ಕನ್ನಡಕ್ಕೆ: ಟಿ.ಸುರೇಂದ್ರ ರಾವ್
1946ರ ಫೆಬ್ರವರಿ 18 ರಂದು ಬ್ರಿಟಿಶರ ಯುದ್ಧನೌಕೆ ಹೆಚ್.ಎಂ.ಐ.ಎಸ್.ತಳ್ವಾರ್ನ 1,100 ಭಾರತೀಯ ನೌಕಾ ಸಿಬ್ಬಂದಿಗಳು ಮುಷ್ಕರ ಮಾಡಿದರು ಮತ್ತು ಅವರ ಜತೆ ಬೊಂಬಾಯಿಯಲ್ಲಿದ್ದ ಭಾರತೀಯ ನೌಕಾದಳದ 5,500 ಮಂದಿ ಸೇರಿಕೊಂಡರು; ಇದು ಜನಾಂಗೀಯ ತಾರತಮ್ಯದ ವಿರುದ್ಧ ಅವರು ಪ್ರತಿಭಟನೆಯಾಗಿತ್ತು. ನೌಕೆಯ ಪಟಸ್ತಂಭದಲ್ಲಿ ಹಾರಾಡುತ್ತಿದ್ದ ಬ್ರಿಟಿಷರ ಯೂನಿಯನ್ ಜಾಕ್ ಧ್ವಜವನ್ನು ಕಿತ್ತುಹಾಕಿ, ಅಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಕೆಂಬಾವುಟಗಳನ್ನು ಹಾರಿಸಿದರು. ಅವರು ಶಸ್ತ್ರಾಸ್ತ್ರ ಹಿಡಿದು ತಮ್ಮ ಹಿರಿಯ ಅಧಿಕಾರಿಗಳನ್ನು ಬಂಧಿಸಿದರು. ಮರುದಿನ ಕೋಟೆ ಕೊತ್ತಲಗಳ ಸೇನಾವಸತಿಗಳ ಸಿಬ್ಬಂದಿಗಳು ಮುಷ್ಕರವನ್ನು ಸೇರಿಕೊಂಡರು ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಕೆಂಪು ಬಾವುಟಗಳನ್ನು ಹಿಡಿದುಕೊಂಡು ನಗರದಲ್ಲಿ ಮತಪ್ರದರ್ಶನ ಮಾಡಿದರು. ಮರುದಿನ ಮದ್ರಾಸ್, ಕರಾಚಿ, ವಿಶಾಖಪಟ್ಟಣ, ಕಲ್ಕತ್ತಾ, ದೆಹಲಿ, ಕೊಚಿನ್, ಜಾಮ್ನಗರ್, ಅಂಡಮಾನ್, ಬೆಹ್ರೇನ್ ಮತ್ತು ಏಡನ್ನ ಸಿಬ್ಬಂದಿಗಳು ಮುಷ್ಕರ ನಿರತ ನೌಕಾ ಸಿಬ್ಬಂದಿಗಳ ಬೆಂಬಲಕ್ಕೆ ನಿಂತರು. 78 ನೌಕೆಗಳು ಮತ್ತು 20 ಸಮುದ್ರ ತೀರದ ನೌಕಾದಳದ ಸಿಬ್ಬಂದಿಗಳು ಒಟ್ಟು 20,000 ಸಿಬ್ಬಂದಿಗಳು ಭಾಗಿಗಳಾಗಿದ್ದರು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗಿನ ಮೇಲ್ವರ್ಗದ ನಾಯಕತ್ವ ಇದನ್ನು ಸಾಮಾನ್ಯ ನೌಕಾ ಸಇಬ್ಬಂದಿಗಳ ‘ಅನ್ನ-ಸಾರಿನ’ ಪ್ರತಿಭನಟೆ ಎಂದು ಕಡೆಗಣಿಸಿದರೂ ಮುಂಬೈಯ ದುಡಿಯುವ ಜನಗಳು ಇದನ್ನು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಕಂಡು ಬೆಂಬಲಿಸಿದರು. ಇದರಲ್ಲಿ ಕಮ್ಯುನಿಸ್ಟ್ ಪಕ್ಷದ ಪಾತ್ರ ಮಹತ್ವದ್ದಾಗಿದೆ. ಇದೀಗ ರಿನ್ ಬಂಡಾಯ ಎಂದು ಪ್ರಸಿದ್ಧವಾಗಿದೆ.
ಐ.ಎನ್.ಎ. ವಿಚಾರಣೆಯ ಸುತ್ತ ಬೆಳೆದು ತಾರಕಕ್ಕೆ ಏರಿದ್ದ ರಾಷ್ಟ್ರೀಯ ಭಾವನೆಗಳು 1945-46ರ ಚಳಿಗಾಲದ ಹೊತ್ತಿಗೆ ಬ್ರಿಟಿಷ್ ಸಾಮ್ರಾಜ್ಯಶಾಹಿಗಳೊಂದಿಗೆ ಹಿಂಸಾತ್ಮಕ ಸೆಣಸಾಟಕ್ಕೆ ತಿರುಗಿತು. ಭಾರತದಲ್ಲಿನ ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಯೋಧರು ಮತ್ತು ಯುವ ಅಧಿಕಾರಿಗಳು ಈ ಸಾಮೂಹಿಕ ಪ್ರತಿಭಟನೆಗಳಿಂದ ಬಹಳವಾಗಿ ಪ್ರಭಾವಿತರಾದರು. ಅವರಲ್ಲಿನ ಒಂದು ವಿಭಾಗವು ನುರಿತ ವೃತ್ತಿಪರರಾಗಿದ್ದರು ಮತ್ತು ಈ ಹಿಂದೆ ಬ್ರಿಟಿಷರ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಹಿಂದಿನ ಪೀಳಿಗೆಯವರಿಗಿಂತ ಭಿನ್ನರಾಗಿದ್ದರು. ಅದಕ್ಕೂ ಮೇಲಾಗಿ, ಅವರು ಎರಡನೇ ವಿಶ್ವ ಮಹಾಯುದ್ಧದಲ್ಲಿ ಮಿತ್ರಕೂಟದ ಸೈನಿಕರ ಜತೆ ಮುಖ್ಯವಾಗಿ ಸೋವಿಯತ್ ಯೂನಿಯನ್ನಿನ ಕೆಂಪು ಸೇನೆಯ ಜತೆ ಹೋರಾಡಿದ್ದರು. ಅವರ ಜತೆಗಿನ ಪರಸ್ಪರ ವಿಚಾರ ವಿನಿಮಯಗಳಿಂದಾಗಿ ಫ್ಯಾಸಿಸಂ-ವಿರೋಧಿ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಚಿಂತನೆಗಳು ಇವರ ಮೇಲೆ ಪ್ರಭಾವ ಬೀರಿದ್ದವು.
ನೌಕಾದಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ ಸಿಬ್ಬಂದಿಗಳ ಒಂದು ವಿಭಾಗವು ರಾಷ್ಟ್ರೀಯ ಚಳುವಳಿ ಮತ್ತು ಐ.ಎನ್.ಎ. ಗಳಿಂದ ಸ್ಪೂರ್ತಿ ಪಡೆದು ಆಜಾದ್ ಹಿಂದ್ ಎಂಬ ಗುಪ್ತ ಸಂಘಟನೆಯೊಂದನ್ನು ಆರಂಭಿಸಿತು. ನೌಕಾ ಸಿಬ್ಬಂದಿಗಳನ್ನು ಬಂಡಾಯಕ್ಕೆ ಸಿದ್ಧಪಡಿಸುವಲ್ಲಿ ಈ ಸಂಘಟನೆಯು ಬಹು ಮುಖ್ಯ ಪಾತ್ರ ವಹಿಸಿದೆ. ರಾಯಲ್ ಇಂಡಿಯನ್ ನೇವಿ(ರಿನ್-ಬ್ರಿಟಿಶರ ಅಡಿಯಿದ್ದ ಭಾರತೀಯ ನೌಕಾದಳ-ಅನು.)É)ಯ ಸಿಬ್ಬಂದಿಗಳು ಮುಷ್ಕರ ಮಾಡಿದಾಗ ಬೊಂಬಾಯಿಯಲ್ಲಿ ಅಲ್ಲೋಲಕಲ್ಲೋಲವಾಯಿತು.
1946ರ ಫೆಬ್ರವರಿ 18 ರಂದು, ಹೆಚ್.ಎಂ.ಐ.ಎಸ್.ತಳ್ವಾರ್ನ 1,100 ನೌಕಾ ಸಿಬ್ಬಂದಿಗಳು ಮುಷ್ಕರ ಮಾಡಿದರು ಮತ್ತು ಅವರ ಜತೆ ಬೊಂಬಾಯಿಯಲ್ಲಿದ್ದ ಭಾರತೀಯ ನೌಕಾದಳದ 5,500 ಮಂದಿ ಸೇರಿಕೊಂಡರು; ಅವರನ್ನು ನಡೆಸಿಕೊಂಡ ರೀತಿಯ ವಿರುದ್ಧ ಅವರು ಪ್ರತಿಭಟನೆ ಮಾಡಿದರು. ನೌಕೆಯ ಪಟಸ್ತಂಭದಲ್ಲಿ ಹಾರಾಡುತ್ತಿದ್ದ ಬ್ರಿಟಿಷರ ಯೂನಿಯನ್ ಜಾಕ್ ಧ್ವಜವನ್ನು ಕಿತ್ತುಹಾಕಿ, ಅಲ್ಲಿ ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಕೆಂಬಾವುಟಗಳನ್ನು ಹಾರಿಸಿದರು. ಅವರು ಶಸ್ತ್ರಾಸ್ತ್ರ ಹಿಡಿದು ತಮ್ಮ ಹಿರಿಯ ಅಧಿಕಾರಿಗಳನ್ನು ಬಂಧಿಸಿದರು. ಮರುದಿನ ಕೋಟೆ ಕೊತ್ತಲಗಳ ಸೇನಾವಸತಿಗಳ ಸಿಬ್ಬಂದಿಗಳು ಮುಷ್ಕರವನ್ನು ಸೇರಿಕೊಂಡರು ಮತ್ತು ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಕೆಂಪು ಬಾವುಟಗಳನ್ನು ಹಿಡಿದುಕೊಂಡು ನಗರದಲ್ಲಿ ಮತಪ್ರದರ್ಶನ ಮಾಡಿದರು. ಆ ಸಿಬ್ಬಂದಿಗಳಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನರು ಮತ್ತು ಎಲ್ಲಾ ಪ್ರಾಂತಗಳಿಂದ ಬಂದ ಮತ್ತು ವಿವಿಧ ಭಾಷೆ ಮಾತಾಡುವವರೆಲ್ಲರೂ ಇದ್ದರು.
ಸರ್ಕಾರದ ಸೇವೆಗಳ ಯಾವುದೇ ಶಾಖೆಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಜನರ ಮೇಲೆ ಜನಾಂಗೀಯ ತಾರತಮ್ಯ ಮಾಡಲಾಗುತ್ತಿತ್ತು. ಅವರ ಸಂಬಳ ಬಹಳ ಕಡಿಮೆ ಇರುತ್ತಿತ್ತು ಮತ್ತು ಆಹಾರ ಹೆಚ್ಚಿನ ಸಂದರ್ಭಗಳಲ್ಲಿ ತಿನ್ನಬಾರದಂತಿದ್ದವು. ಇಂತಹ ಪೀಡನೆಯಿಂದ ಕಾಟದಿಂದ ಬೇಸತ್ತಿದ್ದ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿದ್ದರು, ಇನ್ನು ಕೆಲವರು ಕೆಲಸ ಬಿಟ್ಟು ಓಡಿಹೋಗುತ್ತಿದ್ದರು. ಹೆಚ್.ಎಂ.ಐ.ಎಸ್.ತಳ್ವಾರ್ನ ಮೇಲೆ “ಭಾರತ ಬಿಟ್ಟು ತೊಲಗಿ”, “ಸಾಮ್ರಾಜ್ಯಶಾಹಿಗೆ ಧಿಕ್ಕಾರ” ಎಂದೆಲ್ಲಾ ಬರೆದಿದ್ದ ಬಿ.ಸಿ.ದತ್ತ್ ಎಂಬ ಸಿಬ್ಬಂದಿಯನ್ನು ಬಂಧಿಸಿದ್ದಕ್ಕಾಗಿ ಉಗ್ರವಾಗಿ ತಮ್ಮ ಕೋಪವನ್ನು ತೋರಿದರು. ನೌಕಾ ಸಿಬ್ಬಂದಿಗಳ ಪ್ರಮುಖ ಬೇಡಿಕೆಗಳು ಹೀಗಿದ್ದವು: ಒಳ್ಳೆಯ ಆಹಾರ ಮತ್ತು ಸಾಕಷ್ಟು ಪಡಿತರಗಳು; ಅಧಿಕಾರಿಗಳಿಂದ ಪೀಡನೆ ನಿಲ್ಲಬೇಕು; ತ್ವರಿತ ಸೇನಾನಿವೃತ್ತಿ, ಮರುವಸತಿ ಹಾಗೂ ಪುರಸ್ಕಾರಧನ(ಗ್ರಾಚುಯಿಟಿ); ಕೂಡಲೇ, ಐಎನ್.ಎ. ಬಂಧಿಗಳನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ಬಂಧಿಗಳ ಬಿಡುಗಡೆ; ಇಂಡೋನೇಶಿಯಾದಿಂದ ಎಲ್ಲಾ ಭಾರತೀಯ ಪಡೆಗಳನ್ನು ತಕ್ಷಣವೇ ಹಿಂದಕ್ಕೆ ಕರೆಸಬೇಕು ಮತ್ತು ದೇಶಾದ್ಯಂತ ನಡೆದ ಪೋಲಿಸ್ ಗೋಲಿಬಾರುಗಳನ್ನು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.
ಬೊಂಬಾಯಿ ಒಂದೇ ಅಲ್ಲದೇ, ಕರಾಚಿ ಕೂಡ ನೌಕಾ ಸಿಬ್ಬಂದಿಗಳ ಬಂಡಾಯ ನಡೆದ ಮತ್ತೊಂದು ಪ್ರಮುಖ ಕೇಂದ್ರವಾಗಿತ್ತು. ಸುದ್ದಿ ಫೆಬ್ರವರಿ 19 ರಂದು ಕರಾಚಿ ತಲುಪಿದ ಕೂಡಲೇ, ಹೆಚ್.ಎಂ.ಐ.ಎಸ್. ಹಿಂದೂಸ್ತಾನ್ ನೌಕೆ(ನಂತರ ಶಸ್ತ್ರಾಸ್ತ್ರ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು) ಹಾಗೂ ಮತ್ತೊಂದು ನೌಕೆ ಮತ್ತು ಸಮುದ್ರ ತೀರದ ಮೂರು ನೌಕಾದಳದ ಸಿಬ್ಬಂದಿಗಳು ಮಿಂಚಿನ ಮುಷ್ಕರ ನಡೆಸಿದರು. ಬ್ರಿಟಿಷ್ ಸೇನೆಯ ಮುಖ್ಯಸ್ಥ ಅಡ್ಮಿರಲ್ ಗಾಡ್ಫ್ರೈ ಯಾವಾಗ ಭಾರತೀಯ ನೌಕಾದಳದ ಎಲ್ಲಾ ನೌಕೆಗಳನ್ನೂ ಸ್ಪೋಟಿಸಿ ಚೂರು ಚೂರು ಮಾಡುತ್ತೇನೆ ಎಂದು ಬೆದರಿಕೆ ಹಾಕಿದನೋ, ಆಗ ಈ ಎರಡು ಕೇಂದ್ರಗಳಲ್ಲದೇ, ಮದ್ರಾಸ್, ಕರಾಚಿ, ವಿಶಾಖಪಟ್ಟಣ, ಕಲ್ಕತ್ತಾ, ದೆಹಲಿ, ಕೊಚಿನ್, ಜಾಮ್ನಗರ್, ಅಂಡಮಾನ್, ಬೆಹ್ರೇನ್ ಮತ್ತು ಏಡನ್ನ ಸಿಬ್ಬಂದಿಗಳು ಮುಷ್ಕರ ನಿರತ ನೌಕಾ ಸಿಬ್ಬಂದಿಗಳ ಬೆಂಬಲಕ್ಕೆ ನಿಂತರು. 78 ನೌಕೆಗಳು ಮತ್ತು 20 ಸಮುದ್ರ ತೀರದ ನೌಕಾದಳದ ಸಿಬ್ಬಂದಿಗಳು ಒಟ್ಟು 20,000 ಸಿಬ್ಬಂದಿಗಳು ಭಾಗಿಗಳಾಗಿದ್ದರು. ರಾಯಲ್ ಏರ್ ಫೋರ್ಸ್ (ಆರ್ಎಎಫ್) ವಾಯು ಸೇನೆಯ ಬೊಂಬಾಯಿ ಪ್ರದೇಶದ ಮರೀನ್ ಡ್ರೈವ್, ಅಂಧೇರಿ, ಸಂiÀiನ್ ಮತ್ತು ಪುಣೆ, ಕಲ್ಕತ್ತಾ, ಜೆಸ್ಸೂರ್ ಹಾಗೂ ಅಂಬಾಲಾ ಘಟಕಗಳು ಬೆಂಬಲವಾಗಿ ಸೌಹಾರ್ದ ಮುಷ್ಕರ ಮಾಡಿದರು. ಜಬಲ್ಪುರದ ಸಿಪಾಯಿಗಳೂ ಮುಷ್ಕರ ನಡೆಸಿದರು, ಕೊಲಾಬಾದ ದಂಡುಪ್ರದೇಶ (ಕಂಟೋನ್ಮೆಂಟ್) ಕೂಡ ‘ಅನಿಷ್ಟಕಾರಿ ಪ್ರಕ್ಷುಬ್ಧತೆಯನ್ನು’ ತೋರ್ಪಡಿಸಿತು.
ಕಮ್ಯುನಿಸ್ಟ್ ಪಕ್ಷದ ಪಾತ್ರ:
ಕಮ್ಯುನಿಸ್ಟ್ ಪಕ್ಷವು ತಕ್ಷಣವೇ ನೌಕಾ ಸಿಬ್ಬಂದಿಗಳ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿತು. ಅದು ಫೆಬ್ರವರಿ 19ರಂದು ಒಂದು ಕರಪತ್ರ ಪ್ರಕಟಿಸಿ ಮುಷ್ಕರವನ್ನು ಬೆಂಬಲಿಸಲು ಜನರಿಗೆ ಕರೆ ನೀಡಿತು ಮತ್ತು ನೌಕೆಯನ್ನು ಹಾಗೂ ಅದನ್ನು ನಡೆಸುತ್ತಿದ್ದ ಭಾರತೀಯ ಯೋಧರನ್ನು ನಾಶ ಮಾಡುವುದಾಗಿ ನೀಡಿದ ಅಡ್ಮಿರಲ್ ಗಾಡ್ಫ್ರೈನ ದುರಹಂಕಾರದ ಬೆದರಿಕೆಗೆ ಉತ್ತರವಾಗಿ ಫೆಬ್ರವರಿ 22 ರಂದು ಸಾರ್ವತ್ರಿಕ ಮುಷ್ಕರದಲ್ಲಿ ಭಾಗವಹಿಸಬೇಕೆಂದು ಪಕ್ಷವು ತನ್ನ ಪತ್ರಿಕೆಯ ಮೂಲಕ ಜನರಿಗೆ ಕರೆ ನೀಡಿತು. ದೇಶಾದ್ಯಂತ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದರು, ಹರತಾಳ ಮತ್ತು ಮೆರವಣಿಗೆಗಳನ್ನು ಸಂಘಟಿಸಿ ಸಿಬ್ಬಂದಿಗಳಿಗೆ ಸಹಾನುಭೂತಿ ವ್ಯಕ್ತಡಿಸಿದರು ಮತ್ತು ಸರಕಾರದ ದಬ್ಬಾಳಿಕೆಯನ್ನು ಖಂಡಿಸಿದರು. ದೇಶದ ಪ್ರತಿಯೊಬ್ಬರೂ ಈ ಬಂಡಾಯವನ್ನು ಒಟ್ಟು ಸ್ವಾತಂತ್ರ್ಯ ಚಳುವಳಿಯ ಭಾಗವೆಂದು ಬೆಂಬಲಿಸಿದರು.
ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ನೌಕಾ ಸಿಬ್ಬಂದಿಗಳ ಬೇಡಿಕೆಗಳನ್ನು ಬೆಂಬಲಿಸಬೇಕೆಂದು ಕಮ್ಯುನಿಸ್ಟ್ ಪಕ್ಷವು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿತು. ಸಾರ್ವತ್ರಿಕ ಮುಷ್ಕರಕ್ಕಾಗಿ ಕಮ್ಯುನಿಸ್ಟರ ಕರೆಗೆ ಓಗೊಟ್ಟು ಲಕ್ಷಾಂತರ ಕಾರ್ಮಿಕರು ಕಾಖಾನೆಗಳಿಂದ ಹೊರಬಂದು ಬೀದಿಗಿಳಿದರು. ಅಂಗಡಿಗಳು, ವರ್ತಕರು, ಹೋಟೆಲುಗಳ ಹರತಾಳ ಮತ್ತು ವಿದ್ಯಾರ್ಥಿಗಳು ಮತ್ತು ಕಾರ್ಖಾನೆಗಳು ಹಾಗೂ ಸಾರ್ವಜನಿಕ ಸಾರಿಗೆ ಸೇವೆಗಳ ಕಾರ್ಮಿಕರ ಮುಷ್ಕರಗಳು ಇಡೀ ಬೊಂಬಾಯಿ ನಗರವನ್ನು ಸ್ಥಗಿತಗೊಳಿಸಿದವು. ಹಿಂದೆಂದೂ ಕಾಣದ ಅತ್ಯಂತ ದೊಡ್ಡ ಮುಷ್ಕರ ಮತ್ತು ಹರತಾಳವನ್ನು ಬೊಂಬಾಯಿ ಕಂಡಿತು.
ಅದಕ್ಕೆ ಉತ್ತರವಾಗಿ ಬ್ರಿಟಿಷ್ ಸರ್ಕಾರವು ಬ್ರಿಟಿಷ್ ಸೈನಿಕರನ್ನೇ ಶಸ್ತ್ರಾಸ್ತ್ರ ಸಜ್ಜಿತ ವಾಹನಗಳಲ್ಲಿ ರಸ್ತೆಗಿಳಿಸಿತು. ಯಾವುದೇ ಎಚ್ಚರಿಕೆ ನೀಡದೇ ಹೆಚ್ಚು ಜನರು ಸೇರಿದ್ದ ಜನಸಂದಣಿಯತ್ತ ಮನಸೋಯಿಚ್ಛೆ ಗೋಲಿಬಾರ್ ಮಾಡಲಾಯಿತು. ಗಂಡಸರು ಹೆಂಗಸರು ಎಂದು ಬೇಧವೆಣಿಸದೇ ಅಮಾಯಕ ಕಾರ್ಮಿಕರು ಮತ್ತು ಜನರ ಮೇಲೆ ಮಾಡಿದ ಗೋಲಿಬಾರಿನಲ್ಲಿ ಹಲವಾರು ಜನರು ಹತ್ಯಗೊಳಗಾದರು. ಅದರಲ್ಲಿ ಕಮಲ ದೋಂಡೆ, ಕಮ್ಯುನಿಸ್ಟ್ ಮುಖಂಡೆ ಮತ್ತು ಪರೇಲ್ ಮಹಿಳಾ ಸಂಘದ ನಾಯಕಿ ಹುತಾತ್ಮಳಾದರು. ಸರ್ಕಾರಿ ವರದಿಯ ಪ್ರಕಾರ ಫೆಬ್ರವರಿ 21-23ರ ಆ ಮೂರು ದಿನಗಳಂದು 250 ಜನರು ಹತರಾದರು. “ಬಂದೂಕುಗಳು, ಟ್ಯಾಂಕುಗಳು ಮತ್ತು ಬಾಂಬರುಗಳಿಂದ ಭಾರತದ ಜನರನ್ನು ಬೆದರಿಸುವ ಕಾಲ ಎಂದಿಗೋ ಮುಗಿದವು,” ಸಾಮ್ರಾಜ್ಯಶಾಹಿಗಳು ನಡೆಸಿದ ರಕ್ತಪಾತವು ‘ಜನರ ಐಕ್ಯತೆಯನ್ನು ಇನ್ನೂ ಗಟ್ಟಿಗೊಳಿಸಲಿದೆ ಹಾಗೂ ಭಯೋತ್ಪಾದಕ ಆಳ್ವಿಕೆಯನ್ನು ಕೊನೆಗೊಳಿಸಲಿದೆ’ ಎಂದು ಪಕ್ಷವು ಘೋಷಿಸಿತು.
ಸಂಪೂರ್ಣ ಹರತಾಳ ಮಾಡಬೇಕೆಂದು ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದ ಕಮ್ಯುನಿಸ್ಟ್ ಪಕ್ಷವು ಸರ್ಕಾರದ ದಬ್ಬಾಳಿಕೆಗೆ ಉತ್ತರವಾಗಿ ನಮ್ಮ ಆಕ್ರೋಶ ವ್ಯಕ್ತಪಡಿಸಬೇಕು ಎಂದು ಕರೆ ನೀಡಿತು. ರಿನ್ ಸಿಬ್ಬಂದಿಗಳ ಧೀರೋದಾತ್ತ ಹೋರಾಟಕ್ಕೆ ಮತ್ತು ಅವರ ಬೇಡಿಕೆಗಳಿಗೂ ಬೊಂಬಾಯಿ ಎಲ್ಲಾ ನಾಗರಿಕರು ಹರತಾಳ ಮಾಡುವುದರ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಗಾಯಗೊಂಡವರು ಮತ್ತು ಹತರಾದವರ ಕುಟುಂಬದವರಿಗೆ ಪರಿಹಾರ ಒದಗಿಸಲು ಒಂದು ನಾಗರಿಕರ ಶಾಂತಿ ಮತ್ತು ಪರಿಹಾರ ಸಮಿತಿ ರಚಿಸಬೇಕೆಂದು ಪಕ್ಷ ಕರೆ ನೀಡಿತು. ಸಾವಿರಾರು ರಿನ್ ಮುಷ್ಕರನಿರತರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರನ್ನು ಪಕ್ಷ ಕೇಳಿಕೊಂಡಿತು. ‘ಅದು ಆಜಾದ್ ಹಿಂದ್ ಫೌಜ್ ನಷ್ಟೇ ಮಹತ್ವದ್ದು’ ಮತ್ತು ‘ಯಾವುದೇ ತಾರತಮ್ಯವಿಲ್ಲದೇ ನ್ಯಾಯ ಒದಗಿಸುವ’ ರೀತಿಯಲ್ಲಿ ಇತ್ಯರ್ಥವಾಗಬೇಕು ಎಂದೂ ಹೇಳಿತು. ಈ ವಿಷಯವನ್ನು ಸೆಂಟ್ರಲ್ ಅಸೆಂಬ್ಲಿಯಲ್ಲಿ ಎತ್ತಬೇಕು ಮತ್ತು ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕೆಂದು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಮುಖಂಡರುಗಳಿಗೆ ಮನವಿ ಮಾಡಿತು.
ಒಂದು ತನಿಖಾ ಆಯೋಗವನ್ನು ನೇಮಿಸಬೇಕು ಮತ್ತು ಮುಷ್ಕರನಿರತರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪಕ್ಷವು ಸರ್ಕಾರವನ್ನು ಒತ್ತಾಯಿಸಿತು. ಆ ಸಿಬ್ಬಂದಿಗಳು ಬಂಡಾಯ ಎದ್ದಿರದೇ ಇದ್ದರೆ, ತನಿಖಾ ಆಯೋಗವನ್ನು ಎಂದಿಗೂ ನೇಮಿಸುತ್ತಿರಲಿಲ್ಲ ಮತ್ತು ಅನ್ಯಾಯ, ತಾರತಮ್ಯ, ಕ್ರೌರ್ಯ ಮುಂತಾದ ಅವರ ಘೋರ ಕತೆಗಳು ಬೆಳಕನ್ನು ಕಾಣುತ್ತಿರಲಿಲ್ಲ. ಪಕ್ಷದ ಹೋರಾಟಗಳಿಂದಾಗಿ ರಿನ್ ಮತ್ತದರ ಸಿಬ್ಬಂದಿಗಳ ವಿನಾಶವನ್ನು ತಡೆಯಲಾಯಿತು ಮತ್ತು ಅಂತಿಮವಾಗಿ ಒಪ್ಪಂದಕ್ಕೆ ಕಾರಣವಾಯಿತು. ಆದರೆ ಯಾರಿಗೂ ಶಿಕ್ಷೆ ವಿಧಿಸುವುದಿಲ್ಲವೆಂಬ ಮಾತಿಗೆ ವಿರುದ್ಧವಾಗಿ, ಮುಷ್ಕರದ ಪ್ರಮುಖ ಮುಖಂಡರನ್ನು ಬಂಧಿಸಿ ಬಲಿಕೊಟ್ಟ ಸರ್ಕಾರದ ಕ್ರಮವನ್ನು ಪಕ್ಷ ಖಂಡಿಸಿತು.
ಬಂಡಾಯ ಏಕೆ ವಿಫಲವಾಯಿತು?
ಭಾರತೀಯ ರಾಷ್ಟ್ರೀಯ ರಂಗದಲ್ಲಿ ಕೆಲವು ದೌರ್ಬಲ್ಯಗಳಿದ್ದವು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗಿನ ಮೇಲ್ವರ್ಗದ ನಾಯಕತ್ವಕ್ಕೆ ಜನಗಳು ಬಂಡೇಳುವುದೆಂದರೆ ಭಯವಿತ್ತು. ಈ ಬಂಡಾಯ ಅಖಿಲ ಭಾರತ ಮಟ್ಟಕ್ಕೆ ಮತ್ತು ಸಶಸ್ತ್ರ ಪಡೆಗಳ ಎಲ್ಲಾ ವಿಭಾಗಗಳಿಗೂ, ಭೂಸೇನೆ ಹಾಗೂ ವಾಯುಸೇನೆಗೂ ಹರಡಬಾರದು ಎಂಬುದಿತ್ತು. ನಿಷೇಧವಿದ್ದಾಗ್ಯೂ ಸಾರ್ವತ್ರಿಕ ಬೆಂಬಲ ಪಡೆದು ಸಾಮೂಹಿಕ ಮುಷ್ಕರ ಮತ್ತು ಹರತಾಳ ಮಾಡಿದ್ದನ್ನು ಅವರು ಅಧಿಕೃತವಾಗಿ ವಿರೋಧಿಸಿದರು. ನೌಕಾ ಬಂಡಾಯವನ್ನು ಅದೊಂದು ‘ಅನ್ನ-ಸಾರಿನ’ ವಿಷಯವೆಂದಷ್ಟೇ ಅವರು ಕಂಡರು, ಜನಾಂಗೀಯ ತಾರತಮ್ಯದ ವಿರುದ್ಧದ ಬೇಡಿಕೆಗೆ ಅವರು ಕುರುಡರಾಗಿದ್ದರು, ಅದನ್ನು ವಿಶಾಲ ರಾಷ್ಟ್ರೀಯ ಚಳುವಳಿಯ ಒಂದು ಭಾಗ ಎಂದು ಕಾಣಲು ನಿರಾಕರಿಸಿದರು.
ಗೋಲಿಬಾರಿನಿಂದಾಗಿ ನೂರಾರು ಜನರ ಹತ್ಯೆಗೆ ಕಾರಣವಾದ ಸಾಮ್ರಾಜ್ಯಶಾಹಿ ಅಧಿಕಾರಿಗಳ ಹಿಂಸೆಯನ್ನು ಕಾಂಗ್ರೆಸ್ ಮತ್ತು ಲೀಗಿನ ನಾಯಕರು ಖಂಡಿಸಲಿಲ್ಲ, ಬದಲಿಗೆ ಅದಕ್ಕೆ ಬಲಿಯಾದ ನಿಶ್ಶಸ್ತ್ರ ಜನರನ್ನು ಟೀಕಿಸಿದರು. ನೌಕಾ ಸಿಬ್ಬಂದಿಗಳ ಮುಷ್ಕರನ್ನು ಖಂಡಿಸುವ ಮೂಲಕ ಅವರು ತಮ್ಮನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪ್ರತಿನಿಧಿಗಳೆಂದು ತೋರಿಸಿಕೊಳ್ಳ ಬಯಸಿದರು. ‘ನೌಕಾದಳದಲ್ಲಿ ಶಿಸ್ತು ಇರಲೇಬೇಕೆಂಬ ಸೇನಾ ಮುಖ್ಯಸ್ಥನ ಮಾತುಗಳನ್ನು’ ತಾನು ಒಪ್ಪುವುದಾಗಿ ವಲ್ಲಭ ಭಾಯ್ ಪಟೇಲರು ಸಾರಿ ಹೇಳಿದರು. ‘ಹಿಂಸೆಯ ಕಾರಣಕ್ಕಾಗಿ ಹಿಂದೂ ಮತ್ತು ಮುಸ್ಲಿಮರ ಅಪವಿತ್ರ ಮೈತ್ರಿ’ ಎಂದು ಗಾಂಧೀಜಿ ಒಂದು ಹೇಳಿಕೆಯಲ್ಲಿ ಮುಷ್ಕರವನ್ನು ಖಂಡಿಸಿದರು. ರಿನ್ ಸಿಬ್ಬಂದಿಗಳು ಶರಣಾಗಬೇಕು ಎಂಬುದೇ ಅವರೆಲ್ಲರ ಉಪದೇಶವಾಗಿದ್ದವು. ಕಾಂಗ್ರೆಸ್ ಮುಖಂಡ ವಲ್ಲಭಭಾಯ್ ಪಟೇಲರ ಸಲಹೆ ಮತ್ತು ನಂತರ ಜಿನ್ನಾÀರ ಸಂದೇಶದಿಂದಾಗಿ ಕೇಂದ್ರೀಯ ನೌಕಾ ಮುಷ್ಕರ ಸಮಿತಿಯು ಅಂತಿಮವಾಗಿ ಫೆಬ್ರವರಿ 23ರಂದು ಶರಣಾದರು. ಅವರು ಶರಣಾದದ್ದು “ನಾವು ಭಾರತಕ್ಕೆ ಶರಣಾಗುತ್ತೇವೆ, ಬ್ರಿಟನ್ನಿಗಲ್ಲ” ಎಂಬ ಘೋಷಣೆಯೊಂದಿಗೆ.
ಮುಷ್ಕರನಿರತ ಸಿಬ್ಬಂದಿಗಳನ್ನು ರಕ್ಷಿಸುವ, ಅವರ ಶರಣಾಗತಿಯನ್ನು ಹಾಗೂ ಶಿಕ್ಷೆ ಅನುಭವಿಸುವುದನ್ನು ತಡೆಯುವ ಪ್ರಯತ್ನಗಳಲ್ಲಿ ಹೆಚ್ಚು ಬಲಿಷ್ಟವಾದ ಪಕ್ಷಗಳನ್ನು-ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಪಕ್ಷಗಳನ್ನು-ಅಣಿನೆರೆಸುವಷ್ಟು ಶಕ್ತಿ ಪಕ್ಷಕ್ಕೆ ಇರಲಿಲ್ಲ ಎಂದು ಕಮ್ಯುನಿಸ್ಟ್ ಪಕ್ಷವು ವಿಷಾದ ಪಟ್ಟುಕೊಂಡಿತು. ಹೀಗಿದ್ದಾಗ್ಯೂ, “ನಮ್ಮ ರಿನ್ ಸೋದರರು ನಿರ್ನಾಮವಗುವುದನ್ನು ತಡೆಯಲು ಅವರ ಹಿಂದೆ ನಿಂತು ತನ್ನೆಲ್ಲಾ ಶಕ್ತಿಯನ್ನು ಹಾಕಿತು” ಎಂದು ಕಮ್ಯುನಿಸ್ಟ್ ಪಕ್ಷವು ಖಂಡಿತವಾಗಿಯೂ ಹೇಳಿಕೊಳ್ಳಬಹುದು.