ದೊಡ್ಡ ಕಾರ್ಪೊರೇಟ್ ಸುಸ್ತಿದಾರರಿಂದ  ಕೇವಲ  7% ಬಾಕಿ ವಸೂಲಿ

  • 8 ವರ್ಷಗಳಲ್ಲಿ 2.6 ಲಕ್ಷ ಕೋಟಿ ರೂ. ಬಾಕಿ ಮನ್ನಾ?

ಬ್ಯಾಂಕುಗಳು ಮಾಡುವ ಸುಸ್ತಿಸಾಲಗಳು, ಅಂದರೆ ವಸೂಲಾಗದ ಸಾಲಗಳ ರೈಟ್‍-ಆಫ್ ಎಂದರೆ ಸಾಲ ಮನ್ನಾ ಅಲ್ಲ, ಅವನ್ನು ಲೆಕ್ಕಪತ್ರಗಳಿಂದ ಹೊರಗಿಡಲಾಗಿದೆಯಷ್ಟೇ, ಅವುಗಳ ವಸೂಲಿ ಪ್ರಯತ್ನ ಮುಂದುವರೆಯುತ್ತದೆ ಎಂದು ಸರಕಾರ ಮತ್ತು ಅವರ ಸಮರ್ಥಕರು ಹೇಳುತ್ತಿರುತ್ತಾರೆ. ಇದು ನಿಜವೇ ಎಂದು ಹುಡುಕಾಟ ನಡೆಸಿರುವ  ಪುಣೆಯ ಮಾಹಿತಿ ಹಕ್ಕು ಕಾರ್ಯಕರ್ತ ವಿವೇಕ್ ವೇಳಂಕರ್ 12 ರಾಷ್ಟ್ರೀಕೃತ ಬ್ಯಾಂಕುಗಳ ಸುಸ್ತಿಸಾಲಗಳ ಬಗ್ಗೆ ವಿವಿಧ ಮೂಲಗಳಿಂದ ಕಲೆ ಹಾಕಿರುವ ಅಂಕಿ-ಅಂಶಗಳು ಹೀಗಿವೆ:

  • ಕಳೆದ 8 ವರ್ಷಗಳಲ್ಲಿ ರೈಟ್‍-ಆಫ್ ಮಾಡಿದ ಮೊತ್ತ        ರೂ. 6,32,3777 ಕೋಟಿ
  • ಕಳೆದ 4 ವರ್ಷಗಳಲ್ಲಿ ರೈಟ್‍-ಆಫ್ ಮಾಡಿದ ಮೊತ್ತ        ರೂ. 4,95,190 ಕೋಟಿ
  • ಕಳೆದ 8ವರ್ಷಗಳಲ್ಲಿ ವಸೂಲಾದ ಬಾಕಿಗಳ ಮೊತ್ತ        ರೂ. 1,08, 544 ಕೋಟಿ, ಅಂದರೆ 17%.
  • ಕಳೆದ 4 ವರ್ಷಗಳಲ್ಲಿ ವಸೂಲಾದ ಬಾಕಿಗಳ ಮೊತ್ತ        ರೂ. 79,150  ಕೋಟಿ,   ಅಂದರೆ 16%.
  • ಕಳೆದ 8 ವರ್ಷಗಳಲ್ಲಿ ದೊಡ್ಡ ಸುಸ್ತಿದಾರರ ಬಾಕಿ ಮೊತ್ತ ರೂ. 2,78,517 ಕೋಟಿ
  • ವಸೂಲಾದ ಮೊತ್ತ                                                        ರೂ. 19,207 ಕೋಟಿ,    ಅಂದರೆ 7%

ದೊಡ್ಡ ಸುಸ್ತಿದಾರರು ಅಂದರೆ 100ಕೋಟಿ ರೂ.ಗಿಂತ ಹೆಚ್ಚಿನ ಸಾಲಗಳನ್ನು ತೀರಿಸದ ದೊಡ್ಡ ಕಂಪನಿಗಳು.

ಅಂದರೆ, ಕಳೆದ 8 ವರ್ಷಗಳಲ್ಲಿ ವಸೂಲಿ ಮಾಡಿರುವುದು 17ಶೇ. ಇದರಲ್ಲಿ ದೊಡ್ಡ ಸುಸ್ತಿದಾರ ಕಂಪನಿಗಳ ಬಾಕಿಯ ವಸೂಲಿ ಕೇವಲ 7% . ಸುಮಾರು 2.6ಲಕ್ಷ ಕೋಟಿ ರೂ.ಗಳಷ್ಟು ಸಾಲಮನ್ನಾ ಎಂದೇ ತಿಳಿಯಬೇಕೇ?

ವೇಳಂಕರ್‍ ಈ ಮಾಹಿತಿಗಳನ್ನು ಆರ್‍.ಟಿ.ಐ. ಅಡಿಯಲ್ಲಿ ಪಡೆಯಲು ಪ್ರಯತ್ನಿಸಿದರು. ಆದರೆ 2-3 ಬ್ಯಾಂಕುಗಳನ್ನು ಬಿಟ್ಟು  ಉಳಿದವು  ಇವನ್ನು ಕೊಡಲು ನಿರಾಕರಿಸಿದವು. ಕೆಲವು ತಮ್ಮ ವೆಬ್‍ಸೈಟುಗಳಲ್ಲಿರುವ ವಾರ್ಷಿಕ ವರದಿಗಳಿಂದ ಬೇಕಾದರೆ ಪಡೆಯಿರಿ ಎಂದವು ಎನ್ನುತ್ತಾರೆ ವೇಳಂಕರ್.

ಇದರ ಒಟ್ಟು ಅರ್ಥವೆಂದರೆ, ಮೊದಲನೆಯದಾಗಿ, ಬ್ಯಾಂಕುಗಳು  ಸುಸ್ತಿಸಾಲಗಳ ವಸೂಲಿಗಿಂತ ಅವುಗಳನ್ನು ತಮ್ಮ ಲೆಕ್ಕಪತ್ರಗಳಿಂದ ಹೊರಗಿಡುವುದಕ್ಕೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತವೆ, ಎರಡನೆಯದಾಗಿ, ವಸೂಲಿಯಲ್ಲೂ ಸಣ್ಣ ಸಾಲಗಾರರಿಂದ ಬಾಕಿ ವಸೂಲಿಗೇ ಮುತುವರ್ಜಿ ವಹಿಸುತ್ತವೆ, ದೊಡ್ಡ ಸಾಲಗಾರರ ಬಾಕಿ ವಸೂಲಿಗಳ ಬಗ್ಗೆ ಅಷ್ಟೇನೂ ಮುತುವರ್ಜಿ ವಹಿಸುವುದಿಲ್ಲ, ಅಥವ ಅವರ ನಡುವೆ  ಏನಾದರೂ ‘ವ್ಯವಹಾರ’ ಇರಬಹುದೇನೋ ಎನ್ನುತ್ತಾರೆ  ವೇಳಂಕರ್ (ಮನಿ ಲೈಪ್‍, ನವಂಬರ್‍ 30)

ಈ ರೀತಿ ಬ್ಯಾಂಕುಗಳು ವಸೂಲಾಗುವುದಿಲ್ಲ ಎಂದು ನಿರ್ಧರಿಸುವ ಸಾಲಗಳನ್ನು ತಮ್ಮ ಲೆಕ್ಕಪತ್ರಗಳಿಂದ ಹೊರಗಿಡುವ ಪದ್ಧತಿಯನ್ನು ಪರಿಣಿತರು ವಿರೋಧಿಸಿದ್ದಾರೆ.ಆದರೆ ಬ್ಯಾಂಕುಗಳು ಅದೇ ದಾರಿಯಲ್ಲಿ ಸಾಗಿವೆ. ಇದರ ಪ್ರಮುಖ ಫಲಾನುಭವಿಗಳೆಂದರೆ ಅತಿ ದೊಡ್ಡ ಕಾರ್ಪೊರೇಟ್‍ ಸುಸ್ತಿದಾರರು ಎಂದೂ ಅವರು ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *