ಬೆಂಗಳೂರು : ನಾಳೆ (ಅಕ್ಟೋಬರ್ 1) ಸಂಜೆ 4.30ಕ್ಕೆ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನ ದಲ್ಲಿ ‘ಏಂಗೆಲ್ಸ್ ಚಿಂತನೆಯ ಬೆಳಕಿನಲ್ಲಿ ಮಹಿಳಾ ವಿಮೋಚನೆ” ಕುರಿತು ಸಂವಾದ ಹಮ್ಮಿಕೊಳ್ಳಲಾಗಿದೆ. ಡಾ.ಎನ್.ಗಾಯತ್ರಿ ಅವರು ಏಂಗೆಲ್ಸ್ ಅವರ ‘ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ -ಇವುಗಳ ಉಗಮ’ ಕೃತಿ ಬಿಡುಗಡೆ ಮಾಡಿ ಪುಸ್ತಕ ಪರಿಚಯದ ಜತೆಗೆ ಈ ವಿಷಯದ ಕುರಿತು ಸಂವಾದ ಆರಂಭಿಸಲಿದ್ದಾರೆ. ಸಂವಾದದಲ್ಲಿ ಜ್ಯೋತಿ ಅನಂತಸುಬ್ಬರಾವ್, ಮೈತ್ರೇಯಿ ಕೃಷ್ಣನ್ ಮತ್ತು ಕೆ.ಎಸ್.ಲಕ್ಷ್ಮಿ ಭಾಗವಹಿಸಲಿದ್ದಾರೆ. ಈ ಕೃತಿಯನ್ನು ನವಕರ್ನಾಟಕ ಪ್ರಕಟಿಸಿದ್ದು, ಇದು ಕ್ರಿಯಾ ಮಾಧ್ಯಮದ ಸಹಯೋಗದಲ್ಲಿ ಪ್ರಕಟಿಸುತ್ತಿರುವ ‘ಏಂಗೆಲ್ಸ್-200’ ಸರಣಿಯ ಭಾಗವಾಗಿದೆ. ಕೃತಿಯ ಅನುವಾದಕರಾದ ಡಾ.ಎಚ್.ಜಿ.ಜಯಲಕ್ಷ್ಮಿ, ಕ್ರಿಯಾ ಮಾಧ್ಯಮದ ಕೆ.ಎಸ್.ವಿಮಲ, ವಸಂತರಾಜ ಎನ್.ಕೆ ಹಾಗೂ ನವಕರ್ನಾಟಕ ದ ಡಾ.ಸಿದ್ಧನಗೌಡ ಪಾಟೀಲ, ರಮೇಶ ಉಡುಪ ಉಪಸ್ಥಿತರಿರುತ್ತಾರೆ.
ಸಂವಾಧದಲ್ಲಿ zoom ಮೂಲಕವೂ ಭಾಗವಹಿಸಬಹುದು. ಜನಶಕ್ತಿ ಮೀಡಿಯಾ ಫೇಸ್ ಬುಕ್ ಮತ್ತು ಯೂ ಟ್ಯೂಬ್ ಲೈವ್ ಪ್ರಸಾರ ಸಹ ಇರುತ್ತದೆ
Zoom Link
ಏಂಗೆಲ್ಸ್ ಅವರ ಈ ಪ್ರಸಿದ್ಧ ಕೃತಿ ‘ಕುಟುಂಬ, ಖಾಸಗಿ ಆಸ್ತಿ ಮತ್ತು ಪ್ರಭುತ್ವ – ಇವುಗಳ ಉಗಮ’ ಮಹಿಳೆಯರ ದಮನದ ಮೂಲಕಾರಣ ಮತ್ತು ಅದರಿಂದ ವಿಮೋಚನೆಯ ಒಂದು ಸಮಗ್ರ ಸೈಧ್ಧಾಂತಿಕ ಚೌಕಟ್ಟನ್ನು ಕಟ್ಟಿಕೊಟ್ಟಿತ್ತು.. ಹಾಗಾಗಿ ಈ ಕೃತಿ ಬಿಡುಗಡೆಯಾದಂದಿನಿಂದ ಕಳೆದ ಒಂದು ಕಾಲು ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ಮಹಿಳೆಯರ ದಮನದ ಮೂಲಕಾರಣ ಮತ್ತು ಅದರಿಂದ ವಿಮೋಚನೆಯ ಕುರಿತ ವಾಗ್ವಾದಗಳು ಈ ಕೃತಿಯ ಸುತ್ತ ನಡೆದಿದೆ. ಈ ಕುರಿತ ವಾಗ್ವಾದ, ಜಿಜ್ಙಾಸೆ ಹಾಗೂ ಹೋರಾಟದಲ್ಲಿ ತೊಡಗಿಸಿಕೊಂಡ – ಈ ಕೃತಿಯ ಪ್ರತಿಪಾದನೆಯನ್ನು ವಿರೋಧಿಸಿದ, ಬೆಂಬಲಿಸಿದ, ಅದನ್ನು ಇನ್ನಷ್ಟು ವಿಸ್ತರಿಸಿದ – ಎಲ್ಲರೂ ಅದನ್ನು ತಮ್ಮ ಆರಂಭ ಬಿಂದುವಾಗಿ ತೆಗೆದುಕೊಂಡಿದ್ದಾರೆ. ಇದು ಈ ಕೃತಿಯ ಹೆಗ್ಗಳಿಕೆ. ಆದರೆ ವರ್ಗ, ಜನಾಂಗ, ಜಾತಿ, ಲಿಂಗ ಎಲ್ಲ ರೀತಿ ಅಸಮಾನತೆಗಳನ್ನು ತೊಡೆದು ಹಾಕುವ ಸಮತಾವಾದಿ ಸಮಾಜ ರಚಿಸುವುದು ಹೇಗೆ? ಅದರ ಸಾಧ್ಯತೆಗಳೇನು? ಎಂಬ ಮಾರ್ಕ್ಸ್-ಏಂಗೆಲ್ಸ್ ಅವರ ಸೈದ್ಧಾಂತಿಕ ಪ್ರಾಯೋಗಿಕ ಅನ್ವೇಷಣೆಯ ಭಾಗವಾಗಿ ಈ ಕೃತಿ ಬಂದಿದೆ ಎಂಬುದನ್ನೂ ಮರೆಯುವಂತಿಲ್ಲ. ಲಿಂಗ ತಾರತಮ್ಯ, ದಮನಗಳ ಮೂಲ, ಬೆಳವಣಿಗೆ ಮತ್ತು ಇತರ (ವರ್ಗ ಇತ್ಯಾದಿ) ತಾರತಮ್ಯ, ದಮನಗಳ ಜತೆ ಅವುಗಳ ಸಂಬಂಧದ ವಿಶ್ಲೇಷಣೆ ಸಹ ಇಲ್ಲಿದೆ. ‘ಮಹಿಳಾ ವಿಮೋಚನೆ’ಯ ಪ್ರಶ್ನೆಗೆ ಈ ಕೃತಿ ಪ್ರಸಿದ್ಧವಾಗಿದ್ದರೂ ಇದು ಖಾಸಗಿ ಆಸ್ತಿಯ ಮತ್ತು ಅದರ ಜತೆ ತಳುಕು ಹಾಕಿಕೊಂಡಿರುವ ಕುಟುಂಬ ಮತ್ತು ಪ್ರಭುತ್ವದ ಉಗಮ, ವಿಕಾಸಗಳ ವಿಶ್ಲೇಷಣೆಗಳನ್ನೂ ಒಳಗೊಂಡಿದೆ. ಪ್ರಭುತ್ವದ ಉಗಮ, ವಿಕಾಸಗಳ ಕುರಿತು ಈ ಕೃತಿಯ ಒಳನೋಟಗಳು ಸಹ ಗಮನಾರ್ಹವಾಗಿವೆ.
ಪುಸ್ತಕದ ಕುರಿತು ಕೆಲವು ಪ್ರಮುಖ ಚಿಂತಕರ ಮಾತುಗಳು
ಏಂಗೆಲ್ಸ್ ನ ಈ ಮಹತ್ವದ ಕೃತಿಯು ಸ್ತ್ರೀವಾದಕ್ಕೆ ದೊಡ್ಡ ತಿರುವನ್ನು ಕೊಟ್ಟಿತು .. .. ಚರಿತ್ರೆಯ ಒಂದು ಕಾಲಘಟ್ಟದಲ್ಲಿ ಪುರುಷನಿಗೆ ಮಹಿಳೆಯ ಚಲನವಲನ, ಆರ್ಥಿಕತೆ, ಮತ್ತು ಕಡೆಯದಾಗಿ ಅವಳ ಲೈಂಗಿಕತೆಯ ಮೇಲೆ ಅಧಿಕಾರವನ್ನು ಸ್ಥಾಪಿಸುವುದು ಸಾಧ್ಯವಾಯಿತು. ಇಲ್ಲಿಂದಲೇ ಅಧಿಕಾರದ ವಿವಿಧ ಬಗೆಗಳು ಹುಟ್ಟಿದ್ದು ಎಂಬುದನ್ನು ಏಂಗೆಲ್ಸ್ ಗುರುತಿಸಿದ. ಲೈಂಗಿಕತಾ ಕ್ರಾಂತಿಗಾಗಿ ಹೋರಾಡುತ್ತಿದ್ದ ಸ್ತ್ರೀವಾದೀ ಹೋರಾಟಗಳಿಗೆ ಇದು ನಿಜವಾದ ದೊಡ್ಡ ತಿರುವನ್ನೇ ಕೊಟ್ಟಿತು.
– ಡಾ.ಎಚ್.ಎಸ್.ಶ್ರೀಮತಿ
ಮಹಿಳಾ ದೌರ್ಜನ್ಯಗಳ ಮೂಲ ಕಾರಣ ಕುಟುಂಬ, ಖಾಸಗಿ ಆಸ್ತಿ ಮತ್ತು ಗಂಡುಹಿರಿಮೆಯ ಪ್ರಭುತ್ವಗಳ ಸಂಬಂಧವೇ ಆಗಿದೆ. ಈ ಮೂರು ಬಹುಮುಖ್ಯ ಸಂಗತಿಗಳ ಅಂತರ್‌ಸಂಬಂಧ ಬೆಳೆದು ಬಂದ ಪರಿಯನ್ನು ಆಮೂಲಾಗ್ರ ತಿಳಿದು
ಕೊಂಡರಷ್ಟೇ ಮಹಿಳಾ ದೌರ್ಜನ್ಯದ ಕಾರಣಗಳು ತಿಳಿದು ಬರುತ್ತವೆ. ಎಂದೇ ತಮ್ಮ ದಮನದ ಅನುಭವವನ್ನು ವಿಸ್ತೃತ ಲೋಕಜ್ಞಾನವಾಗಿ, ಹೊರದಾರಿ ತೋರಿಸುವ ಹೋರಾಟವಾಗಿ ಮಾರ್ಪಡಿಸಲು ಮಹಿಳೆಯರಿಗೆ ಈ ಹೊತ್ತಗೆಯ ಓದು ತುಂಬ ಸಹಾಯಕವಾಗಿದೆ. ಜೊತೆಗೆ ಲಿಂಗ ಸಂಬಂಧಿ ವಿಷಯದಲ್ಲಿ ತಪ್ಪು ಜ್ಞಾನ, ಅಜ್ಞಾನ, ಅರೆಜ್ಞಾನ ಹೊಂದಿದ ಪುರುಷ ಪ್ರಧಾನ ಭಾರತದ ಗಂಡಸರೂ ಇದನ್ನು ಓದಬೇಕಿದೆ.
– ಡಾ. ಎಚ್. ಎಸ್. ಅನುಪಮಾ
ಗಂಡು-ಹೆಣ್ಣು ಇಬ್ಬರೂ ಸೇರಿ ಕೂಡಿಸುತ್ತಿದ್ದ ಕುಟುಂಬದ ಸಂಪತ್ತು ಗಂಡಸಿನ ಪಾಲಾದದ್ದು ಹೇಗೆ, ವಂಶಾವಳಿಯು ತಾಯಿ
ಮತ್ತು ತಂದೆಯ ಮೂಲಕ ಹರಿದು ಬಂದ ವಿನ್ಯಾಸ ಯಾವುದು? ಉತ್ಪಾದನಾ ಶಕ್ತಿಯಲ್ಲಾದ ಬದಲಾವಣೆ ಶ್ರಮ ವಿಭಜನೆಯನ್ನು ಹುಟ್ಟಿ ಹಾಕಿದ್ದು ಮತ್ತು ಅದರಿಂದ ಉಂಟಾದ ವರ್ಗಗಳ ವಿಭಜನೆಯಲ್ಲಿ ಮಹಿಳೆ ಬಹುಮುಖ್ಯ ಶೋಷಿತಳಾದಳು, ಎನ್ನುವುದನ್ನು ಇಲ್ಲಿ ನೋಡಬಹುದು. ಇಂದು ನಾವು ಕಾಣುವ ರಾಜ್ಯಾಂಗ, ಕಾರ್ಯಾಂಗ, ನ್ಯಾಯಾಂಗ, ಪೊಲೀಸ್, ಸೈನಿಕರು – ಎಲ್ಲವುಗಳ ಆವಿರ್ಭಾವಕ್ಕೂ ಒಂದು ಚರಿತ್ರೆಯಿದೆಯೆಂಬುದರ ಪ್ರಾಥಮಿಕ ತಿಳುವಳಿಕೆಯನ್ನು ಮತ್ತು ಅದರ ಬದಲಾವಣೆಯ ಪ್ರಕ್ರಿಯೆಯನ್ನು ಈ ಕೃತಿ ಸಾದರಪಡಿಸುತ್ತದೆ.
– ಡಾ.ಎನ್.ಗಾಯತ್ರಿ
ಅನುವಾದವು ಯಾಂತ್ರಿಕ ಕೆಲಸವಲ್ಲ.. ..ತಾವು ಅನುವಾದಕ್ಕೆ ಆಯ್ದುಕೊಂಡ ವಿಷಯದ ಕುರಿತು ಪ್ರೀತಿ, ನಂಬಿಕೆ ಮತ್ತು ಬದ್ಧತೆ ಇರಬೇಕು. ಹೀಗಾದಾಗ ಅನುವಾದವು ಆಯಾ ದೇಸೀ ಭಾಷೆಯ ಮೂಲ ಕೃತಿ ಎಂಬಷ್ಟೇ ಸಹಜವಾಗಿ ಮೂಡುತ್ತದೆ. ಜಯಲಕ್ಷಿö್ಮ ಅವರು ಮೂಲ ಕೃತಿಯ ಹೂರಣವನ್ನು ಕರಗತ ಮಾಡಿಕೊಂಡಿರುವುದು ಅನುವಾದದ ಉದ್ದಕ್ಕೂ ಸ್ಪಷ್ಟವಾಗುತ್ತದೆ. ಅವರ ಭಾಷೆ ಎಲ್ಲೂ ಪೆಡಸಾಗದೆ, ಸಂದಿಗ್ಧಕ್ಕೆ ಎಡೆಮಾಡದೆ, ಸ್ಪಷ್ಟವೂ ನಿಖರವೂ ಆಗಿರುವುದು ಅವರ ಅನುವಾದದ ವೈಶಿಷ್ಟ್ಯವಾಗಿದೆ.
– ಪ್ರೊ, ಸಬಿಹಾ ಭೂಮಿಗೌಡ
80ರ ದಶಕದ ಪ್ರಾರಂಭದಲ್ಲಿ ಮಹಿಳಾ ಚಳುವಳಿಯಲ್ಲಿ ಪ್ರವೇಶಿಸುತ್ತಿರುವಾಗ ‘ಮಹಿಳೆಯರ ಸಮಸ್ಯೆಯ ಮೂಲ ಪುರುಷ’ ಎನ್ನುವ ಮಾತುಗಳು ಕೇಳುತ್ತಿದ್ದವು. ಮತ್ತು ಮಹಿಳೆಯರ ಸ್ಥಿತಿ ಸುಧಾರಿಸಲು ಮಹಿಳೆಯರೇ ಹೋರಾಟ ಮಾಡಬೇಕು ಎಂಬ ಅಭಿಪ್ರಾಯಗಳೂ ಇದ್ದವು. ಇದು ಸತ್ಯವೇ? ಎನ್ನುವ ಗೊಂದಲಗಳು ಮೂಡುತ್ತಿದ್ದವು. ಆದರೆ ಅಂಥಹ
ಸೀಮಿತ ಆಲೋಚನೆಗಳಾಚೆ ನಿಜವಾದ ಮಾರ್ಕ್ಸವಾದೀ ದೃಷ್ಟಿಕೋನದಲ್ಲಿ ಸಮಾಜ, ಸಮಾಜದೊಳಗಿನ ಮೌಲ್ಯಗಳು ಅವುಗಳು ಬೆಳೆದು ಬಂದ ರೀತಿ ಮತ್ತು ಅದರೊಳಗೆ ಅಂತರ್ಗತವಾದ ಮಹಿಳಾ ಸಮಸ್ಯೆಗಳು ಇಂಥಹ ಹಲವು ಪ್ರಶ್ನೆಗಳಿಗೆ ಏಂಗೆಲ್ಸ್ರವರ ಈ ಕೃತಿ ಉತ್ತರ ರೂಪವಾಗಿ ದೊರಕಿತು.
– ವಿಮಲ ಕೆ.ಎಸ್