ರಾಜ್ಯಾದ್ಯಂತದ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆಗಳು ನಡೆಯುತ್ತಿವೆ. ಗಲ್ಲಿಗಲ್ಲಿಗಳಲ್ಲೂ ಚುನಾವಣೆಯ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಕೆಲವೆಡೆ ಅವಿರೋಧ ಆಯ್ಕೆ ನಡೆಯುತ್ತಿದ್ದರೆ, ಇನ್ನು ಕೆಲವೆಡೆ ಸ್ಥಾನಗಳನ್ನು ಹರಾಜು ಹಾಕಲಾಗುತ್ತಿದೆ. ಗ್ರಾಪಂ ಚುನಾವಣೆ ಹೇಗೆ ನಡೆಯುತ್ತಿವೆ? ಗ್ರಾಮೀಣಾಭಿವೃದ್ಧಿಗೆ ಈ ಚುನಾವಣೆಗಳು ಸುವರ್ಣವಾಕಾಶವನ್ನು ನೀಡುತ್ತವಾ? ಪಕ್ಷರಹಿತವಾಗಿ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲು ಸಾಧ್ಯವೆ? ಈ ತಳ ಮಟ್ಟದ ಚುನಾವಣೆಯನ್ನು ಗೆಲ್ಲಲ್ಲು ರಾಜಕೀಯ ಪಕ್ಷಗಳು ನಡೆಸಿರುವ ಲೆಕ್ಕಾಚಾರವೇನು? ಎಂಬುದು ಕೂತುಹಲಕ್ಕೆ ಕಾರಣವಾಗಿದೆ.
ಗ್ರಾಮ ಚಂಚಾಯತ್ ಚುನಾವಣೆಗಳು ಎರಡು ಹಂತಗಳಲ್ಲಿ ಈ ಚುನಾವಣೆ ನಡೆಯಲಿದ್ದು, ಮೊದಲನೇ ಹಂತದ ಮತದಾನವು ಡಿಸೆಂಬರ್ 22 ರಂದು ನಡೆದರೆ, ಎರಡನೆ ಹಂತದ ಮತದಾನ ಡಿಸೆಂಬರ್ 27ಕ್ಕೆ ನಡೆಯಲಿದೆ. ಪ್ರಸ್ತುತ ಗ್ರಾಮ ಪಂಚಾಯ್ತಿಗಳಿಗೆ ಅಂದಾಜು 2.97 ಕೋಟಿ ಮತದಾರರು ಇದ್ದು, 5,762 ಗ್ರಾಮ ಪಂಚಾಯತಿಗಳಿಗೆ 92,121 ಸದಸ್ಯರುಗಳ ಆಯ್ಕೆ ನಡೆಯಲಿದೆ. ಇದರಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರು ಇರುತ್ತಾರೆ.
ಈ ಗ್ರಾಮ ಪಂಚಾಯ್ತಿ ಚುನಾವಣೆಗಳು ಪಕ್ಷ-ರಹಿತವಾಗಿ ನಡೆಯಲಿದೆ. ಆದರೆ ವಾಸ್ತವವಾಗಿ ಅದು ಬಹುತೇಕವಾಗಿ ರಾಜಕೀಯ ಪಕ್ಷಗಳ ಬೆಂಬಲದಿಂದ ಕೂಡಿರುವಂತದ್ದನ್ನು ನಾವು ಬಹುತೇಕ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೋಡುತ್ತೇವೆ. ಇಲ್ಲಿಯು ಕೂಡಾ ಜಾತಿ ಬಲ, ಹಣ ಬಲ ಕೆಲಸ ಮಾಡುತ್ತಿರುತ್ತದೆ. ಗೆಲ್ಲಬೇಕು ಎನ್ನುವ ಕಾರಣಕ್ಕೆ ಅಭ್ಯರ್ಥಿ ಅನ್ಯಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಚುನಾವಣೆ ಎದುರಿಸುವುದನ್ನು ನಾವು ನೋಡ್ತಾ ಬಂದಿದ್ದೇವೆ.
ಗ್ರಾಮ ಪಂಚಾಯ್ತಿ ಸ್ಥಳೀಯಾಡಳಿತವು ಗ್ರಾಮಗಳ ವ್ಯವಸ್ಥಿತ ಅಭಿವೃದ್ಧಿಗೆ ಉತ್ತಮ ವೇದಿಕೆಯಾಗಿದ್ದು, ಇದು ಜನರ ಪಾಲ್ಗೊಳ್ಳುವಿಕೆ ಮತ್ತು ಸಹಭಾಗಿತ್ವದ ಮೂಲಕ ಕೆಳ ಹಂತದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ವ್ಯವಸ್ಥೆಯಾಗಿದೆ. ಇದನ್ನು ಸದ್ಭಳಕೆ ಮಾಡಿಕೊಂಡರೆ ಅಭಿವೃದ್ಧಿ ಹೊಂದಿದ ಉತ್ತಮ ಗ್ರಾಮಗಳ ನಿರ್ಮಾಣ ಕಷ್ಟವೇನಲ್ಲ, ಈ ಮೂಲಕ ಗ್ರಾಮ ಮಟ್ಟದಲ್ಲಿ ಸಣ್ಣ ಸಣ್ಣ ಕ್ರಾಂತಿ ಮಾಡಬಹುದು. ಕೆಲವೆಡೆ ಈ ಪ್ರಯತ್ನಗಳು ನಡೆದಿವೆ, ಇನ್ನು ಕೆಲವೆಡೆ ಅವಿರೋಧ ಆಯ್ಕೆಗಳು ನಡೆಯುತ್ತಿವೆ. ಇನ್ನೂ ಕೆಲವಡೆ ಸ್ಥಾನಗಳನ್ನು ಹರಾಜು ಹಾಕುವ ಪ್ರಕ್ರೀಯೆಗಳು ಕೂಡಾ ನಡೆಯುತ್ತಿವೆ.
ಗ್ರಾಮೀಣ ಪ್ರದೇಶದಲ್ಲಿ ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಬದಲು ಹರಾಜು ಹಾಕಿ ಸ್ಥಾನವನ್ನು ಪಡೆಯುವಂತದ್ದು ಗ್ರಾಮ ಪಂಚಾಯತಿ ಚುನಾವಣಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಡಿವೈಎಫ್ಐ ರಾಜ್ಯ ಮುಖಂಡ ಸಂತೋಷ ಬಜಾಲ್ ಪ್ರತಿಕ್ರೀಯೆ ನೀಡಿದ್ದಾರೆ.
ಗ್ರಾಮ ಪಂಚಾಯತಿ ಸ್ಥಾನಗಳ ಹರಾಜು ಪ್ರಕ್ರೀಯೆಗೆ ಚಿಂತಕರಾದ ರವಿಕೃಷ್ಣಾರೆಡ್ಡಿ ಪ್ರತಿಕ್ರೀಯೆ ನೀಡಿದ್ದು, ಭ್ರಾಷ್ಟಾಚಾರವನ್ನು ಗ್ರಾಮ ಮಟ್ಟದಿಂದ ತೆಗೆದು ಹಾಕಬೇಕು ಎಂದು ಅವರು ಕರೆ ನೀಡಿದ್ದಾರೆ.
ಕರ್ನಾಟಕದಲ್ಲಿ 60ರ ದಶಕದಿಂದಲೂ ಗ್ರಾಮ ಪಂಚಾಯತಿ (ಮಂಡಲ ಪಂಚಾಯಿತಿ) ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು ಮತ್ತು ಈ ನಿಟ್ಟಿನಲ್ಲಿ ದೇಶಕ್ಕೆ ಮಾದರಿಯಾಗುವ ವ್ಯವಸ್ಥೆ ಇತ್ತು. 1992ರಲ್ಲಿ ಸಂವಿಧಾನದ 73ನೇ ತಿದ್ದುಪಡಿ ಮೂಲಕ ಈ ವ್ಯವಸ್ಥೆಯನ್ನು ಭದ್ರಗೊಳಿಸಲಾಯಿತು. ಆದರೆ, ಉತ್ತಮ ಪ್ರಜಾಪ್ರಭುತ್ವ ನಿರ್ಮಿಸುವ ಪರಿಕಲ್ಪನೆಯಲ್ಲಿ ರೂಪಿಸಿರುವ ಪಂಚಾಯ್ತಿ ರಾಜ್ ವ್ಯವಸ್ಥೆಯಲ್ಲಿ ಭ್ರಷ್ಟರು ಮತ್ತು ಅದಕ್ಷ ರೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡು ಭ್ರಷ್ಟಾಚಾರವನ್ನು ಗ್ರಾಮ ಮಟ್ಟಕ್ಕೂ ತಂದಿದ್ದಾರೆ.
ಊರಿಗೆ ದೇವಸ್ಥಾನ ಕಟ್ಟಿಸಿಕೊಳ್ಳಲು, ದೇಣಿಗೆ ಪಡೆಯಲು ಅಥವಾ ಇನ್ನಾವುದೋ ಒಂದು ಉಪಕಾರ ಮಾಡುವ ಹೆಸರಿನಲ್ಲಿ ಅವಿರೋಧ ಆಯ್ಕೆ ಎಂದು ಹೇಳಿ, ಮುಂದೆ ಅವರು ಅಕ್ರಮವಾಗಿ ಮರಳು, ಕಲ್ಲು, ಖನಿಜ ಮತ್ತು ಅರಣ್ಯ ದೋಚಲು ಅನುವು ಮಾಡಿಕೊಡುವ, ಹಾಗೂ ಮತ್ತೊಬ್ಬರು ನಾಮಪತ್ರ ಸಲ್ಲಿಸದಂತೆ ಒತ್ತಡ ಹಾಕಿ ಅಥವಾ ಒಟ್ಟಾರೆ ಅವಿರೋಧವಾಗಿ ಆಯ್ಕೆಯಾಗುವ ಅನಿಷ್ಠ ಪದ್ಧತಿ ರೂಢಿಗೆ ಬರುತ್ತಿದೆ. ಹೀಗೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರುತ್ತಿದ್ದಾರೆ. ಇವೆಲ್ಲಾ ತೊಲಗಬೇಕು ಎಂದು ಚಿಂತಕ ರವಿಕೃಷ್ಣಾರೆಡ್ಡಿ ಆಗ್ರಹಿಸಿದ್ದಾರೆ.
ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಉತ್ತಮ ಅವಕಾಶವಾಗಿದೆ. ನಮ್ಮಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಗ್ರಾಮಗಳ ಅಭಿವೃದ್ಧಿ ಮೂಲಕ ರಾಜ್ಯ ಮತ್ತು ದೇಶದ ಅಭಿವೃದ್ಧಿ ಮಾಡಬಹುದಾಗಿದೆ ಎಂದು ಕೆಲ ಸ್ಪರ್ಧಿಗಳು ಜನಶಕ್ತಿ ಮೀಡಿಯಾ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚುನಾವಣಾ ಆಯೋಗ ಒಬ್ಬ ಅಭ್ಯರ್ಥಿಗೆ 10,000 ರೂ ಗಳನ್ನು ಖರ್ಚು ನೀಡಲು ಅವಕಾಶವನ್ನು ನೀಡಿದೆ. ನಾಲ್ಕೈದು ಸಾವಿರ ರೂ. ನಲ್ಲಿ ನ್ಯಾಯಯುತವಾದ ಚುನಾವಣೆಯನ್ನು ನಡೆಸಬಹುದಾಗಿದೆ. ಹಲವು ಕಡೆ ಲಕ್ಷಾಂತರ ರೂ ಗಳನ್ನು ಖರ್ಚು ಮಾಡಿ ಚುನಾವಣೆಗಳನ್ನು ನಡೆಸಲಾಗುತ್ತಿದೆ. ಆದರೂ ರಾಜ್ಯ ಚುನಾವಣಾ ಆಯೋಗ ಅದು ಜಿಲ್ಲಾಧಿಕಾರಿಗಳ ವ್ಯಾಪ್ತಿಯದ್ದು ಎಂದು ಕಣ್ಣಿಗೆ ಕಂಡರು ಕಾಣದಂತೆ ನಾಟಕವಾಡುತ್ತಿದೆ.
ಇನ್ನೂ ಈ ಚುನಾವಣೆ ಪಕ್ಷರಹಿತವಾಗಿದ್ದು ಎಂದು ಹೇಳಲಾಗುತ್ತಿದೆ ಆದರೆ ರಾಜಕೀಯ ಪಕ್ಷಗಳು ತಮ್ಮ ಫ್ಲಾಗ್ ಹಾಗೂ ಪಕ್ಷದ ಹೆಸರಿನ ಕರ ಪತ್ರವನ್ನು ಹೊರತು ಪಡಿಸಿ ಉಳಿದೆಲ್ಲ ಕೆಲಸವನ್ನು ಮಾಡುತ್ತಿವೆ. ಇದು ಪಂಚಾಯತ್ ರಾಜ್ ಆಶಯಕ್ಕೆ ವಿರುದ್ದವಾದ್ದು ಎಂದು ಸಾರ್ವಜನಿಕರು ಆಕ್ರೊಶವನ್ನು ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷಗಳು ಗ್ರಾ.ಪಂ ಚುನಾವಣೆಗೆ ಎಂಟ್ರಿ ಆಗಿರುವುದನ್ನು ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ. ಈ ಸಾರ್ವತ್ರಿಕ ಚುನಾವಣೆ ಪಕ್ಷ ರಹಿತವಾಗಿ ನಡೆಯಲಿದೆ. ಹೀಗಾಗಿ, ರಾಜಕೀಯ ಮುಖಂಡರ ಭಾವಚಿತ್ರ, ರಾಜಕೀಯ ಪಕ್ಷಗಳ ಚಿಹ್ನೆ ಇರುವ ಕರಪತ್ರಗಳು, ಕಟೌಟ್‌ಗಳು, ಬ್ಯಾನರ್‌ಗಳ ಮೂಲಕ ಅಭ್ಯರ್ಥಿಗಳು ಪ್ರಚಾರ ಮಾಡಬಾರದು. ಈ ನಿಯಮ ಉಲ್ಲಂಘಿಸಿದರೆ, ಅಂಥ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಂಡು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಡಳಿತಗಳಿಗೆ ಆಯೋಗ ಸ್ಪಷ್ಟ ಸೂಚನೆ ನೀಡಿದೆ.
ಆದರೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಸಂಪ್ರದಾಯಗಳನ್ನು ಗಾಳಿಗೆ ತೂರಿ ಪಕ್ಷದ ನೆಲೆಯಲ್ಲಿ ಸಭೆ, ಸಮಾರಂಭಗಳನ್ನು ನಡೆಸಿ, ಗ್ರಾಮ ಪಂಚಾಯಿತಿ ಚುನಾವಣೆಯನ್ನು ರಾಜಕೀಯಗೊಳಿಸುತ್ತಿರುವುದು ಕಂಡು ಬರುತಿದೆ. ಗ್ರಾ.ಪಂ ಚುನಾವಣೆಗಳು ಮುಂದಿನ ವಿಧಾನಸಭೆಗೆ ಬಲವನ್ನು ತುಂಬಲಿವೆ ಎಂಬುದು ಮೂರು ಪಕ್ಷಗಳ ಲೆಕ್ಕಾಚಾರವಾಗಿದೆ.
ಒಟ್ಟಾರೆ ಗ್ರಾಮ ಪಂಚಾಯತ ಚುನಾವಣೆಯ ಸದ್ದು ಗಲ್ಲಿ ಗಲ್ಲಿಯಲ್ಲೂ ಕೇಳಿ ಬರುತ್ತಿದೆ. ಅನ್ಯ ಮಾರ್ಗಗಳ ನಡುವೆಯು ಕೆಲ ಪ್ರಮಾಣಿಕ ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿಯ ಕನಸನ್ನು ಕಾಣುತ್ತಿದ್ದಾರೆ. ಈ ಚುನಾವಣೆಯಲ್ಲಿ ಯಾರೂ ಗೆಲ್ಲಬಹುದು? ಪ್ರಮಾಣಿಕರ ಕನಸ್ಸು ನನಸಾಗಬಹುದಾ? ಹಣ-ಹೆಂಡ, ಭ್ರಷ್ಟಾಚಾರದ ವಿರುದ್ಧ ಮತದಾರರು ಸಿಡಿದೇಳಬಹುದಾ? ಡಿಸಂಬರ್ 30 ರವರೆ ಕಾದುನೋಡಬೇಕಾಗಿದೆ.