ಜಾನುವಾರು ಹತ್ಯಾ ನಿಷೇಧ : ಕಾರ್ಪೋರೇಟ್ ಲೂಟಿಯನ್ನು ವಿಸ್ತರಿಸಿ ವೇಗಗೊಳಿಸುವ ಹುನ್ನಾರ: ಭಾಗ-1

ರಾಜ್ಯದ ಜನತೆ ವ್ಯಾಪಕವಾಗಿ ವಿರೋಧಿಸಿ ಮತ್ತು ಎಲ್ಲಾ  ವಿರೋಧ ಪಕ್ಷಗಳು ವಿರೋಧಿಸಿದ, ಮತ್ತು  ಸಿದ್ಧರಾಮಯ್ಯ ನೇತೃತ್ವದ ಸರಕಾರ ಹಿಂಪಡೆದ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರಾಜ್ಯದ ಜನತೆಯ ಮುಂದೆ ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸದೇ, ಮಂತ್ರಿ ಮಂಡಲದ ಸದಸ್ಯರಿಗೂ ತಿಳಿಸದೇ, ವಿಧಾನ ಸಭೆಯಲ್ಲಿ ಶಾಸಕರು ಚರ್ಚಿಸಲು ಅವಕಾಶ ನೀಡದೇ, ವಿಧಾನ ಪರಿಷತ್ ಕಲಾಪ ನಡೆಸಿ ಪ್ರಜಾಸತ್ತಾತ್ಮಕವಾಗಿ ಅಂಗೀಕರಿಸದೇ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಅಗತ್ಯ ಮತ್ತು ಅವಸರವಾದರೂ ಏನಿತ್ತು? ಈ   ಪ್ರಶ್ನೆಗಳನ್ನು ಹಾಕಿಕೊಂಡು ಈ ದೀರ್ಘ ಲೇಖನ ಸಮಗ್ರವಾಗಿ ಉತ್ತರಿಸುತ್ತದೆ. ಇದನ್ನು ಎರಡು ಭಾಗಗಳಲ್ಲಿ ಪ್ರಕಟಿಸಲಾಗುತ್ತಿದೆ. ಈ ಭಾಗ-1 ಕರ್ನಾಟಕದ ಜಾನುವಾರು ಸಾಕಾಣೆ ಸ್ಥಿತಿಯ ಸ್ಥೂಲ ವಿವರ ನೀಡುತ್ತದೆ. ಮಸೂದೆ ಅದರ ಘೋಷಿತ ಉದ್ದೇಶಗಳಾದ ದೇಶೀ ತಳಿಗಳ ರಕ್ಷಣೆಗೆ ಸಹಕಾರಿಯಾಗಿದೆಯೇ? ಅಥವಾ ದೇಶೀ ತಳಿಗಳ ಮತ್ತು ಉಪಕಸುಬುದಾರರ ಏಳಿಗೆಗೆ ನೆರವು ನೀಡಲಿದೆಯೇ, ಅಥವಾ ಬೇರೇನಾದರು ಉದ್ದೇಶದಿಂದ ತರಲಾಗಿದೆಯೇ ಎಂಬುದನ್ನು ಪರಿಶೀಲಿಸುತ್ತದೆ.

ಈ ಹಿಂದಿನ ಸಿದ್ಧರಾಮಯ್ಯನವರ ನೇತೃತ್ವದ ಸರಕಾರ ಹಿಂಪಡೆದಿದ್ದ ಜಾನುವಾರು ಸಂರಕ್ಷಣೆ ಹಾಗೂ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು, ಪುನಃ ಯಾವುದೇ ಚರ್ಚೆಗೆ ಅವಕಾಶ ನೀಡದೇ, ಮಂತ್ರಿಗಳಿಗೂ ಗೊತ್ತಿಲ್ಲದೇ  ಯಡೆಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ, ಎರಡನೇ ಬಾರಿಗೆ ದೌರ್ಜನ್ಯ ದ ಮೂಲಕ ಡಿಸೆಂಬರ್ ೦7 ರಿಂದ 10, 2020 ರವರೆಗೆ ಮೂರು ದಿನಗಳ ಕಾಲ ನಡೆದ  ವಿಧಾನ ಸಭೆಯಲ್ಲಿ ಜಾನುವಾರು ಸಂರಕ್ಷಣೆ ಮತ್ತು ಜಾನುವಾರು ಹತ್ಯೆ ನಿಷೇಧ ಮಸೂದೆ- 2020 ಆಗಿ ಅಂಗೀಕರಿಸಿದೆ.

ಅದನ್ನು ವಿಧಾನ ಪರಿಷತ್ ಸಭೆಯಲ್ಲಿಯೂ ದೌರ್ಜನ್ಯದಿಂದ ಅಂಗೀಕರಿಸುವ ದುರುದ್ದೇಶದಿಂದಲೇ, ಒಂದು ದಿನದ ವಿಧಾನ ಪರಿಷತ್ ಅಧಿವೇಶನವನ್ನು 15.12.2020 ರಂದು ಕರೆಯಲಾಗಿತ್ತು. ಆದರೇ ವಿಧಾನ ಪರಿಷತ್ ಸಭಾಧ್ಯಕ್ಷರಿಗೆ ಸದನ ಪ್ರವೇಶಿಸದಂತೆ ತಡೆದ ಅದರ ಪ್ರಜಾಪ್ರಭುತ್ವ ವಿರೋಧಿ ಧೋರಣೆಯಿಂದಾಗಿ, ಅದು ವಿಫಲವಾಗಿದೆ. ಈಗ ಈ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಪ್ರಯತ್ನ ಮುಂದುವರೆಸಿದೆ.

ಯಾಕಿಷ್ಟು ಅವಸರ ?

ರಾಜ್ಯದ ಜನತೆ ವ್ಯಾಪಕವಾಗಿ ವಿರೋಧಿಸಿ ಮತ್ತು ಎಲ್ಲಾ  ವಿರೋಧ ಪಕ್ಷಗಳು ವಿರೋಧಿಸಿದ, ಮತ್ತು  ಸಿದ್ಧರಾಮಯ್ಯ ನೇತೃತ್ವದ ಸರಕಾರ ಹಿಂಪಡೆದ, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರಾಜ್ಯದ ಜನತೆಯ ಮುಂದೆ ಅದರ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸದೇ, ಮಂತ್ರಿ ಮಂಡಲದ ಸದಸ್ಯರಿಗೂ ತಿಳಿಸದೇ, ವಿಧಾನ ಸಭೆಯಲ್ಲಿ ಶಾಸಕರು ಚರ್ಚಿಸಲು ಅವಕಾಶ ನೀಡದೇ, ವಿಧಾನ ಪರಿಷತ್ ಕಲಾಪ ನಡೆಸಿ ಪ್ರಜಾಸತ್ತಾತ್ಮಕವಾಗಿ ಅಂಗೀಕರಿಸದೇ, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಅಗತ್ಯ ಮತ್ತು ಅವಸರವಾದರೂ ಏನಿತ್ತು? ಈ ಪ್ರಶ್ನೆ ರಾಜ್ಯದ ಜನತೆಯನ್ನು ಕಾಡುತ್ತಿದೆ.

ಸರಕಾರ ಹೇಳುವುದೇನು?

ಕರ್ನಾಟಕ ಸರಕಾರ, ಕಾಯಿದೆಯ ಉದ್ದೇಶ ಜಾನುವಾರುಗಳ ಸಂತತಿ ನಾಶವನ್ನು ತಡೆಯುವುದು ಮತ್ತು ಅವುಗಳ ಸಂರಕ್ಷಣೆ ಮಾಡುವುದು ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದು ಮುನ್ನಡೆಸುವುದು ಎಂದು ಹೇಳುತ್ತಿದೆ. ಸರಿ, ಅದು ನಿಜವೇ ಆಗಿದ್ದರೇ, ಯಾರು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿದ್ದಾರೋ ಅವರ ಜೊತೆ, ಸರಕಾರ ತನ್ನ ಅಭಿಪ್ರಾಯಗಳನ್ನು  ವಿವರಿಸಿ, ಚರ್ಚಿಸಿ ಅಲ್ಲಿ ಬರುವ ಒಟ್ಟಭಿಪ್ರಾಯದಂತೆ ಕ್ರಮವಹಿಸಬಹುದಿತ್ತಲ್ಲವೇ? ಯಾಕೆಂದರೆ, ಪರಂಪರೆಯಿಂದ ಜಾನುವಾರು ಸಂರಕ್ಷಣೆಯಲ್ಲಿ ತೊಡಗಿರುವುದು ವಾಸ್ತವಿಕವಾಗಿ ಸರಕಾರ ಅಲ್ಲವಲ್ಲಾ? ಸ್ವಲ್ಪ ನೆರವಾಗಿರಬಹುದು, ಬದಲಿಗೆ, ನಿಜವಾದ ಜಾನುವಾರು ಸಂರಕ್ಷಣೆದಾರರು ಅಥವಾ ಸಾಕಾಣೆದಾರರು ಅಂದರೇ, ತಮ್ಮ ಜೀವನೋಪಾಯಗಳಿಗೆ ಅದರಿಂದ ನೆರವು ಕಂಡುಕೊಳ್ಳುವ ಅದನ್ನೊಂದು ಉಪಕಸುಬಾಗಿ ಮುಂದುವರೆಸಿ ಕೊಂಡು ಬಂದಿರುವ ಕೋಟ್ಯಾಂತರ ರೈತರು, ಕೃಷಿಕೂಲಿಕಾರರು, ಕಸುಬುದಾರರು, ಹೈನುಗಾರರು ಆಗಿದ್ದಾರೆ. ಈ ಕೋಟ್ಯಾಂತರ ಕುಟುಂಬಗಳ ಅಭಿಪ್ರಾಯಗಳನ್ನು ಪಡೆಯದೇ ಇದನ್ನು ಇಷ್ಟು ತುರ್ತಾಗಿ  ಜಾರಿಗೊಳಿಸುವ ಅಂತಹ ಜರೂರು ಏನಿತ್ತು? ಈ ಪ್ರಶ್ನೆಗೆ ಸರಕಾರದ ಬಳಿ ಉತ್ತರವಿಲ್ಲ!

ಇದನ್ನು ಓದಿ : ಗೋಹತ್ಯೆ ನಿಷೇದ ಕಾಯ್ದೆ ವಾಪಾಸಾತಿಗೆ ಆಗ್ರಹ

ವಾಸ್ತವಿಕವಾಗಿ, ರಾಜ್ಯ ಸರಕಾರ ಈ ಮಸೂದೆ ಜಾರಿಗೊಳಿಸಲು ತನಗಿರುವ ಜರೂರಿನ ಕುರಿತು ಹೇಳುತ್ತಿರುವ  ಅಭಿಪ್ರಾಯಗಳು ರಾಜ್ಯದ ನಾಗರೀಕರನ್ನು ಮತ್ತು ಜಾನುವಾರು ಸಾಕಾಣಿಕೆದಾರರನ್ನು ಮತ್ತು ಜಾನುವಾರು ಸಂಜಾತ ಉದ್ಯಮದಲ್ಲಿ ಈಗಾಗಲೇ ತೊಡಗಿಕೊಂಡಿರುವ ದಶ ಲಕ್ಷಾಂತರ ಕುಟುಂಬಗಳನ್ನು ದಾರಿ ತಪ್ಪಿಸಿ, ವಂಚಿಸುವ ವಿಚಾರಗಳಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದ್ದರಿಂದ ಈ ಮಸೂದೆಯನ್ನು ಅವಲೋಕಿಸಿ, ಸರಿಯಾಗಿ ಅರ್ಥೈಸುವುದು ಅವಶ್ಯವಿದೆ.

ಜಾನುವಾರು ಸಂಜಾತ ಉದ್ಯಮ

ಸರಕಾರ ತರಲಿರುವ ಮಸೂದೆಯ ಪರಿಣಾಮಗಳನ್ನು ಗಮನಿಸುವ ಮೊದಲು, ಜಾನುವಾರು ಸಂಜಾತ ಉದ್ಯಮದ ಅಗಾಧತೆಯನ್ನು ಮತ್ತು ಜಾನುವಾರು ಸಾಕಾಣಿಕೆಯ ಪರಿಸ್ಥಿತಿಯನ್ನು ಗಮನಿಸುವುದು ಸೂಕ್ತವಾಗಿದೆ.

ಜಾನುವಾರು ಅಂದರೇ, ಹಾಲು ನೀಡುವ ಹಸು, ಎಮ್ಮೆ, ವ್ಯವಸಾಯದಲ್ಲಿ ತೊಡಗಿಸಲು ಬರುವ ಮತ್ತು ತೊಡಗಿಸಲು ಬಾರದ ಹಸುವಿನ ಮತ್ತು ಎಮ್ಮೆಯ ಕರುಗಳು, ಅಂದರೇ, ಹೋರಿ ಹಾಗೂ ಎತ್ತು, ಕೋಣ ಗಳಾಗಿವೆ.

ಸಮಾಜ ಮತ್ತು ದೇಶ ಹಾಗೂ ಜಗತ್ತು ಇವುಗಳ ಸಾಕಾಣಿಕೆಯ ಮೂಲಕ ಮುಖ್ಯವಾಗಿ, ಒಟ್ಟು ಮಾನವನಿಗೆ ಅಗತ್ಯವಾದ ಹೇರಳ ಪ್ರೋಟೀನ್ ಯುಕ್ತ ಹಾಲು ಮತ್ತು ಅದರ ಇತರೆ ಉಪ ಉತ್ಪನ್ನಗಳು ಮತ್ತು ಮಾಂಸಗಳನ್ನು ಪಡೆಯುತ್ತಿದೆ. ಅದೇ ರೀತಿ, ಮಾನವನ ಇತರೇ ಅಗತ್ಯಗಳ ಭಾಗವಾಗಿ ಅವುಗಳ ಚರ್ಮಗಳನ್ನು ಬಳಸುತ್ತಾ ಮುಂದುವರೆಯುತ್ತಿದೆ.

ಹೀಗಾಗಿ, ಹೈನುಗಾರಿಕೆ, ಹೈನೋದ್ಯಮ ಮತ್ತು ಮಾಂಸ, ಮಾಂಸೋದ್ಯಮ ಹಾಗೂ ಚರ್ಮ, ಚರ್ಮೋದ್ಯಮಗಳು, ಅವುಗಳ ಮೂಳೆಗಳು ಅದರ ಉಪಯೋಗಿ ಉದ್ಯಮಗಳು ಬೆಳೆದಿವೆ. ರೈತರು ಸಾವಿರಾರು ವರ್ಷಗಳಿಂದ ಹೋರಿ ಅಥವಾ ಎತ್ತುಗಳನ್ನು ಮತ್ತು ಕೋಣಗಳನ್ನು ಉಳುಮೆಗಾಗಿ, ಸಾರಿಗೆಗಾಗಿ ಬಳಸುತ್ತಾ ಬಂದಿದ್ದಾರೆ.

ಈ ಎಲ್ಲ ಉದ್ಯಮಗಳಿಗೆ ಈ ಉಪಕಸುಬುದಾರರು ಬೆನ್ನೆಲುಬುಗಳಾಗಿದ್ದಾರೆ.

ಕರ್ನಾಟಕದ ಜಾನುವಾರು ಸ್ಥಿತಿ

ಒಂದಲ್ಲಾ ಒಂದು ರೀತಿಯ ಉಪಯುಕ್ತತೆ ಮಾನವನಿಗಿರುವುದರಿಂದ ಇನ್ನು ಮುಂದೆಯೂ ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಮಾನವ ಹೊತ್ತಿದ್ದಾನೆ.

ಹೀಗಾಗಿ, ಅರಣ್ಯಗಳಲ್ಲಿ ಇಂತಹ ವ್ಯಾಪಕ ಉಪಯುಕ್ತತೆ ಪಡೆಯಲಾಗದ ಪ್ರಾಣಿಗಳು ಅಳಿವಿನಂಚಿನಲ್ಲಿವೆ. ಸರಕಾರಗಳು ಜನತೆಯ ಒತ್ತಾಯದ ಮೇರೆಗೆ ಅಳಿವಿನಂಚಿನಲ್ಲಿರುವ ಹುಲಿ, ಸಿಂಹ, ಆನೆ ಮುಂತಾದ ಕಾಡು ಪ್ರಾಣಿಗಳ ಸಂತತಿಯನ್ನು ಉಳಿಸಲು ಹೂಡಿಕೆ ಮಾಡಬೇಕಾಗಿ ಬಂದಿದೆ. ಆದರೇ, ಮಾನವನ ಅಗತ್ಯತೆ ಮತ್ತು ಉಪಯುಕ್ತತೆಯನ್ನು ಪೂರೈಸುವ ಜಾನುವಾರುಗಳು, ಕುರಿ, ಕೋಳಿ, ಹಂದಿ, ಮೀನು ಮುಂತಾದ ಸಾಕು ಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದು ಉಳಿದಿವೆ, ಬೆಳೆದಿವೆ. ಹಿಂದಿನ ದಿನಮಾನಗಳಿಗೆ ಹೋಲಿಸಿದರೇ, ಮಾನವ ಜನಸಂಖ್ಯೆ ಬೆಳೆದ ಹಾಗೇ ಅದರ ಅಗತ್ಯನುಸಾರ ಅವುಗಳ ಸಂತತಿಯನ್ನು ಇಲ್ಲವೇ ಇಳುವರಿಯನ್ನು ಗಣನೀಯವಾಗಿ ಅಭಿವೃದ್ಧಿ ಪಡಿಸಲಾಗಿದೆ ಮತ್ತು ಪಡಿಸಲಾಗುತ್ತದೆ.

ಕರ್ನಾಟಕದ ಜಾನುವಾರು ಗಣತಿ ಅಂಕೆ ಸಂಖ್ಯೆಗಳು ಇದನ್ನು ಪುಷ್ಠೀಕರಿಸುತ್ತವೆ.

2007 ರ ಗಣತಿಯಂತೆ ಮಿಶ್ರತಳಿ ಹಸುಗಳ ಸಂಖ್ಯೆಯು 21.93  ಲಕ್ಷ ಆಗಿದ್ದರೇ 2012 ರ ಗಣತಿಯಂತೆ ಅವು 29.13  ಲಕ್ಷ ಆಗಿ ಹೆಚ್ಚಳ ಗೊಂಡಿದೆ. ಅದೇ ಸಂದರ್ಭದಲ್ಲಿ 2007 ರಲ್ಲಿ ದೇಶೀಯ ಅಥವಾ ಜವಾರಿ ತಳಿ ಹಸುಗಳ ಸಂಖ್ಯೆ 83.14 ಲಕ್ಷ ಆಗಿದ್ದದ್ದು ಅವು 2012 ರಲ್ಲಿ 66,01 ಲಕ್ಷಕ್ಕೆ ಕುಸಿದಿದೆ.

2007 ರಲ್ಲಿ ಒಟ್ಟು ಹಸುಗಳು 1.05 ಕೋಟಿ ಇದ್ದು 2017 ರಲ್ಲಿ ಅವು 84.69 ಲಕ್ಷ ಕ್ಕೆ ಕುಸಿದಿವೆ. ಅಂದರೇ, ಒಟ್ಟು 21 ಲಕ್ಷದಷ್ಟು ಕಡಿಮೆಯಾಗಿವೆ. ಕಡಿಮೆಯಾದ ಬಹುತೇಕ ಹಸುಗಳು ಬಹುತೇಕ ದೇಶೀಯ ತಳಿಗಳಾಗಿವೆ. ದೇಶೀಯ ಅಥವಾ ಜವಾರಿ ಹಸುಗಳ ಸಂಖ್ಯೆಯು 2007 ಕ್ಕೆ ಹೋಲಿಸಿದಲ್ಲಿ 2012 ರಲ್ಲಿ ಸುಮಾರು 13 ಲಕ್ಷದಷ್ಟು ಕಡಿಮೆಯಾಗಿವೆ. 2017 ರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣೆಯಾಗಿವೆ. 2007 ರಲ್ಲಿ 43.29 ಲಕ್ಷ ಇದ್ದ ಎಮ್ಮೆಗಳು 2017 ರಲ್ಲಿ 29.84 ಲಕ್ಷಕ್ಕೆ ಕುಸಿದಿವೆ.

ಆದಾಗಲೂ ಹಾಲು ಉತ್ಪಾದನೆಯು ಕಡಿಮೆಯಾಗಿಲ್ಲ.

ಅದೇ ಸಂದರ್ಭದಲ್ಲಿ, ಒಟ್ಟು ದನದ ಮಾಂಸದ ಉತ್ಪಾದನೆಯು 2007 ರಲ್ಲಿ 2.54 ಕೋಟಿ ಕೇಜಿಗಳಾಗಿದ್ದರೇ, 2019 ರಲ್ಲಿ 2.70 ಕೋಟಿ ಕೇಜಿಗಳಾಗಿ ಹೆಚ್ಚಿನ ಗುರಿ ಹೊಂದಿದೆ. ದನದ ಮಾಂಸದ ಉತ್ಪಾದನೆ ಗಣನೀಯವಾಗಿ ಏರದಿರಲು ದೇಶೀ ತಳಿಗಳ ಹಸುಗಳ ಮತ್ತು ಎಮ್ಮೆಗಳ ಸಂಖ್ಯೆ ಕುಸಿತಗೊಂಡಿರುವುದು ಮತ್ತು ವಿದೇಶೀ ಮಾಂಸದ ಆಮದು ಕಾರಣವಾಗಿದೆ.

ಅದ್ದರಿಂದ, ಅವುಗಳ ಸಂತತಿ ಸಂರಕ್ಷಣೆಯ ಕುರಿತು ಸರಕಾರಗಳು ಹೆಚ್ಚಿನ ಆತಂಕಕ್ಕೊಳಗಾಗುವ ಅವಶ್ಯಕತೆಗಳೇ ಇಲ್ಲವಾಗಿವೆ.

ಜಾನುವಾರು ಸಾಕಾಣೆ :  ಉಪಕಸಬು V/S ಪ್ರಧಾನ ಕಸುಬು

ಪರಿಸ್ಥಿತಿ ಹೀಗಿರುವಾಗ, ಜನತೆಗಿಲ್ಲದ, ಸರಕಾರದ ಆಳದಲ್ಲಿರುವ ಆತಂಕವಾದರೂ ಏನು? ಎಂಬ ಪ್ರಶ್ನೆ ಮರಳಿ ಸಹಜವಾಗಿಯೇ ನಮ್ಮನ್ನು ಕಾಡುತ್ತದೆ. ನಿಜಾ! ಮಾನವ ಸಮಾಜ ಅಭಿವೃದ್ಧಿ ಹೊಂದಿದ  ಹಾಗೇ ಅವುಗಳ ಉಪಯುಕ್ತತೆಯಲ್ಲಿ ಬದಲಾವಣೆಗಳಾಗಿವೆ.  ಆಧುನಿಕ ತಂತ್ರಜ್ಞಾನ ಮತ್ತು ಟ್ರಾಕ್ಟರ್ ಗಳ ಬಳಕೆ ಹೆಚ್ಚುತ್ತಿದ್ದ ಹಾಗೆ ವ್ಯವಸಾಯದಲ್ಲಿ ಕೋಣ ಹಾಗೂ ಎತ್ತುಗಳ ಬಳಕೆ ಗಣನೀಯವಾಗಿ ಕಡಿತಗೊಂಡಿದೆ, ಕಡಿತಗೊಳ್ಳುತ್ತದೆ. ಹೈನುಗಾರಿಕೆಯಲ್ಲಿ ಜವಾರಿ ತಳಿ ಹಸುಗಳ ಬದಲು ಸೀಮೆ ಹಸುಗಳು ಮತ್ತು ಜವಾರಿ ಎಮ್ಮೆಗಳ ಬದಲು ಮುರ್ಯಾ ತಳಿ ಎಮ್ಮೆಗಳು ಜವಾರಿ ತಳಿಗಳ ಸ್ಥಾನಗಳನ್ನು ಆಕ್ರಮಿಸಿವೆ.  ಈ ಹೊಸ ತಳಿಗಳ ಗಂಡು ಕರುಗಳು ವ್ಯವಸಾಯದಲ್ಲಿ ನಿರುಪಯುಕ್ತವಾಗಿವೆ. ಆದರೇ, ಅವುಗಳ ಇತರೇ ಉಪಯುಕ್ತತೆಗಳು ಹಾಗೆಯೇ ಉಳಿದಿವೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತರುತ್ತಿರುವ ರೈತರ, ಕೃಷಿಕೂಲಿಕಾರರ, ಕಸುಬುದಾರರ, ಹೈನುಗಾರರ ವಿರೋಧಿ ಮತ್ಹು ಕೃಷಿ ವಿರೋಧಿ ನೀತಿಗಳಿಂದ ಹಾಗೂ ವ್ಯಾಪಕವಾದ ಅಗತ್ಯ ವಸ್ತುಗಳ ಬೆಲೆ ಏರಿಕೆ ನೀತಿಗಳಿಂದ ಜಾನುವಾರು ಸಾಕಾಣಿಕೆ ಅವರಿಗೆ ಭಾರವೆನಿಸುತ್ತದೆ.

ಕರ್ನಾಟಕ ಪ್ರಾಂತ ರೈತ ಸಂಘದ ಕೋಲಾರ ಜಿಲ್ಲಾ ಸಮಿತಿಯು ಕೋಲಾರ ಜಿಲ್ಲೆಯ ಹೈನುಗಾರಿಕೆಯಲ್ಲಿ ತಲಾ ಲೀಟರ್ ಹಾಲು ಉತ್ಪಾದನೆಯ ವೆಚ್ಚವನ್ನು 2015-16 ರಲ್ಲಿ ಲೆಕ್ಕ ಹಾಕಿದೆ. ಅದರಂತೆ ತಲಾ ಲೀಟರ್ ಗೆ ಆ ದಿನಗಳಲ್ಲಿ  ಉತ್ಪಾದನಾ ವೆಚ್ಚ ಕನಿಷ್ಠ 30.50 ರೂ ಎಂದು ಗುರುತಿಸಿದೆ. ಆದರೇ ಆ ದಿನಗಳಲ್ಲಿ ಉತ್ಪಾದಕರು ತಲಾ ಲೀಟರ್  ಮಾರಾಟ ಮಾಡುತ್ತಿದ್ದುದು ಕೇವಲ 21.50 ಪೈಗೆ ಮಾತ್ರ. ಅಂದರೇ, ಪ್ರತಿ ಲೀಟರ್ ಗೆ ಕನಿಷ್ಠ 9 ರೂಗಳ ನಷ್ಟವನ್ನು ಹೊಂದುತ್ತಿದ್ದರು.

ಇದರಿಂದಾಗಿ, ಹೈನುಗಾರರ ಪ್ರತಿಭಟನೆಗಳಿಗೆ ಮಣಿದ ರಾಜ್ಯ ಸರಕಾರ ಆ ದಿನಗಳಲ್ಲಿ ಅವರ ನಷ್ಟವನ್ನು ಕಡಿಮೆ ಮಾಡಲು ತಲಾ ಲೀಟರ್ ಗೆ 4 ರೂ ಗಳನ್ನು ಸಹಾಯಧನವಾಗಿ ನೀಡುತ್ತಿತ್ತು. ಆದಾಗಲೂ ಅವರು ತಲಾ ಲೀಟರುಗಳಿಗೆ 5 ರೂಗಳ ನಷ್ಟವನ್ನೇ ಅನುಭವಿಸುತ್ತಿದ್ದರು.

ಇಂತಹುದೇ ಕಾರಣಗಳಿಂದಾಗಿ, ವ್ಯವಸಾಯಕ್ಕೆ ಬಾರದ ಜಾನುವಾರುಗಳನ್ನು ತಮ್ಮ ಬದುಕು ನಿರ್ವಹಿಸಲು, ಇತರೇ ಉದ್ಯಮಗಳಿಗಾಗಿ ಮಾರಾಟ ಮಾಡುತ್ತಿದ್ದಾರೆ. ಆದಾಗಲೂ, ಸರಕಾರಗಳ ಜನ ವಿರೋಧಿ ನೀತಿಗಳಿಂದ ಜಾನುವಾರು ಸಾಕಾಣಿಕೆಯೇ ಹೊರೆ ಎನಿಸಿ, ವ್ಯಾಪಕ ನಷ್ಟ ಉಂಟಾಗುತ್ತಿದ್ದಲ್ಲಿ ಅವರು ಪರಂಪರೆಯಿಂದ ನೆರವು ಪಡೆಯುತ್ತಿದ್ದ ಆ ಉಪಕಸುಬನ್ನು ತೊರೆಯುತ್ತಿದ್ದಾರೆ ಅಷ್ಟೇ! ರಾಜ್ಯದಲ್ಲಿ ಖಂಡಿತಾ, ಜಾನುವಾರು ಸಾಕಣೆ ಪ್ರಧಾನ ಕಸುಬಾಗದೇ, ಉಪ ಕಸುಬಾಗಿ ಅವನತಿಯೆಡೆಗೆ ದೂಡಲ್ಪಡುತ್ತಿದೆ.

ಅದೇ ಸಂದರ್ಭದಲ್ಲಿ ಜಾನುವಾರುಗಳ ಉಪಯುಕ್ತತೆಯಲ್ಲೇನು ಈಗಲೂ ಕೊರೆತೆಯಾಗಿಲ್ಲ.  ಹೀಗಾಗಿ,  ಒಂದೆರಡು ದನಗಳನ್ನು ಸಾಕಣೆ ಮಾಡುವ ಉಪಕಸುಬಾಗಿದ್ದ ಜಾನುವಾರು ಸಾಕಾಣೆಯು, ನೂರಾರು ದನಗಳನ್ನು ಸಾಕಾಣೆ ಮಾಡುವ ಹೆಚ್ಚು ಬಂಡವಾಳ ಹೂಡುವ  ಪ್ರಧಾನ ಕಸುಬಾಗಿ ಬದಲಾಗುತ್ತಿದೆ. ಹೀಗೆ, ಅದು ಬಡವರು ಹಾಗೂ ರೈತರ ಕೈನಿಂದ ಬಂಡವಾಳ ತೊಡಗಿಸುವವರ ಕೈಗೆ ಬದಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಹೆಚ್ಚು ಇಳುವರಿ ನೀಡಲಾಗದ ದೇಶೀಯ ಅಥವಾ ಜವಾರಿ ಹಸು ಮತ್ತು ಎಮ್ಮೆ ನಿಧಾನವಾಗಿ ನೇಪತ್ಯಕ್ಕೆ ಸರಿಯುತ್ತಿವೆ. ಆದರೇ, ಇತರೇ ತಳಿಗಳ ಜಾನುವಾರುಗಳು ಅವುಗಳ ಸ್ಥಾನಗಳನ್ನು ಅಕ್ರಮಿಸಿವೆಯಷ್ಟೇ.

ಕೇಂದ್ರ ಸರಕಾರವು ಕಾರ್ಪೋರೇಟ್ ಕಂಪನಿಗಳಿಗೆ ಜಾನುವಾರು ಸಾಕಾಣೆ  ಮಾಡಲು ಅನುಮತಿ ನೀಡುವ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಇನ್ನು ಮುಂದೆ, ಭಾರೀ ಬಂಡವಾಳದ ಹೂಡಿಕೆಯಿಂದಾಗಿ ಇದೇ ಪ್ರಕ್ರಿಯೆ ಇನ್ನಷ್ಟು ವ್ಯಾಪಕವಾಗಿ ಘಟಿಸಲಿದೆ. ಯಾಕೆಂದರೇ, ಕಾರ್ಪೋರೇಟ್ ಕಂಪನಿಗಳು ಕೆಲವು ನೂರು ಸಂಖ್ಯೆಯಲ್ಲಲ್ಲಾ ಬದಲಿಗೆ, ಹಲವು ಸಾವಿರ ಸಂಖ್ಯೆಯಲ್ಲಿ ಅಧಿಕ ಇಳುವರಿ ನೀಡುವ ತಳಿ ಹಸು ಹಾಗೂ ಎಮ್ಮೆಗಳನ್ನು ತಮ್ಮ ಭಾರೀ ಪ್ರಮಾಣದ ಡೈರಿಗಳಲ್ಲಿ ಅತ್ಯಂತ ಆಧುನಿಕ ತಂತ್ರಜ್ಞಾನ ಬಳಸಿ ಸಾವಿರಾರು ಕೋಟಿ ಬಂಡವಾಳ ಹೂಡಿ ಹೈನುಗಾರಿಕೆ ಮತ್ತು ಮಾಂಸ ಮತ್ತಿತರೇ ಸಂಬಂದಿ ಉದ್ಯಮಗಳಲ್ಲಿ ತೊಡಗಲಿವೆ. ಇದರಿಂದ, ದೇಶೀಯ ತಳಿಗಳ ಹಸುಗಳು/ ಎಮ್ಮೆಗಳು ಇಲ್ಲವಾಗಿ ಅಳಿವಿನಂಚಿಗೆ ಸಾಗಲಿವೆ. ಈ ಕಾರ್ಪೋರೇಟ್ ಕಂಪನಿಗಳು ಹೈನುಗಾರಿಕೆ ಮತ್ತಿತರೇ ಉದ್ಯಮದಲ್ಲಿ ಒಡ್ಡುವ ಭಾರಿ ಸ್ಪರ್ಧೆಯಿಂದಾಗಿ, ಉಪಕಸುಬಾಗಿ ಅದರ ಸಾಕಾಣಿಕೆಯಲ್ಲಿ ತೊಡಗಿರುವ ಬಡವರು, ಅವರ ಹೈನುಗಾರಿಕೆ ಮತ್ತಿತರೇ ಉತ್ಪಾದನೆಗಳಿಂದ ಹೊರ ಹಾಕಲ್ಪಡಲಿದ್ದಾರೆ.

ಮಸೂದೆಯಲ್ಲೇನಿದೆ ?

ಉಪಕಸುಬಾಗಿ ಮುಂದುವರೆಯುತ್ತಿರುವ ಮತ್ತು ಅದು ಎದುರಿಸುತ್ತಿರುವ ಜಾನುವಾರು ಸಾಕಾಣೆಯ ದುಸ್ಥಿತಿಯ ಮತ್ತು ಅದರಿಂದಾಗಿ ದೇಶಿ ತಳಿಯ ಹಸುಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಸರಕಾರ ಈ ಜಾನುವಾರು ಹತ್ಯೆ ನಿಷೇಧ ಮಸೂದೆ- 2020 ತಂದಿದೆ. ಇದು, ಉಪಕಸುಬನ್ನು ಮುಂದುವರೆಸಲು ಸಹಕಾರಿಯಾಗಲಿದೆಯೇ? ಮತ್ತು ದೇಶೀ ತಳಿಗಳ ರಕ್ಷಣೆಗೆ ಸಹಕಾರಿಯಾಗಿದೆಯೇ? ಅಥವಾ ದೇಶೀ ತಳಿಗಳ ಮತ್ತು ಉಪಕಸುಬುದಾರರ ಏಳಿಗೆಗೆ ನೆರವು ನೀಡಲಿದೆಯೇ, ಅಥವಾ ಬೇರೇನಾದರು ಕ್ರಮ ವಹಿಸಲು ತರಲಾಗಿದೆಯೇ ಎಂಬುದನ್ನು ಗಮನಿಸ ಬೇಕಾಗಿದೆ.

ಮಸೂದೆಯು, ಬಹುತೇಕ ಜಾನುವಾರುಗಳ ಹತ್ಯೆಯೇ ಜಾನುವಾರು ಸಂತತಿಯ ನಾಶಕ್ಕೆ ಕಾರಣವಾಗಿದೆಯೆಂದು ಪರಿಭಾವಿಸುತ್ತದೆ ಮತ್ತು ಅದು ಹತ್ಯೆಯನ್ನು ಜಾನುವಾರುಗಳ ವಯೋ ಮಾನದ 13 ವರ್ಷಗಳ ಕಾಲದ ವರೆಗೆ ಮಾಡದಂತೆ ನಿಬಂಧಿಸುತ್ತದೆ. ಬಹುಶಃ ಮಿಶ್ರ ತಳಿಗಳ ಹಸುಗಳು ಸಾಮಾನ್ಯವಾಗಿ ಅವುಗಳ 13 ವರ್ಷಗಳ ವರೆಗೆ ಹೈನುಗಾರಿಕೆಗೆ ಉಪಯಕ್ತವಾಗಿವೆ. ನಂತರ ಅವು ಬರಡಾಗುವುದರಿಂದ ಹೈನುಗಾರಿಕೆಗೆ ನಿರುಪಯುಕ್ತವಾಗುತ್ತವೆ. ಅ ನಂತರ ಅಂದರೇ, ಹಸುವಿನ 13 ವರ್ಷಗಳ ನಂತರ ಪರವಾನಗಿಯೊಂದಿಗೆ ಮಾರಾಟ ಮಾಡಬಹುದಾಗಿದೆ. ಇದರಿಂದ ಜಾನುವಾರು ರಕ್ಷಣೆಯಾಗುತ್ತದೆಯೆಂದು ಮಸೂದೆ ಅಭಿಪ್ರಾಯ ಪಡುತ್ತದೆ.

ನಿಜಾ! ಯಾವುದೇ ಹೈನುಗಾರನು ತನ್ನ ಹಸುವನ್ನು ಅದು ಹಾಲು ಕರೆಯುವ ಅವಧಿ ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗುವವರೆಗೆ ಅದರ ಹತ್ಮೆಗಾಗಿ ಮಾರಾಟ ಮಾಡಲು ಬಯಸುವುದಿಲ್ಲಾ! ಆದರೇ ಅದು 13 ವರ್ಷ ಪೂರೈಕೆಗೆ ಮುಂಚೆಯೇ ಕಾರಣಾಂತರಗಳಿಂದ ಹಾಲು ಕೊಡುವುದನ್ನು ನಿಲ್ಲಿಸಿಬಿಟ್ಟರೇ, ಅಥವಾ ವ್ಯಾಪಕವಾಗಿ ನಷ್ಟವಾಗುವ ರೀತಿಯಲ್ಲಿ ಹಾಲಿನ ಇಳುವರಿ ಕಡಿಮೆಯಾದ ಸಂದರ್ಭಗಳು ಬಂದು ಬಿಟ್ಟರೇ, ಅಂತಹ ಹಸು ಅಥವಾ ಯಾವುದೇ ಜಾನುವಾರುಗಳನ್ನು ಇತರರಿಗೆ ಹಸು, ಎಮ್ಮೆಗಳಾದರೇ ಹೈನುಗಾರಿಕೆಗೊ ಅಥವಾ ನಿರುಪಯುಕ್ತ ದನಗಳಾದರೇ ಮಾಂಸಕ್ಕಾಗಿ ಮಾರಾಟ ಮಾಡುವುದಿದೆ. ಈ ಮಸೂದೆ ಇದನ್ನು ನಿಬಂಧಿಸುತ್ತದೆ.

ಅದೇ ರೀತಿ , ಮಿಶ್ರ ತಳಿಯ ಗಂಡುಕರುಗಳು, ಕೋಣ ಕರು, ಬೆದರಿಸುವ ಎತ್ತು ಅಥವಾ ನಿರುಪಯೋಗಿಯಾದ ಎತ್ತುಗಳನ್ನು ಕೂಡಾ ಮಸೂದೆಯಂತೆ ಸಾಕಾಣೆದಾರರು, ಈ ಉಪಕಸುಬುದಾರರು 13 ವರ್ಷಗಳ ಕಾಲ ಸಾಕಲೇ ಬೇಕಾಗುತ್ತದೆ. ಇಲ್ಲವೇ ಯಾವುದಾದರೂ ದೇವರ ಹೆಸರೇಳಿ, ಬೀದಿ ಬಸವಗಳಾಗಿ ಇಲ್ಲವೇ ಅಮ್ಮನ ಕೋಣಗಳಾಗಿ ಬಿಡಬೇಕಾಗುತ್ತದೆ. ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡುವುದು ಅಪರಾಧವಾಗುತ್ತದೆ. ಯಾಕೆಂದರೇ ಅಂತಹ ನಿರುಪಯುಕ್ತ ದನಗಳನ್ನು ಯಾರೂ ಸಾಕಾಣೆಗಾಗಿ ಖರೀದಿಸುವುದಿಲ್ಲ. ಯಾರಾದರೂ ಖರೀದಿಸುವವರಿದ್ದರೇ ಅಂತಹವುಗಳನ್ನು ಮಾಂಸದ ಕಾರಣಕ್ಕಾಗಿಯೇ ಖರೀದಿಸಲಾಗತ್ತದೆ. ಹಾಗೆ ಅವುಗಳಿಂದ ಮಾಂಸ ಪಡೆಯಲು ವಧೆ/ ಹತ್ಯೆ ಮಾಡಲೇ ಬೇಕಾಗುತ್ತದೆ. ಆದರೆ ಮಸೂದೆಯು, ಜಾನುವಾರುಗಳ ವಿಚಾರದಲ್ಲಿ ಯಾವುದೇ ಕಾನೂನು ಅಥವಾ ಸಂಪ್ರದಾಯ ಏನೇ ಹೇಳಿರಲಿ, ಯಾವುದೇ ರೀತಿಯಲ್ಲಿ ಹತ್ಯೆ / ವಧೆ ಮಾಡುವುದು ಅಪರಾಧವೆಂದೆ ಒತ್ತಿ ಹೇಳುತ್ತದೆ. ಆ ಮೂಲಕ ಊರಮ್ಮ ಅಥವಾ ಗ್ರಾಮ ದೇವತೆಗಳ ಜಾತ್ರೆ ಅಥವಾ ಉತ್ಸವಗಳ ಸಂದರ್ಭದಲ್ಲು ಜಾನುವಾರುಗಳನ್ನು ಯಾವುದೇ ಸ್ವರೂಪದಲ್ಲಿ ಬಲಿ/ ವಧೆ ಮಾಡುವುದನ್ನು ಅಪ್ರತ್ಯಕ್ಷವಾಗಿ ನಿಷೇಧಿಸಿದೆ.

ಹಾಗೊಂದು ವೇಳೆ 13 ವರ್ಷ ವರ್ಷದೊಳಗಿನ ಯಾವುದೇ ಜಾನುವಾರುಗಳನ್ನು ಹತ್ಯೆ ಮಾಡಿದರೇ ಅಥವಾ ಹತ್ಯೆ ಮಾಡುವ ಉದ್ದೇಶಕ್ಕೆ ಮಾರಾಟ ಮಾಡಿದರೇ ಅದನ್ನು ಶಿಕ್ಷಾರ್ಹ ಅಪರಾಧವೆಂದು ಮಸೂದೆಯು ಘೋಷಿಸುತ್ತದೆ. ಈ ಇಬ್ಬರನ್ನೂ ದಂಡಿಸಲು ಅದು ಹೇಳುತ್ತದೆ. ಇಂತಹ ಅಪರಾಧಕ್ಕೆ ಅದು ಮೊದಲ ಬಾರಿಯದಾಗಿದ್ದರೇ, ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಇಲ್ಲವೇ 50 ಸಾವಿರದಿಂದ 5 ಲಕ್ಷ ರೂಗಳ ವರೆಗಿನ ದಂಡವನ್ನು ಇಲ್ಲವೇ ಎರಡನ್ನು ವಿಧಿಸಲು ನಿರ್ದೇಶಿಸುತ್ತದೆ.

ಎರಡನೆ ಬಾರಿಯೂ ಅಂತಹ ಅಪರಾಧ ಮಾಡಿದರೇ, 7 ವರ್ಷದ ಜೈಲು ಶಿಕ್ಷೆಯನ್ನು ಮತ್ತು ದಂಡವನ್ನು ದ್ವಿಗುಣಗೊಳಿಸುತ್ತದೆ.

ಅದು ಮಾತ್ರವೇ ಅಲ್ಲಾ, ಜಾನುವಾರು ಸಂರಕ್ಷಣೆಯ ಹೆಸರಿನಲ್ಲಿ ದಾಳಿ ಮಾಡುವ ಮತಾಂಧ ಕ್ರಿಮಿನಲ್ ಗಳ ಮೇಲೆ ಯಾವುದೇ ಕ್ರಮ ವಹಿಸಬಾರದೆಂದು ಅವರ ಕೆಲಸವನ್ನು ಸಮರ್ಥಿಸುತ್ತದೆ. ಈ ಮಸೂದೆಯು, ಈ ತೀವ್ರ ಸ್ವರೂಪದ ದಂಡನೆಗಳು ಹಾಗೂ ಗೋ ಸಂರಕ್ಷಕರ ದಾಳಿಗಳನ್ನು ಸಮರ್ಥಿಸುವ ಮೂಲಕ ಜಾನುವಾರುಗಳ ಹತ್ಯೆಯನ್ನು ಕಠಿಣವಾಗಿ ನಿಬಂಧಿಸುತ್ತದೆ.

(ಮುಂದುವರೆಯುತ್ತದೆ)

– ಯು. ಬಸವರಾಜ
ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತ ಸಂಘ

Donate Janashakthi Media

Leave a Reply

Your email address will not be published. Required fields are marked *