ಕೇರಳ ಕೊವಿಡ್-19ನ್ನು ಜಗ್ಗಿಸುತ್ತಿದೆ, ಹೇಗೆ?

ಇದೀಗ ದೇಶಾದ್ಯಂತ ಆಸಕ್ತಿ ಕೆರಳಿಸಿರುವ ಸಂಗತಿ. ಏಕೆಂದರೆ ದೇಶದಲ್ಲಿ ಇತರೆಡೆಗಳಲ್ಲಿ ಸೋಂಕಿನ ಪ್ರಮಾಣ ಇನ್ನೂ ಹಲವು ನೂರುಗಳಲ್ಲಿದ್ದರೆ, ಇದು ಮೊದಲು ಕಾಣಿಸಿದ ಕೇರಳದಲ್ಲಿ ಒಂದಂಕಿಗೆ ಇಳಿಯುತ್ತಿದೆ. ಅದೀಗ ಲಾಕ್‌ಡೌನ್‌ನಿಂದ ಹೊರಬರುವ ಸಿದ್ಧತೆ ನಡೆಯುತ್ತಿದೆ. ಇದು ಹೇಗೆ ಸಾಧ್ಯವಾಯಿತು? ಮಹಾಮಾರಿಯೊಂದಿಗೆ, ಆರ್ಥಿಕ ಬಿಕ್ಕಟ್ಟೂ ಜನಗಳನ್ನು ಕಂಗೆಡಿಸಿರುವಾಗ ದೇಶ ಕೇರಳದಿಂದ ಕಲಿಯಬೇಕಾದ ಪಾಟ ಏನು?

ಲಾಕ್‌ಡೌನ್ ಒಂದೇ ಸಾಲದು, ಸಿದ್ಧತೆ ಮತ್ತು ಆಡಳಿತ ವಿಕೇಂದ್ರೀಕರಣ  ಇವು ಕೇರಳದ ಯಶಸ್ಸಿನ ಮೂಲ ಸೂತ್ರಗಳು ಎನ್ನುತ್ತಾರೆ ಕೇರಳ ಎಡ ನೇತೃತ್ವದ ಸರಕಾರದ ಹಣಕಾಸು ಮಂತ್ರಿ ಡಾ.ಟಿ.ಎಂ.ಥಾಮಸ್ ಐಸಾಕ್.

ಕೇರಳ ಕೊವಿಡ್ ಮಹಾಮಾರಿಯನ್ನು ಜಗ್ಗಿಸುತ್ತಿದೆ. ಕಳೆದ ಒಂದು ವಾರದಿಂದ ಪ್ರತಿದಿನ ಸೋಕಿನಿಂದ ಗುಣಮುಖರಾದವರ ಸಂಖ್ಯೆ ಹೊಸದಾಗಿ ಸೋಂಕಿತರಾದವರ ಸಂಖ್ಯೆಗಿಂತ ಹೆಚ್ಚಿದೆ. ಸೋಂಕಿನಿಂದ ಗುಣಮುಖರಾದವರ ಅಖಿಲ ಭಾರತ ಸರಾಸರಿ ೧೧ಶೇ. ಇದ್ದರೆ,  ಕೇರಳದಲ್ಲಿ ಇದು ೫೦ಶೇ.ವನ್ನು ದಾಟಿದೆ. ಸೋಂಕು ತಗಲಿದವರಲ್ಲಿ ಮರಣ ಹೊಂದಿದವರ ಪ್ರಮಾಣ ಕೇರಳದಲ್ಲಿ ೦.೫ಶೇ. ಇದ್ದರೆ, ಅಖಿಲ ಭಾರತ ಮಟ್ಟದಲ್ಲಿ ಅದು ೩.೪ಶೇ. ಸೋಂಕು ಪ್ರಾಥಮಿಕ ಮೂಲದಿಂದ ಹರಡುವ ಪ್ರಮಾಣ ದೇಶದಲ್ಲಿ ೨.೬ ಇದ್ದರೆ, ಕೇರಳದಲ್ಲಿ ಇದು ಕೇವಲ ೦.೪.

ಆದರೆ ನಾವು ಇಷ್ಟಕ್ಕೇ ತೃಪ್ತಿಪಟ್ಟು ನಿರಾಳರಾಗುವುದಿಲ್ಲ. ಕೇರಳ ಮುಂದಿನ ಸವಾಲಿಗೆ ಸಿದ್ಧವಾಗುತ್ತಿದೆ. ಇದರ ಫಲಿತಾಂಶ ಕೊವಿಡ್ ವಿರುದ್ಧ ಸಮರದ ಫಲಿತಾಂಶವನ್ನು ನಿರ್ಧರಿಸುತ್ತದೆ. ಲಾಕ್‌ಡೌನ್ ತೆಗೆದಾಗ ವಿದೇಶಗಳು ಮತ್ತು ಇತರ ರಾಜ್ಯಗಳಿಂದ ಮರಳುವವರ ಆಗಮನ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ. ನೂರಾರು ಸಾವಿರಾರು ಮಂದಿಯನ್ನು ಕ್ವಾರಂಟೈನ್ ಮಾಡಬೆಕಾಗುತ್ತದೆ. ತಪಾಸಣೆ, ಸೋಂಕು ಕಂಡರೆ ಶುಶ್ರೂಷೆ ಮಾಡಿ ಎರಡನೇ ಪ್ರಸರಣ ನಡೆಯದಂತೆ ಖಾತ್ರಿಪಡಿಸಬೇಕಾಗುತ್ತದೆ.

ಈಗಾಗಲೇ ೨ಲಕ್ಷಕ್ಕೂ ಹೆಚ್ಚು ಮಂದಿಗೆ ವಸತಿ ಮತ್ತು ಇತರ ಸೌಕರ್ಯಗಳನ್ನು ಗುರುತಿಸಿಟ್ಟಿದ್ದೇವೆ. ದೊಡ್ಡ ಮಾಹಿತಿ ವಿಶ್ಲೇಷಣೆಯ(ಬಿಗ್ ಡಾಟಾ ಅನಲಿಟಿಕ್ಸ್) ತಂತ್ರಜ್ಞಾನ ಬಳಸಿ, ಒಂದು ಕಾರ್ಯತಂತ್ರವನ್ನು ರೂಪಿಸಿ, ಅಗತ್ಯವಿದ್ದರೆ, ವಿಲೋಮ ಕ್ವಾರಂಟೈನ್‌ನ ಸಾಧ್ಯತೆಗಳನ್ನೂ ಪರಿಶೀಲಿಸುತ್ತಿದ್ದೇವೆ. ಅದೃಷ್ಟವಶಾತ್ ನಮಗೆ ರಾಜ್ಯದ ಮೂರನೇ ಎರಡು ಜನಸಂಖ್ಯೆಯ ಡಬ್ಲ್ಯು.ಹೆಚ್.ಒ. ಮಾಹಿತಿ ಲಭ್ಯವಿದೆ. ಅದನ್ನು ಇತ್ತೀಚೆಗೆ ನಾವು ಸಂಗ್ರಹಿಸಿರುವ ಮಾಹಿತಿಗಳೊಂದಿಗೆ ಸಮೀಕರಿಸಿ ಜನಸಂಖ್ಯೆಯ ಯಾವ ವಿಭಾಗಕ್ಕೆ ಹೆಚ್ಚು ಅಪಾಯವಿದೆ ಎಂದು ಗುರುತಿಸಿ, ಪರಿಸ್ಥಿತಿಯನ್ನು ಮೊದಲೇ ಗ್ರಹಿಸಿ ಯೋಜನೆಗಳನ್ನು ತಯಾರಿಸಲು ಸಾಧ್ಯವಾಗುತ್ತದೆ. ಲಾಕ್‌ಡೌನ್‌ನಿಂದ ಹೊರಬರುವ ಕಾರ್ಯತಂತ್ರವನ್ನು ಜೀವ ನೋಪಾಯಗಳನ್ನು ರಕ್ಷಣೆ ಮತ್ತು ಅರ್ಥವ್ಯವಸ್ಥೆಗೆ ಉತ್ತೇಜನೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗುತ್ತದೆ.

ನಮ್ಮ ಆರೋಗ್ಯ ವ್ಯವಸ್ಥೆಯ ಶಕ್ತಿ:

ಸಿದ್ಧತೆ- ಇದು ಕೇರಳದ ಯಶಸ್ಸಿನ ಪ್ರಮುಖ ಪದ, ಮತ್ತು ಕಲಿಯಬೇಕಾದ ಪ್ರಮುಖ ಪಾಟ. ನಾವು ಕೊವಿಡ್‌ಗೆ ಸಿದ್ಧವಾಗಿರುವಲ್ಲಿ ಅತ್ಯಂತ ಮಹತ್ವದ ಏಕೈಕ ಅಂಶವೆಂದರೆ ನಮ್ಮ ಆರೋಗ್ಯ ವ್ಯವಸ್ಥೆಯ ಶಕ್ತಿ. ಜಗತ್ತಿನಾದ್ಯಂತ ನಾವು ಮಹಾಮಾರಿಯ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ವಲಯದಲ್ಲಿ ಗಂಭೀರ ಮಾರುಕಟ್ಟೆ ವೈಫಲ್ಯಗಳನ್ನು ಕಾಣುತ್ತಿದ್ದೇವೆ. ಸರಕಾರಗಳ ಧೋರಣೆಗಳನ್ನು ರೂಪಿಸುವವರು ಸಾರ್ವಜನಿಕ ಆರೋಗ್ಯ ಜಾಲದ ಮಹತ್ವವನ್ನು ಬಹಳ ಕಷ್ಟಪನಷ್ಟಗಳನ್ನು ಅನುಭವಿಸಿ ಕಲಿಯುತ್ತಿದ್ದಾರೆ.

ಕೇರಳದ ಆರೋಗ್ಯ ವ್ಯವಸ್ಥೆ ನಾವು ಪಡೆದಿರುವ ಬಹು ಹೆಮ್ಮೆಯ ಪರಂಪರೆ. ಪ್ರಸಕ್ತ ಎಡ ಸರಕಾರದ ಅಡಿಯಲ್ಲಿ ಅದು ಪುನರ್ಜನ್ಮ ಪಡೆದಿದೆ. ಈ ಸರಕಾರ ಕೇರಳ ಮೂಲರಚನೆ ಹೂಡಿಕೆ ನಿಧಿ ಮಂಡಳಿಯಿಂದ ಸುಮಾರು ೪೦೦೦ ಕೋಟಿ ರೂ.ಗಳ ಹೂಡಿಕೆಯಿಂದಾಗಿ ಮೂಲರಚನೆ ಮತ್ತು ಉಪಕರಣಗಳನ್ನು ಹೊಂದುವಲ್ಲಿ ದಾಪುಗಾಲಿಟ್ಟಿದೆ. ೫೭೭೫ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಆರ್ದ್ರಂ ಆರೋಗ್ಯ ಮಿಶನ್ ಆರಂಭಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ರೂಪಾಂತರಿಸುವುದಕ್ಕೆ ಗಮನ ಕೇಂದ್ರೀಕರಿಸಲಾಗಿದೆ. ಇದರಲ್ಲಿ ಕೇರಳದ ವಿಶಿಷ್ಟ ರುಚಿಯೂ ಇದೆ- ಅದೆಂದರೆ, ರೋಗನಿರೋಧಕ ಮತ್ತು ಶಮನಕಾರಕ ಆರೋಗ್ಯಪಾಲನೆಯಲ್ಲಿ ಸಾಮೂಹಿಕ ಭಾಗವಹಿಸುವಿಕೆ.

ಇತ್ತೀಚೆಗೆ ಸ್ಪೋಟಗೊಂಡ ನಿಪಾಹ್ ಕಾಯಿಲೆಯನ್ನು ಯಶಸ್ವಿಯಾಗಿ ತಡೆಗಟ್ಟಿದ್ದು, ಮತ್ತು  ಎರಡು ಪ್ರವಾಹೋತ್ತರ ಆರೋಗ್ಯ ಪರಿಸ್ಥಿತಿಗಳನ್ನು ನಿಭಾಯಿಸಿದ್ದು ಆರೋಗ್ಯ ಕಾರ್ಯಕರ್ತರಿಗೆ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ಎದುರಿಸುವಲ್ಲಿ ಒಂದು ತೆರನ ಸಮೂಹ ಸೋಂಕು ಪ್ರತಿರಕ್ಷಣೆಯನ್ನು ಒದಗಿಸಿದೆ. ವುಹಾನ್ ಮಹಾಮಾರಿಯ ಸುದ್ದಿ ಬಂದ ಕೂಡಲೇ ಕೇರಳ ಆರೋಗ್ಯ ವ್ಯವಸ್ಥೆ ತರಾತುರಿಯಿಂದ ಸಿದ್ಧತೆ ಆರಂಭಿಸಿತು – ಹತೋಟಿ ಕೋಷ್ಠಗಳನ್ನು ರಚಿಸಲಾಯಿತು, ಸಿದ್ಧತಾ ಕಸರತ್ತುಗಳನ್ನು ಸಂಘಟಿಸಲಾಯಿತು ಮತ್ತು ಮೊದಲ ಮಹಾಪೂರವನ್ನು ತಡೆಗಟ್ಟಲಾಯಿತು. ಕೊಲ್ಲಿ ಮತ್ತು ಯುರೋಪಿನಿಂದ ವಲಸಿಗರು ಮರಳುತ್ತಿದ್ದಂತೆ ಪರಿಸ್ಥಿತಿ ಕೈಮೀರಿ ಹೋಗುವಂತೆ ಕಂಡಿತು. ಆದರೆ ಈಗ ಈ ಸಮರವನ್ನು ಯಶಸ್ವಿಯಾಗಿ ಕೊನೆಗೊಳಿಸಲಾಗಿದೆ. ಪ್ರತಿದಿನ ಐಸೊಲೇಷನ್(ದೂರೀಕರಿಸಿಟ್ಟ) ಆಸ್ಪತ್ರೆಗಳಿಂದ ಗುಣಮುಖರಾದ ರೋಗಿಗಳು ತಮ್ಮ ಆರೋಗ್ಯಪಾಲಕರೊಂದಿಗೆ ಹೊರಬರುತ್ತಿರುವ ದೃಶ್ಯಗಳನ್ನು ನಾವು ನೋಡುತ್ತಿದ್ದೇವೆ. ಅತ್ಯಂತ ದೊಡ್ಡ ಕರತಾಡನ ೯೩ ಮತ್ತು ೮೮ ವರ್ಷ ವಯಸ್ಸಿನ ದಂಪತಿಗೆ ಮೀಸಲಾಯಿತು. ಗಂಭೀರ ಮತ್ತು ಕ್ಲಿಷ್ಟ ಆರೋಗ್ಯ ಪರಿಸ್ಥಿತಿಯಲ್ಲಿದ್ದ ಇವರನ್ನು ಅಕ್ಷರಶಃ ಸಾವಿನ ದವಡೆಯಿಂದ ಹೊರಗೆಳೆದು ತರಲಾಯಿತು.

ಆರೋಗ್ಯ ಸಿಬ್ಬಂದಿಯ ಹುರುಪು ಅತ್ಯುನ್ನತ ಮಟ್ಟದಲ್ಲಿದೆ. ವಿಶೇಷ ತರಬೇತಿ, ಸುರಕ್ಷಾ ಉಡುಗೆಗಳು, ವೈಜ್ಞಾನಿಕ ಡ್ಯೂಟಿ ಆವರ್ತಗಳು, ಮತ್ತು ಬುಮುಖ್ಯವಾಗಿ, ಸಮಾಜದಿಂದ ತಾದಾತ್ಮ್ಯ ಹಾಗೂ ಸೌಹಾರ್ದತೆ, ಇವೆಲ್ಲವೂ ಅವರ ಹುರುಪನ್ನು ಶಿಖರಕ್ಕೇರಿಸಿವೆ. ಆರೋಗ್ಯ ಮಂತ್ರಿ ಕೆ.ಕೆ. ಶೈಲಜಾ ಟೀಚರ್, ತಮ್ಮನ್ನು ಕೇವಲ ಪರಾಮರ್ಶೆ ಸಮಿತಿಗಳಿಗಷ್ಟೇ ಸೀಮಿತ ಗೊಳಿಸಿಕೊಂಡಿಲ್ಲ, ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರನ್ನು ವೈಯಕ್ತಿವಾಗಿ ತಲುಪುತ್ತಿದ್ದಾರೆ.

ಪ್ರತಿಯೊಂದು ಕೊವಿಡ್ ಸೋಂಕಿನ ಮಾರ್ಗ-ನಕಾಶೆ(ರೂಟ್‌ಮ್ಯಾಪ್) ಸಿದ್ಧಪಡಿಸಿ ಅದಕ್ಕೆ ಪ್ರಚಾರ ನೀಡಲಾಗಿದೆ, ಅವರ ಸಂಪರ್ಕಕ್ಕೆ ಬಂದಿರಬಹುದಾದವರನ್ನು ಎಚ್ಚರಿಸಲಾಗಿದೆ. ತೀವ್ರ ತಪಾಸಣೆ, ಗುರುತಿಸುವುದು, ಪ್ರತ್ಯೇಕಗೊಳಿಸಿಡುವುದು ಮತ್ತು ಶುಶ್ರೂಷೆ ಈ ಕ್ರಿಯಾ-ಆವರ್ತಗಳ ಪಾಲನೆ ಸಾಮಾನ್ಯ ಸಂಗತಿಯಾಗಿ ಬಿಟ್ಟಿದೆ. ಕೇರಳದ ತಪಾಸಣಾ ಪ್ರಮಾಣ ದೇಶದಲ್ಲೇ ಅತಿ ಹೆಚ್ಚು. ಸಾಮಾಜಿಕ ಅಂತರ ಎಂಬುದನ್ನು ಪ್ರೋತ್ಸಾಹಿಸುವಲ್ಲಿ ಬ್ರೇಕ್ ದಿ ಚೈನ್ ಪ್ರಚಾರಾಂದೋಲನ ಯಶಸ್ವಿಯಾಗಿದೆ. ಇದು, ನಿಜವಾಗಿಯೂ, ಒಂದು ಅತ್ಯಂತ ಮಹತ್ವದ ಪಾಟ. ಕೇವಲ ಲಾಕ್‌ಡೌನಿನಿಂದಲೇ ಕೊವಿಡ್ ಹರಡಿಕೆಯನ್ನು ತಡೆಯಲು ಸಾಧ್ಯವಿಲ್ಲ. ಅದು ಕುಟುಂಬಗಳೊಳಗೆ, ಶಯನಾಲಯ(ಡಾರ್ಮಿಟರಿ)ಗಳೊಳಗೆ ದ್ವಿಗುಣ ಗೊಳ್ಳುತ್ತದೆ, ರಾಷ್ಟ್ರೀಯ ಮಟ್ಟದಲ್ಲಿ ಇದುವರೆಗೆ ಸೋಂಕು ತಪಾಸಣೆ ಅತ್ಯಂತ ಅಸಮರ್ಪಕವಾಗಿದೆ.

ಪ್ರಭುತ್ವದ ಕರ್ತವ್ಯ.:

ಲಾಕ್‌ಡೌನ್ ಜೀವನೋಪಾಯಗಳನ್ನು ಧ್ವಂಸ ಮಾಡುತ್ತದೆ. ಆದ್ದರಿಂದ ಆದಾಯ ವರ್ಗಾವಣೆ ಮತ್ತು ಉಚಿತ ರೇಷನ್‌ಗಳ ಮೂಲಕ ಬದುಕುಳಿಯುವುದನ್ನು ಖಾತ್ರಿಪಡಿಸುವುದು ಪ್ರಭುತ್ವದ ಕರ್ತವ್ಯ. ಜನಧನ್ ಖಾತೆಗಳಿಗೆ ೫೦೦ರೂ. ವರ್ಗಾವಣೆ, ಮತ್ತು ಹೆಚ್ಚುವರಿ ೫ ಕೆಜಿ ಧಾನ್ಯ ರೇಷನ್ ಏನೇನೂ ಸಾಲದು. ಕೇಂದ್ರದ ಪ್ಯಾಕೇಜಿನ ಒಂದು ಪ್ರಮುಖ ಭಾಗವಾದ ಕಟ್ಟಡ ಕಾರ್ಮಿಕರಿಗೆ ಪಾವತಿ, ವಾಸ್ತವವಾಗಿ ರಾಜ್ಯ ಮಟ್ಟದ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಗಳಿಂದ ಪಡೆದ ಹಣ.

ತದ್ವಿರುದ್ಧವಾಗಿ, ಕೇರಳದಲ್ಲಿ ೫೫ ಲಕ್ಷ ಹಿರಿಯ ನಾಗರಿಕರು ಮತ್ತು ವಂಚಿತ ವಿಭಾಗಗಳವರು ರೂ.೮೫೦೦ ಕಲ್ಯಾಣ ಪಾವತಿಯಾಗಿ ಪಡೆದಿದ್ದಾರೆ. ಅಷ್ಟೇ ಸಂಖ್ಯೆಯ ಕಾರ್ಮಿಕರು ಕಲ್ಯಾಣ ನಿಧಿಗಳಿಂದ ತಲಾ ರೂ.೧೦೦೦-೩೦೦೦ ಪಡೆದಿದ್ದಾರೆ. ಪ್ರತಿಯೊಂದು ಕಟುಂಬಕ್ಕೆ ಒಂದು ಆಹಾರ ಪೊಟ್ಟಣವನ್ನು ಒದಗಿಸಲಾಗಿದೆ. ರೂ. ೨೦೦೦ ಬಡ್ಡಿರಹಿತ ಉಪಭೋಗ ಸಾಲಗಳನ್ನು ವಿತರಿಸಲಾಗಿದೆ. ಅಲ್ಲದೆ, ಸ್ಥಳೀಯ ಆಡಳಿತಗಳು ಸುಮಾರು ೪ ಲಕ್ಷ ಊಟಗಳನ್ನು ಪ್ರತಿದಿನ ಸಾಮುದಾಯಿಕ ಅಡುಗೆ ಕೇಂದ್ರಗಳಿಂದ ತೀರಾ ಅಗತ್ಯವಿರುವವರಿಗೆ ಹಂಚಿವೆ. ವಲಸೆ ಕಾರ್ಮಿಕರ ಶಿಬಿರಗಳ ಮೇಲ್ವಿಚಾರಣೆ, ಹೊಸ ಶಿಬಿರಗಳನ್ನು ರಚಿಸುವುದು, ಶಿಬಿರದಲ್ಲಿ ಇರುವವರಿಗೆ ಔಷಧಿಗಳು ಮತ್ತು ಆಹಾರವನ್ನು ಖಾತ್ರಿಪಡಿಸುವುದು ಕೂಡ ಈ ಸ್ಥಳೀಯ ಸರಕಾರಗಳ ಕರ್ತವ್ಯವಾಗಿದೆ.

ರಾಜ್ಯ ಸರಕಾರವೊಂದರಿಂದಲೇ ಅಲ್ಲ:

ಇವೆಲ್ಲ ಹೇಗೆ ಸಾಧ್ಯವಾಯಿತು? ದಯವಿಟ್ಟು ಗಮನಿಸಿ, ಇದು ಆದದ್ದು ಕೇವಲ ರಾಜ್ಯ ಸರಕಾರವೊಂದರಿಂದಲೇ ಅಲ್ಲ. ಕೇರಳವನ್ನು ವಿಶಿಷ್ಟಗೊಳಿಸಿರುವುದು ರಾಜ್ಯ ಸರಕಾರದ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಸ್ಥಳೀಯ ಸರಕಾರಗಳು, ಸಹಕಾರಿ ಸಂಸ್ಥೆಗಳು, ಮಹಿಳಾ ನೆರೆಹೊರೆ ಗುಂಪುಗಳು (ಕುಡುಂಬಶ್ರೀ) ಮತ್ತು ನಾಗರಿಕ ಸಮಾಜದ ಸಂಘಟನೆಗಳೊಂದಿಗೆ ಸಮಗ್ರೀಕರಿಸಿದರಿಂದ ಉಂಟಾಗಿರುವ ಸಮಷ್ಟಿ ಶಕ್ತಿಯೇ. ಈ ಆಗಸ್ಟ್ ಕೇರಳದಲ್ಲಿ ಸ್ಥಳೀಯ ಸರಕಾರಗಳನ್ನು ರೂಪಾಂತರಗೊಳಿಸಿದ ಜನತಾ ಯೋಜನೆಯ ಪ್ರಚಾರಾಂದೋಲನದ ೨೫ನೇ ವರ್ಷ ಆರಂಭವಾಗುತ್ತಿದೆ. ಪ್ರವಾಹಗಳು ಮತ್ತು ಮಹಾಮಾರಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದ ಸಾಮರ್ಥ್ಯಕ್ಕೆ ಸಾಕ್ಷಿಗಳಾಗಿವೆ.

ಇದು ತಾಂತ್ರಿಕ ಸಮಿತಿಗಳು ಮತ್ತು ರಾಜ್ಯಮಟ್ಟದಲ್ಲಿ ಕೆಲಸ ಮಾಡುವ ಗುಂಪುಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂಯೋಜಿಸುವುದರೊಂದಿಗೆ ನಡೆಸಿರುವ ಒಂದು ಬಹುಸ್ತರೀಯ ಯೋಜನಾ ಪ್ರಕ್ರಿಯೆಯ ಉದಾಹರಣೆ. ಮುಖ್ಯಮಂತ್ರಿಗಳು ಕೊವಿಡ್ ಸಮರದ ಮಾಹಿತಿಗಳನ್ನು ನೀಡುವ ಪ್ರತಿದಿನ ಸಾಯಂಕಾಲದ  ಪತ್ರಿಕಾಗೋಷ್ಠಿ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದು, ಇಂದು ಅತ್ಯಂತ ಹೆಚ್ಚು ಟಿವಿ ರೇಟಿಂಗ್‌ಗಳನ್ನು ಪಡೆದಿರುವ ಪ್ರಸಾರವಾಗಿದೆ. ಪ್ರತಿಯೊಬ್ಬರಿಗೂ ಸ್ಪಷ್ತವಾಗಿ ಸಂದೇಶ ಪ್ರಸಾರವಾಗುವುದು ಬಹಳ ಮಹತ್ವದ್ದಾಗಿದೆ. ಈ ದೈನಂದಿನ ಮಾಹಿತಿ ನೀಡಿಕೆಗಳಿಂದಾಗಿ ಈ ಬಿಕ್ಕಟ್ಟಿನಲ್ಲಿ ಗೊಂದಲ ಉಂಟಾಗದಂತೆ ತಪ್ಪಿಸಲು ನಮಗೆ ಸಾಧ್ಯವಾಗಿದೆ.

ಸಾಕಷ್ಟು ಹಣಕಾಸು ಸಂಪನ್ಮೂಲಗಳ ಅಭಾವ ರಾಜ್ಯ ಸರಕಾರ ಎದುರಿಸುತ್ತಿರುವ ಅತ್ಯಂತ ದೊಡ್ಡ ಅಡ್ಡಿ. ರಾಜ್ಯದ ಸ್ವಂತ ಆದಾಯಗಳು ಒಣಗಿ ಹೋಗಿವೆ. ಕೇಂದ್ರ ಸರಕಾರದಿಂದ ಜಿಎಸ್‌ಟಿ ಪರಿಹಾರಗಳ ಪಾವತಿ ನಾಲ್ಕು ತಿಂಗಳುಗಳ ಬಾಕಿ ಬರಬೇಕಾಗಿದೆ. ಎಸ್‌ಎಲ್‌ಆರ್ ಬಾಂಡುಗಳಿಗೆ ಸಾಲವನ್ನು ನಿಲ್ಲಿಸಲಾಗಿದೆ. ಲಾಕ್‌ಡೌನ್‌ನಿಂದ ಹೊರಬಂದ ನಂತರ ಆರ್ಥಿಕ ಉತ್ತೆಜನಕ್ಕಿರಲಿ, ಪರಿಹಾರಕ್ಕೂ ಸಾಕಷ್ಟು ಸಂಪನ್ಮೂಲಗಳಿಲ್ಲ. ಕೇಂದ್ರ ಸರಕಾರ ತನ್ನ ಹೆಜ್ಜೆ ಮುಂದಿಟ್ಟು ರಾಜ್ಯಗಳಿಗೆ ಸಾಕಷ್ಟು ಹಣಕಾಸು ಅವಕಾಶಗಳು ಸಿಗುವಂತೆ ಮಾಡಬೇಕಾಗಿದೆ. ದುರದೃಷ್ಟವಶಾತ್, ದೇಶ ಒಂದು ಆರ್ಥಿಕ ಕುಸಿತವನ್ನು ಎದುರಿಸುತ್ತಿರುವಾಗ ರಾಜ್ಯ ಸರಕಾರಗಳು ತಮ್ಮ ವೆಚ್ಚಗಳನ್ನು ಕಡಿತ ಮಾಡುವುದೇ ಒಳ್ಳೆಯದು ಎಂಬುದು ಕೇಂದ್ರ ಸರಕಾರದ ಆಶಯವಿದ್ದಂತಿದೆ. ಇದುವಿಚಿತ್ರ ಅರ್ಥಶಾಸ್ತ್ರ.

Donate Janashakthi Media

Leave a Reply

Your email address will not be published. Required fields are marked *