ಕರಾಳ ಕೃಷಿ ಕಾಯ್ದೆಗಳ ನಂತರ  ಕಾರ್ಮಿಕ ಸಂಹಿತೆಗಳ ಜಾರಿ ಮುಂದೂಡಿಕೆ?

 ದೆಹಲಿ : ಇದ್ದಕಿದ್ದಂತೆ ಮೋದಿ ಸರಕಾರ ಮಾರ್ಚ್ 31, 2021ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ ಎಂದು ಪ್ರಕಟಿಸಿದೆ.  ಸಂಸತ್ತಿನಲ್ಲಿ ಆತುರದಿಂದ ಪಾಸು ಮಾಡಿಸಿಕೊಂಡ ಈ ಸಂಹಿತೆಗಳನ್ನು ಎಪ್ರಿಲ್‍ 1ರಿಂದ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿತ್ತು.

ವಿಧಾನ ಸಭಾ ಚುನಾವಣೆಗಳು ನಡೆಯುತ್ತಿರುವುದರಿಂದ, ಮತ್ತು ರಾಜ್ಯ ಸರಕಾರಗಳು ಈ ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ರೂಪಿಸಿಲ್ಲವಾದ್ದರಿಂದ ಹೀಗೆ ಮಾಡಲಾಗಿದೆ ಎಂದು ಸರಕಾರ ಕಾರಣ ಕೊಟ್ಟಿರುವುದಾಗಿ ಕಾರ್ಪೊರೇಟ್‍ ಮಾಧ್ಯಮಗಳು ಹೇಳುತ್ತಿವೆ.

ಕಾರ್ಮಿಕ ಕಾನೂನುಗಳ ಪ್ರಶ್ನೆ ಸಂವಿಧಾನದ ‘ಸಮವರ್ತಿ ಪಟ್ಟಿ’ ಯಲ್ಲಿದೆ. ಕಾರ್ಮಿಕ ಕಾನೂನುಗಳ ಜಾರಿಗೆ ಸಂಬಂಧಪಟ್ಟಂತೆ ಕೈಗಾರಿಕೆಗಳು ಸೇವಾ ಕ್ಷೇತ್ರದ  ವಿಭಿನ್ನ ‘ಕೇಂದ್ರ ವಲಯ’ ಹಾಗೂ ‘ರಾಜ್ಯ ವಲಯ’ಗಳಿವೆ. ‘ಕಾರ್ಮಿಕ ಸಂಹಿತೆ’ಗಳು ಎಂದು ಹೊಸದಾಗಿ ತಂದಿರುವ ಶಾಸನಗಳ ಅಡಿಯಲ್ಲಿ ನಿರ್ದಿಷ್ಟ ನಿಯಮಾವಳಿಗಳನ್ನು ರಾಜ್ಯ ಸರಕಾರಗಳು ರೂಪಿಸಬೇಕಾಗಿದೆ. ಇದನ್ನು ಮಾಡದಿದ್ದರೆ, ರಾಜ್ಯ ವಲಯಕ್ಕೆ ಸೇರುವ ಅಂತಹ ಸಂಸ್ಥೆಗಳಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವಂತಿಲ್ಲ. ಹೆಚ್ಚಿನ ರಾಜ್ಯಗಳು ಈ ಪ್ರಕ್ರಿಯೆಯನ್ನು ಆರಂಭಿಸಿಲ್ಲ.

ಆದರೆ, ಕಾರ್ಮಿಕ ಸಂಘಟನೆಗಳ ವಿರೋಧವೂ ಈ ಮುಂದೂಡಿಕೆಗೆ ಇನ್ನೊಂದು ಕಾರಣ ಎಂಬುದನ್ನು ಬಹಳಷ್ಟು ಮಾಧ್ಯಮಗಳು ಎತ್ತಿ ತೋರಿಸುತ್ತಿಲ್ಲ. ನಿಜ, ಇದರಲ್ಲಿ ಆಶ್ಚರ್ಯವೇನೂ ಇಲ್ಲ.

ಇದನ್ನು ಓದಿ : ಕರಾಳ ಕಾಯ್ದೆಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲು ನಿರ್ಧಾರ ಮೇ ಮೊದಲ ವಾರದಲ್ಲಿ ಸಂಸದ್ ಭವನಕ್ಕೆ ರೈತರ ಪಾದಯಾತ್ರೆ

10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಎಪ್ರಿಲ್‍ 1ರಂದು ದೇಶಾದ್ಯಂತ ಕರಾಳ ಕಾರ್ಮಿಕ ಸಂಹಿತೆಗಳ ಪ್ರತಿಗಳನ್ನು ಸುಟ್ಟು ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದ್ದವು.

ಫೆಬ್ರುವರಿ 3, 2021ರಿಂದ ಇಂತಹ ಒಂದು ಸಂಹಿತೆಯ ಕರಡು ನಿಯಮಾವಳಿಗಳ ಬಗ್ಗೆ ತ್ರಿಪಕ್ಷೀಯ ಚರ್ಚೆಗೆಂದು ಸರಕಾರ  ಸಭೆ ಕರೆದಿತ್ತು. ಆದರೆ ಸಂಘ ಪರಿವಾರದ ಬಿಎಂಎಸ್‍ ಬಿಟ್ಟು ಇತರ ಎಲ್ಲ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ಅಖಿಲ ಭಾರತ ನೌಕರ/ಕಾರ್ಮಿಕ ಸಂಘಗಳು ಮತ್ತು ಒಕ್ಕೂಟಗಳು  ಈ ಸಭೆಯನ್ನು ಬಹಿಷ್ಕರಿಸಿದವು. ಇದು ಸಮಾಲೋಚನೆಯ ಹುಸಿ ಭಾವನೆಯನ್ನುಂಟು ಮಾಡುವ ಒಂದು ನಾಟಕ, ಎಲ್ಲ ನಾಲ್ಕು ಸಂಹಿತೆಗಳಲ್ಲಿ ಪ್ರತಿಯೊಂದನ್ನು ಕುರಿತಂತೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆ ನಡೆಸುವ ವರೆಗೆ  ಇವೆಲ್ಲವನ್ನೂ ತಡೆ ಹಿಡಿಯಬೇಕು ಎಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಆಗ್ರಹಿಸುತ್ತ ಬಂದಿವೆ.

ಸೆಪ್ಟಂಬರ್  2020ರಲ್ಲಿ ಮೂರು ಕೃಷಿ ಕಾಯ್ದೆಗಳು ಮತ್ತು ಮೂರು ಕಾರ್ಮಿಕ ಸಂಹಿತೆಗಳನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಅತ್ಯಂತ ತರಾತುರಿಯಿಂದ ಪಾಸು ಮಾಡಿಸಿಕೊಳ್ಳಲಾಯಿತು ಮತ್ತು ಹತ್ತೇ ದಿನಗಳಲ್ಲಿ ಅವಕ್ಕೆ ರಾಷ್ಟ್ರಪತಿಗಳ ಅಂಕಿತವನ್ನೂ ಪಡೆಯಲಾಯಿತು. ಆದರೆ ರೈತರು ಮತ್ತು ಕಾರ್ಮಿಕರು ಈ ಆರೂ ಕಾಯ್ದೆಗಳ ವಿರುದ್ಧ  ಸ್ವತಂತ್ರವಾಗಿ  ಮತ್ತು ಜಂಟಿ ಯಾಗಿ ಹೋರಾಟಗಳನ್ನು ನಡೆಸುತ್ತಿದ್ದಾರೆ.

ಇದರಿಂದಾಗಿ , ಭಾರೀ ತರಾತುರಿಯಲ್ಲಿದ್ದ ಮೋದಿ ಸರಕಾರ  ಆರು ತಿಂಗಳೊಳಗೆ ಕೃಷಿ ಕಾಯ್ದೆಗಳ ಜಾರಿಯನ್ನು ಮುಂದೂಡಬೇಕಾಗಿ ಬಂತು, ಈಗ  ಕಾರ್ಮಿಕ ಸಂಹಿತೆಗಳ ಜಾರಿಯನ್ನೂ ಮುಂದೂಡಿದೆ ಎಂದು ಕಾರ್ಮಿಕ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *