ಸಂಪುಟ 10 ಸಂಚಿಕೆ 3 ಜನವರಿ 17, 2016
ರಾಜ್ಯದ ಕಾರ್ಮಿಕ ಆಯುಕ್ತರು ವಿವಿಧ ಕಾರ್ಮಿಕ ಕಾಯ್ದೆಗಳಡಿ ತಿದ್ದುಪಡಿಯನ್ನು ಪ್ರಸ್ತಾಪಿಸಿ ಮಾಲಕರ ಸಂಘಟನೆ Assocham (ಅಸೋಚಾಂ) ಸರ್ಕಾರಕ್ಕೆ ಕಳುಹಿಸಿರುವ ಮನವಿ ಪತ್ರವನ್ನು ಅಭಿಪ್ರಾಯ ಸೂಚಿಸಲಿಕ್ಕಾಗಿ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಗೆ ಕಳಿಸಿದ್ದರು. ಈ ಬಗ್ಗೆ ತನ್ನ ಅಭಿಪ್ರಾಯ ತಿಳಿಸುತ್ತ ಇದು ‘ಚಾಲ್ತಿಯಲ್ಲಿರುವ ಕಾರ್ಮಿಕ ಕಾನೂನುಗಳು ಸಮರ್ಪಕವಾಗಿ ಜಾರಿ ಮಾಡದೆ ಇರುವ ಮಾಲೀಕರ ಅಹವಾಲು’, ಮತ್ತು ಇದರ ಭಾಗವಾಗಿ ನೀಡಿರುವ ಸೂಚನೆಗಳು ಎಂದು ಅಭಿಪ್ರಾಯ ಪಟ್ಟಿದೆ. ಕೈಗಾರಿಕೆಯ ಉತ್ಪಾದನೆಗೆ, ಸಾಮಾಜಿಕ ಬೆಳವಣಿಗೆಗೆ ತಮ್ಮ ದುಡಿಮೆಯನ್ನು ಅರ್ಪಿಸುವ ಕಾರ್ಮಿಕ ವರ್ಗವನ್ನು ದುರ್ಬಲಗೋಳಿಸುವ ಪ್ರಯತ್ನ ಇದಾಗಿದೆ. ಇದನ್ನು ತಿರಸ್ಕರಿಸಬೇಕು ಎಂದು ಸಿಐಟಿಯು ಕಾರ್ಮಿಕ ಆಯುಕ್ತರನ್ನು ಆಗ್ರಹಿಸಿದೆ.
ಪ್ರಮುಖವಾಗಿ ಕೈಗಾರಿಕಾ ವಿವಾದಗಳ ಕಾಯ್ದೆ 1947 ರ ಹಲವು ಸೆಕ್ಷನ್‍ಗಳಿಗೆ ಅವರು ಪ್ರಸ್ತಾಪಿಸಿರುವ ತಿದ್ದುಪಡಿಗಳು ಮತ್ತಷ್ಟು ಕೈಗಾರಿಕಾ ಅಶಾಂತಿಗೆ ಮತ್ತು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತವೆ ಎನ್ನುತ್ತ ಅದು ವಿವಿಧ ಸೆಕ್ಷನ್‍ಗಳಿಗೆ ಸೂಚಿಸಿರುವ ತಿದ್ದುಪಡಿಗಳು ಏಕೆ ಅಗತ್ಯವಿಲ್ಲ ಎಂಬುದನ್ನು ಸೆಕ್ಷನ್‍ವಾರಾಗಿ ಸಿಐಟಿಯು ತನ್ನ ಪತ್ರದಲ್ಲಿ ವಿವರಿಸಿದೆ. Assocham ನವರು ಸೂಚಿಸಿರುವ ಬದಲಾವಣೆಗಳು ಮಾಲೀಕರಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲು ಸಂಪೂರ್ಣ ಅಧಿಕಾರವನ್ನು ಖಾತ್ರಿಗೊಳಿಸುವಂತಿವೆ, ಜಗತ್ತಿನ ಎದುರು ಅಮಾನವೀಯ ಶೋಷಣೆಗೆ ಅವಕಾಶ ನೀಡಿರುವ ದೇಶವೆಂದು ನಮ್ಮ ದೇಶವನ್ನು ಗುರುತಿಸುವಂತೆ ಮಾಡುವ, ಮತ್ತೆ ದುಡಿಯುವ ವರ್ಗವನ್ನು ಗುಲಾಮಗಿರಿಗೆ ತಳ್ಳುವ ಯತ್ನವಾಗಿದೆ ಎಂದಿರುವ ಸಿಐಟಿಯು ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಂಡುಬರುವ ಕೈಗಾರಿಕಾ ಆಶಾಂತಿಗೆ ಕರ್ನಾಟಕ ರಾಜ್ಯವನ್ನೂ ಕೊಂಡೊಯ್ಯುತ್ತದೆ ಎಂದು ಎಚ್ಚರಿಸಿದೆ.
ಯಾವುದೇ ಉದ್ದಿಮೆ ಹಾಗು ಕೈಗಾರಿಕೆಗಳಿಗೆ ಕಾನೂನುಗಳಿಂದ ವಿನಾಯಿತಿ ಕರ್ನಾಟಕ ರಾಜ್ಯ ಕೈಗಾರಿಕಾ ಶಾಂತಿಗೆ ಹೆಸರಾದಲ್ಲಿ ಮಾತ್ರವೇ ಬಂಡವಾಳ ಆಕರ್ಷಣೆ ಸಾಧ್ಯವಾಗುತ್ತದೆ. ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದಾದ ಮುಕ್ತ ಶೋಷಣೆಗೆ ಯಾವುದೇ ಉದ್ದಿಮೆಗೂ ಅವಕಾಶ ನೀಡಬಾರದು ಎಂದು ಸಿಐಟಿಯು ಕರ್ನಾಟಕ ರಾಜ್ಯಸಮಿತಿ ಆಗ್ರಹಿಸಿದೆ.
ಈ ನಿಟ್ಟಿನಲ್ಲಿ, ಅಸೋಚಾಮ್‍ನ ಸೂಚನೆಗಳ ಹಿನ್ನೆಲೆಲಯಲ್ಲಿ ಸಿಐಟಿಯು ಈ ಕೆಳಗಿನಂತೆ ತನ್ನ ನಿಲುವುಗಳನ್ನು ಪುನರುಚ್ಚರಿಸಿದೆ:
ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವುದನ್ನು ಕಡ್ಡಾಯಗೊಳಿಸುವ ಕಾನೂನು ಜಾರಿಗೆ ಕಾರ್ಮಿಕ ಸಂಘಗಳು ಬೇಡಿಕೆ ಇಡುತ್ತಿವೆ. ಕಾರ್ಮಿಕರ ಅಭಿಪ್ರಾಯಕ್ಕೆ ಹಾಗು ಆಯ್ಕೆಯಂತೆ ಮಾಡಿಕೊಳ್ಳುವ ಕಾನೂನು ಬದ್ಧ ಕಾರ್ಮಿಕ ಸಂಘಟನೆಗಳಿಗೆ ಮಾಲೀಕರು ಮಾನ್ಯತೆ ನೀಡದೆ ಇರುವುದೇ ಹಲವು ಕೈಗಾರಿಕಾ ವಿವಾದಗಳಿಗೆ ಕಾರಣವಾಗುತ್ತಿದೆ.
ಕೆಲಸದ ಅವಧಿಯನ್ನು ಹೆಚ್ಚು ಮಾಡುವುದು, ಓವರ್ ಟೈಂ ಕೆಲಸಕ್ಕೆ ಮುಕ್ತ ಅವಕಾಶಕೊಡಬೇಕು, ಓವರ್ ಟೈಂ ವೇತನವನ್ನು ಕಡಿತಗೊಳಿಸಬೇಕು ಎಂಬೆಲ್ಲಾ ಅಸೋಚಾಮ್ ಸೂಚನೆಗಳು “ಲಾಭ ಮಾತ್ರ ಮಾಲೀಕರಿಗೆ, ಕಷ್ಟ ಮಾತ್ರ ಸಮಾಜಕ್ಕೆ” ಎಂಬ ಅವರ ಕಣ್ಣೊಟವನ್ನು ಪ್ರದಶಿಸುತ್ತದೆ. ಇದು ವ್ಯಾಪಾರ ಹಾಗು ಲಾಭ ಹೆಚ್ಚಾಗುವಾಲೇ ನಿರುದ್ಯೋಗವೂ ಹೆಚ್ಚಾಗುವುದಕ್ಕೆ ಅವಕಾಶ ಕಲ್ಪಿಸುತ್ತದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯ ಒತ್ತಡಗಳನ್ನು, ಹಾಗು ಬೇಡಿಕೆಗಳನ್ನು ಈಡೇರಿಸಲು ದಿನದ 24 ಗಂಟೆಗಳು, ಎಲ್ಲಾ ದಿನಗಳು ಉತ್ಪಾದನೆ ನಡೆಸಲು ಉದ್ಯೋಗ ಅವಕಾಶಗಳನ್ನು ಸೃಷ್ಟಿಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ಬಳಿಸಿ ಕೆಲಸದ ಅವಧಿಯನ್ನು ಪಾಳಿಗೆ 6 ಗಂಟೆಗಳು ಹಾಗು ದಿನಕ್ಕೆ ನಾಲ್ಕು ಪಾಳಿಗಳು, ವಾರದಲ್ಲಿ 36 ಗಂಟೆಗಳ ಕೆಲಸ ಎಂದು ಸೂಚಿಸಿದರೆ ಕೈಗಾರಿಕೆ ಹಾಗು ಕಾರ್ಮಿಕರಿಗೆ ಮಾತ್ರವಲ್ಲದೆ ಸಮಾಜಕ್ಕೂ ಅನುಕೂಲವಾಗುತ್ತದೆ.
ಇತ್ತೀಚಿನ ತಂತ್ರಜ್ಞಾನದ ಅಭಿವೃದ್ದಿಯಿಂದ ಅತಿ ಕಡಿಮೆ ಕಾರ್ಮಿಕರನ್ನು ನೇಮಕ ಮಾಡಿಕೊಂಡು ಅತಿಹೆಚ್ಚು ವ್ಯಾಪಾರ ವಹಿವಾಟು ಮಾಡಲು ಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಖ್ಯೆ ಆಧಾರದಲ್ಲಿ ಯಾವುದೇ ಉದ್ದಿಮೆಯನ್ನು ಸಣ್ಣ ಕೈಗಾರಿಕೆಗಳೆಂದು ನಿರ್ಧರಿಸಲು ಮತ್ತು ಆ ಕಾರಣ ಕೊಟ್ಟು ಅದಕ್ಕೆ ಕಾರ್ಮಿಕ ಕಾನೂನುಗಳಿಂದ ವಿನಾಯ್ತಿ ಕೊಡಲುಸಾಧ್ಯವಿಲ್ಲ.
ಮಹಿಳೆಯರಿಗೆ ನೀಡಬೇಕಾದ ರಕ್ಷಣೆಯನ್ನು ಆಡಳಿತವರ್ಗಗಳು ಸಂಪೂರ್ಣವಾಗಿ ವಹಿಸಲೇಬೇಕು.. ಮಹಿಳಾ ಕಾರ್ಮಿಕರಿಗೆ ರಕ್ಷಣೆ ನೀಡುವ ಹೊಣೆಯಿಂದ ಮಾಲೀಕರಿಗೆ ಯಾವುದೇ ವಿನಾಯಿತಿ ನೀಡಬಾರದು.
ಗುತ್ತಿಗೆ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ರದ್ಧುಗೊಳಿಸುವ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕು.
ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ 1 ಲಕ್ಷದ 20 ಸಾವಿರ ನೌಕರರು ದುಡಿಯುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ರಾಜ್ಯ ಸರಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ನೌಕರರ ವೇತನ ಪರಿಷ್ಕರಣೆ ಮತ್ತು ಸೇವಾ ಸೌಲಬ್ಯಗಳ ವಿಚಾರದಲ್ಲಿ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಾ ಏಕ ಪಕ್ಷೀಯವಾಗಿ ಕೇವಲ ವೇತನದಲ್ಲಿಅಲ್ಪ ಸ್ವಲ್ಪ ಹೆಚ್ಚಳವನ್ನು ನಾಲ್ಕು ವರ್ಷಗಳಿಗೆ ಒಂದು ಬಾರಿ ಪ್ರಕಟಿಸುತ್ತಿದ್ದಾರೆ. ಇಂತಹ ಏಕಪಕ್ಷೀಯ ಆಡಳಿತ ವ್ಯವಸ್ಥೆಯ ಕಾರಣದಿಂದ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಬಹಳ ಕಠಿಣವಾದ ಪರಿಸ್ಥಿತಿಗಳನ್ನು ಎದುರಿಸಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ ಪ್ರಜಾಪ್ರಭುತ್ವ ರಹಿತ ಆಡಳಿತ ವಿಧಾನದಿಂದಾಗಿ ರಾಜ್ಯದ ಹಲವು ಡಿಪೋಗಳಲ್ಲಿ ನೌಕರರು ಆತ್ಮಹತ್ಯೆಗಳಿಗೆ ಒಳಗಾಗುವ ದುಸ್ಥಿತಿಗಳು ಉಂಟಾಗುತ್ತಿವೆ.
ನಾಲ್ಕು ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆಯು ದಿನಾಂಕ 1-1-2016 ರಿಂದ ಅನ್ವಯವಾಗುವಂತೆ ಆಗಬೇಕಾಗಿದೆ. ನೌಕರರ ನ್ಯಾಯಯುತವಾಗಿರುವ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಗಳು ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಪ್ರಜಾಪ್ರಭುತ್ವ ವಿಧಾನದಲ್ಲಿ ಕೈಗಾರಿಕಾ ಒಪ್ಪಂದವನ್ನು ಮಾಡಬೇಕೆಂದು ಸಿಐಟಿಯು ಫೆಡರೇಷನ್ ಒತ್ತಾಯಿಸಿದೆ.