ಭಾಗ-3 ಏಕೆ? ಏನು? ಎಷ್ಟು? ಯಾವಾಗ? ಹೇಗೆ?
ಕೋವಿಡ್-19 ಲಸಿಕೆ ಮುಂದಿನ ತಿಂಗಳೇ ಲಭ್ಯವಾಗುತ್ತದೆ ಎಂಬುದು ಸುದ್ದಿಯಲ್ಲಿದೆ. ಕೋವಿಡ್-19 ಕುರಿತು ವಾಸ್ತವಕ್ಕೆ ದೂರವಾದ ಅತಿರಂಜಿತ ನಿಲುವುಗಳನ್ನು ತಾಳಿರುವ ಸರಕಾರ ಮತ್ತು ಮಾಧ್ಯಮಗಳು ಲಸಿಕೆ ಕುರಿತು ಸಹ ಎಲ್ಲ ಸಮಸ್ಯೆಗಳು ಪರಿಹಾರವಾದವು ಎಂಬಂತೆ ವರ್ತಿಸುತ್ತಿವೆ. ಆದರೆ ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತವೇ ಇದೆ. ಈ ಕುರಿತು ವಾಸ್ತವವನ್ನು ವಿಶ್ಲೇಷಿಸುವ ಲೇಖನ ಸರಣಿ ಇದು. ಲಸಿಕೆ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ ? ಕೋವಿಡ್ ಲಸಿಕಾ ಕಾರ್ಯಕ್ರಮದ ಸಮಸ್ಯೆಗಳೇನು? ಲಸಿಕೆ ಅಭಿವೃದ್ಧಿಯ ಈಗಿನ ಪರಿಸ್ಥಿತಿ ಏನು? ಭಾರತಕ್ಕೆ ಲಸಿಕೆಯ ಒಟ್ಟು ಅಗತ್ಯ ಎಷ್ಟು? ಲಸಿಕೆಯ ವೆಚ್ಚ ಎಷ್ಟು, ಸಾಗಾಣಿಕೆ ಹೇಗೆ? ಲಸಿಕೆ ಆದ್ಯತೆಯ ಸರಣಿ ಹೇಗಿರಬೇಕು? ಲಸಿಕೆಯನ್ನು ಆದ್ಯತೆಯ ಪ್ರಕಾರ ಹೇಗೆ ತಲುಪಿಸುವುದು? ಲಸಿಕೆ ಕಾರ್ಯಕ್ರಮಕ್ಕೆ ಎಷ್ಟು ಸಿಬ್ಬಂದಿ, ಮೂಲಸೌಕರ್ಯ ಬೇಕು ? ಅದನ್ನು ಹೊಂದಿಸುವುದು ಹೇಗೆ? ಈ ಪ್ರಶ್ನೆಗಳಿಗೆ ವಾಸ್ತವ ನೆಲೆಯಲ್ಲಿ ಉತ್ತರ ಕೊಡುವ ಪ್ರಯತ್ನವಿದು. ಹಿಂದಿನ ಹಲವಾರು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಭವವಿರುವ, ಆ ದೃಷ್ಟಿಯಿಂದ ಕೋವಿಡ್-19 ಲಸಿಕಾ ಕಾರ್ಯಕ್ರಮದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ – ಡಾ| ಕೆ. ಸುಶೀಲಾ ಅವರು ಇದನ್ನು ಬರೆದಿದ್ದಾರೆ.
– ಡಾ| ಕೆ. ಸುಶೀಲಾ
ಭಾಗ-1 ರಲ್ಲಿ ದೇಹ ರಕ್ಷಣಾ ವ್ಯವಸ್ಥೆಯ ಕುರಿತು ತಿಳಿಸಿ, ಅದರ ಆಧಾರದ ಮೇಲೆ ಲಸಿಕೆಯ ವಿಜ್ಞಾನವನ್ನು ಈಗಾಗಲೇ ವಿವರಿಸಿದ್ದಾರೆ. ಈ ಭಾಗ 2 ರಲ್ಲಿ ಲಸಿಕೆಯ ಅಭಿವೃದ್ಧಿಯ ಪ್ರಸಕ್ತ ಸ್ಥಿತಿ, ಲಸಿಕೆಯ ಒಟ್ಟು ಅಗತ್ಯ ಎಷ್ಟು?, ಸದ್ಯಕ್ಕೆ ಲಭ್ಯವಾಗಬಹುದಾದ ಲಸಿಕೆ ಎಷ್ಟು ಎಂಬುದರ ಬಗ್ಗೆ ವಿವರಿಸಿದ್ದಾರೆ.
ಈ ಭಾಗ – 3 ರಲ್ಲಿ ಲಸಿಕೆಯ ವೆಚ್ಚ, ಸಾಗಾಣಿಕೆ ಹಾಗೂ ಲಸಿಕೆ ಯಾರಿಗೆ, ಯಾವಾಗ, ಹೇಗೆ ? ಎಂಬ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.
ಲಸಿಕೆಯ ವೆಚ್ಚ, ಸಾಗಾಣಿಕೆ
ಲಸಿಕಾ ತಯಾರಿಕೆಯ ಹಂತದಲ್ಲಿ ಬರುವ ಎಲ್ಲಾ ಸಮಸ್ಯೆಗಳು ಬಗೆಹರಿದು ಇವರೆಲ್ಲರ ಆಶ್ವಾಸನೆಯ ಮಟ್ಟದಲ್ಲಿ ಲಸಿಕೆ ತಯಾರಾದರೆ ನಮಗೆ 2021 ನೇ ವರ್ಷದ ಕೊನೆಯೊಳಗೆ 135 ಕೋಟಿ ಲಸಿಕೆ ದೊರೆಯಬಹುದು. ಆದರೆ ಇದರಲ್ಲಿ ನಮ್ಮ ದೇಶದ ಪಾಲೆಷ್ಟು? ಆರ್ಧಾಂಶವೆಂದೂ ಭಾವಿಸಿದರೂ 70 ಕೋಟಿ ಲಸಿಕೆ ಲಭ್ಯವಿರಬಹುದು. ಅಂದರೆ 30-35 ಕೋಟಿ ಜನರಿಗೆ ನೀಡಲು ಸಾಧ್ಯವಾಗುವಷ್ಟು. ಇದರಲ್ಲಿ ಸರ್ಕಾರದ ಪಾಲೆಷ್ಟು? ಭಾರತ್ ಬಯೋಟೆಕ್ ಹಾಗೂ ಕ್ಯಾಡಿಲಾಗಳ, ಕೊವಿಶೀಲ್ಡ್‌ನಂತೆ ಅತ್ಯಂತ ಕಡಿಮೆ ಬೆಲೆಗೆ ತಮ್ಮ ಲಸಿಕೆ ಸರ್ಕಾರಕ್ಕೆ ನೀಡುತ್ತದೆಂದು ಭಾವಿಸಿದರೂ, ಇತರ ಸ್ಪುಟ್ನಿಕ್ ವಿ ಯ ಲಸಿಕೆಯೂ ಸೇರಿದರೆ ಲಭ್ಯವಿರುವ ಈ ಲಸಿಕೆಯ ಬೆಲೆ ಹಲವಾರು ಸಾವಿರ ಕೋಟಿಯ ತನಕ ಹೋಗಬಹುದು.
ಈಗ ಲಭ್ಯವಾದ ಲಸಿಕೆಯನ್ನು ದೇಶದ ಎಲ್ಲಾ ರಾಜ್ಯಗಳಿಗೂ ಅಲ್ಲಿಂದ ವಿವಿಧ ಪ್ರದೇಶಗಳಿಗೂ ಹಾಳಾಗದಂತೆ ಸಾಗಿಸುವ ಹಾಗೂ ಸಂಗ್ರಹಿಸಿಡುವ ಕಾರ್ಯಕ್ಕೆ ನಮ್ಮ ದೇಶದ ಸಾಮರ್ಥ್ಯ ಎಷ್ಠಿದೆ? ಪ್ರಸಕ್ತ ಭಾರತ ಸರ್ಕಾರ 6 ಕೋಟಿ ವಿವಿಧ ಜಾತಿಯ ಲಸಿಕೆಯ ಫಲಾನುಭವಿಗಳನ್ನು ತಲುಪಲು ಬೇಕಾದ ಅತ್ಯಂತ ಪ್ರಬಲ ಲಸಿಕಾ ‘ವಿತರಣಾ ಜಾಲ ವನ್ನು ಹೊಂದಿದೆ. ದೇಶದ ‘ಸಾರ್ವತ್ರಿಕ ರೋಗನಿರೋಧಕ ಯೋಜನೆಯಲ್ಲಿ (ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ – ಯು.ಐ.ಪಿ) 27 ಸಾವಿರ ಕಾರ್ಯನಿರತ ‘ಶೀತ ಸರಪಳಿ (cold chain) ಸಂಗ್ರಹಣಾ ವ್ಯವಸ್ಥೆ ಹಾಗೂ 76 ಸಾವಿರ ‘ಶೀತ ಸರಪಳಿಯ ಇತರ ಸಲಕರಣೆಗಳನ್ನು ಹೊಂದಿದೆ. ಆದರೆ ವರ್ಷದಲ್ಲಿ 30-35 ಕೋಟಿ ಜನರನ್ನು ತಲಪುವ ಗುರಿ ಪೂರೈಸಲು ಈ ಸೌಲಭ್ಯದಲ್ಲಿ 5 ರಿಂದ 6 ಪಟ್ಟಾದರೂ ಹೆಚ್ಚಳವಾಗುವ ಅವಶ್ಯಕತೆ ಇದೆ.
ಲಸಿಕೆ ಯಾರಿಗೆ, ಯಾವಾಗ, ಹೇಗೆ ?
ಲಸಿಕೆ ಲಭ್ಯವಿರಬಹುದು. ದೇಶದ ವಿವಿಧೆಡೆಗೆ ತಲಪಿರಬಹುದು. ಆದರೆ ಫಲಾನುಭವಿಗಳಿಗೆ ಸಿಗುವುದು ಹೇಗೆ?
ಇನ್ನು ‘ಯು.ಐ.ಪಿ.ಯಲ್ಲಿ ನವಜಾತ ಶಿಶುಗಳಿಂದ ಹಿಡಿದು ವಿವಿಧ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರು ಮಾತ್ರ ಲಸಿಕೆಗೆ ಯೋಗ್ಯರಾಗಿದ್ದರು. ಆದರೆ ಕೋವಿಡ್-೧೯ ತಡೆಗಟ್ಟುವ ಲಸಿಕೆ ಸರ್ವರಿಗೂ ನೀಡಬೇಕಾದ ಲಸಿಕೆ. ಬೇಕಾದಷ್ಟು ಲಸಿಕೆ ಲಭ್ಯವಿಲ್ಲದಾಗ, ಲಭ್ಯವಿದ್ದ ಲಸಿಕೆಯನ್ನು ನೀಡಲು ಸಮಯವಕಾಶ ಬೇಕಾದಾಗ 130 ಕೋಟಿ ಜನರಲ್ಲಿ ಯಾರಿಗೆ ಪ್ರಥಮ ಆದ್ಯತೆ? ಯಾವ ಕಾಯಿಲೆ ಇದೆ ಎನ್ನುವ ಮಾಹಿತಿ ಸಿಗುವುದು ಹೇಗೆ? ಕಾಯಿಲೆಯಿಂದ ಬಳಲಿದವರನ್ನು ಗುರುತಿಸುವುದು ಹೇಗೆ?
ಕೋವಿಡ್-19 ರ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ, ಕಾನೂನು ಪಾಲಕರಿಗೆ, ಜನಸಾಮಾನ್ಯರ ನಡುವೆ ಕಾರ್ಯ ನಿರ್ವಹಿಸುವ ಇತರ ವೃತ್ತಿ ನಿರತ ಸಿಬ್ಬಂದಿಗಳಿಗೆ ಪ್ರಥಮ ಆದ್ಯತೆ ನೀಡಬೇಕಾದದ್ದು ಅವಶ್ಯಕ. ಆದರೆ ಇಡೀ ದೇಶದಲ್ಲಿ ಇವರ ಸಂಖ್ಯೆ ಬಹಳಷ್ಟು ಇರುವಾದ ಎಲ್ಲರಿಗೂ ಕ್ಷಿಪ್ರವಾಗಿ ಲಸಿಕೆ ನೀಡುವುದು ಅಸಾಧ್ಯ. ಆಗ ಕೋವಿಡ್-19 ರ ನೇರ ಸಂಪರ್ಕಕ್ಕೆ ಬರುವ ಸಿಬ್ಬಂದಿಗಳಿಗೆ, 50 ವರ್ಷ ಮೇಲ್ಪಟ್ಟವರಿಗೆ ದೀರ್ಘಕಾಲಾವಧಿಯ ಇತರ ಕಾಯಿಲೆಯಿಂದ ಬಳಲುವ ಸಿಬ್ಬಂದಿಗಳಿಗೆ ಅವರು ಕಾಯಂ ನೌಕರರಿರಲಿ, ಗುತ್ತಿಗೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುವವರಿರಲಿ ಆದ್ಯತೆ ನೀಡುವುದು ಅವಶ್ಯಕ. ಆದರೆ ಇದು ನಮ್ಮ ಸಮಾಜದಲ್ಲಿ ಕಾರ್ಯಗತಗೊಳಿಸಲು ಸಾಧ್ಯವೇ?
ಎರಡನೇ ಆದ್ಯತೆ ಜನಸಾಮಾನ್ಯರಲ್ಲಿ ಹಿರಿಯ ನಾಗರಿಕರಿಗೆ. ಅದರಲ್ಲೂ 80 ವರ್ಷ ಮೇಲ್ಪಟ್ಟವರಿಗೆ, ಇತರ ಧೀರ್ಘಕಾಲಿಕ ಕಾಯಿಲೆಯಿಂದ ಬಳಲುವವರಿಗೆ, ನಂತರದ ಆದ್ಯತೆ ಜನಸಾಮಾನ್ಯರಲ್ಲಿ ಧೀರ್ಘಕಾಲಿಕ ಕಾಯಿಲೆಯಿಂದ ಬಳಲುವ ಇತರರಿಗೆ. ದೇಶದ ಸರ್ವನಾಗರಿಕರ ವೈಯುಕ್ತಿಕ ವಿಷಯಗಳಾದ ಲಿಂಗ, ವಯಸ್ಸು, ವೃತ್ತಿ, ಆರ್ಥಿಕ ಸ್ಥಿತಿಗಳ ಮಾಹಿತಿ ಸರ್ಕಾರದ ಹತ್ತಿರವಿದ್ದರೂ ಇವರನ್ನೆಲ್ಲ ಗುರುತಿಸಿ, ವಿಂಗಡಿಸಿ ಆದ್ಯರನ್ನು ಗುರುತಿಸುವ ಕೆಲಸಕ್ಕೆ ಕಾಲಾವಧಿ ಬೇಕು. ಸರ್ಕಾರ ಇದರ ಬಗ್ಗೆ ಯೋಚಿಸುತ್ತಿದೆಯೆ?
ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಚಿಂತಾಜನಕ ಸ್ಥಿತಿಯಲ್ಲಿರುವ ನಮ್ಮ ದೇಶದಲ್ಲಿ ಯಾರು ಧೀರ್ಘಕಾಲಿಕ ಕಾಯಿಲೆಯಿಂದ ಬಳಲುತ್ತಿದ್ದಾರೆಂಬ ಮಾಹಿತಿ ದೊರೆಯಲು ಸಾಧ್ಯವೆ? ಹೀಗಾದರೆ ಈ ಕಾಯಿಲೆಗಳಿಂದ ಬಳಲುತ್ತಿದ್ದಾರೆಂಬ ಗುರುತಿಸುವುದು ಹೇಗೆ? ಹಾಗು ಇವುಗಳಲ್ಲಿ ಯಾವ ಕಾಯಿಲೆಯಿಂದ ಬಳಲುವವರಿಗೆ ಹೆಚ್ಚಿನ ಆದ್ಯತೆ?
ಅದಾಗಲೇ ಕೆಲವು ದಿನಗಳ ಹಿಂದೆ – ‘ಬಡವರಿಗೆ ಈ ಲಸಿಕೆ ಉಚಿತವಾಗಿ ನೀಡಲು ಸಾಧ್ಯವಾಗಬಹುದು- ಎಂದೂ, ಮತ್ತೆರಡು ದಿನದಲ್ಲಿ ‘ಸರ್ವರಿಗೂ ಈ ಲಸಿಕೆ ಕಡಿಮೆ ಬೆಲೆಯಲ್ಲಿ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದೂ ನಮ್ಮ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿದರು.
ಅಂದರೆ ಬಡತನ ರೇಖೆಗಿಂತ ಕೆಳಗಿರುವವರು ಮಾತ್ರ ಈ ಲಸಿಕೆ ಉಚಿತವಾಗಿ ಪಡೆಯುವವರೆ? ಅಥವಾ ಸರ್ವರೂ ಇದನ್ನು ಹಣಕೊಟ್ಟು ಪಡೆಯಬೇಕೆ? ಆದರೇ ಆರ್ಥಿಕವಾಗಿ ಕಂಗೆಟ್ಟಿರುವ ಜನತೆಯಲ್ಲಿ ಎಷ್ಟು ಪ್ರಮಾಣದವರು ಈ ಲಸಿಕೆ ಪಡೆಯಲು ಆಗ ಮುಂಬರುವರು?
ಈಗಿನ ಅನುಭವದಂತೆ ಯಾವುದೇ ರಾಷ್ಟ್ರೀಯ ಯೋಜನೆಯ ಅನುಷ್ಟಾನ ಫಲಪ್ರದವಾಗ ಬೇಕಾದರೆ ಅದನ್ನು ಬಡವ ಬಲ್ಲಿದ ಭೇಧವಿಲ್ಲದೆ ಸರ್ವರಿಗೂ ಉಚಿತವಾಗಿ ನೀಡುವುದು ಅಗತ್ಯ. ಇಲ್ಲವಾದರೆ ಲಸಿಕೆ ಪಡೆಯುವ ಜನರ ಪ್ರಮಾಣ ಈ ಕಾಯಿಲೆಯ ಹತೋಟಿ ಕಾರ್ಯಕ್ರಮಕ್ಕೆ ಬೇಕಾದ ಮಟ್ಟ ತಲಪುವುದು ಸಂಶಯ.
ಯಾವುದೇ ಲಸಿಕೆಯು ಇದರ ಫಲಾನುಭವಿಗಳಿಗೆ ನೀಡುವ ರೋಗನಿರೋಧಕ ಶಕ್ತಿಯ ಕಾಲಾವಧಿಯನ್ನು ನಿಖರವಾಗಿ ಹಲವಾರು ವರ್ಷಗಳೇ ಬೇಕು. ಈಗಿನ ಅಂದಾಜಿನಂತೆ ಕೋವಿಡ್-19 ರ ಲಸಿಕೆ ಈ ಶಕ್ತಿ ಸಾಧಾರಣ 9 ರಿಂದ 12 ತಿಂಗಳು. ಅಂದರೆ ಈ ಕಾಲಾವಧಿಯ ಒಳಗೆ ನಾವು ಈ ಕಾಯಿಲೆಯ ಹತೋಟಿ ಕಾರ್ಯಕ್ಕೆ ಅಗತ್ಯವಾದ ಸಾಧಾರಣ 80-85 ಕೋಟಿ ಜನರಿಗೆ ಲಸಿಕೆಯನ್ನು ನೀಡಲು ಸಾಧ್ಯವೆ? ಈಗಿನ ಅಂದಾಜಿನಂತೆ ಇಷ್ಟು ಜನರಿಗೆ ಲಸಿಕೆ ನೀಡಲು 2 ರಿಂದ 3 ವರ್ಷಗಳಾದರೂ ಬೇಕು. ಆದರೆ ಅದಾಗಲೇ ಲಸಿಕೆ ಪಡೆದ ಬಹಳಷ್ಟು ಜನ ತಮ್ಮಲ್ಲಿ ಈ ಕಾಯಿಲೆಯನ್ನು ತಡೆಗಟ್ಟುವ ಶಕ್ತಿ ಕಳೆದುಕೊಂಡಿರುತ್ತಾರೆ. ಇವರಿಗೆಲ್ಲಾ ಪ್ರತೀ ವರ್ಷ ಲಸಿಕೆ ನೀಡಬೇಕೆ? ಹೌದಾದರೆ ನಮಗೆ ಬೇಕಾಗುವ ಲಸಿಕೆಗಳ ಸಂಖ್ಯೆ ಎಷ್ಟು. ಕಾಯಿಲೆಯ ಹತೋಟಿಗೆ ಬೇಕಾದ ಪ್ರಮಾಣದಲ್ಲಿ ಜನರಿಗೆ ಲಸಿಕೆ ನೀಡುವ ಗುರಿ ಮುಟ್ಟುವುದು ಯಾವಾಗ?
ಮೂರು ಹಂತಗಳ ಲಸಿಕಾ ಪ್ರಯೋಗದಲ್ಲಿ ಇದರಿಂದ ಬರಬಹುದಾದ ತೊಂದರೆಗಳನ್ನು ಅದಾಗಲೇ ಗುರುತಿಸಲಾಗಿದೆ.
ಇವುಗಳಲ್ಲಿ ಹೆಚ್ಚಿನವುಗಳು ಚಿಕ್ಕ ಪುಟ್ಟ ತೊಂದರೆಗಳು ಇವುಗಳು ಇಂಜಕ್ಸ್‌ನ್ ನೀಡಿದ ಜಾಗದಲ್ಲಿ ಸ್ವಲ್ಪ ಊತ, ನೋವು, ಮೈಕೈ ನೋವು, ಸಣ್ಣಜ್ವರ, ನಿಶ್ಯಕ್ತಿ, ತಲೆನೋವು, ಚಳಿ, ಗಂಟುಗಳಲ್ಲಿ ನೋವು ಇವುಗಳಲ್ಲದೆ ಫೈಝರ್ ನ ಲಸಿಕೆ ನೀಡಿದಾಗ, ಒಟ್ಟು ಜನರಲ್ಲಿ ನಾಲ್ವರಿಗೆ ಮುಖದ ಒಂದು ಭಾಗದಲ್ಲಿ ಸ್ನಾಯುಗಳ ನಿಶ್ಯಕ್ತಿ (ಫೇಶಿಯಲ್ ಫಾಲ್ಸಿ) ಕಾಣಿಸಿಕೊಂಡಿತ್ತು. ಆದರೆ ಇದರ ಪ್ರಮಾಣ ಲಸಿಕೆ ಪಡೆಯದ ಇನ್ನೊಂದು ಗುಣವು ಇತರರಲ್ಲಿ ಇರುವ ಪ್ರಮಾಣದಲ್ಲೇ ಇದ್ದು, ಈ ಸಮಸ್ಯೆಗೂ ಲಸಿಕೆಗೂ ಸಂಬಂಧವಿಲ್ಲವೆನ್ನುವುದು ತಿಳಿಯಿತು. ಆದರೆ 24 ಜನರಲ್ಲಿ ದೇಹದ ದುಗ್ಥಗ್ರಂಥಿ (ಲಿಂಫ್ ನೋಡ್ಸ್)ಗಳಲ್ಲಿ ಊತಕಾಣಿಸಿಕೊಂಡಿತ್ತು. ಇದು ಲಸಿಕೆ ಪಡೆಯದ ಅದೇ ಸಂಖ್ಯೆಯ ಇನ್ನೊಂದು ಗುಂಪಿನಲ್ಲಿ ಬರೇ 6 ಜನರಲ್ಲಿ ಕಾಣಿಸಿಕೊಂಡಿತ್ತು. ಲಸಿಕೆ ಈ ತೊಂದರೆಗೆ ಕಾರಣವಾದರೂ ಇದು ಯಾವುದೇ ಗಂಭೀರ ತೊಂದರೆ ಆಗಿರಲಿಲ್ಲ.
ಭಾರತ್ ಬಯೋಟೆಕ್‌ನಲ್ಲಿ ಲಸಿಕಾ ಪ್ರಯೋಗಕ್ಕೊಳಗಾದ ಒಬ್ಬರಲ್ಲಿ ಲಸಿಕೆ ಪಡೆದ ಎರಡು ದಿನಗಳ ನಂತರ ‘ನ್ಯೂಮೊನೈಟಿಸ್ ಕಾಣಿಸಿಕೊಂಡಿತ್ತು. ಹಾಗೂ ಆ ವ್ಯಕ್ತಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಆದರೆ ಲಸಿಕೆಗೂ ಈ ಕಾಯಿಲೆಗೂ ಸಂಬಂಧವಿರಲಿಲ್ಲ.
ಡಿಸೆಂಬರ್ ಒಂದರಂದು ಚೆನೈನಲ್ಲಿ ಸೀರಂ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ‘ಕೊವಿಶೀಲ್ಡ್ 40 ವಯಸ್ಸಿನ ವ್ಯಕ್ತಿಯಲ್ಲಿ ಲಸಿಕೆ ಪಡೆದ ಹತ್ತು ದಿನಗಳ ನಂತರ ಮಿದುಳಿನ ಉರಿಊತ ಕಾಣಿಸಿಕೊಂಡು ಅದರ ಆಲೋವನಾ ಶಕ್ತಿಯಲ್ಲಿ ವ್ಯತ್ಯಾಸ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಉದ್ಬವಿಸಿತ್ತು. ಆದರೆ ಈ ಕಾಯಿಲೆಗೂ ಲಸಿಕೆಗೂ ಸಂಬಂಧವಿಲ್ಲವೆಂದು ಮುಂದಿನ ತನಿಖೆಯಿಂದ ತಿಳಿದು ಬಂದಿತ್ತು.
ಜನ ಸಾಮಾನ್ಯರಲ್ಲಿ ‘ಫೈಝರ್ ಲಸಿಕೆಯ ಮೊತ್ತಮೊದಲ ಉಪಯೋಗ ಯು.ಕೆ. (ಯುನೈಟೆಡ್ ಕಿಂಗ್‌ಡಂ) ನಲ್ಲಿ ಡಿಸೆಂಬರ್ ತಿಂಗಳ 8 ನೇ ತಾರಿಖು ಪ್ರಾರಂಭವಾಗಿತ್ತು. ಆದರೆ ಈ ಲಸಿಕೆ ಪಡೆದ ಇಬ್ಬರಲ್ಲಿ ಗಂಭಿರ ಹಂತದ ಅಲರ್ಜಿ ಪ್ರಕ್ರಿಯೆಯನ್ನುಂಟು ಮಾಡಿತ್ತು. ಹಾಗಾಗಿ ಆಹಾರ, ಔಷಧ, ಮತ್ತಿತರ ಯಾವುದೇ, ಅಲರ್ಜಿಯಿಂದ ಬಳಲುವದರಲ್ಲಿ ಈ ಲಸಿಕಾ ಪ್ರಯೋಗ ಸೂಕ್ತವಲ್ಲ ವೆನ್ನುವುದು ತಿಳಿದು ಬಂದಿದೆ.
ಇದನ್ನು ಓದಿ : ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? : ಭಾಗ-2 ಲಸಿಕೆಯ ಲಭ್ಯತೆ, ಅಗತ್ಯ
ಕೊವಿಡ್ ಲಸಿಕೆ ಪಡೆದ ಫಲಾನುಭವಿಗಳು ಈ ಕಾಯಿಲೆ ಹರಡದಂತೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕೆ ಎನ್ನುವುದು ಹಲವರ ಪ್ರಶ್ನೆ.
2 ನೇ ಲಸಿಕೆ ಪಡೆದ 14 ದಿನಗಳ ತನಕ ಫಲಾನುಭವಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಪೂರ್ಣ ಪ್ರಮಾಣದಲ್ಲಿ ಬೆಳೆದಿರುವುದಿಲ್ಲ. ಹಾಗಾಗಿ ಮಾಸ್ಕ, ದೈಹಿಕ ಅಂತರ, ಕೈ ಶುಚಿಗೊಳಿಸುವ ಕಾರ್ಯದ ಅನುಷ್ಟಾನ ಆ ಕಾಲದಲ್ಲಿ ಅತ್ಯವಶ್ಯಕ.
ಈ ಕಾಯಿಲೆ ಹಾಗೂ ಲಸಿಕೆಗಳ ಉಪಯುಕ್ತತೆಗಳ ಬಗ್ಗೆ ನಮಗಿನ್ನೂ ಪೂರ್ಣ ಪ್ರಮಾಣದ ಮಾಹಿತಿ ದೊರೆತಿಲ್ಲ. ಇಂದಿನ ಮಾಹಿತಿಯಂತೆ ಪೂರ್ಣ ಪ್ರಮಾಣದ ಲಸಿಕೆ ರೋಗಲಕ್ಷಣದಿಂದ ಕೂಡಿದ ಗಂಭೀರ ಕೊವಿಡ್-19 ನ್ನು ತಡೆಗಟ್ಟುತ್ತದೆ. ಆದರೆ ಕೆಲವರಲ್ಲಿ ರೋಗಲಕ್ಷಣ ರಹಿತ ಕೊವಿಡ್ ಲಸಿಕೆ ಪಡೆದ ನಂತರವೂ ಬರಬಹುದು. ಹಾಗೂ ಪರರಿಗೆ ಇವರಿಂದ ಸೋಂಕು ತಗಲುವ ಸಾಧ್ಯತೆ ಇರಬಹುದು. ಹಾಗಾಗಿ ಸಂಪೂರ್ಣ ಮಾಹಿತಿ ಸಿಗುವ ತನಕ ಜಾಗ್ರತೆ ವಹಿಸುವುದು ಉತ್ತಮ.