ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾಜಿ ಐಎಎಸ್ ಅಧಿಕಾರಿ ರಾಜ್ ಕುಮಾರ್ ಗೋಯಲ್ ಅವರು ಮುಖ್ಯ ಮಾಹಿತಿ ಆಯುಕ್ತರಾಗಿ (ಸಿಐಸಿ) ಇಂದು ಪ್ರಮಾಣ ವಚನ ಸ್ವೀಕರಿಸಿದರು. ಗೋಯಲ್ ಅವರಿಗೆ ದ್ರೌಪದಿ ಮುರ್ಮು ಅವರು ಅಧಿಕಾರ ಮತ್ತು ಗೌಪ್ಯತೆ ಪ್ರಮಾಣ ವಚನ ಬೋಧಿಸಿದರು.
ಮಾಜಿ ಸಿಐಸಿ ಹೀರಾಲಾಲ್ ಸಮಾರಿಯಾ ಅವರ ಅಧಿಕಾರವಧಿಯು ಸೆಪ್ಟೆಂಬರ್ 13ಕ್ಕೆ ಪೂರ್ಣಗೊಂಡಿತ್ತು. ಅವರ ಸ್ಥಾನಕ್ಕೆ ಗೋಯಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಮೂವರು ಸದಸ್ಯರ ಸಮಿತಿಯು ಶಿಫಾರಸು ಮಾಡಿತ್ತು. ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ಕೇಂದ್ರ ಸಿಬ್ಬಂದಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ : ಆನೇಕಲ್ | ರಾಗಿ ಉತ್ತಮ ಫಸಲು ರೈತರ ಮುಖದಲ್ಲಿ ಸಂತಸದ ಕಳೆ
9 ವರ್ಷಗಳ ನಂತರ ಪೂರ್ಣ ಆಯೋಗ ರಚನೆ: ಪ್ರಧಾನಿ ಮೋದಿ ಅವರ ನೇತೃತ್ವದ ಸಮಿತಿಯು ರಾಜ್ ಕುಮಾರ್ ಗೋಯಲ್ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ಶಿಫಾರಸು ಮಾಡುವುದರ ಜೊತೆಗೆ 8 ಮಂದಿ ಮಾಹಿತಿ ಆಯಕ್ತರ ಹೆಸರುಗಳನ್ನು ಸೂಚಿಸಿತ್ತು. ಈ ಮೂಲಕ ಮಾಹಿತಿ ಆಯೋಗವು 9 ವರ್ಷಗಳ ನಂತರ ಪೂರ್ಣ ಬಲದ ತಂಡವನ್ನು ಹೊಂದಿದಂತಾಗಿದೆ. ಆಯೋಗವು ಸಿಐಸಿ ನೇತೃತ್ವದಲ್ಲಿ ಗರಿಷ್ಠ 10 ಮಾಹಿತಿ ಆಯುಕ್ತರನ್ನು ಹೊಂದಬಹುದು. ಪ್ರಸ್ತುತ, ಆನಂದಿ ರಾಮಲಿಂಗಂ ಮತ್ತು ವಿನೋದ್ ಕುಮಾರ್ ತಿವಾರಿ ಅವರು ಮಾಹಿತಿ ಆಯುಕ್ತರಾಗಿದ್ದಾರೆ.
ಇವರೇ ಮಾಹಿತಿ ಆಯುಕ್ತರು: ರೈಲ್ವೆ ಮಂಡಳಿಯ ಮಾಜಿ ಮುಖ್ಯಸ್ಥೆ ಜಯ ವರ್ಮಾ ಸಿನ್ಹಾ, ಗುಪ್ತಚರ ಬ್ಯೂರೋ, ಗೃಹ ಸಚಿವಾಲಯ ಮತ್ತು ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಸ್ವಾಗತ್ ದಾಸ್, ಸಿಎಸ್‌ಎಸ್ ಅಧಿಕಾರಿ ಸಂಜೀವ್ ಕುಮಾರ್ ಜಿಂದಾಲ್, ಮಾಜಿ ಐಎಎಸ್ ಅಧಿಕಾರಿ ಸುರೇಂದ್ರ ಸಿಂಗ್ ಮೀನಾ, ಮಾಜಿ ಭಾರತೀಯ ಅರಣ್ಯ ಸೇವೆ ಅಧಿಕಾರಿ ಖುಷ್ವಂತ್ ಸಿಂಗ್ ಸೇಥಿ, ಹಿರಿಯ ಪತ್ರಕರ್ತರಾದ ಪಿ.ಆರ್. ರಮೇಶ್, ಅಶುತೋಷ್ ಚತುರ್ವೇದಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿಎನ್‌ಜಿಆರ್‌ಬಿ) ಸದಸ್ಯೆ ಸುಧಾ ರಾಣಿ ರೇಲಂಗಿ ಅವರು ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಒಳಗೊಂಡ ಸಮಿತಿಯು ಸಿಐಸಿ ಮತ್ತು ಎಂಟು ಮಾಹಿತಿ ಆಯುಕ್ತರನ್ನು ಇತ್ತೀಚೆಗೆ ಅನುಮೋದಿಸಿತ್ತು.
ಮಾಜಿ ಐಎಎಸ್ ಅಧಿಕಾರಿಯ ಬಗ್ಗೆ ಒಂದಿಷ್ಟು: ರಾಜ್ ಕುಮಾರ್ ಗೋಯಲ್ ಅವರು ಅರುಣಾಚಲ ಪ್ರದೇಶ – ಗೋವಾ – ಮಿಜೋರಾಂ – ಕೇಂದ್ರಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೇಡರ್‌ನ 1990 ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ನಿವೃತ್ತ ಅಧಿಕಾರಿ. ಅವರು ಆಗಸ್ಟ್ 31 ರಂದು ಕಾನೂನು ಮತ್ತು ನ್ಯಾಯ ಸಚಿವಾಲಯದ ನ್ಯಾಯ ಇಲಾಖೆಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಗೃಹ ಸಚಿವಾಲಯದಲ್ಲಿ ಕಾರ್ಯದರ್ಶಿ (ಗಡಿ ನಿರ್ವಹಣೆ) ಆಗಿಯೂ ಸೇವೆ ಸಲ್ಲಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಇದನ್ನೂ ನೋಡಿ : ಅಗತ್ಯ ಊಟ ಕೊಟ್ಟು, ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ Janashakthi Media
