ಪ್ರೊ. ಸಿ.ಪಿ.ಚಂದ್ರಶೇಖರ್
ಪಿಎಂಸಿ ಬ್ಯಾಂಕ್ ಪ್ರಕರಣದಿಂದಾಗಿ ಬ್ಯಾಂಕುಗಳ ಕಾರ್ಯವೈಖರಿಯ ಬಗ್ಗೆ ಎದ್ದಿರುವ ದಿಗಿಲನ್ನು ಸರ್ಕಾರವು ಸೂಕ್ತ ಕ್ರಮಗಳ ಮೂಲಕ ದೂರ ಮಾಡಬೇಕು. ಈ ಕೆಲಸವನ್ನು, ರಿಸರ್ವ್ ಬ್ಯಾಂಕ್ ಕೊಟ್ಟಿರುವ ತಪ್ಪು ಅರ್ಥ ಕೊಡುವ ಪದ ಬಳಕೆಯಿಂದ ಕೂಡಿದ ಸ್ಪಷ್ಟೀಕರಣವು ಸಾಧಿಸುತ್ತದೆಯೇ?
ಜನರ ಉಳಿತಾಯಗಳನ್ನು ಮತ್ತು ಠೇವಣಿದಾರರ ಹಿತವನ್ನು ಸದಾ ಕಾಲವೂ ಸರ್ಕಾರದ ವಿವಿಧ ಸಂಸ್ಥೆಗಳು ರಕ್ಷಿಸುತ್ತಿರಬೇಕು ಎನ್ನುವ ಗ್ರಹಿಕೆ ಮತ್ತು ನಿರೀಕ್ಷೆಗಳನ್ನು ಬದಲಾಯಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಂಬಿದಂತಿದೆ. 2017ರಲ್ಲಿ ಇಂತಹ ಚಿಂತನೆಗಳನ್ನು ಮೋದಿ ಸರ್ಕಾರವು ಕಾನೂನು ಬದ್ಧಗೊಳಿಸಲು ಹೊರಟಿತ್ತು. ತೀವ್ರ ವಿರೋಧದಿಂದಾಗಿ ಅದನ್ನು ಹಿಂಪಡೆಯಲಾಯಿತು. ಈಗ ಅದೇ ಮಸೂದೆಗೆ ತನಗಿರುವ ಒರಟು ಬಹುಮತವನ್ನು ಬಳಸಿಕೊಂಡರೆ ಆಶ್ಚರ್ಯವಿಲ್ಲ.
ಅಕ್ಟೋಬರ್ ಒಂದರಂದು ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಅಸಾಧಾರಣ ಮತ್ತು ವಿವೇಚನೆಯಿಲ್ಲದ ಒಂದು ಚುಟುಕು ಹೇಳಿಕೆ ನೀಡಿದೆ: “ಸಹಕಾರಿ ಬ್ಯಾಂಕ್ಗಳೂ ಸೇರಿದಂತೆ ಕೆಲವು ನಿರ್ದಿಷ್ಟ ಬ್ಯಾಂಕ್ಗಳ ಠೇವಣಿದಾರರಲ್ಲಿ ಆತಂಕ ಹುಟ್ಟಿಸುವಂತಹ ವದಂತಿಗಳು ಅಲ್ಲಲ್ಲಿ ಹರಿದಾಡುತ್ತಿವೆ. ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುರಕ್ಷಿತವಾಗಿದೆ ಮತ್ತು ಸುಭದ್ರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಜನರಿಗೆ ಭರವಸೆ ಕೊಡುತ್ತದೆ. ಹಾಗಾಗಿ, ಇಂತಹ ವದಂತಿಗಳ ಆಧಾರದ ಮೇಲೆ ಜನರು ಗಾಬರಿಯಾಗುವ ಅಗತ್ಯವಿಲ್ಲ”.
ರಿಸರ್ವ್ ಬ್ಯಾಂಕ್ನ ಈ ಹೇಳಿಕೆ ವಿವೇಚನೆಯಿಲ್ಲದ್ದು.
ಏಕೆಂದರೆ, ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿ.ಎಂ.ಸಿ.) ಬ್ಯಾಂಕ್ನ ಇತ್ತೀಚಿನ ವಿದ್ಯಮಾನಗಳು, ಅದರಲ್ಲೂ ಮುಖ್ಯವಾಗಿ ತಮ್ಮ ಖಾತೆಯಲ್ಲಿ ಎಷ್ಟೇ ಹಣವಿದ್ದರೂ ಸಹ ಠೇವಣಿದಾರರು ಇಂತಿಷ್ಟು ಮೊತ್ತಕ್ಕಿಂತ ಹೆಚ್ಚು ಹಣವನ್ನು ಆರು ತಿಂಗಳ ಅವಧಿಯಲ್ಲಿ ಬಿಡಿಸಿಕೊಳ್ಳುವಂತಿಲ್ಲ ಎನ್ನುವ ಪರಿಸ್ಥಿತಿಯಲ್ಲಿ, ಉಳಿದ ಇತರೆ ಬ್ಯಾಂಕ್ಗಳ ಠೇವಣಿದಾರರು ತಮಗೂ ಈ ಪರಿಸ್ಥಿತಿ ಬರಬಹುದೆಂಬ ಆತಂಕದಲ್ಲಿ ತಮ್ಮ ಠೇವಣಿ ಹಿಂಪಡೆಯಲು ಬ್ಯಾಂಕ್ಗಳ ಮೇಲೆ ಲಗ್ಗೆ ಹಾಕುವ ಸಾಧ್ಯತೆಯ ಬಗ್ಗೆ ಜನರ ಗಮನವನ್ನು ಅನವಶ್ಯಕವಾಗಿ ಸೆಳೆದಂತಾಗುತ್ತದೆ. ರಿಸರ್ವ್ ಬ್ಯಾಂಕ್ನ ಈ ಸಾರ್ವಜನಿಕ ಹೇಳಿಕೆಯು ತಪ್ಪು ಗ್ರಹಿಕೆಯಿಂದ ಕೂಡಿದೆ. ಏಕೆಂದರೆ, ಆತಂಕಗೊಂಡ ಬ್ಯಾಂಕ್ ಠೇವಣಿದಾರರು ತಮಗೆ ತೋಚಿದ್ದನ್ನು ಮಾಡದಂತೆ ಮನವೊಲಿಸುವಷ್ಟು ವಿಶ್ವಾಸಾರ್ಹತೆಯನ್ನು ರಿಸರ್ವ್ ಬ್ಯಾಂಕ್ ಉಳಿಸಿಕೊಂಡಿದೆ ಎನ್ನುವ ದಾಷ್ಟ್ಯತೆಯನ್ನು ಇದು ತೋರಿಸಿದೆ.
ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಎಲ್ಲ ನೀತಿ ನಿಯಮಾವಳಿಗಳನ್ನು ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಉಲ್ಲಂಘಿಸಿ ಠೇವಣಿದಾರರಿಗೆ ಅಷ್ಟೊಂದು ಅಗಾಧ ಪ್ರಮಾಣದ ವಂಚನೆ ಎಸಗಿದ ಕೃತ್ಯವು ರಿಸರ್ವ್ ಬ್ಯಾಂಕ್ ನ ಮೂಗಿನಡಿಯಲ್ಲೇ ನಡೆದಿತ್ತು. ಠೇವಣಿದಾರರ ಹಿತರಕ್ಷಣೆ ಮಾಡುವ ಉದ್ದೇಶದಿಂದ ಬ್ಯಾಂಕ್ ನಿಯಮಾವಳಿಗಳನ್ನು ರೂಪಿಸಿ ಅವುಗಳ ಪಾಲನೆಯನ್ನು ತನಿಖೆಯ ಮೂಲಕ ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಹೊತ್ತಿರುವ ರಿಸರ್ವ್ ಬ್ಯಾಂಕ್, ಠೇವಣಿದಾರರಿಗೆ ವಂಚನೆಯಾಗದಂತೆ ಕಣ್ಗಾವಲಿಡುವ ಮಾತು ಒತ್ತಟ್ಟಿಗಿರಲಿ, ಒಂದು ಬ್ಯಾಂಕಿನಲ್ಲಿ ಇಂತಹ ಒಂದು ಬೃಹದಾಕಾರದ ಮೋಸ ನಡೆದಾಗ, ಠೇವಣಿದಾರರಿಗೆ ಶೀಘ್ರವಾಗಿ ಪರಿಹಾರ ಒದಗಿಸುವಲ್ಲಿ ಅಸಮರ್ಥವಾಗಿದೆ. ಪಿಎಂಸಿ ಬ್ಯಾಂಕ್ನ ವಂಚನೆಯ ಪ್ರಕರಣ ಬಯಲಿಗೆ ಬಂದ ಆರಂಭದಲ್ಲಿ ಠೇವಣಿದಾರರು ತಮ್ಮ ಖಾತೆಯಲ್ಲಿರುವ ಹಣದಲ್ಲಿ, ಆರು ತಿಂಗಳ ಅವಧಿಯಲ್ಲಿ ಬಿಡಿಸಿಕೊಳ್ಳಬಹುದಾದ ಹಣದ ಮೊತ್ತವನ್ನು ಕೇವಲ ಒಂದು ಸಾವಿರ ರೂಗಳೆಂದು ಆರಂಭದಲ್ಲಿ ನಿಗದಿಪಡಿಸಿತ್ತು.
ತಮ್ಮದೇ ಹಣವನ್ನು ಬಿಡಿಸಿಕೊಳ್ಳಲು ಠೇವಣಿದಾರರ ಮೇಲೆ ಆರು ತಿಂಗಳ ಕಾಲದ ನಿರ್ಬಂಧ ಹೇರಿದ ಕ್ರಮವನ್ನು ರಿಸರ್ವ್ ಬ್ಯಾಂಕ್ ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದರೆ, ಶಾಶ್ವತವಾಗಿ ಒಂದು ಬ್ಯಾಂಕ್ ಮುಚ್ಚಿದರೆ, ಒಬ್ಬ ಠೇವಣಿದಾರನು ಲಕ್ಷಗಟ್ಟಲೆ ಅಥವಾ ಕೋಟಿಗಟ್ಟಲೆ ಠೇವಣಿ ಇಟ್ಟಿದ್ದರೂ ಸಹ, ಅವನಿಗೆ ಠೇವಣಿ ವಿಮೆಯ ಮೂಲಕ ಸಿಗುವ ಗರಿಷ್ಠ ಪರಿಹಾರವು ಕೇವಲ ಒಂದು ಲಕ್ಷ ರೂಗಳು ಮಾತ್ರ ಎಂಬ ಕಾರಣವನ್ನು ಒಡ್ಡುತ್ತದೆ. ಈ ಸಂಬಂಧವಾಗಿ ಒಂದು ಮುಖ್ಯವಾದ ಅಂಶವನ್ನು ಗಮನಿಸಬೇಕಿದೆ. ಅದೇನೆಂದರೆ, 1969ರ ಬ್ಯಾಂಕ್ ರಾಷ್ಟ್ರೀಕರಣದ ಹಿಂದಿನ ಅವಧಿಯಲ್ಲಿ ಅನೇಕ ಖಾಸಗಿ ಬ್ಯಾಂಕುಗಳು ಮುಳುಗಿದವು. ಸಹಸ್ರಾರು ಠೇವಣಿದಾರರು ಹಣ ಕಳೆದುಕೊಂಡರು.
ಅವರಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಡಿಐಸಿಜಿಸಿ ಎನ್ನುವ ಉಪ ಸಂಸ್ಥೆಯನ್ನು 1968ರಲ್ಲಿ ಸ್ಥಾಪಿಸಿತು. ಆರಂಭದಲ್ಲಿ ಈ ಸಂಸ್ಥೆಯು ಒಬ್ಬ ಠೇವಣಿದಾರನಿಗೆ ಬ್ಯಾಂಕ್ ಮುಳುಗಿದ ಸಂದರ್ಭದಲ್ಲಿ ಐದು ಸಾವಿರ ರೂಗಳ ಠೇವಣಿ ವಿಮಾ ಪರಿಹಾರ ಒದಗಿಸುತ್ತಿತ್ತು. ಈ ಪರಿಹಾರದ ಮೊತ್ತವನ್ನು ಕಾಲ ಕ್ರಮದಲ್ಲಿ ಏರಿಸಲಾಗಿದೆ. ಈಗ ಸಿಗುತ್ತಿರುವ ಒಂದು ಲಕ್ಷ ರೂಗಳ ಗರಿಷ್ಠ ಪರಿಹಾರದ ಮಿತಿಯನ್ನು ಇಪ್ಪತ್ತಾರು ವರ್ಷಗಳ ಹಿಂದೆ (1993ರಲ್ಲಿ) ಪರಿಷ್ಕರಿಸಲಾಗಿತ್ತು. ಈ ಮೊತ್ತವನ್ನು ಕನಿಷ್ಠ ಐದು ಪಟ್ಟಾದರೂ ಹೆಚ್ಚಿಸಬೇಕೆಂದು ದಾಮೋದರನ್ ಸಮಿತಿ 2011ರಲ್ಲಿ ಶಿಫಾರಸು ಮಾಡಿತ್ತು. ಆದರೆ, ಈ ಬಗ್ಗೆ ರಿಸರ್ವ್ ಬ್ಯಾಂಕ್ ಮೌನವಾಗಿದೆ. ಠೇವಣಿದಾರರ ಹಿತರಕ್ಷಣೆ ಮಾಡುವಲ್ಲಿ ರಿಸರ್ವ್ ಬ್ಯಾಂಕ್ ಸೋತಿದೆ ಎಂಬುದನ್ನು ಈ ಒಂದು ಅಂಶವೇ ಸಾರುತ್ತದೆ.
ಠೇವಣಿ ವಿಮೆಯ ಗರಿಷ್ಠ ಮೊತ್ತವು ಈಗಿರುವ ದರಿದ್ರ ಮಟ್ಟದಲ್ಲೇ ಉಳಿದಿರಲು ಕಾರಣವೇನು? ಪಿಎಂಸಿ ಬ್ಯಾಂಕ್ ರೀತಿಯಲ್ಲಿ ಬ್ಯಾಂಕುಗಳು ಮುಳುಗಿ ಠೇವಣಿದಾರರ ಹಣವನ್ನು ಹಿಂತಿರುಗಿಸುವ ಪ್ರಸಂಗ ಉದ್ಭವವಾಗಬಹುದು ಎಂದು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಎಣಿಸದಿರಲು ಎರಡು ಕಾರಣಗಳಿವೆ.
ಮೊದಲನೆಯದು, ಯಾವುದೇ ಒಂದು ಬ್ಯಾಂಕ್ ಮುಳುಗುವ ಸಂದರ್ಭ ಎದುರಾದಾಗ ಅದನ್ನು ಮುಳುಗಲು ಬಿಟ್ಟರೆ, ಅದರಿಂದ ಠೇವಣಿದಾರರಿಗೆ ಉಂಟಾಗುವ ಆಕ್ರೋಶವು ರಾಜಕೀಯವಾಗಿ ಅಪಾಯಕಾರಿಯಾಗುತ್ತದೆ. ಆದ್ದರಿಂದ, ಅಂತಹ ಆಪತ್ಕಾಲೀನ ಪರಿಸ್ಥಿತಿಯಲ್ಲಿ ಮುಳುಗಲಿರುವ ಬ್ಯಾಂಕನ್ನು ಇನ್ನೊಂದು ಯಶಸ್ವಿ ಬ್ಯಾಂಕಿನೊಂದಿಗೆ ಬಲವಂತವಾಗಿ ಗಂಟು ಹಾಕುವ ಅಂದಾಜು ಕೇಂದ್ರ ಸರ್ಕಾರಕ್ಕೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ಗೆ ಇತ್ತು. ಆದರೆ, ಬ್ಯಾಂಕ್ ಪ್ರವರ್ತಕರ ಪ್ರತಿರೋಧದಿಂದಾಗಿ ಇಂತಹ ಏರ್ಪಾಟನ್ನು ಕಾರ್ಯ ರೂಪಕ್ಕೆ ತರುವುದು ನಂತರ ಸಾಧ್ಯವಾಗಲಿಲ್ಲ.
ಆದರೆ, ಬ್ಯಾಂಕ್ ರಾಷ್ಟ್ರೀಕರಣದ ನಂತರ ಮುಳುಗುವ ಅಂಚಿನಲ್ಲಿದ್ದ ಒಂದು ಬ್ಯಾಂಕನ್ನು ಇನ್ನೊಂದು ಯಶಸ್ವಿ ಸಾರ್ವಜನಿಕ ಬ್ಯಾಂಕಿನೊಂದಿಗೆ ಗಂಟು ಹಾಕುವ ಕಾರ್ಯವು ಸಾಧ್ಯವಾಗಿತ್ತು. ಉದಾರೀಕರಣೋತ್ತರ ಕಾಲದ ಬ್ಯಾಂಕಿಂಗ್ನ ಒಂದು ಮಾದರಿ ಎನಿಸಿದ್ದ ಖಾಸಗಿ ವಲಯದ ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಮುಳುಗುವ ಪರಿಸ್ಥಿತಿಯಲ್ಲಿದ್ದಾಗ ಅದನ್ನು ಸಾರ್ವಜನಿಕ ವಲಯದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ನೊಂದಿಗೆ ವಿಲೀನಗೊಳಿಸಲಾಯಿತು. ಇಂತಹ ಒಂದು ನಿವಾರಣೋಪಾಯವನ್ನು ತನ್ನ ಕೈಯಲ್ಲಿ ಹೊಂದಿದ್ದ ರಿಸರ್ವ್ ಬ್ಯಾಂಕ್, ಯಾವುದೇ ಒಂದು ರೋಗಗ್ರಸ್ತವಾದ ಬ್ಯಾಂಕನ್ನು ಸುಸ್ಥಿತಿಗೆ ತರಲು ಪ್ರಯತ್ನಿಸುತ್ತಿತ್ತು ಮತ್ತು ಅಂತಹ ಪ್ರಯತ್ನಗಳು ವಿಫಲವಾದಾಗ, ರೋಗಗ್ರಸ್ತವಾದ ಯಾವುದೇ ಬ್ಯಾಂಕನ್ನು ಒಂದು ಸಾರ್ವಜನಿಕ ವಲಯದ ಬ್ಯಾಂಕಿನೊಂದಿಗೆ ವಿಲೀನಗೊಳಿಸುವ ವಿಶ್ವಾಸವನ್ನೂ ಹೊಂದಿತ್ತು.
ರಿಸರ್ವ್ ಬ್ಯಾಂಕ್ ಕೈಗೊಳ್ಳುತ್ತಿದ್ದ ಅಂತಹ ಕ್ಷಿಪ್ರ ಕ್ರಮಗಳು ಪ್ರಸಕ್ತ ಸನ್ನಿವೇಶದಲ್ಲಿ ಮಾಯವಾಗಿವೆ, ಏಕೆಂದರೆ, ನೀತಿಗಳು, ಸ್ಥಿತಿಗತಿಗಳು ಸಾಕಷ್ಟು ಬದಲಾಗಿವೆ. 2000ದ ಇಸವಿಯ ನಂತರ, ಸಾಲಗಳ ಮೂಲಕ ಉಂಟಾದ ಆರ್ಥಿಕ ಉಬ್ಬರದ ಸಾಧನಗಳಾಗಿದ್ದ ಸಾರ್ವಜನಿಕ ವಲಯದ ಬ್ಯಾಂಕ್ಗಳು ಕೊಟ್ಟ ಸಾಲವನ್ನು ವಸೂಲಿ ಮಾಡಲಾಗದ ಕಾರಣದಿಂದಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಅವು ಮುಳುಗುತ್ತಿರುವ ಇನ್ನೊಂದು ಬ್ಯಾಂಕನ್ನು ವಹಿಸಿಕೊಳ್ಳಲಾಗುತ್ತಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ, ಕೆಲವು ಅಶಕ್ತ ಬ್ಯಾಂಕುಗಳು ಮುಳುಗುವುದನ್ನು ತಪ್ಪಿಸುವ ಉದ್ದೇಶದಿಂದ ಅವುಗಳನ್ನು ಶಕ್ತ ಬ್ಯಾಂಕುಗಳೊಂದಿಗೆ ವಿಲೀನಗೊಳಿಸುವ ಪ್ರಯತ್ನಗಳು ಈಗ ಕಾರ್ಯತಃ ನಡೆಯುತ್ತಿವೆ. ಮೂಲ ಸಮಸ್ಯೆ ಎಂದರೆ, ಸರ್ಕಾರ ತಳೆದಿರುವ ವಿತ್ತೀಯ ನಿಲುವಿನಿಂದಾಗಿ, ಮುಳುಗಡೆ ಸನ್ನಿಹಿತವಾಗಿರುವ ಬ್ಯಾಂಕುಗಳ ವಸೂಲಾಗದ ಸಾಲಗಳ ಹೊರೆಯನ್ನು ನಿಭಾಯಿಸುವ ಮನಸ್ಸು ಸರ್ಕಾರಕ್ಕಿಲ್ಲ.
ವಾಸ್ತವವಾಗಿ, ಬ್ಯಾಂಕುಗಳು ಸದ್ಯದಲ್ಲಿ ಎದುರಿಸುತ್ತಿರುವ ಇಕ್ಕಟ್ಟಿನ ಪರಿಸ್ಥಿತಿಯ ತಳದಲ್ಲಿ ಸರ್ಕಾರದ ಮೃದು ತೆರಿಗೆ ನೀತಿ ಮತ್ತು ಅದರ ಸಾಂಪ್ರದಾಯಿಕ ವಿತ್ತೀಯ ನಿಲುಮೆಗಳು ಅಡಕವಾಗಿವೆ. ಹೆಚ್ಚು ಬಂಡವಾಳ ಹೂಡಿಕೆ ಅವಲಂಬಿತವಾದ ಮೂಲಸೌಕರ್ಯದಂತಹ ವಲಯಗಳಲ್ಲಿ ಹೂಡಿಕೆ ಮಾಡಲು ಸರ್ಕಾರವು ಅಸಮರ್ಥವಾಗಿರುವುದರಿಂದ ಆ ಜವಾಬ್ದಾರಿಯನ್ನು ನಿರ್ವಹಿಸಲು ಖಾಸಗಿ ವಲಯವನ್ನು ಕೋರಲಾಗಿತ್ತು. ಖಾಸಗಿ ವಲಯವು ಆ ಕಾರ್ಯವನ್ನು ಕೈಗೊಳ್ಳುವ ಸಲುವಾಗಿ ಅವರಿಗೆ ಸರ್ಕಾರದ ಗ್ಯಾರಂಟಿಯ ಮೇಲೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಐಎಲ್ಎಫ್ಎಸ್ ನಂತಹ ಸಂಸ್ಥೆಗಳು ಸಾಲ ಸೌಲಭ್ಯ ಒದಗಿಸುವಂತೆ ಬಲವಂತಪಡಿಸಲಾಗಿತ್ತು.
ಆದರೆ, ಈ ಯೋಜನೆ ಕಾರ್ಯತಃ ಯಶಸ್ವಿಯಾಗಿಲ್ಲ, ಕೆಲವು ಯೋಜನೆಗಳು ನೆಲ ಮಟ್ಟದಿಂದ ಮೇಲೆ ಏಳಲೇ ಇಲ್ಲ ಅಥವಾ ಕಾರ್ಯ-ಸಾಧ್ಯವಾಗಿರಲಿಲ್ಲ. ಹಾಗಾಗಿ, ಅವುಗಳಿಗೆ ಒದಗಿಸಿದ ಹಲವು ಲಕ್ಷ ಕೋಟಿ ರೂಪಾಯಿಗಳ ಸಾಲ ವಸೂಲಾಗದೆ ಉಳಿಯಿತು. ಈ ಎಲ್ಲ ಘಟನಾವಳಿಗಳನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ, 1991ರಿಂದ ನವ ಉದಾರ ಅಜೆಂಡಾವನ್ನು ಜಾರಿಗೆ ತರುವಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಬಳಸಿಕೊಂಡದ್ದರ ನೇರ ಪರಿಣಾಮವಾಗಿ ಬ್ಯಾಂಕುಗಳು ಈಗ ಅಪಾಯದಲ್ಲಿವೆ ಮತ್ತು ಅದರಿಂದಾಗಿ ಸಾಲ ಪಡೆದ ಸಂಸ್ಥೆಗಳು ಸರಣಿಯೋಪಾದಿಯಲ್ಲಿ ನೆಲಕ್ಕುರುಳುತ್ತಿವೆ.
ಬ್ಯಾಂಕಿಂಗ್ ಬಿಕ್ಕಟ್ಟಿನ ಬೇರುಗಳು ಬಹಳ ಆಳಕ್ಕೆ ಹೋಗಿವೆ. ಬ್ಯಾಂಕುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಅವುಗಳ ಕಾರ್ಯಾಚರಣಾ ವೈಫಲ್ಯ ಅಥವಾ ವಂಚನೆಯ ಪ್ರಕರಣಗಳಿಗಿಂತ ಮುಖ್ಯವಾಗಿ, ಅದು, 2000ದ ಇಸವಿಯ ನಂತರದ ಅವಧಿಯಲ್ಲಿ ಅನುಸರಿಸಿದ ನೀತಿಗಳ ಮೂಲಕ (ಬ್ಯಾಂಕ್ ಸಾಲಗಳ ಮೂಲಕ) ಉಂಟು ಮಾಡಿದ ಆರ್ಥಿಕ ಉಬ್ಬರ ಮತ್ತು ಪ್ರಸಕ್ತ ಆರ್ಥಿಕ ಇಳಿತ ಇವುಗಳ ಫಲಶೃತಿ ಎಂಬುದನ್ನು ಈ ಬಿಕ್ಕಟ್ಟು ಸೂಚಿಸುತ್ತದೆ. ಈ ಅವಧಿಗೆ ಮೊದಲು ಬ್ಯಾಂಕುಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವಿಟ್ಟಿದ್ದ ಮತ್ತು ಮೇಲುಸ್ತುವಾರಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ರಿಸರ್ವ್ ಬ್ಯಾಂಕ್, ಉದಾರೀಕರಣದ ವಾತಾವರಣದಲ್ಲಿ ನಿಯಂತ್ರಣ ಮತ್ತು ಮೇಲುಸ್ತುವಾರಿಯನ್ನು ಸಡಿಲಗೊಳಿಸಿತು. ಈ ಸಡಿಲಗೊಳಿಸುವಿಕೆಯ ಅಂಗವಾಗಿ ಮಾರುಕಟ್ಟೆ ಸೂಚಿಸಿದ ನಡತೆಗಳ ಆಧಾರದ ಮೇಲೆ ತನ್ನ ಜವಾಬ್ದಾರಿಯನ್ನು ನಿರ್ವಹಿಸಲು ಆರಂಭಿಸಿತು. ಈ ಬದಲಾವಣೆಯು ಕರ್ತವ್ಯಲೋಪಗಳಿಗೆ ಮತ್ತು ವಂಚನೆಗಳಿಗೆ ಒಂದು ಹಿತವಾದ ವಾತಾವರಣ ಒದಗಿಸಿತು. ಲಾಭಕ್ಕಾಗಿಯೇ ಆಗುವ ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಒಂದು ಪಾತ್ರವನ್ನು ಬ್ಯಾಂಕ್ ವಹಿಸುವುದಾದರೆ, ಆ ಲಾಭದಲ್ಲಿ ಒಂದು ಪಾಲಿಗೆ ಆಸೆಪಡುವುದು ತಪ್ಪದು.
ಈ ವಾಸ್ತವವನ್ನು ಕಡೆಗಣಿಸಿ, ಬ್ಯಾಂಕ್ ಮುಳುಗಡೆಯಂತಹ ವದಂತಿಗಳನ್ನು ನಂಬದಿರಿ ಎಂಬ ತನ್ನ ಸ್ಪಷ್ಟನೆಯನ್ನು ಮತ್ತು ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಭದ್ರವಾಗಿದೆ ಎಂಬ ತನ್ನ ಆಶ್ವಾಸನೆಯನ್ನು ಠೇವಣಿದಾರರು ನಂಬುತ್ತಾರೆ ಎಂಬುದು ರಿಸರ್ವ್ ಬ್ಯಾಂಕ್ನ ವಿಶ್ವಾಸ. ರಿಸರ್ವ್ ಬ್ಯಾಂಕ್ನ ಈ ವಿಶ್ವಾಸವು ಪಿಎಂಸಿ ಬ್ಯಾಂಕ್ ಮೇಲೆ ಎಸಗಿದ ವಂಚನೆಯ ಪ್ರಕರಣವು ಒಂದು ಅಪವಾದವಷ್ಟೇ ಎನ್ನಬಹುದಾದ ದಾರಿಗೆಟ್ಟ ಪ್ರಕರಣವೇ ಹೊರತು ಅದು ವ್ಯವಸ್ಥೆಯ ರಚನೆಯಲ್ಲಿರುವ ದೋಷದ ಲಕ್ಷಣ ಅಲ್ಲವೆಂಬ ಭಾವನೆಯ ಮೇಲೆ ನಿಂತಿದೆ. ಒಂದು ವೇಳೆ ಈ ಭಾವನೆ ನಿಜವಲ್ಲದಿದ್ದರೆ, ಇಂತಹ ಮೋಸದ ಕೃತ್ಯಗಳನ್ನು ತಡೆಗಟ್ಟುವಲ್ಲಿ ಮತ್ತು ಠೇವಣಿದಾರರ ಹಿತ ರಕ್ಷಣೆ ಮಾಡುವಲ್ಲಿ ರಿಸರ್ವ್ ಬ್ಯಾಂಕ್ನ ಅಸಾಮಥ್ರ್ಯವು ಇನ್ನೂ ಹೆಚ್ಚು ಕಳವಳಕಾರಿಯಾಗಿ ಕಾಣುತ್ತದೆ. ಬಹುಷಃ, ಜನರ ಉಳಿತಾಯಗಳನ್ನು ಮತ್ತು ಠೇವಣಿದಾರರ ಹಿತವನ್ನು ಸದಾ ಕಾಲವೂ ಸರ್ಕಾರದ ವಿವಿಧ ಸಂಸ್ಥೆಗಳು ರಕ್ಷಿಸುತ್ತಿರಬೇಕು ಎನ್ನುವ ಗ್ರಹಿಕೆ ಮತ್ತು ನಿರೀಕ್ಷೆಗಳನ್ನು ಸಾಧ್ಯವಾದರೆ ಬದಲಾಯಿಸಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ನಂಬಿವೆ.
ಇಂತಹ ಚಿಂತನೆಗಳನ್ನು ಮೋದಿ ಸರ್ಕಾರವು ಕಾನೂನು ಬದ್ಧಗೊಳಿಸಲು ಹೊರಟಿತ್ತು. 2017ರ ಅಗಸ್ಟ್ನಲ್ಲಿ, ‘ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ’ ಎಂಬ ಒಂದು ಮಸೂದೆ(ಈಖಆI ಃiಟಟ oಜಿ 2017) ಯನ್ನು ಲೋಕ ಸಭೆಯಲ್ಲಿ ಮಂಡಿಸಲಾಗಿತ್ತು. ಅದರ ಪ್ರಕಾರವಾಗಿ, ಪಿಎಂಸಿ ಬ್ಯಾಂಕ್ ವಂಚನೆಯಂತಹ ಪ್ರಕರಣಗಳಲ್ಲಿ (ಅಂದರೆ, ಬ್ಯಾಂಕ್ ಠೇವಣಿಗಳನ್ನು ಮರು ಪಾವತಿ ಮಾಡಲಾಗದೆ ಮುಳುಗಿದಾಗ) ಠೇವಣಿದಾರರು ವಂಚನೆಯ ಭಾರವನ್ನು ಹೊರಬೇಕಿತ್ತು. ಅಂದರೆ, ವಂಚನೆಯಿಂದಾಗಿ ಒಂದು ಬ್ಯಾಂಕ್ ಮುಳುಗಿದಾಗ, ಜನರು ಬ್ಯಾಂಕಿನಲ್ಲಿ ತಮ್ಮ ಹಣವನ್ನು ಠೇವಣಿ ಇಟ್ಟ ತಪ್ಪಿಗೆ, ಇಡೀ ಠೇವಣಿಯನ್ನು ಕಳೆದುಕೊಳ್ಳಬೇಕಾಗಿತ್ತು.
ಈ ಪ್ರಸ್ತಾಪಗಳಿಗೆ ತೀವ್ರ ವಿರೋಧ ವ್ಯಕ್ತವಾದ ಸನ್ನಿವೇಶದಲ್ಲಿ ಮಸೂದೆಯನ್ನು ಹಿಂಪಡೆಯಲಾಯಿತು. ಆದರೆ, ಮೋದಿ ಸರ್ಕಾರವು ಎದುರಿಸುತ್ತಿರುವ ಪ್ರಸಕ್ತ ಸವಾಲಗಳ ಸಂದರ್ಭದಲ್ಲಿ, ಅದೇ ಮಸೂದೆಯನ್ನು, ತನಗಿರುವ ಒರಟು ಬಹುಮತವನ್ನು ಬಳಸಿಕೊಂಡು ಕಾನೂನು ಬದ್ಧಗೊಳಿಸಿದರೆ ಆಶ್ಚರ್ಯವಿಲ್ಲ. ಅದೇನೇ ಇರಲಿ, ಬ್ಯಾಂಕುಗಳ ಕಾರ್ಯವೈಖರಿಯ ಬಗ್ಗೆ ಎದ್ದಿರುವ ದಿಗಿಲನ್ನು ಸರ್ಕಾರವು ತನಗೆ ಹೊರೆಯಾಗದಂತಹ ಸೂಕ್ತ ಕ್ರಮಗಳ ಮೂಲಕ ದೂರ ಮಾಡಬೇಕು. ಈ ಕೆಲಸವನ್ನು, ರಿಸರ್ವ್ ಬ್ಯಾಂಕ್ ಕೊಟ್ಟಿರುವ ತಪ್ಪು ಅರ್ಥ ಕೊಡುವ ಪದ ಬಳಕೆಯಿಂದ ಕೂಡಿದ ಸ್ಪಷ್ಟೀಕರಣವು ಸಾಧಿಸುತ್ತದೆಯೇ ಎಂಬುದು ಅಸ್ಪಷ್ಟ.
ಕನ್ನಡಕ್ಕೆ: ಕೆ.ಎಂ.ನಾಗರಾಜ್