ಕೊವಿಡ್-೧೯ ಅಂಟು ರೋಗವು ಇಡೀ ವಿಶ್ವವನ್ನು ಪೀಡಿಸುತ್ತಿರುವ ಸನ್ನಿವೇಶದಲ್ಲಿ, ಭಾರತದ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವ/ನುಂಗುವ ಅವಕಾಶವಾದಿ ಪ್ರಯತ್ನಗಳನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರವು ತನ್ನ ಎಫ್ಡಿಐ ನೀತಿಯನ್ನು ಪರಾಮರ್ಶೆಗೆ ಒಳಪಡಿಸಿ, ಕೆಲವು ಬದಲಾವಣೆಗಳನ್ನು ಜಾರಿಗೆ ತಂದಿರುವುದಾಗಿ ಹೇಳಿದೆ. ಇದರ ಗುರಿ ಚೀನಾದಿಂದ ಬರುವ ಎಫ್ಡಿಐಗಳೆ ಎಂಬುದು ಎಲ್ಲರಿಗೂ ಗೊತ್ತಿರುವ ಗುಟ್ಟು. ಈ ಕ್ರಮ ಕೈಗೊಂಡದ್ದು ದೇಶದ ಆರ್ಥಿಕ ಹಿತದೃಷ್ಟಿಯಿಂದಲೇ ಅಥವ ರಾಜಕೀಯ ಕಾರಣಗಳಿಂದಾಗಿಯೋ?
ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಪ್ರೊ. ಸುನಂದಾ ಸೆನ್ ಇಲ್ಲಿ ವಿಶ್ಲೇಷಿಸಿದ್ದಾರೆ.
೧೯೯೧ರ ಆರ್ಥಿಕ ಸುಧಾರಣೆಗಳ ನಂತರ, ದೇಶದಲ್ಲಿ ವಿದೇಶಿ ಬಂಡವಾಳವು ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗಿದೆ. ಇದು, ದೇಶದ ಮೇಲಿನ ಸಾಲವಲ್ಲ. ವಿದೇಶಿ ಬಂಡವಾಳದ ಹೂಡಿಕೆ ಎರಡು ರೀತಿಯದ್ದಾಗಿರುತ್ತದೆ. ಒಂದು, ಎಫ್ಡಿಐ. ಇನ್ನೊಂದು, ಎಫ್ಐಐ. ಎಫ್ಡಿಐ (ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್) ಅಂದರೆ, ವಿದೇಶಿ ಬಂಡವಾಳದ ನೇರ ಹೂಡಿಕೆ. ಎಫ್ಐಐ ಅಂದರೆ ಪೋರ್ಟ್ಫೋಲಿಯೋ ಅಥವಾ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ. ನೇರ ಹೂಡಿಕೆ (ಎಫ್ಡಿಐ) ಅಂದರೆ, ಉತ್ಪಾದನಾ ಚಟುವಟಿಕೆಗಳ ಮೇಲೆ ಅಥವಾ ಅಸ್ತಿತ್ವದಲ್ಲಿರುವ ಉತ್ಪಾದನಾ ಸಂಸ್ಥೆಯ ಒಡೆತನದ ಮೇಲೆ ಮಾಡುವ ಬಂಡವಾಳದ ದೀರ್ಘಾವಧಿಯ ಹೂಡಿಕೆ. ಇಂತಹ ಹೂಡಿಕೆಯಿಂದ ದೇಶಕ್ಕೆ ಅನುಕೂಲ ಹೆಚ್ಚು, ಏಕೆಂದರೆ, ಇಂತಹ ಹೂಡಿಕೆಯನ್ನು ಹಿಂತೆಗೆಯುವ ಪ್ರಕ್ರಿಯೆಯೇ ದೀರ್ಘಾವಧಿಯದಾಗಿರುತ್ತದೆ. ಆದರೆ, ಎಫ್ಐಐ ಅಥವಾ ಷೇರು ಮಾರುಕಟ್ಟೆ ಅಥವಾ ಪೋರ್ಟ್ಫೋಲಿಯೋ ಹೂಡಿಕೆಯಿಂದ ದೇಶಕ್ಕೆ ಅಪಾಯವೇ ಹೆಚ್ಚು, ಏಕೆಂದರೆ, ಅದನ್ನು ಕ್ಷಣಾರ್ಧದಲ್ಲಿ ಹಿಂತೆಗೆಯಬಹುದು. ಹಿಂತೆಗೆದ ಮರುಕ್ಷಣದಲ್ಲಿಯೇ ಹಿಂತೆಗೆದಷ್ಟು ಮೊತ್ತದ ವಿದೇಶಿ ವಿನಿಮಯ ನಮ್ಮ ಸಂಗ್ರಹದಿಂದ ಹೊರಹೋಗುತ್ತದೆ. ಈ ಕಾರಣದಿಂದಾಗಿಯೇ, ಇದನ್ನು ಹಾಟ್ ಮನಿ ಎಂದು ಕರೆಯುತ್ತಾರೆ. ವಿದೇಶಿ ಬಂಡವಾಳ ಹೂಡಿಕೆಯ ನೀತಿಯನ್ನು ಸತತವಾಗಿ ಸಡಿಲಗೊಳಿಸುತ್ತಾ ಬಂದ ಪರಿಣಾಮವಾಗಿ, ಎಫ್ಡಿಐ ಗಿಂತ ಅಗಾಧ ಪ್ರಮಾಣದ ಎಫ್ಐಐ (ಪೋರ್ಟ್ಫೋಲಿಯೋ) ನಮ್ಮ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿದೆ. ಅದು ನಮ್ಮ ಹಣಕಾಸು ಮಾರುಕಟ್ಟೆಯನ್ನು ಅನಿಶ್ಚಿತತೆಗೆ ತಳ್ಳಿದೆ.
ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ, ೨೦೦೮ರಿಂದ ಹಿಡಿದು ೨೦೧೮ರವರೆಗೆನ ಅವಧಿಯಲ್ಲಿ ನಮ್ಮ ಜಿಡಿಪಿ ಉನ್ನತವಾಗಿ ಬೆಳೆದಿತ್ತು. ಈ ಅವಧಿಯಲ್ಲಿ, ಆಗಿದ್ದ ವಿದೇಶಿ ಬಂಡವಾಳದ ನೇರ ಹೂಡಿಕೆ ಪ್ರಮಾಣ ಬಹಳ ಕಡಿಮೆಯೇ ಇತ್ತು. ನೇರ ಹೂಡಿಕೆಗೆ ಹೋಲಿಸಿದರೆ, ಷೇರು ಮಾರುಕಟ್ಟೆಯಲ್ಲಿ ಆಗಿದ್ದ ಹೂಡಿಕೆಯೇ ಅಗಾಧವಾಗಿತ್ತು. ರಿಸರ್ವ್ ಬ್ಯಾಂಕ್ ಮೂಲಗಳ ಪ್ರಕಾರ, ೨೦೧೮-೧೯ಕ್ಕೆ ಕೊನೆಗೊಂಡ ವರ್ಷದ ಹಿಂದಿನ ಆರು ವರ್ಷಗಳಲ್ಲಿ, ಷೇರು ಮಾರುಕಟ್ಟೆಯಲ್ಲಿ ವಾರ್ಷಿಕ ಸರಾಸರಿ ೨೪೪.೭ ಬಿಲಿಯನ್ ಡಾಲರ್ ಪೋರ್ಟ್ಫೋಲಿಯೋ ಹೂಡಿಕೆಯಾಗಿದೆ. ಇದೇ ಆರು ವರ್ಷಗಳಲ್ಲಿ, ವಿದೇಶಿ ಬಂಡವಾಳದ ನೇರ ಹೂಡಿಕೆಯ ಪ್ರಮಾಣವು ವಾರ್ಷಿಕ ಸರಾಸರಿ ೫೩.೩ ಬಿಲಿಯನ್ ಡಾಲರ್ನಷ್ಟಿತ್ತು. ಈ ಎರಡೂ ರೀತಿಯ ಹೂಡಿಕೆಗಳಲ್ಲಿ ಅಜ ಗಜಾಂತರ ವ್ಯತ್ಯಾಸವಿದೆ. ಬಿಡಿ ಬಿಡಿಯಾಗಿ ಒಂದೇ ಒಂದು ವರ್ಷದ ಈ ಎರಡೂ ರೀತಿಯ ಹೂಡಿಕೆಗಳನ್ನು ತುಲನೆಮಾಡಿ ನೋಡಿದರೂ ಸಹ, ಅವುಗಳ ನಡುವೆ ಅಗಾಧ ವ್ಯತ್ಯಾಸವಿರುವುದು ಎದ್ದು ಕಾಣುತ್ತದೆ. ಉದಾಹರಣೆಗೆ, ೨೦೧೮-೧೯ ವರ್ಷದಲ್ಲಿ ೬೪.೮ ಬಿಲಿಯನ್ ಡಾಲರ್ ನೇರ ಹೂಡಿಕೆಯಾಗಿತ್ತು ಮತ್ತು ೨೫೬.೯ ಬಿಲಿಯನ್ ಡಾಲರ್ ಪೋರ್ಟ್ಫೋಲಿಯೋ ಹೂಡಿಕೆಯಾಗಿತ್ತು. ಅಂದರೆ, ನೇರ ಹೂಡಿಕೆಯ ಸುಮಾರು ನಾಲ್ಕು ಪಟ್ಟು ಹೆಚ್ಚು ಪೋರ್ಟ್ಫೋಲಿಯೋ ಹೂಡಿಕೆಯಾಗಿತ್ತು.
ವಿದೇಶಿ ಬಂಡವಾಳದ ಒಳ-ಹರಿವಿನ ಏರಿಕೆ ಮತ್ತು ಅದರ ಭಾಗಗಳಾದ ನೇರ ಹೂಡಿಕೆ ಹಾಗೂ ಪೋರ್ಟ್ಫೋಲಿಯೋ ಹೂಡಿಕೆಗಳ ನಡುವಿನ ಅಜಗಜಾಂತರದ ವ್ಯತ್ಯಾಸಗಳು ಭಾರತದ ಅರ್ಥವ್ಯವಸ್ಥೆಯ ಮೇಲೆ ಉಂಟುಮಾಡಿದ ಪರಿಣಾಮಗಳು ಮೊದಲೇ ಊಹಿಸಿದ ರೀತಿಯಲ್ಲೇ ಇದ್ದವು. ಪೋರ್ಟ್ಫೋಲಿಯೋ ಹೂಡಿಕೆಯು ರಿಯಲ್ ಎಸ್ಟೇಟ್, ಸರಕುಗಳ ವಾಯಿದಾ ಮಾರುಕಟ್ಟೆ ಮತ್ತು ವಿದೇಶಿ ಕರೆನ್ಸಿ ಮಾರುಕಟ್ಟೆಗಳಲ್ಲಿ ಏರಿಳಿತಗಳನ್ನು ಉಂಟುಮಾಡಿತು. ಇದೂ ನಿರೀಕ್ಷಿತವೇ. ಹಾಗೆಯೇ, ಒಳ ಹರಿದ ನಿವ್ವಳ ಅಲ್ಪಾವಧಿಯ ವಿದೇಶಿ ಬಂಡವಾಳಕ್ಕೂ (ಪೋರ್ಟ್ಫೋಲಿಯೋ) ಮತ್ತು ರೂಪಾಯಿ-ಡಾಲರ್ ದರಕ್ಕೂ ಒಂದು ರೀತಿಯ ತಾಳ-ಮೇಳ/ಸಾಂಗತ್ಯ ಇತ್ತು. ಅದಕ್ಕೆ ಪೂರಕವಾಗಿಯೋ ಎಂಬಂತೆ ಹೂಡಿಕೆಗೆ ಪೋರ್ಟ್ಫೋಲಿಯೋ ಸಹ ಸುಲಭವಾಗಿ ಎಟುಕುತ್ತಿತ್ತು.
ಒಳ ಹರಿದ ನಿವ್ವಳ ಅಲ್ಪಾವಧಿಯ ವಿದೇಶಿ ಬಂಡವಾಳವು (ಪೋರ್ಟ್ಫೋಲಿಯೋ) ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾದ ನಂತರ ಲಾಭ/ನಷ್ಟ ಗಳಿಸುವುದು ಸಾಮಾನ್ಯ. ಅದು ದೇಶದ ಅರ್ಥವ್ಯವಸ್ಥೆಯ ಮೇಲೆ ಬೀರುತ್ತಿದ್ದ ಪ್ರಭಾವ ತಕ್ಷಣದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ, ಆ ಲಾಭವು ಬಳಕೆಯಾಗುವ ರೀತಿಯು ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹೇಗೆಂಬುದನ್ನು ಈ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು: ಒಂದು ಕಂಪೆನಿಯು ತನ್ನ ಕಾರ್ಯಾಚರಣೆಯ ವಿಸ್ತರಣೆಗಾಗಿ ತನ್ನ ಷೇರುಗಳನ್ನು ಪ್ರಾಥಮಿಕ ಮಾರುಕಟ್ಟೆಯಲ್ಲಿ ಮಾರುತ್ತದೆ. ಅದರಿಂದ ಬಂದ ಹಣವು ಕಂಪೆನಿಯ ಕೆಲವು ಉದ್ದೇಶಗಳಿಗೆ/ಚಟುವಟಿಕೆಗಳಿಗೆ ವಾಸ್ತವವಾಗಿ ಬಳಕೆಯಾಗುತ್ತದೆ. ಆದರೆ, ಆ ಕಂಪೆನಿಯ ಷೇರನ್ನು ಕೊಂಡ ವ್ಯಕ್ತಿಯು ಅದನ್ನು ಎರಡನೆಯ ಹಂತದ ಮಾರುಕಟ್ಟೆಯಲ್ಲಿ ಒಬ್ಬ ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರನಿಗೆ ಹೆಚ್ಚಿನ ಲಾಭಕ್ಕೆ ಮಾರುತ್ತಾನೆ. ಆ ಲಾಭವು ಕೇವಲ ಒಂದು ಹಣ ಗಳಿಕೆಯಾಗುತ್ತದೆ. ಅದೊಂದು ವೈಯುಕ್ತಿಕ- ಜೂಜುಗಾರ ಗಳಿಕೆಯೇ ವಿನಃ ಸಮಾಜಕ್ಕೆ ಉಪಯೋಗವಾಗುವಂತಹ ವಾಸ್ತವಿಕ ಚಟುವಟಿಕೆಯಲ್ಲ. ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಗಳಿಸುವ ಲಾಭವೂ ಇದೇ ಸ್ವರೂಪದ್ದೇ ಆಗಿರುತ್ತದೆ. ಅದರಿಂದ ದೇಶಕ್ಕೆ ಹೆಚ್ಚು ಹಾನಿಯಾಗಿದೆ.
ಆದರೆ, ವಿದೇಶಿ ನೇರ ಹೂಡಿಕೆಯು(ಎಫ್ಡಿಐ) ದೇಶದ ಮೇಲೆ ಉಂಟುಮಾಡುವ ಪರಿಣಾಮಗಳು ವಿದೇಶಿ ಪೋರ್ಟ್ಫೋಲಿಯೋ ಹೂಡಿಕೆಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಆದಿಯಿಂದ ಅಂತ್ಯದವರೆಗೆ ಸಕಲವನ್ನೂ ಹೊಂದಿಸಿಕೊಂಡು ಹೊಸದಾಗಿ ನಿರ್ಮಿಸುವ ಒಂದು ಯೋಜನೆಯೇ ಇರಲಿ, ಅಥವಾ, ಅಸ್ತಿತ್ವದಲ್ಲಿರುವ ಒಂದು ಉದ್ದಿಮೆಯ ಒಡೆತನವನ್ನು ಸ್ವಾಧೀನ ಪಡಿಸಿಕೊಳ್ಳುವ (ಕೊಳ್ಳುವ)ಮೂಲಕವೇ ಇರಲಿ, ವಿದೇಶಿ ಬಂಡವಾಳವು ನೇರವಾಗಿ ಇಂತಹ ಚಟುವಟಿಕೆಗಳ ಮೇಲೆ ಹೂಡಿಕೆಯಾದಾಗ ಉಂಟಾಗುವ ಪರಿಣಾಮಗಳು ಸಕಾರಾತ್ಮಕವಾಗಿರುತ್ತವೆ. ಅಂದರೆ, ದೇಶದ ಆರ್ಥಿಕ ಅಭಿವೃದ್ಧಿಗೆ ಎಫ್ಡಿಐ ಪೂರಕವಾಗಿದ್ದರೆ, ಪೋರ್ಟ್ಫೋಲಿಯೋ ಹೂಡಿಕೆಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಮಾರಕ. ಈ ಅಂಶವನ್ನು ಗಮನದಲ್ಲಿಟ್ಟು ಕೊಂಡು ನೋಡಿದರೆ, ೧೯೯೧ ರಿಂದ ಹಿಡಿದು ಇತ್ತೀಚಿನವರೆಗೆ ನಮ್ಮ ದೇಶಕ್ಕೆ ಹರಿದು ಬಂದಿರುವ ವಿದೇಶಿ ಬಂಡವಾಳದಲ್ಲಿ ಉಪಯುಕ್ತ ಎಂದು ಹೇಳಬಹುದಾದ ಎಫ್ಡಿಐನ ಒಟ್ಟು ಪ್ರಮಾಣ ದೊಡ್ಡದೇನಲ್ಲ. ಆದರೆ, ಅದರ ಐದು ಪಟ್ಟು ದೊಡ್ಡ ಮೊತ್ತದ ವಿದೇಶಿ ಹಣ ಪೋರ್ಟ್ಫೋಲಿಯೋ ರೂಪದ ಬಂಡವಾಳವಾಗಿ (ಎಫ್ಐಐ) ಒಳ ಹರಿದಿದೆ. ಎಫ್ಐಐ ದೇಶಕ್ಕೆ ನಿರುಪಯುಕ್ತವಾದ ಹೂಡಿಕೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ಅಂಶಗಳಿಂದಾಗಿ, ನಮ್ಮ ದೇಶದ ಎಫ್ಡಿಐ ನೀತಿಯಲ್ಲಿ ಎಪ್ರಿಲ್ ೧೭ರಂದು ಮಾಡಲಾಗಿರುವ ಕೆಲವು ಬದಲಾವಣೆಗಳು ಸ್ವಲ್ಪ ಮಟ್ಟಿನ ಆತಂಕ ಹುಟ್ಟಿಸುತ್ತವೆ. ಸರ್ವವ್ಯಾಪಿ ಮತ್ತು ತೀವ್ರ ಅಪಾಯಕಾರಿ ಕೊರೋನಾ ಅಂಟು ರೋಗವು ಇಡೀ ವಿಶ್ವವನ್ನು ಪೀಡಿಸುತ್ತಿರುವ ಸನ್ನಿವೇಶದಲ್ಲಿ, ಭಾರತದ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವ/ನುಂಗುವ ಅವಕಾಶವಾದಿ ಪ್ರಯತ್ನಗಳನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರವು ತನ್ನ ಎಫ್ಡಿಐ ನೀತಿಯನ್ನು ಪರಾಮರ್ಶೆಗೆ ಒಳಪಡಿಸಿ, ಕೆಲವು ಬದಲಾವಣೆಗಳನ್ನು ಜಾರಿಗೆ ತಂದಿರುವುದಾಗಿ ಹೇಳಿದೆ. ಈ ತಿದ್ದುಪಡಿಗಳ ಪ್ರಕಾರ, ಭಾರತದ ಯಾವುದೇ ಸಂಸ್ಥೆಯಲ್ಲಿ ಅನುಕೂಲಕರ ಒಡೆತನದ ಹೂಡಿಕೆ ಮಾಡಿರುವ ಮತ್ತು ಭಾರತದ ಭೂ ಭಾಗದೊಂದಿಗೆ ಗಡಿ ಹಂಚಿಕೊಂಡಿರುವ ಯಾವುದೇ ದೇಶದ ಒಂದು ಸಂಸ್ಥೆಯು ಅಥವಾ ಆ ದೇಶದಲ್ಲಿ ನೆಲೆಸಿರುವ ವ್ಯಕ್ತಿಯು ಅಥವಾ ಆ ದೇಶದ ಪ್ರಜೆಯು, ಇನ್ನು ಮುಂದೆ, ಭಾರತ ಸರ್ಕಾರದ ಅನುಮತಿ ಪಡೆದ ನಂತರವೇ ಹೂಡಿಕೆ ಮಾಡಬಹುದು. ಅಲ್ಲದೆ, ಈಗಾಗಲೇ ಅಸ್ತಿತ್ವದಲ್ಲಿರುವ ಅನುಕೂಲಕರ ಒಡೆತನದ ವಿದೇಶಿ ನೇರ ಹೂಡಿಕೆಯ ಸಂಸ್ಥೆಯಲ್ಲಿ ಅಥವಾ ಅಂತಹ ಸಂಸ್ಥೆಯಲ್ಲಿ ಮುಂದೆ ಮಾಡಬಹುದಾದ ಇಂತಹ ಹೂಡಿಕೆಗಳಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೂ ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ.
ಕೆಲವು ಆಯಕಟ್ಟಿನ ವಲಯ/ಚಟುವಟಿಕೆಗಳನ್ನು ಹೊರತುಪಡಿಸಿ, ಈ ವರೆಗೆ ಜಾರಿಯಲ್ಲಿದ್ದ ಸರ್ವಾನ್ವಯದ (ಅಡೆ-ತಡೆ ಇಲ್ಲದ ರೀತಿಯ) ಅನುಮತಿಗೆ ಹೋಲಿಸಿದರೆ, ಈ ಹೊಸ ನಿಯಮಗಳಲ್ಲಿ ಬಹಳ ದೊಡ್ಡ ವ್ಯತ್ಯಾಸವಿರುವುದು ಕಾಣುತ್ತದೆ. ಭಾರತದ ಭೂ ಭಾಗದೊಂದಿಗೆ ಗಡಿ ಹಂಚಿಕೊಂಡಿರುವ ನೆರೆಯ ದೇಶಗಳ ಎಲ್ಲ ನೇರ ಹೂಡಿಕೆಗಳನ್ನು – ಅಸ್ತಿತ್ವದಲ್ಲಿರುವ ಅಥವಾ ಮುಂದೆ ಮಾಡಬಹುದಾದ – ಪುನರ್ವಿಮರ್ಶೆಗೊಳಪಡುವ ಪ್ರಕ್ರಿಯೆಯಿಂದಾಗಿ, ಹೂಡಿಕೆಗೆ ಸರ್ಕಾರದ ಅನುಮತಿ ದೊರೆಯುವುದು ತಡವಾಗಬಹುದು, ಇಲ್ಲವೇ ಅನುಮತಿ ದೊರೆಯದೇ ಇರಬಹುದು. ನಿಯಮಗಳ ಈ ಬದಲಾವಣೆಯ ಬಗ್ಗೆ ಚೀನಾ ಕಟುವಾಗಿ ಪ್ರತಿಕ್ರಯಿಸಿದೆ. ಈ ಬದಲಾವಣೆಗಳು ತಾರತಮ್ಯತೆಯಿಂದ ಕೂಡಿವೆ ಮತ್ತು ಅವು ವಿಶ್ವ ವ್ಯಾಪಾರ ಸಂಸ್ಥೆಯ ತತ್ವಗಳಿಗೆ ವಿರೋಧವಾಗಿವೆ ಎಂಬ ಅಭಿಪ್ರಾಯವನ್ನು ಚೀನಾ ವ್ಯಕ್ತಪಡಿಸಿದೆ.
ನಮ್ಮ ನೆರೆಯ ಪಾಕಿಸ್ತಾನ, ಬಂಗ್ಲಾ ದೇಶ, ನೇಪಾಳ, ಭೂತಾನ್ ಮತ್ತು ಮೈಯನ್ಮಾರ್ ದೇಶಗಳು ನಮ್ಮ ದೇಶದಲ್ಲಿ ಮಾಡಿರುವ ನೇರ ಹೂಡಿಕೆ ನಗಣ್ಯವೇ. ಆದರೆ, ವಾಣಿಜ್ಯ ಮಂತ್ರಾಲಯ ಹೇಳಿರುವ ಪ್ರಕಾರ, ೨೦೧೯ರ ಜನವರಿ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ, ಚೀನಾದಿಂದ ೧೦ ಬಿಲಿಯನ್ ಡಾಲರ್ಗಳಿಗೂ ಅಧಿಕ ಮೊತ್ತದ ಹೂಡಿಕೆಯಾಗಿದೆ. ದೇಶಕ್ಕೆ ಹರಿದು ಬಂದಿರುವ ವಿದೇಶಿ ಬಂಡವಾಳದ ನೇರ ಹೂಡಿಕೆಯ ಒಟ್ಟಾರೆ ಮೊತ್ತಕ್ಕೆ ಹೋಲಿಸಿದರೆ, ಚೀನಾದ ೧೦ ಬಿಲಿಯನ್ ಡಾಲರ್ ಹೂಡಿಕೆ, ಜುಜುಬಿ.
ಆದರೆ, ವಿದೇಶಿ ಬಂಡವಾಳದ ನೇರ ಹೂಡಿಕೆಗೆ ಸಂಬಂಧಿಸಿದಂತೆ ಇಲ್ಲಿ ಒತ್ತಿ ಹೇಳಬಹುದಾದ ಕೆಲವು ಆಯಾಮಗಳಿವೆ. ಅವುಗಳಲ್ಲಿ ಮೊದಲನೆಯದು, ಭಾರತದಲ್ಲಿ ೨೦೧೪ ಮತ್ತು ೨೦೧೮ರ ನಡುವೆ ಚೀನಾ ಮಾಡಿರುವ ನೇರ ಹೂಡಿಕೆಯ ವಾರ್ಷಿಕ ಸರಾಸರಿ ೩೭೧ ಮಿಲಿಯನ್ (೦.೩೭೧ ಬಿಲಿಯನ್) ಡಾಲರ್ ಪ್ರಮಾಣವು, ಇದ್ದಕ್ಕಿದ್ದಂತೆ ೨೦೧೯ರ ಒಂಭತ್ತು ತಿಂಗಳುಗಳಷ್ಟು ಅಲ್ಪ ಅವಧಿಯಲ್ಲಿಯೇ ೧೦ ಬಿಲಿಯನ್ ಡಾಲರ್ ಮಟ್ಟಕ್ಕೆ ಜಿಗಿದಿದೆ. ಎರಡನೆಯದು, ಹಣಕಾಸು ಚಟುವಟಿಕೆಗಳ ಕೇಂದ್ರ ಸ್ಥಾನಗಳಾದ ಕೇಮನ್ ದ್ವೀಪದಿಂದ ೧೧೯ ಬಿಲಿಯನ್ ಡಾಲರ್ಗಳಷ್ಟು ಮತ್ತು ಮಾರಿಷಸ್ ದ್ವೀಪದಿಂದ ೫೮೮ ಬಿಲಿಯನ್ ಡಾಲರ್ಗಳಷ್ಟು ಮೊತ್ತದ ವಿದೇಶಿ ಹಣ ಇದೇ ೨೦೧೯ರ ಜನವರಿ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಭಾರತದೊಳಕ್ಕೆ ಹರಿದು ಬಂದಿದೆ. ಈ ಹೂಡಿಕೆಯು ಸಾಚಾ ಎಫ್ಡಿಐ ಅಲ್ಲ ಎಂಬ ಅಂಶವನ್ನು ನಿರ್ಲಕ್ಷಿಸಿದಾಗ ಮಾತ್ರ ಚೀನಾದ ಹೂಡಿಕೆ ದೊಡ್ಡದಾಗಿ ಕಾಣುತ್ತದೆ. ಮೂರನೆಯದು, ತಿದ್ದುಪಡಿಯಾಗಿರುವ ಹೊಸ ನಿಯಮಗಳು ಚೀನಾದೊಂದಿಗೆ ಪರೋಕ್ಷ ಸಂಬಂಧ ಹೊಂದಿರುವ ಬೇರೆ ಬೇರೆ ದೇಶಗಳ ಹೂಡಿಕೆದಾರ ಏಜೆನ್ಸಿಗಳಿಗೂ ಅನ್ವಯವಾಗುವುದರಿಂದ, ಹಾಂಗ್ಕಾಂಗ್ (೩೦.೭ ಬಿಲಿಯನ್ ಹೂಡಿಕೆ) ಮತ್ತು ಸಿಂಗಾಪುರ ದೇಶಗಳಿಗೂ ಅನ್ವಯವಾಗುತ್ತವೆ.
ಜಾಗತಿಕ ಅರ್ಥವ್ಯವಸ್ಥೆಯು ಹಿಂಜರಿತಕ್ಕೊಳಗಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ, ಅದರಲ್ಲೂ ವಿಶೇಷವಾಗಿ ಇಡೀ ವಿಶ್ವವೇ ಕೊರೋನಾ ಜಾಢ್ಯಕ್ಕೆ ಒಳಗಾಗಿರುವ ಪರಿಸ್ಥಿತಿಯಲ್ಲಿ, ವಿದೇಶಗಳಿಂದ ಸಾಕಷ್ಟು ಪ್ರಮಾಣದಲ್ಲಿ ನೇರ ಹೂಡಿಕೆಯಾಗುವುದಿಲ್ಲ ಎಂಬುದಂತೂ ಸ್ಪಷ್ಟವೇ. ಪೋರ್ಟ್ಫೋಲಿಯೋ ಹೂಡಿಕೆಗಳಿಗೆ ಹೋಲಿಸಿದರೆ, ಉತ್ಪಾದನಾ ಚಟುವಟಿಕೆಗಳಲ್ಲಿ (ಎಫ್ಡಿಐ) ಹೂಡಿಕೆಯಾಗುವ ಸಂಭವ ಕಡಿಮೆಯೇ. ಇತ್ತೀಚೆಗೆ, ಚೀನಾದಿಂದ ಭಾರತದಲ್ಲಿ ಹೂಡಿಕೆಯಾಗಿರುವ ಬಂಡವಾಳಕ್ಕೆ ಸಂಬಂಧಿಸಿ ಹೇಳುವುದಾದರೆ, ಅಂತಹ ಹೂಡಿಕೆಯನ್ನು ಚೀನಾದ ತಾಂತ್ರಿಕ ದಿಗ್ಗಜಗಳೆನಿಸಿದ ಅಲಿಬಾಬಾ, ಟಿಕ್-ಟೋಕ್, ಓಪ್ಪೋ, ಶಿಯೋಮಿ, ಟೆನ್ಸೆಂಟ್ ಮುಂತಾದ ಸಂಸ್ಥೆಗಳು ಭಾರತದ ಪೇಟಿಎಮ್, ಬಿಗ್ಬ್ಯಾಸ್ಕೆಟ್ ಮತ್ತು ಓಲಾನಂತಹ ಸಂಸ್ಥೆಗಳ ಮೇಲೆ ಮಾಡಿವೆ. ಚೀನಾದ ಕಂಪೆನಿಗಳು ಅತಿ ಹೆಚ್ಚು ಶ್ರಮ ಅವಲಂಬಿತ ವಲಯಗಳಲ್ಲಿ ಹೂಡಿಕೆ ಮಾಡಿವೆ. ಅಷ್ಟೇ ಅಲ್ಲದೆ, ಚೀನಾದ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪೆನಿಗಳಾದ ಗ್ರೇಟ್ ವಾಲ್ ಮತ್ತು ಎಂಜಿ ಮೋಟಾರ್ಸ್, ಭಾರತದಲ್ಲಿ ತಮ್ಮ ತಮ್ಮ ಎಲೆಕ್ಟ್ರಿಕ್ ಕಾರು ತಯಾರಿಸುವ ಘಟಕಗಳಲ್ಲಿ ಹೂಡಿಕೆ ಮಾಡಿವೆ.
ಈ ವರೆಗೆ ಚೀನಾವು ಭಾರತದಲ್ಲಿ ಮಾಡಿರುವ ಹೂಡಿಕೆಗಳು ಭಾರತದ ಉದ್ಯೋಗ ಸೃಷ್ಟಿಯಲ್ಲಿ ನೆರವಾಗಿವೆ; ಜೂಜುಕೋರ ಪೋರ್ಟ್ಫೋಲಿಯೋ ರೂಪದ ಬಂಡವಾಳವಾಗಿ (ಎಫ್ಐಐ) ಅಲ್ಲ. ನಮ್ಮ ಹೆಚ್ಡಿಎಫ್ಸಿ ಬ್ಯಾಂಕಿನ ಪ್ರತಿ ಶತ ೦.೩ ರಷ್ಟು ಷೇರುಗಳನ್ನು ಇತ್ತೀಚೆಗೆ ಪೀಪಲ್ಸ್ ಬ್ಯಾಂಕ್ ಆಫ್ ಚೈನಾ ಹೆಚ್ಚಿಸಿಕೊಂಡು ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ ತನ್ನ ಹೂಡಿಕೆಯನ್ನು ಪ್ರತಿ ಶತ ೧.೧ ಗೆ ಏರಿಸಿಕೊಂಡಿರುವ ಅಂಶವು, ಬಹುಷಃ, ಭಾರತ ಸರ್ಕಾರವನ್ನು ಮುಜುಗರಪಡಿಸಿದ ಕಾರಣದಿಂದಾಗಿ, ಸರ್ಕಾರವು ಈ ರೀತಿಯ ತಿದ್ದುಪಡಿಗಳನ್ನು ಮಾಡಲು ಮುಂದಾಗಿರಬಹುದು. ಆದರೆ. ಹೆಚ್ಡಿಎಫ್ಸಿ ಬ್ಯಾಂಕಿನಲ್ಲಿ ತನ್ನ ಹೂಡಿಕೆಯನ್ನು ಪ್ರತಿ ಶತ ೧.೧ ಗೆ ಏರಿಸಿಕೊಂಡಿರುವ ಅಂಶದಿಂದ ಪೀಪಲ್ಸ್ ಬ್ಯಾಂಕ್ ಆಫ್ ಚೈನಾಗೆ ಹೆಚ್ಡಿಎಫ್ಸಿ ಬ್ಯಾಂಕನ್ನು ಸ್ವಾಧೀನಪಡಿಸಿಕೊಳ್ಳಲು ಅಥವಾ ಅದರ ಆಡಳಿತ ಸೂತ್ರ ಹಿಡಿಯುವ ಅರ್ಹತೆ ಲಭ್ಯವಾಗುವುದಿಲ್ಲ ಮತ್ತು ಹೆಚ್ಡಿಎಫ್ಸಿ ಬ್ಯಾಂಕಿನ ಷೇರುಗಳ ಮೇಲೆ ಹೂಡಿಕೆ ಮಾಡಿರುವ ೨೦೦೦ದಷ್ಟು ಸಂಖ್ಯೆಯ ವಿದೇಶಿ ಸಾಂಸ್ಥಿಕ ಹೂಡಿಕೆದಾರರಲ್ಲಿ ಪೀಪಲ್ಸ್ ಬ್ಯಾಂಕ್ ಆಫ್ ಚೈನಾವೂ ಒಂದು ಎಂಬುದಾಗಿ ಹೆಚ್ಡಿಎಫ್ಸಿ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೇಕಿ ಮಿಸ್ತ್ರಿ ಹೇಳಿದ್ದಾರೆ.
ವಿಶ್ವದ ಎರಡನೆಯ ದೊಡ್ಡ ಅರ್ಥವ್ಯವಸ್ಥೆಯಾಗಿ ಹೊರ ಹೊಮ್ಮಿರುವ ಚೀನಾವನ್ನು ಮೂಲೆಗೆ ತಳ್ಳುವ ಪ್ರಯತ್ನದ ಮುಂದಾಳತ್ವವನ್ನು ಅಮೇರಿಕಾ ವಹಿಸಿದೆ. ಭಾರತ ಅಮೇರಿಕಾವನ್ನು ಹಿಂಬಾಲಿಸುತ್ತಿದೆ. ಹಾಗಾಗಿ, ಚೀನಾವನ್ನೇ ಗುರಿಯಾಗಿಸಿ, ವಿದೇಶಿ ಬಂಡವಾಳ ಹೂಡಿಕೆಯ ನೀತಿಗಳನ್ನು ತಿದ್ದುಪಡಿ ಮಾಡಿರುವುದು ರಾಜಕೀಯವೇ ಹೊರತು ಉದ್ಯೋಗ ಒದಗಿಸುವ ಸಧೃಡ ಆರ್ಥಿಕ ನೀತಿಯಂತೂ ಅಲ್ಲ.
ಅನು: ಕೆ.ಎಂ.ನಾಗರಾಜ್