ಜಯ
ಮೊನ್ನೆ ಮೊನ್ನೆ ಭೂಮಿಯಿಂದ ಸುಮಾರು 340 ಕಿ.ಮೀ ಎತ್ತರದಲ್ಲಿ ಭೂಮಿ ಸುತ್ತಲೂ ಸುತ್ತುತ್ತಿರುವ ‘ಟಿಯಾಂಗಾಂಗ್ -1’ ಎಂಬ ಹೆಸರಿನ ಬಾಹ್ಯಾಕಾಶ ಕೇಂದ್ರದಿಂದ ಗಗನಯಾತ್ರಿಗಳು ಶಾಲಾ ಮಕ್ಕಳಿಗೆ ಉಪನ್ಯಾಸ ನೀಡಿದ್ದಾರೆ. ಸುಮಾರು 330 ಶಾಲೆಗಳಿಂದ ಪ್ರಾಥಮಿಕ ಮತ್ತು ಫ್ರೌಢಶಾಲಾ ಮಕ್ಕಳು ಬೀಜಿಂಗ್ ನಗರದ ಶಾಲೆಯೊಂದರಲ್ಲಿ ಸೇರಿದ್ದರು. ಅವರು ಗಗನಯಾತ್ರಿಗಳಿಗೆ ಪ್ರಶ್ನೆಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಲೈವ್-ಇನ್ ಕಾರ್ಯಕ್ರಮದಲ್ಲಿ ಕೇಳುತ್ತಿದ್ದರೆ, ಅವುಗಳಿಗೆ ಗಗನಯಾತ್ರಿಗಳು ಉತ್ತರಿಸುತ್ತಿದ್ದಂತೆ ಶಾಲಾ ಮಕ್ಕಳು ರೋಮಾಂಚನಗೊಂಡರು. ಹೀಗೆ ಸುಮಾರು 6 ಕೋಟಿ ಶಾಲಾ ಮಕ್ಕಳು ಈ ಉಪನ್ಯಾಸ ಕೇಳಿದ್ದಾರೆ. ಈ ಕಾರ್ಯಕ್ರಮವನ್ನು ಚೀನಾದ ಶಾಲಾ ಮಕ್ಕಳಷ್ಟೇ ಅಲ್ಲ ಇಡೀ ದೇಶದ ಜನತೆ ದೂರದರ್ಶನ ಮೂಲಕ ಲೈವ್-ಇನ್ ಕಾರ್ಯಕ್ರಮ ವೀಕ್ಷಿಸಿ ಆನಂದಪಟ್ಟರು. ಈ ಉಪನ್ಯಾಸ ಸುಮಾರು 51 ನಿಮಿಷದ ಅವಧಿಯಾಗಿತ್ತು. ಯುವಜನತೆಯ ನಡುವೆ ಚೀನಾದ ಬಾಹ್ಯಾಕಾಶ ಯಾನದ ಕುರಿತು ಆಸಕ್ತಿ ಉಂಟು ಮಾಡಲು ಈ ಉಪನ್ಯಾಸವನ್ನು ಆಯೋಜಿಸಲಾಗಿತ್ತು. ಈ ಉಪನ್ಯಾಸದಲ್ಲಿ ತೂಕ-ರಹಿತ ಮತ್ತು ನೀರಿನ ಮೇಲ್ಮೈ ಸೆಳೆತ ಕುರಿತ ತತ್ವಗಳನ್ನು, ಹಾಗೂ ಬಾಹ್ಯಾಕಾಶ ಕೇಂದ್ರದಲ್ಲಿ ಹೇಗೆ ಜೀವಿಸಬೇಕು, ಹೇಗೆ ಕೆಲಸ ಮಾಡಬೇಕು ಹಾಗೂ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು, ಇತ್ಯಾದಿ ಭೌತಶಾಸ್ತ್ರ ತತ್ವಗಳ ಕುರಿತಂತೆ ತಿಳಿಸಲಾಯಿತು.
ಟೈಕೊನಾಟ್ಗಳ ಪರಾಕ್ರಮ:
ಗಗನಯಾತ್ರಿಗಳನ್ನು ಇಂಗ್ಲೀಷ್ನಲ್ಲಿ ‘ಆಸ್ಟ್ರೋನಾಟ್ ಎಂದು ಕರೆದರೆ, ರಷ್ಯನ್ನರು ‘ಕಾಸ್ಮೋನಾಟ್ ಎಂದು ಕರೆಯುತ್ತಾರೆ, ಚೀನೀ ಭಾಷೆಯಲ್ಲಿ ‘ಟೈಕೊನಾಟ್ ಎಂದು ಕರೆಯುತ್ತಾರೆ. ಇದುವರೆಗೂ ಆಸ್ಟ್ರೋನಾಟ್ ಮತ್ತು ಕಾಸ್ಮೋನಾಟ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿ ಬಾಹ್ಯಾಕಾಶ ಪ್ರಯೋಗಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಇದೀಗ ಚೀನಾದ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬಾಹ್ಯಾಕಾಶ ತಂತ್ರಜ್ಞಾನದಿಂದಾಗಿ ಟೈಕೊನಾಟ್ಗಳ ಪರಾಕ್ರಮ ಹೆಚ್ಚುತ್ತಿದೆ!
ಇದರಲ್ಲಿ ಪಾಲ್ಗೊಂಡಿರುವ 3 ಗಗನಯಾತ್ರಿಗಳನ್ನು ಷೆಂಗ್ಜು-10 ಎಂಬ ಹೆಸರಿನ ಗಗನನೌಕೆಯಲ್ಲಿ ಜೂನ್ 13ರಂದು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಾಗಿತ್ತು. 3 ಗಗನಯಾತ್ರಿಗಳ ಪೈಕಿ ಒಬ್ಬರು ಮಹಿಳೆ. ಇವರು ಬಾಹ್ಯಾಕಾಶ ಕೇಂದ್ರದಲ್ಲಿ ಸುಮಾರು 15 ದಿನಗಳ ಕಾಲ ಇರುತ್ತಾರೆ. ಗಗನ ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಚೀನಾ ಕೊಂಡೊಯ್ದಿರುವುದು ಇದು ಐದನೇ ಬಾರಿ. 2003ರಲ್ಲಿ ಮೊದಲ ಬಾರಿಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು.
2020 ರ ಹೊತ್ತಿಗೆ ಚೀನಾದ ಶಾಶ್ವತ ಬಾಹ್ಯಾಕಾಶ ಕೇಂದ್ರ:
ಚಂದ್ರನ ಮೇಲೆ ಓಡಾಡುವ ಮೊದಲ ಚಂದ್ರನೌಕೆ `ಚಾಂಗ್ -3’ನ್ನು (ಚಾಂಗ್ ಎಂದರೆ ಚೀನಾದ ಪೌರಾಣಿಕ ಚಂದ್ರ ದೇವತೆಯ ಹೆಸರು) ಕಳುಹಿಸಲು ಚೀನಾ ಸಿದ್ದತೆ ನಡೆಸುತ್ತಿದ್ದು, ಅದನ್ನು ಈ ವರ್ಷದ ಕೊನೆಗೆ ಬಾಹ್ಯಾಕಾಶಕ್ಕೆ ಬಿಡಲಾಗುತ್ತದೆ. ‘ಟಿಯಾಂಗಾಂಗ್-1’ ಎಂಬ ಹೆಸರಿನ ಬಾಹ್ಯಾಕಾಶ ಕೇಂದ್ರವನ್ನು 2011 ರಲ್ಲಿ ಸ್ಥಾಪಿಸಲಾಗಿತ್ತು. ಮತ್ತೊಂದು ದೊಡ್ಡದಾದ ಮತ್ತು ಶಾಶ್ವತ ಬಾಹ್ಯಾಕಾಶ ಕೇಂದ್ರವನ್ನು 2020ರ ಹೊತ್ತಿಗೆ ಚೀನಾ ಸ್ವತಂತ್ರವಾಗಿ ಸ್ಥಾಪಿಸಲಿದ್ದು, ಅಲ್ಲಿಯವರೆಗೆ ‘ಟಿಯಾಂಗಾಂಗ್ -1’ ಬಳಕೆಯಲ್ಲಿರುತ್ತದೆ.
ಸೂಪರ್. ಕಂಪ್ಯೂಟರ್ ಅಭಿವೃದ್ಧಿಯಲ್ಲಿ ಅಮೇರಿಕಾವನ್ನು ಹಿಂದಿಕ್ಕಿದ ಚೀನಾ
ವಿಶ್ವದ ಅತ್ಯಂತ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ಅಭಿವೃದ್ಧಿಯಲ್ಲಿ ಚೀನಾ ಅಮೇರಿಕಾವನ್ನು ಹಿಂದಿಕ್ಕಿದೆ. ಚೀನಾದ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿರುವ ‘ಟಿಯನ್ಹೆ-2’ ಎಂಬ ಹೆಸರಿನ ಸೂಪರ್ ಕಂಪ್ಯೂಟರ್ ಒಂದು ಸೆಕೆಂಡಿಗೆ 33.86 ಸಾವಿರ ಟ್ರಿಲಿಯನ್ ಆಪರೇಷನ್ಗಳನ್ನು (1 ಟ್ರಿಲಿಯನ್ ಅಂದರೆ ಲಕ್ಷ ಕೋಟಿಗೆ ಸಮ) ಮಾಡಿದ್ದು, ಇದಕ್ಕೆ ಸಮೀಪ ಸ್ಪಧರ್ಿಯಾದ ಅಮೇರಿಕಾದ ಸೂಪರ್ ಕಂಪ್ಯೂಟರ್ ಒಂದು ಸೆಕೆಂಡಿಗೆ 17.59 ಸಾವಿರ ಟ್ರಿಲಿಯನ್ ಆಪರೇಷನ್ ಮಾಡಿದೆ ಎಂದು 500 ಟಾಪ್ ಸೂಪರ್ ಕಂಪ್ಯೂಟರ್ಗಳ ಪಟ್ಟಿ ಮಾಡಿರುವ ಅಮೇರಿಕಾ ಮತ್ತು ಜರ್ಮನಿಯ ಸೂಪರ್ ಕಂಪ್ಯೂಟರ್ ಸಂಶೋಧಕರ ತಂಡ ತಿಳಿಸಿದೆ.
‘ಟಿಯನ್ಹೆ-2’ ಸೂಪರ್ ಕಂಪ್ಯೂಟರ್ಗಿಂತ ಮುಂಚೆ ಅಂದರೆ 2010 ರಲ್ಲಿ ಚೀನಾದ ‘ಟಿಯನ್ಹೆ-1’ ಎಂಬ ಹೆಸರಿನ ಸೂಪರ್ ಕಂಪ್ಯೂಟರ್ ಜಪಾನಿನ ಸೂಪರ್ ಕಂಪ್ಯೂಟರ್ನ್ನು ವೇಗದ ಲೆಕ್ಕಾಚಾರದಲ್ಲಿ ಹಿಂದಿಕ್ಕಿತ್ತು. ಆದರೆ ವಿಶ್ವದ ಒಟ್ಟಾರೆ 500 ಸೂಪರ್ ಕಂಪ್ಯೂಟರ್ಗಳ ಪೈಕಿ 252 ಅಮೇರಿಕಾ ಅಭಿವೃದ್ಧಿಪಡಿಸಿದ್ದರೆ, ಚೀನಾ 66, ಜಪಾನ್ 30, ಬ್ರಿಟನ್ 29, ಫ್ರಾನ್ಸ್ 23 ಮತ್ತು ಜರ್ಮನಿ 19 ನ್ನು ಅಭಿವೃದ್ಧಿಪಡಿಸಿವೆ.
ಈ ಸೂಪರ್ ಕಂಪ್ಯೂಟರ್ನ್ನು ಅಭಿವೃದ್ಧಿಪಡಿಸಲು ಅತ್ಯುನ್ನತ ಮಟ್ಟದ ಚಿಪ್ಗಳನ್ನು ಹೊರತುಪಡಿಸಿದರೆ ಬಹುತೇಕ ಇತರೆಲ್ಲ ಭಾಗಗಳನ್ನು ಚೀನಾ ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದ್ದು, ಅತಿವೇಗದ ಚಿಪ್ಗಳನ್ನು ಸಹ ಸಂಶೋಧಿಸುವ ಹಾದಿಯಲ್ಲಿದೆ. ಇದರಿಂದ ಧೃತಿಗೆಟ್ಟಿರುವ ಅಮೇರಿಕಾ ರೂ. 18,000 ಕೋಟಿ ವೆಚ್ಚದಲ್ಲಿ ಇದಕ್ಕಿಂತ 30 ಪಟ್ಟು ಶಕ್ತಿಶಾಲಿಯಾದ ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ.
ಸೂಪರ್ ಕಂಪ್ಯೂಟರ್ ಎಂದರೇನು?
ಅತ್ಯಂತ ವೇಗಾತಿವೇಗದಲ್ಲಿ ಸಂಕೀರ್ಣ ಲೆಕ್ಕಾಚಾರ ಮಾಡುವ ಸಾಮಥ್ರ್ಯವುಳ್ಳ ಶಕ್ತಿಶಾಲಿ ಕಂಪ್ಯೂಟರ್ನ್ನು ಸೂಪರ್ ಕಂಪ್ಯೂಟರ್ ಎನ್ನುತ್ತಾರೆ. ಇವುಗಳನ್ನು ಪರಮಾಣು ಸಂಶೋಧನೆ, ಭೂಮಿಯ ವಾತಾವರಣ ಅಭ್ಯಸಿಸುವ ಪ್ರಯೋಗಾಲಯ, ಬಾಹ್ಯಾಕಾಶ ಪ್ರಯೋಗ, ಜೈವಿಕ ಸಂಶೋಧನೆ, ಇತ್ಯಾದಿಯಂಥ ಸಂಶೋಧನಾ ಚಟುವಟಿಕೆಗಳಲ್ಲಿ ಕೋಟಿಗಟ್ಟಲೆ ದತ್ತಾಂಶಗಳನ್ನು ವಿಶ್ಲೇಷಿಸಿ ಲೆಕ್ಕ ಹಾಕಲು ಬಳಸುತ್ತಾರೆ. ನಾವು ಸಾಮಾನ್ಯವಾಗಿ (ಶಾಲಾ ಕಾಲೇಜು, ಶಿಕ್ಷಣ) ಬಳಸುವ ಕಂಪ್ಯೂಟರ್ ಒಂದು ಸೆಕೆಂಡಿಗೆ 15800 ಕೋಟಿ ಲೆಕ್ಕ ಹಾಕುವ ಸಾಮಥ್ರ್ಯ ಹೊಂದಿದೆ. ಆದರೆ ಮೇಲೆ ತಿಳಿಸಿದ ಸಂಕೀರ್ಣ ಲೆಕ್ಕಗಳಿಗೆ ಉತ್ತರ ಕಂಡುಹಿಡಿಯಲು ಈ ವೇಗ ಸಾಲದು. ಸಾಮಾನ್ಯ ಕಂಪ್ಯೂಟರ್ಗಿಂತಲೂ ನೂರಾರು ಸಾವಿರಾರು ಪಟ್ಟು ವೇಗ ಹೊಂದಿರುವ ಕಂಪ್ಯೂಟರನ್ನು ಸೂಪರ್ ಕಂಪ್ಯೂಟರ್ ಎನ್ನುತ್ತಾರೆ. ಇದನ್ನು ಇಡಲು ಸರಿಸುಮಾರು ಟೆನ್ನಿಸ್ ಕೋಟರ್್ನಷ್ಟು ಜಾಗ ಬೇಕು!
ಕಂಪ್ಯೂಟರ್ವೊಂದರಲ್ಲಿ ಸೆಂಟ್ರಲ್ ಪ್ರೊಸೇಸಿಂಗ್ ಘಟಕ (ಸಿಪಿಯು) ಇರುತ್ತದೆ. ಪ್ರತಿ ಸಿಪಿಯು ವಿನಲ್ಲಿ ಎಲೆಕ್ಟ್ರಾನಿಕ್ ಸಕ್ಯರ್ುಟ್ ಹೊಂದಿರುವ ಅಂಗೈ ಅಗಲದ ಅರೆವಾಹಕ ಗುಣವುಳ್ಳ ಸಣ್ಣ ಪ್ಲೇಟ್ ಇರುತ್ತದೆ. ಇದನ್ನೇ ಚಿಪ್ ಎಂದು ಕರೆಯುವುದು. ಇಂಥಹ ಚಿಪ್ಗಳನ್ನು ಉಪಕರಣವೊಂದರ ಮೆದುಳಿನಂತೆ ಎಲ್ಲ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ, ಕಂಪ್ಯೂಟರ್, ಮೊಬೈಲ್ ಪೋನ್ ಮತ್ತು ಗೃಹೋಪಯೋಗಿ ಉಪಕರಣಗಳಲ್ಲಿ ಬಳಸಲಾಗುತ್ತದೆ. ಸೂಪರ್ ಕಂಪ್ಯೂಟರ್ ಒಂದರಲ್ಲಿ ಸಾಮಾನ್ಯವಾಗಿ 2000 ಚಿಪ್ ಇರುತ್ತವೆ. ಚೀನಾ ಅಭಿವೃದ್ಧಿಪಡಿಸಿರುವ ಟಿಯನ್ಹೆ-2 ಸೂಪರ್ ಕಂಪ್ಯೂಟರ್ನಲ್ಲಿ ಸುಮಾರು 32,000 ಚಿಪ್ಗಳಿವೆ.