– ಪ್ರಕಾಶ್ ಕಾರಟ್
ಕಾರ್ಷಿಕ ಸುಧಾರಣೆಗಳಿಗಾಗಿ, ಭಾರತೀಯ ಪ್ರಭುತ್ವದ ಸಂರಚನೆಯನ್ನು ಹೆಚ್ಚು ಒಕ್ಕೂಟದ ಹಾದಿಯಲ್ಲಿ ಮರುರೂಪಿಸಲು ಮಾಡಿದ ಹೋರಾಟ ಮತ್ತು ಆಳುವ ವರ್ಗಗಳ ದಮನದ ಎದುರು ಪ್ರಜಾಪ್ರಭುತ್ವವನ್ನು ಗಾಢವಾಗಿಸಲು ನಿರಂತರವಾಗಿ ಶ್ರಮಿಸಿರುವುದು – ಕಮ್ಯುನಿಸ್ಟ್ ಚಳುವಳಿಯ ಈ ಶ್ರೀಮಂತ ಪರಂಪರೆಯನ್ನು ನಾವು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಗೆ ಹಿಂದೆ ಎಂದೂ ಈಗಿನಷ್ಟು ಗಂಭೀರವಾದ ಆಪತ್ತು ಇರಲಿಲ್ಲ. ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಮತ್ತು ಎಲ್ಲಾ ಪ್ರಜಾಪ್ರಭುತ್ವ-ವಿರೋಧಿ ಶಾಸನಗಳು ಮತ್ತು ಕ್ರಮಗಳನ್ನು ವಿರೋಧ ಮಾಡುವಲ್ಲಿ ದೀರ್ಘ ದಾಖಲೆ ಹೊಂದಿರುವ ಕಮ್ಯುನಿಸ್ಟರು ಇವತ್ತು ಸವಾಲನ್ನು ಎದುರಿಸಲು ಎದ್ದು ನಿಲ್ಲಬೇಕಿದೆ. ಪ್ರಜಾಪ್ರಭುತ್ವ ಮತ್ತ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಎಲ್ಲಾ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ವೇಗವರ್ಧಕ ಪಾತ್ರ ವಹಿಸಬೇಕಾಗಿದೆ.
***************************
1947ರ ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ದೇಶವಾಗಿತ್ತು. 200 ವರ್ಷಗಳ ವಸಾಹತು ಆಳ್ವಿಕೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ತೀವ್ರವಾಗಿತ್ತು. ಸ್ವಾತಂತ್ರ್ಯ ಸಮಯದಲ್ಲಿ ಈಡೇರದೆ ಬಾಕಿ ಉಳಿದಿದ್ದ ಪ್ರಜಾಪ್ರಭುತ್ವ ಕ್ರಾಂತಿಯನ್ನು ಪೂರ್ಣಗೊಳಿಸುವ ಕಾರ್ಯವು ಕಮ್ಯುನಿಸ್ಟ್ ಪಕ್ಷಕ್ಕೆ ಪ್ರಮುಖ ಪ್ರಶ್ನೆಯಾಗಿತ್ತು. ಸಮಾಜದ ಪ್ರಜಾಸತ್ತಾತ್ಮಕ ಪರಿವರ್ತನೆಯು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಆಯಾಮಗಳನ್ನು ಹೊಂದಿತ್ತು.
ಬಂಡವಾಳಶಾಹಿ ಪಕ್ಷಗಳಿಗಿಂತ ಭಿನ್ನವಾಗಿ, ಕಮ್ಯುನಿಸ್ಟರಿಗೆ ವಯಸ್ಕ ಮತದಾನದ ಆಧಾರದಲ್ಲಿನ ಮತದಾನದ ಹಕ್ಕಿನೊಂದಿಗಿನ ಚುನಾವಣಾ ಪ್ರಜಾಪ್ರಭುತ್ವ ಮಾತ್ರವೇ ಪ್ರಜಾಪ್ರಭುತ್ವವಲ್ಲ. ಪ್ರಜಾಪ್ರಭುತ್ವಕ್ಕೇ ಅದು ಮಾತ್ರವೇ ಸಾಲದು. ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆಗಳ ಆಧಾರದಲ್ಲಿನ ವರ್ಗ ಶೋಷಣೆ ಮತ್ತು ಸಾಮಾಜಿಕ ದಬ್ಬಾಳಿಕೆಗಳ ಅಂತ್ಯವನ್ನು ಪ್ರಜಾಪ್ರಭುತ್ವ ಒತ್ತಾಯಿಸುತ್ತದೆ. ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯಿಲ್ಲದೆ, ಭಾರತದಲ್ಲಿನ ಪ್ರಜಾಪ್ರಭುತ್ವವು, ಡಾ.ಅಂಬೇಡ್ಕರ್ ತೀಕ್ಷ್ಣವಾಗಿ ಟೀಕಿಸಿದಂತೆ “ಪ್ರಜಾಪ್ರಭುತ್ವ ವಿರೋಧಿಯಾದ ಮಣ್ಣ ಮೇಲೆ ಮೇಲ್ಪದರದಲ್ಲಿ ಅಂದವಾಗಿ ಹರಡಿದಂತೆ ಕಾಣುವಂಥದು”ಆಗಿದೆ.
ಪ್ರಾರಂಭದಿಂದಲೂ, ಬಂಡವಾಳಶಾಹಿ-ಭೂಮಾಲಕ ಮೈತ್ರಿಕೂಟದ ವರ್ಗ ಆಳ್ವಿಕೆಯಿಂದಾಗಿ ನಿರ್ಬಂಧಕ್ಕೊಳಪಟ್ಟಿದ್ದ ಮತ್ತು ವಿಕೃತಗೊಂಡಿದ್ದ ಪ್ರಜಾಪ್ರಭುತ್ವವನ್ನು ಕಮ್ಯುನಿಸ್ಟರು ಗಾಢವಾಗಿಸಲು ಮತ್ತು ವಿಶಾಲವಾಗಿಸಲು ಶ್ರಮಿಸಿದರು. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಕೊಡುಗೆಗಳೆಂದರೆ ಕಾರ್ಷಿಕ ಸಂಬಂಧಗಳ ಪ್ರಜಾಸತ್ತಾತ್ಮಕ ಮಾರ್ಪಾಟಿಗಾಗಿ ಭೂಸುಧಾರಣೆಗಾಗಿನ ಹೋರಾಟವಾಗಿದೆ; ರಾಜ್ಯಗಳನ್ನು ಭಾಷಾವಾರು ಆಧಾರದಲ್ಲಿ ಪುನರ್ ಸಂಘಟನೆ ಮಾಡಿದ್ದು, ಪಂಚಾಯತ್ ವ್ಯವಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವನ್ನು ವಿಕೇಂದ್ರೀಕರಣ ಹಾಗೂ ಸಾಂಸ್ಥೀಕರಣ ಮಾಡಿದ್ದು ಮತ್ತು ಸತತವಾಗಿ ಪ್ರಜಾಪ್ರಭುತ್ವ ಹಕ್ಕುಗಳ ಸಂರಕ್ಷಣೆ, ಬಹು ಮುಖ್ಯವಾಗಿ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿದ್ದು.
ಪ್ರಜಾಸತ್ತಾತ್ಮಕ ಮಾರ್ಪಾಟಿಗಾಗಿ ಭೂ ಸುಧಾರಣೆಗಳು
ಸ್ವಾತಂತ್ರ್ಯದ ಸಮಯದಲ್ಲಿ, ಜಮೀನುದಾರರು ಮತ್ತು ಭೂಮಾಲಕರಂತಹ ಸಣ್ಣ ವಲಯದವರ ಕೈಯಲ್ಲಿ ಅಗಾಧ ಜಮೀನುಗಳು ಕೇಂದ್ರೀಕೃತವಾಗಿದ್ದವು. ಕಾಂಗ್ರೆಸ್ ಸರ್ಕಾರವು, ಪ್ರಭುತ್ವದಲ್ಲಿ ಬಂಡವಾಳಶಾಹಿ-ಭೂಮಾಲಕ ಮೈತ್ರಿಕೂಟದ ಕಾರಣ, ಭೂಮಾಲಕತ್ವವನ್ನು ರದ್ದುಮಾಡಲು ಇಷ್ಟಪಡಲಿಲ್ಲ ಮತ್ತು ಭೂಸುಧಾರಣೆಯನ್ನು ಸೀಮಿತ ರೀತಿಯಲ್ಲಿ ಜಾರಿ ಮಾಡಲು ಮುಂದಾಯಿತು, ಅದು ಭೂಮಾಲಕರು ಮತ್ತು ಶ್ರೀಮಂತ ರೈತರಿಗೆ ಅನುಕೂಲವಾಯಿತು. ಜಮೀನುದಾರಿ ಪದ್ಧತಿಯನ್ನು ಕಾನೂನುಬದ್ಧವಾಗಿ ರದ್ದುಮಾಡಿದ ನಂತರ ಕೂಡ, ಹಿಂದಿನ ಜಮೀನುದಾರರ ಬಳಿಯೇ ದೊಡ್ಡ ಪ್ರಮಾಣದ ಜಮೀನುಗಳು ಇದ್ದವು. 1954ರಲ್ಲಿ ಮಾಡಿದ ಮೊದಲ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ ಶೇಕಡಾ 3.7ರಷ್ಟು ಗ್ರಾಮೀಣ ಕುಟುಂಬಗಳ ನಿಯಂತ್ರಣದಲ್ಲಿ ಒಟ್ಟು ಜಮೀನಿನ ಶೇಕಡಾ 37 ರಷ್ಟು ಇದ್ದವು, ಅದೇ ಕಡಿಮೆ ಅಂದಾಜಾಗಿತ್ತು.
ಭೂಮಾಲಕತ್ವವನ್ನು ದುರ್ಬಲಗೊಳಿಸಲು ಮತ್ತು ಕಾರ್ಷಿಕ ಸಂಬಂಧಗಳಲ್ಲಿ ಪ್ರಜಾಸತ್ತಾತ್ಮಕ ಪರಿವರ್ತನೆ ತರಲು ಭೂಸುಧಾರಣೆಯು ಕಮ್ಯುನಿಸ್ಟರಿಗೆ ಮೂಲ ಘೋಷಣೆಯಾಗಿ ಪರಿಣಮಿಸಿತು. ಭೂಸುಧಾರಣೆಗಾಗಿನ ಹೋರಾಟಗಳು ಮತ್ತು ಭೂಮಿತಿಗೆ ಮೀರಿದ ಹೆಚ್ಚುವರಿ ಭೂಮಿಯನ್ನು ಭೂಹೀನರಿಗೆ ವಿತರಿಸಲು; ಒಕ್ಕಲೆಬ್ಬಿಸುವುದನ್ನು ನಿಲ್ಲಿಸಲು, ಭಾಗೀದಾರರ ಭೂಉತ್ಪನ್ನಗಳ ಪಾಲನ್ನು ಹೆಚ್ಚಿಸಲು ಮುಂತಾದ ಪ್ರಶ್ನೆಗಳ ಮೇಲೆ ದೇಶದ ವಿವಿಧ ಭಾಗಗಳಲ್ಲಿ ಹೋರಾಟಗಳನ್ನು ಬೆಳೆಸಲಾಯಿತು.
ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷವು ಚುನಾವಣೆಯಲ್ಲಿ ಗೆದ್ದು ಸರ್ಕಾರವನ್ನು ರಚಿಸಿದಾಗ ಮೊದಲ ಜಯ ಲಭಿಸಿತು. ಮೊದಲ ಕಮ್ಯುನಿಸ್ಟ್ ಸಚಿವ ಸಂಪುಟವು ಭೂಸುಧಾರಣಾ ಕ್ರಮಗಳನ್ನು ಜಾರಿಮಾಡಿತು, ಆ ಮೂಲಕ ಗೇಣಿ ಸಾಗುವಳಿದಾರರು ಭೂಮಾಲಕರಿಗೆ ಕನಿಷ್ಠ ಪರಿಹಾರ ನೀಡಿ ಜಮೀನನ್ನು ಪಡೆದರು. ಕೇಂದ್ರ ಸರ್ಕಾರವು ಕಮ್ಯುನಿಸ್ಟ್ ಸರ್ಕಾರವನ್ನು ವಜಾ ಮಾಡುವಲ್ಲಿ ಭೂಮಾಲಕರ ಮತ್ತು ಪ್ರತಿಗಾಮಿ ಹಿತಾಸಕ್ತಿಗಳ ವಿರೋಧವು ಒಂದು ಕಾರಣವಾಗಿತ್ತು.
ಭೂ ಹೋರಾಟಗಳ ಮುಂದಿನ ಅಲೆಯು ಪಶ್ಚಿಮ ಬಂಗಾಳದಲ್ಲಿ 1967ರಿಂದ 1969ರವರೆಗೆ ಎದ್ದಿತು. ಮೊದಲ ಸಂಯುಕ್ತ ರಂಗ ಸರ್ಕಾರದ ಅವಧಿಯಲ್ಲಿ, ಜೋತೆದಾರರ ವಿರುದ್ಧ ಅವರು ಹಿಡಿದಿಟ್ಟುಕೊಂಡಿದ್ದ ಬೇನಾಮಿ ಜಮೀನುಗಳನ್ನು ವಶಪಡಿಸಿಕೊಳ್ಳಲು ದೊಡ್ಡ ಹೋರಾಟಗಳಾದವು. ತದನಂತರ ಎಡರಂಗ ಸರ್ಕಾರವು 1977ರಲ್ಲಿ ಅಧಿಕಾರಕ್ಕೆ ಬಂದಾಗ ಪಾಲುಬೆಳೆಗಾರರಿಗೆ(ಶೇರ್ಕ್ರಾಪರ್ಸ್) ಸಂಬಂಧಪಟ್ಟ ಮೊದಲ ಐತಿಹಾಸಿಕ ಶಾಸನವನ್ನು ಅಂಗೀಕರಿಸಿತು. ಅದು ಬರ್ಗಾದಾರರಿಗೆ 75% ಉತ್ಪನ್ನಗಳನ್ನು ತಾವೇ ಇಟ್ಟುಕೊಳ್ಳಲು ಮತ್ತು ಅವುಗಳ ನೋಂದಾವಣೆ ಮೂಲಕ ಒಕ್ಕಲೆಬ್ಬಿಸುವುದರಿಂದ ರಕ್ಷಣೆಯ ಹಕ್ಕನ್ನು ಅದು ನೀಡಿತು. ಮಿತಿಗಿಂತ ಹೆಚ್ಚುವರಿ ಇದ್ದ ಭೂಮಿಯನ್ನು ವಶಕ್ಕೆ ಪಡೆಯಲಾಯಿತು ಮತ್ತು 12 ಲಕ್ಷ ಎಕರೆ ಜಮೀನನ್ನು 25 ಲಕ್ಷ ಭೂಹೀನರಿಗೆ ಹಾಗೂ ಅಂಚಿನಲ್ಲಿದ್ದ ಸಾಗುವಳಿ ಕುಟುಂಬಗಳಿಗೆ ಮರುಹಂಚಿಕೆ ಮಾಡಲಾಯಿತು.
ಪಶ್ಚಿಮ ಬಂಗಾಳ, ಕೇರಳ ಮತ್ತು ತ್ರಿಪುರಾಗಳಲ್ಲಿನ ಎಡ ನೇತೃತ್ವದ ಸರ್ಕಾರಗಳ ಅಡಿಯಲ್ಲಿ, ಭೂಸುಧಾರಣೆ ಜಾರಿಯು ಮುನ್ನಡೆಯಲ್ಲಿದೆ ಮತ್ತು ಕಾರ್ಷಿಕ ಸಂಬಂಧಗಳಲ್ಲಿ ಮುಖ್ಯವಾದ ಬದಲಾವಣೆಗಳನ್ನು ತರಲಾಗಿದೆ. ಬೇರೆ ರಾಜ್ಯಗಳಲ್ಲಿ ಆಗದಿದ್ದುದು ಕಮ್ಯುನಿಸ್ಟ್ ಚಳುವಳಿಯ ಕಾರಣದಿಂದಾಗಿ ಈ ಮೂರು ರಾಜ್ಯಗಳಲ್ಲಿ ಭೂಸುಧಾರಣೆ ಜಾರಿಗೆ ತರಲಾಗಿದೆ.
ಪಕ್ಷ ಮತ್ತು ಕಿಸಾನ್ ಸಭಾವು ಬಿಹಾರ, ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ಸ್ಥಳಗಳಲ್ಲಿ ಸ್ವಾತಂತ್ರ್ಯಾ ನಂತರದ ದಶಕಗಳಲ್ಲಿ ಜಮೀನಿಗಾಗಿ ಹಲವಾರು ಹೋರಾಟಗಳನ್ನು ನಡೆಸಿದೆ. ಈ ಹೋರಾಟಗಳ ಪರಿಣಾಮದಿಂದಾಗಿ ಮತ್ತು ಮುಖ್ಯವಾಗಿ 1970ರ ಮತ್ತು 80ರ ಆದಿಭಾಗದಲ್ಲಿ ಮೂರು ಎಡ ನೇತೃತ್ವದ ರಾಜ್ಯ ಸರ್ಕಾರಗಳು ಇತಿಮಿತಿಯ ಭೂಸುಧಾರಣೆಗಳನ್ನು ಜಾರಿ ಮಾಡುವುದರ ಮೂಲಕ ತೋರಿದ ಮಾದರಿಯಿಂದಾಗಿ ದೇಶದ ಉಳಿದ ಕಡೆಗಳಲ್ಲಿಯೂ ಅವು ಜಾರಿಯಾಗುತ್ತಿವೆ. ಕಾರ್ಷಿಕ ಸಂಬಂಧಗಳಲ್ಲಿ ಪ್ರಜಾಸತ್ತಾತ್ಮಕ ಪರಿವರ್ತನೆಗಾಗಿನ ಹೋರಾಟಗಳಲ್ಲಿ ಕಮ್ಯುನಿಸ್ಟ್ ಚಳುವಳಿಯು ಪ್ರಧಾನ ಪಾತ್ರ ವಹಿಸಿದೆ ಮತ್ತು ಕೊನೇ ಪಕ್ಷ ಆ ಮೂರು ರಾಜ್ಯಗಳಲ್ಲಿ ಯಶಸ್ಸನ್ನು ಸಾಧಿಸಿವೆ.
ಒಕ್ಕೂಟವಾದದ ಆಧಾರದಲ್ಲಿ ಭಾಷಾವಾರು ರಾಜ್ಯಗಳ ಸ್ಥಾಪನೆ
ಸ್ವಾತಂತ್ರ್ಯದ ಸಂದರ್ಭದಲ್ಲಿ, ಬ್ರಿಟಿಷ್ ಆಡಳಿತದ ಅಡಿಯಲ್ಲಿ ಮೂರು ಬಹು-ಭಾಷಾ ಪ್ರಾಂತಗಳು ಇದ್ದವು ಮತ್ತು ಹಲವಾರು ಬಗೆಯ ರಾಜರ ಸಂಸ್ಥಾನಗಳು ಹೆಚ್ಚಿನ ಸಂಖ್ಯೆಗಳಲ್ಲಿದ್ದವು. ಭಾಷಾ ರಾಷ್ಟ್ರೀಯತೆಯ ಆಧಾರದಲ್ಲಿ ಜನರಿಗೆ ಅವರದೇ ಆದ ಭಾಷಾವಾರು ಪ್ರಾಂತಗಳನ್ನು ಒದಗಿಸಬೆಕೆನ್ನುವುದು ಸ್ವಾತಂತ್ರ್ಯ ಚಳುವಳಿಯ ಬಹು ಮುಖ್ಯ ಗುರಿಗಳಲ್ಲಿ ಒಂದಾಗಿತ್ತು. 1920ರಷ್ಟು ಮುಂಚೆಯೇ, ಕಾಂಗ್ರೆಸ್ ಪಕ್ಷವು ಗಾಂಧೀಜಿಯವರ ಮುತುವರ್ಜಿಯಿಂದಾಗಿ ಭಾಷಾವಾರು ಆಧಾರದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಗಳನ್ನು ರಚಿಸಿತ್ತು. ಆನಂತರ, ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯಗಳ ರಚನೆಗೆ ಕಾಂಗ್ರೆಸ್ ಬದ್ಧವಾಗಿತ್ತು. ಆದರೆ, ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ, ನೆಹರೂ ಸರ್ಕಾರವು ಈ ಭರವಸೆಯಿಂದ ಹಿಂದಕ್ಕೆ ಸರಿಯಿತು. ಏಕೀಕೃತ ಮಾರುಕಟ್ಟೆಯನ್ನು ಹೊಂದಬೇಕೆಂಬ ತಮ್ಮ ಆಶಯಕ್ಕೆ ಅದು ಅಡಚಣೆಯಾಗಬಹುದು ಎಂದೆಣಿಸಿದ ದೊಡ್ಡ ಬಂಡವಾಳಶಾಹಿಗಳು ಮತ್ತವರ ಪ್ರತಿನಿಧಿಗಳು ಭಾಷಾವಾರು ರಾಜ್ಯಗಳ ರಚನೆಯನ್ನು ವಿರೋಧಿಸಿದರು.
ಭಾಷೆಯ ಸಂಬಂಧದ ರಾಷ್ಟ್ರೀಯ ತತ್ವಕ್ಕೆ ಮಾನ್ಯತೆ ನೀಡುವ ತನ್ನ ರಾಷ್ಟ್ರೀಯ ನೀತಿಯನ್ನು ಕಮ್ಯುನಿಸ್ಟ್ ಪಕ್ಷವು ಸ್ವಾತಂತ್ರ್ಯಪೂರ್ವ ಅವಧಿಯಲ್ಲಿ ವಿಶದಪಡಿಸಿತ್ತು. ಭಾರತವು ಭಾಷಿಕ ತತ್ವದ ಆಧಾರದಲ್ಲಿನ ಎಲ್ಲಾ ರಾಜ್ಯಗಳ ಒಂದು ಒಕ್ಕೂಟವಾಗಬೇಕೆಂದು ಅದು ಬಯಸಿತ್ತು.
ಭಾರತೀಯ ಪ್ರಭುತ್ವದ ಸಂರಚನೆಯ ಪ್ರಜಾಪ್ರಭುತ್ವೀಕರಣದಲ್ಲಿ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಭದ್ರವಾಗಿಸಲು ಭಾಷಾವಾರು ರಾಜ್ಯಗಳ ರಚನೆಯು ಒಂದು ಮಹತ್ವದ ಹೆಜ್ಜೆಯಾಗಿದೆ. 1940ರಲ್ಲಿ, ಭಾಷಾವಾರು ರಾಜ್ಯಗಳ ರಚನೆಯನ್ನು ಒಂದು ಪ್ರಮುಖವಾದ ಪ್ರಜಾಸತ್ತಾತ್ಮಕ ಹಾಗೂ ಪಾಳೇಗಾರಿ-ವಿರೋಧಿ ಕೆಲಸವೆಂದು ಕಮ್ಯುನಿಸ್ಟ್ ಮುಖಂಡರು ಸ್ಪಷ್ಟಪಡಿಸಿದ್ದರು. ಮದರಾಸು ಪ್ರಾಂತದ ಮಲಬಾರ್ ಮತ್ತು ತಿರುವಾಂಕೂರು ಹಾಗೂ ಕೊಚ್ಚಿ ರಾಜಸಂಸ್ಥಾನಗಳಲ್ಲಿರುವ ಮಲೆಯಾಳಿ ಮಾತನಾಡುವವರ ಆಧಾರದಲ್ಲಿ ಒಂದು ರಾಜ್ಯವನ್ನು ಹೊಂದುವ ಹಕ್ಕು ಒಂದೂವರೆ ಕೋಟಿ ಮಲೆಯಾಳಿಗಳಿಗೆ ಇದೆ ಎಂಬ ಕರಪತ್ರವೊಂದನ್ನು ಇಎಂಎಸ್ ನಂಬೂದಿರಿಪಾಡ್ ಬರೆದರು. ಪಿ.ಸುಂದರಯ್ಯ ಅವರು 1946ರಲ್ಲಿ ಒಂದು ಕಿರುಹೊತ್ತಿಗೆಯನ್ನು ಬರೆದು ವಿಶಾಲಾಂಧ್ರದ ಕಲ್ಪನೆಯನ್ನು ಮಂಡಿಸಿದರು, ಅದು ವಿಶಾಲಾಂಧ್ರ ಚಳುವಳಿಗೆ ಪ್ರಭಾವಶಾಲಿ ಘೋಷಣೆಯಾಗಿ ಪರಿಣಮಿಸಿತು. ಇದು ಭಾಷಾವಾರು ರಾಜ್ಯಗಳ ಚಳುವಳಿಗೆ 1950ರ ಆದಿಯಲ್ಲಿ ಕೇಂದ್ರಬಿಂದುವಾಗಿ ಹೊರಹೊಮ್ಮಿತು. ಸೋಮನಾಥ್ ಲಹರಿ ನತುನ್ ಬಂಗ್ಲಾ ಬರೆದರು, ಅದು ಭಾಷಾವಾರು ತತ್ವದ ಆಧಾರದಲ್ಲಿ ಬಂಗಾಳ ರಾಜ್ಯದ ರಚನೆಗೆ ಆಕೃತಿ ರೇಖೆಯಾಗಿ ಪರಿಣಮಿಸಿತು.
ಭಾಷಾವಾರು ರಾಜ್ಯ ರಚನೆಗೆ ಕೇಂದ್ರ ಸರ್ಕಾರದ ನಿರಾಕರಣೆಯ ಹಿನ್ನೆಲೆಯಲ್ಲಿ, ವಿಶಾಲಾಂಧ್ರ (ತೆಲುಗು ಮಾತನಾಡುವವರಿಗೆ ಒಂದು ರಾಜ್ಯ ಎಂದು ಎಲ್ಲರನ್ನೂ ಒಗ್ಗೂಡಿಸುವ), ಐಕ್ಯ ಕೇರಳ ಮತ್ತು ನಂತರ ಸಂಯುಕ್ತ ಮಹಾರಾಷ್ಟ್ರ, ಮಹಾಗುಜರಾತ್ ಹಾಗೂ ಪಂಜಾಬಿ ಸುಬಾ ಸೃಷ್ಟಿಗಾಗಿ ಚಳುವಳಿಗಳು ಬೆಳೆದವು.
ಆಂಧ್ರ ಪ್ರದೇಶ ಮತ್ತು ಸಂಯುಕ್ತ ಮಹಾರಾಷ್ಟ್ರಗಳ ರಚನೆಗಾಗಿ ಬೆಳೆದುಬಂದ ಸಾಮೂಹಿಕ ಚಳುವಳಿಯಲ್ಲಿ ಕಮ್ಯುನಿಸ್ಟ್ ಪಕ್ಷ ಮುಖ್ಯ ಪಾತ್ರ ವಹಿಸಿದೆ.
ಕೇಂದ್ರೀಕೃತ ಸಂಯುಕ್ತ ರಾಜ್ಯವನ್ನು ಬಯಸಿದ ದೊಡ್ಡ ಬಂಡವಾಳಶಾಹಿಗಳು ಮತ್ತು ಆರ್.ಎಸ್.ಎಸ್. ನ ವಿರೋಧದ ಹೊರತಾಗಿಯೂ ಭಾಷಾವಾರು ರಾಜ್ಯಗಳಿಗಾಗಿನ ಎಲ್ಲಾ ಹೋರಾಟಗಳು ಯಶಸ್ವಿಯಾದವು. ಭಾಷಾ ಸಾಮರಸ್ಯದ ಆಧಾರದಲ್ಲಿ ರಚಿತವಾದ ಇಂದಿನ ಭಾರತದ ಒಕ್ಕೂಟವು ಒಂದು ಗಮನಾರ್ಹವಾದ ಸಾಧನೆ, ಅದರ ಕೀರ್ತಿಯನ್ನು ಕಮ್ಯುನಿಸ್ಟರು ಪಡೆಯಬಹುದು. ಒಕ್ಕೂಟ ವ್ಯವಸ್ಥೆಗಾಗಿ ಮತ್ತು ರಾಜ್ಯಗಳ ಹಕ್ಕುಗಳನ್ನು ಖಾತರಿಪಡಿಸಲು ಭಾರತದ ಪ್ರಭುತ್ವವನ್ನು ಪುನರ್ರೂಪಿಸುವ ಸಲುವಾಗಿನ ಹೋರಾಟಕ್ಕೆ ಬುನಾದಿಯನ್ನು ಕಮ್ಯುನಿಸ್ಟ್ ಪಕ್ಷ ಹಾಕಿತ್ತು.
ಅಧಿಕಾರಗಳ ವಿಕೇಂದ್ರೀಕರಣ
ಕೇಂದ್ರ-ರಾಜ್ಯಗಳ ಸಂಬಂಧಗಳನ್ನು ಪುನರ್ರೂಪಿಸುವ ಮೂಲಕ ರಾಜ್ಯಗಳ ಹಕ್ಕುಗಳಿಗಾಗಿ ಹೋರಾಟ ಮಾಡುವುದರ ಹೊರತಾಗಿ, ಅಧಿಕಾರಗಳನ್ನು ಪಂಚಾಯತಿ ರಾಜ್ ವ್ಯವಸ್ಥೆಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ವಿಕೇಂದ್ರೀಕರಿಸಬೇಕೆಂದು ಕಮ್ಯುನಿಸ್ಟರು ಪ್ರತಿಪಾದಿಸಿದರು. ಎಡರಂಗ ಸರ್ಕಾರವು ಅಧಿಕಾರಗಳನ್ನು ಮತ್ತು ಸಂಪನ್ಮೂಲಗಳನ್ನು ವರ್ಗಾಯಿಸುವುದರೊಂದಿಗೆ ಮೂರು ಹಂತದ ಪಂಚಾಯತ್ ವ್ಯವಸ್ಥೆಯನ್ನು ಆರಂಭಿಸಿತು. 1978ರಲ್ಲಿ, ಈ ಸಬಲಗೊಂಡ ಪಂಚಾಯತ್ ವ್ಯವಸ್ಥೆಗೆ ಚುನಾವಣೆಗಳನ್ನು ನಡೆಸಲಾಯಿತು. ಇದು ಸಂವಿಧಾನದ 73ನೇ ಹಾಗೂ 74ನೇ ತಿದ್ದುಪಡಿಗಳನ್ನು ಅಂಗೀಕರಿಸುವುದಕ್ಕೆ ಒಂದು ದಶಕಕ್ಕೆ ಮುಂಚೆ ಆಗಿದೆ. ತ್ರಿಪುರಾದಲ್ಲಿ ಕೂಡ, ಪಂಚಾಯತ್ ವ್ಯವಸ್ಥೆ ಮತ್ತು ಜತೆಯಲ್ಲೇ ಸಂವಿಧಾನದ ಆರನೇ ಪರಿಚ್ಛೇದದಡಿಯಲ್ಲಿ ಆದಿವಾಸಿ ಸ್ವಾಯತ್ತ ಜಿಲ್ಲಾ ಮಂಡಳಿಗಳ ಸ್ಥಾಪನೆಯು ಬೇರು ಮಟ್ಟದ ಪ್ರಜಾಪ್ರಭುತ್ವದ ಪರಿಣಾಮಕಾರಿ ಸಾಧನವಾಗಿ ಪರಿಣಮಿಸಿದೆ. ಕೇರಳದಲ್ಲಿ, 1996ರಲ್ಲಿ ಎಲ್.ಡಿ.ಎಫ್.ಸರ್ಕಾರವು ಪ್ರಜಾಸತ್ತಾತ್ಮಕ ವಿಕೇಂದ್ರೀಕರಣದೊಂದಿಗೆ ವಿಕೇಂದ್ರೀಕೃತ ಆರ್ಥಿಕ ಯೋಜನೆಗಳಿಗಾಗಿ ಜನರ ಆಂದೋಲನ ಎಂಬ ಅಪರೂಪದ ಕ್ರಮವನ್ನು ಶುರುಮಾಡಿತು, ಅದು ಗ್ರಾಮ ಸಭಾಗಳ ಅಭಿಪ್ರಾಯಗಳೊಂದಿಗೆ ಕೆಳಗಿನಿಂದ ಯೋಜನೆಗಳನ್ನು ರೂಪಿಸುವ ಪ್ರಕ್ರಿಯೆಯನ್ನು ಒಳಗೊಂಡಿತ್ತು.
ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಹೊಸ ಗಂಡಾಂತರ
ಕಮ್ಯುನಿಸ್ಟ್ ಪಕ್ಷವು ಆರಂಭದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವ್ಯಾಪಕಗೊಳಿಸಲು ಮತ್ತು ಗಾಢವಾಗಿಸಲು ಪ್ರಯತ್ನಿಸುತ್ತಿದೆ. ಅದನ್ನು ಎರಡು ಮಟ್ಟದಲ್ಲಿ ಮಾಡುತ್ತಿದೆ: ಮೊದಲನೆಯದಾಗಿ ಸಂಸದೀಯ ವೇದಿಕೆಗಳು ಮತ್ತು ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ನಡವಳಿಕೆಗಳನ್ನು ಬಲಪಡಿಸುವ ಮೂಲಕ. ಎರಡನೆಯದಾಗಿ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ದಮನ ಮಾಡುವ ಕರಾಳ ಕಾನೂನುಗಳ ವಿರುದ್ಧ ಕಮ್ಯುನಿಸ್ಟ್ ಚಳುವಳಿ ನಿರಂತರವಾಗಿ ಹೋರಾಡಿದೆ.
ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟದ ವಿಷಯದಲ್ಲಿ ಪಕ್ಷದ ಕಾರ್ಯಕ್ರಮವು ನೀಡಿದ ಎಚ್ಚರಿಕೆಯನ್ನು ಸಿಪಿಐ(ಎಂ) ಸದಾ ನೆನಪಿನಲ್ಲಿ ಇಟ್ಟಿರುತ್ತದೆ: “ದುಡಿಯುವ ಜನರಿಂದ ಮತ್ತು ಅವರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಪಕ್ಷಗಳಿಂದ ಸಂಸದೀಯ ವ್ಯವಸ್ಥೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುವುದಿಲ್ಲ. ಆಪತ್ತು ಬರುವುದು ಶೋಷಕ ವರ್ಗಗಳಿಂದ. ತಮ್ಮ ಸಂಕುಚಿತ ಹಿತಾಸಕ್ತಿಗಳನ್ನು ರಕ್ಷಿಸುವ ಒಂದು ಸಾಧನವನ್ನಾಗಿ ಸಂಸದೀಯ ವ್ಯವಸ್ಥೆಯನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಶಿಥಿಲಗೊಳಿಸುತ್ತಾರೆ. ಯಾವಾಗ ಜನರು ಸಂಸದೀಯ ಸಂಸ್ಥೆಗಳನ್ನು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಮುಂದಾಗುತ್ತಾರೋ ಮತ್ತು ದೊಡ್ಡ ಬಂಡವಾಳಶಾಹಿಗಳು ಮತ್ತು ಭೂಮಾಲಕರ ಪ್ರಭಾವದಿಂದ ದೂರ ಸರಿಯುತ್ತಾರೋ, ಆಗ ಇವರು ಸಂಸದೀಯ ಪ್ರಜಾಪ್ರಭುತ್ವವನ್ನು ತಮ್ಮ ಕಾಲಡಿಯಲ್ಲಿ ಹೊಸಕಿಹಾಕಲು ಹೇಸುವುದಿಲ್ಲ . ”
ಬಂಡವಾಳವಾದದ ಅಡಿಯಲ್ಲಿ, ಪ್ರಜಾಪ್ರಭುತ್ವದ ಬಲ ಕುಗ್ಗಿಸುವ ಕೆಲಸ ಸದಾ ನಡೆಯುತ್ತಿರುತ್ತದೆ. ನವ-ಉದಾರವಾದಿ ಆಳ್ವಿಕೆಯ ಆರಂಭದ ನಂತರ ಇದು ಹೆಚ್ಚು ಪ್ರಕಟವಾಗಿ ಕಾಣುತ್ತಿದೆ. ಸಂವಿಧಾನ-ದತ್ತ ಬಹುತೇಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಅಥವಾ ಸರ್ಕಾರಿ ಅಧಿಕಾರಿಗಳೇ ಉಲ್ಲಂಘಿಸುತ್ತಿದ್ದಾರೆ. ಇದನ್ನು ವಿಶೇಷವಾಗಿ ಕಾರ್ಮಿಕರು, ರೈತರು ಮತ್ತು ಇತರ ದುಡಿಯುವ ಜನರು ಹೋರಾಟಕ್ಕಿಳಿದಾಗ ಕಾಣಬಹುದು. ಪ್ರತಿಬಂಧಕ ಆದೇಶಗಳ ಮೂಲಕ ಗುಂಪುಗೂಡುವ ಹಕ್ಕನ್ನು ನಿರಾಕರಿಸಲಾಗುತ್ತದೆ, ಪೋಲಿಸರು ಮತ್ತಿತರ ಸರ್ಕಾರಿ ಅಂಗಸಂಸ್ಥೆಗಳನ್ನು ಅವರ ವಿರುದ್ಧ ಹರಿಬಿಡಲಾಗುತ್ತದೆ, ರಾಜಕೀಯ ಮುಖಂಡರುಗಳನ್ನು ಮತ್ತು ಕಾರ್ಯಕರ್ತರನ್ನು ಬಂಧಿಸಲು ಹಲವಾರು ಕರಾಳ ಕಾನೂನುಗಳನ್ನು ಬಳಸುವುದರ ಮೂಲಕ ಪ್ರತಿಬಂಧಕ ಬಂಧನ ಮಾಡಲಾಗುತ್ತದೆ.
ಸ್ವಾತಂತ್ರ್ಯಾನಂತರದ ದಶಕಗಳಲ್ಲಿ, ಕಾರ್ಮಿಕ ವರ್ಗದ ಮತ್ತು ದುಡಿಯುವ ಇತರ ವಿಭಾಗಗಳ ಜನರ ಹಕ್ಕುಗಳನ್ನು ಪ್ರತಿಪಾದಿಸಲು ಕಮ್ಯುನಿಸ್ಟರು ನಿರಂತರವಾಗಿ ಹೋರಾಡುತ್ತಿದ್ದಾರೆ, ಅನೇಕ ವೇಳೆ ಪ್ರಭುತ್ವದ ದಮನವನ್ನು ಎದುರಿಸಿ. ಮೀಸಾ(ಆಂತರಿಕ ಭದ್ರತಾ ನಿರ್ವಹಣಾ ಕಾಯಿದೆ), ಎನ್.ಎಸ್.ಎ.(ರಾಷ್ಟ್ರೀಯ ಸುರಕ್ಷಾ ಕಾಯಿದೆ), ಟಾಡಾ(ಭಯೋತ್ಪಾದಕರು ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ನಿರ್ಬಂಧ ಕಾಯಿದೆ), ಪೋಟಾ(ಭಯೋತ್ಪಾದನೆ ತಡೆ ಕಾಯಿದೆ) ಮತ್ತು ಯುಎಪಿಎ(ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ) ಮುಂತಾದ ಪ್ರತಿಬಂಧಕ ಬಂಧನಕ್ಕೆ ಅವಕಾಶ ಕೊಡುವ ಕರಾಳ ಶಾಸನಗಳ ಬಳಕೆಯನ್ನು ಪಕ್ಷವು ಸತತವಾಗಿ ವಿರೋಧಿಸುತ್ತಲೇ ಬಂದಿದೆ. ಆಳುವ ವರ್ಗಗಳ ಸ್ವಾರ್ಥ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಪ್ರಜಾಪ್ರಭುತ್ವವನ್ನು ಹೇಗೆ ತುಳಿಯಲಾಯಿತು ಎನ್ನುವ ತೀರ ಉಗ್ರ ನಿದರ್ಶನವನ್ನು ಇಂದಿರಾ ಗಾಂಧಿಯವರು 1975 ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರಲ್ಲಿ ಕಂಡಿದ್ದೇವೆ. ಸಿಪಿಐ(ಎಂ) ತುರ್ತು ಪರಿಸ್ಥಿತಿಯನ್ನು ವಿರೋಧಿಸಿತು ಮತ್ತು ಹೋರಾಡಿತು, ನೂರಾರು ಕಾರ್ಯಕರ್ತರು ಬಂಧನಕ್ಕೊಳಗಾದರು.
ಜನ ಒಂದು ಕಡೆ ಸೇರುವ, ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವ ಮತ್ತು ಕಾರ್ಮಿಕರು ಮುಷ್ಕರ ಮಾಡುವ ಹಕ್ಕನ್ನು, ಬಳಸಲು ಸಾಧ್ಯವಾಗದೇ ಹೋದರೆ, ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ.
ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ನಿರಂತರ ಹೋರಾಟಗಳ ಕಾರಣದಿಂದ ಈ ಮೇಲೆ ನಮೂದಿಸಿದ ಕೆಲವು ಶಾಸನಗಳನ್ನು ಹಿಂತೆಗೆದುಕೊಳ್ಳಲಾಗಿದೆ ಅಥವಾ ರದ್ದಾಗುವಂತೆ ನೋಡಿಕೊಳ್ಳಲಾಗಿದೆ. ಆದರೆ ಎನ್.ಎಸ್.ಎ ಮತ್ತು ಯುಎಪಿಎ(ಬಿಜೆಪಿ ಸರ್ಕಾರವು ಅದನ್ನು ಇನ್ನೂ ಕರಾಳವಾಗಿಸಿದೆ) ಕಾನೂನು ಪುಸ್ತಕದಲ್ಲಿ ಹಾಗೆಯೇ ಮುಂದುವರಿದಿವೆ ಮತ್ತು ಈಗಲೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಸಂವಿಧಾನದಲ್ಲಿರುವ ಕೆಲವು ಕಾನೂನು ವಿಧಿಗಳನ್ನು ಪ್ರಜಾಪ್ರಭುತ್ವ ದಮನ ಮಾಡಲು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವುಗಳಲ್ಲಿ ಒಂದು 356ನೆ ಪರಿಚ್ಛೇದ; ಕಾನೂನು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಯಂತ್ರವು ಕುಸಿದಿದೆ ಎಂದು ರಾಜ್ಯಪಾಲರು ನೀಡುವ ವರದಿಯ ಆಧಾರದಲ್ಲಿ ರಾಜ್ಯ ಸರ್ಕಾರವನ್ನು ವಜಾ ಮಾಡಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುವ ಕಾನೂನು ಅದು. ಈ ಕಾನೂನನ್ನೇ ಬಳಸಿ ಮೊಟ್ಟ ಮೊದಲ ಚುನಾಯಿತ ಕೇರಳ ಕಮ್ಯುನಿಸ್ಟ್ ಸರ್ಕಾರವನ್ನು 1959 ರಲ್ಲಿ ವಜಾ ಮಾಡಲಾಗಿತ್ತು. ಈ ಕಾನೂನನ್ನೇ ಬಳಸಿ ಪಶ್ಚಿಮ ಬಂಗಾಳ ಮತ್ತಿತರ ಹಲವಾರು ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕ ಘೋಷಿಸಲಾಗಿತ್ತು. ಪ್ರಜಾಪ್ರಭುತ್ವ ಮತ್ತು ರಾಜ್ಯಗಳ ಹಕ್ಕುಗಳ ವಿರುದ್ಧದ ಕರಾಳ ಕಾನೂನಾಗಿರುವ ಈ 356ನೇ ಪರಿಚ್ಛೇದದ ನಿರಂತರ ದುರ್ಬಳಕೆಯ ವಿರುದ್ಧ ಜನಾಭಿಪ್ರಾಯ ಮೂಡಿಸಲು ಮತ್ತು ಇತರ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿನೆರೆಸುವಲ್ಲಿ ಸಿಪಿಐ(ಎಂ) ಪ್ರಮುಖ ಪಾತ್ರ ವಹಿಸಿದೆ. ಈ ನಿರಂತರ ಆಂದೋಲನದ ಫಲವಾಗಿ, ಅಂತಿಮವಾಗಿ 1994ರಲ್ಲಿ, ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟಿನ ತೀರ್ಪು 356ನೇ ವಿಧಿಯ ಬಳಕೆಗೆ ಕೆಲವು ನಿಬಂರ್ಧಗಳನ್ನು ಹೇರಿದೆ ಮತ್ತು ನ್ಯಾಯಾಂಗದ ಪರಿಶೀಲನೆಗೆ ಒಳಗಾಗಿದೆ ಎಂದು ಹೇಳಿದೆ.
ಆಳುವ ವರ್ಗಗಳು ನಿರ್ದಿಷ್ಟವಾಗಿ ಒಂದು ಬಲಿಷ್ಠ ಕಮ್ಯುನಿಸ್ಟ್ ಚಳುವಳಿ ಬೆಳೆಯುವುದಕ್ಕೆ ಮತ್ತು ವಿಶೇಷವಾಗಿ ರಾಜ್ಯಗಳಲ್ಲಿರುವ ಎಡ ನೇತೃತ್ವದ ಸರ್ಕಾರಗಳಿಗೆ ವಿರೋಧವಾಗಿದ್ದಾರೆ. ಹಾಗಾಗಿಯೇ ಎರಡು ಅವಧಿಗಳಲ್ಲಿ – ಪಶ್ಚಿಮ ಬಂಗಾಳ(1971-1977) ಮತ್ತು ತ್ರಿಪುರಾ(1988-1993) – ಅರೆ-ಫ್ಯಾಸಿಸ್ಟ್ ಭಯೋತ್ಪಾದನೆಯನ್ನು ನಾವು ಕಂಡೆವು. ಪ್ರಜಾಪ್ರಭುತ್ವದ ಮೇಲಿನ ಈ ದಾಳಿಗಳು ಮತ್ತು ಭಯೋತ್ಪಾದನೆ ಮತ್ತೆ ಇನ್ನೂ ಉಗ್ರವಾಗಿ ಈ ರಾಜ್ಯಗಳಲ್ಲೇ – ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸಿನಿಂದ ಮತ್ತು ತ್ರಿಪುರಾದಲ್ಲಿ ಬಿಜೆಪಿಯಿಂದ – ತಲೆಎತ್ತಿವೆ.
ದುಡಿಯುವ ಜನರು ಸಂಸದೀಯ ಸಂಸ್ಥೆಗಳನ್ನು ಬಳಸಿ ತಮ್ಮ ಹಿತಾಸಕ್ತಿಗಳನ್ನು ಮುನ್ನೆಲೆಗೆ ತಂದರೆ ಆಳುವ ವರ್ಗಗಳು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತವೆ ಎಂದು ಪಕ್ಷದ ಕಾರ್ಯಕ್ರಮದ ಎಚ್ಚರಿಕೆ ಇಲ್ಲಿ ಸಾಬೀತಾಗಿದೆ. ಆದ್ದರಿಂದಲೇ, ಕಮ್ಯುನಿಸ್ಟ್ ಚಳುವಳಿಯ ಎರಡು ಬಲಿಷ್ಠ ನೆಲೆಗಳಲ್ಲಿ ಮತ್ತು ಇಡೀ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಲೇ ಇದ್ದೇವೆ.
ಹಿಂದುತ್ವ ಸರ್ವಾಧಿಕಾರಿ ಆಡಳಿತ ಅಧಿಕಾರಕ್ಕೆ ಬಂದ ನಂತರ ಅದು ಇನ್ನೂ ಕಷ್ಟಕರವಾಗಿ ಪರಿಣಮಿಸಿದೆ. ಕಳೆದ ಆರು ವರ್ಷಗಳಲ್ಲಿ, ಪ್ರಜಾಪ್ರಭುತ್ವ ರಕ್ಷಣೆ ಮತ್ತು ಸಂವಿಧಾನ ದತ್ತ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಹೋರಾಟದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ.
ಪ್ರಭುತ್ವದ ವರ್ಗ ಲಕ್ಷಣ ಹೇಗಿದೆಯೆಂದರೆ ಸಂಸದೀಯ ಪ್ರಜಾಪ್ರಭುತ್ವವು ಹೆಚ್ಚು ಹೆಚ್ಚಾಗಿ ದೊಡ್ಡ ವ್ಯಾಪಾರಿಗಳ, ಗ್ರಾಮೀಣ ಶ್ರೀಮಂತರ ಮತ್ತು ಸುಲಿಗೆಕೋರ ಬಂಡವಾಳಶಾಹಿ ಶಕ್ತಿಗಳ ಆಡೊಂಬಲವಾಗಿದೆ. ನವ-ಉದಾರವಾದಿ ವ್ಯವಸ್ಥೆಯಲ್ಲಿ ವ್ಯಾಪಾರ ಮತ್ತು ರಾಜಕೀಯ ಪರಸ್ಪರ ಬೆರೆತುಹೋಗಿವೆ.
ಹಣಬಲದಿಂದಾಗಿ ಪ್ರಜಾಪ್ರಭುತ್ವದ ವಿಕೃತಿ, ಕಾರ್ಪೊರೇಟುಗಳು ಮತ್ತು ಹಣಕಾಸು ಬಂಡವಾಳವು ಚುನಾವಣೆಗೆ ಒದಗಿಸುತ್ತಿರುವ ಹಣದ ಪ್ರವಾಹದಿಂದ ಚುನಾವಣಾ ವ್ಯವಸ್ಥೆಯ ಮಾಲಿನ್ಯ ಇವು ದೊಡ್ಡ ಹಾವಳಿಯಾಗಿ ಪರಿಣಮಿಸಿವೆ. ಮೋದಿ ಸರ್ಕಾರವು ಕಾನೂನುಗಳನ್ನು ತಿದ್ದುಪಡಿ ಮಾಡಿದೆ, ಆ ಮೂಲಕ ಸ್ವದೇಶಿ ಹಾಗೂ ವಿದೇಶಿ ಕಾಪೊರೇಟ್ಗಳು ಎರಡೂ ರಾಜಕೀಯ ಪಕ್ಷಗಳಿಗೆ ಹಣ ನೀಡುತ್ತಿವೆ ಮತ್ತು ಚುನಾವಣಾ ಬಾಂಡುಗಳ ಮೂಲಕ ಅನಾಮಧೇಯರಾಗಿ ಅವರು ಹಣ ದೇಣಿಗೆ ನೀಡಬಹುದು.
ಪ್ರಜಾಪ್ರಭುತ್ವದ ವಿರುದ್ಧದ ಬಿಜೆಪಿ ಸರ್ವಾಧಿಕಾರಿ ಆಡಳಿತದ ದಾಳಿಯು ಇನ್ನೂ ಹೆಚ್ಚು ಗಂಭೀರವಾದದ್ದು, ಏಕೆಂದರೆ ಅದು ಯಾವುದೋ ಒಂದು ಹಕ್ಕು ಅಥವಾ ಮತ್ತೊಂದನ್ನು ಅಮಾನತು ಮಾಡಲು ಬಯಸುತ್ತಿಲ್ಲ. ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಇಡಿಯಾಗಿ ಬುಡಮೇಲು ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಿಂದು ಬಹುಸಂಖ್ಯಾತ ಗಣತಂತ್ರವನ್ನು ಸ್ಥಾಪಿಸುವುದು ಅವರ ಗುರಿಯಾಗಿದೆ.
ಉಪಸಂಹಾರ
ಕಾರ್ಷಿಕ ಸುಧಾರಣೆಗಳಿಗಾಗಿ, ಭಾರತೀಯ ಪ್ರಭುತ್ವದ ಸಂರಚನೆಯನ್ನು ಹೆಚ್ಚು ಒಕ್ಕೂಟದ ಹಾದಿಯಲ್ಲಿ ಮರುರೂಪಿಸಲು ಮಾಡಿದ ಹೋರಾಟ ಮತ್ತು ಆಳುವ ವರ್ಗಗಳ ದಮನದ ಎದುರು ಪ್ರಜಾಪ್ರಭುತ್ವವನ್ನು ಗಾಢವಾಗಿಸಲು ನಿರಂತರವಾಗಿ ಶ್ರಮಿಸಿರುವುದು – ಕಮ್ಯುನಿಸ್ಟ್ ಚಳುವಳಿಯ ಈ ಶ್ರೀಮಂತ ಪರಂಪರೆಯನ್ನು ನಾವು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆಗೆ ಹಿಂದೆ ಎಂದೂ ಈಗಿನಷ್ಟು ಗಂಭೀರವಾದ ಆಪತ್ತು ಇರಲಿಲ್ಲ. ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ಮತ್ತು ಎಲ್ಲಾ ಪ್ರಜಾಪ್ರಭುತ್ವ-ವಿರೋಧಿ ಶಾಸನಗಳು ಮತ್ತು ಕ್ರಮಗಳನ್ನು ವಿರೋಧ ಮಾಡುವಲ್ಲಿ ದೀರ್ಘ ದಾಖಲೆ ಹೊಂದಿರುವ ಕಮ್ಯುನಿಸ್ಟರು ಇವತ್ತು ಸವಾಲನ್ನು ಎದುರಿಸಲು ಎದ್ದು ನಿಲ್ಲಬೇಕಿದೆ. ಪ್ರಜಾಪ್ರಭುತ್ವ ಮತ್ತ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ಎಲ್ಲಾ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ವೇಗವರ್ಧಕ ಪಾತ್ರ ವಹಿಸಬೇಕಾಗಿದೆ.