ಕೊರೊನ ವೈರಸ್ ಬಿಕ್ಕಟ್ಟು ರಾಜ್ಯಗಳ ಭಿಕ್ಷಾಂದೇಹಿ ಎಂಬಂತಹ ಸ್ಥಿತಿಯನ್ನು ಎತ್ತಿ ತೋರಿಸಿದೆ. ಅಧಿಕಾರಗಳ ಮತ್ತು ಸಂಪನ್ಮೂಲಗಳ ಸತತ ಕೇಂದ್ರೀಕರಣ ಮತ್ತು ಇದರ ಜೊತೆಗೆ ರಾಜ್ಯಗಳ ಮೇಲೆ ಸವಾರಿ ಮಾಡುವ ಮೋದಿ ಸರಕಾರದ ಸರ್ವಾಧಿಕಾರಶಾಹಿ ಕಣ್ಣೋಟ ಕೊವಿಡ್ ವಿರುದ್ಧ ಸಮರದಲ್ಲಿ ಎಲ್ಲ ರಾಜ್ಯ ಸರಕಾರಗಳಿಗೂ ತೀವ್ರ ಅಡಚಣೆಗಳನ್ನು ಒಡ್ಡಿದೆ. ಈ ಸಮರವನ್ನು ಎದುರಿಸುವಲ್ಲಿ ಯಶಸ್ಸಿನ ನಿರೀಕ್ಷೆಯು ರಾಜ್ಯಗಳೊಂದಿಗೆ ಒಂದು ಪೂರ್ಣ ಮತ್ತು ಸಹಕಾರಿ ಭಾಗೀದಾರಿಕೆಯಿಂದ ಮಾತ್ರವೇ ಈಡೇರಲು ಸಾಧ್ಯ ಎಂಬುದನ್ನು ಮೋದಿ ಸರಕಾರ ಅರಿಯಬೇಕಾಗಿದೆ.
ಭಾರತದಲ್ಲಿ ಕೊವಿಡ್-೧೯ ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ರಾಜ್ಯ ಸರಕಾರಗಳ ಒಂದು ದೊಡ್ಡ ಪ್ರಯತ್ನದ ಅಗತ್ಯವಿದೆ. ಏಕೆಂದರೆ ಈ ಕಾಯಿಲೆಯನ್ನು ಮತ್ತು ಅದರ ಆರ್ಥಿಕ, ಸಾಮಾಜಿಕ ಪರಿಣಾಮಗಳನ್ನು ಎದುರಿಸುವ ಮುಖ್ಯ ವೆಚ್ಚವನ್ನು ಹೊರಬೇಕಾದ್ದು ಮತ್ತು ಮಾನವ ಸಂಪನ್ಮೂಲಗಳನ್ನು ಕ್ರೋಡೀಕರಿಸಬೇಕಾದ್ದು ರಾಜ್ಯ ಸರಕಾರಗಳೇ. ಅವು ಆರೋಗ್ಯಪಾಲನೆ ಸೌಕರ್ಯಗಳ ಪ್ರಮಾಣವನ್ನು ಹೆಚ್ಚಿಸಬೇಕಾಗುತ್ತದೆ, ಲಾಕ್‌ಡೌನ್ ನಾಲ್ಕನೇ ವಾರ ಪ್ರವೇಶಿಸುತ್ತಿರುವಂತೆ ದುಡಿಯುವ ಜನಗಳಿಗೆ ಮತ್ತು ಸಮಾಜದ ಇತರ ವಿಭಾಗಗಳಿಗೆ ಉಚಿತ ಆಹಾರಧಾನ್ಯಗಳನ್ನು ಮತ್ತು ಆವಶ್ಯಕ ಪೂರೈಕೆಗಳನ್ನು ಒದಗಿಸಬೇಕಾಗುತ್ತದೆ ಮತ್ತು ಆದಾಯ ಬೆಂಬಲವನ್ನು ಕೊಡಬೇಕಾಗುತ್ತದೆ.
ಆದರೆ ಈ ಸಮರದಲ್ಲಿ ಎಲ್ಲ ರಾಜ್ಯ ಸರಕಾರಗಳಿಗೂ ತೀವ್ರ ಅಡಚಣೆಗಳಿವೆ. ಏಕೆಂದರೆ ಅವು ತೀವ್ರ ಹಣಕಾಸಿನ ಅಭಾವವನ್ನು ಎದುರಿಸುತ್ತಿವೆ. ಲಾಕ್‌ಡೌನಿನ ಆರಂಭದಲ್ಲಿ ಕೇಂದ್ರ ಸರಕಾರ ಪ್ರಕಟಿಸಿದ ರೂ.೧.೭ ಲಕ್ಷ ಕೋಟಿ ರೂ.ಗಳ ಅತ್ಯಂತ ಜಿಪುಣ ಪ್ಯಾಕೇಜ್ ನಿಜವಾಗಿ ರಾಜ್ಯಗಳಿಗೆ ಯಾವುದೇ ಹೆಚ್ಚುವರಿ ನಿಧಿಗಳನ್ನು ಕೊಟ್ಟಿಲ್ಲ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು, ರೈತರಿಗೆ ಪಿಎಂ ಕಿಸಾನ್ ಯೋಜನಾದ ಅಡಿಯಲ್ಲಿ ರೂ.೨೦೦೦ ಮುಂತಾದವು ಈ ಮೊದಲೇ ಬಜೆಟಿನಲ್ಲಿ ಇದ್ದವುಗಳು. ರಾಜ್ಯಗಳಿಗೆ ಇದುವರೆಗೆ ಸಿಕ್ಕಿರುವುದು ಅವುಗಳಿಗೆ ರಾಷ್ಟ್ರೀಯ ಆರೋಗ್ಯ ಮಿಶನ್ ಅಡಿಯಲ್ಲಿ ಸಲ್ಲಬೇಕಾದ್ದು ಮಾತ್ರ ಮತ್ತು ಜಿಎಸ್‌ಟಿಯ ಪರಿಹಾರ ಬಾಕಿ ಬರಬೇಕಾದ್ದರಲ್ಲಿ ಒಂದು ಭಾಗ ಮಾತ್ರ.
ಕೊರೊನ ವೈರಸ್ ಸಾಂಕ್ರಾಮಿಕವನ್ನು ನಿರ್ವಹಿಸಲು ಹೆಚ್ಚುವರಿ ನಿಧಿಗಳನ್ನು ಅಥವ ಅನುದಾನಗಳನ್ನು ಕೊಟ್ಟಿಲ್ಲ ಮಾತ್ರವಲ್ಲ, ಕೇಂದ್ರ ಸರಕಾರ ವಿವಿಧ ಬಾಬ್ತುಗಳಲ್ಲಿ ರಾಜ್ಯಗಳಿಗೆ ಸಲ್ಲಬೇಕಾದ್ದನ್ನು ಕೂಡ ಕೊಟ್ಟಿಲ್ಲ. ಇವುಗಳಲ್ಲಿ ಎರಡು- ಕನಿಷ್ಟ ಎರಡು ತಿಂಗಳ ಜಿಎಸ್‌ಟಿ ಪರಿಹಾರ ಬಾಕಿ ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಸ್ಕೀಮಿನಲ್ಲಿ ಕೊಡಬೇಕಾದ ಸಾವಿರಾರು ಕೋಟಿ ರೂ.ಗಳು.
ಕೊರೊನ ವೈರಸ್ ಬಿಕ್ಕಟ್ಟು ರಾಜ್ಯಗಳು ಭಿಕ್ಷಾಂದೇಹಿ ಎಂಬಂತಹ ಸ್ಥಿತಿಯನ್ನು ಎತ್ತಿ ತೋರಿಸಿದೆ. ಅಧಿಕಾರಗಳ ಮತ್ತು ಸಂಪನ್ಮೂಲಗಳ ಸತತ ಕೇಂದ್ರೀಕರಣ ರಾಜ್ಯಗಳಿಗೆ ಇದ್ದ ಅಲ್ಪ-ಸ್ವಲ್ಪ ಹಣಕಾಸು ಅಧಿಕಾರಗಳನ್ನು ಮತ್ತು ಸಂಪನ್ಮೂಲಗಳನ್ನೂ ಕಿತ್ತು ಕೊಂಡಿದೆ. ಜಿಎಸ್‌ಟಿ ಯನ್ನು ತರುವುದರೊಂದಿಗೆ, ಸರಕುಗಳ ಮೇಲೆ ಯಾವುದೇ ತೆರಿಗೆಗಳನ್ನು ವಿಧಿಸುವ ಅಧಿಕಾರದಿಂದ ರಾಜ್ಯಗಳನ್ನು ವಂಚಿಸಲಾಗಿದೆ, ಅಲ್ಲದೆ ತೆರಿಗೆ ದರಗಳನ್ನು ನಿರ್ಧರಿಸುವಲ್ಲಿಯೂ ಅದರ ಮಾತಿಗೆ ಹೆಚ್ಚೇನೂ ಬೆಲೆಯಿಲ್ಲ, ಏಕೆಂದರೆ ಜಿಎಸ್‌ಟಿ ಮಂಡಳಿಯಲ್ಲಿ ಕೇಂದ್ರ ಸರಕಾರದ್ದೇ ಪ್ರಾಬಲ್ಯ. ಇದರ ಜೊತೆಗೆ ರಾಜ್ಯಗಳ ಮೇಲೆ ಸವಾರಿ ಮಾಡುವ ಮೋದಿ ಸರಕಾರದ ಸರ್ವಾಧಿಕಾರಶಾಹಿ ಕಣ್ಣೋಟ.
ಈ ಕೇಂದ್ರೀಕರಣದ ಮತ್ತು ಪ್ರಜಾಪ್ರಭುತ್ವ-ವಿರೋದಿ ನಿಲುವಿನ ಒಂದು ಉದಾಹರಣೆಯೆಂದರೆ, ಸಿಎಸ್‌ಆರ್(ಕಾರ್ಪೊರೇಟ್ ಹಣಕಾಸು ಹೊಣೆಗಾರಿಕೆ) ನಿಧಿಗಳನ್ನು ರಾಜ್ಯ ಮುಖ್ಯಮಂತ್ರಿಗಳ ನಿಧಿಗಳಿಗೆ ನಿರಾಕರಿಸಿರುವುದು. ಕೇವಲ ಇತ್ತೀಚೆಗಷ್ಟೇ ರಚಿಸಿರುವ ಪಿಎಂ ಕೇರ್ ನಿಧಿಗೆ ಕೊಡುವ ದೇಣಿಗೆಗಳಷ್ಟೇ ಸಿಎಸ್‌ಆರ್ ನಿಧಿಗಳಾಗಲು ಅರ್ಹವಾಗುತ್ತವೆ. ಕೊವಿಡ್ ಪರಿಹಾರ ದೇಣಿಗೆಗಳ ವಿಷಯದಲ್ಲೂ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಲಾಗಿದೆ.
ಕೇಂದ್ರದಲ್ಲಿ ಬಂದ ಸರಕಾರಗಳೆಲ್ಲವೂ ಅನುಸರಿಸುವ ನವ-ಉದಾರವಾದಿ ಧೊರಣೆಗಳಿಂದಾಗಿ ಹಣಕಾಸು ಬಂಡವಾಳದ ಹಿತ ಸಾಧಿಸುವ ಹಣಕಾಸು ಧೋರಣೆಗಳು ಮಾತ್ರವೇ ಜಾರಿಗೆ ಬಂದಿವೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡಕ್ಕೂ ಒಂದು ನಿಷ್ಠುರ ಹಣಕಾಸು ಮಿತಿಯನ್ನು ಹಾಕಲಾಗಿದೆ. ಎಫ್‌ಆರ್‌ಬಿಎಂ ಕಾಯ್ದೆಯ ಅಡಿಯಲ್ಲಿ , ರಾಜ್ಯಗಳ ವೆಚ್ಚ ಆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ(ಜಿಎಸ್‌ಡಿಪಿ)ದ ೩ಶೇ. ಮಿತಿಯನ್ನು ಮೀರುವಂತಿಲ್ಲ. ಈ ಹಣಕಾಸು ಕೊರತೆ ಮಿತಿಯನ್ನು ತನಗೂ ಸಡಿಲಿಸಲು ನಿರಾಕರಿಸುತ್ತಿರುವ ಕೇಂದ್ರ ಸರಕಾರ ರಾಜ್ಯಗಳಿಗೆ ಹೆಚ್ಚು ಸಾಲಗಳನ್ನು ತರುವ ಮೂಲಕ ಹಣ ಎತ್ತಲು ದಾರಿಗಳೇ ಇಲ್ಲದಂತೆ ಮಾಡಿದೆ.
ಹಲವು ರಾಜ್ಯಗಳು ಕೇಂದ್ರ ತನ್ನ ಪ್ಯಾಕೇಜಿನ ಮೂಲಕ ಪ್ರಕಟಿಸಿದ್ದಕ್ಕಿಂತ ಎಷ್ಟೋ ಹೆಚ್ಚು ಪರಿಹಾರಗಳನ್ನು ಜನಗಳಿಗೆ ಕೊಟ್ಟಿವೆ; ಕೆಲವು ಜನವಿಭಾಗಗಳಿಗೆ ನಗದು ವರ್ಗಾವಣೆಗಳು; ಹೆಚ್ಚಿನ ರೇಷನ್ ಕೋಟಾಗಳು; ಪೆನ್ಶನ್‌ಗಳ ಮುಂಗಡ ಪಾವತಿ ಮತ್ತು ಇತರ ಕ್ರಮಗಳು ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ಮತ್ತು ಆಶ್ರಯ. ರಾಜ್ಯಗಳ ಆದಾಯ ಮೂಲಗಳು ಒಣಗಿ ಹೋಗುತ್ತಿರುವ ಸಮಯದಲ್ಲಿ ಈ ಎಲ್ಲ ಖರ್ಚುಗಳನ್ನು ಮಾಡಬೇಕಾಗಿ ಬಂದಿದೆ. ಕೇಂದ್ರದಿಂದ ಯಾವುದೇ ನೆರವಿಲ್ಲದೆ, ಕೆಲವು ರಾಜ್ಯ ಸರಕಾರಗಳು ತನ್ನ ನೌಕರರ ವೇತನಗಳನ್ನು ಕಡಿತ ಮಾಡಿವೆ ಮತ್ತು ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿವೆ.
ರಾಜ್ಯಗಳು ತಮ್ಮ ಸಾಲಗಳನ್ನೆಲ್ಲ ಆರಂಭದಲ್ಲೇ ಖರ್ಚು ಮಾಡಲೇ ಬೇಕಾಗಿ ಬಂದಿದೆ. ಆದರೆ ಹಾಗೆ ಮಾಡುವಾಗ ವಿಪರೀತ ಬಡ್ಡಿದರಗಳನ್ನು ವಿಧಿಸಲಾಗುತ್ತಿದೆ ಎಂದು ಕಂಡು ಬಂತು. ಕೇರಳ ಸರಕಾರದ ಹಣಕಾಸು ಮಂತ್ರಿ ಥಾಮಸ್ ಐಸಾಕ್ ಪ್ರಕಾರ, ಒಂದು ೧೫ವರ್ಷಗಳ ಅವಧಿಯ ರೂ. ೬೦೦೦ ಕೋಟಿ ಮೊತ್ತದ ರಾಜ್ಯ ಅಭಿವೃದ್ಧಿ ಸಾಲಕ್ಕೆ ಪ್ರಯತ್ನಿಸಿದಾಗ, ೮.೯೬ಶೇ. ಬಡ್ಡಿಯನ್ನು ತೆರಬೇಕೆಂದು ಹೇಳಲಾಗಿದೆ. ಇದು ರಾಜ್ಯವನ್ನು ಒಂದು ಸಾಲದ ಬಲೆಗೆ ತಳ್ಳುತ್ತದೆ ಎಂದು ಅವರು ಹೇಳುತ್ತಾರೆ. ರಾಜ್ಯಗಳು ರಿಝರ್ವ್ ಬ್ಯಾಂಕಿನಿಂದ ಸಾಲ ತರಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಎಪ್ರಿಲ್ ೧೧ರಂದು ಪ್ರಧಾನ ಮಂತ್ರಿಗಳೊಂದಿಗೆ ವಿಡಿಯೊ ಸಮ್ಮೇಳನದಲ್ಲಿ ಎಲ್ಲ ಮುಖ್ಯಮಂತ್ರಿಗಳೂ ತಕ್ಷಣವೇ ನೆರವು ನೀಡಬೇಕು, ಸಂಪನ್ಮೂಲಗಳನ್ನು ಎತ್ತಲು ಸಾಧ್ಯವಾಗುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿವೆ. ಆದರೆ ದುರದೃಷ್ಟವೆಂದರೆ, ಲಾಕ್‌ಡೌನನ್ನು ಇನ್ನೂ ೧೮ ದಿನಗಳಿಗೆ ವಿಸ್ತರಿಸುವಾಗಲೂ ಕೇಂದ್ರ ಸರಕಾರ ಈ ಆಗ್ರಹಕ್ಕೆ ಸ್ಪಂದಿಸಿಲ್ಲ.
ಕೊರೊನ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ದೇಶ ಒಂದು ನಿರ್ಣಾಯಕ ಸಮಯವನ್ನು ಪ್ರವೇಶಿಸಿದೆ. ಈ ಹೋರಾಟವನ್ನು ನಡೆಸಲು ರಾಜ್ಯಗಳನ್ನು ಹಣಕಾಸು ಮತ್ತು ಸಾಮಗ್ರಿಗಳ ಮೂಲಕ ಸನ್ನದ್ಧಗೊಳಿಸದಿದ್ದರೆ ನಾವು ಮಾನವ ಮತ್ತು ಆರ್ಥಿಕ ನಷ್ಟಗಳು ಇವೆರಡರ ಮೂಲಕವೂ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ.
ಕೇಂದ್ರ ಸರಕಾರ ಇನ್ನಷ್ಟು ವಿಳಂಬ ಮಾಡದೆ ಈ ಕೆಳಗಿನ ಹೆಜ್ಜೆಗಳನ್ನಿಡಬೇಕು: ರಿಝರ್ವ್ ಬ್ಯಾಂಕಿನಿಂದ ಸಾಲ ತಂದು ರಾಜ್ಯಗಳಿಗೆ ಕೊವಿಡ್-೧೯ ಸಂಬಂಧಿತ ಕೆಲಸಗಳಿಗೆ ಅನುದಾನಗಳನ್ನು ಒದಗಿಸಬೇಕು; ರಾಜ್ಯಗಳ ಸಾಲ ತರುವ ಮಿತಿಯನ್ನು ಜಿಎಸ್‌ಡಿಪಿ ಯ ೫ಶೇ.ಕ್ಕೆ ಏರಿಸಬೇಕು; ರಾಜ್ಯಗಳು ರಿಝರ್ವ್ ಬ್ಯಾಂಕಿನಿಂದ ನೇರವಾಗಿ ಸಾಲ ಪಡೆಯಲು ಸಾಧ್ಯವಾಗಬೇಕು;ವಿವಿಧ ಬಾಬ್ತುಗಳಲ್ಲಿ ರಾಜ್ಯಗಳಿಗೆ ತೆರಬೇಕಾಗಿರುವ ಬಾಕಿಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
ಮೋದಿ ಸರಕಾರ ಕೊವಿಡ್-೧೯ ವೈರಸ್ಸನ್ನು ಎದುರಿಸುವಲ್ಲಿ ಯಶಸ್ಸಿನ ನಿರೀಕ್ಷೆಯು ರಾಜ್ಯಗಳೊಂದಿಗೆ ಒಂದು ಪೂರ್ಣ ಮತ್ತು ಸಹಕಾರಿ ಭಾಗೀದಾರಿಕೆಯಿಂದ ಮಾತ್ರವೇ ಈಡೇರಲು ಸಾಧ್ಯ ಎಂಬುದನ್ನು ಅರಿಯಬೇಕಾಗಿದೆ.