ನವದೆಹಲಿ: ಕನಿಷ್ಠ ಬೆಂಬಲ ಬೆಲೆ (MSP) ಯಲ್ಲಿ ನಫೆಡ್ (NAFED) ಮತ್ತು ಎನ್ಸಿಸಿಎಫ್ (NCCF) ಮೂಲಕ ಆದ್ಯತೆ ಮೇಲೆ, ತೊಗರಿ ಖರೀದಿಗೆ ತ್ವರಿತ ಅನುಮೋದನೆ ನೀಡಲಾಗಿದೆ. ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅಸ್ತು ಎಂದಿದೆ.
ಕರ್ನಾಟಕದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಗೆ ಮುಂದಾಗುವಂತೆ ಡಿಸೆಂಬರ್ 4ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆಯಲಾಗಿತ್ತು. ಇದಕ್ಕೆ ತ್ವರಿತ ಸ್ಪಂದನೆ ನೀಡಿರುವ ಕೃಷಿ ಸಚಿವರು, ಐದಾರು ದಿನದಲ್ಲೇ ತೊಗರಿ ಖರೀದಿಗೆ ಅನುಮೋದನೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ನಡೆದ ಭ್ರಷ್ಟಾಚಾರ ತನಿಖೆಗೆ ಜಿಲ್ಲಾ ಪಂಚಾಯತಿ CEO ಗೆ ಎಸ್ಎಫ್ಐ ದೂರು
ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ PSS ಅಡಿಯಲ್ಲಿ ಒಟ್ಟು 9,67,000 ಮೆಟ್ರಿಕ್ ಟನ್ ತೊಗರಿ ಖರೀದಿಗೆ ಅನುಮೋದನೆ ಸಿಕ್ಕಿದೆ. 2025-26ರ ಖಾರಿಫ್ ಋತುವಿನಲ್ಲಿ ತೊಗರಿ ಖರೀದಿಗಾಗಿ ಬೆಲೆ ಬೆಂಬಲ ಯೋಜನೆ (PSS) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿ.10ರಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ಮಾದರಿ ಬೆಲೆ ಕ್ವಿಂಟಾಲ್ಗೆ 5,830ರಿಂದ 6,700 ರೂ.ಗಳ ನಡುವೆ ಇದೆ. 2025-26ಕ್ಕೆ ಅಂದಾಜು 12.60 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ಕರ್ನಾಟಕ ಪ್ರಮುಖ ತೊಗರಿ ಬೆಳೆ ಉತ್ಪಾದಕ ರಾಜ್ಯವಾಗಿದೆ. 2025-26ಕ್ಕೆ ತೊಗರಿ ಬೆಳೆಗೆ ಘೋಷಿಸಲಾದ MSP ಕ್ವಿಂಟಾಲ್ಗೆ 8,000 ಆಗಿದೆ. ಆದರೆ ಮಾರುಕಟ್ಟೆ ಬೆಲೆ MSP ದರಕ್ಕಿಂತ ಕಡಿಮೆಯಿದೆ. ಹಾಗಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ಬೆಂಬಲ ಬೆಲೆಯಲ್ಲಿ ಖರೀದಿಗೆ ಮುಂದಾಗಿ ರೈತರ ನೆರವಿಗೆ ಬರುವಂತೆ ಸಚಿವ ಜೋಶಿ ಕೇಂದ್ರದ ಗಮನ ಸೆಳೆದಿದ್ದರು.
ಪ್ರಸಕ್ತ ಖಾರಿಫ್ ಋತುವಿನಲ್ಲಿ (2025-26) ಆದ್ಯತೆ ಆಧಾರದ ಮೇಲೆ NAFED ಮತ್ತು NCCF ಮೂಲಕ ತೊಗರಿ ಖರೀದಿಗೆ ಅನುಮೋದಿಸುವ ಅವಶ್ಯಕತೆಯಿದೆ. ಇದರಿಂದ ತೊಗರಿ ಮಾರಾಟ ತೊಂದರೆ ತಡೆಗಟ್ಟಿ, ರೈತರಿಗೆ ನ್ಯಾಯಯುತ ಬೆಲೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಪತ್ರ ಬರೆದಿದ್ದ ಪ್ರಲ್ಹಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಚವ್ಹಾಣ್ ಅವರಿಗೆ ಕರ್ನಾಟಕದ ತೊಗರಿ ಬೆಳೆಗಾರರ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
ಗೋವಿನಜೋಳ ಖರೀದಿಗೂ ಕೇಂದ್ರ ಮುಂದಾಗಬೇಕು: ಈ ಬಗ್ಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮಾದ್ಯಮಗಳಿಗೆ ಮಾಹಿತಿ ನೀಡಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ, ತೊಗರಿ ಬೇಳೆ ಖರೀದಿ ವಿಚಾರವಾಗಿ ಕೇಂದ್ರ ಕೃಷಿ ಸಚಿವರು ಕರೆ ಮಾಡಿದ್ದರು. ತಕ್ಷಣವೇ 9 ಲಕ್ಷದ 67 ಸಾವಿರ ಮೆಟ್ರಿಕ್ ಟನ್ ಖರೀದಿಗೆ ಹೇಳಿದ್ದಾರೆ ಎಂದರು.
ಲೋಕಸಭಾ ಸದಸ್ಯರ ಭೇಟಿ ಬಳಿಕ ಕೇಂದ್ರ ಕೃಷಿ ಸಚಿವರು ಕರೆ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ಹಾಗೂ ನಮ್ಮ ಸಂಸದರು, ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ್ದರು. ನವೆಂಬರ್ 6ಕ್ಕೆ ಖರೀದಿಗೆ ಅನುಮತಿ ಕೊಡಿ ಅಂತ ನಾವು ಒತ್ತಾಯಿಸಿದ್ದೆವು. ಅದೇ ರೀತಿ ಗೋವಿನಜೋಳ ಖರೀದಿಗೂ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರ ಬಿಟ್ಟರೆ ನಾವೇ ಹೆಚ್ಚು ತೊಗರಿ ಬೆಳೆಯುತ್ತಿರುವುದು. ನಮ್ಮ ಕೋರಿಕೆಗೆ ಅವರು ಸ್ಪಂದನೆ ಮಾಡಿದ್ದಾರೆ, ನಾವು ಜೆಡಿಎಸ್, ಬಿಜೆಪಿಯಂತೆ ವಿರೋಧ ಮಾಡಲ್ಲ, ಕೇಂದ್ರ ಸರ್ಕಾರಕ್ಕೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.
ರಾಜ್ಯ ಬಿಜೆಪಿ ಸಂಸದರು ಇದೇ ಕಾಳಜಿಯನ್ನು ಮೆಕ್ಕೆಜೋಳ ವಿಚಾರದಲ್ಲಿಯೂ ತೋರಿಸಬೇಕು. ಯಾಕೆ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದು ಗೊತ್ತಿಲ್ಲ. ಪ್ರಲ್ಹಾದ್ ಜೋಶಿ ಅವರನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಸಮಸ್ಯೆ ಇರುವುದನ್ನು ಸರಿಪಡಿಸಬೇಕಾಗಿದೆ, ಸದನಲ್ಲಿ ಇವರ ಪ್ರತಿಭಟನೆಯಿಂದ ಏನೂ ಪ್ರಯೋಜನವಿಲ್ಲ. ಅದರ ಬದಲು ಕೇಂದ್ರದ ಬಳಿ ಹೋಗಿ ಮಾತನಾಡಬೇಕು. ಗೋವಿನಜೊಳ ಖರೀದಿ ವಿಚಾರದಲ್ಲಿ ಜೋಶಿ ಅವರಿಗೆ ಸಿಎಂ, ನಾನು ಹಾಗೂ ಸಂಸದರು ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.
ಇದನ್ನೂ ನೋಡಿ : “ಪರ್ಯಾಯ ರಾಜಕಾರಣಕ್ಕಾಗಿ ಜನದನಿ ರ್ಯಾಲಿ” Janashakthi Media
