ಕೊರೊನಾ 3ನೇ ಹಂತದಲ್ಲಿದೆ: ಏನು ಮಾಡಬೇಕು?

ಡಾ|| ಅನಿಲ್ ಕುಮಾರ್

ವಾಸ್ತವದಲ್ಲಿ ನಾವು ೩ನೇ ಹಂತದ ಸೋಂಕನ್ನು ನೋಡುತ್ತಿದ್ದೇವೆ. ಕೇವಲ ಲಾಕ್‌ಡೌನ್ ಮತ್ತು ಕ್ಯಾರಂಟೈನ್ ನಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಎಂದು ಈಗಾಗಲೇ ಹೆಚ್ಚುತ್ತಿರುವ ಸೋಂಕಿತರನ್ನು ನೋಡಿದಾಗ ಅರ್ಥವಾಗುತ್ತದೆ. ಈ ನಿರ್ಬಂಧಗಳ ಜೊತೆ ಜೊತೆಯಲ್ಲಿಯೇ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಿ ಸೋಂಕಿತರನ್ನು ಗುರುತಿಸಿ ಸೋಂಕು ಹರಡದಂತೆ ತಡೆಯಬಹುದೇ ವಿನಃ ಈ ರೀತಿ ಮಂದಗತಿಯಲ್ಲಿ ಪರೀಕ್ಷೆಗಳನ್ನು ಮಾಡುತ್ತಿದ್ದರೆ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕಾಗಿ ಈ ಸದ್ಯದಲ್ಲಿ ನಾವು ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಕಡಿಮೆ ಸಮಯದಲ್ಲಿ ಮಾಡಲಾಗದಿದ್ದರೆ ಅಂತಹ ಸಂದರ್ಭದಲ್ಲಿ ಜ್ವರ, ನೆಗಡಿ, ಕೆಮ್ಮು ಗಂಟಲು ನೋವು ಇತ್ಯಾದಿ ಲಕ್ಷಣಗಳುಳ್ಳವರನ್ನೆಲ್ಲಾ ಪ್ರತ್ಯೇಕಿಸಿ ಆರೈಕೆ ಹಾಗೂ ಚಿಕಿತ್ಸೆ ಕೊಡಬೇಕಾಗುತ್ತದೆ. ಹೀಗೆ ಮಾಡಲು ಪ್ರತೀ ಗ್ರಾಮದಲ್ಲಿ ಹಾಗೂ ವಾರ್ಡ್ ಗಳಲ್ಲಿ ಪ್ರತ್ಯೇಕ ತಾತ್ಕಾಲಿಕ ಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗು ಅಲ್ಲಿ ಚಿಕಿತ್ಸೆಯನ್ನು ಕೊಡುವಂತಾಗಬೇಕು.

ಭಾರತದಲ್ಲಿ ಇಂದು ನಾವು ೩ನೇ ಹಂತದ ಕೋವಿಡ್-೧೯ ಸೋಂಕನ್ನು ನೋಡುತ್ತಿದ್ದೇವೆ ಎಂದು ಅನೇಕ ವಿಜ್ಞಾನಿಗಳು, ಸಾಂಕ್ರಾಮಿಕ ರೋಗಗಳ ತಜ್ಞರು, ಐಸಿಎಂಆರ್ ಹಾಗೂ ಮುಂತಾದ ಸಂಸ್ಥೆಗಳು ಹೇಳುತ್ತಿದ್ದರೂ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಒಪ್ಪುತ್ತಿಲ್ಲ. ಸರ್ಕಾರದ ದೃಷ್ಟಿಯಲ್ಲಿ ನಾವಿನ್ನೂ ೨ನೇಯ ಹಂತದಲ್ಲಿ ಇದ್ದೇವೆ ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ನಾವು ೩ನೇ ಹಂತದ ಸೋಂಕನ್ನು ನೋಡುತ್ತಿದ್ದೇವೆ. ಹೀಗಿರುವಾಗ ಯಾವುದೇ ಜವಾಬ್ದಾರಿಯುತವಾದ ಸರ್ಕಾರಗಳು ನಮ್ಮ ಜನರನ್ನು ಈ ಸೋಂಕಿನಿಂದ ರಕ್ಷಿಸಲು ಅನೇಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ ಸರ್ಕಾರದ ಕ್ರಮಗಳು ಬಹಳ ಮಂದಗತಿಯಲ್ಲಿವೆ.

ಕೇಂದ್ರ ಸರ್ಕಾರದ ಪ್ರಕಟನೆಯ ಪ್ರಕಾರ ಇಂದು ದೇಶಾದ್ಯಂತ ೧,೦೬,೭೧೯ ಆಸ್ಪತ್ರೆ ಹಾಸಿಗೆಗಳನ್ನು ಕೋವಿಡ್-೧೯ ಸೋಂಕಿತರ ಆರೈಕೆಗೆ ಮೀಸಲಾಗಿರಿಸಿದೆ ಹಾಗು ೧೨,೦೨೪ ತೀವ್ರ ನಿಗಾ ಘಟಕದ (ಐಸಿಯು) ಹಾಸಿಗೆಗಳನ್ನು ಸಿದ್ದಪಡಿಸಿದ್ದಾರೆ. ಇವುಗಳನ್ನು ಸುಮಾರು ೬೦೦ ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿದ್ದಾರೆ. ಈ ಪ್ರಕಟಣೆಯನ್ನು ವಿವರವಾಗಿ ವಿಶ್ಲೇಷಿಸಿದರೆ, ನಮ್ಮ ಸರ್ಕಾರ ಭಾರತದಲ್ಲಿ ಈಗ ಕೇವಲ ಶೇ. ೦.೧೭% ಜನರಿಗೆ ಸೋಂಕು ತಗುಲಿರಬಹುದು ಎಂದು ಅಭಿಪ್ರಾಯದಲ್ಲಿದೆ ಅನ್ನಿಸುತ್ತದೆ. ಆದರೆ ಸಿಡಿಡಿಇಪಿ, ವಾಷಿಂಗ್ಟನ್ ಮೂಲದ ಸಂಸ್ಥೆಯ ಪ್ರಕಾರ ಭಾರತದಲ್ಲಿ ಶೇ. ೨೮% ರಿಂದ ಶೇ ೩೮% ರಷ್ಟು ಜನರು ಜುಲೈ ತಿಂಗಳಷ್ಟರಲ್ಲಿ ಸೋಂಕಿತರಾಗಬಹುದು ಎಂದು ಹೇಳಿದ್ದಾರೆ.

ವಿಜ್ಞಾನಿಗಳೂ ಮತ್ತು ಸಾಂಕ್ರಾಮಿಕ ರೋಗಗಳ ತಜ್ಞರ ಅಭಿಪ್ರಾಯದಲ್ಲಿ ಭಾರತದಲ್ಲಿ ಸರಾಸರಿ ಶೇ. ೫% ರಿಂದ ಶೇ. ೭% ರಷ್ಟು ಸೋಂಕು ತಗಲಬಹುದೆಂದಿದೆ. ಹಾಗೆ ಐಸಿಎಂಆರ್ ಕೂಡ ಒಂದು ಅಂದಾಜಿಗೆ ಬರಲು ಸಂಶೋಧನೆಯನ್ನು ಕೈಗೊಂಡಿದೆ. ಇನ್ನೂ ಅದರ ಅಧಿಕೃತವಾದ ವರದಿ ಬಂದಿಲ್ಲ. ಆದರೆ ಐಸಿಎಂಆರ್ ಭಾರತದಲ್ಲಿ ಈಗ ೩ನೇಯ ಹಂತದ ಸೋಂಕು ಇದೆ ಎಂದು ಸ್ವಷ್ಟವಾಗಿ ಹೇಳಿದೆ. ಹೀಗಿರುವಾಗ ನಾವು ಕೇವಲ ಶೇ. ೧% ರಷ್ಟು ಜನರಿಗೆ ಈ ಸೋಂಕು ತಗುಲಿದೆ ಎಂದು ಪರಿಗಣಿಸಿದರೆ ಕರ್ನಾಟಕ ರಾಜ್ಯದಲ್ಲಿ ಸುಮಾರು ೩೩,೫೦೦ ಆಸ್ಪತ್ರೆ ಹಾಸಿಗೆಗಳು ಬೇಕು. ಅದರ ಪೈಕಿ ೬೭೦೦ ಐಸಿಯು ಹಾಸಿಗೆಗಳು ಇರಬೇಕು. ಈಗ ಒಟ್ಟು ಕರ್ನಾಟಕ ರಾಜ್ಯದಲ್ಲಿ ಕೋವಿಡ್-೧೯ ಸೋಂಕಿತರಿಗಾಗಿ ಕಾಯ್ದಿರಿಸಿರುವ ಹಾಸಿಗೆಗಳೆಷ್ಟು ಎನ್ನುವ ನಿಖರವಾದ ಮಾಹಿತಿ ಇಲ್ಲ.

ಹಾಗೆ ಭಾರತದಲ್ಲಿ ಸುಮಾರು ೬,೮೫,೦೦೦ ಹಾಸಿಗೆಗಳು ಬೇಕು. ಇದರ ಪೈಕಿ ಸುಮಾರು ೧,೩೭,೦೦೦ ಐಸಿಯು ಹಾಸಿಗೆಗಳು ಇರಬೇಕಾಗುತ್ತವೆ. ಅಂದರೆ ದೇಶಾದ್ಯಂತ ಸುಮಾರು ೫,೬೬,೨೫೭ ಹಾಸಿಗೆಗಳನ್ನು ಅಧಿಕವಾಗಿ ಹೊಂದಿಸಬೇಕಾಗುತ್ತದೆ. ಭಾರತದಲ್ಲಿ ಇಲ್ಲಿಯವರೆಗೆ ಸುಮಾರು ೧೩,೦೦೦ ಸೋಂಕಿತರನ್ನು ಗುರುತಿಸಲಾಗಿದೆ. ಆದರೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ೧೩೭ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇಷ್ಟೊಂದು ಕಡಿಮೆ ಸೋಂಕು ಏಕೆ ಎಂದು ನಾವು ಪ್ರಶ್ನಿಸುವುದಾದರೆ ಅದಕ್ಕೆ ಮುಖ್ಯ ಕಾರಣ ನಾವು ಬಹಳ ಕಡಿಮೆ ಪ್ರಮಾಣದಲ್ಲಿ ಪರೀಕ್ಷೆಗಳನ್ನು ಮಾಡುತ್ತಿದ್ದೇವೆ.

ಉದಾಹರಣೆಗೆ: ಅಮೇರಿಕಾ ದೇಶದಲ್ಲಿ ಸುಮಾರು ೩೩ ಕೋಟಿ ಜನಸಂಖ್ಯೆ ಇದೆ. ಅವರು ಸುಮಾರು ೩೩ ಲಕ್ಷ ಜನರಿಗೆ ಪರೀಕ್ಷೆಗಳನ್ನು ಮಾಡಿದ್ದಾರೆ. ಆದರೆ ೧೩೭ ಕೋಟಿ ಜನಸಂಖ್ಯೆ ಇರುವ ನಾವು ಕೇವಲ ೨,೯೦,೦೦೦ ಪರೀಕ್ಷೆಗಳನ್ನು ಮಾಡಿದ್ದೇವೆ. ಈ ಪರೀಕ್ಷೆಗಳ ಪೈಕಿ ೧೨,೭೫೯ ಜನರಿಗೆ ಸೋಂಕು ಇದೆ ಎಂದು ಧೃಡೀಕರಿಸಲಾಗಿದೆ (ಅಂದರೆ ಶೇ. ೪.೩% ರಷ್ಟು).

ನಾವು ಈ ಪರೀಕ್ಷೆಗಳನ್ನು ಹೆಚ್ಚು ಮಾಡಿದರೆ ಯಾರೂ ಸೋಂಕಿತರು ಎಂದು ತಿಳಿದುಕೊಂಡು ಅವರನ್ನು ಪ್ರತ್ಯೇಕಿಸಿ ಆರೈಕೆಯನ್ನು ಹಾಗೂ ಚಿಕಿತ್ಸೆಯನ್ನು ಕೊಟ್ಟರೆ ಆಗ ಸೋಂಕು ಹರಡುವುದನ್ನು ತಡೆಯಬಹುದು. ಕೇವಲ ಲಾಕ್‌ಡೌನ್ ಮತ್ತು ಕ್ಯಾರಂಟೈನ್ ನಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿಲ್ಲ. ಎಂದು ಈಗಾಗಲೇ ಹೆಚ್ಚುತ್ತಿರುವ ಸೋಂಕಿತರನ್ನು ನೋಡಿದಾಗ ಅರ್ಥವಾಗುತ್ತದೆ.

ಈ ನಿರ್ಬಂಧಗಳ ಜೊತೆ ಜೊತೆಯಲ್ಲಿಯೇ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಿ ಸೋಂಕಿತರನ್ನು ಗುರುತಿಸಿ ಸೋಂಕು ಹರಡದಂತೆ ತಡೆಯಬಹುದೇ ವಿನಃ ಈ ರೀತಿ ಮಂದಗತಿಯಲ್ಲಿ ಪರೀಕ್ಷೆಗಳನ್ನು ಮಾಡುತ್ತಿದ್ದರೆ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕಾಗಿ ಈ ಸದ್ಯದಲ್ಲಿ ನಾವು ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಕಡಿಮೆ ಸಮಯದಲ್ಲಿ ಮಾಡಲಾಗದಿದ್ದರೆ ಅಂತಹ ಸಂದರ್ಭದಲ್ಲಿ ಜ್ವರ, ನೆಗಡಿ, ಕೆಮ್ಮು ಗಂಟಲು ನೋವು ಇತ್ಯಾದಿ ಲಕ್ಷಣಗಳುಳ್ಳವರನ್ನೆಲ್ಲಾ ಪ್ರತ್ಯೇಕಿಸಿ ಆರೈಕೆ ಹಾಗೂ ಚಿಕಿತ್ಸೆ ಕೊಡಬೇಕಾಗುತ್ತದೆ. ಹೀಗೆ ಮಾಡಲು ಪ್ರತೀ ಗ್ರಾಮದಲ್ಲಿ ಹಾಗೂ ವಾರ್ಡ್ ಗಳಲ್ಲಿ ಪ್ರತ್ಯೇಕ ತಾತ್ಕಾಲಿಕ ಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗು ಅಲ್ಲಿ ಚಿಕಿತ್ಸೆಯನ್ನು ಕೊಡುವಂತಾಗಬೇಕು.

ಒಂದು ಕಡೆ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಿ ಸೋಂಕಿತರನ್ನು ಗುರುತಿಸದೆ ಇನ್ನೊಂದು ಕಡೆ ರೋಗಲಕ್ಷಣಗಳುಳ್ಳವರನ್ನು ಪ್ರತ್ಯೇಕಿಸಿ ಆರೈಕೆ ಮತ್ತು ಚಿಕಿತ್ಸೆ ಕೊಡದಿದ್ದರೆ. ಈ ಸೋಂಕು ಬಹುಬೇಗ ಉಲ್ಬಣವಾಗುವುದು ಖಚಿತ. ಹೇಗೆ ನಾವು ಹಂತ ಹಂತವಾಗಿ ಮೊದಲನೆಯ ಹಂತದ ಸೋಂಕಿನಿಂದ ಈ ೩ನೇ ಹಂತದ ಸೋಂಕನ್ನು ತಲುಪಿದ್ದೇವೆಯೋ ಇನ್ನು ೨-೩ ತಿಂಗಳಲ್ಲಿ ೪ ನೇಯ ಹಂತವನ್ನು ಮುಟ್ಟುತ್ತೇವೆ.

ಆಗ ಒಂದು ಕಡೆ ಜನರು ತಮ್ಮ ಪ್ರಾಣವನ್ನು ಕೋವಿಡ್-೧೯ ಸೋಂಕಿನಿಂದ ಕಳೆದು ಕೊಳ್ಳಬೇಕಾಗುತ್ತದೆ. ಇನ್ನೊಂದು ಕಡೆ ಈ ಲಾಕ್‌ಡೌನ್ ನಿಂದ ತತ್ತರಿಸಿ ಹೋಗಿರುವ ಆರ್ಥಿಕ ವ್ಯವಸ್ಥೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ಅಸಂಘಟಿತ ಕಾರ್ಮಿಕರು, ರೈತರು, ಕೃಷಿ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಸಾವನ್ನಪ್ಪಬೇಕಾಗುತ್ತದೆ. ಅಂದರೆ ಭಾರತದ ದುಡಿಯುವ ಹಾಗು ಬಡಜನರಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಿಸುತ್ತದೆ. ಇವೆಲ್ಲವನ್ನು ತಡೆಗಟ್ಟಬೇಕಾದರೆ ಇಂದಿನ ಸರ್ಕಾರ ಹಾಗೂ ಆಡಳಿತ ತುರ್ತಾಗಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಬೇಕು ಅದೇ ಸಮಯದಲ್ಲಿ ಸೋಂಕಿತರ ಆರೈಕೆ ಹಾಗು ಚಿಕಿತ್ಸೆಗಾಗಿ ಪ್ರತ್ಯೇಕ ತಾತ್ಕಾಲಿಕ ಕೇಂದ್ರಗಳನ್ನು ಪ್ರಾರಂಭಿಸಬೇಕು.

Donate Janashakthi Media

Leave a Reply

Your email address will not be published. Required fields are marked *