ಐಡಿಬಿಐ ಶೇರು ಮಾರಾಟ: ಬ್ಯಾಂಕಿಂಗ್ ಅರಾಷ್ಟ್ರೀಕರಣದ ಮುನ್ಸೂಚನೆ

ಕುರುಡು ಕಾಂಚಾಣ – ಕೆ.ಎಂ. ನಾಗರಾಜ್
ಸಂಪುಟ 10 ಸಂಚಿಕೆ 01 ಜನವರಿ 03, 2016

ಐಡಿಬಿಐ ಬ್ಯಾಂಕಿನ ಖಾಸಗಿಕರಣ ಪ್ರಕ್ರಿಯೆ ಆರಂಭಿಸಿರುವ ಸರ್ಕಾರದ ಪ್ರಯತ್ನವು ಸಾರ್ವಜನಿಕ ಒಡೆತನದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅರಾಷ್ಟ್ರೀಕರಣಗೊಳಿಸುವ ಸೂಚನೆ. ನಂತರ, ಅದು ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಒಂದು ರೀತಿಯ ಬಹಿಷ್ಕಾರ ಪದ್ಧತಿ ಅನುಸರಿಸುವತ್ತ ತಳ್ಳುವುದರ ಜೊತೆಗೆ ದೇಶದ ಅಭಿವೃದ್ಧಿಯ ಅಗತ್ಯಗಳಿಗೆ ವಿಮುಖವಾಗುವಂತೆ ಮಾಡುತ್ತದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಐಡಿಬಿಐ ಅಂದರೆ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ ಬ್ಯಾಂಕ್ ಆಫ್ ಇಂಡಿಯಾ(ಐಡಿಬಿಐ) ಸಂಸ್ಥೆಯನ್ನು 1964ರಲ್ಲಿ ಪಾರ್ಲಿಮೆಂಟಿನಲ್ಲಿ ಅಂಗೀಕರಿಸಿದ ಕಾಯ್ದೆಯ ಮೂಲಕ, ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಜಂಟಿ ಒಡೆತನದಲ್ಲಿ ಸ್ಥಾಪಿಸಲಾಗಿತ್ತು. ಠೇವಣಿ ಸ್ವೀಕರಿಸುವ ವಾಣಿಜ್ಯ ಬ್ಯಾಂಕುಗಳಿಗಿಂತ ಭಿನ್ನವಾಗಿದ್ದ ಅದು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಮೂಲ ಸೌಕರ್ಯಗಳ ಸ್ಥಾಪನೆಗೆ ಸಾಲ ಒದಗಿಸುವ ಒಂದು ಉತ್ತುಂಗ ಹಣ ಕಾಸು ಸಂಸ್ಥೆಯಾಗಿತ್ತು ಮತ್ತು ಅದಕ್ಕೆ ಬೇಕಾದ ಹಣಕಾಸು ನೆರವನ್ನು ಭಾರತ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಒದಗಿಸುತ್ತಿದ್ದವು. ಆಗ ತಾನೆ ಗರಿಗೆದರುತ್ತಿದ್ದ ಭಾರತದ ಆಧುನಿಕ ಕೈಗಾರಿಕಾ ವಲಯದಲ್ಲಿ ಉದ್ಯಮಶೀಲತೆ ಮತ್ತು ನೈಪುಣ್ಯತೆ ಬೆಳಸಲು ಉದ್ದಿಮೆಗಳಿಗೆ ದೀರ್ಘಾವಧಿ ಸಾಲ ಕೊಡುವ ಹೊಣೆ ಹೊತ್ತ ಸಂಸ್ಥೆಯಾಗಿತ್ತು ಐಡಿಬಿಐ.

ಐಡಿಬಿಐ ಬ್ಯಾಂಕ್ ಸರ್ಕಾರಿ ಒಡೆತನದಲ್ಲಿದ್ದರೂ ಅದನ್ನು ಖಾಸಗಿಯವರಿಗೆ ವರ್ಗಾಯಿಸಲು ಪಾರ್ಲಿಮೆಂಟಿನ ಅನುಮೋದನೆ ಬೇಕಿಲ್ಲ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರದ ಒಡೆತನವನ್ನು ಶೇ.52ಕ್ಕಿಂತ ಕೆಳಗಿಳಿಸುವಂತಿಲ್ಲ. ಆದ್ದರಿಂದ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಅತ್ಯಂತ ದರ್ಬಲ ಕೊಂಡಿಯನ್ನು ಕತ್ತರಿಸುವ ಮೂಲಕ ಖಾ¸ಗೀಕರಣ ಮಾಡುವ ಸರ್ಕಾರದ ಉದ್ದೇಶ ಸ್ಪಷ್ಟವಾಗಿದೆ ಎಂದು ಪ್ರೊ. ಸಿ.ಪಿ.ಚಂದ್ರಶೇಖರ್ ಅಭಿಪ್ರಾಯ ಪಡುತ್ತಾರೆ. ಐಡಿಬಿಐ ಬ್ಯಾಂಕ್ ಇದಕ್ಕೊಂದು ಉತ್ತಮ ನಿದರ್ಶನ ಎನ್ನುತ್ತಾರೆ ಅವರು.

ಬದಲಾದ ಉದಾರಿ ಆರ್ಥಿಕ ಧೋರಣೆಗಳ ಪರಿಸ್ಥಿತಿಯಲ್ಲಿ, ಅಭಿವೃದ್ಧಿ ಬ್ಯಾಂಕಿಂಗ್ ಮತ್ತು ವಾಣಿಜ್ಯ ಬ್ಯಾಂಕಿಂಗ್ ಪರಿಕಲ್ಪನೆಗಳ ನಡುವಿನ ಭಿನ್ನತೆ, ವಿಶಿಷ್ಟತೆಗಳನ್ನು ಮತ್ತು ರಿಯಾಯ್ತಿ ಬಡ್ಡಿ ಸಾಲಗಳನ್ನು ತೊಡೆದುಹಾಕಲಾಯ್ತು. ಈ ಪ್ರಯೋಗದ ಮೊದಲ ಬಲಿ ಪಶು ಐಡಿಬಿಐ. ಅದು ಒಂದು ವಾಣಿಜ್ಯ ಬ್ಯಾಂಕ್ ಆಗಿ ಬದಲಾಯಿತು. ಈ ಪ್ರಕ್ರಿಯೆಯಲ್ಲಿ ಅನೇಕ ಹಂತಗಳಿದ್ದವು. ಮೊದಲಿಗೆ, 2003ರಲ್ಲಿ 1964ರ ಐಡಿಬಿಐ ಕಾಯ್ದೆಯನ್ನು ರದ್ದುಪಡಿಸಿದ ಪಾರ್ಲಿಮೆಂಟ್, ಅದನ್ನು ಸರ್ಕಾರದ ಒಂದು ಕಂಪೆನಿಯಾಗಿ (ಐಡಿಬಿಐ ಲಿಮಿಟೆಡ್) ಮಾರ್ಪಡಿಸುವಂತೆ ಅಂಗೀಕಾರ ನೀಡಿತು. ನಂತರ 2005ರಲ್ಲಿ, ಐಡಿಬಿಐ ಲಿಮಿಟೆಡ್‍ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾಗಿ ಐಡಿಬಿಐ ಬ್ಯಾಂಕ್ ಲಿಮಿಟೆಡ್ ಸ್ಥಾಪಿಸಲಾಯಿತು. ಅದನ್ನು ಪುನ: ಐಡಿಬಿಐ ಲಿಮಿಟೆಡ್‍ನೊಂದಿಗೆ ವಿಲೀನಗೊಳಿಸಲಾಯಿತು. 2008ರಲ್ಲಿ ಐಡಿಬಿಐ ಲಿಮಿಟೆಡ್‍ನ ಹೆಸರನ್ನು ಐಡಿಬಿಐ ಬ್ಯಾಂಕ್ ಲಿಮಿಟೆಡ್ ಎಂದು ಬದಲಾಯಿಸಲಾಯಿತು. ಐಡಿಬಿಐ ಬ್ಯಾಂಕ್‍ನ ಚರಿತ್ರೆ ಮತ್ತು ಪುರಾಣದ ಸಾರಾಂಶ ಏನೆಂದರೆ, ಈಗ ಅದೊಂದು ಕಂಪೆನಿ. ಅದರ ಒಡೆತನದ ಬದಲಾವಣೆಗೆ ಪಾರ್ಲಿಮೆಂಟಿನ ಒಪ್ಪಿಗೆಯ ಅವಶ್ಯಕತೆ ಇಲ್ಲ. ಒಡೆತನ ಮತ್ತು ನಿಯಂತ್ರಣಗಳಿಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕಿನ ನಿಯಮಗಳನ್ನು ಪಾಲಿಸಿದರೆ ಸಾಕು.

ಇದಕ್ಕೂ ಹಿಂದೆ, ಯುಟಿಐ ಬ್ಯಾಂಕ್ (ಅದರ ಈಗಿನ ಹೆಸರು-ಆಕ್ಸಿಸ್ ಬ್ಯಾಂಕ್) ಕತೆಯೂ ಇದೇ ಆಗಿತ್ತು. ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ ಮತ್ತು ಜೀವ ವಿಮಾ ಕಾರ್ಪೊರೇಷನ್ ಮತ್ತು ಇತರೆ ಸರ್ಕಾರಿ ವಿಮಾ ಕಂಪೆನಿಗಳು ಸೇರಿ ‘ಯುಟಿಐ ಬ್ಯಾಂಕ್’ ಸ್ಥಾಪಿಸಿದ್ದವು. ಕಾಲಕ್ರಮದಲ್ಲಿ ಬಂಡವಾಳ ಹಿಂಪಡೆಯುವ ಮೂಲಕ ಅದನ್ನು ಒಂದು ಖಾಸಗಿ ಬ್ಯಾಂಕ್ ಆಗಿ ಪರಿವರ್ತಿಸಲಾಗಿದೆ. ಅದರ ಮೂಲ ಪ್ರವರ್ತಕರ ಬಂಡವಾಳ ಶೇ.30ಕ್ಕೆ ಇಳಿದಿದ್ದು, ವಿದೇಶಿಯರು ಅದರಲ್ಲಿ ಶೇ.46ರಷ್ಟು ಬಂಡವಾಳ ಹೊಂದಿದ್ದಾರೆ.

ಐಡಿಬಿಐ ಬ್ಯಾಂಕ್ ಈಗ ಇದೇ ಪಥದಲ್ಲಿ ಕ್ರಮಿಸುತ್ತಿದೆ. ಉದ್ದೇಶವೂ ಸ್ಪಷ್ಟವಾಗಿದೆ. ಇದು ಸಾರ್ವಜನಿಕ ವಲಯದ ಬ್ಯಾಂಕುಗಳ ಅರಾಷ್ಟ್ರೀಕರಣದ ಆರಂಭದ ಮುನ್ಸೂಚನೆ ಎನ್ನುತ್ತಾರೆ ಪ್ರೊ. ಚಂದ್ರಶೇಖರ್.

‘ನುಸುಳುವ ಖಾಸಗಿಕರಣ’ ತಂತ್ರ

1969ರಲ್ಲಿ ರಾಷ್ಟ್ರೀಕರಣದ ನಂತರ, ಬ್ಯಾಂಕ್‍ಗಳು ನಿರ್ಲಕ್ಷಕ್ಕೆ ಒಳಗಾಗಿದ್ದ ಹಳ್ಳಿಗಳಲ್ಲಿ ಶಾಖೆ ಆರಂಭಿಸಿ, ಕೃಷಿ, ಸಣ್ಣ ಕೈಗಾರಿಕೆಗಳಿಗೆ ಸಾಲ ಒದಗಿಸಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಆದಾಗ್ಯೂ, ಕಡಿಮೆ ಲಾಭಗಳಿಕೆ, ಬಾಕಿ ಉಳಿಸಿಕೊಂಡವರ ಸಂಖ್ಯೆಯಲ್ಲಿ ಹೆಚ್ಚಳ, ಸೇವೆಗಳಲ್ಲಿ ಗುಣ ಮಟ್ಟದ ಕೊರತೆ ಮುಂತಾದ ಅಂಶಗಳ ಮೇಲೆ ಧೂಳೆಬ್ಬಿಸಿ ಸಾರ್ವಜನಿಕ ಒಡೆತನದ ಬ್ಯಾಂಕುಗಳನ್ನು ಖಾಸಗಿಕರಣ ಮಾಡುವಂತೆ ಖಾಸಗಿ ಹಿತಾಸಕ್ತಿಗಳ ಬೆಂಬಲಿಗರು ಒತ್ತಾಯ ಹಾಕುತ್ತಿದ್ದಾರೆ.

ಬ್ಯಾಂಕುಗಳ ಸಾರ್ವಜನಿಕ ಒಡೆತನವನ್ನು ವಿರೋಧಿಸುವವರ ನಿಜವಾದ ಕಾರಣಗಳೇ ಬೇರೆ. ಸಣ್ಣ ಬಂಡವಾಳದಿಂದ ಆರಂಭಿಸಿದ ಬ್ಯಾಂಕುಗಳು ಸಾರ್ವಜನಿಕರಿಂದ ಸಂಗ್ರಹಿಸಿದ ಠೇವಣಿ ಹಣವನ್ನು ಲಾಭದಾಯಕ ವ್ಯವಹಾರಗಳಲ್ಲಿ ತೊಡಗಿಸುತ್ತಿದ್ದವು. ಬ್ಯಾಂಕ್ ನಡೆಸುತ್ತಿದ್ದ ಕಾರ್ಪೊರೇಟ್ ಕುಳಗಳು ಕಡಿಮೆ ರಿಸ್ಕ್‍ನಲ್ಲಿ ಅಗಾಧ ಪ್ರಮಾಣದ ಆರ್ಥಿಕ ಅಧಿಕಾರ ಚಲಾಯಿಸುತ್ತಿದ್ದರು. ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ದರಿಂದ, ಬೃಹತ್ ಪ್ರಮಾಣದ ಆರ್ಥಿಕ ಸಂಪನ್ಮೂಲಗಳ ಮೇಲೆ ತಾವು ಹೊಂದಿದ್ದ ಹಿಡಿತ ಕಳೆದುಕೊಂಡ ಕಾರ್ಪೊರೇಟ್ ಕುಳಗಳ ಕೆಂಗಣ್ಣು ಸರ್ಕಾರದ ಮೇಲೆ ನೆಟ್ಟಿದೆ. ತೊಂಭತ್ತರ ದಶಕದ ನವ ಉದಾರವಾದಿ ಆರ್ಥಿಕ ನೀತಿಗಳು ಜಾರಿಗೆ ಬಂದ ನಂತರ ತಾವು ಮತ್ತೊಮ್ಮೆ ಬ್ಯಾಂಕುಗಳ ಮೇಲೆ ಹಿಡಿತ ಸಾಧಿಸಬಹುದೆಂಬ ಆಸೆ ಕಾರ್ಪೊರೇಟ್ ಕುಳಗಳ ಮನಸ್ಸಿನಲ್ಲಿ ಚಿಗುರೊಡೆಯುತ್ತಿದೆ.

ಬಂಡವಾಳ ಹೂಡಿಕೆ ಹಿಂಪಡೆಯುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗಿಕರಣಗೊಳಿಸಿ ಅವುಗಳ ನಿಯಂತ್ರಣವನ್ನು ಖಾಸಗಿಯವರಿಗೆ ವಹಿಸಬೇಕಾದರೆ ಪಾರ್ಲಿಮೆಂಟಿನ ಅಂಗೀಕಾರ ಪಡೆಯಬೇಕಾಗುತ್ತದೆ. ಅದು ಸುಲಭದ ಮಾತಲ್ಲ. ರಾಷ್ಟ್ರೀಕರಣಕ್ಕೆ ಮೊದಲು ಬ್ಯಾಂಕುಗಳ ಕಾರ್ಯವೈಖರಿಯನ್ನು ಜನತೆ ಇನ್ನೂ ಮರೆತಿಲ್ಲ. ಉದಾಹರಣೆಗೆ, ದೇಶದ ಜಿಡಿಪಿಯ ಶೇ.40 ಭಾಗ ಉತ್ಪತ್ತಿ ಮಾಡುತ್ತಿದ್ದ ಕೃಷಿಗೆ ಹರಿಯುತ್ತಿದ್ದ ಸಾಲದ ಪ್ರಮಾಣ ಕೇವಲ ಶೇ.2 ಭಾಗ ಇತ್ತು. ಜೊತೆಗೆ, ರಾಷ್ಟ್ರೀಕರಣದ ನಂತರವೂ, ದೇಶದ ಅಭಿವೃದ್ಧಿಯಲ್ಲಿ ಬ್ಯಾಂಕುಗಳು ವಹಿಸಿದ ಪಾತ್ರವನ್ನು ಮರೆಯುವಂತಿಲ್ಲ.

ಬ್ಯಾಂಕುಗಳಿಗಿರುವ ಇಂತಹ ಹಿನ್ನೆಲೆಯಿಂದಾಗಿ, ಖಾಸಗಿಕರಣ ಮತ್ತು ಆರ್ಥಿಕ ಉದಾರಿಕರಣ ನೀತಿಗಳಿಗೆ ಬದ್ಧವಾಗಿರುವ ಸರ್ಕಾರವು ಸಾರ್ವಜನಿಕ ಒಡೆತನದ ಬ್ಯಾಂಕುಗಳನ್ನು ಖಾಸಗಿಕರಣಗೊಳಿಸುವ ಸಲುವಾಗಿ ತನ್ನ ಷೇರುಗಳನ್ನು ಮಾರುಕಟ್ಟೆಯಲ್ಲಿ ಸಣ್ಣ ಸಣ್ಣ ಪ್ರಮಾಣದಲ್ಲಿ ಮಾರುವ ಮೂಲಕ ‘ನುಸುಳುವ ಖಾಸಗಿಕರಣ’ ತಂತ್ರವನ್ನು ಅನುಸರಿಸುತ್ತದೆ. ಆದರೆ, ಕೆಲವು ನಿರ್ಬಂಧಗಳಿಂದಾಗಿ, ಷೇರುಗಳ ಮಾರಾಟದ ಮೂಲಕವೇ ಬ್ಯಾಂಕುಗಳ ಮೇಲಿನ ನಿಯಂತ್ರಣವನ್ನು ಖಾಸಗಿಯವರಿಗೆ ಒಪ್ಪಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಪ್ರೊ. ಸಿ.ಪಿ. ಚಂದ್ರಶೇಖರ್.

ತಮ್ಮ ಖಾಸಗಿಕರಣದ ಗುರಿ ಸಾಧನೆಗೆ ಅಡ್ಡಿಯಾಗುವ ಇಂತಹ ಸಮಸ್ಯೆಗಳನ್ನು ದಾಟಿ ಮುಂದೆ ಹೋಗಲು ಸರ್ಕಾರ ಮತ್ತು ಖಾಸಗಿಕರಣದ ಲಾಬಿಯು ‘ಬಾಸೆಲ್-3’ ಗುಮ್ಮವನ್ನು ಮುಂದೆ ಮಾಡಿವೆ. ಬಾಸೆಲ್ ನಗರದಲ್ಲಿರುವ ಬ್ಯಾಂಕ್ ಫಾರ್ ಇಂಟರ್‍ನ್ಯಾಷನಲ್ ಸೆಟ್ಲ್ಮೆಂಟ್ಸ್ ಸಮಿತಿಯು ಬ್ಯಾಂಕ್‍ಗಳು ಹೊಂದಿರಬೇಕಾದ ಕನಿಷ್ಠ ಬಂಡವಾಳದ ಅವಶ್ಯಕತೆಯನ್ನು ಸಾಲಗಳ ಮೊತ್ತಕ್ಕೆ ಅನುಗುಣವಾಗಿ ನಿಗದಿಪಡಿಸಿದೆ. ಹಾಗಾಗಿ, ಬ್ಯಾಂಕ್ ಸಾಲಗಳ ಮೊತ್ತ ಹೆಚ್ಚಿದಂತೆ ಬಂಡವಾಳದ ಅವಶ್ಯಕತೆಯೂ ಹೆಚ್ಚುತ್ತದೆ. ಈ ಹೆಚ್ಚುವರಿ ಬಂಡವಾಳದ ಅವಶ್ಯಕತೆಯನ್ನು ಪೂರೈಸಲು ಬ್ಯಾಂಕ್‍ಗಳ ಒಡೆತನ ಹೊಂದಿರುವ ಸರ್ಕಾರ ತನ್ನ ಬಜೆಟ್‍ನಿಂದ ಹಣ ಕೊಡಲು ಹಿಂಜರಿಯುವುದರಿಂದ, ಪರ್ಯಾಯವಾಗಿ, ಮಾರುಕಟ್ಟೆಯಲ್ಲಿ ಹೊಸ ನೀಡಿಕೆಯ ಷೇರುಗಳ ಮಾರಾಟದ ಮೂಲಕ ಸಂಗ್ರಹಿಸುತ್ತದೆ. ಈ ಕ್ರಮದಿಂದಾಗಿ ಸರ್ಕಾರದ ಒಡೆತನ ಶೇ.50ಕ್ಕಿಂತ ಕೆಳಗಿಳಿಯುವ ಸಾಧ್ಯತೆಯೂ ಇದೆ. ಅದಕ್ಕಿಂತಲೂ ಹೆಚ್ಚಾಗಿ, ಬಂಡವಾಳ ಹಿಂತೆಗೆತ/ಷೇರುಗಳ ಮಾರಾಟ ಪ್ರಕ್ರಿಯೆ ಯಶಸ್ವಿಯಾಗಲು ಬ್ಯಾಂಕ್‍ಗಳ ನಿಯಂತ್ರಣವನ್ನು ಖಾಸಗಿಯವರಿಗೆ ವಹಿಸಿದರೆ ತಪ್ಪೇನು ಎನ್ನುವ ವಾದವೂ ಪ್ರಚಲಿತವಾಗಿದೆ.

‘ಬಾಸೆಲ್-3’ ಉಪಕ್ರಮಗಳು ಅನಿವಾರ್ಯವಾಗಿ ಅನುಸರಿಸಲೇಬೇಕಾದ ಒಪ್ಪಂದವೇನಲ್ಲ. ಆದರೂ, ಬ್ಯಾಂಕ್‍ಗಳು ಸದೃಢವಾಗಿ ಉಳಿಯಲು ಹೆಚ್ಚುವರಿ ಬಂಡವಾಳವು ಅನಿವಾರ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಅದು ಹಾಗೇನಲ್ಲ ಎಂಬುದು ಕೆಲವು ಆರ್ಥಿಕ ತಜ್ಞರ ಅಭಿಪ್ರಾಯ. ಆದರೂ, ಬ್ಯಾಂಕ್‍ಗಳನ್ನು ಸದೃಢವಾಗಿ ಉಳಿಸುವ ಸಲುವಾಗಿ ಅವುಗಳ ನಿಯಂತ್ರಣವನ್ನು ಖಾಸಗಿಯವರಿಗೆ ಒಪ್ಪಿಸುವುದೇ ಸರಿ ಎಂಬ ಕುತರ್ಕ ಹೂಡಲಾಗುತ್ತಿದೆ. ಹಾಗಾಗಿ, ಬಲವಂತದ ಖಾಸಗಿಕರಣವನ್ನು ನೇತು ಹಾಕಲು ಉಪಯೋಗಿಸುವ ಗೂಟವಾಗಿದೆ ‘ಬಾಸೆಲ್-3’.

ಪ್ರಜಾಪ್ರಭುತ್ವದಲ್ಲಿ ಇತಿಮಿತಿಗಳು

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಕೆಲವು ಇತಿಮಿತಿಗಳೂ ಸರ್ಕಾರಕ್ಕೆ ತಡೆ ಒಡ್ಡುತ್ತವೆ. ಇತ್ತೀಚೆಗೆ, ಸರ್ಕಾರ ಏಳು ಸಾರ್ವಜನಿಕ ಬ್ಯಾಂಕುಗಳ ಹೆಚ್ಚುವರಿ ಬಂಡವಾಳದ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ಅವು ಹೊಸ ನೀಡಿಕೆಯ ಷೇರುಗಳನ್ನು ಮಾರುಕಟ್ಟೆಯಲ್ಲಿ ಮಾರಲು ಅನುಮತಿ ನೀಡಿದ ಸಂದರ್ಭದಲ್ಲಿ ಈ ಬ್ಯಾಂಕುಗಳಲ್ಲಿ ಸರ್ಕಾರದ ಒಡೆತನ ಕನಿಷ್ಠ ಶೇ.52ಕ್ಕಿಂತ ಕೆಳಗಿಳಿಯದಂತೆ ನೋಡಿಕೊಳ್ಳಲು ತಿಳಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಐಡಿಬಿಐ ಬ್ಯಾಂಕಿನ ಖಾಸಗಿಕರಣ ಪ್ರಕರಣವನ್ನು ಗಮನಿಸಬೇಕಾಗುತ್ತದೆ. ಐಡಿಬಿಐ ಬ್ಯಾಂಕಿನ ಷೇರುಗಳ ಮಾರಾಟವು ಒಂದು ಸಾರ್ವಜನಿಕ ಬ್ಯಾಂಕಿನ ಖಾಸಗಿಕರಣ ಎಂಬುದನ್ನು ಮರೆಮಾಚುತ್ತಿರುವ ಸರ್ಕಾರವು ಅದನ್ನು ಹಾಲಿ ಆರ್ಥಿಕ ವರ್ಷದ ಬಜೆಟ್ ಕೊರತೆಯ 69,500 ಕೋಟಿ ರೂಪಾಯಿಗಳನ್ನು ಹೊಂದಿಸಿಕೊಳ್ಳುವ ಒಂದು ಉಪಕ್ರಮವಾಗಿ ಬಿಂಬಿಸುತ್ತಿದೆ.

ಈ ಬ್ಯಾಂಕನ್ನು ಖಾಸಗೀಕರಣಗೊಳಿಸಲು ಆಡಳಿತ ಸರಿಯಾಗಿಲ್ಲ ಅಥವಾ ನಷ್ಟದಲ್ಲಿದೆ ಎನ್ನುವಂತಹ ಕಾರಣಗಳೇ ಇಲ್ಲ. ಏಕೆಂದರೆ, 2014-15ರಲ್ಲಿ ಈ ಬ್ಯಾಂಕ್ 873 ಕೋಟಿ ರೂಪಾಯಿಗಳ ಲಾಭ ದಾಖಲಿಸಿದೆ. ಆದರೂ, ಸರ್ಕಾರ ಅದನ್ನು ಖಾಸಗೀಕರಿಸುವತ್ತ ಸಾಗಿದೆ. ಬಂಡವಾಳ ಹಿಂತೆಗೆಯುವ ಕ್ರಮದಿಂದಾಗಿ ಸರ್ಕಾರದ ಒಡೆತನ ಶೇ.76.6ರಿಂದ ಶೇ.51ಕ್ಕಿಂತ ಕೆಳಗೆ ಇಳಿಯಲಿದ್ದು, ಸರ್ಕಾರ ಅದನ್ನು ಬಜೆಟರಿ ಅವಶ್ಯಕತೆ ಮತ್ತು ಖಾಸಗಿ ಆಡಳಿತದ ದಕ್ಷತೆಯ ಕಾರಣಗಳನ್ನೊಡ್ಡಿ ಸಮರ್ಥಿಸಿಕೊಳ್ಳುತ್ತಿದೆ. ಆದರೆ, ಇದು ಮೇಲ್ನೋಟದಲ್ಲಿ ಕಾಣುವ ಹಾಗೆ ಕೇವಲ ಐಡಿಬಿಐ ಬ್ಯಾಂಕಿನ ಖಾಸಗಿಕರಣವಲ್ಲ. ಬದಲಿಗೆ, ಇಡೀ ಸಾರ್ವಜನಿಕ ಒಡೆತನದ ಬ್ಯಾಂಕುಗಳನ್ನು ಖಾಸಗಿಕರಣ ಮಾಡುವ ಷಡ್ಯಂತ್ರದ ಮುನ್ಸೂಚನೆ ಎಂದು ಪ್ರೊ.ಚಂದ್ರಶೇಖರ್ ಹೇಳುತ್ತಾರೆ.

ಈ ಯೋಜನೆ ಯಶಸ್ವಿಯಾದರೆ, ಭಾರತದ ಜಾತಿ ಪದ್ಧತಿಯ ರೀತಿಯಲ್ಲಿ, ಇಡೀ ಬ್ಯಾಂಕಿಂಗ್ ವ್ಯವಸ್ಥೆಯು ಆರ್ಥಿಕ ಬಹಿಷ್ಕಾರ ಪದ್ಧತಿ ಆಚರಿಸುವ ಮಟ್ಟ ತಲುಪುವುದೇ ಅಲ್ಲದೆ ಅದು ದೇಶದ ಅಭಿವೃದ್ಧಿಯ ಅವಶ್ಯಕತೆಗಳಿಗೆ ವಿಮುಖವಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಐಡಿಬಿಐ ಬ್ಯಾಂಕ್‍ನ ಅಧಿಕಾರಿಗಳು ಮತ್ತು ನೌಕರರು ಬ್ಯಾಂಕಿನ ಖಾಸಗಿಕರಣ ವಿರೋಧಿಸಿ ನವೆಂಬರ್ 27ರಂದು ಯಶಸ್ವಿ ಮುಷ್ಕರ ನಡೆಸಿದ್ದಾರೆ. ಅವರಿಗೆ ಬ್ಯಾಂಕ್ ನೌಕರರ ಅಖಿಲ ಭಾರತ ಮಟ್ಟದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಅವರ ಪ್ರತಿರೋಧ ವ್ಯಾಪಕವಾದ ಬೆಂಬಲವನ್ನೂ ಮತ್ತು ವೇಗವನ್ನೂ ಪಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *