ಕೋವಿಡ್-19 ಮಹಾಸೋಂಕು ಮತ್ತು ನವ-ಉದಾರವಾದಿ ದಿವಾಳಿತನ

ಅಕ್ಟೋಬರ್ 30-31, 2020 ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತು ವರದಿಯನ್ನು ಅಂಗೀಕರಿಸಿದೆ. ಕಳೆದ ಮೂರು ತಿಂಗಳುಗಳ ಪ್ರಮುಖ ಅಂತರಾಷ್ಟ್ರೀಯ ಬೆಳವಣಿಗೆಗಳ ವಿಶ್ಲೇಷಣೆ ಇರುವ ಆಯ್ದ ಭಾಗಗಳು ಇಲ್ಲಿವೆ.

ಕೋವಿಡ್-19 ಮಹಾಸೋಂಕು ಸ್ಥಿತಿ :
ವಿಶ್ವದಾದ್ಯಂತ ದೃಢೀಕರಿಸಿದ ಕೊವಿಡ್ ಪ್ರಕರಣಗಳು 4 ಕೋಟಿಯನ್ನು ಮೀರಿವೆ. ಆದಾಗ್ಯೂ, ತಜ್ಞರು ಇದು ಒಟ್ಟು ಕೊವಿಡ್ ಪ್ರಕರಣಗಳ ಒಂದು ಸಣ್ಣ ಭಾಗ ಮಾತ್ರ ಎಂದು ಎಚ್ಚರಿಸಿದ್ದಾರೆ. ಕೊವಿಡ್ ಸಂಬಂಧಿತ ಜಾಗತಿಕ ದತ್ತಾಂಶವನ್ನು ಸಂಕಲಿಸುವ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಕೋವಿಡ್ ಸೋಂಕಿನ ಪ್ರಕರಣಗಳ ಅಂಕಿ-ಅಂಶಗಳು ಇದಕ್ಕಿಂತ ಬಹಳಷ್ಟು ಹೆಚ್ಚಾಗಿವೆ. ಸೀಮಿತ ಮತ್ತು ಅಸಮಾನ ಪರೀಕ್ಷೆಗಳಿಂದಾಗಿ, ಅನೇಕ ಪ್ರಕರಣಗಳು ಲಕ್ಷಣರಹಿತ ಆಗಿರುವುದರಿಂದಾಗಿ ಮತ್ತು ಕೆಲವು ಸರ್ಕಾರಗಳು ನಿಜವಾದ ಸಂಖ್ಯೆಯ ಪ್ರಕರಣಗಳನ್ನು ಮರೆಮಾಚುವುದರಿಂದಾಗಿ ಹಲವು ಪ್ರಕರಣಗಳು ದತ್ತಾಂಶದಲ್ಲಿ ಸೇರಿಲ್ಲ ಎಂದು ಅದು ತಿಳಿಸಿದೆ.

ಯು.ಎಸ್, ಭಾರತ ಮತ್ತು ಬ್ರೆಜಿಲ್ ಅನುಕ್ರಮವಾಗಿ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತಿರುವುದು ಮುಂದುವರೆದಿದೆ. ಭಾರತದಲ್ಲಿ ಸೋಂಕಿನ ಒಟ್ಟು ಪ್ರಕರಣಗಳು ಮತ್ತು ಸಾವುಗಳ ಹೆಚ್ಚಳದ ದರ ಎರಡೂ ಇಂದು ಜಗತ್ತಿನಲ್ಲೇ ಅತ್ಯಧಿಕವಾಗಿರುವುದು ಗಾಬರಿ ಹುಟ್ಟಿಸುವ ಸಂಗತಿಯಾಗಿದೆ.
ಬ್ರಿಟನ್, ಫ್ರಾನ್ಸ್, ರಷ್ಯಾ, ಸ್ಪೇನ್ ಮುಂತಾದ ಅನೇಕ ದೇಶಗಳಲ್ಲಿ ಮತ್ತೆ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡುತ್ತಿದ್ದು ಯುರೋಪಿನ ದಾಖಲಾದ ಸುಮಾರು ಏಳು ಲಕ್ಷಗಳ ವಾರದ ಹೆಚ್ಚ¼ದಿಂದಾಗಿ, ಈಗ ಈ ದೇಶಗಳಲ್ಲಿ ಪುನಃ ವಿವಿಧ ಮಟ್ಟದಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ.

ಲಸಿಕೆ: ವಿಶ್ವದ ಅತ್ಯಂತ ಭರವಸೆಯ ಕೊರೊನಾ ವೈರಸ್ ಲಸಿಕೆಗಳಿಗೆ ಪ್ರಬಲ ಮತ್ತು ಸುರಕ್ಷಿತ ಸತತ ಸೋಂಕುರಹಿತ ಶೀತಲೀಕರಣದ ಅಗತ್ಯವಿದೆ. ಆದಾಗ್ಯೂ ವಿಶ್ವದ 7.8 ಶತಕೋಟಿ ಜನರಲ್ಲಿ ಮೂರು ಶತಕೋಟಿ ಜನರು ಒಂದು ಅಂದಾಜಿನಂತೆ, ಸೋಂಕುರಹಿತ ತಾಪಮಾನ ನಿಯಂತ್ರಿತ ಶೀತಲೀಕರಣದ ವ್ಯವಸ್ಥೆ ಇರದಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಕೋವಿಡ್-19 ನ್ನು ನಿಯಂತ್ರಣಕ್ಕೆ ತರುವ ರೋಗ ನಿರೋಧಕ ಅಭಿಯಾನಕ್ಕೆ ದೊಡ್ಡ ತೊಡಕಾಗಲಿದೆ. ಹಾಗೆಯೇ ಕೊವಿಡ್-19 ವೈರಸ್ ನಿರ್ದಾಕ್ಷಿಣ್ಯವಾಗಿ ಎಲ್ಲರನ್ನೂ ಬಾಧಿಸುತ್ತದೆ. ಆದರೆ ವಿಶ್ವದ ಬಡವರು ಇದಕ್ಕೆ ತೀವ್ರವಾಗಿ ತುತ್ತಾಗುತ್ತಾರೆ. ಅದರಿಂದ ಚೇತರಿಸಿಕೊಳ್ಳುವುದರಲ್ಲೂ ಅವರು ಕೊನೆಯವರಾಗಿರುತ್ತಾರೆ. ಈ ತೊಡಕನ್ನು ನಿವಾರಿಸದಿದ್ದರೆ, ಲಸಿಕೆ ಅಭಿವೃದ್ಧಿಪಡಿಸಿದಾಗಲೂ ಮಹಾಸೋಂಕು ಹರಡುವುದು ದೀರ್ಘಕಾಲ ಮುಂದುವರೆಯುತ್ತದೆ.

ಸಮಾಜವಾದಿ ದೇಶಗಳು:
ಇದಕ್ಕೆ ತದ್ವಿರುದ್ಧವಾಗಿ, ಸಮಾಜವಾದಿ ದೇಶಗಳು ಮಹಾಸೋಂಕಿನ ಹರಡುವಿಕೆಯನ್ನು ಸಮರ್ಥವಾಗಿ ತಡೆಹಿಡಿದು ತಮ್ಮ ಆರ್ಥಿಕ ಚಟುವಟಿಕೆ ಮತ್ತು ಜೀವನವನ್ನು ಮರಳಿ ಪ್ರಾರಂಭಿಸಿವೆ. ಅಕ್ಟೋಬರ್ ವರೆಗೆ, ಚೀನಾ 85,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 4,634 ಜನರ ಸಾವು ಸಂಭವಿಸಿದೆ. ಸುಮಾರು 3 ಕೋಟಿ ಪಕ್ಷದ ಸದಸ್ಯರು ಮಹಾ ಸೋಂಕು ತಡೆಹಿಡಿಯುವ ಸಮರದ ಮುಂಚೂಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಪ್ರಕ್ರಿಯೆಯಲ್ಲಿ ಪಕ್ಷದ 396 ಸದಸ್ಯರು ಪ್ರಾಣ ತೆತ್ತಿದ್ದಾರೆ.

ಮಹಾಸೋಂಕಿನಿಂದಾಗಿ ಕ್ಯೂಬಾ 123 ಜನರನ್ನು ಕಳೆದುಕೊಂಡಿತು. ಯು.ಎಸ್ ಆರ್ಥಿಕ ದಿಗ್ಬಂಧನದ ಹೊರತಾಗಿಯೂ, ಮಹಾಸೋಂಕನ್ನು ನಿಯಂತ್ರಿಸಲು ಮತ್ತು ದೊಡ್ಡ ಸಂಖ್ಯೆಯಲ್ಲಿ ಜೀವಗಳನ್ನು ಉಳಿಸಲು ಕ್ಯೂಬಾಕ್ಕೆ ಸಾಧ್ಯವಾಗಿದೆ. ವಿಯೆಟ್ನಾಂ ನಲ್ಲಿ, ಇಲ್ಲಿಯವರೆಗೆ 139 ಜನರು ಪ್ರಾಣ ಕಳೆದು ಕೊಂಡಿದ್ದಾರೆ ಮತ್ತು ದೇಶದಲ್ಲಿ ಉದ್ಭವಿಸಿದ ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ವಿಯಟ್ನಾಂ ಯಶಸ್ವಿಯಾಗಿದೆ. ಜನರಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಉಚಿತವಾಗಿ ಖರೀದಿ ಮಾಡಲು ಸಾಪ್ತಾಹಿಕ ಸೂಪರ್ ಮಾರುಕಟ್ಟೆಗಳನ್ನು ಮತ್ತು ಅಕ್ಕಿಯನ್ನು ಉಚಿತವಾಗಿ ಪಡೆಯಲು ಅಕ್ಕಿ ಎಟಿಎಂ ಗಳನ್ನು ವಿಯೆಟ್ನಾಂ ಸರ್ಕಾರ ಪ್ರಾರಭಿಸಿತು.

ಇತ್ತೀಚಿನ ಪ್ರವಾಹ ಮತ್ತು ಬಿರುಗಾಳಿಯ ವಿನಾಶದ ಹೊರತಾಗಿಯೂ, ಉತ್ತರ ಕೊರಿಯಾ (ಡಿ.ಪಿ.ಆರ್.ಕೆ) ದೇಶದಲ್ಲಿ ಶೂನ್ಯ ಸಾವುಗಳನ್ನು ವರದಿ ಮಾಡಿದೆ. ಪರಿಹಾರ ಮತ್ತು ಪುನರ್ವಸತಿಗಾಗಿ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ಕೋವಿಡ್ ಹರಡುವಿಕೆ ಆಗಿಲ್ಲ ಎಂಬುದು ವಿಶೇಷ. ನವ-ಉದಾರವಾದಿ ಬಂಡವಾಳಶಾಹಿ ದೇಶಗಳು ಮತ್ತು ಸಮಾಜವಾದ ದೇಶಗಳ ನಡುವೆ, ಈ ಮಹಾಸೋಂಕಿನ ಕಾಲದಲ್ಲಿಯೂ ಮತ್ತೊಮ್ಮೆ ವ್ಯತ್ಯಾಸವನ್ನು ಸ್ಪಷ್ಟವಾದ ಗುರುತಿಸಬಹುದಾಗಿದೆ.

ಜಾಗತಿಕ ಆರ್ಥಿಕತೆ ಐ.ಎಂ.ಎಫ್ ನ ವಿಶ್ವ ಆರ್ಥಿಕ ನೋಟ, ಅಕ್ಟೋಬರ್ 2020 : ದೀರ್ಘ ಮತ್ತು ಕಷ್ಟಕರವಾದ ಚೇತರಿಕೆಯ ಅಂಧಾಜಿನಲ್ಲಿ ಮಾರುಕಟ್ಟೆ ವಿನಿಮಯ ದರಗಳ (ಎಂ.ಇ.ಆರ್- ಮಾರ್ಕೆಟ್ ಎಕ್ಸ್ ಚೇಂಜ್ ರೇಟ್) ಎಂಬ ಸಾಮಾನ್ಯವಾಗಿ ಬಳಸಲಾಗುವ ಮಾನದಂಡದ ಪ್ರಕಾರ ಜಾಗತಿಕ ಬೆಳವಣಿಗೆಯ ದರವು 2020 ಕ್ಕೆ ಶೇಕಡಾ (-) 4.7 ರಷ್ಟು ಕುಸಿಯುತ್ತದೆ ಎಂದು ಐಎಂಎಫ್ ಅಂದಾಜು ಮಾಡಿದೆ. ಖರೀದಿಯ ಸಾಮರ್ಥ್ಯದ ಅನುರೂಪತೆಯ (ಪಿಪಿಪಿ – ರರ್ಚೆಸಿಂಗ್ ಪವರ್ ಪ್ಯಾರಿಟಿ) ಆಧಾರದ ಮೇಲೆ ಜಾಗತಿಕ ಉತ್ಪಾದನೆಯ ಮೌಲ್ಯವೂ ಸಹ ಕುಸಿದಿದೆ. ವರದಿಯು “ಬೆಳವಣಿಗೆಯು ಅಂದಾಜು ಮಾಡಿದ ಬೆಳವಣಿಗೆಯ ದರಕ್ಕಿಂತ ಇನ್ನೂ ಕೆಟ್ಟದಾಗಿರುವ ಅಪಾಯವು ಸಾಕಷ್ಟಿದೆ” ಎಂದು ಎಚ್ಚರಿಸಿದೆ. ಈ ಹಿಂಜರಿತ ಜಾಗತಿಕ ಬಡತನವನ್ನು ಕಡಿಮೆ ಮಾಡುವಲ್ಲಿ 1990 ರಿಂದ ಸಾಧಿಸಿದ ಪ್ರಗತಿಯನ್ನು ಹಿಮ್ಮುಖಗೊಳಿಸುತ್ತದೆ ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತದೆ” ಎಂದೂ ವರದಿ ಎಚ್ಚರಿಸಿದೆ. ಪ್ರಸ್ತುತ ಜಾಗತಿಕ ಆರ್ಥಿಕತೆಯು 1929-30 ರ ಮಹಾ ಕುಸಿತದ ನಂತರ, ಅತ್ಯಂತ ಆಳವಾದ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ ಎಂದು ವಿಶ್ವ ಬ್ಯಾಂಕ್ ವಿವರಿಸಿದೆ.

ಬೆಳೆಯುತ್ತಿರುವ ಜನರ ಸಂಕಷ್ಟಗಳು: ವಿಶ್ವ ಬ್ಯಾಂಕಿನ ಪ್ರಕಾರ, 2021 ರ ಹೊತ್ತಿಗೆ 15 ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನದ ಕೂಪಕ್ಕೆ ತಳ್ಳಲಾಗುವುದು. ಕಾರ್ಮಿಕ ಭಾಗವಹಿಸುವಿಕೆಯ ದರವು ಕೋವಿಡ್-ಪೂರ್ವ ಮಟ್ಟಕ್ಕಿಂತಲೂ ಕಡಿಮೆಯಿದೆ ಮತ್ತು ಇನ್ನಷ್ಟು ಹೆಚ್ಚಿನ ಉದ್ಯೋಗಗಳು ನಾಶವಾಗುವ ಸಾಧ್ಯತೆಯಿದೆ. ಐ.ಎಲ್.ಒ ಪ್ರಕಾರ, 2020ರ ಎರಡನೇ ತ್ರೈಮಾಸಿಕದಲ್ಲಿ ಆದ ಒಟ್ಟು ಜಾಗತಿಕ ಕೆಲಸದ ಗಂಟೆಗಳ ಮೊತ್ತ 2019 ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ 40 ಕೋಟಿ ಪೂರ್ಣ ಸಮಯದ ಉದ್ಯೋಗಗಳ ನಷ್ಟಕ್ಕೆ ಸಮನಾಗಿತ್ತು. ಇದು ಮೊದಲ ತ್ರೈಮಾಸಿಕದ 15.5 ಕೋಟಿ ಉದ್ಯೋಗ ನಷ್ಟಕ್ಕಿಂತ ಆತಂಕಕಾರಿಯಾದ ಹೆಚ್ಚಳವಾಗಿದೆ.

ಚೀನಾ: ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಚೀನಾ ಮಾತ್ರ ಜಿಡಿಪಿಯಲ್ಲಿ ಶೇಕಡಾ 3.2 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ದೇಶವಾಗಿದೆ. ಇದೇ ತ್ರೈಮಾಸಿಕದಲ್ಲಿ ಭಾರತವು ಶೇಕಡಾ (-) 23.9 ರಷ್ಟು ಜಿಡಿಪಿಯ ಕುಸಿತವನ್ನು ದಾಖಲಿಸಿದೆ. ನಂತರದ ತ್ರೈಮಾಸಿಕ ಅಂಕಿ ಅಂಶಗಳು ಬಂದಿದ್ದು ಚೀನಾ ಬೆಳವಣಿಗೆ ಶೇ 4.9 ರಷ್ಟಿದೆ. 2020 ರಲ್ಲಿ ಚೀನಾ ನಿಜ ಜಿಡಿಪಿಯಲ್ಲಿ ಶೇ. 6.1 ಬೆಳವಣಿಗೆಯನ್ನು ಕಾಣುತ್ತದೆ. ಆದರೆ ಪ್ರಮುಖವಾಗಿ, ಅಭಿವೃದ್ದ ಬಂಡವಾಳಶಾಹಿ ದೇಶಗಳ ಆರ್ಥಿಕತೆಗಳು ನಿಜ ಜಿಡಿಪಿಯಲ್ಲಿ ಶೇಕಡಾ ಆರ್ಥಿಕತೆಗಳು ಶೇಕಡಾ (-) 5.9 ರಷ್ಟು ಕುಸಿತವನ್ನು ಕಾಣುತ್ತವೆ ಎಂದು ಐ.ಎಂ.ಎಫ್ ಅಂದಾಜಿಸಿದೆ.

ಐ.ಎ.ಎಫ್ ನ ವಿಶ್ವ ಆರ್ಥಿಕ ನೋಟ ಅಕ್ಟೋಬರ್ 2020 ರ ವರದಿಯ ಸೂಚನೆಯಂತೆ, ಚೀನಾ ಈಗ ಯು.ಎಸ್.ಎ ಯನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಖರೀದಿಯ ಸಾವiರ್ಥ್ಯದ ಅನುರೂಪತೆಯ (ಪಿಪಿಪಿ) ಮಾನದಂಡದಿಂದ ತಲುಪಿದ ತೀರ್ಮಾನ ಇದಾಗಿದೆ. ಇದರ ಪ್ರಕಾರ, ಅಮೆರಿಕದ 20.8 ಟ್ರಿಲಿಯನ್ ಡಾಲರಿಗೆ ಹೋಲಿಸಿದರೆ, ಚೀನಾದ ಆರ್ಥಿಕತೆಯ ಮೌಲ್ಯ 24.2 ಟ್ರಿಲಿಯನ್ ಡಾಲರ್ ಆಗಿದೆ.
ಆದಾಗ್ಯೂ, ಮಾರುಕಟ್ಟೆ ವಿನಿಮಯ ದರಗಳ (ಎಂಇಆರ್) ಸಾಮಾನ್ಯವಾಗಿ ಬಳಸಲಾಗುವ ಮಾನದಂಡದ ಪ್ರಕಾರದ ಯು.ಎಸ್.ಎ ಇನ್ನೂ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ.

ನವಉದಾರವಾದಿ ದಿವಾಳಿತನ:
ನವ-ಉದಾರವಾದ ಮತ್ತು ಅದರ ಆರ್ಥಿಕತೆಯ ಪಥದಲ್ಲಿ ಸುಧಾರಣೆಗಳು ಲಾಭವನ್ನು ಹೆಚ್ಚಿಸುವ ಏಕಮಾತ್ರ ಗುರಿಯನ್ನು ಹೊಂದಿವೆಯೇ ಹೊರತು, ಈ ಬಿಕ್ಕಟ್ಟಿಗೆ ಬೇರೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಾವೀಗಾಗಲೇ ಗಮನಿಸಿದ್ದೇವೆ. ಇದು ಆರ್ಥಿಕ ಅಸಮಾನತೆಗಳನ್ನು ತೀವ್ರವಾಗಿ ಹೆಚ್ಚಿಸಿದೆ. ಮಹಿಳೆಯರ ಮತ್ತು ತುಲನಾತ್ಮಕವಾಗಿ ಕಡಿಮೆ ಕೌಶಲ್ಯ ಮತ್ತು ಅರ್ಹತೆಗಳನ್ನು ಹೊಂದಿರುವವರ ಉದ್ಯೋಗಗಳ ಮೇಲೆ, ಈ ಹಿಂಜರಿತವು ತುಲನಾತ್ಮಕವಾಗಿ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರಿದೆ. ಮತ್ತೊಂದೆಡೆ, ಈ ಮಹಾಸೋಂಕಿನಿಂದ ಉಂಟಾದ ಆರ್ಥಿಕ ಹಿಂಜರಿತದ ಸಮಯದಲ್ಲಿಯೂ, ಜಾಗತಿಕ ಶತಕೋಟ್ಯಾಧಿಪತಿಗಳ ಮಾತ್ರ ಹೆಚ್ಚೆಚ್ಚು ಲಾಭದೊಂದಿಗೆ ಕೊಬ್ಬುತ್ತಿರುವುದನ್ನು ಕಾಣಬಹುದಾಗಿದೆ.

ಅಮೆರಿಕದ ನಾಲ್ಕು ಶತಕೋಟ್ಯಾಧಿಪತಿಗಳಲ್ಲಿ ಮೂವರು ತಮ್ಮ ಆಸ್ತಿಯ ನಿವ್ವಳ ಮೌಲ್ಯದಲ್ಲಿ ಏರಿಕೆ ಕಂಡಿದ್ದಾರೆ. ಹಫಿಂಗ್ಟನ್ ಪೋಸ್ಟ್ ಹೀಗೆ ಹೇಳುತ್ತದೆ “ಕೋವಿಡ್-19 ಮಹಾಸೋಂಕಿನಿಂದ ಅಮೇರಿಕನ್ ಶತಕೋಟ್ಯಾಧಿಪತಿಗಳಿಗಿಂತ ಯಾರೂ ಹೆಚ್ಚು ಪ್ರಯೋಜನ ಪಡೆದಿಲ್ಲ. ಅಮೆರಿಕಾದ 16 ಅಮೇರಿಕನ್ ಶತಕೋಟ್ಯಾಧಿಪತಿಗಳ ಆಸ್ತಿಯು ಮಾರ್ಚ್ನಲ್ಲಿ ಇದ್ದದ್ದಕ್ಕಿಂತ ಈಗ ಎರಡು ಪಟ್ಟು ನಿವ್ವಳ ಮೌಲ್ಯದ್ದಾಗಿದೆ”.
ಆದಾಗ್ಯೂ, ಹೆಚ್ಚಿನ ಶತಕೋಟ್ಯಾಧಿಪತಿಗಳು ತಮ್ಮ ಈ ಸಂಪತ್ತನ್ನು ವಹಿವಾಟುಗಳ ನಾಯಕರಾಗಿ ಗಳಿಸಿಕೊಂಡಿಲ್ಲ. ಇವರು ಹೂಡಿಕೆದಾರರಾಗಿ ತಮ್ಮ ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ. ಇದಕ್ಕಾಗಿಯೇ ಆರ್ಥಿಕ ಹಿಂಜರಿತವು ಶೇರು ಮಾರುಕಟ್ಟೆಯ ಮೇಲೆ ನಿರೀಕ್ಷಿತ ನಕಾರಾತ್ಮಕವಾದ ಪರಿಣಾಮ ಬೀರಲಿಲ್ಲ.

ವಿವಿಧ ಬಂಡವಾಳಶಾಹಿ ದೇಶಗಳು ಘೋಷಿಸಿದ ಉತ್ತೇಜಕ ಪ್ಯಾಕೇಜುಗಳಿಂದ ಜನರಿಗಿಂತ ಬಹಳಷ್ಟು ಹೆಚ್ಚಾಗಿ ಶ್ರೀಮಂತ ಕಾರ್ಪೊರೇಟುಗಳಿಗೆ ಲಾಭವಾಗಿದೆ. ನವ ಉದಾರವಾದ ಜಾಗತೀಕರಣವು 1980ರಿಂದ ಪಡೆದುಕೊಂಡ ವೇಗದಿಂದಾಗಿ ಶ್ರೀಮಂತರ ಮೇಲಿನ ತೆರಿಗೆಗಳು ಶೇ.79 ರಷ್ಟು ಕುಸಿದಿವೆ. ಮತ್ತೊಂದೆಡೆ, ಕಾರ್ಮಿಕ ವರ್ಗದ ಮತ್ತು ದುಡಿಯುವ ಜನರ ವಿರುದ್ಧ ವರ್ಗ ಆಕ್ರಮಣ ತೀವ್ರವಾಗಿ ಉಲ್ಬಣಗೊಂಡಿದೆ. ಇದರಿಂದಾಗಿ, ಯು.ಎಸ್.ಎ ದಲ್ಲಿ 1979 ರಲ್ಲಿ ಸರಿಸುಮಾರು ನಾಲ್ಕು ಕಾರ್ಮಿಕರಲ್ಲಿ ಒಬ್ಬರನ್ನು ಕಾರ್ಮಿಕ ಸಂಘಗಳು ಪ್ರತಿನಿಧಿಸುತ್ತಿದ್ದವು. ಅದು ಕಡಿತಗೊಂಡು, ಇದೀಗ, ಹತ್ತು ಕಾರ್ಮಿಕರಲ್ಲಿ ಒಬ್ಬರನ್ನು ಮಾತ್ರ ಕಾರ್ಮಿಕ ಸಂಘಗಳು ಪ್ರತಿನಿಧಿಸುತ್ತವೆ. (ಅಂದರೆ ಸಂಘಟಿತ ಕಾರ್ಮಿಕರ ಬಲ ಶೇ. 25ರಿಂದ ಶೇ. 10ಕ್ಕೆ ಕುಸಿದಿದೆ.) ಇದಕ್ಕೆ ದೊಡ್ಡ ಪ್ರಮಾಣದ ಅನೌಪಚಾರಿಕ ಮತ್ತು ಹೊರ ಗುತ್ತಿಗೆ ಮುಂತಾದ ವಿವಿಧ ಉದ್ಯೋಗ ವಿಧಾನಗಳನ್ನು ಅನುಸರಿಸಿದ್ದು ಕಾರಣವಾಗಿದೆ.

2008 ರ ಜಾಗತಿಕ ಆರ್ಥಿಕ ಮಹಾಕುಸಿತದ ನಂತರ, ಶತಕೋಟ್ಯಾಧಿಪತಿಗಳು ಕಳೆದುಕೊಂಡ ತಮ್ಮ ಸಂಪತ್ತನ್ನು ಮೂರು ವರ್ಷಗಳಲ್ಲಿ ಪುನಃ ಪಡೆದುಕೊಂಡರು. ಅವರ ಸಂಪತ್ತು 2018 ರ ವೇಳೆಗೆ ದ್ವಿಗುಣಗೊಂಡಿದೆ. ಆದರೆ ಆದಾಯದ ಕೆಳಗಿನ ಶೇಕಡಾ 80 ರಷ್ಟು ಶ್ರೇಣಿಯಲ್ಲಿರುವ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಫೆಬ್ರವರಿ ಮತ್ತು ಆಗಸ್ಟ್ 2020 ರ ನಡುವೆ. 1.1 ಕೋಟಿ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ಸಿಟಟ್ಯೂಟ್ ಆಫ್ ಪಾಲಿಸಿಗಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನಗಳು ಈ ದತ್ತಾಂಶವನ್ನು ಒದಗಿಸಿವೆ. ಇದು ನವ-ಉದಾರವಾದಿ ಬಂಡವಾಳಶಾಹಿಯ ಪರಭಕ್ಷಕ ಗುಣಲಕ್ಷಣವಾಗಿದೆ. ಈ ಗುಣಲಕ್ಷಣದಿಂದಾಗಿ ಈ ಬಿಕ್ಕಟ್ಟಿನಿಂದ ಆರ್ಥಿಕತೆಯನ್ನು ಹೊರತರುವ ಪರಿಹಾರ ಅದರ ಬಳಿ ಇಲ್ಲ. ಬದಲಿಗೆ, ಲಾಭವನ್ನು ಗರಿಷ್ಟಗೊಳಿಸಿ ಜನರ ಮೇಲೆ ಅಭೂತಪೂರ್ವ ಸಂಕಷ್ಟಗಳನ್ನು ಹೇರುವುದಷ್ಟೇ ಅದಕ್ಕೆ ಗೊತ್ತು.

ಪ್ರತಿಭಟನೆಗಳು :
ಅನೇಕ ದೇಶಗಳಲ್ಲಿ, ಅಂತಹ ಸಂಕಷ್ಟಗಳ ಹೇರಿಕೆಗಳ ವಿರುದ್ಧ ಭಾರೀ ಜನಪ್ರತಿಭಟನೆಗಳು ಭುಗಿಲೆದ್ದಿವೆ. ಗ್ರೀಸ್ ದೇಶಾದ್ಯಂತ ಮುಖ್ಯವಾಗಿ ಜನರ ಆರೋಗ್ಯದ ರಕ್ಷಣೆಗಾಗಿ ಮತ್ತು ಜೀವನೋಪಾಯದ ಮೇಲಿನ ದಾಳಿಯ ವಿರುದ್ಧ ಬೃಹತ್ ರ್ಯಾಲಿಗಳು ನಡೆದವು. ಇಂಡೋನೇಶ್ಯಾದ 3 ದಿನಗಳ ಸಾರ್ವತ್ರಿಕ ಮುಷ್ಕರ  ಮತ್ತು ಬೆಲಾರಸ್ ನಲ್ಲಿನ ಪ್ರತಿಭಟನೆಗಳು ಇಂತಹವು. ಥೈಲಾಂಡ್, ಫ್ರಾನ್ಸ್ ಮತ್ತು ಇತರೆ ಹಲವು ದೇಶಗಳಲ್ಲಿ ಜೀವನೋಪಾಯದ ಮೇಲಿನ ದಾಳಿಯ ವಿರುದ್ಧ ಹೋರಾಟಗಳು ಮಾನವ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಸಮಸ್ಯೆಗಳ ಹೋರಾಟಗಳೊಂದಿಗೆ ವಿಲೀನಗೊಂಡಿವೆ.

Donate Janashakthi Media

Leave a Reply

Your email address will not be published. Required fields are marked *