ಕಾರ್ಮಿಕ ಸಂಘಟನೆಗಳೊಡನೆ ಸಂಪರ್ಕ ಸಂಯೋಜನೆಯನ್ನು ಏರ್ಪಡಿಸಲು ಸರಕಾರಕ್ಕೆ ಮನವಿ

“ಅತಿ ದೊಡ್ಡ ಮಾನವ ದುರಂತವನ್ನು ತಪ್ಪಿಸಲು ಸರಕಾರ ತಕ್ಷಣವೇ ಕಾರ್ಯರತವಾಗಬೇಕು”

ಕೇಂದ್ರ ಕಾರ್ಮಿಕ ಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು: ಕೇಂದ್ರ ಕಾರ್ಮಿಕ ಸಂಘಟನೆಗಳ ಆಗ್ರಹ

ಕೇಂದ್ರ ಸರಕಾರ ದೇಶವ್ಯಾಪಿ ಲಾಕ್‍ಡೌನ್‍ ಹಾಕಿದಾಗ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಬಾರದು, ಸಂಬಳ ಕಡಿತ ಮಾಡಬಾರದು ಎಂದೆಲ್ಲ ‘ಸಲಹಾ ಆದೇಶ’ (ಅಡ್ ವೈಸರಿ) ಗಳನ್ನು ನೀಡಿರುವದಾಗಿ, ವಿನಂತಿ ಮಾಡಿರುವುದಾಗಿ ಹೇಳಲಾಗಿತ್ತು. ಆದರೆ ಅವುಗಳ ಪಾಲನೆಯಾಗುತ್ತಿಲ್ಲ, ಇದರಿಂಧ ಕಾರ್ಮಿಕರು ತೀವ್ರವಾದ ಬವಣೆಗಳಿಗೆ ಒಳಗಾಗಿದ್ದಾರೆ  ಎಂದು ದೇಶದೆಲ್ಲೆಡೆಗಳಿಂದ ದೂರುಗಳು ಬರುತ್ತಿವೆ,  ಈ ಕುರಿತಂತೆ ಕಾರ್ಮಿಕ ಸಂಘಟನೆಗಳ ಪ್ರಯತ್ನಗಳಿಗೆ ವಿವಿಧ ಮಟ್ಟಗಳಲ್ಲಿ ಆಡಳಿತಗಳು, ಇಲಾಖೆಗಳು, ಉದ್ದಿಮೆಗಳು ಸ್ಪಂದಿಸುತ್ತಿಲ್ಲ, ಆದ್ದರಿಂದ ಕೇಂದ್ರ ಕಾರ್ಮಿಕ ಮಂತ್ರಿಗಳು ಈ ವಿಷಯದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಕತ್ತು ಕೇಂದ್ರೀಐ ಕಾರ್ಮಿಕ ಸಂಘಟನೆಗಳು ಎಪ್ರಿಲ್‍ 1ರಂದು ಒಂದು ಜಂಟಿ ಪತ್ರ ಬರೆದು ಆಗ್ರಹಿಸಿವೆ.

ಲಾಕ್‍ಡೌನ್‍ ಜಾರಿಯಾದ ನಂತರ ಮಾರ್ಚ್ 26ರಂದು ಈ ಕೇಂದ್ರ ಕಾರ್ಮಿಕ ಸಂಘನೆಗಳು ಪ್ರಧಾನ ಮಂತ್ರಿಗಳಿಗ ಬರೆದ ಪತ್ರದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದವು. ಸರಕಾರದ ಅಪೀಲುಗಳು ಮತ್ತು ಅಡ್ ವೈಸರಿಗಳಿಂದ ಬುಡಮಟ್ಟದಲ್ಲಿ ಏನೂ ಆಗುವುದಿಲ್ಲ, ಸರಕಾರ ಕೂಡಲೇ ಬಲವಾದ ಕಾನೂನು ಪ್ರಕಾರ ಜಾರಿ ಮಾಡಲು ಸಾಧ್ಯವಿರುವ ಕ್ರಮಗಳನ್ನು ಪ್ರಕಟಿಸಬೇಕು. ಕೊರೊನ ಭೀತಿಯ ಹಿನ್ನೆಲೆಯಲ್ಲಿ ಮಾಲಕರು ನಡೆಸುತ್ತಿರುವ ರಿಟ್ರೆಂಚ್‍ಮೆಂಟ್‍ಗಳು, ಸಂಬಳ ಕಡಿತಗಳು, ಸಂಬಳರಹಿತ ಬಲವಂತದ ರಜಾಗಳು ಮುಂತಾದ ಕ್ರಮಗಳನ್ನು, ನಿರ್ದಿಷ್ಟವಾಗಿ ಕ್ಯಾಶುವಲ್‍, ಕಾಂಟ್ರಾಕ್ಟ್ , ತಾತ್ಕಾಲಿಕ  ಕಾರ್ಮಿಕರ ವಿರುದ್ಧ ನಡೆಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆ ಪತ್ರದಲ್ಲಿ ಕೇಳಿಕೊಳ್ಳಲಾಗಿತ್ತು. ಆದರೆ ಹಾಗೇನೂ ಮಾಢಿಲ್ಲ. ಆದರೆ ಲಾಕ್‍ಡೌನ್‍ನ  ಓಂದು ವಾರದಲ್ಲಿ ಕಾರ್ಮಿಕ ಸಂಘಟನೆಗಳು  ಎತ್ತಿದ್ದ ಅನುಮಾನಗಳು ನಿಜವಾಗಿವೆ. ಸರಕಾರದ, ಕಾರ್ಮಿಕ ಇಲಾಖೆಯ ಮತ್ತು ಗೃಹ ಇಲಾಖೆಯ ಮನವಿಗಳು, ಅಡ್ವೈಸರಿಗಳು ಬುಡಮಟ್ಟದಲ್ಲಿ ಏನೂ ಕೆಲಸ ಮಾಡುತ್ತಿಲ್ಲ,  ಈ ಬಗ್ಗೆ ದೂರುಗಳಿಗೆ ಸಂಭಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಸ್ಪಂದಿಸುತ್ತಲೂ ಇಲ್ಲ ಎಂದು ಕೇಂದ್ರ ಕಾರ್ಮಿಕ ಸಂಘಟನೆಳು ಕಾರ್ಮಿಕ ಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಕೆಲಸ ಕಳಕೊಂಡ,  ಹಣವಿಲ್ಲದ, ಸೂರೂ ಇಲ್ಲದೆ, ಆಹಾರವಿಲ್ಲದೆ ಹತಾಶರಾಗಿ ತಂತಮ್ಮ ಊರುಗಳಿಗೆ ಮರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆಯಲ್ಲೇ ಸಾಗಿರುವ, ಅದರಿಂದಾಗಿ ಪೋಲೀಸರ ಕಿರುಕುಳ, ರಾಜ್ಯಸರಕಾರಗಳ ಆದೇಶಗಳಿಂದಾಗಿ ಮಧ್ಯದಲ್ಲೇ ದಾರಿಗಾಣದೆ  ನಿಂತಿರುವ  ಕಾರ್ಮಿಕರ ಬವಣೆಗಳನ್ನು ಕಾರ್ಮಿಕ ಮಂತ್ರಿಗಳ ಗಮನಕ್ಕೆ ತಂದಿರುವ ಜಂಟಿ ಪತ್ರ ಕೂಡಲೇ ಸರಕಾರಗಳು ಅವರ ನೆರವಿಗೆ ಧಾವಿಸಬೇಕು, ಈ ಕುರಿತ ಗೃಹ ಮಂತ್ರಾಲಯದ ಸಲಹಾ ಆದೇಶಗಳನ್ನು ಜಾರಿಗೊಳಿಸುವಂತಾಗಬೇಕು ಎಂದು ಆಗ್ರಹಿಸಿದೆ.

ಎಲ್ಲ ಅಸಂಘಟಿತ ದುಡಿಮೆಗಾರರಿಗೆ, ದಿನಗೂಲಿ, ಕ್ಯಾಶುವಲ್, ಕಾಂಟ್ರಾಕ್ಟ್, ಹೊರಗುತ್ತಿಗೆ, ಪೀಸ್ ರೇಟ್‍, ಗೃಹಾಧಾರಿತ ಕಾರ್ಮಿಕರು, ಕೃಷಿ ಕೂಲಿಕಾರರು, ಮನರೇಗ ಕೂಲಿಕಾರರು ಹಾಗೂ ಅಂಗನವಾಡಿ, ಆಶಾ ಮುಂತಾದ ಸ್ಕೀಮ್‍ ಕಾರ್ಮಿಕರು, ಟ್ರಕ್‍ ಡ್ರೈವರ್ ಗಳು, ಹೆಲ್ಪರುಗಳು, ಕೂಲಿಗಳು, ಹಮಾಲಿಗಳು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ರಿಕ್ಷಾ ನಡೆಸುವವರು, ಮನೆ ಕೆಲಸಗಾರರು, ಬೀದಿ ವ್ಯಾಪಾರಿಗಳು, ಹೀಗೆ ಎಲ್ಲರಿಗೂ , ಅವರು ರಿಜಿಸ್ಟರ್‍ ಆಗಿರಲಿ, ಅಥವ ಆಗಿರದಿರಲಿ, ನಗದು ವರ್ಗಾವಣೆ ಮತ್ತು ರೇಶನ್‍ ಪರಿಹಾರಗಳನ್ನು ಖಾತ್ರಿಪಡಿಸಬೇಕು; ಈ ಎಲ್ಲ ಜನಗಳಿಗೆ ಆಹಾರ ಒದಗಿಸಲು ರೇಶನ್‍ ವ್ಯವಸ್ಥೇಯನ್ನು ಮತ್ತು ಆಹಾರಧಾನ್ಯಗಳ ಹೆಚ್ಚುವರಿ ದಾಸ್ತಾನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು; ಹಳ್ಳಿಗಳು ಮತ್ತು ಪಟ್ಟಣಗಳ ನಡುವೆ ಕೃಷಿ ಬೆಳೆಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು  ನಿರ್ದಿಷ್ಟ ಸಲಹೆಗಳಣ್ನು ನೀಡಿವೆ.

ಎಲ್ಲ ಅಸಂಘಟಿತ/ಅನೌಪಚಾರಿಕ ವಲಯಗಳ ದುಡಿಮೆಗಾರರಿಗೆ ಒಂದು ಸಮಗ್ರ ಆದಾಯ ಬೆಂಭಲ ಸ್ಕೀಮ ‍ಈಗಿನ ತುರ್ತು ಅಗತ್ಯವಾಗಿದೆ. ಒಂದು ಅತಿ ದೊಡ್ಡ ಮಾನವ ದುರಂತವನ್ನು ತಪ್ಪಿಸಲು ಸರಕಾರ ತಕ್ಷಣವೇ ಕಾರ್ಯರತವಾಗಬೇಕು ಎಂದು ಈ ಪತ್ರದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.

ಈ ಸಮಸ್ಯೆಯ ಪ್ರಮಾಣ ಮತ್ತು ವಿಸ್ತಾರ ಹೆಚ್ಚುತ್ತಲೇ ಇರುವುದರಿಂದ, ಎಲ್ಲ ಮಟ್ಟಗಳಲ್ಲಿ ಕಾರ್ಮಿಕ ಸಂಘಗಳು ಇದನ್ನು ನಿರ್ವಹಿಸುವಲ್ಲಿ ತಮ್ಮಮಿತಿಗಳ ಒಳಗೇ ನಿರತವಾಗಿವೆ. ಆದ್ದರಿಂದ ಎಲ್ಲ ರಾಜ್ಯಗಳಲ್ಲಿ ಎಲ್ಲ ಮಟ್ಟಗಳಲ್ಲಿ ಸಂಬಂಧಪಟ್ಟ ಇಲಾಖೆಗಳು  ಕಾರ್ಮಿಕ ಸಂಘಟನೆಗಳೊಂದಿಗ ಸಂಪರ್ಕ ಮತ್ತು ಸಂಯೋಜನೆಯಿಂದ ಕೆಲಸ ಮಾಡುವಂತೆ ತಿಳಿಸಬೇಕು ಎಂದೂ ಈ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ಕಾರ್ಮಿಕ ಮಂತ್ರಿಗಳನ್ನು ವಿನಂತಿಸಿಕೊಂಡಿವೆ.

ಇಂಟಕ್, ಎಐಟಿಯುಸಿ, ಹೆಚ್‍ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‍ಇಡಬ್ಲ್ಯುಎ, ಎಐಸಿಸಿಟಿಯು, ಎಲ್‍ಪಿಎಫ್‍ ಮತ್ತು ಯುಟಿಯುಸಿ ಈ ಜಂಟಿ ಪತ್ರಕ್ಕೆ ಸಹಿ ಹಾಕಿವೆ.

Donate Janashakthi Media

Leave a Reply

Your email address will not be published. Required fields are marked *