ನವೆಂಬರ್ 23 ರಂದು ರಾಜ್ಯದಾದ್ಯಂತ ಕಾರ್ಮಿಕರ ಪ್ರತಿಭಟನೆ ಕಾರ್ಮಿಕ ಮಂತ್ರಿಗಳು ರಾಜಿನಾಮೆ ನೀಡಲಿ

ಕೆ. ಮಹಾಂತೇಶ – ಸಂಪುಟ 9 ಸಂಚಿಕೆ 48, 29 ನವೆಂಬರ್ 2015

26BGNAIK_2256656e

ದಿನಾಂಕ 17-10-2015 ರಂದು ಬೆಂಗಳೂರಲ್ಲಿ ನಡೆದ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಸಭೆ ರಾಜ್ಯದ ಕಾರ್ಮಿಕರ ಪರಿಸ್ಥಿತಿ, ರಾಜ್ಯ ಸರಕಾರದ ಧೋರಣೆ ಕಾರ್ಮಿಕ ಮಂತ್ರಿಗಳ ಕಾರ್ಮಿಕ ವಿರೋಧಿ ಕ್ರಮಗಳ ಕುರಿತು ಗಂಭೀರವಾಗಿ ಚರ್ಚಿಸಿತ್ತು. ರಾಜ್ಯದಲ್ಲಿ ಕಾರ್ಮಿಕರ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದೆ. ಕಾರ್ಮಿಕ ಇಲಾಖೆಯ ಮಂತ್ರಿಯಾಗಿರುವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಕಾರ್ಮಿಕ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ಸಭೆಯು ಉಗ್ರವಾಗಿ ಖಂಡಿಸಿದೆ. ರಾಜ್ಯದ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕಾರ್ಮಿಕ ಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕ ಯಾವುದೇ ಗಂಭೀರ ಪ್ರಯತ್ನ ನಡೆಸಲೇ ಇಲ್ಲ ಈ ಬಗ್ಗೆ ರಾಜ್ಯದ ವಿವಿಧ ಗುತ್ತಿಗೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗ್ರಾಮಪಂಚಾಯ್ತಿ ನೌಕರರು, ಹಮಾಲಿ ಕಾರ್ಮಿಕರು, ಆಟೋ ಚಾಲಕರು, ಮನೆಕೆಲಸ ನೌಕರರು, ಬೀಡಿ ಕಾರ್ಮೀಕರು ಇತ್ಯಾಧಿ ವಿಭಾಗಗಳು ತಮ್ಮದೇ ಹಲವು ಬೇಡಿಕೆಗಳ ಈಡೇರಿಕೆಗಾಗಿ ಈ ಎರಡು ವರ್ಷಗಳಲ್ಲಿ ಹಲವು ಹೋರಾಟಗಳನ್ನು ನಡೆಸಿದ್ದಾರೆ. ಈ ಬಗ್ಗೆ ಮಾನ್ಯ ಮಂತ್ರಿಗಳನ್ನು ಸ್ವತಃ ಭೇಟಿಯಾಗಿ ಚರ್ಚಿಸಿ ಮನವಿ ಸಲ್ಲಿಸಲಾಗಿದ್ದರೂ ರಾಜ್ಯ ಕಾರ್ಮಿಕರ ಬೇಡಿಕೆಗಳಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸದ ಕಾರಣ ಅಂತಿಮವಾಗಿ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಕೂಡಲೇ ರಾಜಿನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡಯಬೇಕು ಎಂದು ಸಿಐಟಿಯು ಆಗ್ರಹಿಸಿ ರಾಜ್ಯದಾದ್ಯಂತ ಪ್ರಚಾರಗಳನ್ನು ನಡೆಸಿ ದಿನಾಂಕ 23 ನವೆಂಬರ್ 2015 ರಂದು ಎಲ್ಲಾ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿದೆ.

ಸಿಐಟಿಯು ಮಾಡುತ್ತಿರುವ ಆರೋಪಗಳೇನು..?

ಆರೋಪ-1

ಕಾರ್ಮಿಕರಿಗೆ ಕನಿಷ್ಟ ಕೂಲಿ ನ್ಯಾಯಯುತವಾಗಿ ಅನುಷ್ಠಾನಗೊಳಿಸುವ ಬದಲಾಗಿ ಕಾರ್ಮಿಕರಿಗೆ ದ್ರೋಹ ಮಾಡುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಬೀಡಿ ಕಾರ್ಮಿಕರಿಗೆ ಕಾನೂನುಬದ್ದವಾಗಿ ಪಾವತಿಸಿಬೇಕಾಗಿದ್ದ ತುಟ್ಟಿಭತ್ಯೆಯನ್ನು ಪಾವತಿ ಮಾಡಬೇಕಾಗಿಲ್ಲ ಎಂದು ಕಾರ್ಮಿಕ ಮಂತ್ರಿಗಳ ಮುತುವರ್ಜಿಯಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. 2014 ವರ್ಷದ ಗ್ರಾಹಕರ ಬೆಲೆ ಸೂಚ್ಯಂಕವು 425 ಪಾಯಿಂಟ್ಸ್ ಹೆಚ್ಚಳವಾಗಿದೆ. (ಬೆಲೆ ಏರಿಕೆ ಲೆಕ್ಕದ ಪ್ರಕಾರ ಸರಕಾರದ ಪ್ರಕಟಣೆ) ಅದ್ದರಿಂದ ಬೀಡಿ ಕಾರ್ಮಿಕರಿಗೆ ದಿನಕ್ಕೆ 0.03 ಪೈಸೆಯಂತೆ 425 ಪಾಯಿಂಟ್ಸ್‍ಗೆ ದಿನಕ್ಕೆ ರೂ 14.71 ಪೈಸೆ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗಿದೆ. ಅದರಂತೆ ತಿಂಗಳಿಗೆ ರೂ.382.50 ಪೈಸೆ ಪಾವತಿಸಬೇಕಾಗಿದೆ. ಆದರೆ ಕಾರ್ಮಿಕ ಮಂತ್ರಿಗಳು ಬೀಡಿ ಮಾಲೀಕರೊಂದಿಗೆ ಶಾಮಿಲಾಗಿ ಸದರಿ ತುಟ್ಟಿಭತ್ಯೆಯನ್ನು ಪಾವತಿಸಬೇಕಾಗಿಲ್ಲ ಎಂದು ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ಅಧಿಸೂಚನೆಯನ್ನು ಕಾರ್ಮಿಕ ಸಂಘಗಳ ಅಭಿಪ್ರಾಯವನ್ನು ಪಡೆಯದೆ ಏಕಪಕ್ಷೀಯವಾಗಿ ಮಾಲೀಕರ ಮನವಿಯಂತೆ ಮಾಡಲಾಗಿದೆ. ರಾಜ್ಯದಲ್ಲಿ 23 ಜಿಲ್ಲೆಗಳಲ್ಲಿ 10 ಲಕ್ಷ ಬೀಡಿ ಕಾರ್ಮಿಕರು ದುಡಿಯುತ್ತಿದ್ದು, ಬಡ ಕಾರ್ಮಿಕರ ಬಾಯಿಗೆ ಮಣ್ಣು ಹಾಕಿ ಬಡಾ ಬೀಡಿ ಮಾಲೀಕರಿಗೆ ಅನುಕೂಲ ಮಾಡಿದ್ದಾರೆ. ಈ ಪ್ರಕರಣದಲ್ಲಿ ಭಾರಿ ಕೋಟಿಗಳ ಭ್ರಷ್ಟಾಚಾರ ನಡೆದಿದೆ. ಕಾರ್ಮಿಕ ಸಚಿವರು ಭ್ರಷ್ಟಾಚಾರಕ್ಕೆ ಬಲಿಯಾಗಿ ಬಡ ಬೀಡಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆಂಬುದು ಸ್ವಷ್ಟವಾಗುತ್ತದೆ.

ಆರೋಪ-2

ರಾಜ್ಯದ ಕಾರ್ಮಿಕ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾರ್ಮಿಕ ಆಯುಕ್ತರಿಗೆ ಸಲಹೆಗಾರರಾಗಿ ನಿವೃತ್ತ ಅಧಿಕಾರಿಯನ್ನು ನೇಮಕ ಮಾಡಲು ಅಕ್ಟೋಬರ್ 8 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನಿಡಲಾಗಿದೆ. ಈ ಬಗೆಗೆ ಸಿಐಟಿಯು ರಾಜ್ಯದ ವಿವಿಧೆಡೆ, ಮುಖ್ಯವಾಗಿ ಅವರು ಉಸ್ತುವಾರಿಯಾಗಿರುವ ಬಳ್ಳಾರಿಯಲ್ಲಿ ಹಾಗೂ ಅವರ ಸ್ವಂತ ಜಿಲ್ಲೆಯಾದ ದಾವಣಗೆರೆಯಲ್ಲಿ ಪತ್ರಿಕಾಗೊಷ್ಟಿ ಮಾಡುತ್ತಿದ್ದಂತೆ ಕಾರ್ಮಿಕರ ಆಯುಕ್ತರ ಬದಲು ಕಾರ್ಮಿಕ ಸಚಿವರಿಗೆ ಸಲಹೆಗಾರರಗಾಗಿ ನಿವೃತ್ತ ಅಧಿಖಾರಿ ನೇಮಕ ಎಂಬ ತಿದ್ದುಪಡಿ ಮಾಡಿ ಪ್ರಕಟಣೆ ನೀಡಲಾಗಿದೆ. ಏನೇ ಬದಲಾವಣೆ ಆದರೂ ಈ ತೀರ್ಮಾನದ ಹಿಂದೆ ಕಾರ್ಮಿಕ ಮಂತ್ರಿಗಳ ನೇರ ಕೈವಾಡ ಇರುವುದಂತೂ ಸತ್ಯ. ಭ್ರಷ್ಟಾಚಾರಕ್ಕೆ ಇಂಬು ಕೊಡುವ ಮಹತ್ವಾಕಾಂಕ್ಷೆಯಿಂದ ಇಂತಹ ಕ್ರಮಗಳನ್ನು ಕಾರ್ಮಿಕ ಮಂತ್ರಿಗಳು ಕೈಗೊಂಡಿದ್ದಾರೆ. ಈ ನಿರ್ಣಯವು ಅವೈಜ್ಞಾನಿಕವಾಗಿದೆ. ಸರಕಾರವು ಕಾರ್ಮಿಕ ಇಲಾಖೆಯಲ್ಲಿ ಭ್ರಷ್ಟಾಚಾರವನ್ನು ಹೆಚ್ಚಿಸುವ ಕ್ರಮವಲ್ಲದೆ ಬೇರೇನೂ ಇಲ್ಲ ಎಂಬುದು ಸಿಐಟಿಯು ವಾದವಾಗಿದೆ.

ಆರೋಪ-3

ಇತ್ತೀಚಿಗೆ ತ್ರಿಪಕ್ಷೀಯವಾಗಿರುವ ಪ್ರಾತಿನಿಧ್ಯ ಹೊಂದಿರುವ ಅಂದರೆ, ಸರಕಾರ, ಮಾಲೀಕರು ಮತ್ತು ಕಾರ್ಮಿಕರ ಪ್ರತಿನಿಧಿಗಳನ್ನು ಒಳಗೊಂಡಿರುವ ಕನಿಷ್ಟ ವೇತನ ಸಲಹಾ ಮಂಡಳಿ ಪ್ರತಿ ತಿಂಗಳಿಗೆ ರೂ.10,010/- ವಲಯ 1ರಲ್ಲಿ ನಿಗದಿ ಮಾಡಿ ಶಿಫಾರಸ್ಸು ಮಾಡಿರುವುದನ್ನು ಸಾಮಾನ್ಯ ಪ್ರಕ್ರಿಯೆಯಲ್ಲಿ 8 ಉದ್ಯೋಗಗಳ ಕಾರ್ಮಿಕರಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ನಂತರದಲ್ಲಿ ಕಾರ್ಮಿಕ ಮಂತ್ರಿ ಅಥವಾ ಅವರ ಹಿಂಬಾಲಕರ ಮಧ್ಯಪ್ರವೇಶದಿಂದಾಗಿ ಸುಮಾರು 24 ಉದ್ಯೋಗಗಳಿಗೆ ಕನಿಷ್ಟ ವೇತನ ಮಂಡಳಿಗೆ ಹಿಂದಕ್ಕೆ ಕಳುಹಿಸಿ ಇಂದಿನ ದುಬಾರಿ ಬೆಲೆ ಏರಿಕೆಯ ದಿನಗಳಲ್ಲಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ. ಈ ಹಿಂದೆ ಕಾರ್ಮಿಕ ಚಳುವಳಿ ಮೂಲಕ ಕನಿಷ್ಟ ವೇತನ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಿದ್ದರೂ ಮಂತ್ರಿಗಳ ನಿರಾಸಕ್ತಿಯಿಂದಾಗಿ ಯಾವುದೇ ಪ್ರಗತಿ ಆಗಿರುವುದಿಲ್ಲ. 2015ರ ಬೆಲೆ ಏರಿಕೆಗೆ ಅನುಸಾರವಾಗಿ ಸದ್ಯ ದೇಶದ್ಯಾಂತ ಎಲ್ಲಾ ಕಾರ್ಮಿಕರಿಗೆ ಕನಿಷ್ಟ ವೇತನ ರೂ.15000/- ನಿಗದಿ ಪಡಿಸಬೇಕು ಎಂಬುದು ಕಾರ್ಮಿಕ ಚಳವಳಿ ಆಗ್ರಹವಾಗಿದೆ. ಇದೇ ಬೇಡಿಕೆ ಆಧಾರದಲ್ಲೇ ಸೆಪ್ಟೆಂಬರ್ 2 ರಂದು ಸಾರ್ವತ್ರಿಕ ಮುಷ್ಕರ ನಡೆದಿದೆ, ಹೀಗಿದ್ದೂ 24 ಉಧ್ಯಮಗಳ ಕಾರ್ಮಿಕರ ಕನಿಷ್ಟ ವೇತನ ಪರಿಷ್ಕರಣೆ ತಡೆಗಟ್ಟಲು ಪ್ರಯತ್ನಿಸಿರುವುದು ಕಾರ್ಮಿಕ ವಿರೋಧಿ ಕ್ರಮವಲ್ಲವೇ?

ಆರೋಪ-4

ಕಟ್ಟಡ ನಿರ್ಮಾಣ ಕಾರ್ಮಿಕರ ಸೌಲಭ್ಯಗಳನ್ನು ಪಡೆಯಲು ತೀವ್ರ ಸಮಸ್ಯೆಗಳಿವೆ. ಕಟ್ಟಡ ಕಾರ್ಮಿಕರ ನೊಂದಣಿ ಮಾಡಲು ಅಗತ್ಯ ಸಿಬ್ಬಂದಿ ಇಲ್ಲ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ರೂ.3050 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಿದ್ದರೂ ಬಡ ಕಟ್ಟಡ ಕಾರ್ಮಿಕರು ಸೌಲಬ್ಯಗಳನ್ನು ಪಡೆಯಲು ಪರದಾಡಬೇಕಾಗಿದೆ. ಮತ್ತೊಂದೆಡೆ ಮಂಡಳಿಯಲ್ಲಿ ಶೇಖರಣೆ ಆಗಿರುವ ಹಣವನ್ನು ವಿದೇಶಿ ಪ್ರಯಣಕ್ಕಾಗಿ, ಸುಪ್ರಿಂಕೋರ್ಟ್ ನಿರ್ಧೇಶನಗಳಿಗೆ ವಿರುದ್ದವಾಗಿ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟಡ ಸೌಧಗಳು ಮತ್ತು ಭೂಮಿ ಖರೀದಿ ಇತ್ಯಾಧಿ ತೀರ್ಮಾನ ಮಾಡಲಾಗಿದೆ. ಆ ಮೂಲಕ ಭ್ರಷ್ಟಾಚಾರ ನಡೆಸಲು ಅವಕಾಶ ನೀಡಲಾಗಿದೆ. ಆದ್ದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸೆಸ್ ರೂಪದಲ್ಲಿ ಸಂಗ್ರಹವಾಗುವ ಕಾರ್ಮಿಕ ಕಲ್ಯಾಣಕ್ಕಾಗಿ ಮಾತ್ರ ಸದ್ಬಳಕೆ ಆಗುವಂತೆ ಕ್ರಮ ಕೈಗೊಳ್ಳಲು ಹಲವು ಬಾರಿ ವಿವಿಧ ಕಾರ್ಮಿಕ ಸಂಘಗಳು ಹಲವು ರೀತಿ ಪ್ರತಿಭಟನೆ ನಡೆಸಿವೆ. ನಿಜವಾಗಿಯೂ ಕಟ್ಟಡ ಕಾರ್ಮಿಕ ನಡುವೆ ಕೆಲಸ ಮಾಡುವ ಸಿಐಟಿಯು ನೇತೃತ್ವದ ಸಂಘ ಸೇರದಂತೆ ಇತರೆ ಸಂಘಗಳನ್ನು ಮಂಡಳಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ. ಕಾರ್ಮಿಕರ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿದ್ದರೂ ಅದನ್ನು ತಡೆಯಲು ಯಾವುದೇ ಕ್ರಮ ವಹಿಸುತ್ತಿಲ್ಲ ಯಾಕೆ?

ಆರೋಪ-5

ರಾಜ್ಯದಲ್ಲಿ ಇ.ಎಸ್.ಐ ವ್ಯಾಪ್ತಿಗೆ ಒಳಪಡುವ ಕಾರ್ಮಿಕರಿಗೆ ರೆಫರಲ್ ಆಸ್ಪತ್ರೆಗಳಲ್ಲಿ ಚಿಕೆತ್ಸೆಯನ್ನು ನಿರಾಕರಿಸಲಾಗುತ್ತಿದ್ದು, ಕಾರ್ಮಿಕರು ಮತ್ತು ಅವರ ಅವಲಂಬಿತ ಕುಟುಂಬದ ಸದಸ್ಯರು ರೋಗರುಜಿನಗಳಿಂದ ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮುಖ್ಯಕಾರಣ ಸರಕಾರವು ಈ ರೆಫರಲ್ ಆಸ್ಪತ್ರೆಗಳಿಗೆ ಬಿಲ್‍ಗಳ ಮೊತ್ತವನ್ನು ಪಾವತಿಸದೇ ನಿರ್ಲಕ್ಷ ಮಾಡಿರುವುದೇ ಕಾರಣವಾಗಿದೆ. ಅಲ್ಲದೆ ಖಾಸಗೀ ಆಸ್ಪತ್ರೆಗಳು ಚಿಕಿತ್ಸಾವೆಚ್ಚ ಏರಿಸುವ ಪ್ರಸ್ತಾಪ ಮುಂದಿರಿಸಿವೆ. ರಾಜ್ಯದಾದ್ಯಂತ ಇರುವ ಇಎಸ್‍ಐ ಆಸ್ಪತ್ರೆಗಳಲ್ಲಿ ಚಂದಾದಾರರು ಹಾಗೂ ಅವರ ಅವಲಂಬಿತರಿಗೆ ಸರಿಯಾಗಿ ಚಿಕಿತ್ಸೆ ನೀಡುವಲ್ಲಿ ತೀರ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಅಲ್ಲಿ ಅಗತ್ಯ ಸಿಬ್ಬಂದಿ ನೇಮಕಾತಿಯೂ ಇಲ್ಲವಾಗಿದೆ. ಈ ಬಗ್ಗೆ ಇಎಸ್‍ಐ ಚಂದಾದಾರರಿಗೆ ಯಾವುದೇ ರೀತಿ ನ್ಯಾಯ ಕೊಡಿಸುವ ಪ್ರಯತ್ನವನ್ನು ಕಾರ್ಮಿಕ ಇಲಾಖೆ ಮಾಡುತ್ತಿಲ್ಲ.

ಆರೋಪ-6

ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚನೆಯಾಗಿ 7 ವರ್ಷಗಳಾಗಿದೆ. ಆದರೂ ಕಾರ್ಮಿಕರ ನೊಂದಣಿಯೂ ಆಗುತ್ತಿಲ್ಲ. ಸುಮಾರು 42 ವಿಭಾಗಗಳಲ್ಲಿ 3 ಕೋಟಿಯಷ್ಟು ಕಾರ್ಮೀಕರು ದುಡಿಯುತ್ತಿದ್ದರೂ ರಾಜ್ಯ ಸರಕಾರ ಹೆಚ್ಚಿನ ಅನುದಾನ ನೀಡುತಿಲ್ಲ. ಇದರಿಂದ ಅಸಂಘಟಿತ ಕಾರ್ಮಿಕರಿಗೆ ಏನೂ ಪ್ರಯೋಜನವಾಗುತ್ತಿಲ್ಲ. ಹಮಾಲಿ ಕಾರ್ಮಿಕರು, ಗ್ರಾಮಪಂಚಾಯತಿ ಕಾರ್ಮಿಕರು, ಸ್ಕೀಂಗಳಲ್ಲಿ ದುಡಿಯುತ್ತಿರುವ ಅಂಗನವಾಡಿ, ಬಿಸಿ ಊಟ, ಆಶಾ ಮುಂತಾದ ಕೇಂದ್ರ ಯೋಜನೆಗಳಲ್ಲಿ ಲಕ್ಷಾಂತರ ಕಾರ್ಮಿಕರು ಯಾವುದೇ ಭದ್ರತೆ ಇಲ್ಲದೇ ದುಡಿಯುತ್ತಿದ್ದಾರೆ. ತೋಟ ಕಾರ್ಮಿಕರು, ಆಟೋ ಚಾಲಕರು, ಸಾರಿಗೆ ನಿಗಮಗಳ ಕಾರ್ಮಿಕರಿಗೆ ಅನ್ಯಾಯ ಮಾಡುವ ವಿಧಾನಗಳನ್ನು ರದ್ದುಗೊಳಿಸಬೇಕು. ಎಲ್ಲಾ ಕಾರ್ಮಿಕರಿಗೂ ಪಿಂಚಣಿ ನಿಡುವ ವ್ಯವಸ್ಥೆ ಆಗಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್.) ರದ್ದುಗೊಳಿಸಬೇಕು. ಎಲ್ಲಾ ಕಾರ್ಮಿಕರಿಗೆ ಉಚಿತ ನಿವೇಶನ ನೀಡಬೇಕು. ಆರ್.ಎಸ್.ಬಿ.ವೈ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಹಲವು ಬಾರೀ ವಿವಿಧ ಅಸಂಘಟಿತ ಕಾರ್ಮೀಕರು ಹೋರಾಟ ನಡೆಸಿ ಸ್ವತಃ ಸಚಿವರಿಗೆ ಮನವಿ ಸಲ್ಲಿಸಿದ್ದಾಗ್ಯೂ ಯಾವುದೇ ಲಾಭವಾಗಿಲ್ಲ. ಇದು ಕಾರ್ಮೀಕ ವಿರೋಧಿ ಕ್ರಮವಲ್ಲವೇ?

ಆರೋಪ-7

ಗುತ್ತಿಗೆ ಪದ್ದತಿಯಲ್ಲಿ ಕಾರ್ಮಿಕರನ್ನು ಗುತ್ತಿಗೆ ಪದ್ದತಿಯಲ್ಲಿ ತೀವ್ರ ಶೋಷಣೆ ನಡೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯನ್ನು ಶೋಷಣೆ ಮಾಡಲು ಬಂಡವಾಳಗಾರರು ಬಳಸಿಕೊಳ್ಳುತ್ತಿದ್ದಾರೆ. ಗುತ್ತಿಗೆ ಲೈಸೆನ್ಸ್‍ಗಳನ್ನು ಭ್ರಷ್ಟಾಚಾರದ ಆಧಾರದಲ್ಲಿ ನೀಡಲಾಗುತ್ತಿದ್ದೂ, ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದ್ದೂ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಗುತ್ತಿಗೆ ಕಾರ್ಮಿಕರ ಶೋಷಣೆಯನ್ನು ತಡೆಗಟ್ಟಲು ತಮಿಳನಾಡು ಮತ್ತು ಅಸ್ಸಾಂ ರಾಜ್ಯಗಳಲ್ಲಿರುವಂತೆ “ಖಾಯಂ ಸ್ಥಾನ ನೀಡುವ ಕಾನೂನು” ರಾಜ್ಯದಲ್ಲಿಯೂ ಜಾರಿಗೊಳಿಸಬೇಕು. ಕನಿಷ್ಟ ವೇತನ ಮತ್ತು ಕಾರ್ಮಿಕರ ನಷ್ಟ ಪರಿಹಾರ ಕಾನೂನು ಅಡಿಯಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಲು ಕಳೆದ 18 ತಿಂಗಳುಗಳಿಂದ ಕಾನೂನು ತೊಡಕುಗಳು ಉಂಟಾಗಿದ್ದೂ, ಕಾರ್ಮಿಕ ಸಚಿವರು ಯಾವುದೇ ಕಾಳಜಿ ವಹಿಸುತ್ತಿಲ್ಲ. ಅಲ್ಲದೆ ಕಾರ್ಮಿಕ ವಿವಾದಗಳ ಕುರಿತು ಕಾರ್ಮಿಕ ನ್ಯಾಯಾಲಯಗಳ ವ್ಯಾಪ್ತಿಯನ್ನು ಮೊಟಕುಗೊಳಿಸಿರುವ ಕಾರಣ ಕಾರ್ಮಿಕರು ತೀವ್ರ ಗೊಂದಲದಲ್ಲಿದ್ದಾರೆ. ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆ ಮಾಡಲು ಕ್ರಮ ವಹಿಸಬೇಕೆಂಬ ಕಾರ್ಮಿಕರ ಬೇಡಿಕೆಗಳ ಸೂಕ್ತ ಕ್ರಮವಹಿಸುತ್ತಿಲ್ಲ ಯಾಕೆ?

ಆರೋಪ-8

ಕಳೆದ 10 ವರ್ಷಗಳಿಂದ ರಾಜ್ಯ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಕಾನೂನು ಜಾರಿಯಲ್ಲಿರಲಿಲ್ಲ. ಹೀಗಿದ್ದೂ ಹಲವು ನೌಕರರ ಹೋರಾಟಗಳು ಈ ಅವಧಿಯಲ್ಲಿ ಹಲವು ಮಾತುಕತೆಗಳ ಮೂಲಕ ಸೌಹಾರ್ದಯುತವಾಗಿ ನಡೆದಿವೆ. ಇಂತಹ ಸನ್ನಿವೇಶದಲ್ಲಿ ಕರಾಳ ಎಸ್ಮಾ ಕಾಯ್ದೆ ಅನ್ವಯ ಮಾಡಲು ಸಾರಿಗೆ ನಿಗಮಗಳ ನೌಕರರ ವಿರುದ್ದ ಅಧಿಸೂಚನೆ ಹೊರಡಿಸಿರುವುದರ ಹಿಂದಿರುವ ಉದ್ದೇಶವೇನು? ಕಾರ್ಮಿಕ ಸಚಿವರು ನೀಇದರ ಜಾರಿಯನ್ನು ತಡೆಯಲು ಈ ಬಗ್ಗೆ ಯಾವುದೇ ಕ್ರಮವಹಿಸದೆ ವಿಫಲರಾಗಿದ್ದಾರೆ. ಕಾರ್ಮಿಕ ಸಚಿವರಾಗಿ ಕಾರ್ಮಿಕರ ಪರವಾಗಿ ಕೆಲಸ ಮಾಡದೇ ಸರಕಾರದ ಬಂಡವಾಳಿಗರ ಪರ ನಿಂತಿರುವುದು ಇದರಿಂದ ಗೊತ್ತಾಗುತ್ತಲ್ಲವೇ? ಅಲ್ಲದೆ ಸಾರಿಗೆ ಕಾರ್ಮಿಕರಿಗೆ ಅನ್ಯಾಯ ಮಾಡುವ ಕೇಂದ್ರದ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಕಾನೂನು ರಾಜ್ಯದಲ್ಲಿ ಜಾರಿಗೊಳಿಸದಿರುವಂತೆ ಸರಕಾರದ ಒತ್ತಡ ಹೇರುವ ಕೆಲಸವನ್ನು ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸಲಿಲ್ಲ.

ಈ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಕಾರ್ಮಿಕ ಮಂತ್ರಿ ಪಿ.ಟಿ.ಪರಮೇಶ್ವರ ನಾಯ್ಕ ರಾಜಿನಾಮೆ ನೀಡಲು ಸಿಐಟಿಯು ಒತ್ತಾಯಿಸಿದೆ. ಮತ್ತು ಕಾರ್ಮಿಕ ಮಂತ್ರಿ ರಾಜಿನಾಮೆ ನೀಡದ ಸಂಧರ್ಭದಲ್ಲಿ ಅವರನ್ನು ಮಂತ್ರಿ ಮಂಡಲದಿಂದ ತೆಗೆದು ಹಾಕಬೇಕೆಂದು ಒತ್ತಾಯಿಸಿ ರಾಜ್ಯದ್ಯಾಂತ ನವೆಂಬರ್ 23 ರಂದು ಹೋರಾಟಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮೇಲ್ಕಂಡ ಬೇಡಿಕೆಗಳ ಕುರಿತಾದ ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳಗೂ ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *