ಕೊರೊನಾ ಮುನ್ನವೇ ದುಡಿಯುವ ಜನರ ವರಮಾನ ಕುಸಿದಿತ್ತು

ಕೊರೊನಾ ಮತ್ತು ಲಾಕ್‌ಡೌನ್ ಜಾರಿ ಮಾಡುವ ಮೊದಲೇ ಭಾರತದ ಅಪಾರ ಸಂಖ್ಯೆಯ ದುಡಿಯುವ ಜನರ ನಿಜ ಆದಾಯ ಕುಸಿದಿತ್ತು ಎಂಬ ಗಂಭೀರವಾದ ಸಂಗತಿಯನ್ನು ಈ ಕೊರೊನಾ ಮತ್ತು ಲಾಕ್‌ಡೌನ್‌ನ ಅಬ್ಬರಗಳು ಮರೆಮಾಚಿವೆ.

1991ರಿಂದ ಹಿಡಿದು ಇಲ್ಲಿಯವರೆಗಿನ ನವ ಉದಾರವಾದಿ ಅವಧಿಯಲ್ಲಿ ದೇಶದಲ್ಲಿ ಆಹಾರಧಾನ್ಯಗಳ ಉತ್ಪಾದನೆಯ ಹೆಚ್ಚಳವು ಜನಸಂಖ್ಯಾ ಬೆಳವಣಿಗೆಗಿಂತ ಹೆಚ್ಚಿಗೆ ಇರಲೇ ಇಲ್ಲ: ಆದಾಗ್ಯೂ, ಈ ಇಡೀ ಅವಧಿಯಲ್ಲಿ ಭಾರತೀಯ ಆಹಾರ ನಿಗಮವು ಸಂಗ್ರಹಿಸುತ್ತಿದ್ದ ಆಹಾರಧಾನ್ಯಗಳ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ. ಇದಕ್ಕೆ ಕಾರಣ ಜನಸಾಮಾನ್ಯರ ಆಹಾರಧಾನ್ಯಗಳ ಬಳಕೆಯಲ್ಲಿ ಇಳಿಕೆ, ಅಂದರೆ ನಿಜ ಆದಾಯದ ಕುಸಿತ. ಆಹಾರಧಾನ್ಯಗಳ ಬಳಕೆ ಮತ್ತು ನಿಜ ಬಳಕೆಯ ವೆಚ್ಚದ ಅಂಕಿ-ಅಂಶಗಳು ಇದನ್ನೇ ತೋರಿಸುತ್ತಿವೆ.

ಕೊರೊನಾ ಸಾಂಕ್ರಾಮಿಕವು ವ್ಯಾಪಕವಾಗಿ ಹರಡಿರುವುದರಿಂದ ಮತ್ತು ಅದರ ಸಂಬಂಧವಾಗಿ ಹೇರಿದ ಲಾಕ್‌ಡೌನ್ ಪರಿಣಾಮಗಳಿಂದಾಗಿ ಭಾರತದ ಜಿಡಿಪಿಯು ಕುಸಿದು ಬಿದ್ದಿದೆ, ನಿಜ. ಆದರೆ, ಕೊರೊನಾ ಹರಡುವ ಮುನ್ನವೇ ಮತ್ತು ತತ್ಸಂಬಂಧದ ಲಾಕ್‌ಡೌನ್ ಜಾರಿ ಮಾಡುವ ಸಮಯದ ಮೊದಲೇ ಭಾರತದ ಅಪಾರ ಸಂಖ್ಯೆಯ ದುಡಿಯುವ ಜನರ ನಿಜ ಆದಾಯ ಕುಸಿದಿತ್ತು ಎಂಬ ಗಂಭೀರವಾದ ಸಂಗತಿಯನ್ನು ಈ ಕೊರೊನಾ ಮತ್ತು ಲಾಕ್‌ಡೌನ್‌ನ ಅಬ್ಬರಗಳು ಮರೆಮಾಚಿವೆ.

ಈ ಸಂಗತಿಯನ್ನು ಹಲವಾರು ಅಂಶಗಳು ದೃಢೀಕರಿಸುತ್ತವೆ. ಸಾಮಾನ್ಯವಾಗಿ ಶೇ.2 ರಿಂದ 3ರವರೆಗಿನ ಪ್ರಮಾಣದಲ್ಲಿರುತ್ತಿದ್ದ ನಿರುದ್ಯೋಗವು 2018-19ನೇ ವರ್ಷದಲ್ಲಿ ಶೇ.6ರ ಮಟ್ಟಕ್ಕೆ ಏರಿತ್ತು. ಕಳೆದ 45 ವರ್ಷಗಳಲ್ಲೇ ಅತಿ ಹೆಚ್ಚಿನ ನಿರುದ್ಯೋಗವನ್ನು ಕಂಡ ಸಮಯ ಇದು. 2017-18ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಭಾರತದಲ್ಲಿ 2016-17ರಲ್ಲಿ ತಲಾ ವಾರ್ಷಿಕ ಬಳಕೆಯ ವೆಚ್ಚವು 2011-12ರಲ್ಲಿ ಇದ್ದುದಕ್ಕಿಂತ ಶೇ.9ರಷ್ಟು ಕಡಿಮೆಯಾಗಿತ್ತು. ಅಷ್ಟೊಂದು ದೊಡ್ಡ ಜನಸಂಖ್ಯೆಯ ಸರಾಸರಿ ಬಳಕೆ ವೆಚ್ಚವು ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗಿರುವುದು ಒಂದು ಅಭೂತಪೂರ್ವ ಸಂಗತಿಯೇ ಸರಿ. ರಾಷ್ಟ್ರೀಯ ಮಾದರಿ ಸಮೀಕ್ಷೆಯಿಂದ ಕಂಡುಬಂದ ಈ ಸಂಗತಿಯು ಅದೆಷ್ಟು ಕಳವಳಕಾರಿಯಾಗಿತ್ತು ಎಂದರೆ, ಸಮೀಕ್ಷೆಯ ವರದಿಯನ್ನು ಅಡಗಿಸಿಡಲು ಮೋದಿ ಸರ್ಕಾರ ನಿರ್ಧರಿಸಿತ್ತು. ರಾಷ್ಟ್ರೀಯ ಮಾದರಿ ಸಮೀಕ್ಷೆಯಿಂದ ಕಂಡುಬಂದ ಈ ಅಂಶವು ನಂಬಲರ್ಹವಲ್ಲ ಎಂಬುದು ಸರ್ಕಾರದ ಒಂದು ಅತೀ ಅಸಂಬದ್ಧವಾದ ಹೇಳಿಕೆಯಾಗಿತ್ತು. ದಶಕ ದಶಕಗಳಿಂದಲೂ ಕಾಲ ಕಾಲಕ್ಕೆ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಮಾದರಿ ಸಮೀಕ್ಷೆಯು, ಅದರ ಇತಿ ಮಿತಿಗಳು ಏನೇ ಇದ್ದರೂ ಸಹ, ಒಂದು ನಿರ್ದಿಷ್ಟ ವರ್ಷದಲ್ಲಿ ಮಾತ್ರ ನಂಬಲರ್ಹವಲ್ಲ ಎನ್ನಲು ಕಾರಣವೇ ಇಲ್ಲ. ಆದ್ದರಿಂದ, ಭಾರತದ ಅರ್ಥವ್ಯವಸ್ಥೆಯಲ್ಲಿ ಗಂಭೀರವಾಗಿರುವಂಥಹ ಏನೋ ಒಂದು ವಿದ್ಯಮಾನವು ನಡೆಯುತ್ತಾ ಇದೆ ಎಂಬುದು ಸ್ಪಷ್ಟವಾಗುತ್ತದೆ.

ದುಡಿಯುವ ಜನರ ಕೈಗೆ ಖರೀದಿಸುವ ಶಕ್ತಿಯನ್ನು ನೀಡುವ ಬದಲು, ಮೋದಿ ಸರ್ಕಾರವು ತನ್ನ ಆಹಾರ ಧಾನ್ಯಗಳ ದಾಸ್ತಾನಿನ ಪ್ರಮಾಣವನ್ನು ತಗ್ಗಿಸಿಕೊಳ್ಳಲು ಧಾನ್ಯಗಳನ್ನು ಎಥೆನಾಲ್‌ಗೆ ಪರಿವರ್ತಿಸಲು ಅನುಮತಿ ನೀಡುವ ಯೋಜನೆ ರೂಪಿಸಿರುವುದು ವಿಪರ್ಯಾಸವಾಗಿ ಕಂಡರೂ ಅದರಲ್ಲಿ ಆಶ್ಚರ್ಯವೇನಿಲ್ಲ.

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್, ವಾರ್ತಾಭಾರತಿ

ಆಹಾರಧಾನ್ಯಗಳ ಉತ್ಪಾದನೆ ಮತ್ತು ಬಳಕೆಯ ಅಂಕಿ ಅಂಶಗಳು ಏನು ನಡೆಯುತ್ತಿತ್ತು ಎಂಬುದರ ಸತ್ಯವನ್ನು ದೃಢೀಕರಿಸುತ್ತವೆ. 1991ರಿಂದ ಹಿಡಿದು ಇಲ್ಲಿಯವರೆಗಿನ ನವ ಉದಾರವಾದಿ ಅವಧಿಯನ್ನು ಗಣನೆಗೆ ತೆಗೆದುಕೊಂಡರೆ, ದೇಶದಲ್ಲಿ ಆಹಾರಧಾನ್ಯಗಳ ಉತ್ಪಾದನೆಯ ಹೆಚ್ಚಳವು ಜನಸಂಖ್ಯಾ ಬೆಳವಣಿಗೆಗಿಂತ ಹೆಚ್ಚಿಗೆ ಇರಲೇ ಇಲ್ಲ: 1991 ಮತ್ತು 2018ರ ನಡುವೆ ಜನಸಂಖ್ಯಾ ಬೆಳವಣಿಗೆಯು ವಾರ್ಷಿಕವಾಗಿ ಸುಮಾರು ಶೇ.1.6ರಷ್ಟಿದ್ದರೆ, ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳವು ಶೇ.1.8ರಷ್ಟಿತ್ತು.

ಆದಾಗ್ಯೂ, ಕುತೂಹಲಕಾರಿಯಾದ ಎರಡು ಸ್ಪಷ್ಟ ವಿದ್ಯಮಾನಗಳನ್ನು ಗುರುತಿಸಬಹುದು: ಮೊದಲನೆಯದು, ಆಹಾರಧಾನ್ಯಗಳ ಸಂಗ್ರಹಣೆ. ನವ ಉದಾರವಾದದ ಇಡೀ ಅವಧಿಯಲ್ಲಿ ಭಾರತೀಯ ಆಹಾರ ನಿಗಮವು ಸಂಗ್ರಹಿಸುತ್ತಿದ್ದ ಆಹಾರಧಾನ್ಯಗಳ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ. ಅದರಲ್ಲೂ ವಿಶೇಷವಾಗಿ 2008ರ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟಿನ ನಂತರ, ಸಂಗ್ರಹಣೆಯ ಪ್ರಮಾಣವು ವೇಗವಾಗಿ ಏರಿದೆ. 1991ರಲ್ಲಿ ಸರ್ಕಾರದ ಆಹಾರ ಧಾನ್ಯಗಳ ಸಂಗ್ರಹಣೆಯು ಧಾನ್ಯಗಳ ನಿವ್ವಳ ಉತ್ಪಾದನೆಯ ಶೇ.12.7ರಷ್ಟಿತ್ತು. ಈ ಪ್ರಮಾಣವು 2017ರಲ್ಲಿ ಶೇ.29.6ಕ್ಕೆ ಏರಿಕೆಯಾಯಿತು. 2001 ರಿಂದ 2008ರ ವರೆಗಿನ ಅವಧಿಯ ಸರಾಸರಿ ಅನುಪಾತವು 22.4 ಆಗಿತ್ತು ಮತ್ತು 2011 ರಿಂದ 2017ರ ಅವಧಿಯಲ್ಲಿ ಈ ಅನುಪಾತವು 28.5 ಆಗಿತ್ತು. ಅಂದರೆ, ಕೃಷಿ ವ್ಯಾಪಾರದಲ್ಲಿ ಪ್ರಾಬಲ್ಯ ಹೊಂದಿದ್ದ ಖಾಸಗಿ ವ್ಯಾಪಾರಿಗಳು ದೇಶೀಯ ಮಾರುಕಟ್ಟೆಯಲ್ಲಿ ಆಹಾರಧಾನ್ಯಗಳ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ಕಳೆದುಕೊಂಡವು.

ಎರಡನೆಯ ಗಮನಾರ್ಹವಾದ ವಿದ್ಯಮಾನವೆಂದರೆ, ಉತ್ಪಾದನೆಯ ಪ್ರಮಾಣಕ್ಕೆ ಹೋಲಿಸಿದರೆ ವಾಡಿಕೆಯ ಬಳಕೆ ಮತ್ತು ಬಫರ್ ಉದ್ದೇಶಗಳಿಗಾಗಿ ಹೊಂದಿರುತ್ತಿದ್ದ ಆಹಾರ ಧಾನ್ಯಗಳ ದಾಸ್ತಾನು ಪ್ರಮಾಣವು ವಾಡಿಕೆಗಿಂತಲೂ ಹೆಚ್ಚಿನ ಏರಿಕೆಯನ್ನು ಕಂಡಿದೆ. 2017ರಿಂದ ಆರಂಭವಾದ ನಾಲ್ಕು ವರ್ಷಗಳಲ್ಲಿ, ಆಯಾ ವರ್ಷಗಳ ಜೂನ್ ತಿಂಗಳಿನಲ್ಲಿ ಹೊಂದಿದ್ದ ದಾಸ್ತಾನುಗಳು ಅನುಕ್ರಮವಾಗಿ 55.7, 68.1, 74.3 ಮತ್ತು 83.5 ದಶಲಕ್ಷ ಟನ್ನುಗಳಷ್ಟಿದ್ದವು.

ದಾಸ್ತಾನುಗಳು ನಿವ್ವಳ ಉತ್ಪಾದನೆಗಿಂತ ವೇಗವಾಗಿ ಬೆಳೆಯುತ್ತಿದ್ದವು ಮತ್ತು ಪ್ರತಿ ವರ್ಷದ ಜೂನ್ ತಿಂಗಳಿನಲ್ಲೂ ದಾಸ್ತಾನು ಮಟ್ಟವು ಆಯಾ ವರ್ಷದ ನಿವ್ವಳ ಉತ್ಪಾದನೆಯ ಶೇ.25ರಷ್ಟು ಹೆಚ್ಚಿಗೆ ಪ್ರಮಾಣದಲ್ಲಿ ಇರುತ್ತಿತ್ತು. ಭಾರತದ ಅರ್ಥವ್ಯವಸ್ಥೆಯಲ್ಲಿ ಅಷ್ಟೊಂದು ಹೆಚ್ಚಿನ ಮಟ್ಟದ ದಾಸ್ತಾನು ಯಾವತ್ತೂ ಇರಲಿಲ್ಲ: ಎಪ್ಪತ್ತರ ದಶಕದಲ್ಲಿ ನಿವ್ವಳ ಉತ್ಪಾದನೆಯ ಸುಮಾರು ಶೇ.12ರಷ್ಟಿದ್ದ ದಾಸ್ತಾನು, ತೊಂಬತ್ತರ ದಶಕದ ಕೊನೆಯ ಹೊತ್ತಿಗೆ ಸುಮಾರು ಶೇ.15 ಕ್ಕಿಂತ ಹೆಚ್ಚಿಗೆ ಇರಲಿಲ್ಲ.

ಈ ಎರಡೂ ವಿದ್ಯಮಾನಗಳೂ ಪರಸ್ಪರ ಸಂಬಂಧ ಹೊಂದಿವೆ. ಸರ್ಕಾರವು ಹೊಂದಿದ್ದ ಬೃಹತ್ ಪ್ರಮಾಣದ ದಾಸ್ತಾನು ಏನನ್ನು ಸೂಚಿಸುತ್ತದೆ ಎಂದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದಕ್ಕಿಂತಲೂ “ಹೆಚ್ಚಿನ ಪೂರೈಕೆ”ಯೇ ಇರುತ್ತಿದ್ದುದೇ ಒಂದು ದೀರ್ಘಾವಧಿಯ ಅವಸ್ಥೆಯಾಗಿದ್ದ ಕಾರಣದಿಂದ ಖಾಸಗಿ ವ್ಯಾಪಾರಿಗಳಿಗೆ ಆಹಾರ ಧಾನ್ಯ ವ್ಯಾಪಾರವು ಆಕರ್ಷಣೀಯವಾಗಿ ಉಳಿಯಲಿಲ್ಲ. ಸಾಕಷ್ಟು ಬೇಡಿಕೆ ಇಲ್ಲದಿದ್ದರೂ ಸಹ, ದೊಡ್ಡ ಪ್ರಮಾಣದ ಆಹಾರ ಧಾನ್ಯಗಳ ದಾಸ್ತಾನು ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದ್ದ ಕಾರಣದಿಂದ, ಖರೀದಿದಾರರೇ ಮೇಲುಗೈ ಪಡೆದ ಮಾರುಕಟ್ಟೆಯಲ್ಲಿ, ಈ ದಾಸ್ತಾನುಗಳು ಸರಕಾರ ಬಳಿಯೇ ಇರಲಿ ಎಂಬುದು ಖಾಸಗಿ ವ್ಯಾಪಾರಿಗಳ ಇರಾದೆಯಾಗಿತ್ತು. ಹಾಗಾಗಿ, ಖಾಸಗಿ ವ್ಯಾಪಾರಿಗಳ ಬಳಿ ಅತಿ ಕಡಿಮೆ ಆಹಾರಧಾನ್ಯಗಳ ದಾಸ್ತಾನು ಇರುತ್ತಿತ್ತು ಮತ್ತು ಅದೇ ಸಮಯದಲ್ಲಿ ಸರ್ಕಾರದ ಬಳಿ ಅತಿ ಹೆಚ್ಚಿನ ಪ್ರಮಾಣದ ದಾಸ್ತಾನು ಇರುತ್ತಿತ್ತು ಮತ್ತು ಅದು ನಿವ್ವಳ ಉತ್ಪಾದನೆಯ ಅನುಪಾತದ ಲೆಕ್ಕದಲ್ಲಿ ಹೆಚ್ಚಿನ ಮಟ್ಟದಲ್ಲೇ ಇರುತ್ತಿತ್ತು.

ಆಹಾರ ಧಾನ್ಯಗಳ ಉತ್ಪಾದನೆಯ ದರವು ಜನಸಂಖ್ಯಾ ಬೆಳವಣಿಗೆಯ ದರವನ್ನು ಮೀರದಿದ್ದರೂ ಸಹ, ಆಹಾರ ಧಾನ್ಯಗಳ ಮಾರುಕಟ್ಟೆಯಲ್ಲಿ ಪೂರೈಕೆಯೇ ಸತತವಾಗಿ ಹೆಚ್ಚಾಗಿರುವ ಪ್ರವೃತ್ತಿ ಇರುವುದಾದರೂ ಏಕೆ ಎಂಬುದೇ ಪ್ರಶ್ನೆ. ನವ ಉದಾರವಾದದ ಕಾಲಮಾನದಲ್ಲಿ ಭಾರತದ ಅರ್ಥವ್ಯವಸ್ಥೆಯು ಉನ್ನತ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ನವ ಉದಾರವಾದದ ಭಕ್ತರು ತಾವೇ ತಮ್ಮ ಬೆನ್ನು ತಟ್ಟಿಕೊಳ್ಳುತ್ತಾರೆ. ಆದರೆ, ಅರ್ಥ ವ್ಯವಸ್ಥೆಯಲ್ಲಿ ಉಂಟಾದ ಈ ಬೆಳವಣಿಗೆಯ ಜೊತೆಯಲ್ಲೇ ಆಹಾರ ಧಾನ್ಯಗಳ ತಲಾ ಬೇಡಿಕೆಯೂ ವೃದ್ಧಿಯಾಗಿರಲೇ ಬೇಕಿತ್ತು. ಈ ಸಂಬಂಧವಾಗಿ ನವ ಉದಾರವಾದದ ಭಕ್ತರು ಮಂಡಿಸುವ ಒಂದು ವಾದವೆಂದರೆ, ಹೆಚ್ಚುತ್ತಿರುವ ಆದಾಯದೊಂದಿಗೆ ಆಹಾರ ಬಳಕೆಯು ಬಗೆ ಬಗೆಯ ರೂಪ ತಾಳುತ್ತದೆ. ಆದ್ದರಿಂದ ಧಾನ್ಯಗಳ ಮೇಲಿನ ಬೇಡಿಕೆ ಕುಸಿದಿದೆ.

ಆದರೆ, ಇದು ಸಂಪೂರ್ಣವಾಗಿ ಸರಿಯಲ್ಲದ ವಾದ. ಏಕೆಂದರೆ, ಬಿತ್ತನೆ ಬೀಜವನ್ನು ಬದಿಗಿಟ್ಟು ಉಳಿದ ಧಾನ್ಯಗಳು ನೇರವಾಗಿ ಮನುಷ್ಯರ ಆಹಾರವಾಗಿ ಮಾತ್ರವಲ್ಲದೆ, ಪರೋಕ್ಷವಾಗಿ ಪಶು ಉತ್ಪನ್ನಗಳ (ಹಾಲು ಮತ್ತು ಕೋಳಿಯಂತಹ) ಉತ್ಪಾದನೆಗಾಗಿ ಬಳಸಲಾಗುತ್ತದೆ. ಅದರಲ್ಲಿ ಒಂದು ಭಾಗವು ಮನುಷ್ಯರ ಬಳಕೆಗಾಗಿ ಮತ್ತು ಇನ್ನೊಂದು ಭಾಗವನ್ನು ಕೈಗಾರಿಕಾ ಬಳಕೆಗಾಗಿ ಸಂಸ್ಕರಿಸಲಾಗುತ್ತದೆ. ನಿಜ ವರಮಾನಗಳ ಏರಿಕೆಯೊಂದಿಗೆ ಮತ್ತು ಆಹಾರ ವೈವಿಧ್ಯತೆಯೊಂದಿಗೆ, ಜಾಗತಿಕ ಮಟ್ಟದಲ್ಲಿ ನೋಡಿದರೆ ಎಲ್ಲಾ ರೀತಿಯ ಉಪಯೋಗಗಳಿಗೆ, ಅದರಲ್ಲೂ ವಿಶೇಷವಾಗಿ ಪರೋಕ್ಷ ಆಹಾರಗಳಿಗೆ, ಆಹಾರ ಧಾನ್ಯಗಳ ತಲಾ ಬೇಡಿಕೆಯು ಏರುತ್ತಲೇ ಇದೆ.

ಭಾರತದಲ್ಲಿ, ಧಾನ್ಯಗಳ ಉತ್ಪಾದನೆಯ ತಲಾ ಹೆಚ್ಚಳವು ನಿಕೃಷ್ಟ ಪ್ರಮಾಣದಲ್ಲಿರುವುದರಿಂದ, ಆಹಾರ ಧಾನ್ಯಗಳಿಗೆ ಬೇಡಿಕೆಯು ನಿರಂತರವಾಗಿ ಹೆಚ್ಚಲೇಬೇಕು. ಹಾಗಿದ್ದರೂ ಸಹ, ಭಾರತವು ತದ್ವಿರುದ್ಧವಾದ ಪರಿಸ್ಥಿತಿಯಲ್ಲಿದೆ. ಅದೆಷ್ಟು ತದ್ವಿರುದ್ಧವಾಗಿದೆ ಎಂದರೆ, ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳನ್ನು ನಿರಂತರವಾಗಿ ರಫ್ತುಮಾಡುತ್ತಿದೆ. ಇದು ಸಾಧ್ಯವಾಗುವುದು ಹೇಗೆ?

ಇದಕ್ಕೆ ಕಾರಣವೆಂದರೆ ಜಿಡಿಪಿ ಉನ್ನತ ಮಟ್ಟದಲ್ಲಿದ್ದರೂ ಸಹ, ದುಡಿಯುವ ಜನರ ನಿಜ ವರಮಾನವು ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಸರ್ಕಾರದ ಬಳಿ ಆಹಾರ ಧಾನ್ಯಗಳ ದಾಸ್ತಾನು ಅತಿ ಹೆಚ್ಚಿನ ಮಟ್ಟದಲ್ಲಿದ್ದ ಇತ್ತೀಚಿನ ದಿನಗಳಲ್ಲೇ ದುಡಿಯುವರ ವರಮಾನವು ಇಳಿಕೆಯಾಗಿರುವ ಸಾಧ್ಯತೆ ಇದೆ.

ದುಡಿಯುವ ಜನರ ಆಹಾರ ಧಾನ್ಯಗಳ ತಲಾ ಬಳಕೆಯು ಇತ್ತೀಚಿನ ವರ್ಷಗಳಲ್ಲಿ ಇಳಿದಿರಲೇಬೇಕು. ಏಕೆಂದರೆ, ಈ ನವ-ಉದಾರವಾದದ ಇಡೀ ಅವಧಿಯಲ್ಲಿ, 1990-91 ರಿಂದ 2017-18ರ ವರೆಗೆ, ಮೊದಲು ನಾವು ತಲಾ ಆಹಾರ ಧಾನ್ಯದ ಲಭ್ಯತೆಯಲ್ಲಿ ಒಂದು ಇಳಿಕೆಯನ್ನು , ನಂತರ ಏರಿಕೆಯನ್ನು ಕಾಣುತ್ತೇವೆ. ಆದರೆ, ಒಟ್ಟಾರೆಯಾಗಿ ತಲಾ ಆಹಾರ ಧಾನ್ಯದ ಲಭ್ಯತೆಯು ಏರಿಕೆಯಾಗಿಲ್ಲ. ಉದಾಹರಣೆಗೆ, 1991ರಲ್ಲಿ ದಿನಕ್ಕೆ 510 ಗ್ರಾಂ, 2007ರಲ್ಲಿ 442.8 ಗ್ರಾಂ, 2018ರಲ್ಲಿ 494 ಗ್ರಾಂ. ಆಹಾರ ಧಾನ್ಯದ ಲಭ್ಯತೆ ಇತ್ತು. ಈ ಅವಧಿಯಲ್ಲಿ ಅಸಮಾನತೆಯು ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ, ಶ್ರೀಮಂತರ ಆದಾಯವು ಜಿಡಿಪಿಯ ಒಟ್ಟಾರೆ ಬೆಳವಣಿಗೆಗಿಂತಲೂ ಹೆಚ್ಚಿಗೆ ಇದ್ದಿರಲೇಬೇಕು. ಅವರ ಆಹಾರ ಧಾನ್ಯಗಳ ಪ್ರತ್ಯಕ್ಷ ಮತ್ತು ಪರೋಕ್ಷ ತಲಾ ಬಳಕೆಯು ಗಣನೀಯವಾಗಿ ಹೆಚ್ಚಿರಲೇಬೇಕು. ಅದರ ಪರಿಣಾಮವಾಗಿ ದುಡಿಯುವ ಜನರ ತಲಾ ಬಳಕೆ ಬಹಳಷ್ಟು ಇಳಿದಿರಲೇಬೇಕು.

ನಿಜ ವರಮಾನದಲ್ಲಿ ಹೆಚ್ಚಳವಾದ ಸಂದರ್ಭದಲ್ಲಿ ಅದರೊಂದಿಗೆ ಅಗತ್ಯವಾಗಿ ಆಹಾರ ಧಾನ್ಯಗಳಿಗೆ ಒಟ್ಟು ಬೇಡಿಕೆಯೂ ಹೆಚ್ಚುತ್ತದೆ. ಹಾಗಾಗಿ, ತಲಾ ನಿಜ ವರಮಾನದ ಇಳಿಕೆಯೊಂದಿಗೆ ಧಾನ್ಯಗಳ ತಲಾ ಬಳಕೆಯ ಇಳಿಕೆಯೂ ತಳುಕು ಹಾಕಿಕೊಂಡಿರುತ್ತದೆ. ಅಂದರೆ, ನವ ಉದಾರ ನೀತಿಗಳ ಜಾರಿಯ ಆರಂಭದಿಂದ ಹಿಡಿದು ಕೊರೊನಾ ಅಂಟುರೋಗವು ಇತ್ತೀಚೆಗೆ ಇಡೀ ವಿಶ್ವವನ್ನು ಆವರಿಕೊಂಡ ಸಮಯದವರೆಗಿನ ಅವಧಿಯಲ್ಲಿ ದುಡಿಯುವ ಜನರ ತಲಾ ನಿಜ ವರಮಾನವು ಇಳಿದಿರಲೇಬೇಕು.

ಈ ಅಭಿಪ್ರಾಯವು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ದತ್ತಾಂಶಕ್ಕೆ ಅನುಗುಣವಾಗಿದೆ. 1993-94 ಮತ್ತು 2011-12ರ ನಡುವೆ, (ಇವೆರಡೂ ರಾಷ್ಟ್ರೀಯ ಮಾದರಿ ದೊಡ್ಡ ಸಮೀಕ್ಷೆಯ ವರ್ಷಗಳು) ಗ್ರಾಮೀಣ ಭಾರತದಲ್ಲಿ ದಿನಕ್ಕೆ 2200 ಕ್ಯಾಲೋರಿಗಿಂತ ಕಡಿಮೆ ಮೌಲ್ಯದ ಆಹಾರ ಸೇವಿಸುವ (ಗ್ರಾಮೀಣ ಬಡತನವನ್ನು ವ್ಯಾಖ್ಯಾನಿಸುವ ಮಾನದಂಡ) ಜನರ ಸಂಖ್ಯೆಯು ಶೇ.58ರಿಂದ 68ಕ್ಕೆ ಏರಿಕೆಯಾಗಿದೆ. ಅದೇ ರೀತಿಯಲ್ಲಿ ನಗರ ಭಾರತದಲ್ಲಿ ದಿನಕ್ಕೆ 2100 ಕ್ಯಾಲೋರಿಗಿಂತ ಕಡಿಮೆ ಮೌಲ್ಯದ ಆಹಾರ ಸೇವಿಸುವ (ನಗರ ಬಡತನವನ್ನು ವ್ಯಾಖ್ಯಾನಿಸುವ ಮಾನದಂಡ) ಜನರ ಸಂಖ್ಯೆಯು ಶೇ.57 ರಿಂದ ಶೇ.65ಕ್ಕೆ ಏರಿಕೆಯಾಗಿದೆ.

ಈ ಪರಿಸ್ಥಿತಿಯು 2011-12ರ ನಂತರದಲ್ಲಿ ಬಿಗಡಾಯಿಸಿದೆ. 2012ರಲ್ಲಿ ದೇಶದಲ್ಲಿ ಆಹಾರ ಧಾನ್ಯಗಳ ಲಭ್ಯತೆಯ ತಲಾ ಪ್ರಮಾಣವು 463.8 ಗ್ರಾಂ ಇತ್ತು. 2012 ರಿಂದ 2018ರ ವರೆಗೆ ಅನುಕ್ರಮವಾಗಿ 491.9, 489.3, 465.1, 486.8, 488.7, ಮತ್ತು 494.1 ಗ್ರಾಂ ತಲಾ ಪ್ರಮಾಣದ ಆಹಾರದ ಲಭ್ಯತೆ ಇತ್ತು. ಆಹಾರ ಧಾನ್ಯಗಳ ಲಭ್ಯತೆಯ ಪ್ರಮಾಣ ಮತ್ತು ಅದರ ಸೇವನೆಯ ಪ್ರಮಾಣವು ಒಂದೇ ಆಗಿರುವುದಿಲ್ಲ. ಆದರೂ ಇವೆರಡೂ ಸಮನಾಗಿ ಒಟ್ಟಿಗೆ ಸಾಗುತ್ತವೆ ಎಂದೇ ಊಹಿಸಿಕೊಳ್ಳಬಹುದು. ಅಸಮಾನತೆ ಹೆಚ್ಚಿದ ಕಾರಣದಿಂದಾಗಿ ಶ್ರೀಮಂತರ ತಲಾ ಬಳಕೆಯ ಪ್ರಮಾಣವು ಗಣನೀಯವಾಗಿ ಹೆಚ್ಚಿಗೆ ಇರುವುದರಿಂದ ದುಡಿಯುವ ಜನರ ತಲಾ ಬಳಕೆಯು ಇಳಿದಿರಲೇಬೇಕು. 2014ರಿಂದ ಆರಂಭವಾಗಿರುವ ಮೋದಿ ವರ್ಷಗಳಲ್ಲಿ, ದುಡಿಯುವ ಜನರ ಆಹಾರ ಧಾನ್ಯಗಳ ತಲಾವಾರು ಸೇವನೆಯ ಪ್ರಮಾಣವು ಇಳಿಕೆಯಾಗಿದೆ. ದುಡಿಯುವ ಜನರ ತಲಾ ಆದಾಯವು ಇಳಿಕೆಯಾಗದ ಹೊರತು ಇದು ವಿವರಣೆಗೆ ಸಿಗುವ ಅಂಶವಲ್ಲ. ನಿರುದ್ಯೋಗದ ಇತ್ತೀಚಿನ ಹೆಚ್ಚಳ ಮತ್ತು ಗ್ರಾಮೀಣ ಭಾರತದಲ್ಲಿ 2011-12 ಮತ್ತು 2017-18ರ ನಡುವೆ ನಿಜ ಬಳಕೆಯ ವೆಚ್ಚಗಳ ಕುಸಿತ ಮುಂತಾದ ಎಲ್ಲ ಪುರಾವೆಗಳೂ ಈ ಅಭಿಪ್ರಾಯಕ್ಕೆ ಅನುಗುಣವಾಗಿವೆ.

ದುಡಿಯುವ ಜನರ ಕೈಗೆ ಖರೀದಿಸುವ ಶಕ್ತಿಯನ್ನು ನೀಡುವ ಬದಲು, ಮೋದಿ ಸರ್ಕಾರವು ತನ್ನ ಆಹಾರ ಧಾನ್ಯಗಳ ದಾಸ್ತಾನಿನ ಪ್ರಮಾಣವನ್ನು ತಗ್ಗಿಸಿಕೊಳ್ಳಲು ಧಾನ್ಯಗಳನ್ನು ಎಥೆನಾಲ್‌ಗೆ ಪರಿವರ್ತಿಸಲು ಅನುಮತಿ ನೀಡುವ ಯೋಜನೆ ರೂಪಿಸಿರುವುದು ವಿಪರ್ಯಾಸವಾಗಿ ಕಂಡರೂ ಅದರಲ್ಲಿ ಆಶ್ಚರ್ಯವೇನಿಲ್ಲ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *