ವಿಠ್ಠಲ ಭಂಡಾರಿ ಕೆರೆಕೋಣ
ಕೊರೋನಾ ದಿಗ್ಬಂಧನ ಕಾರಣಕ್ಕೆ ಸಂತ್ರಸ್ತವಾದ ಕೆಲವು ಕುಟುಂಬಕ್ಕೆ ನಮ್ಮ ಕೈಲಾದ ಕಿಂಚಿತ್ ಸಹಾಯ ಮಾಡೋಣ ಎಂದು ಬೀದಿಗಿಳಿದಿದ್ದೆವು. ಆಗ ಕಂಡ ದೃಶ್ಯ ಎಂಥವರನ್ನೂ ವಿಚಲಿತಗೊಳಿಸದೆ ಇರದು. ದುಡಿಯುವ ಸ್ವಾಭಿಮಾನಿ ಕೈಗಳು ಮನೆಯಲ್ಲಿ ಕೆಲಸವಿಲ್ಲದೇ ಉಣ್ಣಲು ಅನ್ನವಿಲ್ಲದೇ ಕುಳಿತಿದೆ. ನಾವು ಕೊಟ್ಟ ಅಲ್ಪ ದಿನಸಿಯನ್ನು ಸ್ವೀಕರಿಸುವಾಗ ಅವರ ಕಣ್ಣಲ್ಲಿ ಕೃತಜ್ಞತೆ ಇತ್ತೇ? ಅಸಹಾಯಕತೆ ಇತ್ತೇ? ಭವಿಷ್ಯದ ಕುರಿತು ಭಯವಿತ್ತೇ? ಹತಾಶೆ ಇತ್ತೇ? ತಮ್ಮನ್ನು ಈ ಸ್ಥಿತಿಗೆ ಒಯ್ದವರ ಬಗ್ಗೆ ಸಿಟ್ಟಿತ್ತೇ? ಅರ್ಥವಾಗದ ಸ್ಥಿತಿ ನಮ್ಮದು. ಇಂಥ ಸಮಾಜದ ಭಾಗವಾಗಿರುವ ನಮಗಂತೂ ಅಪರಾಧಿ ಪ್ರಜ್ಞೆ ಕಾಡುತ್ತಲೇ ಇತ್ತು. ಆಕ್ಷಣ ಅನಿಸಿದ್ದು ಅವರ ಮುಂದಿನ ನಡೆ ಏನು? ಈ ಕಾಲದಲ್ಲಿ ನಮ್ಮ ಜವಾಬ್ದಾರಿ ಏನು? ಆಗಲೇ ನೆನಪಾದುದು ಬೇಂದ್ರೆಯವರ ಅನ್ನಯಜ್ಞ, ನರಬಲಿ, ಕುವೆಂಪು ಅವರ ಕಲ್ಕಿ, ಎಕ್ಕುಂಡಿಯವರ ರೊಟ್ಟಿ ಮತ್ತು ಕೋವಿ …. ಹೀಗೆ ಇವುಗಳೆಲ್ಲ ಈಗಲೂ ಪ್ರಸ್ತುತ ಆಗುತ್ತಲೇ ಇವೆ. ಈ ಕಾಲಕ್ಕೆ ಭಾಷ್ಯವನ್ನು ಬರೆದಂತೆನಿಸುತ್ತಿದೆ.
ಸುಬ್ಬಣ್ಣ ರಂಗನಾಥ ಎಕ್ಕುಂಡಿ ಯವರು ಮೂಲತಃ ರಾಣಿಬೆನ್ನೂರಿನವರು. ಉದ್ಯೋಗಕ್ಕಾಗಿ ಅವರು ನೆಲೆ ನಿಂತಿದ್ದು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲ ಗ್ರಾಮದ ಒಂದು ಶಾಲೆಯಲ್ಲಿ. ಅದಿರುವುದು ಗೋಕರ್ಣ ಹತ್ತಿರ. ಇಂತಹ ಗ್ರಾಮೀಣ ಭಾಗದಲ್ಲಿ ನೆಲೆ ನಿಂತು ಕಾವ್ಯವನ್ನು, ಬದುಕನ್ನು ಧ್ಯಾನಿಸಿದರು. ಶಾಲೆಯ ಸುತ್ತ ಜಾನಪದ ಸಾಹಿತ್ಯವನ್ನು ಒಡಲಲ್ಲಿ ತುಂಬಿಕೊಂಡ ಹಾಲಕ್ಕಿ, ಮುಕ್ರಿ, ಮೀನುಗಾರ ಸಮುದಾಯದವರು. ಅವರ ನಡುವೆ ಅಕ್ಷರದ ಮೂಲಕ ಅರಿವನ್ನು, ಕಾವ್ಯದ ಮೂಲಕ ಜಗವ ನೋಡುವ ಕಣ್ಣನ್ನು ನೀಡಿದರು.
ಇಲ್ಲಿ ಸಾಲು ಕುಳಿತ ಹೆಣ್ಣು
ಎಲ್ಲೋ ಮುಗಿಲಿನತ್ತ ಕಣ್ಣು
ಕುಳಿತರಿಲಿ ಮತ್ಸ್ಯಗಂಧಿ
ಉಟ್ಟುಕೊಂಡು ಹರಕು ಚಿಂದಿ
ಎಂದು ಮಹಾಭಾರತದ ಮತ್ಸ್ಯಗಂಧಿಯನ್ನು ತನ್ನ ಸುತ್ತಲಿನ ಬಡ ಮೀನುಗಾರ ಹೆಣ್ಣುಮಕ್ಕಳೊಂದಿಗೆ ಇಟ್ಟು ನೋಡುವ ವ್ಯಂಗ್ಯವನ್ನು ಸೂಕ್ಷ್ಮವಾಗಿ ಗುರ್ತಿಸಬೇಕು. ಶ್ರಮ ಸಂಸ್ಕೃತಿಯನ್ನು ಗೌರವಿಸುವ ‘ಶರಣು’ ಕವಿತೆ ಅವರ ಕಾವ್ಯದ ತಾತ್ವಿಕತೆಯನ್ನು ಅನಾವರಣ ಮಾಡುತ್ತದೆ.
‘ಯೋಧ ನಡೆಯುವ ದಾರಿ ಕವಿಯ ದಾರಿಯೂ ಕೂಡ’ ಎಂದು ನಂಬಿರುವ ಎಕ್ಕುಂಡಿಯವರು ಹಾವಾಡಿಗರ ಹುಡುಗ, ಮತ್ಸ್ಯಗಂಧಿ, ಬೆಳ್ಳಕ್ಕಿಗಳು, ಬಕುಲದ ಹೂವುಗಳು.. ಮುಂತಾದ ಕವನ ಸಂಕಲಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಸೋವಿಯತ್ ಲ್ಯಾಂಡ್ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಪ್ರಶಸ್ತಿ ಕೂಡ ಅವರನ್ನು ಅರಸಿ ಬಂದಿವೆ.
ಹಸಿದ ಒಡಲು ತಣಿಸಿದ, ದೇಶದ ಸಂಪತ್ತನ್ನು ಸೃಷ್ಟಿಸಿ ದುಡಿವ ಕೈ ಎಂಜಲೆಲೆಯ ತೊಟ್ಟಿಗೆ ಕೈ ಹಾಕುವ, ಪ್ರೀತಿಯನ್ನು ಎದುರು ನೋಡುವ ಕೈಗಳಿಗೆ ಎದೆಯ ಕದ ತೆರೆಯದಿದ್ದಾಗ ಕೋವಿ ಗುಂಡುಗಳನ್ನು ಎತ್ತಿ ಕೊಳ್ಳುವ ಅನಿವಾರ್ಯ ಸ್ಥಿತಿಯು “ರೊಟ್ಟಿ ಮತ್ತು ಕೋವಿ” ಕವಿತೆಯಲ್ಲಿ ರೂಪು ಪಡೆದಿದೆ. ಇದು ಈ ನಾಡಿನ ಹಸಿವಿನ ಕಥನ ಕೂಡ.
ಹಸಿದ ಹಾವುಗಳಂತೆ ಎರಡೂ ಕೈಗಳು ತೊಟ್ಟಿಯೊಳಗೆ ಇಳಿದು
“ಸಿಕ್ಕ ಎಂಜಲೆಲೆಯನು ಹಿರಿದು ತೆಗೆದವು
ಎಲ್ಲಾದರೂ ಉಂಟೇ ತುಂಡು ರೊಟ್ಟಿ, ಅನ್ನದಗುಳು ….”
ಎಂದು ಕೂಳು ಅರಸುವ ಚಿತ್ರದೊಂದಿಗೆ ಕವಿತೆ ಪ್ರಾರಂಭವಾಗುತ್ತದೆ. ಎಲೆಗಳ ಬಳಿದಾಗ ಏನೇನೋ ಸಿಕ್ಕಿದವು, “ಎರಡು ಬ್ರೆಡ್ಡಿನ ತುಂಡು, ಚೆಲ್ಲಿದ ಹುಳಿಯನ್ನ ಸಿಪ್ಪೆ ಉಪ್ಪಿನ ಕಾಯಿ ಎಲ್ಲವೂ ಉಪ್ಪಿನೊಂದಿಗೆ ಕಲಸಿಹೋದ ಊಟವನ್ನು – ಮೃಷ್ಟಾನ್ನವಲ್ಲ ಎಂಜಲೂಟ – ತೊಟ್ಟಿಯ ಕಸದಿಂದ ಆಚೆಗೆ ತೆಗೆದು ತಿಂದು ಹೊಟ್ಟೆ ತಣ್ಣಗಾಗಿಸಿಕೊಳ್ಳುವ ಕೈಗಳ ಚಿತ್ರ ಮನುಕುಲದ ಅವಮಾನಿತ ಚಿತ್ರವಾಗಿ ಕಾಣುತ್ತದೆ. ಹಸಿವೆಯ ಆತ್ಯಂತಿಕ ಸ್ಥಿತಿ ಇದು.
ಎರಡು ತುಂಡು ಬ್ರೆಡ್ಡಿಗಾಗಿ, ಅಗಳು ಅನ್ನಕ್ಕಾಗಿ, ಸ್ವಾಭಿಮಾನವನ್ನೇ ಪಣಕ್ಕಿಟ್ಟ ಈ ಎರಡು ಕೈಗಳು “ಅಪರಿಚಿತ ಸೋಮಾರಿಯದಾ? ಕೆಲಸ ಮಾಡದ ಆಲಸಿಗಳದಾ? ದುಡಿಯುಲಾಗದ ರೋಗಿಗಳದಾ? ನಡೆಯಲಾರದ ವೃದ್ಧರದಾ? ….”
“ಹೌದಿವೇ ಕೈಗಳು ಬಲಿಷ್ಟ ಕಪ್ಪು …..
ಗಚ್ಚುಗಾರೆಯ ಹೊತ್ತು ಹಗಲು ಇರುಳು
ಉಪ್ಪರಿಗೆ ಬಂಗಲೆಯ ನಿಲಿಸಿಲ್ಲವೇ?
ಹೂಡಿದ ನೇಗಿಲ ಹಾಡು, ರವಕೆಯ ಹಸಿರು
ತೊಡಿಸಿದ್ದವಲ್ಲವೆ ಇವುಗಳಿಂದಲ್ಲವೆ ಸುಖದ ನೆರಳು?”
ಹೀಗೆ ಲೇಖಕರು ಆ ಕೈಗಳ ಪತ್ತೆ ಹಚ್ಚುತ್ತಾರೆ,
“ಕಪ್ಪು ಮತ್ತು ಬಲಿಷ್ಟ ಕೈಗಳ” ದುಡಿಯುವ ಜನ, ಈ ದೇಶಕ್ಕೆ ಸಂಪತ್ತು ಸೃಷ್ಟಿಸಿದ ಜನ, ರಕ್ತವನ್ನು ಬೆವರಾಗಿ ಹರಿಸಿದ ಜನ, ಒಡೆಯನ ಕಾರ್ಖಾನೆ ಜಮೀನಿನಲ್ಲಿ ಬೆಳಗ ರಾತ್ರಿಯಾಗಿಸಿದ ಜನರ, ತುತ್ತು ಅನ್ನಕ್ಕಾಗಿ ತೊಟ್ಟಿಗಿಳಿದ ಕೈಗಳು ಎನ್ನುವ ವಿಷಾಧ ನೋವು ಇಲ್ಲಿಯದು.
ಅನ್ನ ಬೆಳೆದ, ನಾಗರಿಕತೆ ಕಟ್ಟಿ ಬೆಳಸಿದ ದುಡಿಯುವ ಕೈಗಳಿಗೆ “ದುಡಿಮೆ ಎಂದರೂ ಪ್ರೀತಿ, ಚೆಲುವೆಂದರೂ ಪ್ರೀತಿ.” ಈ ಹಸಿದ ಕೈಗಳೇ ಕಲೆಯನ್ನು ಸೃಷ್ಟಿಸಿದ್ದು. ಎಲ್ಲರ ಬದುಕನ್ನೂ ಸುಂದರವಾಗಿಸುವ ಪಣ ತೊಟ್ಟಿದ್ದು. ಹಾಗಾಗಿ ಲಾವಣ್ಯದ ರಂಗೋಲಿ ಬಿಡಿಸಿದ್ದು, ಬೆಳ್ಳಕ್ಕಿಗಳ ಹಿಂಡ ಬರೆದದ್ದು, ಕಿವಿಗೆ ಇಂಪಾಗುವ ಸಂತಸದ ವಾದ್ಯ ನುಡಿಸಿದ್ದು. ತನ್ನ ನೋವ ಬೇಲಿಯ ಮೀರಿ ಜಗದ ಸಂತಸಕ್ಕೆ, ಉಲ್ಲಾಸಕ್ಕೆ ದುಡಿಯಲು ಸಿದ್ಧವಾಗಿದ್ದ ಈ ಕೈಗಳೇಕೆ ಇಂದು ಎಂಜಲ ತೊಟ್ಟಿಗೆ ಇಳಿದಿವೆ ಎಂಬ ಶತಮಾನದ ಪ್ರಶ್ನೆ ಕವಿಯದ್ದು.
ಇಷ್ಟಾಗಿಯೂ ಅವರು ‘ಪ್ರೀತಿ’ ಗೆ ಹಂಬಲಿಸುವವರು. ಪ್ರತಿ ಎದೆಯ ತಟ್ಟಿದರೂ ಪ್ರೀತಿಯ ನೆಲೆಗಾಗಿ, ಸೆಲೆಗಾಗಿ. “ತಟ್ಟಿ ಎದೆ ಎದೆಯ ಕದವನಾದರೂ ಹಸಿದವರಿಗಿದು ತೆರೆಯಲೇ ಇಲ್ಲ” ನಿಷ್ಕರುಣಿ ಸಮಾಜ ಇದು. ತಾನು ತಿನ್ನುವ ಅನ್ನದ, ತಾನು ಪಡುವ ಸುಖದ ಮೂಲವನ್ನು ಗೌರವಿಸುವ ನೈತಿಕತೆ ಕಳೆದುಕೊಳ್ಳುವ ಜಗತ್ತು ಇದು. ತಾನು, ತನ್ನದೆಂಬ ಸ್ವಾರ್ಥದ ಬಲೆಯಲ್ಲಿ ಬಿದ್ದ ನಾಡಿನಲ್ಲಿ ಇನ್ನೆಷ್ಟು ದಿನ ತಡೆದಾರು?” ತನ್ನ ಬೆವರಿನ ಪಾಲು ಸಿಗದಿದ್ದಾಗ ಇನ್ನೆಷ್ಟು ದಿನ ಎಂಜಲೆಲೆಯ ತೊಟ್ಟಿಯಲಿ ಇಳಿದಾರು? ಅವರ ಅವಮಾನಕ್ಕೂ ಒಂದು ಮಿತಿ ಇದೆ.
ಇನ್ನು ಅವರು ಎಂಜಲೆಲೆಗಾಗಿ ತೊಟ್ಟಿಗೆ ಇಳಿಯವು. ಈ ಬಲಿಷ್ಟ ಕಪ್ಪು ಕೈಗಳು “ನೇಣುಗಂಬವ (ಶಿಕ್ಷೆಯನ್ನು) ಕೂಡ ಧಿಕ್ಕರಿಸಿ ನುಗ್ಗುವವು, ಎತ್ತಿ ಕೊಳ್ಳಲು ಕೋವಿ ಗುಂಡು” ಹೌದು ಪ್ರೀತಿ ಇಲ್ಲದ ಮೇಲೆ ಹೂವು ಅರಳಲು ಸಾಧ್ಯವಿಲ್ಲ. ಸಂಘರ್ಷ ಅನಿವಾರ್ಯ. ನ್ಯಾಯ ಕೇಳಲು ಹೀಗೆ ಸಂಘರ್ಷ, ಪ್ರತಿಭಟನೆಗೆ ಎದ್ದ ದುಡಿಯುವ ಜನರ ಮೇಲೆ ಪ್ರಭುತ್ವ ಕ್ರೂರಿಯಾಗಿರುತ್ತದೆ. ಚರಿತ್ರೆಯ ತುಂಬ ಹೀಗೆ ನೇಣಿಗೆ ಕೊರಳಾದ ಕೋವಿಗೆ ಎದೆಯೊಡ್ಡಿ ಬಲಿಯಾದ ನೆನಪುಗಳೇ ಹಾಸಿಕೊಂಡಿವೆ. ಹೋರಾಟದ ಅಂತಿಮ ಪರಿನಾಮವಾದ ‘ನೇಣುಗಂಬವ ಕೂಡ ಧಿಕ್ಕರಿಸಿ’ ಜನ ಚಳುವಳಿಯ ಮಾರ್ಗ ಹಿಡಿಯುವ ಸತ್ಯ ಯಾಕೆಂದರೆ ಯಾಕೆಂದರೆ “ಹಸಿದವರೂ ಕೂಡ ಬದುಕಬೇಕಲ್ಲವೆ? ಮತ್ತೆ ಪ್ರೀತಿಯೂ ಬೇಕಲ್ಲ ದುಡಿಯುವ ಜನಕೆ.”
ಹಸಿದೊಡಲಿಗೆ ಅನ್ನ, ಹಂಬಲಿಸುವ ಎದೆಗೆ ಪ್ರೀತಿ, ಎರಡೂ ಹಂಚದ ಜಗತ್ತು ಮುಂದಿರುವಾಗ “ಮುಖ್ಯವಲ್ಲವೇ ಸಾವಿಗಿಂತ ಬದುಕೇ?”
ಹಾಗೆ ನೋಡಿದರೆ ಎಲ್ಲಾ ಕ್ರಾಂತಿಯ ಮೂಲ ಕಾರಣ ಹಸಿವು ಮತ್ತು ಪ್ರೀತಿಯ ಗೈರು. ರೊಟ್ಟಿ ತಟ್ಟಿ ಉಣ್ಣಿಸಿದ ಒಡಲು ಒಂದು ತುತ್ತಿಗೆ ಗತಿ ಇಲ್ಲದ ಸ್ಥಿತಿಗೆ ಬರುವುದು, ಕಲೆ ಸೃಷ್ಟಿಸಿದ ಹೃದಯ ಪ್ರೀತಿಯ ಬರ ಎದುರಿಸುವುದು, ಅನ್ನ ಮತ್ತು ಕಲೆಯನ್ನು ಸೃಷ್ಟಿಸಿದವನ ಕಣ್ಣೆದುರೇ ಅದು ಅವನಿಗೆ ಕನಸಾಗಿ ಉಳ್ಳವರ ವೈಭೋಗದ ಸಂಗತಿಯಾಗುವುದು, ಉಳ್ಳವರ ಪ್ರಭುತ್ವ ನ್ಯಾಯ ಕೇಳುವವರನ್ನು ದಂಡಿಸುವುದು ಆದರೂ ಸಾವಿನ ಭಯ ಬಿಟ್ಟು ಸಂಘರ್ಷದ ಅಂತಿಮ ಮಾರ್ಗ ಹಿಡಿಯುವ ಅನಿವಾರ್ಯತೆಯ ಚಿತ್ರವನ್ನು ಕವಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ‘ಜಗತ್ತಿನಲ್ಲಿ ಏನೆಲ್ಲ ಸುಂದರವಾದದ್ದು, ಶಕ್ತಿಶಾಲಿಯಾದದ್ದು ಇದೆಯೋ ಅವೆಲ್ಲವೂ ಮನುಷ್ಯಜಾತಿಯ ಸಾಮೂಹಿಕ ಶ್ರಮದ ಸೃಷ್ಟಿ. ಮಾನವ ಸಮಾಜದಲ್ಲಿ ಯಾವೆಲ್ಲ ಸುಂದರವಾದುದಿದೆಯೋ ಒಳಿತಿವೆಯೋ ಮಹತ್ತರವಾದುದಿವೆಯೋ ಶಕ್ತಿಶಾಲಿಯಾದುದಿದೆಯೋ ಅವುಗಳನ್ನೆಲ್ಲ ಸೃಷ್ಟಿ ಮಾಡಿದವರು ದುಡಿಯುವ ವರ್ಗಗಳು’ ಎಂದು ಇ.ಎಂ. ಎಸ್ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು. ಆದರೆ ಅವರಿಂದು ಬೀದಿಯಲ್ಲಿ ಬಿದ್ದಿದ್ದಾರೆ.
ಕವಿತೆಯ ಮೊದಲ ಭಾಗದಲ್ಲಿ ದುಡಿಯುವ ಜನರ ವಾಸ್ತವ ಸ್ಥಿತಿಯನ್ನು, ಎರಡನೆಯ ಭಾಗದಲ್ಲಿ ದುಡಿಯುವ ಕೈಗಳಿಗಿರುವ ಹೆಮ್ಮೆಯನ್ನು ಮತ್ತು ಕೊನೆಯ ಭಾಗದಲ್ಲಿ ದುಡಿಯುವ ಕೈಗಳು ಹೋರಾಟದ ಅಸ್ತ್ರ ಹಿಡಿಯುವ ಅನಿವಾರ್ಯತೆಯನ್ನು ಕವಿ ಮನೋಜ್ಞವಾಗಿ ವಿವರಿಸುತ್ತಾರೆ. ನಾನೂ ದುಡಿಯುವ ಜನರನ್ನು ಹಸಿವಿನ ಕೂಪಕ್ಕೆ ತಳ್ಳುವ ವ್ಯವಸ್ಥೆಯ ಭಾಗ ಎನ್ನುವ ಸಣ್ಣ ಪಾಪಪ್ರಜ್ಞೆಯೂ ನಾಗರಿಕತೆ ಕಟ್ಟಿದ ಕೈಗಳನ್ನು ಗೌರವಿಸುವ ನೈತಿಕತೆಯನ್ನು ಸಮಾಜ ರೂಢಿಸಿಕೊಳ್ಳಬೇಕು ಎನ್ನುವ ಒತ್ತಾಯವನ್ನೂ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಕ್ರಾಂತಿ ಅನಿವಾರ್ಯವಾಗುವುದರಲ್ಲಿ ಅನುಮಾನವಿಲ್ಲ ಮತ್ತು ಸಮಸಮಾಜದ ನಿರ್ಮಾಣಕ್ಕೆ ದುಡಿಯುವ ವರ್ಗ ಸಾಗಬೇಕಾದ ದಾರಿಯನ್ನು ಕವಿಗಳಿಲ್ಲಿ ಸ್ಪಷ್ಟವಾಗಿ ಹೇಳಹೊರಟಿದ್ದಾರೆ. ಬದುಕ ಪ್ರೀತಿಸುವುದೆಂದರೆ ಕ್ರಾಂತಿಗೆ ಸಿದ್ಧವಾಗುವ ಅನಿವಾರ್ಯ ಕ್ರಿಯೆ ಎನ್ನುವ ದೃಢತೆ ಕೂಡ ಕವಿತೆಯಲ್ಲಿ ಎದ್ದು ಕಾಣುತ್ತದೆ. ಕ್ರಾಂತಿಯನ್ನು ನೇರವಾಗಿ ಹೇಳದಿದ್ದರೂ ಅಂತರ್ಮುಖಿಯಾಗಿ ಹರಿದ ಭಾವ ಇದೆ. ಅಂದರೆ ನೋವು, ಆತಂಕ, ಅನುಮಾನದ ಭಾವಗಳೊಂದಿಗೆ ಭವಿಷ್ಯದ ಅನ್ವೇಷಣೆ ಕೂಡ ಇಲ್ಲಿದೆ.
ರೊಟ್ಟಿ ಮತ್ತು ಕೋವಿ
ತಟ್ಟನೆ ನಿಂತು ನೋಡಿದೆ, ತೊಟ್ಟಿಯಾಚಿಂದ
ಹಸಿದ ಹಾವುಗಳಂತೆ ಇಳಿದು ಒಳಗೆ
ಎರಡು ಕೈಗಳು ; ಸಿಕ್ಕ ಎಂಜಲಿನೆಲೆಯನ್ನು
ಹಿರಿದು ತೆಗೆದವು, ಕಸದಿಂದ ಹೊರಗೆ
ತಡಮಾಡಲಿಲ್ಲ. ತಡೆದನುಮಾನಿಸಲಿಲ್ಲ.
ಎಲ್ಲಾದರೂ ಉಂಟೆ ತುಂಡು ರೊಟ್ಟಿ?
ಮತ್ತು ಅನ್ನದ ಅಗಳು? ಎಲೆಯೆಲ್ಲ ಬಳಿದಾಗ
ಏನೋ ಸಿಕ್ಕಿತು; ತಣ್ಣಗಾತು ಹೊಟ್ಟೆ.
ಎರಡು ಬ್ರೆಡ್ಡಿನ ತುಂಡು, ಚೆಲ್ಲಿದ ಹುಳಿಯನ್ನ
ಸಿಪ್ಪೆ ಉಪ್ಪಿನ ಕಾಯಿ ಕೂಡಿದುಪ್ಪು
ಎಲ್ಲಿಯೋ ಕಂಡಿದ್ದೆನಲ್ಲ ಈ ಕೈಗಳನು?
ಹೌದಿವೇ ಕೈಗಳು; ಬಲಿಷ್ಠ, ಕಪ್ಪು.
ಆಷಾಢ ಮೋಡಗಳು ‘ಧೋ’ ಗುಟ್ಟಿ ಸುರಿದು
ಹೊಲಗದ್ದೆಗಳು ತೊಯ್ದು ತಪ್ಪಡ್ಯಾಗಿ
ಹೂಡಿದ್ದ ನೇಗಿಲಿನ ಹಾಡು, ರವಕೆಯ ಹಸಿರು
ತೊಡೆಸಿದ್ದವಲ್ಲವೆ ತೆನೆಯು ತೂಗಿ
ಅಂದು ಕೊಂಡೆನು, ಅಲ್ಲ ಇವುಗಳೆ ಅಲ್ಲವೆ
ಗಚ್ಚುಗಾರೆಯ ಹೊತ್ತು ಹಗಲು ಇರುಳು.
ಉಪ್ಪರಿಗೆ ಬಂಗಲೆಯ ನಿಲ್ಲಿಸಿಲ್ಲವೆ? ಮ
ತ್ತೆ, ಇವುಗಳಿಂದಲ್ಲವೆ ಸುಖದ ನೆರಳು
ಹಸಿದ ಕೈಗಳಿಗೆ ದುಡಿಮೆಯೆಂದರೆ ಪ್ರೀತಿ
ಚೆಲುವೆಂದರೂ ಪ್ರೀತಿ ಕಾಣೋ ಅವಕೆ
ಹಾಗೆಂದೇ ಲಾವಣ್ಯ ವರ್ತುಲಗಳನು ಬರೆ
ವ, ಬೆಳ್ಳಕ್ಕಿಗಳ ಹಿಂಡು ಬೆರೆವ ಬಯಕೆ
ಕಣ್ಣಿಗಷ್ಟೆ ಅಲ್ಲ. ಕಿವಿಗಳೂ ಸಂತಸದ
ಹಕ್ಕಿಗಳ ಗೂಡಾಗಲೆಂದು, ನುಡಿಸಿ
ಯಾವ್ಯಾವುದೊ ವಾದ್ಯ. ಈ ಕೈಗಳಲ್ಲವೆ
ಇಂದೇಕೆ ಇಳಿದಿವೆ? ಎಂಜಲನು ಬಯಸಿ
ಹಸಿದ ಕೈಗಳಿಗೆ ಪ್ರೀತಿಯೆಂದರು ಪ್ರೀತಿ,
ಹಾಗೆಂದೆ ತಟ್ಟಿ ಎದೆ ಎದೆಯ ಕದವ
ಕಾದರೂ, ಹಸಿದವರಿಗವು ತೆರೆಯಲೆ ಇಲ್ಲ !
ಎಷ್ಟೆಂದು ತಡೆದಾರು ? ತಮ್ಮ ಹಸಿವೆ !
ಕಸದ ತೊಟ್ಟಿಗೆ ಇನ್ನು ಹಸಿದ ಕೈ ಇಳಿಯವು.
ಅಂದುಕೊಂಡೆನು ಅಂಜಿ ನೊಂದುಕೊಂಡು.
ನೇಣುಗಂಬವ ಕೂಡ ಧಿಕ್ಕರಿಸಿ ನುಗ್ಗುವರು
ಎತ್ತಿಕೊಳ್ಳಲು ಸಿಕ್ಕ ಕೋವಿ. ಗುಂಡು
ಹಸಿದವರು ಕೂಡ ಬದುಕಬೇಕಲ್ಲವೆ? ಮ
ತ್ತೆ, ಪ್ರೀತಿಯೂ ಬೇಕಲ್ಲ ದುಡಿವ ಜನಕೆ
ಎದೆಯ ಕದಗಳು ಮುಚ್ಚಿದಾಗ, ಮತ್ತಿನ್ನೇನು
ಮುಖ್ಯವಲ್ಲವೆ ಸಾವಿಗಿಂತ ಬದುಕೆ?