಿಂದೆ ಸರಿದಿದೆ. ಯುಎಸ್ ಕಾಯ್ದೆಯನ್ನು ಅನೇಕ ದೇಶಗಳು ವಿರೋಧಿಸಿದವು. ಚೀನಾ, ಕೆನಡಾ, ಮೆಕ್ಸಿಕೊ ಮತ್ತು ಯುರೋಪಿಯನ್ ಒಕ್ಕೂಟಗಳು ಯುಎಸ್‌ನಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಮೂಲಕ ಪ್ರತೀಕಾರ ನಡೆಸಿದವು. ಅವರಿಗಿಂತ ಭಿನ್ನವಾಗಿ, ಭಾರತ ಸರ್ಕಾರವು ಭಾರತೀಯ ಸರಕುಗಳ ಮೇಲೆ ಸುಂಕ ವಿಧಿಸುವುದರ ವಿರುದ್ಧ ಪ್ರತಿಕ್ರಿಯಿಸಲಿಲ್ಲ ಬದಲಾಗಿ ಟ್ರಂಪ್ರವರನ್ನು ಖಶಿಪಡಿಸಲು ಸ್ವಯಂಪ್ರೇರಣೆಯಿಂದ ಸುಂಕಗಳನ್ನು ಇಳಿಸಿದೆ ಎಂದು ಪೊಲಿಟ್‍ಬ್ಯುರೊ ಟೀಕಿಸಿದೆ.

ಭಾರತ-ಅಮೆರಿಕ ವ್ಯಾಪಾರ ಮಾತುಕತೆಗಳು

ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ (BTA) ಸಹಿ ಹಾಕಲು ಭಾರತ ಸರ್ಕಾರವು ಅಮೆರಿಕದೊಂದಿಗೆ ಚರ್ಚೆಯಲ್ಲಿ ತೊಡಗಿದೆ. ಈಗಾಗಲೇ ಎರಡು ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಒಪ್ಪಂದವು ವ್ಯವಹಾರ ಕುದುರುವ  ನಿರೀಕ್ಷೆಯಿದೆ. ಅಮೆರಿಕ ಸರ್ಕಾರವು ಭಾರತವು ಅಮೆರಿಕದಿಂದ ಕೃಷಿ ಉತ್ಪನ್ನಗಳಿಗೆ ತನ್ನ ಮಾರುಕಟ್ಟೆಯನ್ನು ತೆರೆಯಬೇಕೆಂದು ಮತ್ತು ಪೇಟೆಂಟ್ ಕಾನೂನುಗಳಲ್ಲಿ ಬದಲಾವಣೆಗಳನ್ನು ತರಬೇಕೆಂದು ಬಯಸುತ್ತದೆ. ನಮ್ಮ ರೈತರು ಮತ್ತು ದೇಶದ ಹಿತಾಸಕ್ತಿಗಳಿಗೆ ಹಾನಿ ಮಾಡುವ ಅಂತಹ ಎಲ್ಲಾ ಪ್ರಯತ್ನಗಳನ್ನು ಭಾರತ ವಿರೋಧಿಸಬೇಕು ಎಂದು ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಗಾಜಾದಲ್ಲಿ ನರಮೇಧ ಯುದ್ಧ

ಪೊಲಿಟ್ ಬ್ಯೂರೋ ಗಾಜಾ, ಪ್ಯಾಲೆಸ್ಟೈನ್ ಮೇಲೆ ಮುಂದುವರೆಯುತ್ತಿರುವ ಯುದ್ಧವನ್ನು ಖಂಡಿಸಿತು. ಇಸ್ರೇಲ್ ದಾಳಿಗಳು ಮತ್ತು ನೆರವು ವಾಹನಗಳ ಚಲನೆಯ ಮೇಲೆ ವಿಧಿಸಲಾದ ನಿಷೇಧದಿಂದಾಗಿ, ಗಾಜಾದ ಜನರು ಸಾಮೂಹಿಕ ಹಸಿವಿನಿಂದ ಬಳಲುತ್ತಿದ್ದಾರೆ. ಅಂತರರಾಷ್ಟ್ರೀಯ ಸಮುದಾಯವು ತಕ್ಷಣವೇ ಕದನ ವಿರಾಮವನ್ನು ಘೋಷಿಸಲು ಮತ್ತು ಗಾಜಾಗೆ ಆಹಾರ ಮತ್ತು ಇತರ ಅಗತ್ಯ ಸರಕುಗಳು ಅಡೆತಡೆಯಿಲ್ಲದ ಪ್ರವೇಶಿಸಲು ಅವಕಾಶ ನೀಡುವಂತೆ  ಇಸ್ರೇಲ್ ಮೇಲೆ ಒತ್ತಡ ತರಬೇಕು ಎಂದು ಪೊಲಿಟ್‍ಬ್ಯುರೊ ಕರೆ ನೀಡಿದೆ.

ಬಿಹಾರದಲ್ಲಿ ಚುನಾವಣೆಗಳು

ಬಿಹಾರ ರಾಜ್ಯ ವಿಧಾನಸಭೆಗೆ ಚುನಾವಣೆಗಳು ಅಕ್ಟೋಬರ್ 2025 ರಲ್ಲಿ ನಿಗದಿಯಾಗಿವೆ. ಈ ಚುನಾವಣೆಗಳಲ್ಲಿ ಸ್ಪರ್ಧಿಸಲು ಪಕ್ಷವು ತನ್ನ ಸಿದ್ಧತೆಗಳನ್ನು ಪ್ರಾರಂಭಿಸುತ್ತದೆ, ಮಹಾಘಟಬಂಧನ್‌ನಲ್ಲಿರುವ ಮಿತ್ರರಾಷ್ಟ್ರಗಳೊಂದಿಗೆ ಅದು ಈಗಾಗಲೇ ಚರ್ಚೆಯಲ್ಲಿದೆ ಎಂದು ಪೊಲಿಟ್‍ಬ್ಯುರೊ ತಿಳಿಸಿದೆ.

ಹೊಸದಾಗಿ ಆಯ್ಕೆಯಾದ ಸಿಪಿಐ(ಎಂ)ನ ಕೇಂದ್ರ ಸಮಿತಿಯ ಮೊದಲ ಸಭೆ ಜೂನ್ 3-5 ರಿಂದ ನವದೆಹಲಿಯಲ್ಲಿ ನಡೆಯಲಿದೆ ಎಂದು ಪೊಲಿಟ್‍ಬ್ಯುರೊ ಹೇಳಿಕೆಯಲ್ಲಿ ತಿಳಿಸಲಾಗಿದೆ.

 

Donate Janashakthi Media

Leave a Reply

Your email address will not be published. Required fields are marked *