( ಸಂಪುಟ 9, ಸಂಚಿಕೆ 1, 4 ಜನವರಿ 2015 )
ಕುಂದಾಪುರದಲ್ಲಿ ನಡೆದ ಸಿಪಿಐ(ಎಂ)5ನೇ ಉಡುಪಿ ಜಿಲ್ಲಾ ಸಮ್ಮೇಳನ ನಿರ್ಣಯ


ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಬ್ಬಿಕೊಂಡಿರುವ ಕೋಮುವಾದಿ ಶಕ್ತಿಗಳು ಒಡ್ಡಿರುವ ಸವಾಲನ್ನು ಎದುರಿಸುವುದರೊಂದಿಗೆ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರ ಹೋರಾಟಗಳನ್ನು ನಡೆಸಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ 5ನೇ ಸಮ್ಮೇಳನವು ಕರೆ ನೀಡಿದೆ.
ಡಿಸೆಂಬರ್ 21ರಿಂದ 23ರ ತನಕ ಕುಂದಾಪುರದ ಹಂಚು ಕಾರ್ಮಿಕ ಭವನದಲ್ಲಿ ಜರುಗಿದ ಸಮ್ಮೇಳನದಲ್ಲಿ ವಿವಿಧ ವಿಭಾಗಗಳಿಂದ 112 ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಅವಧಿಯಲ್ಲಿ ಪಕ್ಷದ ಉಡುಪಿ ಜಿಲ್ಲಾ ಸದಸ್ಯರಾಗಿದ್ದು ನಿಧನರಾಗಿದ್ದ ಕಾಂ. ದೋಗು ಸುವರ್ಣರ ಹೆಸರನ್ನು ವೇದಿಕೆಗೆ ಹಾಗೂ ಕಾಂ. ರಮೇಶ್ ಮೆಂಡನ್ರವರ ಹೆಸರನ್ನು ಸಭಾಂಗಣಕ್ಕೆ ಇಡಲಾಗಿತ್ತು. ಸಮ್ಮೇಳನ ನಡೆಯುವ ಸ್ಥಳಕ್ಕೆ ಕಾಂ.ಆರ್. ಉಮಾನಾಥ ನಗರ ಎಂದು ಹೆಸರಿಸಲಾಗಿತ್ತು. ಸಮ್ಮೇಳನವನ್ನು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಆರ್. ಶ್ರೀಯಾನ್ರವರು ಉದ್ಘಾಟಿಸಿದರು.
ಹಿರಿಯ ಚೇತನಗಳಿಗೆ ಗೌರವ ಅರ್ಪಣೆ :
ಪ್ರತಿನಿಧಿ ಸಮ್ಮೇಳನದ ಆರಂಭದಲ್ಲಿ ಸಿಪಿಐ(ಎಂ) ಹಿರಿಯ ಮುಖಂಡ ಪಿ. ವಿಶ್ವನಾಥರೈ ಪಕ್ಷದ ಧ್ವಜಾರೋಹಣ ನೆರವೇರಿಸಿ ಉಧ್ವಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ, ವಿಶೇಷವಾಗಿ ಕುಂದಾಪುರ, ಉಡುಪಿ ಪ್ರದೇಶಗಳಲ್ಲಿ ಕಮ್ಯೂನಿಸ್ಟ್ ಚಳುವಳಿ ಕಟ್ಟಲು ದುಡಿದ ಹಿರಿಯ ಮುಖಂಡರಾದ ಅಬ್ರಹಾಂ ಕರ್ಕಡ ಹಾಗೂ ಸಿ.ನಾರಾಯಣ ಅವರನ್ನು ಪಕ್ಷದ ಮತ್ತು ರಿಕ್ಷಾಚಾಲಕರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಹಲವು ಯುವ ಕಾರ್ಯಕರ್ತರು ಅವರ ಹೆಸರನ್ನು, ಹೋರಾಟದ ಕೆಚ್ಚನ್ನು ಕೇಳಿದ್ದರು, ಆದರೆ ನೋಡಿರಲಿಲ್ಲ. ಅವರೆಲ್ಲರೂ ಹರ್ಷೋದ್ಘಾರಗಳಿಂದ ಗೌರವ ಸಲ್ಲಿಸುತ್ತಿರುವುದನ್ನು ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ. ಶಂಕರ್, ಮಹಾಬಲ ವಡೇರ ಹೋಬಳಿ, ಯು. ದಾಸಭಂಡಾರಿ ವೇದಿಕೆಯಲ್ಲಿ ಇದ್ದರು. ಪಿ. ವಿಶ್ವನಾಥರೈ, ಬಾಲಕೃಷ್ಣ ಶೆಟ್ಟಿಯವರನ್ನೊಳಗೊಂಡ ಅಧ್ಯಕ್ಷೀಯ ಮಂಡಳಿಯು ಪ್ರತಿನಿಧಿ ಸಮ್ಮೇಳನದ ಕಲಾಪ ನಡೆಸಿಕೊಟ್ಟಿತು. ಪ್ರಾರಂಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಹೆಚ್. ನರಸಿಂಹರವರು ಶೃದ್ದಾಂಜಲಿ ಠರಾವು ಮಂಡಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ಶಂಕರ ಮಂಡಿಸಿದ ಕರಡು ವರದಿಯ ಮೇಲೆ 17 ಪ್ರತಿನಿಧಿ ಸಂಗಾತಿಗಳು ಚರ್ಚೆಯಲ್ಲಿ ಭಾಗವಹಿಸಿ ಕೆಲವು ತಿದ್ದುಪಡಿಗಳೊಂದಿಗೆ ವರದಿಯನ್ನು ಸರ್ವಾನುಮತದಿಂದ ಸಮ್ಮೇಳನವು ಅಂಗೀಕರಿಸಿತು.
34 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ-ಜಿಲ್ಲೆಯ 39 ಸಾವಿರ ಎಕರೆ ಭೂಮಿಗೆ ನೀರುಣಿಸುವ ವಾರಾಹಿ ನೀರಾವರಿ ಯೋಜನೆಯ ಜಾರಿಗಾಗಿ, ಸಹಕಾರಿ ಕ್ಷೇತ್ರದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಒತ್ತಾಯಿಸಿ ಹೆದ್ದಾರಿ, ಕಾಮಗಾರಿ ತ್ವರಿತಗತಿಯಲ್ಲಿ ಸಂಪೂರ್ಣಗೊಳಿಸಲು, ಕಾರವಾರ, ಬೆಂಗಳೂರು ರೈಲು ವೇಗ ಹೆಚ್ಚಳಕ್ಕಾಗಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಮರ್ಪಕ ಜಾರಿಗೆ, ಮನೆ ನಿವೇಶನ ಹಕ್ಕುಪತ್ರ ಇತ್ಯಾದಿ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಚಳುವಳಿ ರೂಪಿಸಲು ಸಮ್ಮೇಳನದಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಬಹಿರಂಗ ಸಭೆ :
ಕೆಂಪು ಧ್ವಜದೊಂದಿಗೆ ಬ್ಯಾನರ್ ಪೆಕ್ಸ್, ಕಟೌಟ್ ಬಟಿಂಗ್ಸ್ಗಳಿಂದ ಕುಂದಾಪುರ ನಗರ ಕೆಂಪಾಗಿ ರಂಗೇರಿತ್ತು. ಸಮ್ಮೇಳನದ ಕೊನೆಯ ದಿನ ಕುಂದಾಪುರ ನಗರದಲ್ಲಿ ರೈತ ಕೃಷಿ ಕೂಲಿಕಾರರ ಮತ್ತು ಕಾರ್ಮಿಕರ ಆಕರ್ಷಕ ಬ್ಯಾಂಡ್, ವಾದ್ಯ, ತಾಳ ಮೇಳಗಳ ವರ್ಣರಂಜಿತ ಮೆರವಣಿಗೆ ಬೃಹತ್ರ್ಯಾಲಿ ನಡೆದು ನಗರದ ಎಲ್ಲಾ ಜನರ ಗಮನ ಸೆಳೆಯಿತು. ರಸ್ತೆಗಳ ಇಕ್ಕೆಲಗಳಲ್ಲಿ ಕಟ್ಟಡಗಳ ಮಾಳಿಗೆಗಳಲ್ಲಿ ಜನರು ಸಂಭ್ರಮದಿಂದ ಮೆರವಣಿಗೆಯನ್ನು ವೀಕ್ಷಿಸಿದರು. ಕಾಸರಗೋಡಿನ ಬ್ಯಾಂಡ್ ವಾದ್ಯಮೇಳಗಳ ತಾಳಕ್ಕೆ ಹಜ್ಜೆ ಹಾಕುತ್ತಿದ್ದ ನಾನೂರು ಕೆಂಪು ಸಮವಸ್ತ್ರಧಾರಿಗಳ ಮಾರ್ಚ್ ಫಾಸ್ಟ್ ಆಕರ್ಷಣೆಯೊಂದಿಗೆ ಗಂಭೀರತೆ ಮೂಡಿಸಿತು.
ನಾಗರೀಕರು, ಹೈಸ್ಕೂಲು-ಕಾಲೇಜು ವಿದ್ಯಾರ್ಥಿಗಳು, ವಿಶೇಷವಾಗಿ ಮುಸ್ಲೀಮರು ತಮ್ಮ ಮೊಬೈಲುಗಳಿಂದ ಅಭಿಮಾನಪೂರ್ವಕವಾಗಿ ಮೆರವಣಿಗೆಯ ಪೋಟೋಗಳನ್ನು ಕ್ಲಿಕ್ಕಿಸುತ್ತಿರುವ ದೃಶ್ಯ ಕಂಡು ಬಂತು.
ಬಹಿರಂಗ ಅಧಿವೇಶನದ ಅಂಗವಾಗಿ ಸಾರ್ವಜನಿಕ ಸಭೆಯಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಮುಖ್ಯ ಭಾಷಣ ಮಾಡಿದರು. ಸಿಪಿಐ(ಎಂ) ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಗಟ್ಟಿಯಾಗಿದೆ. ನಮ್ಮ ಪಕ್ಷ ಬೇರೆ ರಾಜಕೀಯ ಪಕ್ಷದಂತೆ ನೀತಿ ರೂಪಿಸುವುದಿಲ್ಲ. ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದೆ ನಾವು ಧೋರಣೆ ರೂಪಿಸುತ್ತೇವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಹೇಳುವುದನ್ನೇ ಪ್ರಾಥಮಿಕ ಘಟಕದ ಕಾರ್ಯದರ್ಶಿಗಳು ಸಹ ಹೇಳುತ್ತಾರೆ. ಅಂದರೆ ಒಂದೇ ಧೋರಣೆ, ತಾತ್ವಿಕ ಸಿದ್ದಾಂತ ಇರುತ್ತದೆ. ಬಲಿಷ್ಟ ಆಂತರಿಕ ಪ್ರಜಾಪ್ರಭುತ್ವದ ಆಧಾರದಲ್ಲೆ ರಾಜಕೀಯ ಧೋರಣೆ ಸಂಘಟನಾತ್ಮಕ ಧೋರಣೆ ರೂಪಿಸಲಾಗುತ್ತದೆ ಎಂದು ಶ್ರೀರಾಮರೆಡ್ಡಿ ಹೇಳಿದರು. ಅವರು ಮುಂದುವರಿದು ಮಾತನಾಡುತ್ತಾ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಪಕ್ಷವು ಕಾಂಗ್ರೇಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಒಂದೇ ಗೂಡಿನ ಹಕ್ಕಿಗಳು ಎಂದಿದೆ. 1994ರ ಗ್ಯಾಟ್ ಒಪ್ಪಂದಕ್ಕೆ ಕಾಂಗ್ರೆಸ್ ಪ್ರಧಾನಿ ನರಸಿಂಹರಾವ್ ಅವಧಿಯಲ್ಲಿ ಸಹಿ ಹಾಕಿದರೂ ಅದನ್ನು ಜಾರಿ ಮಾಡಿದ್ದು, ಬಿಜೆಪಿ ನೇತೃತ್ವದ ವಾಜಪೇಯಿ ಸರಕಾರ. ನಂತರ ಮನಮೋಹನ್ ಸಿಂಗ್ ಇದೇ ನೀತಿ ಮುಂದುವರಿಸಿದರು. ಇದೀಗ ನರೇಂದ್ರ ಮೋದಿ ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ನರೇಂದ್ರ ಮೋದಿ ಚುನಾವಣಾ ಸಂದರ್ಭದಲ್ಲಿ 3 ಪ್ರಮುಖ ಪ್ರಶ್ನೆ ಎತ್ತಿದ್ದಾರೆ. 1)ಕಾಂಗ್ರೆಸ್ ಆರ್ಥಿಕವಾಗಿ ದೇಶವನ್ನು ದಿವಾಳಿ ಮಾಡಿದೆದೇಶವನ್ನು ಬಲಿಷ್ಟಗೊಳಿಸಬೇಕು 2) ಮನಮೋಹನ್ ಸಿಂಗ್ ಅಸಮರ್ಥ ಪ್ರಧಾನ ಮಂತ್ರಿ 3) ದೇಶದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ವ್ಯಾಪಕ ಭ್ರಷ್ಟಾಚಾರ ನಡೆದಿದೆ.
ಈಗ ಮೋದಿ ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಒಂದೇ ಒಂದು ಆರ್ಥಿಕ ನೀತಿ ಬದಲಾವಣೆ ಮಾಡಿಲ್ಲ-ಕಾಂಗ್ರೆಸ್ ಬಿಜೆಪಿ ಆರ್ಥಿಕ ನೀತಿ ಒಂದೇ ಆಗಿದೆ. ಮನಮೋಹನ್ ಸಿಂಗ್ 30 ಕಿ. ಮೀಟರ್ ವೇಗದಲ್ಲಿದ್ದರೆ ಮೋದಿ ಇದೀಗ 150 ಕಿಮೀ ವೇಗದಲ್ಲಿ ಹೋಗುತ್ತಿದ್ದಾರೆ. ಅದೇ ರೀತಿಯಲ್ಲಿ ಕೋಮುವಾದಿ ಆಟಗಳು ಹೆಚ್ಚುತ್ತಿವೆ. ಕೋಮುವಾದಿ ಶಕ್ತಿಗಳ ಅಟ್ಟಹಾಸ ಮೇರೆ ಮೀರುತ್ತಿದೆ. ಆದ್ದರಿಂದ ಕೆಲವರನ್ನು ಮಾತ್ರ ಶ್ರೀಮಂತರನ್ನು ಮಾಡುವ ಉದಾರೀಕರಣ ನೀತಿಗಳ ವಿರುದ್ದ ಹಾಗು ಜನರ ಐಕ್ಯತೆಯನ್ನು ಒಡೆಯುವ ಕೋಮುವಾದಿಗಳ ವಿರುದ್ದ ಹೋರಾಡುವ ಸವಾಲನ್ನು ಎದುರಿಸಬೇಕು ಎಂದು ಕರೆ ನೀಡಿದರು. ಉಡುಪಿ ಜಿಲ್ಲಾ ಸಮಿತಿಗೆ ಆಯ್ಕೆಆದ ನೂತನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳನ್ನು ಸಭೆಗೆ ವಿವರಿಸಿದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಶಂಕರ್ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಪುರ ಸಭೆ ಅಧ್ಯಕ್ಷೆ ಕಲಾವತಿ ಯು.ಎಸ್, ಉತ್ತರ ಕನ್ನಡ ಜಿಲ್ಲೆಯ ಪಕ್ಷದ ಮುಖಂಡ ಸುಭಾಶ್ ಕೊಪ್ಪಿಕರ್, ದಕ್ಷಿಣ ಕನ್ನಡ ಜಿಲ್ಲಾ ಪಕ್ಷದ ಮುಖಂಡ ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಮಹಾಬಲ ವಡೇರ್ ಹೋಬಳಿ, ಯು. ದಾಸ ಭಂಡಾರಿ, ಎಚ್. ನರಸಿಂಹ, ಎಚ್. ವಿಠಲ್ ಪೂಜಾರಿ, ಸುರೇಶ ಕಲ್ಲಾಗರ, ರಾಜೀವ ಪಡುಕೋಣೆ, ವೆಂಕಟೇಶ ಕೋಣಿ, ಕಾಪು ಲಕ್ಷ್ಮಣ, ಉಮೇಶ ಕುಂದರ್, ರಾಜೇಶ ವಡೇರ್ ಹೋಬಳಿ ವೇದಿಕೆಯಲ್ಲಿದ್ದರು. ಸಮುದಾಯ ತಂಡದವರು ಕ್ರಾಂತಿಗೀತೆ ಹಾಡಿದರು. ಎಚ್. ನರಸಿಂಹ ವಂದಿಸಿದರು. ಸಮ್ಮೇಳನವು ಜಿಲ್ಲೆಯ ರಾಜಕೀಯ ಸಾಮಾಜಿಕ ಪರಿಸ್ಥಿತಿಯನ್ನು ಸಹ ಚರ್ಚಿಸಿತು.
