ಜನಪರ ಕಾಯ್ದೆಗಳ ತಿದ್ದುಪಡಿ: ರಾಜ್ಯವ್ಯಾಪಿ ಪ್ರತಿಭಟನೆಗೆ ಜೆಡಿಎಸ್​​ ಹೋರಾಟ

  • ಪಕ್ಷದ ಸಂಸದರು, ಶಾಸಕರು, ಜಿಲ್ಲಾ ಮುಖಂಡರೊಂದಿಗೆ ದೇವೇಗೌಡ ವರ್ಚುವಲ್‍ ಸಭೆ

 

ಬೆಂಗಳೂರು: ಕೆಲವು ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಸುಗ್ರಿವಾಜ್ಞೆ ಹೊರಡಿಸಿ ಜಾರಿಗೊಳಿಸಲು ಮುಂದಾಗಿರುವ  ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಜೆಡಿಎಸ್​ನಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ  ಮಾಜಿ ಪ್ರಧಾನಿ, ಜೆಡಿಎಸ್‍ ರಾಷ್ಟ್ರೀಯ ಅಧ್ಯಕ್ಷ  ಎಚ್​​.ಡಿ ದೇವೇಗೌಡ ಹೇಳಿದರು.

ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ ದೇವೇಗೌಡರು,  ಬಿಜೆಪಿ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ. ಈ ಮೂಲಕ ಯಾವುದೇ ಕಾರಣಕ್ಕೂ ಜನಪರ ಕಾಯ್ದೆಗಳನ್ನು ತಿದ್ದುಪಡಿ ಮಾಡಬಾರದು ಎಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ನಂತರ ರಾಜ್ಯದ ಸಿಎಂ ಬಿ.ಎಸ್​ ಯಡಿಯೂರಪ್ಪ ಮೇಲೂ ಒತ್ತಡ ಹಾಕುತ್ತೇವೆ ಎಂದರು.

ಜೆಡಿಎಸ್

ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ ಮತ್ತು ಕೈಗಾರಿಕಾ ಕಾಯಿದೆಗಳ ಸುಗ್ರೀವಾಜ್ಞೆ ಗಳು ರಾಜ್ಯದ ಜನತೆಗೆ ಮಾರಕವಾಗಲಿದೆ. ರಾಜ್ಯ ಸರ್ಕಾರದ ಈ ನಡೆಗೆ ನಮ್ಮ ವಿರೋಧವಿದೆ. ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೀಗೆ ಹೋರಾಟ ಮಾಡಬೇಕು ಎನ್ನುವುದರ ರೂಪುರೇಷೆ ಬಗ್ಗೆ ಗಂಭೀರವಾಗಿ ಚರ್ಚಿಸಬೇಕಿದೆ. ಕೊರೋನಾ ಇರುವುದರಿಂದ ವಿಡಿಯೋ ಸಂವಾದದ ಮೂಲಕ ಚರ್ಚಿಸೋಣ ಎಂದು ಜೆಡಿಎಸ್​ ಶಾಸಕರಿಗೆ ಮಾಜಿ ಪ್ರಧಾನಿ ಹೇಳಿದರು.

ಮೂವತ್ತು ಜಿಲ್ಲೆಗಳಿಂದ ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ಮಾಡುತ್ತೀವಿ. ಪ್ರತಿ ಜಿಲ್ಲೆಗಳಲ್ಲಿ ನಡೆಯುವ ಸಭೆಗಳಲ್ಲಿ ಜೆಡಿಎಸ್​​ ಮುಖಂಡರ ಜೊತೆ ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಳ್ಳಲಿ. ಎಲ್ಲಾ ಕಡೆಗಳಲ್ಲೂ ಪ್ರತಿಭಟನೆ ಬಳಿಕ ಡಿಸಿಗೆ ಮನವಿ ಪತ್ರ ನೀಡೋಣ. ನಂತರ ಸಿಎಂಗೂ ಈ ಮನವಿ ಪತ್ರ ರವಾನಿಸೋಣ. – ಎಚ್​​.ಡಿ ದೇವೇಗೌಡ

ಸಂವಾದದಲ್ಲಿ ಜೆಪಿ ನಗರದಿಂದ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನದಿಂದ ಸಂಸದ ಪ್ರಜ್ವಲ್ ರೇವಣ್ಣ ಕೂಡ ಭಾಗಿಯಾಗಿದ್ದಾರೆ. ಹಾಗೆಯೇ ಜೆಡಿಎಸ್​ನ ಎಲ್ಲಾ ಶಾಸಕರು ಪಾಲ್ಗೊಂಡಿದ್ದರು.

ಇದೇ ವೇಳೆ ಡಿ.ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಕುರಿತು ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಘಟನೆಗೆ ಕಾರಣ ಏನು? ಕಾಂಗ್ರೆಸ್ ಆಂತರಿಕ ವಿಚಾರದಿಂದ ಈ ಘಟನೆ ನಡೆದಿದ್ಯಾ? ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಹೆಚ್ಚಿಗೆ ಮಾತಾಡಲ್ಲ. ಈ ಪ್ರಕರಣದಲ್ಲಿ 300ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಆದರೆ ಈಗಲೂ ಹೇಳುತ್ತೀನಿ ನಿರಪರಾಧಿಗಳಿಗೆ ತೊಂದರೆ ಆಗಬಾರದು. ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕು ಎಂದು ಮನವಿ ಮಾಡಿದರು.

ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಿದ್ದಾರೆ. ಇದರಿಂದ ಸತ್ಯಾಂಶ ಹೊರಬರಲು ಸಾಧ್ಯವಾಗೊಲ್ಲ. ಈ ಹಿಂದೆ ನಡೆದ ಹಲವು ಘಟನೆಗಳ ತನಿಖೆ ಏನಾಗಿದೆ ಎಂದು ನನಗೆ ಗೊತ್ತಿದೆ. ಕೊರೋನಾ ಒಂದು ವೈರಸ್ ಅಷ್ಟೇ ಇದರಿಂದ ಜನತೆ ಭಯ ಪಡುವ ಅವಶ್ಯಕತೆ ಇಲ್ಲ. ಮುನ್ನೆಚ್ಚರಿಕೆ ವಹಿಸಿದರೆ ಸಾಕು. ಸೋಂಕಿತರನ್ನು ಪ್ರೀತಿಯಿಂದ ನೋಡಬೇಕು, ಅವರನ್ನು ಅವಮಾನಿಸಬಾರದು. ನಮ್ಮ ಮುಖಂಡರಿಗೂ ಮನವಿ ಮಾಡುತ್ತೀನಿ. ಪಕ್ಷದ ವತಿಯಿಂದ ಸಾಧ್ಯವಾದಷ್ಟು ಮಾಸ್ಕ್ , ಸ್ಯಾನಿಟೈಸರ್ ಮತ್ತು ವಿಟಮಿನ್ ಮಾತ್ರೆಗಳನ್ನು ಜನತೆಗೆ ತಲುಪಿಸುವ ಕಾರ್ಯ ಮಾಡಿ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *