ಕೊರೊನಾ ಬಿಕ್ಕಟ್ಟಿನಿಂದಾಗಿ ಜಿಎಸ್‍ಟಿ ಸಂಗ್ರಹದ ಮೇಲೆ ಅನಿರೀಕ್ಷಿತ ಪರಿಣಾಮ ಉಂಟಾಗಿದ್ದು, ರಾಜ್ಯಗಳಿಗೆ ಈ ಹಣಕಾಸು ವರ್ಷದಲ್ಲಿ ಹೆಚ್ಚಿನ ಜಿಎಸ್‍ಟಿ ಪರಿಹಾರ ಕೊಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಮಂತ್ರಿಗಳು ಆಗಸ್ಟ್ 27ರಂದು ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಹೇಳಿರುವುದಾಗಿ ವರದಿಯಾಗಿದೆ. ಕೊವಿಡ್-19 “ದೈವಿಕ ಆಟ” ಎಂದೂ ಅವರು ವರ್ಣಿಸಿರುವದಾಗಿ ವರದಿಯಾಗಿದೆ. ಇದಕ್ಕೆ ಹಲವೆಡೆಗಳಿಂದ ವ್ಯಾಪಕ ಪ್ರತಿಕ್ರಿಯೆಗಳು ಬಂದಿವೆ.
ಮೊದಲನೆಯದಾಗಿ, ಜಿಎಸ್‍ಟಿ ಪರಿಹಾರ ಕಾನೂನು ಪ್ರಕಾರ ಕೇಂದ್ರ ಸರಕಾರ ರಾಜ್ಯಸರಕಾರಗಳಿಗೆ ಕೊಡಲೇಬೇಕಾದ ಪಾಲು. ಕೊವಿಡ್ ದುಷ್ಪರಿಣಾಮಗಳನ್ನು ನೇರವಾಗಿ ಎದುರಿಸುತ್ತಿರುವವರು ರಾಜ್ಯ ಸರಕಾರಗಳು ಮತ್ತು ಎರಡನೆಯದಾಗಿ, ಕೊವಿಡ್ ಎರಗುವ ಮೊದಲೇ ರಾಜ್ಯಗಳಿಗೆ ಜಿಎಸ್‍ಟಿ ಪಾಲನ್ನು ತೆರುವಲ್ಲಿ ವಿಳಂಬ ಆರಂಭವಾಗಿತ್ತು. ಆದ್ದರಿಂದ ‘ದೈವಿಕ ಆಟ’ದ ಹೆಸರಿನಲ್ಲಿ ರಾಜ್ಯಗಳಿಗೆ ಪಾಲನ್ನು ನಿರಾಕರಿಸಲು, ಅದಕ್ಕಾಗಿ ಸಾಲ ಮಾಡಿ ಎನ್ನುವುದು ಕ್ರೂರತನವಾಗುತ್ತದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ..

ಕೇಂದ್ರ ಸರಕಾರ ರಾಜ್ಯಗಳಿಗೆ ಜಿಎಸ್‍ಟಿ ಬಾಕಿಯನ್ನು ತೆರಲೇಬೇಕು
ಕೇಂದ್ರ ಹಣಕಾಸು ಮಂತ್ರಿಗಳು ಆಗಸ್ಟ್ 27ರಂದು ಜಿಎಸ್‍ಟಿ ಮಂಡಳಿ ಸಭೆಯಲ್ಲಿ ರಾಜ್ಯ ಸರಕಾರಗಳಿಗೆ ಹಣಕಾಸು ವರ್ಷ 2020-21ರಲ್ಲಿ ಸಲ್ಲಬೇಕಾದ ಜಿಎಸ್‍ಟಿ ಪಾಲನ್ನು ಕೊಡಲು ಕೇಂದ್ರ ಸರಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇದು ಕಡು ಕ್ರೌರ್ಯದ ಮಾತು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ರಾಜ್ಯಗಳಿಗೆ ಜಿಎಸ್‍ಟಿ ಆದಾಯದಲ್ಲಿನ ಕೊರತೆ 2.35ಲಕ್ಷ ಕೋಟಿ ರೂ.ಗಳ ಒಂದು ಬೃಹತ್ ಮೊತ್ತ ಎಂದು ಅಂದಾಜು ಮಾಡಲಾಗಿದೆ. ಈ ಕಂದರವನ್ನು ಮುಚ್ಚಲು ರಿಝರ್ವ್ ಬ್ಯಾಂಕಿನಿಂದ ಸಾಲ ತಗೊಳ್ಳಿ ಎಂದು ರಾಜ್ಯಗಳಿಗೆ ಹೇಳುವುದು ಅಸಹ್ಯಕರ ಮಾತು. ಕೇಂದ್ರ ಸರಕಾರ ಕಾನೂನು ಪ್ರಕಾರ ಜಿಎಸ್‍ಟಿ ಬಾಕಿಗಳನ್ನು ತೆರಲು ಬಾಧ್ಯವಾಗಿದೆ. ಅಗತ್ಯ ಬಿದ್ದರೆ, ಕೇಂದ್ರ ಸರಕಾರ ಸಾಲ ತಂದು ರಾಜ್ಯಗಳಿಗೆ ಅವುಗಳ ಬಾಕಿಯನ್ನು ತೆರಬೇಕು, ರಾಜ್ಯ ಸರಕಾರಗಳು ಸಾಲ ಮಾಡಬೇಕು ಎಂದು ಅದು ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಕೊವಿಡ್ ಮೊದಲೇ ಭಾರತೀಯ ಅರ್ಥವ್ಯವಸ್ಥೆಯನ್ನು ಹಿಂಜರಿತದತ್ತ ಧುಮುಕಿಸಿರುವ ಕೇಂದ್ರ ಸರಕಾರ ಈಗ ತನ್ನ ಬಾಧ್ಯತೆಯನ್ನು ಈಡೇರಿಸಲು ಅಸಮರ್ಥವಾಗಿರುವುದಕ್ಕೆ ಯಾವುದೋ ‘ದೈವಿಕ ಮಧ್ಯಪ್ರವೇಶ’ವನ್ನು ದೂಷಿಸುತ್ತಿದೆ. ಇದನ್ನು ಖಂಡಿತಾ ಒಪ್ಪಲಾಗದು. ಇದು ಸಂಪೂರ್ಣವಾಗಿ ಆಕ್ರೋಶಕಾರಿ ಮತ್ತು ದಾರಿ ತಪ್ಪಿಸುವ ಮಾತು. ಕೇಂದ್ರ ಸರಕಾರ ರಾಜ್ಯಗಳಿಗೆ ತನ್ನ ಕಾನೂನುಬದ್ಧ ಬಾಧ್ಯತೆಗಳನ್ನು ಈಡೇರಿಸಲೇಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ದೃಢವಾಗಿ ಹೇಳಿದೆ.

ದೈವವನ್ನು ದೂರಿದೆಂತೊಡೆ? ‘ಸಹಕಾರಿ ಒಕ್ಕೂಟ ತತ್ವ’ ಎಲ್ಲಿಗೆ ಹೋಯಿತು?’ ಎಂದು ಈ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚುರಿ ಟಿಪ್ಪಣಿ ಹೇಳಿದ್ದಾರೆ. ಭಾರತೀಯ ಅರ್ಥವ್ಯವಸ್ಥೆಯನ್ನು ನಾಶಪಡಿಸಿದೆ ಮೇಲೆ ಈಗ ರಾಜ್ಯಗಳ ಲೂಟಿಗಿಳಿದಿದ್ದಾರೆ. ಇದೀಗ ‘ದೈವಿಕ ಮಧ್ಯಪವೇಶ’ ? ಬಂಟ ಬಂಡವಾಳಿಗರಿಗೆ ಕೊಡುಗೆಗಳು, ಅಸಮರ್ಥತೆ ಮತ್ತು ನಿರ್ಲಕ್ಷ್ಯದ ಒಂದು ಕಲಸುಮೇಲೋಗರ ನಮ್ಮ ಜನಗಳಿಗೆ ಮೋಸಮಾಡಿತ್ತು., ಅವರ ಜೀವ-ಜೀವನವನ್ನು ಕೊವಿಡ್ ಮೊದಲೇ ನಾಶಗೊಳಿಸಿತ್ತು. ಈಗ ದೈವವನ್ನು ದೂರಿ ಫಲವಿಲ್ಲ ಎಂದು ಯೆಚುರಿ ಹೇಳಿದ್ದಾರೆ.

ಸಪ್ಟಂಬರ್ 2019 ರಿಂದಲೇ ಬಾಕಿಯಾಗಲು ಆರಂಭ ವಾಸ್ತವವಾಗಿ ರಾಜ್ಯಗಳಿಗೆ ಜಿಎಸ್‍ಟಿ ಬಾಕಿಯ ಪ್ರಶ್ನೆ ಕೊವಿಡ್ ಎರಗುವುದಕ್ಕಿಂತ ಸುಮಾರು ಒಂದು ವರ್ಷದ ಮೊದಲೇ ತಲೆ ಎತ್ತಿತ್ತು ಎಂದು ಒಬ್ಬ ಪರಿಣಿತರು ನೆನಪಿಸುತ್ತಾರೆ(ಇಂಡಿಯನ್ ಎಕ್ಸ್‍ಪ್ರೆಸ್, ಆಗಸ್ಟ್ 28) ಆಗಸ್ಟ್ -ಸಪ್ಟಂಬರ್ 2019ರಿಂದಲೇ ಇದು ಆರಂಭವಾಯಿತು. ಇದನ್ನನುಸರಿಸಿ ನಂತರದ ಎಲ್ಲ ಬಾಕಿ ಕಂತುಗಳೂ ವಿಳಂಬಗೊಂಡವು.
ಕಳೆದ ಆಗಸ್ಟ್ 2019ರಿಂದಲೇ ಜಿಎಸ್‍ಟಿ ಆದಾಯ ಇಳಿಯಲಾರಂಭಿಸಿತ್ತು. ಜಿಡಿಪಿ ಬೆಳವಣಿಗೆ ದರ 2019-20ರ ಮೊದಲ ತ್ರೈಮಾಸಿಕದಲ್ಲಿ 5.2ಶೇ. ಇದ್ದದ್ದು, ಮುಂದಿನ ಮೂರು ತ್ರೈಮಾಸಿಕಗಳಲ್ಲಿ ಸತತವಾಗಿ ಇಳಿದವು: ತ್ರೈಮಾಸಿಕ 2ರಲ್ಲಿ 4.4ಶೇ. ತ್ರೈಮಾಸಿಕ3ರಲ್ಲಿ 4.1ಶೇ ಮತ್ತು ಕೊನೆಯ ತ್ರೈಮಾಸಿಕ, ಅಂದರೆ ಜನವರಿ-ಮಾರ್ಚ್ 2020ರಲ್ಲಿ, ಕೊವಿಡ್ ಎರಗುವ ಮೊದಲೇ 3.1ಶೇ.ಕ್ಕೆ ಇಳಿದಿತ್ತು.
ಇದಕ್ಕೆ ಅನುಗುಣವಾಗಿ ಜಿಎಸ್‍ಟಿ ಆದಾಯಗಳೂ ಇಳಿಯುತ್ತ ಬಂದಿದ್ದವು. ನಿಜ ಹೇಳಬೇಕೆಂದರೆ, ಸಪ್ಟಂಬರ್ 2019ರಲ್ಲಿ ನಡೆದ ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಫೆಬ್ರುವರಿ ಅಂತ್ಯದ ವೇಳೆಗೆ ಜಿಎಸ್‍ಟಿ ಪರಿಹಾರ ನಿಧಿಯ ಸೆಸ್‍ನಲ್ಲಿ ಕೊರತೆಯಾಗಬಹುದು ಎಂದು ಹೇಳಲಾಗಿತ್ತು. ನಂತರ ನವಂಬರ್ 27ರಂದು ನಡೆದ ಮತ್ತೊಂದು ಜಿಎಸ್‍ಟಿ ಮಂಡಳಿ ಸಭೆಯಲ್ಲಿ ಪರಿಹಾರಕ್ಕೆ ಬೇಕಾದ ಮೊತ್ತಗಳು ಸಿಗಲಾರವು ಎಂದು ಹೇಳಲಾಯಿತು.

ಆಗ ಐದು ರಾಜ್ಯಗಳು -ಕೇರಳ, ಪಶ್ಚಿಮ ಬಂಗಾಲ, ದಿಲ್ಲಿ, ರಾಜಸ್ಥಾನ ಮತ್ತು ಪಂಜಾಬ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಒಂದು ಜಂಟಿ ಹೇಳಿಕೆಯನ್ನು ನೀಡಿದವು, ಡಿಸೆಂಬರ್ ನಲ್ಲಿ ಕೇರಳ ಸೇರಿದಂತೆ ಏಳು ಪ್ರತಿಪಕ್ಷಗಳ ನೇತೃತ್ವದ ರಾಜ್ಯ ಸರಕಾರಗಳು ಜಿಎಸ್‍ಟಿ ಬಾಕಿಯನ್ನು ಕೂಡಲೆ ತೆರಬೇಕು ಎಂದು ಹಣಕಾಸು ಮಂತ್ರಿಗಳನ್ನು ಆಗ್ರಹಿಸಿದವು, ತಮಗೆ ಸಲ್ಲಬೇಕಾದ್ದನ್ನು ಪಡೆಯಲು ಮತ್ತೆ-ಮತ್ತೆ ಕೇಳಬೇಕಾಗಿ ಬರುತ್ತಿರುವುದು ಮುಜುಗರ ಉಂಟು ಮಾಡುವ ಸಂಗತಿ ಎಂದೂ ಅವು ಹೇಳಿದ್ದವು. ಹೀಗಿರುವಾಗ ರಾಜ್ಯಗಳಿಗೆ ಸಲ್ಲಬೇಕಾದ ಮೊತ್ತವನ್ನು ‘ದೈವಿಕ ಆಟ’ ದಿಂದಾಗಿ ಕೊಡಲಾಗುತ್ತಿಲ್ಲ ಎಂಬುದು ಅರ್ಥಹೀನ ಎಂದು ಬಹಳಷ್ಟು ಮಂದಿ ಟಿಪ್ಪಣಿ ಮಾಡಿದ್ದಾರೆ.
