- ಬಿಜೆಪಿ ನಾಯಕರೇ ಈಗಲಾದರೂ ಸತ್ಯ ಅರ್ಥವಾಯಿತೇ: ಬಿಜೆಪಿಗೆ ಕಿಚಾಯಿಸಿದ ದಿನೇಶ್ ಗುಂಡೂರಾವ್
ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಶಾಲಾ ಪಠ್ಯ ಪುಸ್ತಕದಿಂದ ತೆಗೆದು ಹಾಕಲು ಬಿಜೆಪಿ ಸರ್ಕಾರ ಮುಂದಾಗಿದೆ. ಈ ನಡುವೆ ಅದೇ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿರುವ ಹಳ್ಳಿ ಹಕ್ಕಿ ಖ್ಯಾತಿಯ ಎಚ್ ವಿಶ್ವನಾಥ್ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಅವರು ಯಾವುದೇ ಪಕ್ಷ, ಜಾತಿ ಧರ್ಮಕ್ಕೆ ಸೇರಿದವರಲ್ಲ ಎಂದಿದ್ದಾರೆ.
ಟಿಪ್ಪುವನ್ನು ಯಾವುದೇ ಪಕ್ಷಕ್ಕೆ ಜಾತಿ ಧರ್ಮಕ್ಕೆ ಸೇರಿಸಿ ಸಣ್ಣವನನ್ನಾಗಿ ಮಾಡಬಾರದು ಎಂದಿರುವ ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಪಠ್ಯ ಪುಸ್ತಕದಿಂದ ಕೈಬಿಟ್ಟಿಲ್ಲ.ಐದನೇ ತರಗತಿಯ ಬದಲಾಗಿ ಏಳನೇ ತರಗತಿಯ ಪಠ್ಯಕ್ಕೆ ಅಳವಡಿಸಲಾಗಿದೆ ಎಂದರು.
ಟಿಪ್ಪು ಸುಲ್ತಾನ್ ಮತಾಂಧ, ಕ್ರೂರಿ ಎಂದು ಬಿಜೆಪಿ ಮುಖಂಡರು ಒಂದು ಕಡೆಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ಈ ನಡುವೆ ಜೆಡಿಎಸ್‍ನಿಂದ ವಲಸೆ ಬಂದ ಎಚ್ ವಿಶ್ವನಾಥ್ ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ ಎಂದು ಹಾಡಿ ಹೊಗಳಿದ್ದಾರೆ.
ವಿಶ್ವನಾಥ್ ಅವರ ಈ ಹೇಳಿಕೆ ಪಕ್ಷದ ವಲಯದಲ್ಲಿ ಸಹಜವಾಗಿಯೇ ಮುಜುಗರ ಉಂಟು ಮಾಡಿದೆ. ಅಷ್ಟೇ ಅಲ್ಲ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸತ್ಯ ಅರ್ಥವಾಯಿತೇ?:
ಇದೇ ವಿಚಾರಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ ಕುರಿತ ಪಠ್ಯವನ್ನು ಪಠ್ಯ ಪುಸ್ತಕದಿಂದ ತೆಗೆಯುವ ಕೆಲಸ ಮಾಡುತ್ತಿದೆ. ಆದರೆ ಬಿಜೆಪಿ ಪಕ್ಷದ ನಾಯಕ ಎಚ್.ವಿಶ್ವನಾಥ್ ಟಿಪ್ಪು ಈ ದೇಶ ಹಾಗೂ ಈ ನೆಲದ ಮಣ್ಣಿನ ಮಗ ಎನ್ನುತ್ತಾರೆ. ಬ್ರಿಟೀಷರ ವಿರುದ್ಧ ಹೋರಾಡಿದ ಹೋರಾಟಗಾರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಬಿಜೆಪಿ ನಾಯಕರೇ ಈಗಲಾದರೂ ಸತ್ಯ ಅರ್ಥವಾಯಿತೆ ಎಂದು ಕಿಚಾಯಿಸಿದ್ದಾರೆ.
ಹಳ್ಳಿ ಹಕ್ಕಿ ವಿಶ್ವನಾಥ್ ಸತ್ಯವನ್ನೇ ಹೇಳಿದ್ದಾರೆ. ಟಿಪ್ಪು ಈ ನೆಲದ ಮಣ್ಣಿನ ಮಗ ಎಂದು ಹೇಳುವ ಮೂಲಕ ವಿಶ್ವನಾಥ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಆದರೆ, ಬಿಜೆಪಿಯವರು ಸತ್ಯ ಮರೆಮಾಚುವ ಕೆಲಸವನ್ನು ಮಾಡುತ್ತಿದ್ದಾರೆ. ಟಿಪ್ಪು ಒಬ್ಬ ದೇಶ ಭಕ್ತ , ವೀರ ಸೇನಾನಿ. ಟಿಪ್ಪು ನಿರ್ಮಾಣ ಮಾಡಿರುವ ದೇವಸ್ಥಾನ ಮತ್ತು ಕೋಟೆಗಳನ್ನುಗಳನ್ನು ನಾಶಮಾಡಲು ಆಗುತ್ತಾ? ಬಿಜೆಪಿಯವರು ಇತಿಹಾಸ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವನಾಥ್ ಸತ್ಯವನ್ನು ಹೇಳಿದ್ದಾರೆ ಹಾಗಾಗಿ ನಾನು ವಿಶ್ವನಾಥ್ ಹೇಳಿಕೆಯನ್ನು ಬೆಂಬಲಿಸುವೆ.
* ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಯಾಗದ ವಿಡಂಬನೆ ಪಾಠಕ್ಕೆ ಬ್ರೇಕ್
ಮತ್ತೊಂದೆಡೆ 6ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಯಾಗ ಕುರಿತ ಪಠ್ಯ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ವಿಡಂಬನೆ ಮಾಡುವಂತಿದೆ ಎಂಬ ಟೀಕೆ ವ್ಯಕ್ತವಾದ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ನಿರ್ದಿಷ್ಟ ಪಾಠವನ್ನು ಬೋಧನೆ ಮಾಡದಂತೆ ಆದೇಶಿಸಿದ್ದಾರೆ. ಈ ವಿಷಯ ವನ್ನು ಉಡುಪಿ ಮಠದ ಸಿಬ್ಬಂದಿ ತಿಳಿಸಿದ್ದಾರೆ.
ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಯಾಗದ ಪಠ್ಯ ವಿಚಾರವಾಗಿ ಆಕ್ಷೇಪ ಎತ್ತಿದ್ದರು. ಇದಾದ ಬಳಿಕ ಈ ವರ್ಷ
ಯಾವ ಪಠ್ಯಪುಸ್ತಕ ಪ್ರಕಟವಾಗಿಲ್ಲ. ಮುಂದಿನ ವರ್ಷ ಪುಸ್ತಕ ಪ್ರಕಟವಾಗುವಾಗ ಪಠ್ಯ ತೆಗೆದುಹಾಕಲಾಗುವುದು. ಈಗಾಗಲೇ ಪುಸ್ತಕ ಮುದ್ರಿಸಿ ಮಕ್ಕಳಿಗೆ ತಲುಪಿಸಿರುವುದರಿಂದ ಈಗ ಪಾಠವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಮುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ಸಚಿವರು ಹೇಳಿದ್ದಾರೆ.