ತುರ್ತು ಪರಸ್ಥಿತಿ ಅಂದು! ಇಂದು?!

ಭಿನ್ನಧ್ವನಿ ಹತ್ತಿಕ್ಕುವ ಪ್ರತಿ ನಿರ್ಧಾರ ಹೊರಬಿದ್ದ ಸಂದರ್ಭಗಳಲ್ಲಿ ಕೇಳಿಬರುವ ಮಾತು ಎಂದರೆ ಇದಕ್ಕಿಂತ ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯೇ ಚೆನ್ನಾಗಿತ್ತು ಎಂದು ಹೇಳುವುದನ್ನು ಕೇಳಿದ್ದೇವೆ. ಇಂದಿನ ಪೀಳಿಗೆಗೆ ಆ ತುರ್ತು ಪರಿಸ್ಥಿತಿ ಏನು ಎಂಬುದು ಅಂತರ್ಜಾಲದಲ್ಲಿ ಸಿಗುವ ಮಾಹಿತಿಯೇ ಅಂತಿಮ. ಹಾಗಾದರೆ 1975ರಲ್ಲಿ ಹೇರಿಕೆಯಾದ ಘೋಷಿತ ತುರ್ತು ಪರಿಸ್ಥಿತಿಗಿಂತಲೂ ಇಂದಿನ ಪರಿಸ್ಥಿತಿ ಗಂಭೀರವಾಗಿದೆಯೇ ? ಎಂಬ ಪ್ರಶ್ನೆಗಳೇಳುವುದು ಸಹಜ. ಅದಕ್ಕೆ ಅಂದಿನ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದವರು ಕಂಡಂತೆ ಆಗ ಹೇಗಿತ್ತು, ಇಂದು ಇತರರು ಹೇಳುವಂತೆ ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆಯೇ ಎಂಬ ಬಗ್ಗೆ ಅಂದು ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿ ಜೈಲಿಗೆ ಹೋಗಿ ಬಂದವರು, ಕಾಂಗ್ರೆಸ್ ಪಕ್ಷದ ದಮನಕಾರಿ ಕ್ರಮಗಳ ವಿರುದ್ಧ ಬಂಡೆದ್ದವರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಬಲ ಪಕ್ಷದ ರಚನೆಯಲ್ಲಿ ಸ್ವತಃ ಭಾಗಿಯಾದವರಲ್ಲಿ ಒಬ್ಬರಾದ ಹಿರಿಯ ಕಾರ್ಮಿಕ ಮುಖಂಡ ವಿಜೆಕೆ ನಾಯರ್ ಮಾತನಾಡಿದ್ದಾರೆ.


ಜೂನ್ 25, 1975ರಿಂದ ಮಾರ್ಚ್ 21, 1977ರವರೆಗೆ, 21 ತಿಂಗಳ ಕಾಲ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲಾಗಿತ್ತು. ದೇಶಾದ್ಯಂತ ಸುಮಾರು ಒಂದು ಲಕ್ಷಕ್ಕಿಂತಲೂ ಹೆಚ್ಚು ಮಂದಿಯನ್ನು ಸೆರೆಮನೆಗೆ ತಳ್ಳಲಾಗಿತ್ತು. ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಪಾರ್ಲಿಮೆಂಟಿನಲ್ಲಿ ಸಿಪಿಐ(ಎಂ) ಮುಖಂಡರಾಗಿದ್ದ ಎ.ಕೆ.ಗೋಪಾಲನ್ ಮಾಡಿದ ಭಾಷಣ ಮುದ್ರಿಸಿದ್ದಕ್ಕೆ ಕಾಂ. ವಿ.ಜೆ.ಕೆ.ನಾಯರ್ ಜೈಲು ಸೇರಬೇಕಾಗಿತ್ತು.
ವಿಜೆಕೆ ನಾಯರ್ ತಮ್ಮ ಮಾತಿನುದ್ದಕ್ಕೂ, ಇಂದಿರಾಗಾಂಧಿ 1969ರಿಂದ ಆರಂಭಿಸಿದ ಕೆಲವು ಪ್ರಗತಿಪರ (ರಾಜಧನ ರದ್ಧತಿ, ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ) ನೀತಿಗಳ ಜಾರಿಗೆ ಉಂಟಾದ ತೊಡಕುಗಳ ಕುರಿತು, ಸಂವಿಧಾನದ ಮೂಲಭೂತ ಸಂರಚನೆ ಬದಲಾಯಿಸಲು ಪಾರ್ಲಿಮೆಂಟಿಗೆ ಅಧಿಕಾರವಿಲ್ಲ ಎಂಬ ಕೋರ್ಟು ತೀರ್ಪುಗಳು ಒಂದು ಕಡೆ ಮತ್ತು ಇನ್ನೊಂದು ಕಡೆ ಬಲಪಂಥೀಯ ಶಕ್ತಿಗಳು ಅಡ್ಡ ಬಂದ ಹಿನ್ನೆಲೆಯ ಬಗ್ಗೆ ಗಮನ ಸೆಳೆದರು.
ಅವರ ಮಾತುಗಳಲ್ಲೇ ಓದಿ.


1971ರಿಂದ ತೀವ್ರವಾಗಿ ಬಂದ ಎಡ ಮತ್ತು ಪ್ರಜಾಸತ್ತಾತ್ಮಕ ಚಳವಳಿ ಇಂದಿರಾಗಾಂಧಿಯ ಪ್ರಗತಿಪರ ಇಮೇಜಿಗೆ ಸವಾಲು ಒಡ್ಡಿತ್ತು. ಎಡಪಕ್ಷಗಳಿಗೆ ತುರ್ತು ಪರಿಸ್ಥಿತಿ 1972ರಿಂದಲೇ ಆರಂಭವಾಗಿತ್ತು. 1972ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜಾರಿಯಲ್ಲಿದ್ದ ಅರೆ ಫ್ಯಾಸಿಸ್ಟ್ ದಬ್ಬಾಳಿಕೆ ಇಡೀ ದೇಶದ ಪ್ರಜಾಪ್ರಭುತ್ವ ಚಳವಳಿ ಮೇಲೆ ಎರಗಬಹುದು ಎಂದು ಸಿಪಿಐ(ಎಂ) ಎಚ್ಚರಿಕೆ ಕೊಟ್ಟಿತ್ತು.
ಎಡ ಮತ್ತು ಬಲಪಂಥೀಯ ರಾಜಕೀಯ ಶಕ್ತಿಗಳ ಮತ್ತು ತನ್ನ ಅಧಿಕಾರಶಾಹಿ ವಿರುದ್ಧ ಬಂದ ಎಲ್ಲಾ ಸವಾಲುಗಳನ್ನು ಎದುರಿಸಲು ಇಂದಿರಾಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದರು. ಇದನ್ನು ಸಂವಿಧಾನ ತಿದ್ದುಪಡಿ 39 ಮತ್ತು 42ರ ಮೂಲಕ ನಿಭಾಯಿಸಲು ಪ್ರಯತ್ನಿಸಿದರು. ಇವುಗಳ ಮೂಲಕ ಎಲ್ಲಾ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯಗಳ ಮೇಲೆ ದಾಳಿ ಮಾಡಿದರು. 1977 ರಲ್ಲಿ ಅಧಿಕಾರಕ್ಕೆ ಬಂದ ಜನತಾ ಸರಕಾರ ಆಂತರಿಕ ತುರ್ತು ಪರಿಸ್ಥಿತಿಯನ್ನು ಸುಲಭವಾಗಿ ತರದಿರುವಂತೆ ತಿದ್ದುಪಡಿಗಳನ್ನು ಮಾಡಿದೆ. ಅದಕ್ಕೆ ಹಿಂದೆ ಸಂವಿಧಾನದ ಅನುಚ್ಛೇದ 352ರಲ್ಲಿ ಬಾಹ್ಯದಾಳಿಯ ಜತೆಗೆ ಆಂತರಿಕ ಗಲಭೆಗಳ ಕಾರಣಕ್ಕೂ ತುರ್ತು ಪರಿಸ್ಥಿತಿ ತರಬಹುದು ಎಂದು ಇತ್ತು. ಈಗಿನ ಸಂವಿಧಾನದ ಅನುಚ್ಛೇದ 352 ಪ್ರಕಾರ ಆಂತರಿಕ ದಂಗೆಗಳ ಕಾರಣಕ್ಕೆ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಬಹುದು. ಆದರೆ ಮೂರು ತಿಂಗಳ ಒಳಗೆ ಎರಡೂ ಸದನಗಳು ಮೂರನೇ ಎರಡು ಬಹುಮತದಿಂದ ಅದನ್ನು ಅನುಮೋದಿಸಬೇಕು. ಅಂದರೆ ಸರಕಾರ 3 ತಿಂಗಳ ಮಟ್ಟಿಗಂತೂ ತುರ್ತು ಪರಿಸ್ಥಿತಿ ಘೋಷಿಸಬಹುದು ಎಂದು ಮಾಡಕೊಳ್ಳಲಾಯಿತು.


ಭೂಸುಧಾರಣೆ ಬದಲು ರೈತರಿಂದ ಭೂಮಿ ಕಿತ್ತು ಕೊಳ್ಳುವ ಭೂಸ್ವಾಧೀನತಾ ಕಾನೂನು, ಕಾರ್ಮಿಕರ ಹಕ್ಕು ಎತ್ತಿ ಹಿಡಿಯುವ ಕೆಲವಾದರೂ ಅಂಶಗಳಿರುವ ಕಾನೂನುಗಳಿಗೆ ಕಾರ್ಮಿಕ-ವಿರೋಧಿ ತಿದ್ದುಪಡಿ ತರಲು ಹೊರಟಿರುವ ಇಂದಿನ ಸರಕಾರಕ್ಕೆ ತೀವ್ರ ಪ್ರತಿರೋಧ ಬರುತ್ತಿದೆ. ಎಲ್ಲಾ ಸಾರ್ವಜನಿಕ ಆಸ್ತಿಗಳ ಖಾಸಗೀಕರಣದಿಂದ ಕೊಬ್ಬಿರುವ ಇಂದಿನ ರಾಜರಾದ ಡಾಲರ್ ಬಿಲಿಯಾಧಿಪತಿಗಳ ಪರವಾಗಿರುವ ಸರಕಾರಕ್ಕೆ ತೀವ್ರ ಅಸಮಾನvಯ ಆಯಾಮದಿಂದಲೂ ತೀವ್ರ ಪ್ರತಿರೋಧ ಬರುತ್ತಿದೆ. ಈ ಪರಿಸ್ಥಿತಿ ಹಿಂದಿನ ತುರ್ತು ಪರಿಸ್ಥಿತಿಯ ಮೊದಲಿದ್ದುದಕ್ಕಿಂತ ಬಹಳ ಭಿನ್ನವಾದ ಪರಿಸ್ಥಿತಿ, ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ರಾಜಧನ ರದ್ದತಿಯ ನೀತಿಗಳ ಬದಲು, ಈಗ ಭೂಗ್ರಹಣ, ಖಾಸಗೀಕರಣ, ಆಧುನಿಕ ‘ರಾಜ’ರಿಗೆ ಉತ್ತೇಜನದ ನೀತಿಗಳು ಇವೆ. ಈ ನೀತಿಗಳಿಗೆ ಬರುತ್ತಿರುವ ಪ್ರತಿರೋಧವನ್ನು ಪ್ರಜಾಸತ್ತಾತ್ಮಕ ಚೌಕಟ್ಟಿನ ಒಳಗೆ ದಮನ ಮಾಡಲು ಸಾಧ್ಯವಾಗದಿದ್ದರೆ ತುರ್ತು ಪರಿಸ್ಥಿತಿ ಬರುವ ಎಲ್ಲಾ ಅಪಾಯಗಳು ಇವೆ. ಜನರ ಸ್ವಾತಂತ್ರ್ಯ, ಸಮಾನತೆಯ ಆಶಯಗಳ ಸವಾಲನ್ನು, ಆಳುವ ವರ್ಗಗಳು ಪ್ರಜಾಪ್ರಭುತ್ವದ ದಮನದಿಂದ ನಿಭಾಯಿಸುವ ಸಾಧ್ಯತೆ ಇದೆ.

ತುರ್ತುಪರಿಸ್ಥಿತಿ ಘೋಷಣೆಯಾಗುವ ಕೆಲವು ಗಂಟೆಗಳ ಮುನ್ನ, ಪಾರ್ಲಿಮೆಂಟಿನಲ್ಲಿ ಸಿಪಿಐ(ಎಂ) ಉಪ ನಾಯಕರಾಗಿದ್ದ ಕಾಂ. ಜ್ಯೋತಿರ್ಮಯಿ ಬಸು ಅವರ ಭಾಷಣದ ಒಂದು ಸಾರ್ವಜನಿಕ ಸಭೆಯನ್ನು ಆ ದಿನ ಸಂಜೆ ಬೆಂಗಳೂರಿನ ಚಿಕ್ಕಲಾಲ್‍ಬಾಗ್‍ನಲ್ಲಿ ಏರ್ಪಡಿಸಿದ್ದೆವು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬಸುರವರು ಕೇಂದ್ರ ಸರ್ಕಾರವು ಒಂದು ರೀತಿಯ ದಬ್ಬಾಳಿಕೆಯ ಆಡಳಿತ ಹೇರುವ ಸನ್ನಾಹದಲ್ಲಿದೆ ಎಂದು ಎಚ್ಚರಿಸಿದ್ದರು. ಇ.ಎಂ.ಎಸ್ ನಂಬೂದಿರಿಪ್ಪಾಡ್ ಅವರು ಫ್ಯಾಸಿಸ್ಟ್ ಅಪಾಯದ ಬಗ್ಗೆ ಬರೆದ ಸರದಿ ಲೇಖನಗಳು ಮ¯ಯಾಳಂ ದಿನಪತ್ರಿಕೆಗಳಲ್ಲಿ ಜೂನ್ ಮೊದಲ ವಾರದಲ್ಲಿ ಪ್ರಕಟವಾಗಿದ್ದವು. ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿ ನಾವು ಅದಾಗಲೆ ಹಂಚಿದ್ದೆವು.


ತುರ್ತುಪರಿಸ್ಥಿತಿ ಘೋಷಣೆಯಾಗಿರುವುದು ನಮಗೆ ಜೂನ್ 26ರ ಬೆಳಗ್ಗೆ ತಿಳಿಯಿತು. ನಾವು ಮೈಸೂರ್ ಬ್ಯಾಂಕ್ ವೃತ್ತದ ಬಳಿ ಸೇರಿ, ಅಲ್ಲಿಂದ ಒಂದು ಪ್ರತಿಭಟನಾ ರ್ಯಾಲಿಯಲ್ಲಿ ಮಹಾತ್ಮ ಗಾಂಧಿ ರಸ್ತೆಗೆ ತೆರಳಿ ನಡೆಸಿದ ಸಭೆಯಲ್ಲಿ, ಹಿಂದಿನ ದಿನ ಬೆಂಗಳೂರಿಗೆ ಆಗಮಿಸಿದ್ದ ಸಂಸತ್ತಿನ ವಿರೋಧ ಪಕ್ಷದ ಸದಸ್ಯರ ಬಂಧನವನ್ನು ಖಂಡಿಸಿದೆವು.
ಆಂತರಿಕ ತುರ್ತುಪರಿಸ್ಥಿತಿ ಹೇರಲು ಮುಖ್ಯವಾದ ಕಾರಣವೆಂದರೆ, ಜನರು ಮೂಲಭೂತ ಹಕ್ಕುಗಳನ್ನು ಚಲಾಯಿಸದಂತೆ ಅವುಗಳನ್ನು ಅಮಾನತ್ತಿನಲ್ಲಿಡುವುದು, ವಿರೋಧ ಪಕ್ಷದವರ ಬಾಯಿಗೆ ಬೀಗ ಜಡಿಯುವುದು, ಪ್ರಜಾಪ್ರಭುತ್ವ ಹಕ್ಕುಗಳಡಿಯಲ್ಲಿ ಪ್ರಕಟವಾಗುವ ಪ್ರತಿಭಟನೆಗಳನ್ನು ಹತ್ತಿಕ್ಕುವುದು ಮತ್ತು ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ಅಲಹಾಬಾದ್ ಹೈಕೋರ್ಟ್ ಅನೂರ್ಜಿತಗೊಳಿಸಿದ್ದುದನ್ನು ಧಿಕ್ಕರಿಸಿ ಅವರೇ ಅಧಿಕಾರದಲ್ಲಿ ಮುಂದುವರಿಯುವುದು ಮತ್ತು ಅದಕ್ಕಾಗಿ ಪಾರ್ಲಿಮೆಂಟಿನ ಅವಧಿಯನ್ನು ಒಂದು ವರ್ಷಕಾಲ ವಿಸ್ತರಿಸುವುದು ಇತ್ಯಾದಿ. ವಾಕ್ ಸ್ವಾತಂತ್ರ್ಯದ ಹಕ್ಕನ್ನು ಅಮಾನತಿನಲ್ಲಿಟ್ಟ ಕಾರಣದಿಂದಾಗಿ ಪತ್ರಿಕೆಗಳ ಮೇಲೆ ಹತೋಟಿ ಸಾಧಿಸಿ, ಆ ಮೂಲಕ, ಆಂತರಿಕ ಭದ್ರತೆ ಕಾ0iÉ್ದುಯಡಿಯಲ್ಲಿ ವಿರೋಧ ಪಕ್ಷದ ನಾಯಕರನ್ನು ಬಂಧಿಸುವುದನ್ನು ಒಂದು ಸಾಮಾನ್ಯ ಘಟನೆಯಂತೆ ಪರಿಗಣಿಸುವುದೇ ಆಗಿತ್ತು.
ಸಿಪಿಐ(ಎಂ) ಪಕ್ಷದ ಸಂಸದ ಎ.ಕೆ.ಗೋಪಾಲನ್ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪಾರ್ಲಿಮೆಂಟಿನಲ್ಲಿ ಮಾಡಿದ ಭಾಷಣದ ಕನ್ನಡ ಅನುವಾದದ ಪ್ರತಿಗಳನ್ನು ಮುದ್ರಣ ಮಾಡಿಸುವ ಸಂದರ್ಭದಲ್ಲಿ, ಪ್ರಿಂಟಿಂಗ್ ಪ್ರೆಸ್‍ನ ಮಾಲೀಕನನ್ನು ಪೋಲೀಸರು ಹಿಡಿದು ಆತನನ್ನು ನನ್ನ ಮನೆಗೆ ಕರೆತಂದು, (ಆಗ ಪಕ್ಷದ ಕಚೇರಿ ನನ್ನ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು). ನನ್ನನ್ನು ಆಗಸ್ಟ್ 1975ರಲ್ಲಿ ಭಾರತದ ರಕ್ಷಣೆಯ ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಹಿರಿಯ ನ್ಯಾಯವಾದಿ ಕೆ. ಸುಬ್ಬಾರಾವ್ ಮತ್ತು ಅವರ ಕಿರಿಯ ಸಹೋದ್ಯೋಗಿ ವಿ.ಗೋಪಾಲ ಗೌಡ ( ಈಗ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳು) ನನ್ನ ಪರವಾಗಿ ಕೋರ್ಟಿನಲ್ಲಿ ವಕಾಲತ್ತು ನಡೆಸಿದ್ದರು. ತನ್ನ ಭಾಷಣವನ್ನು ಪ್ರಕಟ ಮಾಡುವ ಹಕ್ಕು ಮತ್ತು ಸವಲತ್ತು ಒಬ್ಬ ಪಾರ್ಲಿಮೆಂಟ್ ಸದಸ್ಯನಿಗೆ ಇದೆ ಎಂಬ ನಮ್ಮ ವಕೀಲರ ವಾದವನ್ನು ಕೋರ್ಟ್ ಒಪ್ಪಿ ಮಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇಲೆ ಅಕ್ಟೋಬರ್ 1976ರಲ್ಲಿ ನನ್ನನ್ನು ಬಿಡುಗಡೆ ಮಾಡಿತು.
1976 ರಲ್ಲಿ ವಿ.ವಿ. ಪುರಂ ಲಾ ಕಾಲೇಜಿನಲ್ಲಿ ಪೋಲೀಸ್ ಬೆಂಗಾವಲಿನಲ್ಲಿ ನನ್ನ ಎರಡನೆ ವರ್ಷದ ಎಲ್‍ಎಲ್‍ಬಿ ಪರೀಕ್ಷೆಗೆ ಹಾಜರಾಗಿ ಬರೆಯುವ ಅವಕಾಶ ದೊರಕಿತ್ತು. ಜೈಲು ವಾಸದ ಅವದಿಯಲ್ಲಿ ನನಗೆ ಎಲ್.ಕೆ. ಆದ್ವಾನಿ, ಎಸ್.ಎನ್.ಮಿಶ್ರ, ಮಧು ದಂಡವತೆ, ದೇವೇಗೌಡ, ರಾಮಕೃಷ್ಣ ಹೆಗಡೆ ಮುಂತಾದವರ ಜೊತೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುವ ಅವಕಾಶ ಸಿಕ್ಕಿತ್ತು. ಜೈಲಿನಲ್ಲಿದ್ದಾಗ, ಜನತಾ ಪಕ್ಷದ ರಚನೆಯಲ್ಲಿ ಸಹಾಯ ಮಾಡಿದ್ದೇನೆ.


ಕಾರ್ಮಿಕ ವರ್ಗದ ಮೇಲೆ ಭೀಕರ ದಾಳಿ ನಡೆದಿತ್ತು. ಆದರೆ, ಅವರಿಗೆ ಅದನ್ನು ಪ್ರತಿರೋಧಿಸುವ ಅವಕಾಶವಾಗಲಿಲ್ಲ. ತುರ್ತುಪರಿಸ್ಥಿತಿಯ ನಂತರ, 1978ರ ತರುವಾಯ, ಕಾರ್ಮಿಕ ವರ್ಗ ಹಿಂದೆ ತನ್ನ ಮೇಲೆ ಆದ ದಬ್ಬಾಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿತು. ಜನತಾ ಪಾರ್ಟಿಯ ಸರ್ಕಾರವು ಇಂದಿರಾ ಗಾಂಧಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಮುಂದುವರೆಸಿತ್ತು. ಇಂದಿರಾ ಗಾಂಧಿಯವರು 1980ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಬೆಂಗಳೂರಿನ ಕಾರ್ಮಿಕ ವರ್ಗ ಕೀರ್ತಿಶಾಲಿ ಹೋರಾಟಗಳನ್ನು ನಡೆಸಿ, ಕರ್ನಾಟಕದ ರಾಜಕೀಯದಲ್ಲಿ ತನ್ನದೇ ಆದ ಒಂದು ಛಾಪು ಮೂಡಿಸಿತು. ಕಾರ್ಮಿಕ ವರ್ಗವು ಸರ್ವಾಧಿಕಾರಿ ಧೋರಣೆಯ ವಿರುದ್ಧ ನಡೆಸದೆ ಉಳಿದಿದ್ದನ್ನು ಬಾಕಿಯನ್ನು ತನ್ನ 1980-81ರ ಹೋರಾಟಗಳ ಮೂಲಕ ಪೂರ್ಣಗೊಳಿಸಿತು. ಕಾರ್ಮಿಕ ವರ್ಗವು ರೈತ ಚಳುವಳಿಗಳಿಗೆ ನೆರವಾಗಿದ್ದು ಮಲಪ್ರಭಾ ಹೋರಾಟ ಬೆಳೆದು ಬಂತು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರ ಹಿಡಿಯುವಲ್ಲಿ ಒಂದು ಮುಖ್ಯವಾದ ಪಾತ್ರ ನಿರ್ವಹಿಸಿತು.
ಅಲ್ಲಲ್ಲಿ ಪ್ರತಿರೋಧ ಇತ್ತು. ಆರ್‍ಎಸ್‍ಎಸ್ ಮತ್ತು ಎಬಿವಿಪಿ ಪ್ರತಿಭಟಿಸಿದವು. ಪಿಜಿಆರ್ ಸಿಂಧ್ಯಾ ಮತ್ತು ಸುರೇಶ್ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಸಮಾಜವಾದಿ ಪಕ್ಷದ ಫೆರ್ನಾಂಡಿಸ್ ಸಹೋದರರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರು. ಲಾರೆನ್ಸ್ ಫೆರ್ನಾಂಡಿಜ್ ಅವರನ್ನು ಬಂಧಿಸಿ ಹಿಗ್ಗಾ ಮುಗ್ಗಾ ಥಳಿಸಿ ಅವರ ಸಹೋದರ ಮೈಕೆಲ್ ಫೆರ್ನಾಂಡಿಜ್ ಜೊತೆಯಲ್ಲಿ ಜೈಲಿಗೆ ಹಾಕಿದರು. ಅವರ ಜೊತೆಯಲ್ಲಿ ಬಂಧಿಸಿದ್ದ ಸ್ನೇಹಲತಾ ರೆಡ್ಡಿ ತುರ್ತುಪರಿಸ್ಥಿತಿ ಕೊನೆಗೊಳ್ಳುವ ಮುನ್ನವೇ ಮೃತರಾದರು.


ಸಿಪಿಐ(ಎಂ) ನಾಯಕರಲ್ಲಿ ಕೆಲವರನ್ನು ಬಂಧಿಸಲಾಗಿತ್ತು. ಸಿಪಿಐ(ಎಂ) ನಾಗರಿಕ ಹಕ್ಕುಗಳ ಪರವಾಗಿ ಚಳವಳಿ ನಡೆಸುವ ನಿಲುವು ತೆಗೆದುಕೊಂಡಿತ್ತು. ಬಂಗಾಳದಲ್ಲಿ ಅರೆ-ಫ್ಯಾಸಿಸ್ಟ್ ದಬ್ಬಾಳಿಕೆಯ ಆಡಳಿತ ಅದಾಗಲೇ ದಟ್ಟವಾಗಿತ್ತು. ಕೇರಳದಲ್ಲಿ ಅಚ್ಯುತ ಮೆನನ್ ಸರ್ಕಾರ ಸಿಪಿಐ(ಎಂ) ದಮನ ಮಾಡುತ್ತಿತ್ತು.
ದೇಶದಲ್ಲಿ ಆಗ ಇದ್ದ ಪರಿಸ್ಥಿತಿ ಈಗ ಅದೇ ರೀತಿಯಲ್ಲಿಲ್ಲ. ಆದರೆ, ಪಾರ್ಲಿಮೆಂಟರಿ ಪ್ರಜಾಪ್ರಭುತ್ವದ ಮೇಲೆ ಎಡೆ ಬಿಡದೆ ನಡೆಸುತ್ತಿರುವ ವ್ಯವಸ್ಥಿತ ದಾಳಿಗಳು, ವಿಮರ್ಶೆಯನ್ನು ಸಹಿಸದ ಅಸಹನೆ ಮತ್ತು ಸರ್ವಾಧಿಕಾರಿ ಧೋರಣೆಗಳು ಕೊಡುವ ಸಂಕೇತಗಳು ಒಂದು ಫ್ಯಾಸಿಸ್ಟ್ ಮಾದರಿಯ ಬೆಳವಣಿಗೆಯನ್ನು ಸೂಚಿಸುತ್ತವೆ. ಫ್ಯಾಸಿಸಂ ಅಂದರೆ, ಏಕಸ್ವಾಮ್ಯ ಕಂಪೆನಿಗಳು ಮತ್ತು ಹಣಕಾಸು ಬಂಡವಾಳಗಳ ಆಧಿಪತ್ಯದ ನಗ್ನ ಸರ್ವಾಧಿಕಾರವಲ್ಲದೆ ಮತ್ತೇನೂ ಅಲ್ಲ. ತನ್ನ ಆಳ್ವಿಕೆಗೆ ಧಕ್ಕೆಯಾದರೆ ಸರ್ವಾಧಿಕಾರದತ್ತ ವಾಲುವ ಎಲ್ಲ ಸಾಧ್ಯತೆಗಳನ್ನು ಮೋದಿಯವರು ಪ್ರದರ್ಶಿಸಿದ್ದಾರೆ.

ಸರ್ವಾಧಿಕಾರಿ ಧೋರಣೆಗಳು ತಲೆ ಎತ್ತುತ್ತಿರುವ ಹಿನ್ನೆಲೆಯಲ್ಲಿ ಶ್ರಮ ಜೀವಿಗಳು ತಮ್ಮ ಹಿತ ಕಾಪಾಡಿಕೊಳ್ಳಲು ಹಿಂದೆ ನಡೆದ ಘಟನೆಗಳಿಂದ ಪಾಠ ಕಲಿಯುವುದು ಅವಶ್ಯವಾಗಿದೆ. ಸದ್ಯದಲ್ಲಿ ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗದ ಮೇಲೆ ಭೀಕರ ದಾಳಿ ನಡೆಯುತ್ತಿದೆ. ಅವರೆಲ್ಲರೂ ಒಟ್ಟಾಗಿ ನಿಂತು ಭಾರತದ ಪ್ರಜಾಪ್ರಭುತ್ವವನ್ನು ಉಳಿಸಬೇಕು.

Donate Janashakthi Media

Leave a Reply

Your email address will not be published. Required fields are marked *