‘ನೂರು ಅಡಿ ಬಣ್ಣದ ನಡೆ’, ಉತ್ಸವ್ ರಾಕ್ ಗಾರ್ಡನ್ ಖ್ಯಾತಿಯ ಸೊಲಬಕ್ಕನವರ್ ಇನ್ನಿಲ್ಲ !

ಹಿರಿಯ ಜನಪದ ಕಲಾವಿದರು, ವರ್ಣಚಿತ್ರ ಕಲಾವಿದರು ಮತ್ತು ಗೋಟಗೋಡದಲ್ಲಿ ಗ್ರಾಮೀಣ ಪರಿಸರದ ಮ್ಯೂಸಿಯಂ (ಉತ್ಸವ್ ರಾಕ್ ಗಾರ್ಡನ್) ಮಾಡಿರುವ, ಸಮುದಾಯ ಸಂಘಟನೆಯ ಸದಸ್ಯರೂ ಆಗಿದ್ದ ಸೊಲಬಕ್ಕನವರ್ ಇನ್ನಿಲ್ಲ!

ಸೊಲಬಕ್ಕನವರ್ ಮೂಲತಃ ದಾವಣಗೆರೆಯಲ್ಲಿ ತಮ್ಮ ಸಾಂಸ್ಕøತಿಕ ಕೃಷಿಯನ್ನು ಮಾಡಿದವರು. ದಾವಣಗೆರೆ ಚಿತ್ರಕಲಾ ಶಾಲೆಯ ವಿದ್ಯಾರ್ಥಿಯಾಗಿ ಕಾರ್ಯಚಟುವಟಿಕೆಗಳನ್ನು ಪ್ರಾರಂಭ ಮಾಡಿದವರು. ದಾವಣಗೆರೆ ಸಮುದಾಯ ಮತ್ತು ರಾಜ್ಯ ಕೇಂದ್ರ ಸಮುದಾಯ ಸಂಘಟನೆಯೊಟ್ಟಿಗೆ ಗುರುತಿಸಿಕೊಂಡಿದ್ದವರು.

ದೇಶದಲ್ಲೇ ಪ್ರಥಮ ಎನ್ನಿಸಿಕೊಳ್ಳುವ ವಿಶೇಷ ರೀತಿಯ ಜಾತಾ ಕಾರ್ಯಕ್ರಮ, ‘ನೂರು ಅಡಿ ಬಣ್ಣದ ನಡೆ, ಅಣು ಸಮರಕ್ಕೆ ಜನತೆಯ ತಡೆ ಎನ್ನುವ ವರ್ಣಚಿತ್ರ ಜಾತಾದ ರುವಾರಿ. 120 ಅಡಿ ಉದ್ದದ ಆರು ಅಡಿ ಅಗಲದ ಕ್ಯಾನ್ವಾಸ್ ನಲ್ಲಿ ಅಣುಶಕ್ತಿ ಯ ಪ್ರಕೋಪಗಳನ್ನು, ಅಣುಯುದ್ದ ನಡೆದರೆ ದೇಶ ದೇಶದ ಗಡಿಗಳನ್ನು ದಾಟೀ ಅದು ಮನುಕುಲದ ಮೇಲೆ ಮಾಡುವ ಊಹೆಗೂ ನಿಲುಕದ ದುಷ್ಪರಿಣಾಮದ ವರ್ಣಚಿತ್ರ ತಯಾರಿಸಿ ಕೊಟ್ಟ ಶ್ರೇಷ್ಠ ಕಲಾವಿದ. ದಾವಣಗೆರೆ ಕಲಾಶಾಲೆಯ ಮತ್ತೊಬ್ಬ ವರ್ಣಚಿತ್ರ ಕಲಾವಿದ ಕರಿರಾಜು ಮತ್ತು ಕಲಾಶಾಲೆಯ ವಿದ್ಯಾರ್ಥಿ ಗಳು ಸೊಲಬಕ್ಕನವರ್ ಅವರ ಮುಂದಾಳತ್ವದಲ್ಲಿ ತಯಾರಿಸಿ ಕೊಟ್ಟ ವರ್ಣಚಿತ್ರ ವನ್ನು ಸಮುದಾಯ ಮೊದಲಿಗೆ ಇಡೀ ರಾಜ್ಯದಲ್ಲಿ, ನಂತರ ದೇಶದ ಎಲ್ಲ ಪ್ರಮುಖ ರಾಜ್ಯ ಕೇಂದ್ರಗಳಲ್ಲಿ ಮತ್ತು ಅಂತಿಮವಾಗಿ ಜಪಾನ್ ದೇಶದಲ್ಲೂ ಪ್ರದರ್ಶನಗೊಂಡು ಅದು ಸೊಲಬಕ್ಕನವರ್ ಅವರ ಮ್ಯೂಸಿಯಂ ಅನ್ನು ಸೇರಿತು.

ಸಣ್ಣಾಟ, ದೊಡ್ಡಾಟ ಕಲಾಪ್ರಾಕಾರಗಳಲ್ಲೂ ಸೊಲಬಕ್ಕನವರ್ ಅವರು ತಮ್ಮನ್ನು ಗುರುತಿಸಿಕೊಂಡು, ಆ ಪ್ರಕಾರಗಳ ಆಳವಾದ ಅಧ್ಯಯನ ಮತ್ತು ಪ್ರದರ್ಶನಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು, ಪ್ರದರ್ಶನಗಳ ಸಂಘಟನೆಯನ್ನೂ ದಾವಣಗೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳ ಸುತ್ತಮುತ್ತ ಆಯೋಜಿಸಿದ್ದರು.

ಇವರ ಬದ್ದತೆ ಕಲಾ ಮಾಧ್ಯಮ ಮತ್ತು  ರಂಗಭೂಮಿ ಕಡೆ ಎಷ್ಟರಮಟ್ಟಿಗೆ ಇತ್ತೆಂದರೆ, ಅವರ ಮಗ, ಎಸ್.ಎಸ್..ಎಲ್.ಸಿ ಓದುತ್ತಿದ್ದ ಹುಡುಗನನ್ನು ಶಾಲೆ ಬಿಡಿಸಿ, ತಮ್ಮ ಸಾಂಸ್ಕೃತಿಕ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.

ಬಾಗಲಕೋಟೆ ಜಿಲ್ಲೆ ಮುಳುಗಡೆಗೆ ಒಳಗಾಗಿ, ನವ ಬಾಗಲಕೋಟೆ ಉದಯವಾದಾಗ, ನವ ಬಾಗಲಕೋಟೆ ವಿನ್ಯಾಸದಲ್ಲೂ ಸೊಲಬಕ್ಕನವರ್ ಅವರ ಶ್ರಮ ಮತ್ತು ಕ್ರಿಯಾಶೀಲ ಕೊಡುಗೆ ಇದೆ. ಜಾನಪದ ಅಕಾಡಮಿ ಸದಸ್ಯರಾಗಿ ಸಹ ಕಾರ್ಯನಿರ್ವಹಿಸಿದವರು.

ಈ 2020 ನಮ್ಮ ಅತ್ಯಂತ ಆತ್ಮೀಯ ವಲಯದ ಹಲವಾರು ರಂಗ ನಟರು, ಸಂಘಟಕರು, ಸಾಹಿತಿಗಳು, ಚಲನಚಿತ್ರ ರಂಗ, ಕಿರುತೆರೆ ಎಲ್ಲಾ ಪ್ರಕಾರಗಳ ಆತ್ಮೀಯರನ್ನು ಕ್ರೂರ ಕಾಲ ತನ್ನ ಅಪ್ಪುಗೆಯಿಂದ ಬರಸೆಳೆದಿದ್ದಾನೆ…. ದಿನಕ್ಕೆ ಒಬ್ಬರು ಕಡ್ಡಾಯವಾಗಿ ನಮ್ಮನ್ನು ಅಗಲುತಿದ್ದಾರೆ…

ಅಗಲಿದ ಆತ್ಮೀಯ ಗೆಳೆಯ ಸೊಲಬಕ್ಕನವರ್ ಅವರಿಗೆ ನಮನಗಳು…..

– ಗುಂಡಣ್ಣ ಚಿಕ್ಕಮಗಳೂರು

ರಾಕ್ ಗಾರ್ಡನ್ ನಲ್ಲಿ ಜೀವಂತ

ನೀವು ಹಾವೇರಿ ಜಿಲ್ಲೆಯ ಶಿಗ್ಗಾಂವ ಗೊಟಗೋಟೆಯ ಅಂತರಾಷ್ಟ್ರೀಯ ರಾಕ್ ಗಾರ್ಡನ್ ನೋಡಿಲ್ಲವೆಂದರೆ ಖಂಡಿತ ಕುಟುಂಬ ಸಮೇತ ಹೋಗಿ….ಅಲ್ಲಿ ಖಂಡಿತ ಸೋಲಬಕ್ಕನವರ ಜೀವಂತವಾಗಿಯೇ ನಿಮಗೆ ಅಲ್ಲಿ ಭೇಟಿಯಾಗುತ್ತಾರೆ.

– ಮಹಾಂತೇಶ ಕೆ.

“ನೂರು ಅಡಿಗಳಣ್ಣ, ಇದು ಬಣ್ಣದ ನಡೆಯಣ್ಣ.

ನೂರು ಅಡಿಗಳ ನಡೆಯು, ನಮ್ಮ ಸಮುದಾಯದ ಈ ಕರೆಯು…. “

ನಾನು ಎಸ್.ಎಸ್.ಎಲ್.ಸಿ. ಯಲ್ಲಿರುವಾಗಲೇ ಈ ಹಾಡು ಕೇಳಿದ್ದೆ, ಗುನುಗಿದ್ದೆ. ನಮ್ಮೂರಿನ ಸೊಪ್ಪಿನ ಮಲ್ಲಪ್ಪನವರ ಧರ್ಮ ಛತ್ರದಲ್ಲಿ ಆಗ ಬಂದಿದ್ದ ಯುದ್ಧ ವಿರೋಧಿ ಜಾಥಾದ ನೂರಾ ಹತ್ತು ಅಡಿಗಳ ಒಂದೇ ಪೇಂಟಿಂಗನ್ನು ಬೆರಗಿನಿಂದ ನೋಡಿದ್ದೆ. ಆಗಲೇ ಈ ಕಲಾಕೃತಿಯನ್ನು ರಚಿಸಿದ ಸೊಲಬಕ್ಕನವರ್ ಅವರ ಹೆಸರು ಅಚ್ಚರಿಯ ಕಾರಣದಿಂದಲೇ ಅಚ್ಚಳಿಯದೆ ಉಳಿದಿತ್ತು. ಆ ನಂತರ ನಾನು1987ರಲ್ಲಿ “ಸಮುದಾಯ” ಸೇರಿದ ನಂತರ ನೂರೇಕೆ, ಸಾವಿರ ಬಾರಿ ಆ ಹಾಡನ್ನು ಹಾಡಿರಬಹುದು. ಹಾಗೆ ಸೊಲಬಕ್ಕನವರ್ ನಮ್ಮ ಮನಸ್ಸಿನಲ್ಲಿ ಉಳಿದಿದ್ದರು.

ಅವರದು ಹಾಗೆಯೇ, ಹರಿವ ಹಾರುವ ಸ್ವಚ್ಛಂದದ ಸೃಜನಶೀಲ ಮನಸ್ಸು. ಅವರ ಮನೋವಿಸ್ತಾರಕ್ಕೆ ನೌಕರಿಕೆಯ ಗೋಡೆಗಳು ಅಡ್ಡಿಯಾಗಿದ್ದವು.  ಹಾಗೆಂದೇ ನೌಕರಿ ಬಿಟ್ಟು “ದೊಡ್ಡಾಟದ ಸಂಸ್ಥೆ ಕಟ್ಟುವ ಹುಚ್ವು ಹತ್ತಿಸಿಕೊಂಡು ಕುಟುಂಬದ ಪಾಡನ್ನೇ ಬಯಲಾಟದಂತಾಗಿಸಿದ್ದರು. ಅವು ಅವರ ಬದುಕಿನ ಅತ್ಯಂತ ಕಷ್ಟದ ದಿನಗಳಾಗಿರಬೇಕು. .. ..ಅದ್ಹೇಗೆ ಸಂಸಾರದ ನೌಕೆ ತೂಗಿಸಿದರೋ ಅವರಿಗೇ ಗೊತ್ತು. ಅವರ ಬದುಕಿನ ಉತ್ತರಾರರ್ಧದಲ್ಲಿ ಯಶಸ್ಸಿನ ದಾರಿ ಹೊರಳಿದ್ದು ಮಗಳು ವೇದರಾಣಿಯ ಮದುವೆಯ ನಂತರ.

ಅವರ ಅಳಿಯ ಒಳ್ಳೆಯ ದುಡಿಮೆಯಲ್ಲಿದ್ದರು. ಮಾವನವರ ಕನಸಿಗೆ ಬಂಡವಾಳ ಜೋಡಿಸಿದರು. ಕನಸು ಮತ್ತು ಬಂಡವಾಳಗಳ ಸಂಗಮ ‘ಅಸಾಧ್ಯ ಸಾಧನೆ’ಗಳಿಗೆ  ಕಾರಣವಾಯಿತು. ರಾಕ್ ಗಾರ್ಡನ್ ಎಂಬ ಶಿಲ್ಪಲೋಕ ಸೃಷ್ಟಿಯಾಯಿತು. ಕಲೆಯನ್ನು ಮತ್ತು ಉದ್ಯಮವಾಗಿ ಮಾರ್ಪಡಿಸುವಿಕೆ ಅವರಿಗೆ ಅಪಾರ ಹಣವನ್ನಷ್ಟು ತಂದುಕೊಡಲಿಲ್ಲ. ಹಲವು “ವಿಶ್ವದಾಖಲೆ”ಗಳನ್ನು ಅವರಿಂದ ಮಾಡಿಸಿತು. ಮಗ ದೊಡ್ಡವನಾಗಿ, ಶಿಲ್ಪರಚನಾ ಕೆಲಸಗಾರರನ್ನು ಕೈಯಲ್ಲಿಟ್ಟುಕೊಂಡು ಶಿಲ್ಪ ನಿರ್ಮಾಣದ ಗುತ್ತಿಗೆಯನ್ನು ಸ್ವಯಂ ನಿರ್ವಹಿಸುವಷ್ಟು ಸಮರ್ಥನಾಗಿದ್ದ ಆ ಬಳಿಕ ಸೊಲಬಕ್ಕನವರ್ ಅವರ ಜೀವನ “ಸಾಧನಾನಂದ”ದಿಂದ ಕೂಡಿದ್ದು.

– ಬಿ.ಪೀರ್ ಬಾಷ.

 

Donate Janashakthi Media

Leave a Reply

Your email address will not be published. Required fields are marked *