ಈ ಮಹಾಮಾರಿಯ ವಿರುದ್ಧ ಹೋರಾಡುವಲ್ಲಿ ಜಾಗತಿಕ ಐಕ್ಯತೆ ಮತ್ತು ಸೌಹಾರ್ದತೆ ಬೇಕಾಗಿರುವ ಸಮಯದಲ್ಲಿ ಟ್ರಂಪ್ ಆಡಳಿತ ಹಸಿ ಸುಳ್ಳಿನ ಮತ್ತು ವಿಭಜನಕಾರಿ ಪ್ರಚಾರವನ್ನು ನಡೆಸಿರುವುದಕ್ಕೆ ಮೂರು ಕಾರಣಗಳಿವೆ. ಇವುಗಳಲ್ಲಿ ಮೂಲ ಕಾರಣವೆಂದರೆ, ಚೀನಾ ಕೊವಿಡ್ ನಂತರದ ಅವಧಿಯಲ್ಲಿ ಇನ್ನೂ ಬಲಶಾಲಿಯಾಗಿ ಮೂಡಿ ಬರುತ್ತದೆ ಎಂಬ ಸಾಮ್ರಾಜ್ಯಶಾಹಿ ಆಳುವ ವಲಯಗಳಲ್ಲಿನ ಭಯ. ಭಾರತ ಇಂತಹ ಸಂದರ್ಭದಲ್ಲಿ ಚೀನಾ-ವಿರೋಧಿ ಪಡೆಯನ್ನು ಸೇರಿಕೊಳ್ಳುವುದು ಎಂದರೆ ಒಬ್ಬ ತರ್ಕಹೀನ ಮತ್ತು ಸ್ವಾರ್ಥಪರ ಅಧ್ಯಕ್ಷನ ತಿಕ್ಕಲುತನಗಳಿಗೆ ದೇಶವನ್ನು ಒಳಪಡಿಸಿದಂತಾಗುತ್ತದೆ.
ಕೊರೊನ ವೈರಸ್ ಈಗಲೂ ಕೇಕೆ ಹಾಕುತ್ತಿದೆ, ಅಮೆರಿಕ ಸಂಯುಕ್ತ ಸಂಸ್ಥಾನ ಅದರ ಕೇಂದ್ರ ಪ್ರದೇಶವಾಗಿದೆ. ಈ ಸಮಯದಲ್ಲೇ ಅಧ್ಯಕ್ಷ ಟ್ರಂಪ್ ಮತ್ತು ಅವರ ಆಡಳಿತ ಚೀನಾದ ವಿರುದ್ದ ನೇರ ದಾಳಿಗಿಳಿದಿದ್ದಾರೆ, ಈ ವೈರಸ್‌ನ ಸೃಷ್ಟಿಗೆ ಮತ್ತು ಹರಡಿಕೆಗೆ ಚೀನಾವೇ ಕಾರಣ ಎಂದು ದೂಷಿಸುತ್ತಿದ್ದಾರೆ; ಎಷ್ಟರ ಮಟ್ಟಿಗೆ ಎಂದರೆ ಇದರಿಂದಾಗಿರುವ ಅನಾಹುತಕ್ಕೆ ಪರಿಹಾರ ಕೊಡಬೇಕೆಂದು ಅಗ್ರಹಿಸುತ್ತಿದ್ದಾರೆ.
ಕೊವಿಡ್-೧೯ ವೈರಸ್ಸನ್ನು ಚೀನೀ ವೈರಸ್ ಎಂದು ಹೇಳಿ ಟ್ರಂಪ್ ಇದರ ನೇತೃತ್ವ ವಹಿಸಿದರು. ನಂತರ, ಇದನ್ನು ವುಹಾನ್ ನಲ್ಲಿ ಪ್ರಯೋಗಾಲಯದಲ್ಲಿ ಸೃಷ್ಟಿಸಲಾಯಿತು ಎಂದರು. ಮಾಜಿ ಸಿಐಎ ಮುಖ್ಯಸ್ಥ, ಈಗ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಇದನ್ನು ಪುನರುಚ್ಚರಿಸಿದರು. ಅದನ್ನು ವುಹಾನ್ ವೈರಸ್ ಎಂದ ಪೊಂಪಿಯೊ ಚೀನಾ ಈ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ, ಅದರಿಂದಾಗಿ ಅಮೆರಿಕಾ ಮತ್ತು ಜಗತ್ತು ಅಪಾರ ಹಾನಿಗಳನ್ನು ಅನುಭವಿಸಿದೆ, ಚೀನೀ ಸರಕಾರ ಅವರು ಮಾಡಿದ್ದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಅವರು ಸಾರಿದ್ದಾರೆ.
ಮಾರ್ಚ್ ೨೯ರಂದು ಟ್ರಂಪ್ ತಾನು ಚೀನಾದ ವಿರುದ್ಧ ಈ ಹಾನಿಯುಂಟು ಮಾಡಿದ್ದಕ್ಕೆ ಪರಿಹಾರ ಕೊಡಬೇಕು ಎಂದು ಮೊಕದ್ದಮೆ ಹೂಡುವ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದಿದ್ದಾರೆ. ಆತನ ಈ ಹೇಳಿಕೆಯ ಮೊದಲೇ ಮಿಸ್ಸೂರಿ, ಫ್ಲೊರಿಡ ಮತ್ತು ನ್ಯೂಯಾರ್ಕ್ ಕೋರ್ಟುಗಳಲ್ಲಿ ಚೀನೀ ಸರಕಾರದ ವಿರುದ್ಧ ಪರಿಹಾರಕ್ಕೆ ಮೊಕದ್ದಮೆಗಳನ್ನು ಹಾಕಲಾಗಿದೆ. ಮಿಸ್ಸೂರಿಯಲ್ಲಿ ಆ ಪ್ರಾಣತ್ಯದ ಅಟಾರ್ನಿ ಜನರಲ್ ಪರಿಹಾರ ಕೊಡಬೇಕು ಎಂದು ಮೊಕದ್ದಮೆ ಹಾಕಿದ್ದಾರೆ. ಒಬ್ಬ ಅಮೆರಿಕನ್ ವಕೀಲ ಅಂತರ್ರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಲ್ಲಿ ಒಂದು ಮೊಕದ್ದಮೆಯನ್ನು ಹಾಕಿದ್ದಾರೆ, ಚೀನಾ ಉದ್ದೇಪೂರ್ವಕವಾಗಿಯೆ ಒಂದು ಜೈವಿಕ ಶಸ್ತ್ರಾಸ್ತ್ರವಾಗಿ ಈ ವೈರಸನ್ನು ಬೆಳೆಸಿದೆ, ಇದು ಮಾನವಕುಲದ ವಿರುದ್ಧ ಮಾಡಿರುವ ಒಂದು ಅಪರಾಧ ಎಂದು ಆಪಾದಿಸಿದ್ದಾರೆ.
ಚೀನಾವನ್ನು ಬಲಿಪಶು ಮಾಡುವುದನ್ನು ಪಾಶ್ಚಿಮಾತ್ಯ ಕಾರ್ಪೊರೇಟ್ ಮಾಧ್ಯಮಗಳು ಒಂದು ಕಸುಬಾಗಿ ಮಾಡಿಕೊಂಡಿವೆ. ವಿವಿಧ ಛಾಯೆಗಳ ರಾಜಕೀಯ ಟಿಪ್ಪಣಿಕಾರರು ಈ ವಾದ್ಯವೃಂದವನ್ನು ಸೇರಿಕೊಳ್ಳುತ್ತಿದ್ದಾರೆ.
ಈ ಮಹಾಮಾರಿಯ ವಿರುದ್ಧ ಹೋರಾಡುವಲ್ಲಿ ಜಾಗತಿಕ ಐಕ್ಯತೆ ಮತ್ತು ಸೌಹಾರ್ದತೆ ಬೇಕಾಗಿರುವ ಸಮಯದಲ್ಲಿ ಟ್ರಂಪ್ ಆಡಳಿತ ಇಂತಹ ಹಸಿ ಸುಳ್ಳಿನ ಮತ್ತು ವಿಭಜನಕಾರಿ ಪ್ರಚಾರವನ್ನು ಕೈಗೆತ್ತಿಕೊಂಡಿದೆ? ಇದಕ್ಕೆ ಮೂರು ಕಾರಣಗಳಿವೆ: ಮೊದಲನೆಯದಾಗಿ, ಈ ಕೊರೊನ ವೈರಸ್ ಬೆದರಿಕೆಯನ್ನು ಟ್ರಂಪ್ ಆಡಳಿತ ಎಷ್ಟು ವಿನಾಶಕಾರಿ ರೀತಿಯಲ್ಲಿ ನಿಭಾಯಿಸಿದೆ ಎಂಬುದರಿಂದ ಜನಗಳ ಗಮನವನ್ನು ಬೇರೆಡೆಗೆ ತಿರುಗಿಸಲು.
ಎರಡನೆಯದಾಗಿ, ಈ ಅಧ್ಯಕ್ಷೀಯ ಚುನಾವಣೆಗಳ ವರ್ಷದಲ್ಲಿ, ಟ್ರಂಪ್ ಮತ್ತು ಆಳುವ ರಿಪಬ್ಲಿಕನ್ ರಾಜಕಾರಣಿಗಳು ತಮ್ಮ ರಾಷ್ಟ್ರವಾದಿ ಮತ್ತು ಬಲಪಂಥೀಯ ಬೆಂಬಲಿಗರಲ್ಲಿ ಹುರುಪು ತುಂಬಲು ಚೀನಾದ ಮೇಲೆ ಗುರಿಯಿಟ್ಟು, ಚೀನೀ-ವಿರೋಧಿ ಭಾವನೆಗಳನ್ನು ಬಡಿದೆಬ್ಬಿಸ ಬಯಸುತ್ತಿದ್ದಾರೆ, ಆಮೂಲಕ ಸರಕಾರ ನಡೆಸುವಲ್ಲಿ ತಮ್ಮ ಒಟ್ಟಾರೆ ಅಸಮರ್ಥತೆಯನ್ನು ಮುಚ್ಚಿಕೊಳ್ಳ ಬಯಸುತ್ತಿದ್ದಾರೆ.
ಅಂತಿಮವಾಗಿ, ಇದರ ಹಿಂದಿರುವ ಮೂಲ ಕಾರಣವೆಂದರೆ, ಚೀನಾ ಕೊವಿಡ್ ನಂತರದ ಅವಧಿಯಲ್ಲಿ ಇನ್ನೂ ಬಲಶಾಲಿಯಾಗಿ ಮೂಡಿ ಬರುತ್ತದೆ ಎಂಬ ಸಾಮ್ರಾಜ್ಯಶಾಹಿ ಆಳುವ ವಲಯಗಳಲ್ಲಿನ ಭಯ. ಏಕೆಂದರೆ ಒಂದೆಡೆಯಲ್ಲಿ ಚೀನಾ ಇದನ್ನು ಪರಿಣಾಮಕಾರಿಯಾಗಿ ಎದುರಿಸಿದೆ ಮತ್ತು ಸಮರೋಪಾದಿಯಲ್ಲಿ ಈ ಮಹಾಮಾರಿಯನ್ನು ತಡೆಗಟ್ಟಿದ್ದರೆ, ಇನ್ನೊಂದೆಡೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಜಾಗತಿಕ ಪಾತ್ರ ಅವನತಿಯನ್ನು ಕಾಣುತ್ತಿದ್ದು, ಈ ಮಹಾಮಾರಿಯನ್ನು ಅದು ಎಷ್ಟು ಎರ್ರಾಬಿರ್ರಿಯಾಗಿ ಎದುರಿಸಿದೆ ಎಂಬುದು ಅದನ್ನು ಇನ್ನಷ್ಟು ಉಲ್ಬಗೊಳಿಸುತ್ತಿದೆ.
ಚೀನಾದ ವಿರುದ್ಧ ಹಾಕಿರುವ ಆಪಾದನೆಗಳೇ ಅಮೆರಿಕನ್ ಆಡಳಿತ ಎಷ್ಟು ದೂಷಣಾರ್ಹವಾಗಿದೆ ಎಂಬುದನ್ನು ತೆರೆದು ತೋರಿಸುತ್ತಿದೆ. ಈ ವೈರಸನ್ನು ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ ಎಂಬ ಆರೋಪವನ್ನು ಜಗತ್ತಿನಾದ್ಯಂತ ವಿಜ್ಞಾನಿಗಳು ತಳ್ಳಿ ಹಾಕಿದ್ದಾರೆ. ಅಲ್ಲದೆ, ಚೀನೀ ಸರಕಾರ ವೈರಸ್ ದಾಳಿಯ ಸ್ವರೂಪವನ್ನು ಅಡಗಿಸಿಟ್ಟಿಲ್ಲ, ಅಥವ ಅದರ ಮಾಹಿತಿಯನ್ನು ಅಂತರ್ರಾಷ್ಟ್ರೀಯವಾಗಿ ಹಂಚಿಕೊಳ್ಳುವುದನ್ನು ತಡೆದಿಲ್ಲ.
ವುಹಾನ್‌ನಲ್ಲಿ ಕೊರೊನ ವೈರಸ್‌ನ ಮೊದಲ ಸೋಂಕು ಕಂಡುಬಂದದ್ದು ಡಿಸೆಂಬರ್ ೨೦೧೯ರಲ್ಲಿ. ಡಿಸೆಂಬರ್ ೧ರಂದು ಮೊದಲ ರೋಗಿಯಿಂದ ಹಿಡಿದು, ಡಿಸೆಂಬರ್ ಮೂರನೇ ವಾರದಲ್ಲಿ ಹಲವಾರು ಪ್ರಕರಣಗಳು ಕಾಣಿಸಿಕೊಳ್ಳುವ ವರೆಗೆ , ಇದು ಅಸ್ತಿತ್ವದಲ್ಲಿರುವ ಕಾಯಿಲೆ ಅಲ್ಲ ಎಂದು ಅರ್ಥಮಾಡಿಕೊಳ್ಳಲು ವೈದ್ಯರಿಗೆ ಮತ್ತು ವೈದ್ಯಕೀಯ ಪರಿಣಿತರಿಗೆ ಸ್ವಲ್ಪ ಸಮಯ ತಗುಲಿತ್ತು. ಪರೀಕ್ಷಣೆಗಳ ನಂತರವೇ, ವುಹಾನ್ ಇರುವ ಹುಬೈ ಪ್ರಾಂತ್ಯದ ರೋಗ ಹತೋಟಿ ಮತ್ತು ತಡೆ ಕೇಂದ್ರ ಇದೊಂದು ಹೊಸ ವೈರಸ್ ಎಂಬ ತೀರ್ಮಾನಕ್ಕೆ ಬಂತು. ಮರುದಿನವೇ, ಅಂದರೆ ಡಿಸೆಂಬರ್ ೩೦ರಂದು ಅವರು ರೋಗ ಹತೋಟಿಯ ಚೀನೀ ರಾಷ್ಟ್ರೀಯ ಕೇಂದ್ರಕ್ಕೆ ಇದನ್ನು ತಿಳಿಸಿದರು. ಡಿಸೆಂಬರ್ ೩೧ರಂದು ಈ ಕೇಂದ್ರಿಯ ರೋಗ ಹತೋಟಿ ಸಂಸ್ಥೆ ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯುಹೆಚ್‌ಒ)ಗೆ ಇದನ್ನು ತಿಳಿಸಿತು.
ಜನವರಿ ೩ರಂದು, ಈ ವೈರಸನ್ನು ಸಾರ್ಸ್-ಕೊವ್-೨(Sars-Cov-2) ಎಂದು ಗುರುತಿಸಲಾಯಿತು. ಮುಂದೆ ಇದನ್ನು ಕೊವಿಡ್-೧೯ ಎಂದು ಹೆಸರಿಸಲಾಯಿತು. ಈ ವೈರಸ್‌ನ ಜಿನೋಮ್ ಸರಣಿಯನ್ನು ಅನಾವರಣಗೊಳಿಸಲು ಚೀನೀ ವಿಜ್ಞಾನಿಗಳು ಹಗಲು ರಾತ್ರಿ ಕೆಲಸ ಮಾಡಿದರು. ಜನವರಿ ೯ರಂದು ಅವರು ಈ ಹೊಸ ಕೊರೊನ ವೈರಸಿನ ಜೆನೆಟಿಕ್ ಸರಣಿಯನ್ನು ಡಬ್ಲ್ಯು.ಹೆಚ್.ಒ. ದೊಂದಿಗೆ ಹಂಚಿ ಕೊಂಡರು. ಅಂದಿನಿಂದಲೇ ಇದರ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿದೆ
ಈ ವೈರಸ್‌ನ ಜೆನೆಟಿಕ್ ಸಂರಚನೆಯ ತ್ವರಿತ ವಿಶ್ಲೇಷಣೆಯಿಂದಾಗಿಯೇ ಈಗ ಒಂದು ನಿರೋಧಕ ಚುಚ್ಚು ಮದ್ದನ್ನು ಕಂಡು ಹಿಡಿಯುವ ಜಗದ್ವ್ಯಾಪಿ ಪರಿಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹುಬೈ ಸರಕಾರದ ಮಟ್ಟದಲ್ಲಿ ಕೆಲವು ಅಧಿಕಾರಿಗಳು ಜನವರಿ ಆರಂಭದಲ್ಲಿ ಈ ವೈರಸ್ ಗಂಭೀರ ಸ್ವರೂಪವನ್ನು ಕಡೆಗಣಿಸಿದರು. ಆದರೆ ಅವರನ್ನು ತ್ವರಿತವಾಗಿ ತೆಗೆದು ಹಾಕಲಾಯಿತೇ ವಿನಃ ಮರೆಮಾಚುವ ಪ್ರಯತ್ನವೇನೂ ನಡೆಯಲಿಲ್ಲ.
ಜನವರಿ ೧, ೨೦೨೦ರಂದು ಚೀನೀ ರೋಗ ಹತೋಟಿ ಕೇಂದ್ರದ ಅಧಿಕಾರಿಗಳು ಅಮೆರಿಕ ಸಂಯುಕ್ತ ಸಂಸ್ಥಾನಗಳ ರೋಗ ಹತೋಟಿ ಮತ್ತು ನಿರೋಧ ಕೇಂದ್ರದ ಮುಖ್ಯಸ್ಥ ರಾಬರ್ಟ್ ರೆಡ್‌ಫೀಲ್ಡ್‌ರವರಿಗೆ ಹೊಸ ವೈರಸ್‌ನ ಮಾಹಿತಿಯನ್ನು ನೀಡಿದರು. ಕೆಲವು ದಿನಗಳ ನಂತರ ಚೀನೀ ಕೇಂದ್ರದ ಮುಖ್ಯಸ್ಥ ಡಾ. ಜಾರ್ಜ್ ಎಫ್ ಗಾವೊ ರೆಡ್‌ಫೀಲ್ಡ್ ಜತೆ ಮಾತಾಡಿ ಈ ವೈರಸ್‌ನ ಬೆದರಿಕೆಯ ಗಂಭೀರತೆಯನ್ನು ತಿಳಿಯ ಪಡಿಸಿದರು. ಆದ್ದರಿಂದ ಚೀನಾ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ ಎಂದು ಟ್ರಂಪ್ ಹಾಗೂ ಪೊಂಪಿಯೊ ಹೇಳುತ್ತಿರುವುದು ಸುಳ್ಳು ಎಂದು ಸ್ಪಷ್ಟವಾಗುತ್ತದೆ.
ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರ್ರೊ ಜನವರಿ ಕೊನೆಯಲ್ಲಿ ಮತ್ತು ಫೆಬ್ರುವರಿಯಲ್ಲಿ ವೈರಸ್ ಸಾಂಕ್ರಾಮಿಕದ ಬೆದರಿಕೆಯ ಅಪಾಯದ ಬಗ್ಗೆ ಎಚ್ಚರಿಸುತ್ತ ಮನವಿ ಪತ್ರಗಳನ್ನು ಸಲ್ಲಿಸಿದರು. ಆದರೆ ಟ್ರಂಪ್ ಸತತವಾಗಿ ವೈರಸ್‌ನ ಅಪಾಯವನ್ನು ತಳ್ಳಿ ಹಾಕುತ್ತ ಬಂದರು. ಈಗ ಚೀನಾ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ, ಈ ವೈರಸ್ ಕುರಿತ ಸತ್ಯವನ್ನು ಬಚ್ಚಿಟ್ಟಿತು ಎಂದು ಆಪಾದಿಸುವುದು ಶುದ್ಧ ಅಪ್ರಾಮಾಣಿಕತೆ ಮತ್ತು ಕುತರ್ಕವಷ್ಟೇ.
ಕೊವಿಡ್-೧೯ನ್ನು ಚೀನೀ ವೈರಸ್ ಎಂದು ಕರೆದಿರುವುದು ಸಂಕುಚಿತ ಜನಾಂಗವಾದ ಎಂದು ಚೀನಾ ಟ್ರಂಪ್ ಮತ್ತು ಆತನ ಸಂಗಡಿUನನ್ನು ಆಪಾದಿಸಿರುವುದು ಸರಿಯಾಗಿಯೇ ಇದೆ. ಎಪ್ರಿಲ್ ೨೦೦೯ರಲ್ಲಿ ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ ಹೆಚ್೧ಎನ್೧ ವೈರಸ್ ಪತ್ತೆಯಾದಾಗ, ಮತ್ತು ಅದು ಒಂದು ಮಹಾಮಾರಿಯಾದಾಗ ಅದನ್ನು ಅಮೆರಿಕನ್ ವೈರಸ್ ಎಂದೇನೂ ಕರೆಯಲಿಲ್ಲ ಎಂದು ಚೀನೀ ಅಧಿಕೃತ ವಕ್ರಾರರು ನೆನಪಿಸಿದ್ದಾರೆ. ೧೯ನೇ ಶತಮಾನದಿಂದಲೇ ಅಮೆರಿಕನ್ ಇತಿಹಾಸ ಹಳದಿ ಪೀಡೆ ಮುಂತಾದ ಮಾತುಗಳಿಂದ ತುಂಬಿದೆ. ಟ್ರಂಪ್ ಈ ಕಣ್ಣೋಟವನ್ನು ಪ್ರತಿಧ್ವನಿಸುತ್ತಿದ್ದಾರಷ್ಟೇ.
ಟ್ರಂಪ್ ವಿಶ್ವ ಆಹಾರ ಸಂಘನೆಯತ್ತವೂ ಹರಿಹಾಯ್ದಿದ್ದಾರೆ. ವಾಸ್ತವವಾಗಿ ಅದು ವುಹಾನ್‌ನಲ್ಲಿ ವೈರಸ್ ಕಂಡಬಂದದ್ದು ಮತ್ತು ಅದನ್ನು ನಿಭಾಯಿಸುವಲ್ಲಿ ಚೀನೀ ಸರಕಾರದ ಪ್ರಯತ್ನಗಳ ಬಗ್ಗೆ ಒಂದು ವಸ್ತುನಿಷ್ಟ ಮತ್ತು ವೈಜ್ಞಾನಿಕ ವರದಿಯನ್ನು ಒದಗಿಸಿದೆ. ಅದು ಮಾರ್ಚ್ ೧೧ರಂದು ಕೊವಿಡ್-೧೯ನ್ನು ಒಂದು ಮಹಾಮಾರಿ ಎಂದು ಘೋಷಿಸಿತು. ಟ್ರಂಪ್, ಈ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಟಕ್ಕೆ ಎಲ್ಲ ಸಂಪನ್ಮೂಲಗಳನ್ನೂ ಬಳಸಬೇಕಾದ ಸಮಯದಲ್ಲೇ ಈ ಜಾಗತಿಕ ಸಂಸ್ಥೆಗೆ ಅಮೆರಿಕಾದ ದೇಣಿಗೆಯನ್ನು ನಿಲ್ಲಿಸಿ ಬಿಡುವ ಕ್ರಿಮಿನಲ್ ಕ್ರಮವನ್ನು ಕೈಗೊಂಡಿದ್ದಾರೆ.
ಚೀನೀ-ವಿರೋಧಿ ಪ್ರಚಾರ ಭಾರತದಲ್ಲೂ ಹಬ್ಬಿದೆ. ಚೀನಾವನ್ನು ಟೀಕಿಸುವ, ಪಾಶ್ಚಿಮಾತ್ಯ ಮಾಧ್ಯಮಗಳಲ್ಲಿ ಬರೆದವುಗಳನ್ನು ಅರಗಿಸಿಕೊಳ್ಳಲೂ ಹೋಗದೆ ಕಣ್ಣುಮುಚ್ಚಿ ಒಪ್ಪಿಸುವ ಸಂಪಾದಕೀಯಗಳು, ಟಿಪ್ಪಣಿಗಳು ಕಾಣ ಬಂದಿವೆ. ಮೋದಿ ಸರಕಾರ ಚೀನಾವನ್ನು ದೂಷಿಸುವಲ್ಲಿ ಬ್ರ್ರೆಝಿಲ್ ಅಧ್ಯಕ್ಷ ಬೊಲ್ಸೆನಾರೊರಂತಹ ತನ್ನ ಮಿತ್ತರ ಜತೆಗೂಡಿಲ್ಲವಾದರೂ, ಬಲಪಂಥೀಯ ಹಿಂದುತ್ವ ಶಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಸಂಬದ್ಧ ಚೀನೀ-ವಿರೋಧಿ ಕತೆಗಳನ್ನು ಹಬ್ಬಿಸುವಲ್ಲಿ ತೊಡಗಿಕೊಂಡಿವೆ. ಈ ಬುದ್ಧಿಗೇಡಿ ಮಂದೆಗಳಿಗೆ ಕೊರೊನ ವೈರಸ್ ಎಂದರೆ ಆಂತರಿಕವಾಗಿ ಮುಸ್ಲಿಮರು, ಹೊರಗಿನಿಂದ ಚೀನೀಯರು.
ಆದರೆ ಮೋದಿ ಸರಕಾರ ಅಮೆರಿಕದೊಂದಿಗೆ ನಿಕಟ ಸಾಮರಿಕ ಬಂಧಗಳ ಪ್ರಭಾವದಲ್ಲಿದೆ. ಅಮೆರಿಕನ್ ವಿದೇಶಾಂಗ ಕಾರ್ಯದರ್ಶಿ ಪೊಂಪಿಯೊ ಎಪ್ರಿಲ್ ಮಧ್ಯದಲ್ಲಿ ಅಮೆರಿಕ ಮತ್ತು ಭಾರತ ಕೊರೊನ ವೈರಸ್ ವಿರುದ್ಧ ಹೋರಾಟದಲ್ಲಿ ಸಹಕರಿಸುತ್ತಿವೆ ಎಂದು ಪತ್ರಕರ್ತರಿಗೆ ಹೇಳಿದರು. ಆದರೆ ನಾವು ಇನ್ನೂ ದೊಡ್ಡ ವಿಷಯಗಳ ಬಗ್ಗೆ, ಮುಕ್ತ ಮತ್ತು ತೆರೆದ ಇಂಡೋ-ಫೆಸಿಫಿಕ್, ಚೀನಾದ ಸವಾಲು ಮತ್ತು ವ್ಯಾಪಾರದ ಬಗ್ಗೆ ಮಾತುಕತೆಗಳನ್ನು ಮುಂದುವರೆಸುತ್ತೇವೆ ಎಂದು ಸೇರಿಸಿದರು. ಇಲ್ಲೇ ಬರುವುದು ಭೌಗೋಳಿಕ-ರಾಜಕೀಯ: ಚೀನಾದ ಸವಾಲು. ಜಪಾನ್ ಚೀನಾದಿಂದ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿರುವಂತೆ, ಚೀನಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಕಡಿತಗೊಳಿಸಬೇಕು ಎಂದು ಅಮೆರಿಕಾ ಭಾರತವನ್ನು ತಿವಿಯುತ್ತಿದೆ. ಈ ಸಂಕೇತವನ್ನು ಎತ್ತಿಕೊಂಡಿರುವ ಸರಕಾರದ ಮಂತ್ರಿಗಳು ಚೀನಾದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳು ಅದರ ಬದಲು ಭಾರತಕ್ಕೆ ಬರುವಂತೆ ಓಲೈಸುವ ಮಾತಾಡುತ್ತಿದ್ದಾರೆ.
ದೇಶ ಒಂದು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಮತ್ತು ಅರ್ಥವ್ಯವಸ್ಥೆ ಸಂಕುಚನಗೊಳ್ಳುತ್ತಿರುವಾಗ, ಚೀನಾ ಕುರಿತಂತೆ ಈ ನಿಲುವು ಭಾರತದ ಹಿತದೃಷ್ಟಿಯಿಂದಲೋ ಅಥವ ಅಮೆರಿಕಾದ ಹಿತಕ್ಕಾಗಿಯೋ ಎಂಬ ಒಂದು ಪ್ರಸ್ತುತ ಪ್ರಶ್ನೆಯನ್ನು ಕೇಳಬೇಕಾಗುತ್ತದೆ. ಆದರೆ ಈ ಪ್ರಶ್ನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಕೊಡುವುದಿರಲಿ, ಆ ಪ್ರಶ್ನೆಯೇ ಅವರಿಗೆ ಬೇಕಾಗಿಲ್ಲ.
ಇಂತಹ ಸಂದರ್ಭದಲ್ಲಿ ಚೀನಾ-ವಿರೋಧಿ ಪಡೆಯನ್ನು ಸೇರಿಕೊಳ್ಳುವುದು ಎಂದರೆ ಒಬ್ಬ ತರ್ಕಹೀನ ಮತ್ತು ಸ್ವಾರ್ಥಪರ ಅಧ್ಯಕ್ಷನ ತಿಕ್ಕಲುತನಗಳಿಗೆ ದೇಶವನ್ನು ಒಳಪಡಿಸಿದಂತಾಗುತ್ತದೆ ಮತ್ತು ಸಾಮ್ರಾಜ್ಯಶಾಹಿ ಹಿತಗಳಿಗೆ ಹೆಚ್ಚು ಋಣಿಯಾಗಿರುವಂತೆ ಮಾಡುತ್ತದೆ.