ಕಲಾವಿದರಿಗೆ  ಸರಕಾರಿ ವಸತಿ ಬಿಡಲು ನೋಟೀಸು : ಸಹಮತ್‍ ಪ್ರತಿಭಟನೆ

ಪಂಡಿತ್‍ ಬಿರ್ಜೂ ಮಹಾರಾಜ್‍ ರಂತವರು ಕೂಡ ಈ ಇಳಿವಯಸ್ಸಿನಲ್ಲಿ ಎಲ್ಲಿಗೆಂದು ಹೋಗಲಿ, ಎಂದು ಸಾರ್ವಜನಿಕವಾಗಿಯೇ ಅಳಲು ತೋಡಿಕೊಳ್ಳಬೇಕಾಗಿ ಬಂದಿರುವುದು ನಮ್ಮ ದೇಶದ ಮೇಲೊಂದು ಕಳಂಕ

ದಿಲ್ಲಿಯಲ್ಲಿ ಕೇಂದ್ರ ಸರಕಾರ 27 ಹಿರಿಯ ಕಲಾವಿದರಿಗೆ ಕೊಟ್ಟಿದ ಸರಕಾರೀ ನಿವಾಸಗಳನ್ನು ಡಿಸೆಂಬರ್‍ 3ರ ರೊಳಗೆ ಖಾಲಿ ಮಾಡಲು ನೋಟೀಸು ಕೊಟ್ಟಿದೆ, ಇವರೆಲ್ಲರೂ ತಂತಮ್ಮ ಕಲಾಪ್ರಕಾರಗಳಲ್ಲಿ  ಮಾಡಿದ ಅಪಾರ ಸಾಧನೆಗಳಿಗೆ  ಪುರಸ್ಕಾರವಾಗಿ ಈ ಸರಕಾರೀ ನಿವಾಸ ಅಥವ ಫ್ಲಾಟುಗಳನ್ನು ಲೀಸ್‍ ಮೇಲೆ ನೀಡಲಾಗಿತ್ತು. ಈ ಲೀಸನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತಿದ್ದು, ಅವರು ಸರಕಾರ ವಿಧಿಸುತ್ತಿದ್ದ ಬಾಡಿಗೆಗಳನ್ನೂ ತೆರುತ್ತಿದ್ದರು. ಆದರೆ ಈಗ, ಅದೂ ಕೊವಿಡ್‍ ಸಂಕಟ ಕಾಲದಲ್ಲಿ ಈ ಲೀಸುಗಳನ್ನು ವಿಸ್ತರಿಸದೆ ಖಾಲಿ ಮಾಡಬೇಕೆಂದು ನೋಟೀಸು ಕೊಡುವ ಮಟ್ಟಕ್ಕೆ ಹೋಗಿರುವುದು ಅವರಲ್ಲಿ ಅನೇಕರಿಗೆ ಆಶ್ಚರ್ಯ ಮತ್ತು ನೋವನ್ನು ಉಂಟುಮಾಡಿದೆ ಎಂದು ವರದಿಯಾಗಿದೆ.

ನೋಟೀಸ್‍ ಪಡೆದಿರುವ ಹಿರಿಯ ಕಲಾವಿದರಲ್ಲಿ ಖ್ಯಾತ ಒಡಿಸ್ಸಿ ನೃತ್ಯಗುರು 90ವರ್ಷ ದಾಟಿರುವ ಮಾಯಾಧರ್‍ ರಾವುತ್, ಕಥಕ್‍ ನೃತ್ಯಗುರು, ಪದ್ಮ ವಿಭೂಷಣ ಪ್ರಶಸ್ತಿ ಪಡೆದಿರುವ, 80 ವರ್ಷ ದಾಟಿರುವ  ಬಿರ್ಜೂ ಮಹಾರಾಜ್, ವರ್ಣಚಿತ್ರ ಕಲಾವಿದ ಜತಿನ್‍ ದಾಸ್‍ ಮುಂತಾದವರಿದ್ದಾರೆ.

ಸಹಮತ್ (ಸಫ್ದರ್‍ ಹಾಶ್ಮಿ ಸ್ಮಾರಕ ಟ್ರಸ್ಟ್) ಕೇಂದ್ರ ಸರಕಾರದ ಈ ಕ್ರಮಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದೆ. ಹಿಂದಿನ ಸರಕಾರಗಳ ಅಡಿಯಲ್ಲಿ ನಿರ್ದಿಷ್ಟ ಮಾನದಂಡಗಳ ಪ್ರಕಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕಲಾವಿದರಿಗೆ ದಿಲ್ಲಿಯಲ್ಲಿ ತಮ್ಮ ಸಾಧನೆಗಳನ್ನು ಮುಂದುವರೆಸಲು ಅನುಕೂಲವಾಗುವಂತೆ ಸರಕಾರೀ ನಿವಾಸಗಳನ್ನು ಒದಗಿಸುವ ಒಂದು ದೀರ್ಘ ಸಮಯದ ಧೋರಣೆ ಇತ್ತು.

ಈಗ ನೋಟೀಸು ಪಡೆದಿರುವ ಕಲಾವಿದರಲ್ಲಿ ಹಲವರು ಬಹಳ ವಯಸ್ಸಾದವರು, ದಿಲ್ಲಿಯಲ್ಲಿ ಅವರಿಗೆ ಬೇರೆ ಮನೆಯಿಲ್ಲ. ಪ್ರಖ್ಯಾತರೂ ಸೇರಿದಂತೆ ಬಹಳಷ್ಟು ಕಲಾವಿದರ, ಆರ್ಥಿಕ ಪರಿಸ್ಥಿತಿಗಳೂ ಚೆನ್ನಾಗಿಲ್ಲ ಎಂಬುದು ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ.  ಅದರಲ್ಲೂ ನೃತ್ಯ ಪಟುಗಳಿಗೆ ಜೀವನ ಸಾಗಿಸಬೇಕಾದರೆ ಶಿಷ್ಯರಿಗೆ ಕಲಿಸುವುದೊಂದೇ ದಾರಿ.

ಪಂಡಿತ್‍ ಬಿರ್ಜೂ ಮಹಾರಾಜ್‍ ರಂತವರು ಕೂಡ ಈ ಇಳಿವಯಸ್ಸಿನಲ್ಲಿ ಎಲ್ಲಿಗೆಂದು ಹೋಗಲಿ, ಇನ್ನು ಹೆಚ್ಚೇನೂ ಸಮಯ ಉಳಿದಿಲ್ಲ ನನಗೆ ಎಂದು ಸಾರ್ವಜನಿಕವಾಗಿಯೇ ಅಳಲು ತೋಡಿಕೊಳ್ಳಬೇಕಾಗಿ ಬಂದಿರುವುದು ನಮ್ಮ ದೇಶದ ಮೇಲೊಂದು ಕಳಂಕ ಎಂದು ಸಹಮತ್‍ ಬೇಸರ ವ್ಯಕ್ತಪಡಿಸಿದೆ.

ಎಲ್ಲ ನೃತ್ಯಪಟುಗಳು, ಸಂಗೀತಗಾರರು, ವರ್ಣಚಿತ್ರ ಕಲಾವಿದರು ಮತ್ತು ನೃತ್ಯ ಚರಿತ್ರೆಕಾರರು ನಮ್ಮ ಸಾಂಸ್ಕೃತಿಕ ಜೀವನದ ಪ್ರಮುಖ ವ್ಯಕ್ತಿಗಳು, ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ನಮ್ಮ ಸಂಸ್ಕೃತಿಯ ರಾಯಭಾರಿಗಳು ಎಂಬ ಪ್ರಶಂಸೆ ಪಡೆದಿರುವವರು. ಅವರಿಗೆ ದಿಲ್ಲಿಯ ಮಾರುಕಟ್ಟೆ ದರಗಳಲ್ಲಿ ಬಾಡಿಗೆ ತೆರುವ ಶಕ್ತಿಯಿಲ್ಲ ಎಂದಿರುವ ಸಹಮತ್ “ನಾವು, ಸಹ ಕಲಾವಿದರು, ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. ನಮ್ಮ ಸಾಂಸ್ಕೃತಿಕ ಜೀವನವನ್ನು ಶ್ರೀಮಂತಗೊಳಿಸಿರುವ ಅರ್ಹ ಕಲಾವಿದರಿಗೆ ಒಂದು ಸಾಂಸ್ಕೃತಿಕ ಬೆಂಬಲವಾಗಿ ತನ್ನ ವಸತಿ ಸಂಗ್ರಹದಲ್ಲಿ ಒಂದು ಸಣ್ಣ ಭಾಗವನ್ನು ಕೊಡಮಾಡುವುದು ಸರಕಾರಕ್ಕೆ ಖಂಡಿತಾ ಸಾಧ್ಯವಿದೆ” ಎಂದು ಹೇಳಿದೆ.

ಫ್ರಾನ್ಸ್, ಜರ್ಮನಿ ಮುಂತಾದ ಹಲವು ದೇಶಗಳಲ್ಲಿ ಕಲೆ ಮತ್ತು ಕಲಾವಿದರಿಗೆ ಸರಕಾರದ ಮನ್ನಣೆ ಇದೆ, ಅಲ್ಲದೆ ಸರಕಾರಿ ನಿಯಮಾವಳಿಗಳಲ್ಲಿ ಕುಂಠಿತಗೊಳಿಸದೆ ಸಂಸ್ಕೃತಿಗೆ ಪ್ರಾಥಮಿಕತೆಯನ್ನು ನೀಡಲಾಗುತ್ತಿದೆ. ಆದರೆ “ಪ್ರಾಚೀನ ಭಾರತೀಯ ಸಂಸ್ಕೃತಿ”ಯ ಬಗ್ಗೆ ಬಹಳ ಮಾತಾಡುವವರ ಸರಕಾರವೊಂದು ಕಲಾವಿದರ ನಿಜ ಪರಿಸ್ಥಿತಿಗಳ ಬಗ್ಗೆ  ಹೆಚ್ಚು ಸಹಾನುಭೂತಿ ಹೊಂದಿರಬೇಕಾಗಿತ್ತು ಎಂದು ಕಲಾವಿಮರ್ಶಕರು ಅಭಿಪ್ರಾಯ ಪಡುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *