ನವ-ಉದಾರವಾದಿ ‘ಆದೇಶ’ಗಳನ್ನು ಪಾಲಿಸಿರುವ ಏಳನೆ ವೇತನ ಆಯೋಗದ ಶಿಫಾರಸುಗಳು

ಕೆ.ಎಂ. ನಾಗರಾಜು-ಕುರುಡು ಕಾಂಚಾಣ –  9 ಸಂಚಿಕೆ 50, 13 ಡಿಸೆಂಬರ್ 2015 –

‘ಮಿತವ್ಯಯ’ ಮತ್ತು ಆದಾಯದಲ್ಲಿ ಅಸಮಾನತೆಯನ್ನು ಕಾಯ್ದುಕೊಳ್ಳುವುದು ನವ-ಉದಾರವಾದಿ ವ್ಯವಸ್ಥೆಯ ಜೀವಾಳ. ಏಳನೇ ವೇತನ ಆಯೋಗ ಇದನ್ನು ಅಕ್ಷರಶಃ ಪಾಲಿಸಿದೆ, ಹತ್ತು ವರ್ಷಗಳಲ್ಲಿ 120ಶೇ. ಹಣದುಬ್ಬರವಾಗಿದ್ದರೂ ಒಟ್ಟಾರೆಯಾಗಿ, ವೇತನಗಳಲ್ಲಿ 23.55%ರಷ್ಟು ಹೆಚ್ಚಳ ಕೊಟ್ಟಿದೆ, ಅದರಲ್ಲೂ ಕೆಳ ಹಂತದಲ್ಲಿರುವ ನೌಕರರಿಗೆ ಕೇವಲ 14%ರಷ್ಟು ಏರಿಕೆ ಕೊಟ್ಟಿದೆ. ಈ ಹಿಂದೆ ಇದ್ದ ಕನಿಷ್ಠ ಮತ್ತು ಗರಿಷ್ಠ ವೇತನಗಳ ಅಂತರವನ್ನು ಆಯೋಗವು 1:12 ರಿಂದ 1:13.8ಕ್ಕೆ ಏರಿಸಿದೆ.

350x350_IMAGE43527748

ವೇತನ ಆಯೋಗ ನೇಮಿಸುವ ಮೂಲಕ ಕೇಂದ್ರ ಸರ್ಕಾರ ಹತ್ತು ವರ್ಷಗಳಿಗೊಮ್ಮೆ ತನ್ನ ನೌಕರರ ವೇತನ ಪರಿಷ್ಕರಣೆ ಮಾಡುತ್ತದೆ. ಏಳನೆ ವೇತನ ಆಯೋಗ ತನ್ನ ಶಿಫಾರಸುಗಳನ್ನು ನವೆಂಬರ್ 19 ರಂದು ಸರ್ಕಾರಕ್ಕೆ ಸಲ್ಲಿಸಿದೆ. ಮುಂದಿನ ಜನವರಿ ಒಂದರಿಂದ ಅನ್ವಯವಾಗುವಂತೆ 47 ಲಕ್ಷ ಮಂದಿ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು 52 ಲಕ್ಷ ನಿವೃತ್ತ ನೌಕರರ ಪಿಂಚಿಣಿ ಪರಿಷ್ಕರಣೆ ಮಾಡುವಂತೆ ಆಯೋಗ ಶಿಫಾರಸು ಮಾಡಿದೆ. ನೌಕರರ ವೇತನದಲ್ಲಿ 23.55%ರಷ್ಟು ಹೆಚ್ಚಳವಾಗಲಿದೆ ಮತ್ತು ವಾರ್ಷಿಕ 1.02 ಲಕ್ಷ ಕೋಟಿಗಳ ಅಧಿಕ ವೆಚ್ಚ ತಗುಲುತ್ತದೆ ಎಂದು ಆಯೋಗ ಹೇಳಿದೆ.

“ನೌಕರರ ಮೂಲ ವೇತನದಲ್ಲಿ ಕೇವಲ 14.27% ಹೆಚ್ಚಳದ ಶಿಫಾರಸು ಮಾಡಿದೆ. ಇದು 70 ವರ್ಷಗಳಲ್ಲಿ ಅತಿ ಕಡಿಮೆ ಹೆಚ್ಚಳ. 2006 ರಲ್ಲಿ ಆರನೆ ಆಯೋಗವು ಮೂಲ ವೇತನದಲ್ಲಿ 20% ಹೆಚ್ಚಳದ ಶಿಫಾರಸು ಮಾಡಿತ್ತು. ಅದನ್ನು ಯುಪಿಎ ಸರ್ಕಾರ 40%ಗೆ ಏರಿಸಿ 2008ರಲ್ಲಿ ಜಾರಿ ಮಾಡಿತ್ತು. ಏಳನೆ ಆಯೋಗವು ಡಿ.ಎ ಲೆಕ್ಕ ಹಾಕುವ ಕ್ರಮವನ್ನೂ ಬದಲಾಯಿಸಿದೆ. ಕನಿಷ್ಠ ಮತ್ತು ಗರಿಷ್ಠ ವೇತನಗಳ ಅಂತರವೂ ಜಾಸ್ತಿಯಾಗಿದೆ” ಎಂಬುದಾಗಿ ಕೇಂದ್ರ ಸರ್ಕಾರಿ ನೌಕರರ ಪ್ರತಿನಿಧಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಹಲವು ಕೇಂದ್ರ ಕಾರ್ಮಿಕ ಸಂಘಟನೆಗಳೂ ಆಯೋಗದ ಶಿಫಾರಸುಗಳನ್ನು ತೀವ್ರವಾಗಿ ಖಂಡಿಸಿವೆ.

“ಏಳನೆ ವೇತನ ಆಯೋಗವು ಅತಿ ಕಡಿಮೆ ಪ್ರಮಾಣದ ವೇತನ ಏರಿಕೆಯಾಗುವಂತೆ ನೋಡಿಕೊಂಡಿದೆ. ಹಿಂದಿನ ಯಾವ ಆಯೋಗವೂ ಇಷ್ಟೊಂದು ಜಿಪುಣತನ ತೋರಿರಲಿಲ್ಲ. ಸಾರ್ವಜನಿಕ ವೆಚ್ಚಗಳಲ್ಲಿ ‘ಮಿತವ್ಯಯ’ಪಾಲನೆ ಮಾಡಬೇಕೆಂಬ ನವ ಉದಾರವಾದಿ ಆಳ್ವಿಕೆಯ ಒತ್ತಾಯವನ್ನು ಅದು ಪುರಸ್ಕರಿಸಿದೆ. ಕೆಳ ಹಂತದ ಸರ್ಕಾರಿ ನೌಕರರ ವೇತನವನ್ನು 15,750 ರೂಗಳಿಂದ 18,000 ರೂಗಳಿಗೆ ಏರಿಸಿ, ಕೇವಲ 14% ಹೆಚ್ಚಳ ಮಾಡಿದೆ. ಒಟ್ಟಾರೆಯಾಗಿ, ವೇತನಗಳಲ್ಲಿ 23.55%ರಷ್ಟು ಹೆಚ್ಚಳವಾಗಿದೆಯಾದರೂ, ಕೆಳ ಹಂತದಲ್ಲಿರುವ ನೌಕರರಿಗೆ ಕೇವಲ 14%ರಷ್ಟು ಏರಿಕೆಯಾಗಿರುವುದರಿಂದ ಅವರಿಗೆ ನ್ಯಾಯ ದೊರೆತಿಲ್ಲ. ಈ ಹಿಂದೆ ಇದ್ದ ಕನಿಷ್ಠ ಮತ್ತು ಗರಿಷ್ಠ ವೇತನಗಳ ಅಂತರವನ್ನು ಆಯೋಗವು 1:12 ರಿಂದ 1:13.8ಕ್ಕೆ ಏರಿಸಿದೆ. ಇದು ಹಣಕಾಸು ಬಂಡವಾಳ ಬೆಂಬಲಿಸುವ ‘ಅಸಮಾನತೆ’ಗಳನ್ನು ಮಾನ್ಯ ಮಾಡಿದಂತಾಗಿದೆ” ಎನ್ನುತ್ತಾರೆ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್.

“ಮೇಲಿನ ಹಂತದ ಐಎಎಸ್ ಅಧಿಕಾರಿಗಳ ವೇತನವನ್ನು 80,000 ರೂಗಳಿಂದ 2,25,000ರೂ. ಗಳಿಗೆ ಏರಿಸಿದೆ. ಐಐಟಿ ಮತ್ತು ಐಐಎಂ ಪದವಿದರರಿಗೆ ಸಿಗುವ ವೇತನಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ. ಈ ಅಂತರದಿಂದಾಗಿ, ಪ್ರತಿಭಾವಂತರು ಖಾಸಗಿ ವಲಯದತ್ತ ವಾಲುತ್ತಾರೆ. ಉದಾಹರಣೆಗೆ, ಆರೋಗ್ಯ ಆರೈಕೆ ವಲಯಲ್ಲಿ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೈದ್ಯರಿಗೆ ಕೊಡುವ ವೇತನಕ್ಕಿಂತ ಬಹಳ ದೊಡ್ಡ ಮೊತ್ತವನ್ನು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೊಡುತ್ತಾರೆ. ಆದರೂ, ಅಲ್ಲಿನ ಬಹಳ ಮಂದಿ ವೈದ್ಯರು ಅತ್ತ ಹೋಗದಿರುವುದು ಪ್ರಶಂಸನೀಯ. ಖಾಸಗಿ ವಲಯದ ಕಂಪೆನಿಗಳಲ್ಲಿ ಬೆರಳೆಣಿಕೆಯಷ್ಟು ಮಂದಿಗೆ ಕೋಟಿಗಟ್ಟಲೆ ವೇತನವಿದೆ. ಕೆಳ ಹಂತದಲ್ಲಿರುವ ಬಹಳ ಮಂದಿಗೆ ಸಿಗುವುದು ಪುಡಿಗಾಸು ಮಾತ್ರ. ಇಂತಹ ತಾರತಮ್ಯಗಳಿಂದಾಗಿ ಅಸಮಾನತೆ ಹೆಚ್ಚುತ್ತಿದೆ.

2005-06 ರಿಂದ 2015-16 ಅವಧಿಯಲ್ಲಿ 120% ಹಣದುಬ್ಬರವಾಗಿದೆ. ಆದರೂ, ‘ಮಿತವ್ಯಯ’ ಪಾಲನೆಯ ದೃಷ್ಟಿಯಿಂದ ಅತಿ ಕಡಿಮೆ ಪ್ರಮಾಣದ ವೇತನ ಏರಿಕೆಯಾಗಿದೆ. ಹಂಚಿಕೆಯಲ್ಲಿ ‘ಅಸಮಾನತೆ’ ಹೆಚ್ಚಿಸಲಾಗಿದೆ. ನವ ಉದಾರವಾದಿ ಅರ್ಥವ್ಯವಸ್ಥೆಯ ತರ್ಕದ ಭಾಗವಾಗಿರುವ ‘ಮಿತವ್ಯಯ’ ಮತ್ತು ‘ಅಸಮಾನತೆ’ಗಳನ್ನು ಪ್ರತಿರೋಧಿಸದಿದ್ದರೆ ಅವು ಉಲ್ಬಣಗೊಳ್ಳುತ್ತವೆ” ಎನ್ನುತ್ತಾರೆ ಪ್ರೊ. ಪಟ್ನಾಯಕ್.

Donate Janashakthi Media

Leave a Reply

Your email address will not be published. Required fields are marked *