- ಕೋವಿಡ್-19 ಹರಡುವಿಕೆ ತಡೆಗಟ್ಟುವ ಕಾರ್ಯ ಯೋಜನೆಗಳಲ್ಲಿ 27 ದೇಶಗಳಲ್ಲಿ ಕ್ಯೂಬಾ ಮುಂಚೂಣಿ
- ಅಮೆರಿಕ ನಿರಂತರ ಅಪಪ್ಪಚಾರದ ದಾಳಿ
ವಿಶ್ವದಾದ್ಯಂತ ಕೋವಿಡ್-19 ಹರಡುವಿಕೆ ತಡೆಗಟ್ಟುವ ಕಾರ್ಯ ಯೋಜನೆಗಳಲ್ಲಿ 27 ದೇಶಗಳಲ್ಲಿ ಮುಂಚೂಣಿಯಲ್ಲಿರುವ ಕ್ಯೂಬಾದ ವೈದ್ಯರ ಮೇಲೆ ನಿರಂತರ ಅಮೆರಿಕದ ಅಪಪ್ಪಚಾರದ ದಾಳಿಗಳ ಮದ್ಯೆಯೂ, ನಿರಂತರವಾಗಿ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇವರೆಲ್ಲ ಕ್ಯೂಬಾದ ‘ಹೆನ್ರಿ ರೀವ್ ಇಂಟನ್ರ್ಯಾಷನಲ್ ಮೆಡಿಕಲ್ ಬ್ರಿಗೇಡ್’ ಗೆ ಸೇರಿದವರು. ಈ ವೈದ್ಯರಿಗೆ ನೋಬಲ್ ಶಾಂತಿ ಪಾರಿತೋಷಕ ಪ್ರಶಸ್ತಿಯನ್ನು ಕೊಡಬೇಕೆಂದು ಒತ್ತಾಯಿಸುವ ಅಂತರ್ರಾಷ್ಟ್ರೀಯ ಅಭಿಯಾನವೊಂದು ನಡೆಯುತ್ತಿದೆ. ಇದರ ಹಿಂದಿರುವ ಕಾರಣದ ಕುರಿತು ಈ ಲೇಖನ.
ಐದು ವರ್ಷಗಳ ಹಿಂದೆ ನಡೆದ ಪ್ರಕರಣ ಇದಾಗಿದೆ. ಎಬೋಲಾ ಎಂಬ ವೈರಸ್ ಕಾಯಿಲೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ರೋಗಾಣು 1976 ರಲ್ಲಿ ಮೊದಲು ದಕ್ಷಿಣ ಆಫ್ರಿಕಾ ದಲ್ಲಿ ಪತ್ತೆಯಾಗಿದ್ದು, ಆ ನಂತರ ಇದರ ಭೀಕರತೆ 2014 ರಲ್ಲಿ ಗರಿಗೆದರಿತ್ತು. ಎಬೋಲಾ ಹರಡುವುದನ್ನು ತಡೆಯಲು ಪಶ್ಚಿಮ ಆಫ್ರಿಕಾದಲ್ಲಿ ಕಾರ್ಯ ನಿರ್ವಹಿಸಿದ ಕ್ಯೂಬಾದ ಒಬ್ಬ ವೈದ್ಯ, ಇವರ ಹೆಸರು ಡಾ.ಫೆಲಿಕ್ಸ್ ಬೀಜ್, ಇವರ ರೋಮಾಂಚಕ ಕಥೆಯನ್ನು ಕೇಳಿಲ್ಲದಿದ್ದರೆ, ಮುಂದೆ ಓದಿ.
ಭೀಕರ ಎಬೋಲಾ ಹರಡುವಿಕೆಯನ್ನು ತಡೆಗಟ್ಟಲು, ‘ಹೆನ್ರಿ ರೀವ್ ಇಂಟನ್ರ್ಯಾಷನಲ್ ಮೆಡಿಕಲ್ ಬ್ರಿಗೇಡ್’ ನ 165 ಕ್ಯೂಬನ್ ವೈದ್ಯರು ದಕ್ಷಿಣ ಆಫ್ರಿಕಾದ ಸಿಯೆಲ್ ಲಿಯೋ ಗೆ ಹೋದರು. ವೈದ್ಯರ ತಂಡದಲ್ಲಿ ಡಾ. ಫೆಲೆಕ್ಸ್ ಬೀಜ್ ಒಬ್ಬರು. ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಡಾ.ಬೀಜ್ ರವರು ತೀವ್ರ ಎಬೋಲಾ ಸೋಂಕಿತರಾದರು. ರೋಗ ಇವರ ಆರೋಗ್ಯ ಸ್ಥಿತಿಯನ್ನು ಹದಗೆಡಿಸಿತು. ಆದಾಗ್ಯೂ ಡಾ.ಬೀಜ್ ಧೃತಿಗೆಡಲಿಲ್ಲ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ.ಎಚ್.ಒ) ಮತ್ತು ಕ್ಯೂಬನ್ ಸರ್ಕಾರವು ಡಾ. ಬೀಜ್ ರನ್ನು ಚಿಕಿತ್ಸೆಗಾಗಿ ಜಿನೀವಾ ಕ್ಕೆ ಕರೆದೊಯ್ಯಿತು. ಅಲ್ಲಿ ಅವರಿಗೆ ಹೆಪಿಟಾಕ್ಸ್ ಯೂನಿವರ್ಸಿಟಿ ಡಿ ಜೆನೆವ್ ನಲ್ಲಿ ಚಿಕಿತ್ಸೆ ನೀಡಲಾಯಿತು. ಅವರು ಎಬೋಲಾ ಕಾಯಿಲೆಯೊಂದಿಗೆ ಸಾಕಷ್ಟು ಹೋರಾಡಿದರು, ಅವರು ಪಡೆದ ಆರೋಗ್ಯ ಆರೈಕೆ ಮಾತ್ರ ಅದ್ಬುತವಾಗಿತ್ತು. ಹೀಗಾಗಿ, ಅವರಲ್ಲಿ ಆವರಿಸಿಕೊಂಡಿದ್ದ ಎಬೋಲಾ ಕಡಿಮೆಯಾಯಿತು. ಇದಕ್ಕಾಗಿ ಅವರು ಆರೈಕೆ ಮಾಡಿದ ವೈದ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಆ ನಂತರ ಡಾ.ಬೀಜ್ ರವರನ್ನು ವಿಮಾನದ ಮೂಲಕ ಕ್ಯೂಬಾ ಕ್ಕೆ ಕರೆದೊಯ್ಯಲಾಯಿತು. ಹವಾನ’ ವಿಮಾನ ನಿಲ್ದಾಣ ದಲ್ಲಿ ಡಾ.ಬೀಜ್ ರನ್ನು ಸ್ವಾಗತಿಸಲು, ಅವರ ಪತ್ನಿ, ಇಬ್ಬರು ಪುತ್ರರು ಮತ್ತು ಕ್ಯೂಬಾ ದ ಆರೋಗ್ಯ ಸಚಿವರು ಆಗಮಿಸಿದ್ದರು. ಕ್ಯೂಬಾನ್ ವೆಬ್ ಸೈಟ್ ಒಂದರಲ್ಲಿ, ವೈದ್ಯಕೀಯ ವಿದ್ಯಾರ್ಥಿ ಯುವಕ ಅಲೆಜಾಂಡ್ರೊ “ಕ್ಯೂಬಾ ನಿಮಗಾಗಿ ಕಾಯುತ್ತಿದೆ.” ಎಂದು ಬರೆದಿದ್ದ ಸಂದೇಶ ವೈರಲ್ ಆಗಿತ್ತು.
ಎಬೋಲಾ ವಿರುದ್ದ ಹೋರಾಡುತ್ತಿದ್ದ, ಇತರೆ ಕ್ಯೂಬನ್ ವೈದ್ಯರು ಡಾ.ಬೀಜ್ ರನ್ನು ಹುರಿದುಂಬಿಸಿದ್ದರು. “ಕ್ಯೂಬಾ ಈಸ್ ವಿತ್ ಫೆಲಿಕ್ಸ್ ಬೀಜ್” ಎಂಬ ಫೇಸ್ ಬುಕ್ ಪುಟವನ್ನು ಪ್ರಾರಂಭಿಸಲಾಯಿತು. ಇತರೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವರ ಹೆಸರಿನ ಹ್ಯಾಶ್ ಟ್ಯಾಗ್ ಕೂಡಾ ವೈರಲ್ ಆಗಿತ್ತು.
ಡಾ: ಫೆಲಿಕ್ಸ್ ಬೀಜ್ ನಿಧಾನವಾಗಿ ಚೇತರಿಸಿಕೊಂಡರು. ಆ ನಂತರ, ಎಬೋಲಾ ವಿರುದ್ದದ ತಮ್ಮ ಹೋರಾಟವನ್ನು ಮುಂದುವರಿಸಲು ಪಶ್ಚಿಮ ಆಫ್ರಿಕಾಕ್ಕೆ ಮರಳಲು ನಿರ್ಧರಿಸಿದರು. ಡಾ: ಫೆಲಿಕ್ಸ್ ಬೀಜ್ ಮತ್ತು ಇತರ ಕ್ಯೂಬನ್ ವೈದ್ಯರು ‘ಆಫ್ರಿಕಾ ಮತ್ತು ಜಗತ್ತಿಗೆ ಎಬೊಲ ಒಂದು ಆರೋಗ್ಯ ಸವಾಲು ಆಗಿರುವವರೆಗೆ ಇಲ್ಲೇ ಇರುತ್ತೇವೆ.’ ಎಂದಿದ್ದು. ಹಾಗನೇ ನಡೆದುಕೊಂಡರು ಕೂಡಾ. ಇದೊಂದು ಅದ್ಭುತ ಮಾನವೀಯ ಕಾರ್ಯವಾಗಿತ್ತು.
ಕ್ಯೂಬನ್ ವೈದ್ಯರಿಗೆ ನೋಬೆಲ್ ಶಾಂತಿ ಸೌಹಾರ್ದ ಪಾರಿತೋಷಕ ಪ್ರಶಸ್ತಿ ಗೆ ಇದಕ್ಕಿಂತ ಉತ್ತಮ ಕಾರ್ಯ ಬದ್ದತೆಯ ಸಾಕ್ಷಿ ಬೇರೆ ಬೇಕೆ?. ಈ ವಿಚಾರದಲ್ಲಿ ಅಂತರಾಷ್ಟ್ರೀಯ ಅಭಿಯಾನ ನಡೆಯುತ್ತಿದೆ. ಆರೋಗ್ಯ ಸಂರಕ್ಷಣೆ ಮತ್ತು ಆರೈಕೆ ಕಾರ್ಯದ ಮೂಲಕ ಕ್ಯೂಬನ್ ವೈದ್ಯರ ಅಂತರಾಷ್ಟ್ರೀಯ ಸೌಹಾರ್ದತೆ ಕ್ಯೂಬಾದ ಸಮಾಜವಾದಿ ಕಾರ್ಯಕ್ರಮದ ಅನಿವಾರ್ಯ ಅಂಗವಾಗಿದೆ.
ಕ್ಯೂಬನ್ ವೈದ್ಯರ ವಿರುದ್ದ ಅಮೆರಿಕದ ಅಪಪ್ರಚಾರ
ಡಾ: ಫೆಲಿಕ್ಸ್ ಬೀಜ್ ರವರು ಪಶ್ಚಿಮ ಆಪ್ರಿಕಾಕ್ಕೆ ಮತ್ತೆ ಹಿಂದಿರುಗಿ ಬಂದಾಗ, ಜಗತ್ತಿನ ಎಲ್ಲಾ ದೇಶಗಳಿಗೂ ಆಶ್ಚರ್ಯ ಏನಿಸಿತ್ತು. ಡಾ: ಬೀಜ್ ಅವರಲ್ಲಿದ್ದ ಕ್ಯಾಸ್ಟ್ರೋ ರವರ ಅಂತರಾಷ್ಟ್ರೀಯ ವೈದ್ಯಕೀಯ ಸೌಹಾರ್ದತೆ, ಅಂದರೆ ಸಮಾಜವಾದಿ ವೈದ್ಯಕೀಯ ಸೌಹಾರ್ದತೆಯಲ್ಲಿದ್ದ ಅನುಪಮ ಬದ್ಧತೆಯನ್ನು ಜಗತ್ತಿಗೆ ಎತ್ತಿ ತೋರಿಸಿತು. ಇದೊಂದು ಸಮಾಜವಾದಿ ಸೌಹಾರ್ದತೆಯ ಅಸಾಧಾರಣ ಬದ್ದತೆಯಾಗಿತ್ತು. ಇದನ್ನು ಯುಎಸ್ ಆಡಳಿತಗಾರರು ಹೇಗೆ ಸಹಿಸಿಕೊಳ್ಳಲು ಸಾಧ್ಯ ?.
ಹಾಗಾಗಿ, ಯುಎಸ್ ತನ್ನ ಅಪಪ್ರಚಾರವನ್ನು ಕ್ಯೂಬಾದ ವೈದ್ಯರ ವಿರುದ್ದ ಆರಂಭಿಸಲು ನಿರ್ಧರಿಸಿತು. ಯುಎಸ್ ತನ್ನ ಕಾಂಗ್ರೇಸ್ ನ ರಿಸರ್ಚ್ ಸರ್ವಿಸ್ ನ ಜೂನ್ 2019 ವರದಿಯಲ್ಲಿ, ವ್ಯಕ್ತಿಗಳ ಕಳ್ಳ ಸಾಗಣೆಯಲ್ಲಿ ಕ್ಯೂಬಾವನ್ನು ಶ್ರೇಣಿ 3 ಕ್ಕೆ ಇಳಿಸಿತ್ತು. ‘ವಿದೇಶಿ ವೈದ್ಯಕೀಯದ ಮಿಶನ್’ ಕಾರ್ಯಕ್ರಮದಲ್ಲಿ, ಬಲವಂತದಿಂದ ತೆಗೆದುಕೊಂಡ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕ್ಯೂಬಾ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂದು 2019 ರ ಯುಎಸ್ ಡಿಪಾರ್ಟ್ ಮೆಂಟ್ ನ ಆಪಾದನೆಗೆ ಯಾವುದೇ ಪರಾವೆಯಿರಲಿಲ್ಲ. ಹೀಗಾಗಿ, ಕ್ಯೂಬನ್ ವೈದ್ಯರ ವೈದ್ಯಕೀಯ ಅಂತರಾಷ್ಟ್ರೀಯ ಸೌಹಾರ್ದ ಕಾರ್ಯಾಚರಣೆ ಗಳನ್ನು ನಿಲ್ಲಿಸಲು, ಅವರನ್ನು ತಮ್ಮ ದೇಶಗಳಿಂದ ಹೊರಹಾಕಬೇಕೆಂದು ಟ್ರಂಪ್ ಆಡಳಿತವು ತನ್ನ ಮಿತ್ರ ರಾಷ್ಟ್ರಗಳ ಮೇಲೆ ಒತ್ತಡವನ್ನು ಹೇರಿತ್ತು.
ಮತ್ತೊಂದು, ಆಶ್ಚರ್ಯಕರ ಅಂಶವೆಂದರೆ, ವಾಷಿಂಗ್ಟನ್ ನ ಒತ್ತಡಕ್ಕೆ ಮಣಿದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಕೂಡಾ, ಕ್ಯೂಬನ್ ವೈದ್ಯರನ್ನು ತನಿಖೆಗೆ ಒಳಪಡಿಸಿತು. ಇದಕ್ಕೆ ಸಾಕ್ಷಿ ಎಂಬಂತೆ, ವಿಶ್ವ ಸಂಸ್ಥೆಯ ಗುಲಾಮಗಿರಿಯ ಸಮಕಾಲೀನ ರೂಪಗಳ ಬಗ್ಗೆ ವಿಶೇಷ ವರದಿ ಮಾಡುವ, ಪತ್ರಕರ್ತರಾದ ಊರ್ಮಿಳಾ ಭೂಲಾ ಮತ್ತು ಮಾರಿಯಾ ಗ್ರಾಜಿಯಾ ಜಿಯಾಮರಿನಾರೊ ಇವರು ವ್ಯಕ್ತಿಗಳ ಕಳ್ಳ ಸಾಗಾಣೆ ಕುರಿತ ಯುಎನ್ ನ ವಿಶೇಷ ವರದಿಗಾರರು. ಈ ಇಬ್ಬರೂ ವರದಿಗಾರರು 2019 ರ ನವೆಂಬರ್ ನಲ್ಲಿ ಕ್ಯೂಬನ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಈ ಪತ್ರಗಳಿಗೆ ಯಾವುದೇ ಸೂಕ್ತ ಪುರಾವೆಗಳು ಅಥವಾ ಹುರುಳು ಇರಲಿಲ್ಲ. ವರದಿಗಳು ವೈಜ್ಞಾನಿಕ ವಿಧಿ ವಿಧಾನಗಳಿಗಿಂತ ಹೆಚ್ಚಾಗಿ ಅವರ ಸೈದ್ದಾಂತಿಕ ಪ್ರೇರಿತ-ರಾಜಕೀಯ ವರದಿಯಾಗಿತ್ತು.
ಇದಕ್ಕೆ ಮುಂದುವರಿದ ಭಾಗವಾಗಿ 2020 ರ ಆರಂಭದಲ್ಲಿ, ಯುಎಸ್ ಸರ್ಕಾರವು ಕ್ಯೂಬನ್ ವೈದ್ಯಕೀಯ ಮಿಷನ್ ಕಾರ್ಯಕ್ರಮ ವನ್ನು ವಿಫಲಗೊಳಿಸುವ ಪ್ರಯತ್ನ ವನ್ನು ತೀವ್ರಗತಿಯಲ್ಲಿ ಮುಂದುವರಿಸಿತು. 2020 ರ ಜನವರಿ 12, ರಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಕ್ಯೂಬದ ‘ಈ ಮಿಷನ್ ಮಾನವ ಹಕ್ಕುಗಳ ಉಲಂಘನೆ” ಯಾಗಿದೆ. ಆದ್ದರಿಂದ, ಇದನ್ನು ಹಿಮ್ಮೆಟಿಸಬೇಕೆಂದು ಅತಿಥೇಯ ರಾಷ್ಟ್ರ ಗಳ ಮೇಲೆ ಒತ್ತಡ ಹೇರಿದ್ದರು.
ಇದಕ್ಕೆ ಅನುಗುಣವಾಗಿ, ಲ್ಯಾಟಿನ್ ಅಮೆರಿಕಾದ ಯುಎಸ್ ಮಿತ್ರ ರಾಷ್ಟ್ರಗಳಾದ ಬ್ರೆಜಿಲ್, ಬೊಲಿವಿಯ ಮತ್ತು ಈಕ್ವೇಡರ್ ದೇಶಗಳು ಕ್ಯೂಬನ್ ವೈದ್ಯಕೀಯ ಕಾರ್ಯಕರ್ತರನ್ನು ಹೊರ ಹಾಕಿದವು. ಬ್ರೆಜಿಲ್ ನಂತಹ ದೇಶಗಳಿಗೆ ಈ ನಿರ್ಧಾರ ಮುಂದೆ ಮಾರಕವಾಗಿ ಪರಿಣಮಿಸಿತು. ಕ್ಯೂಬನ್ ವೈದ್ಯರನ್ನು ಹೊರ ಹಾಕಿದ ನಂತರ, ಬ್ರೆಜಿಲ್ ನಲ್ಲಿ ಶಿಶು ಮರಣ ಮತ್ತು ನ್ಯುಮೋನಿಯಾ ಹೆಚ್ಚಾಗಿ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದುರಂತಮಯ ಪರಿಸ್ಥಿತಿ ಉಂಟಾಯಿತು. ಡಿಸೆಂಬರ್ 2019 ರಲ್ಲಿ ಕ್ಯೂಬನ್ ವೈದ್ಯರ ನ್ನು ಹೊರಹಾಕಿದ್ದ ಬೋಲ್ಸನಾರೊ ರವರು, ಕೋವಿಡ್-19 ವೈರಸ್ ಗೆ ಬ್ರೆಜಿಲ್ ತತ್ತರಿಸಿ ದುರಂತವಾದ ನಂತರ, ಮತ್ತೆ ಕ್ಯೂಬನ್ ವೈದ್ಯರು ಬ್ರೆಜಿಲ್ ನಲ್ಲೇ ಉಳಿಯಬೇಕೆಂದು ಬಯಸಿದ್ದರು.
ಜೀವವನ್ನು ಪಣಕಿಟ್ಟ ಕ್ಯೂಬನ್ ವೈದ್ಯರು
ಅಂತರಾಷ್ಟ್ರೀಯ ಸೌಹಾರ್ದತೆಯ ಮೆರಗು
ಕೋವಿಡ್-19 ಸೋಂಕಿನ ಸರಪಣಿಯನ್ನು ಮುರಿಯಲು ಕ್ಯೂಬನ್ ವೈದ್ಯಕೀಯ ಕಾರ್ಯಕರ್ತರು ಒಂದು ಕಡೆ, ತಮ್ಮ ಆರೋಗ್ಯವನ್ನು ಪಣಕಿಟ್ಟು ದುಡಿಯುತ್ತಿದ್ದಾರೆ. ಮತ್ತೊಂದೆಡೆ, ಕ್ಯೂಬನ್ ವಿಜ್ಞಾನಿಗಳು ರೋಗದ ವಿರುದ್ಧ ಹೋರಾಡಲು ‘ಇಂಟರ್ಫೇರಾನ್ ಆಲ್ಪಾ-2 ಬಿ ನಂತಹ ಔಷಧಿ ಗಳನ್ನು ಅಭಿವೃದ್ಧಿ ಪಡಿಸಿ, ತಮ್ಮ ಲಸಿಕೆ ಪ್ರಯೋಗಳ ಹಂತದಲ್ಲಿದೆ ಎಂದು ಘೋಷಿಸಿದ್ದಾರೆ. ಈ ಲಸಿಕೆಯನ್ನು ಖಾಸಗಿ ಆಸ್ತಿಯೆಂದು ಪರಿಗಣಿಸದೆ, ಅದನ್ನು ವಿಶ್ವದ ಜನರೊಂದಿಗೆ ಹಂಚಿಕೊಳ್ಳಲಾಗುವುದು ಎಂದಿದ್ದಾರೆ. ಇದು ಕ್ಯೂಬನ್ ವೈದ್ಯಕೀಯ ಅಂತರಾಷ್ಟ್ರೀಯ ಸೌಹಾರ್ದತೆಯ ನಿಷ್ಠೆಯನ್ನು ಎತ್ತಿ ತೋರಿಸುತ್ತದೆ.
ಆ ಮೂಲಕ, ಕ್ಯೂಬ ತಮ್ಮ ರಾಷ್ಟ್ರೀಯತೆಯ ಸ್ವಹಿತವನ್ನು ಎತ್ತಿಹಿಡಿಯುವುದಕ್ಕಿಂತ, ಮಿಗಿಲಾಗಿ ಅಂತರಾಷ್ಟ್ರೀಯ ಸೌಹಾರ್ದತೆಯನ್ನು ಮೆರೆಸಿದೆ. ಇಂತಹ ಗುಣಲಕ್ಷಣಗಳು ಸಮಾಜವಾದ ರಾಷ್ಟ್ರ ಗಳಿಂದ ಮಾತ್ರ ಸಾಧ್ಯ.
ಆಗಸ್ಟ್ 21 ರಂದು, ಕ್ಯೂಬಾ ದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಮೊದಲ ಕಾರ್ಯದರ್ಶಿ ರೌಲ್ ಕ್ಯಾಸ್ಟ್ರೋ ಅವರು ಫೆಡರೇಷನ್ ಆಫ್ ಕ್ಯೂಬನ್ ವುಮೆನ್(ಎಫ್.ಎಮ್.ಸಿ) ಸಭೆಯ 60 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಹೆನ್ರಿ ರೀವ್ ಬ್ರಿಗೇಡ್” ನ ವೈದ್ಯಕೀಯ ಕಾರ್ಯಕರ್ತರಲ್ಲಿ 61 ಪ್ರತಿಶತ ಮಹಿಳೆಯರು ಇದ್ದಾರೆ ಎಂದು ಉಲ್ಲೇಖಿಸಿದ್ದಾರೆ. 1960ರಲ್ಲಿ ಕ್ಯೂಬನ್ ರು, ಫಿಡಲ್ ಕ್ಯಾಸ್ಟ್ರೋ ನೇತೃತ್ವದಲ್ಲಿ “ವೈದ್ಯಕೀಯ ಅಂತರಾಷ್ಟ್ರೀಯ ಸೌಹಾರ್ದತೆ” ಯ ಕಾರ್ಯಕ್ರಮವನ್ನು ಆರಂಭಿಸಿದ ನಂತರ, ಇಲ್ಲಿಯವರೆಗೂ ಸುಮಾರು 4 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಕಾರ್ಯ ಕರ್ತರು 40 ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಈ ವೈದ್ಯಕೀಯ ಕಾರ್ಯ ಕರ್ತರು ” ವೈದ್ಯಕೀಯ ಆರೈಕೆ ಮತ್ತು ಅಂತರಾಷ್ಟ್ರೀಯ ಸೌಹಾರ್ದತೆ” ಎಂಬ ಅವಳಿ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಕ್ಯೂಬನ್ ರು ಒಬ್ಬ ಡಾಕ್ಟರ್ ಮತ್ತು ಕಮ್ಯುನಿಸ್ಟ್ ಕ್ರಾಂತಿಕಾರಿಯಾಗಿದ್ದ ಚೆ ಗುವೇರಾ ರವರ ಬೋಧನೆಗಳಿಂದ ಕಲಿತ ಪಾಠ. ಹಾಗಾಗಿ ‘ಹೆನ್ರಿ ರೀವ್ ಇಂಟನ್ರ್ಯಾಷನಲ್ ಮೆಡಿಕಲ್ ಬ್ರಿಗೇಡ್’ ನ ಇವರು ನೋಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು. ನೊಬೆಲ್ ಆಯ್ಕೆ ಸಮಿತಿ ಇದನ್ನು ಗಮನಿಸಬೇಕು.
– ವಿಜಯ ಪ್ರಸಾದ್
(ಸಂಗ್ರಹಾನುವಾದ : ನಾಗರಾಜ್ ನಂಜುಂಡಯ್ಯ)