ಕೋವಿಡ್19 ರಿಂದಾಗಿ ಭೀಕರ ಆರ್ಥಿಕ ಪರಿಸ್ಥಿತಿ: ಮುಂದೇನು ಮಾಡಬೇಕು?

“ನಿಮ್ಮೆಲ್ಲರನ್ನೂ ಖಿನ್ನರನ್ನಾಗಿಸುವುದು ನನ್ನ ಮಾತುಗಳ ಉದ್ದೇಶವಲ್ಲ. ಆದರೂ, ಕೊರೋನಾ ಅಂಟುರೋಗವು ಬೀರುವ ಪರಿಣಾಮಗಳು ಅದೆಷ್ಟು ಭೀಕರವಾಗಿರುತ್ತವೆ ಎಂದರೆ, ಅದನ್ನು ಹೋಲುವಂತಹ ಇನ್ನೊಂದನ್ನು ನಾವು ಈ ವರೆಗೆ ಕಂಡಿಲ್ಲ. ೨೦೦೮ ರ ಹಣಕಾಸು ಬಿಕ್ಕಟ್ಟಾಗಲಿ ಅಥವಾ ೧೯೩೦ರ ದಶಕದ ಮಹಾ ಕುಸಿತವಾಗಲಿ ಅಥವಾ ಎರಡು ಮಹಾ ಯದ್ಧಗಳಾಗಲಿ ಅದರ ಮುಂದೆ ಏನೇನೂ ಅಲ್ಲ. ಅದು ಜನಜೀವನವನ್ನು ಸ್ಥಬ್ದಗೊಳಿಸಿದೆ. ಜೀವನೋಪಾಯಗಳನ್ನು ಈಗಾಗಲೇ ನಾಶಪಡಿಸಿದೆ. ಸರಬರಾಜು ಕೊಂಡಿಗಳನ್ನು ಕತ್ತರಿಸಿದೆ. ಹಾಗಾಗಿ, ಜಾಗತಿಕ ಆರ್ಥಿಕ ಪರಿಸ್ಥಿತಿ ಅವೆಲ್ಲವುಕ್ಕಿಂತಲೂ ಕೆಟ್ಟದ್ದಾಗಿದೆ”. ಇವು, ಸಧ್ಯದ ಜಾಗತಿಕ ಪರಿಸ್ಥಿತಿಯ ಬಗ್ಗೆ ನಡೆದ ಒಂದು ಸಂವಾದದಲ್ಲಿ ಪ್ರೊ. ಜಯತಿ ಘೋಷ್ ಅವರ ಆರಂಭದ ನುಡಿಗಳು.

ಪ್ರೊ. ಜಯತಿ ಘೋಷ್

ಕೋವಿಡ್ ೧೯ ಸೋಂಕಿನಿಂದ ಇಡೀ ಜಗತ್ತೇ ತತ್ತರಿಸಿರುವ ಸಂದರ್ಭದಲ್ಲಿ, ಅದರಿಂದಾಗುವ ಆರ್ಥಿಕ ದುಷ್ಪರಿಣಾಮಗಳ ಬಗ್ಗೆ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೆಲವು ಪ್ರಗತಿಪರ ಅರ್ಥಶಾಸ್ತ್ರಜ್ಞರ ನಡುವೆ ಇತ್ತೀಚೆಗೆ ಒಂದು ಇಂಟರ್ನೆಟ್ ಸಂವಾದ (ವೆಬಿನಾರ್) ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಪ್ರೊ. ಜಯತಿ ಘೋಷ್, ಈ ಆಘಾತಕಾರಿ ಬಿಕ್ಕಟ್ಟಿನಿಂದ ಹೊರ ಬರುವುದು, ಮುಂದೆ ಅನುಸರಿಸಬೇಕಾದ ದಾರಿ ಇವುಗಳಿಗೆ ಸಂಬಂಧಿಸಿದ ನೀತಿ ಮತ್ತು ಕಾರ್ಯಸೂಚಿ ಇವುಗಳ ಬಗ್ಗೆ ಆಡಿದ ಮಾತಿನ ಸಾರಾಂಶ ಇಲ್ಲಿದೆ. 

ಸಂಗ್ರಹಾನುವಾದ: ಕೆ.ಎಂ.ನಾಗರಾಜ್

https://www.newsclick.in/covid-19-what-be-done

ನಾವೀಗ ಅನುಭವಿಸುತ್ತಿರುವ ಪರಿಸ್ಥಿತಿ ಹಿಂದೆಂದೂ ಕಂಡರಿಯದಂತದ್ದು. ಕೋವಿಡ್ ೧೯ರ ಬಗ್ಗೆ ಸಮಗ್ರ ಮಾಹಿತಿ ಇನ್ನೂ ಲಭ್ಯವಿಲ್ಲ. ಏಕ ಕಾಲದಲ್ಲಿ ಜಗತ್ತಿನ ಬಹುತೇಕ ಪ್ರದೇಶಗಳಲ್ಲಿ ಕೊರೊನಾ ನಿಮಿತ್ತದ ಲಾಕ್‌ಡೌನ್ ಸಹ ಹಿಂದೆಂದೂ ಕಂಡರಿಯದಂತದ್ದು. ಇಡೀ ಜಗತ್ತಿನಲ್ಲಿ ಆರ್ಥಿಕ ಚಟುವಟಿಕೆಗಳು ಸ್ತಬ್ದಗೊಂಡಿರುವುದರ ಪರಿಣಾಮಗಳು ಭೀಕರವಾಗಿರುತ್ತವೆ.

ಬೇಡಿಕೆ ಕುಸಿದು ಬಿದ್ದಿದೆ. ಜನ ಜೀವನ ಮೂರಾ ಬಟ್ಟೆಯಾಗಿದೆ. ಜನರು ತಮ್ಮ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳದಂತಾಗಿದೆ. ಈ ಅವಧಿಯಲ್ಲಿ ಅವರಿಗೆ ಕೂಲಿ ಇಲ್ಲ. ಸಂಬಳ ಇಲ್ಲ. ತಾವು ಉತ್ಪಾದಿಸಿದ ವಸ್ತುಗಳನ್ನು ಅವರು ಮಾರುವಂತಿಲ್ಲ. ಈ ಕಾರಣಗಳಿಂದಾಗಿ ವರಮಾನಗಳು ಇಲ್ಲವಾಗಿರುವುದರಿಂದ ಬೇಡಿಕೆ ನೆಲಕ್ಕೆ ಬಿದ್ದಿದೆ. ಅದೇ ಹೊತ್ತಿನಲ್ಲಿ ಸಾಮಾನು ಸರಂಜಾಮುಗಳ ಸರಬರಾಜನ್ನು ಕೂಡ ತಗ್ಗಿಸಲಾಗಿದೆ. ಸರಬರಾಜು ಕೊಂಡಿಗಳು ಮುರಿದು ಬಿದ್ದಿವೆ. ಹಾಗಾಗಿ,  ಸಧ್ಯದಲ್ಲೇ ಬಹಳಷ್ಟು ದೇಶಗಳು ಆಹಾರ, ಔಷದಿ ಮುಂತಾದ ಅಗತ್ಯ ವಸ್ತುಗಳ ಜೊತೆಗೆ ಹಲವಾರು ಸರಕು ಸಾಮಗ್ರಿಗಳ ಕೊರತೆಯನ್ನು ಎದುರಿಸಬೇಕಾಗುತ್ತದೆ.

ಖರೆ ಎಂದರೆ, ಇಂತಹ ಪರಿಸ್ಥಿತಿಯನ್ನು ಹೋಲುವಂತಹ ಘಟನೆಗಳು ಜಾಗತಿಕ ಬಂಡವಾಳಶಾಹಿಯ ಇತಿಹಾಸದಲ್ಲಿ ಕಾಣಲು ಸಿಗುವುದಿಲ್ಲ. ಈ ಪರಿಸ್ಥಿತಿಯಿಂದ ಒಂದು ಅಂಶ ಸ್ಪಷ್ಟವಾಗಿ ಕಾಣುತ್ತಿದೆ. ಅಸಮಾನತೆಗಳು ಗಣನೀಯವಾಗಿ ಹೆಚ್ಚುತ್ತಿವೆ. ಕೊರೊನಾ ಪೂರ್ವದಲ್ಲಿ ಅಸಮಾನತೆಗಳು ಉತ್ತುಂಗ ತಲುಪಿವೆ ಎಂದು ಭಾವಿಸಿದ್ದೆವು. ಆದರೆ, ಈಗ ಅವು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ತನಗೆ ಮಾತ್ರ ಅನುಕೂಲವಾಗಬೇಕು ಎನ್ನುವ ರೀತಿಯಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶವೇ ತನ್ನ ವ್ಯಾಪಾರ ವಹಿವಾಟುಗಳನ್ನು ನಿರ್ವಹಿಸುವ ಧೋರಣೆಯು ದೇಶ ದೇಶಗಳ ನಡುವೆ ಮತ್ತು ದೇಶಗಳಲ್ಲಿ ಆಂತರಿಕವಾಗಿ ಅಸಮಾನತೆಗಳು ಹೆಚ್ಚಲು ಕಾರಣವಾಗಿದೆ. ಇದರ ಹೊಡೆತವೂ, ಯಥಾ ಪ್ರಕಾರ, ಅಂಚಿನಲ್ಲಿರುವ ಮತ್ತು ಉದ್ಯೋಗ ಭದ್ರತೆ ಇಲ್ಲದ ಕೆಲಸಗಾರರ ಮೇಲೆ ಬೀಳುತ್ತದೆ. ಹಾಗಾಗಿ, ಲಾಕ್‌ಡೌನ್ ಅವಧಿಯಲ್ಲಿಯೂ ಸಂಬಳ ಪಡೆಯುವವರು ಮತ್ತು ಬಾಡಿಗೆ-ಬಡ್ಡಿ ವರಮಾನ ಜೀವಿಗಳು ಹಾಗೂ ಹೀಗೂ ಜೀವನ ನಿಭಾಯಿಸುವುದು ಸಾಧ್ಯವಾಗಿದೆ.

ಇಂತಹ ಒಂದು ಅಭೂತಪೂರ್ವ ಸನ್ನಿವೇಶದಲ್ಲಿ ಆರ್ಥಿಕ ರಂಗದ ಉದಯೋನ್ಮುಖ ದೇಶಗಳಿಗೆ ಹೀನಾಯವಾಗಿ ಪೆಟ್ಟು ಬೀಳುತ್ತದೆ. ಅದು ನಾನಾ ರೀತಿಯಲ್ಲಿರುತ್ತದೆ. ವಿದೇಶ ವ್ಯಾಪಾರವೇ ಅವುಗಳಲ್ಲಿ ಬಹಳ ಮುಖ್ಯವಾದದ್ದು. ರಫ್ತುಗಳು ಇಲ್ಲವೇ ಇಲ್ಲ. ದೇಶಗಳು ಲಾಕ್‌ಡೌನ್ ಆಗಿರುವಾಗ, ಎಲ್ಲ ಸರಕು ಸಾಮಗ್ರಿಗಳ ಉತ್ಪಾದನೆ ಸ್ಥಗಿತವಾಗುತ್ತದೆ. ಹಾಗಾಗಿ ರಫ್ತುಗಳು ನೆಲ ಕಚ್ಚುತ್ತವೆ. ಪ್ರಯಾಣ, ಪ್ರವಾಸೋದ್ಯಮಗಳು ಸಂಪೂರ್ಣವಾಗಿ ನಿಂತಿವೆ. ಅಂದರೆ, ಆರ್ಥಿಕ ಚಟುವಟಿಕೆಗಳು ನಿಂತಿವೆ, ಜಾಗತಿಕವಾಗಿ. ಆದ್ದರಿಂದ, ವಿದೇಶ ವ್ಯಾಪಾರದ ಸಂಬಂಧವಾಗಿ ಉದಯೋನ್ಮುಖ ದೇಶಗಳು ತಮ್ಮ ಬಾಕಿ (ಪಾವತಿ ಶೇಷ) ಚುಕ್ತಾ ಮಾಡುವುದು ಅಸಾಧ್ಯವಾಗುತ್ತದೆ. ನಿಂತು ಹೋಗಿರುವ ರಫ್ತುಗಳು ಪುನರಾರಂಭಗೊಳ್ಳುವ ಸಂಭವ ಕಡಿಮೆಯೇ. ಏಕೆಂದರೆ, ಈ ಪರಿಸ್ಥಿತಿಯಲ್ಲಿ ನಕಾರಾತ್ಮಕ ಪರಿಣಾಮಗಳು ಹಲವು ಪಟ್ಟು ಹೆಚ್ಚುತ್ತವೆ. ಅಂದರೆ, ವರಮಾನಗಳ ನಷ್ಟದಿಂದಾಗಿ ಬೇಡಿಕೆ ಕುಸಿಯುವಂತಾಗುತ್ತದೆ. ಪರಿಣಾಮವಾಗಿ, ವರಮಾನಗಳು ಮತ್ತಷ್ಟು ಕಡಿಮೆಯಾಗುತ್ತವೆ. ಸುಮಾರು ದಿನಗಳವರೆಗೆ ಪರಿಸ್ಥಿತಿ ಹೀಗೆಯೇ ಹದಗೆಡುತ್ತಾ ಹೋಗುತ್ತದೆ.

ಅದರ ಜೊತೆಯಲ್ಲಿ, ದೇಶದಲ್ಲಿ ಹೂಡಿಕೆಯಾಗುವ ಬಂಡವಾಳದ ಬಗ್ಗೆ ಬರುತ್ತಿರುವ ಸುದ್ದಿಯೂ ಕಹಿಯಾಗಿದೆ. ಹೂಡಿಕೆಯಾಗಿದ್ದ ವಿದೇಶಿ ಬಂಡವಾಳವು ಉದಯೋನ್ಮುಖ ದೇಶಗಳಿಂದ ಕಂಬಿ ಕೀಳಲು ಈಗಾಗಲೇ ಆರಂಭಿಸಿದೆ. ಅದರ ಜಾಯಮಾನವೇ ಹಾಗೆ. ಕೊರೊನಾ ಮಹಾಮಾರಿ ಅತಿ ಹೆಚ್ಚು ಮಂದಿಯನ್ನು ಬಲಿ ಪಡೆಯುತ್ತಿರುವ ಮತ್ತು ಅತಿ ಹೆಚ್ಚು ಮಂದಿ ಸೋಂಕಿತರಿರುವ ಅಮೇರಿಕಾ ದೇಶಕ್ಕೇ ಬಂಡವಾಳ ಹಾರಿ ಹೋಗುತ್ತದೆ, ತನ್ನ ರಕ್ಷಣೆಗಾಗಿ. ನಮ್ಮ ದೇಶದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗಿದ್ದ ವಿದೇಶಿ ಬಂಡವಾಳದಲ್ಲಿ ಸಾಕಷ್ಟು ಪ್ರಮಾಣ ಹೊರ ಹರಿದ ಪರಿಣಾಮವಾಗಿ ಷೇರು ಬೆಲೆಗಳು ನೆಲ ಕಚ್ಚಿವೆ. ಹೂಡಿದಾರರಿಗೆ ಅಗಾಧ ನಷ್ಟವಾಗಿದೆ.

ಹೊರ ದೇಶಗಳಿಂದ ಪಡೆದ ಸಾಲಗಳು ಮತ್ತೊಂದು ಬೃಹತ್ ಸಮಸ್ಯೆ.  ಅಮೇರಿಕಾ ದೇಶವನ್ನೂ ಒಳಗೊಂಡಂತೆ ಇದೊಂದು ಜಾಗತಿಕ ಸಮಸ್ಯೆ. ದೇಶದ ಸಾಲ ಮತ್ತು ಅದರ ಜಿಡಿಪಿಯ ಅನುಪಾತದ ಲೆಕ್ಕಾಚಾರದಲ್ಲಿ ನಮ್ಮ ದೇಶವು ಮಿತಿಯನ್ನು ದಾಟಿದೆ. ಹೆಚ್ಚಿನವು ಅಲ್ಪಾವಧಿಯ ಸಾಲಗಳು. ಇವು ಸಾಂಸ್ಥಿಕ ಸಾಲಗಳಲ್ಲ. ಬಾಂಡ್ ಮಾರುಕಟ್ಟೆಯಲ್ಲಿ ಎತ್ತಿದ ಸಾಲಗಳು. ಹೇಳಿ ಕೇಳಿ ಚಂಚಲತೆಯೇ ಈ ಮಾರುಕಟ್ಟೆಯ ಸ್ವಭಾವ. ಅನೇಕ ಉದಯೋನ್ಮುಖ ದೇಶಗಳ ಬಾಂಡ್ ಮಾರುಕಟ್ಟೆಗಳು ಈಗಾಗಲೇ ಕುಸಿದು ಬಿದ್ದಿವೆ. ಎರಡನೆಯದಾಗಿ, ಇಂತಹ ಸಾಲಗಳನ್ನು ತೀರಿಸುವುದು ಹೆಚ್ಚು ಹೆಚ್ಚು ಕಠಿಣವಾಗುತ್ತಾ ಹೋಗುತ್ತದೆ. ಏಕೆಂದರೆ, ರೂಪಾಯಿ ಅಪಮೌಲ್ಯಗೊಳ್ಳತ್ತಾ ಹೋಗುತ್ತಿದೆ. ಹಾಗಾಗಿ, ಈ ಉದಯೋನ್ಮುಖ ದೇಶಗಳು ತಿನ್ನಬೇಕಾದ ಒದೆ ದುಪ್ಪಟ್ಟಾಗುತ್ತದೆ.

ಲಾಕ್‌ಡೌನ್ ನೀತಿಯಿಂದಾಗಿ, ಅನೇಕ ದೇಶಗಳಲ್ಲಿ ಆಂತರಿಕವಾಗಿ ತೀವ್ರ ಅಸಮಾನತೆಗಳು ಸೃಷ್ಟಿಯಾಗುತ್ತವೆ. ಭಾರತ ಇದಕ್ಕೊಂದು ಪಕ್ಕಾ ಉದಾಹರಣೆ. ಭಾರತದ ಲಾಕ್‌ಡೌನ್ ಅತ್ಯಂತ ಕರಾಳವಾಗಿದೆ. ಕ್ರೂರವಾಗಿದೆ. ನಮ್ಮ ದೇಶದ ೯೦% ಕೆಲಸಗಾರರು ಅಸಂಘಟಿತ ವಲಯದಲ್ಲಿದ್ದಾರೆ. ಅವರನ್ನು ಬೀದಿಗೆ ಎಸೆಯಲಾಗಿದೆ. ಅವರಿಗೆ ಯಾವ ಸಾಮಾಜಿಕ ರಕ್ಷಣೆಯೂ ಇಲ್ಲ. ಅವರಲ್ಲಿ ಬಹು ಪಾಲು ಮಂದಿಗೆ ಮುಂದಿನ ವಾರ ಹೊಟ್ಟೆ ಹೇಗೆ ತುಂಬಿಸಿಕೊಳ್ಳುವುದು ಎಂಬುದೇ ದೊಡ್ಡ ಸಮಸ್ಯೆ. ಇತ್ತೀಚಿನ ಒಂದು ವರದಿಯ ಪ್ರಕಾರ, ಅವರಲ್ಲಿ ೪೦% ಮಂದಿಗೆ ಮರು ದಿನ ಹೊಟ್ಟೆ ಹೇಗೆ ತುಂಬಿಸಿಕೊಳ್ಳುವುದು ಎಂಬುದೇ ಸಮಸ್ಯೆ. ಲಾಕ್‌ಡೌನ್ ಅವಧಿಯಲ್ಲಿ ಅವರಿಗೆ ಊಟ, ವಸತಿ ಮತ್ತು ಖರ್ಚಿಗೆ ನಾಲ್ಕು ಕಾಸು ದೊರೆಯುತ್ತವೆ ಎಂಬ ಭಾವನೆ ಅವರಲ್ಲಿ ಹುಟ್ಟುವಂತೆ ನಮ್ಮ ಸಮಾಜ ಸ್ಪಂದಿಸಿಲ್ಲ. ಇವೆಲ್ಲವೂ ನಮ್ಮ ಮುಂದಿರುವ ದೊಡ್ಡ ಸಮಸ್ಯೆಗಳೇ. ಈ ಸಮಸ್ಯೆಗಳು, ನಾವು ಈ ವರೆಗೆ ಕಂಡರಿಯದ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತವೆ. ೨೦೦೮ ರ ಹಣಕಾಸು ಬಿಕ್ಕಟ್ಟು, ೧೯೩೦ರ ದಶಕದ ಮಹಾ ಕುಸಿತ ಮತ್ತು ಮೊದಲನೆಯ ಹಾಗೂ ಎರಡನೆಯ ಮಹಾ ಯದ್ಧಗಳು ಉಂಟು ಮಾಡಿದ ಘೋರ ಪರಿಣಾಮಗಳ ಭೀಕರತೆಯ ಬಗ್ಗೆ ನಮಗೆ ತಿಳಿದಿದೆ. ಆದರೆ, ಈ ಕರೋನಾ ಬಿಕ್ಕಟ್ಟಿನ ಪರಿಣಾಮಗಳು ಅವೆಲ್ಲವುಕ್ಕಿಂತಲೂ ಭೀಕರವಾಗುತ್ತವೆ.  ಆದ್ದರಿಂದ, ನಾವು ಮಾಡಬೇಕಾಗಿರುವುದೇನು?

ಇದೊಂದು ಅಭೂತಪೂರ್ವ ಜಾಗತಿಕ ಸವಾಲು ಎಂದಾದರೆ, ಅದಕ್ಕೆ ನಾವು ಸ್ಪಂದಿಸಬೇಕಾದ ರೀತಿಯೂ ಅಭೂತಪೂರ್ವವಾಗಿಯೇ ಇರಬೇಕಾಗುತ್ತದೆ. ಈ ಅಂಶವನ್ನು ಗುರುತಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಾವು ಅದನ್ನು ಸಣ್ಣದಾಗಿ ಯೋಚಿಸಬಾರದು. ಅದು ತೇಪೆ ಹಚ್ಚುವ ಕೆಲಸವಾಗಬಾರದು. ನಾವು ಅದಕ್ಕೆ ಘನವಾಗಿ ಸ್ಪಂದಿಸಬೇಕಾಗುತ್ತದೆ. ಅದು ಶೀಘ್ರವಾಗಿಯೂ ಇರಬೇಕಾಗುತ್ತದೆ. ಇಲ್ಲೊಂದು ವೈರುಧ್ಯವೂ ಇದೆ. ಹೇಗೆಂದರೆ, ನವ ಉದಾರ ಹಣಕಾಸು ಬಂಡವಾಳದ ನಿಯಂತ್ರಣದಲ್ಲಿರುವ ಒಂದು ಜಾಗತೀಕರಣಗೊಂಡ ಅರ್ಥವ್ಯವಸ್ಥೆಯಲ್ಲಿ ನಾವಿನ್ನೂ ಇದ್ದೇವೆ ಮತ್ತು (ಅದರ) ಜಾಗತಿಗ ಸಂಸ್ಥೆಗಳಿಗೆ ಅಂತಹ ಒಂದು ವಿಶಾಲ ಮತ್ತು ದೂರದೃಷ್ಟಿಯ ಸಾಮರ್ಥವಿಲ್ಲ. ಮತ್ತು, ಇಂತಹ ಒಂದು ಜಗತ್ತಿನ ನಾಯಕ ಎಂದು ಕರೆಸಿಕೊಳ್ಳುವ ಟ್ರಂಪ್, ಒಂದು ಉಗ್ರ ರಾಷ್ಟ್ರೀಯವಾದೀ ರೀತಿಯ ಸ್ಪಂದನೆಯಲ್ಲಿ ತೊಡಗಿರುವಾಗ, ಬಿಕ್ಕಟ್ಟು ಪರಿಹರಿಸುವಲ್ಲಿ ಜಾಗತಿಕ ಸಹಕಾರ ದೊರೆಯುವ ಅವಕಾಶಗಳು ತೀರಾ ಕಡಿಮೆಯೇ.

ಇನ್ನೊಂದೆಡೆಯಲ್ಲಿ, ಸಾರ್ವಜನಿಕ ಆರೋಗ್ಯದ ಮೇಲೆ ಮಾಡುವ ಖರ್ಚುಗಳು ಬಹಳ ಮುಖ್ಯ ಎಂಬುದು ಮನ್ನಣೆ ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ.  ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿನ ವೆಚ್ಚಗಳ ಕಡಿತ ಮತ್ತು ಅದನ್ನು ಅದನ್ನು ಖಾಸಗೀಕರಣಗೊಳಿದ್ದು ಒಂದು ಪ್ರಮಾದ ಎಂಬ ಅರಿವು ಮೂಡುತ್ತಿರುವುದನ್ನು ಗಮನಿಸಬಹುದು. ಕಡು ಬಡವನ ಆರೋಗ್ಯವನ್ನು ಕಡೆಗಣಿಸಿದರೆ, ಗಣ್ಯಾತಿಗಣ್ಯರ ಆರೋಗ್ಯವೂ ಅಪಾಯಕ್ಕೊಳಗಾಗುತ್ತದೆ ಎಂಬ ಅರಿವೂ ಮೂಡುತ್ತಿದೆ. ಅದರಿಂದಾಗಿ, ಕೊನೆಯ ಪಕ್ಷ ಸಾರ್ವಜನಿಕ ಆರೋಗ್ಯದ ಮೇಲೆ ಮಾಡುವ ಖರ್ಚುಗಳು ಹೆಚ್ಚುತ್ತವೆ.

ಆದರೆ, ಅಷ್ಟೇ ಸಾಲದು.  ನುಂಗಲು ಹೊರಟಿರುವ ಆರ್ಥಿಕ ವಿಪತ್ತಿನಿಂದ ಎಲ್ಲ ಉದಯೋನ್ಮುಖ ದೇಶಗಳನ್ನು ರಕ್ಷಿಸಬೇಕು ಎಂದಾದರೆ, ಸ್ಪಂದನೆ ಇನ್ನೂ ಹೆಚ್ಚಿನ ಮಟ್ಟದಲ್ಲಿರಬೇಕಾಗುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ, ಇವೆಲ್ಲವೂ ಎರಡನೆಯ ಉತ್ತಮ ಪರಿಹಾರವಾಗಿ ತೋರುತ್ತದೆ. ಏಕೆಂದರೆ, ಈ ಪರಿಹಾರ ನಿರ್ವಹಣೆಯಲ್ಲಿ ಐಎಂಎಫ್ ಪಾತ್ರ ಅಗತ್ಯವಾಗುತ್ತದೆ.  ಐಎಂಎಫ್ ಬಗ್ಗೆ ನನಗೆ ಹೆಚ್ಚು ಗೌರವವಿಲ್ಲ. ಈ ಸಂಸ್ಥೆಯು ತನಗೊಂದು ಯೋಗ್ಯತೆ ಇದೆ ಎಂಬುದನ್ನು ಅದರ ಜೀವಿತಾವಧಿಯಲ್ಲಿ ಯಾವತ್ತೂ ಸಾಬೀತುಪಡಿಸಿಲ್ಲ. ಅದೇನೇ ಇರಲಿ, ಈ ಕ್ಷಣದಲ್ಲಿ ನಾವು ಒಟ್ಟಿಗೆ ಕುಳಿತು ಅದಕ್ಕೆ ಬದಲಾಗಿ ಇನ್ನೊಂದು ಸಂಸ್ಥೆಯನ್ನು ಹುಟ್ಟಿಹಾಕಲಾಗದು.

ಜಾಗತಿಕ ಮಟ್ಟದಲ್ಲಿ  ಲಿಕ್ವಿಡಿಟಿ (ಅಂದರೆ, ಆಸ್ತಿಗಳನ್ನು ಕರಗಿಸಿ/ಪರಿವರ್ತಿಸಿ ಹಣ ಒದಗಿಸಿಕೊಳ್ಳುವಿP-ಅನು) ಸೃಷ್ಟಿಸುವುದು ಐಎಂಎಫ್‌ನ ಹೊಣೆಗಾರಿಕೆ. ಈ ಉದ್ದೇಶಕ್ಕಾಗಿ ಎಸ್‌ಡಿಆರ್ (ಸ್ಪೆಷಲ್ ಡ್ರಾಯಿಂಗ್ ರೈಟ್ಸ್)ಗಳನ್ನು ಸೃಷ್ಟಿಸುವ ಅಧಿಕಾರವನ್ನು ಐಎಂಎಫ್  ಹೊಂದಿದೆ. ಜಾಗತಿಕ ಮಟ್ಟದಲ್ಲಿ ಲಿಕ್ವಿಡಿಟಿಯ ಹೆಚ್ಚಳದ ಅಗತ್ಯ ಪ್ರತಿಯೊಂದು ದೇಶಕ್ಕೂ ತತ್‌ಕ್ಷಣದಲ್ಲೇ ಇದೆ. ಹಾಗಾಗಿ, ಐಎಂಎಫ್  ಅಧಿಕವಾಗಿ ೧-೧.೫ ಟ್ರಿಲಿಯನ್ ಎಸ್‌ಡಿಆರ್‌ಗಳನ್ನು ಸೃಷ್ಟಿಸಬೇಕಾಗುತ್ತದೆ. ಈ ಎಸ್‌ಡಿಆರ್‌ಗಳಲ್ಲಿ ಈಗಾಗಲೇ ನಿಗದಿಪಡಿಸಿರುವ ಕೋಟಾ ಪ್ರಕಾರ ಎಲ್ಲ ದೇಶಗಳೂ ತಮ್ಮ ಪಾಲು ಪಡೆಯುತ್ತವೆ. ಹೊಸ ಎಸ್‌ಡಿಆರ್‌ಗಳನ್ನು ಸೃಷ್ಟಿಸಿ ನೀಡಿಕೆಯಾದಾಗ ಅದರೊಂದಿಗೆ ಯಾವ ಶರತ್ತುಗಳನ್ನೂ ವಿಧಿಸುವಂತಿಲ್ಲ. ಆದ್ದರಿಂದ, ಐಎಂಎಫ್, ನಾನು ನಿನಗೆ ಕೊಡುವುದು ಇಂತಿಷ್ಟು ಮಾತ್ರ, ಅದೂ ನಿನ್ನ ನಡತೆ ತೃಪ್ತಿಕರವಾಗಿದ್ದಾಗ ಎನ್ನುವಂತಿಲ್ಲ. ಶ್ರೀಮಂತ ದೇಶಗಳಿಗೆ ಈಗ ಎಸ್‌ಡಿಆರ್‌ಗಳ ಅಗತ್ಯವಿಲ್ಲ. ಆದರೆ, ಉದಯೋನ್ಮುಖ ದೇಶಗಳಿಗೆ ಎಸ್‌ಡಿಆರ್‌ಗಳು ಜೀವನಾಡಿಯಾಗುತ್ತವೆ. ಹಾಗಾಗಿ, ಇದೊಂದು ಬಹಳ ಮುಖ್ಯವಾದ ತುರ್ತು ಕ್ರಮವಾಗುತ್ತದೆ. ಅದರ ಜೊತೆಯಲ್ಲಿ, ಸಾಲಗಳ ಮರು ಪಾವತಿಯನ್ನು ಕೆಲ ಕಾಲದವರೆಗೆ ಮುಂದೂಡಬೇಕಾಗುತ್ತದೆ (ಮೊರಾಟೋರಿಯಂ) ಸಧ್ಯದ ಪರಿಸ್ಥಿತಿಯಲ್ಲಿ ಬಹುತೇಕ ಉದಯೋನ್ಮುಖ ದೇಶಗಳಿಗೆ ಸಾಲದ ಕಂತು ಕಟ್ಟುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವುಗಳಿಗೆ ಸಾಲದ ಮೇಲಿನ ಬಡ್ಡಿ ಸೇರಿಸದೆ ಕಂತು ಕಟ್ಟಲು ೩-೬ ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಅಂದರೆ, ಕಾಲ ಕ್ರಮದಲ್ಲಿ ಸಾಲ ಮನ್ನಾ ಬಗ್ಗೆ ಆಲೋಚಿಸಿ, ಆ ಬಗ್ಗೆ ಒಂದು ಪ್ರಸ್ತಾಪ ಮಂಡಿಸಬಹುದು. ವಾಸ್ತವಿಕವಾಗಿ, ಎಲ್ಲಾ ಹಳೆಯ ಸಾಲಗಳ ಮರು ಪಾವತಿಯ ಕಾಲ ಮಿತಿಯನ್ನು ಹೊಸದಾಗಿ ನಿಗದಿಪಡಿಸಬೇಕಾಗುತ್ತದೆ. ಏಕೆಂದರೆ, ಆರು ತಿಂಗಳ ಬಳಿಕವೂ ಸಾಲದ ಕಂತು ಕಟ್ಟುವುದು ಅವುಗಳಿಗೆ ಸಾಧ್ಯವಾಗುವುದಿಲ್ಲ. 

ಉದಯೋನ್ಮುಖ ದೇಶಗಳು ತಮ್ಮ ದೇಶದಲ್ಲಿ ಹೂಡಿಕೆಯಾದ ವಿದೇಶಿ ಬಂಡವಾಳದ ಹೊರ ಹರಿವಿನ ಮೇಲೆ ನಿಯಂತ್ರಣ ಹೇರಬೇಕಾಗುತ್ತದೆ. ಕಳೆದ ಒಂದು ತಿಂಗಳಿನಲ್ಲೇ ಈ ದೇಶಗಳ ಕರೆನ್ಸಿಗಳು ೧೦% ನಿಂದ ೨೦%ವರೆಗೆ, ಕೆಲವೆಡೆ ೩೦%ವರೆಗೂ ಅಪಮೌಲ್ಯಗೊಂಡಿವೆ. ಈ ಪರಿಸ್ಥಿತಿಯಲ್ಲಿ, ವಿದೇಶಿ ಬಂಡವಾಳ ಹೊರ ಹರಿದಾಗ ನಮ್ಮ ಅರ್ಥವ್ಯವಸ್ಥೆಗೆ ರಕ್ತಸ್ರಾವವಾಗುತ್ತದೆ. ಅದನ್ನು ನಿಲ್ಲಿಸಲೇಬೇಕು. ಹಾಗಾಗಿ, ಬಂಡವಾಳವು ಮನ ಬಂದಂತೆ ಹರಿದಾಡದಂತೆ ಖಾತ್ರಿಪಡಿಸಿಕೊಳ್ಳಬೇಕು. ಆದ್ದರಿಂದ, ಎಲ್ಲ ಉದಯೋನ್ಮುಖ ದೇಶಗಳಿಗೂ ಸಾಧ್ಯವಾದಷ್ಟು ಬೇಗ ಒಂದು ಸಮನ್ವಯಕಾರಕ ರೀತಿಯಲ್ಲಿ ವಿದೇಶಿ ಬಂಡವಾಳದ ಹರಿದಾಟದ ಮೇಲೆ ನಿಯಂತ್ರಣ ಹೇರಲು ಅನುವಾಗುವಂತೆ ಹಣಕಾಸು ಬಂಡವಾಳವು ಸಮ್ಮತಿಸಬೇಕಾಗುತ್ತದೆ.

ಈ ಬಿಕ್ಕಟ್ಟಿನಿಂದ ಆಗಬಹುದಾದ ಒಂದು ಕೆಲಸವೆಂದರೆ, ಯೋಜನೆಯ ಮಹತ್ವ ಮತ್ತು ಅದರ ಪಾತ್ರವನ್ನು ಪುನರ್‌ಪರಿಶೀಲಿಸುವಂತೆ ಸರ್ಕಾರಗಳು ಒತ್ತಾಯಕ್ಕೆ ಒಳಪಡುತ್ತವೆ. ಏಕೆಂದರೆ, ಏಕ ಕಾಲದಲ್ಲಿ ಬೇಡಿಕೆ ಬಿಕ್ಕಟ್ಟು ಮತ್ತು ಸರಬರಾಜು ಬಿಟ್ಟು ಎರಡೂ ಒಟ್ಟಿಗೆ ಉಂಟಾಗಿವೆ. ಉತ್ಪಾದನೆ ನಿಂತಿರುವುದರಿಂದ ಸರಬರಾಜು ಕೊಂಡಿ ಮುರಿದು ಬಿದ್ದಿದೆ. ಈಗ, ಉತ್ಪಾದನೆ ಆರಂಭಿಸಿ, ಅಗತ್ಯ ವಸ್ತುಗಳನ್ನು ಜನರಿಗೆ ತಲುಪಿಸಬೇಕಾದರೆ, ಆ ಕೆಲಸವನ್ನು ಯೋಜನಾಬದ್ಧವಾಗಿ ನಿರ್ವಹಿಸಬೇಕಾಗುತ್ತದೆ. ಏಕೆಂದರೆ, ಆಹಾರ ಮತ್ತು ಔಷದಿಗಳಂತಹ ಅಗತ್ಯ ವಸ್ತಗಳ ಉತ್ಪಾನೆಯ ಸಂದರ್ಭದಲ್ಲಿಯೂ ಬಳಕೆಯಾದ ಸಾಮಗ್ರಿಗಳಿಗೂ (ಇನ್‌ಪುಟ್ಸ್) ಮತ್ತು ಅದರಿಂದ ಬಂದ ಉತ್ಪತ್ತಿಗೂ (ಔಟ್‌ಪುಟ್ಸ್)ಇರುವ ಅಂತರ್‌ಸಂಬಂಧವನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. ಯೋಜನೆ ಇಲ್ಲದೆ ಮತ್ತು ಹೊಂದಾಣಿಕೆ ಇಲ್ಲದೆ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗದು. ಮೂಲೆಗೆ ತಳ್ಳಿರುವ ಸಾಂಸ್ಥಿಕ ಯೋಜನಾ ವ್ಯವಸ್ಥೆಗೆ ಸರ್ಕಾರಗಳು ಈಗ ಕಾಯಕಲ್ಪ ನೀಡುವುದು ಅನಿವಾರ್ಯವಾಗುತ್ತದೆ.

ಈ ಬಿಕ್ಕಟ್ಟಿನಿಂದ ಆಗಬಹುದಾದ ಇನ್ನೊಂದು ಬಲು ದೊಡ್ಡ ಕೆಲಸವೆಂದರೆ, ಉತ್ಪಾದನೆಯ ಸ್ಥಳೀಕರಣ. ಏಕೆಂದರೆ, ಈ ಬಿಕ್ಕಟ್ಟು, ಜಾಗತೀಕರಣವು ಸೃಷ್ಟಿಸಿರುವ ಅಪಾಯಗಳನ್ನು ಬಿಚ್ಚಿ ತೋರಿಸುವುದರ ಜೊತೆಗೆ ಅದರ ಮೂರ್ಖತನವನ್ನೂ ಬಯಲು ಮಾಡಿದೆ. ಇಂಗ್ಲೆಂಡ್ ಪಕ್ಕದ ಉತ್ತರ ಸಮುದ್ರದಲ್ಲಿ ಹಿಡಿದ ಮೀನುಗಳನ್ನು ಆಗ್ನೇಯ  ಏಷ್ಯಾದ ದೇಶಗಳಲ್ಲಿ ಸಂಸ್ಕರಿಸಿ ಅದನ್ನು ಪುನಃ ಯೂರೋಪಿನ ಬಳಕೆಗೆ ಕಳಿಸುವಂತಹ ಹುಚ್ಚಾಟದ ವ್ಯವಹಾರಗಳನ್ನು ನಿಲ್ಲಿಸಬೇಕಾಗುತ್ತದೆ. ಇದು ಮೀನುಗಾರಿಕೆಗೆ ಮಾತ್ರ ಅನ್ವಯವಾಗುವ ವಿಷಯವಲ್ಲ. ಅನೇಕಾನೇಕ ದಿನ ಬಳಕೆಯ ವಸ್ತುಗಳಿಗೂ ಅನ್ವಯಿಸುತ್ತದೆ. ಸ್ಥಳೀಯ ಉತ್ಪಾದನೆಗಳು ಸ್ಥಳೀಯವಾಗಿ ಬಳಕೆಯಾದಾಗ ಅಭಿವೃದ್ಧಿ ಸು-ಸ್ಥಿರವಾಗುತ್ತದೆ. ಹಾಗಾಗಿ, ಇಂತಹ ಸ್ಥಳೀಯ ಪ್ರಕ್ರಿಯೆಗಳಿಗೆ ಒತ್ತು ಕೊಡಬೇಕಾಗುತ್ತದೆ.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಖಾಸಗೀಕರಣವು ಒಂದು ಪ್ರಮಾದ ಎಂಬುದನ್ನು ಹೇಳಿದ್ದೇನೆ. ಆರೋಗ್ಯ ವ್ಯವಸ್ಥೆಯ ಬಗ್ಗೆ ಸಂವಾದಗಳು ಸಂಪೂರ್ಣವಾಗಿ ಮರೆಯಾಗಿವೆ. ಆರೋಗ್ಯದ ಮೇಲೆ ಸರ್ಕಾರ ಮಾಡುವ ಖರ್ಚುಗಳು ಬಹಳ ದೊಡ್ಡ ಪ್ರಮಾಣದಲ್ಲಿ ಇರಬೇಕಾಗುತ್ತದೆ. ಜನರ ಆರೋಗ್ಯ ರಕ್ಷಣೆಗಾಗಿ ದುಡಿಯುತ್ತಿರುವ ಎಲ್ಲರಿಗೂ ರಕ್ಷಣೆ ಒದಗಿಸಬೇಕು, ಅವರ ಘನತೆಯನ್ನು ಎತ್ತಿ ಹಿಡಿಯಬೇಕು ಮತ್ತು ತಕ್ಕ ಗೌರವವನ್ನು ಅವರಿಗೆ ತೋರಿಸಬೇಕು.

ಇವೆಲ್ಲವೂ ನಮ್ಮ ಅಜೆಂಡಾದ ನೀತಿಯಾಗಬೇಕು. ಇವು ಹೆಬ್ಬಯಕೆಯಾಗಿ ತೋರಬಹುದು. ಆದರೆ, ಅವೇನೂ ಅಪಹಾಸ್ಯಕರವಾಗಿ ತೋರುವುದಿಲ್ಲ.  ಜನರು ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಿದ್ದಾರೆ ಮತ್ತು ಅವುಗಳಿಂದ ಪಾಠಗಳನ್ನೂ ಕಲಿಯುತ್ತಿದ್ದಾರೆ. ಪ್ರಪಂಚ ಬದಲಾಗುತ್ತಿದೆ. ಈ ಬಿಕ್ಕಟ್ಟನ್ನು ಕೊನೆಗಾಣಿಸಿದ ನಂತರ ನಾವು ನೋಡುವ ಪ್ರಪಂಚ ಬೇರೆಯದ್ದೇ ಆಗಿರುತ್ತದೆ. ಆದರೆ, ಮೊದಲಿಗೆ ಈ ಬಿಕ್ಕಟ್ಟಿಗೆ ಕಾರಣಕರ್ತರಾದ ಶಕ್ತಿಗಳು ಅಧಿಕಾರದಲ್ಲಿ ಮುಂದುವರೆಯದಂತೆ ಖಾತ್ರಿಪಡಿಸಿಕೊಳ್ಳುವುದೇ ನಮ್ಮ ಆದ್ಯ ಕರ್ತವ್ಯವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *