ಕುರುಡು ಕಾಂಚಾಣ – ಕೆ.ಎಂ. ನಾಗರಾಜ್ ಸಂಪುಟ 9 ಸಂಚಿಕೆ 46, 15 ನವೆಂಬರ್ 2015
ಯುಪಿಎ-2ರ ಅವಧಿಯಲ್ಲಿ, ಯೋಜನಾ ಆಯೋಗವು ಡಾ. ಶ್ರೀನಾಥ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನೇಮಿಸಿದ್ದ ತಜ್ಞರ ಸಮಿತಿಯು ಎಲ್ಲರಿಗೂ ಆರೋಗ್ಯ ರಕ್ಷಣೆ ಒದಗಿಸಬಲ್ಲ ಯೋಜನೆಯ ವರದಿಯೊಂದನ್ನು 2011ರಲ್ಲಿ ಸಲ್ಲಿಸಿತ್ತು. ಜನರಿಗೆ ಆರೋಗ್ಯ ರಕ್ಷಣೆ ಒದಗಿಸುವ ಸಲುವಾಗಿ ಸರ್ಕಾರ ವಿಮಾ ಕಂಪೆನಿಗಳನ್ನಾಗಲಿ ಅಥವಾ ಬೇರೆ ಮಧ್ಯವರ್ತಿಗಳನ್ನಾಗಲಿ ಬಳಸುವ ಬದಲು ಸಾರ್ವಜನಿಕ ಆರೋಗ್ಯ ಸೇವೆಗಳ ಮೂಲಕವೇ ಆರೋಗ್ಯ ರಕ್ಷಣೆಯ ಗುರಿ ಸಾಧಿಸಬಹುದೆಂದು ವರದಿ ತಿಳಿಸಿತ್ತು.
ರಾಷ್ಟ್ರೀಯ ಸ್ವಾಸ್ತ್ಯ ಬಿಮಾ ಯೋಜನೆಯಡಿಯಲ್ಲಿ RSBY ಬಡತನದ ರೇಖೆಯ ಕೆಳಗಿರುವ ಪ್ರತಿ ಕುಟುಂಬಕ್ಕೆ ವಾರ್ಷಿಕ 30,000 ರೂಪಾಯಿಗಳ ಗರಿಷ್ಠ ಮೊತ್ತದ ಆರೋಗ್ಯ ವಿಮೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 75:25ರ ಅನುಪಾತದಲ್ಲಿ ಇನ್ಸ್ಯೂರೆನ್ಸ್ ಪ್ರೀಮಿಯಂ ಭರಿಸುತ್ತಿರುವ ಯೋಜನೆಯನ್ನು ಕೊನೆಗೊಳಿಸಿ, ಅದೇ ಹಣವನ್ನು ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಬಳಸುವಂತೆ ರೆಡ್ಡಿ ಸಮಿತಿಯು ಶಿಫಾರಸು ಮಾಡಿತ್ತು. ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳುವವರಿಂದ ಶುಲ್ಕ ವಸೂಲಿ ಮಾಡದಂತೆಯೂ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಬೇಕಾಗುವ ಹಣವನ್ನು ಸರ್ಕಾರವು ಸಂಗ್ರಹಿಸುವ ತೆರಿಗೆಗಳಿಂದಲೇ ಭರಿಸಬೇಕೆಂದು ಸಲಹೆ ನೀಡಿತ್ತು. 2011-12ರಲ್ಲಿ ಆರೋಗ್ಯ ಸೇವೆಗಳ ಮೇಲೆ ಮಾಡುತ್ತಿದ್ದ ಖರ್ಚನ್ನು ಜಿಡಿಪಿಯ ಶೇ.1.2ರಿಂದ 2016-17ರ ಹೊತ್ತಿಗೆ ಶೇ.2.5ಕ್ಕೂ ಮತ್ತು 2021-22ರ ವೇಳೆಗೆ ಶೇ.3ಕ್ಕೂ ಏರಿಸುವಂತೆ ಸಮಿತಿಯು ಶಿಫಾರಸು ಮಾಡಿತ್ತು.
ಸರ್ಕಾರ ಈ ವರದಿಯನ್ನು ತಿರಸ್ಕರಿಸಿತ್ತು. ಆರೋಗ್ಯದ ಬಾಬ್ತು ಸರ್ಕಾರ ಮಾಡುತ್ತಿರುವ ಖರ್ಚಿನ ಈಗಿನ ಪ್ರಮಾಣವು 2011-12ರಲ್ಲಿದ್ದ ಜಿಡಿಪಿಯ ಶೇ.1.2ರ ಮಟ್ಟದಲ್ಲೇ ಉಳಿದಿದೆ ಮತ್ತು ಆರೋಗ್ಯ ಸೇವೆಗಳ ವಿಸ್ತರಣೆ ಏನಿದ್ದರೂ RSBY ವಿಸ್ತರಣೆಯ ಮೂಲಕವೇ ಎನ್ನುತ್ತದೆ ಸರ್ಕಾರ.
ಈ ಬಗ್ಗೆ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಅಭಿಪ್ರಾಯಪಡುವಂತೆ ಕಡು ಬಡವರ ಆರೋಗ್ಯದ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರವಲ್ಲದಿದ್ದರೂ ತೀರ ಕಳಪೆಯ ಪರಿಹಾರವೂ ಅಲ್ಲ ಎಂಬ ಅನಿಸಿಕೆಯು ಸರಿಯಾದದ್ದಲ್ಲ. ಏಕೆಂದರೆ, ಈ ಆರೋಗ್ಯ ವಿಮೆ ಯೋಜನೆಯ ವಿಸ್ತರಣೆಯು ಬಹಳ ಅಪಾಯಕಾರಿ ಪರಿಣಾಮಗಳಿಂದ ಕೂಡಿದೆ. ಕಾರಣ ತುಂಬಾ ಸರಳವಾಗಿದೆ. RSBY ಜಾರಿಯಲ್ಲಿರುವಾಗ ಸರ್ಕಾರಗಳು ಇನ್ಸ್ಯೂರೆನ್ಸ್ ಪ್ರೀಮಿಯಂ ಹಣವನ್ನು ತುಂಬಲು ಸಾರ್ವಜನಿಕ ಆರೋಗ್ಯ ಸೇವೆಗಳ ಖರ್ಚಿಗೆಂದು ನಿಗದಿಪಡಿಸಿದ ಹಣದಲ್ಲಿ ಕಡಿತ ಮಾಡುವ ಮೂಲಕ ಹೊಂದಿಸಲಾಗುತ್ತಿದೆ. ಪರಿಣಾಮವಾಗಿ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ದೊರಕುವ ಔಷದಿ ಮತ್ತಿತರ ಚಿಕಿತ್ಸಾ ಸೌಲಭ್ಯಗಳು ಕಡಿಮೆಯಾಗುತ್ತವೆ. ಆಗ, ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಹೋಗಬೇಕಾಗುತ್ತದೆ. ಅದೇ ಹೊತ್ತಿನಲ್ಲಿ, RSBY ವ್ಯಾಪ್ತಿಯನ್ನು ಖಾಸಗಿ ಆಸ್ಪತ್ರೆಗಳಿಗೆ ವಿಸ್ತರಿಸಲು ಅವುಗಳ ಚಿಕಿತ್ಸಾ ವೆಚ್ಚಗಳನ್ನು ಹೆಚ್ಚಿಸಬೇಕಾಗುತ್ತದೆ. ಆಗ, ವಾರ್ಷಿಕ 30,000 ರೂಪಾಯಿಗಳ ಗರಿಷ್ಠ ಮಿತಿ ಯಾವ ಮೂಲೆಗೂ ಸಾಲುವುದಿಲ್ಲ. ಈ ಯೋಜನೆಯಿಂದ ಕಡು ಬಡವರಿಗೆ ಪ್ರಯೋಜನವಾಗುತ್ತದೆ ಎಂಬ ವಾದವನ್ನು ಒಂದು ವೇಳೆ ಒಪ್ಪಿದರೂ ಸಹ ಬಡತನದ ಲೆಕ್ಕ ಹಾಕಲು ಸರ್ಕಾರವು ಅನುಸರಿಸುವ ದೋಷಪೂರ್ಣ ವಿಧಾನಗಳ ಮೂಲಕ ಕಡು ಬಡವರ ಸಂಖ್ಯೆಯನ್ನು ಅತಿ ಕಡಿಮೆ ಮಟ್ಟದಲ್ಲಿ ತೋರಿಸಿ ಅಂತಹ ಬಹಳ ಮಂದಿಯನ್ನು ಯೋಜನೆಯಿಂದ ಹೊರಗಿಡುತ್ತದೆ. ಉಳಿದ ಬಹು ಸಂಖ್ಯಾತ ಬಡವರಿಗೂ ಉಚಿತ ಆಸ್ಪತ್ರೆ ಸೌಲಭ್ಯ ಮರೀಚಿಕೆಯಾಗುತ್ತದೆ ಎನ್ನುತ್ತಾರೆ ಪ್ರೊ. ಪಟ್ನಾಯಕ್.
ಕೇರಳದ ವಿಶಿಷ್ಟ ಯೋಜನೆ
ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಇರುವ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಕೇರಳದ ಎಡ ರಂಗ ಸರ್ಕಾರ ಅನುಷ್ಠಾನಗೊಳಿಸಿದ ಆರೋಗ್ಯ ವಿಮಾ ಯೋಜನೆಯು ಹಲವು ಕಾರಣಗಳಿಂದ ವಿನೂತನವಾಗಿದೆ ಎನ್ನುತ್ತಾರೆ ಪ್ರೊ. ಪಟ್ನಾಯಕ್. ಅವರ ಕಾರಣಗಳು ಹೀಗಿವೆ: (1) ಹಣ ಕಾಸಿನ ಕೊರತೆ ಇರುವ ಕೇರಳದ ಈ ಯೋಜನೆಯನ್ನು ಬ್ರಿಟನ್ ಅಥವಾ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿರುವ ಸಾರ್ವತ್ರಿಕ ಆರೋಗ್ಯ ಸೇವೆಗಳಿಗೆ ಹೋಲಿಸಲಾಗದು. ಅದೊಂದು ಆರೋಗ್ಯ ವಿಮಾ ಪಾಲಿಸಿಯಾಗಿದ್ದರೂ “ಬಡವರಿಗೆ” ಮಾತ್ರ ಸೀಮಿತವಾಗದೆ ಎಲ್ಲರಿಗೂ ಅನ್ವಯವಾಗುವ ಯೋಜನೆಯಾಗಿದೆ. ಕೇರಳದ ಈ “ಸಮಗ್ರ ಆರೋಗ್ಯ ವಿಮಾ ಸ್ಕೀಂ” ನಲ್ಲಿ RSBY ಕೂಡ ಸಂಮಿಳಿತವಾಗಿತ್ತು. ಕೇರಳದ ಸುಮಾರು 60% ಜನಸಂಖ್ಯೆ ಅದರ ಫಲಾನುಭವಿಗಳಾಗಿದ್ದರು. (2) RSBY ಯೋಜನೆಯಡಿಯಲ್ಲಿನ 30,000 ರೂಪಾಯಿಗಳ ಜೊತೆಗೆ, RSBY ವ್ಯಾಪ್ತಿಯ ಹೊರಗಿನ ವಿಷಮ ರೂಪದ ಕಾಯಿಲೆಗಳ ಚಿಕಿತ್ಸೆಗಾಗಿ 70,000 ರೂಪಾಯಿಗಳ ಅಧಿಕ ಮೊತ್ತವನ್ನು ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ನಿಗದಿಪಡಿಸಲಾಗಿತ್ತು. (3) ಈ ಸ್ಕೀಂನ ಇನ್ಸ್ಯೂರೆನ್ಸ್ ಪ್ರೀಮಿಯಂ ಹಣ ತುಂಬುವ ಸಲುವಾಗಿ, ಸಾರ್ವಜನಿಕ ಆರೋಗ್ಯ ಸೇವೆಗಳಿಗಾಗಿ ಮಾಡುವ ಖರ್ಚಿನಲ್ಲಿ ಕಡಿತ ಮಾಡಲಿಲ್ಲ. (4) ಅನೇಕ ಚಿಕಿತ್ಸಾ ವಿಧಾನಗಳಿಗೆ ತೆರಬೇಕಾದ ಶುಲ್ಕವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತಲೂ ಕಡಿಮೆ ಮಟ್ಟದಲ್ಲಿ ನಿಗದಿಪಡಿಸಲಾಗಿತ್ತು. ಈ ಕ್ರಮದಿಂದಾಗಿ ಖಾಸಗಿ ಆಸ್ಪತ್ರೆಗಳು ಈ ಸ್ಕೀಂನಿಂದ ದೂರ ಉಳಿದವು ಮತ್ತು ಸರ್ಕಾರಿ ಆಸ್ಪತ್ರೆಗಳು ಅದರ ಲಾಭ ಪಡೆದವು. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳಿಗೆ ಎರಡು ಮೂಲಗಳಿಂದ ಹಣ ಹರಿಯಲಾರಂಭಿಸಿತು – ಬಜೆಟ್‍ನಲ್ಲಿ ಇಲಾಖೆಗೆ ನಿಗದಿಪಡಿಸಿದ ಹಣ ಮತ್ತು ಸಮಗ್ರ ಆರೋಗ್ಯ ವಿಮೆಯ ಹಣ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇರಳದ ಎಡ ರಂಗ ಸರ್ಕಾರ ಜಾರಿಗೆ ತಂದ ಆರೋಗ್ಯ ವಿಮಾ ಯೋಜನೆಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿತು. ದೇಶದಲ್ಲಿ ಅಂತಹ ಇನ್ನೊಂದು ಉದಾಹರಣೆ ಇಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹಾಳುಗೆಡವುತ್ತ್ತಿರುವುದೇ ಒಂದು ಸಾಮಾನ್ಯ ನಿಯಮವಾಗಿರುವ ಪರಿಸ್ಥಿತಿಯಲ್ಲಿ ದೇಶದ ಬಹು ದೊಡ್ಡ ಜನಸಂಖ್ಯಾ ವಿಭಾಗವು ಉಚಿತ ಸಾರ್ವಜನಿಕ ಆರೋಗ್ಯ ಸೇವೆಗಳಿಂದ ವಂಚಿತವಾಗಿದೆ. ನವ-ಉದಾರ ಆರ್ಥಿಕ ನೀತಿಗಳು ಬಯಸುವ ಆರೋಗ್ಯ ವಿಮಾ ಯೋಜನೆಯ ಮಾರ್ಗವನ್ನೇ ಸರ್ಕಾರಗಳು ಹಿಡಿದಿವೆ. ಎನ್‍ಡಿಎ ಸರ್ಕಾರಕ್ಕೆ ಇದು ತುಂಬಾ ಆಪ್ಯಾಯಮಾನವಾಗಿರುವ ನೀತಿ ಎಂಬುದನ್ನು ಹೇಳಬೇಕಾಗಿಲ್ಲ ಎನ್ನುತ್ತಾರೆ ಪ್ರೊ. ಪಟ್ನಾಯಕ್.
ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಹಣ ಹೊಂದಿಸಲು ಸಾಧ್ಯವೆ?
ಡಾ. ಶ್ರೀನಾಥ ರೆಡ್ಡಿ ಸಮಿತಿಯ ಶಿಫಾರಸಿನಂತೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಹಣ ಹೊಂದಿಸಲು ಸಾಧ್ಯವೆ? ಸಾಧ್ಯವಿದೆ ಎನ್ನುತ್ತಾರೆ ಪ್ರೊ. ಪಟ್ನಾಯಕ್. ಅವರು ಹೇಳುತ್ತಾರೆÉ: ಈ ವರದಿಯಲ್ಲಿ ತಿಳಿಸಿರುವಂತೆ ಜಿಡಿಪಿಯ ಶೇ.3ರಷ್ಟು ಹಣದಲ್ಲಿ ಆರೋಗ್ಯ ಸೇವೆಗಳನ್ನು ಬಳಸಿಕೊಳ್ಳುವವರಿಂದ ಶುಲ್ಕ ವಸೂಲಿ ಮಾಡದೆ ಎಲ್ಲರಿಗೂ ಆರೋಗ್ಯ ರಕ್ಷಣೆ ಒದಗಿಸಬಲ್ಲ ಯೋಜನೆಯನ್ನು ಜಾರಿಗೊಳಿಸಬಹುದು. ಈಗಾಗಲೇ ಜಿಡಿಪಿಯ ಶೇ.1.2 ರಷ್ಟು ಹಣವನ್ನು ಆರೋಗ್ಯ ಸೇವೆಗಳಿಗಾಗಿ ಖರ್ಚು ಮಾಡುತ್ತಿರುವ ಸರ್ಕಾರವು ಜಿಡಿಪಿಯ ಕೇವಲ ಶೇ.1.8 ಅಧಿಕ ಮೊತ್ತದ ಹಣ ಒದಗಿಸುವುದು ಅಸಾಧ್ಯದ ಮಾತೇನಲ್ಲ. ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ಬಂಡವಾಳಗಾರರಿಗೆ ಕೊಟ್ಟಿರುವ ತೆರಿಗೆ ರಿಯಾಯ್ತಿಗಳ ಮೊತ್ತದಲ್ಲಿ ಒಂದು ಸಣ್ಣ ಭಾಗದಷ್ಟು ಹಣವನ್ನು ಒದಗಿಸಿದರೂ ಸಾಕು. ಅಥವಾ ಈ ರಿಯಾಯ್ತಿಗಳ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಇಳಿಸಿದರೂ ಸಾಕು. ಕೇವಲ ಅಷ್ಟು ಹಣ ಹೊಂದಿಸಿದರೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು ಸಾಧ್ಯವಿದೆ.
ಷೇರು ಮಾರುಕಟ್ಟೆಯ ವ್ಯವಹಾರಗಳ ಮೇಲೆ ತೆರಿಗೆ
ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಕಡಿಮೆ ಬೀಳುವ ಜಿಡಿಪಿಯ ಕೇವಲ ಶೇ.1.8 ರಷ್ಟು ಹಣ ಹೊಂದಿಸುವುದು ಸಧ್ಯದ ಪರಿಸ್ಥಿತಿಯಲ್ಲಿ ಕಾರ್ಯಸಾಧುವಲ್ಲ ಎಂಬುದು ಸರ್ಕಾರದ ಅಭಿಪ್ರಾಯವಾಗಿದ್ದರೆ, ಷೇರು ಮಾರುಕಟ್ಟೆಯ ವ್ಯವಹಾರಗಳ ಮೇಲೆ ಒಂದು ಬಹಳ ಸಣ್ಣ ತೆರಿಗೆ ವಿಧಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು ಎನ್ನುತ್ತಾರೆ ಪ್ರೊ. ಪಟ್ನಾಯಕ್.
ಪ್ರೊ. ಪಟ್ನಾಯಕ್ ಅವರ ವಿವರಣೆ ಹೀಗಿದೆ: ಷೇರು ಮಾರುಕಟ್ಟೆಯ ದಿನ ನಿತ್ಯದ ವ್ಯವಹಾರಗಳಲ್ಲಿ, ಷೇರುಗಳ ಬೆಲೆಯಲ್ಲಿ ಮತ್ತು ಮಾರುಕಟ್ಟೆಯ ಒಟ್ಟು ವಹಿವಾಟಿನ ಮೊತ್ತದಲ್ಲಿ ದೊಡ್ಡ ಪ್ರಮಾಣದ ಏರಿಳಿತಗಳಿರುತ್ತವೆ. ಆದಾಗ್ಯೂ, ಹಿಂದಿನ ಎರಡು ತಿಂಗಳ (ಸೆಪ್ಟೆಂಬರ್ ಮತ್ತು ಅಕ್ಟೋಬರ್ 2015) ಸರಾಸರಿ ದಿನಂಪ್ರತಿ ವಹಿವಾಟಿನ ಮೊತ್ತ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳಷ್ಟಾಗುತ್ತದೆ. ಪ್ರತಿಯೊಂದು ಷೇರು ವರ್ಗಾವಣೆಯ (ಮಾರುವ ಮತ್ತು ಕೊಳ್ಳುವ ವ್ಯವಹಾರ) ಮೇಲೆ ಕೇವಲ 0.37% ತೆರಿಗೆ (ಅಂದರೆ, ನೂರು ರೂಪಾಯಿಗಳ ಮೌಲ್ಯದ ವ್ಯವಹಾರದ ಮೇಲೆ 37 ಪೈಸೆ ತೆರಿಗೆ) ವಿಧಿಸಿದರೆ, 2016-17 ಹಣಕಾಸು ವರ್ಷದಲ್ಲಿ ಸುಮಾರು ಎರಡು ಲಕ್ಷ ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹಿಸಬಹುದು. ಈ ಮೊತ್ತದ ಜೊತೆಗೆ ಸರ್ಕಾರ ಈಗ ಆರೋಗ್ಯದ ಬಾಬ್ತು ಖರ್ಚು ಮಾಡುತ್ತಿರುವ (ಜಿಡಿಪಿಯ ಶೇ.1.2ರಷ್ಟು) ಹಣವನ್ನು ಸೇರಿಸಿದರೆ, ಈ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವ ಯೋಜನೆಗೆ ಹಣ ಹೊಂದಿಸಬಹುದು.
ಷೇರು ಮಾರುಕಟ್ಟೆಯ ವ್ಯವಹಾರಗಳು ಬಹಳಷ್ಟು ಏರಿಳಿತಗಳಿಂದ ಕೂಡಿರುತ್ತವೆ. ಕೆಲವೊಮ್ಮೆ ಅಲ್ಲೋಲ ಕಲ್ಲೋಲವಾಗುವುದೂ ಉಂಟು. ಆದರೂ, ಸರಾಸರಿ ವಹಿವಾಟಿನ ಮೇಲಿನ ತೆರಿಗೆ ಈ ಉದ್ದೇಶಕ್ಕೆ ಸಾಕಾಗುತ್ತದೆ. ಒಂದು ವೇಳೆ ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟು ಉಲ್ಬಣಗೊಂಡ ಪರಿಣಾಮವಾಗಿ ಷೇರು ಮಾರುಕಟ್ಟೆಯ ಕುಸಿತ ದೀರ್ಘಕಾಲ ಮುಂದುವರೆದ ಸಂದರ್ಭದಲ್ಲಿ ಕಡಿಮೆಯಾದ ಈ ತೆರಿಗೆಯನ್ನು ವಿತ್ತೀಯ ಕೊರತೆ ಎಂದು ಪರಿಗಣಿಸಬಹುದು. ವಿತ್ತೀಯ ಕೊರತೆ ಉಂಟುಮಾಡುವ ಪರಿಣಾಮ ಸಕಾರಾತ್ಮಕ ವಾಗಿಯೇ ಇರುತ್ತದೆ ಎನ್ನುತ್ತಾರೆ ಪ್ರೊ. ಪಟ್ನಾಯಕ್.
ಷೇರು ವ್ಯವಹಾರಗಳ ಮೇಲೆ ವಿಧಿಸಬಹುದಾದ 0.37% ತೆರಿಗೆ ಒಂದು ದೊಡ್ಡ ಹೊರೆಯಲ್ಲವೆ? ಎಂಬ ಪ್ರಶ್ನೆ ಏಳಬಹುದು. “ಹೋಲಿಕೆಯ ದೃಷ್ಟಿಯಿಂದ ಒಂದು ಉದಾಹರಣೆ ಕೊಡಬಹುದು. ಕಕ್ಕಾಬಿಕ್ಕಿಯಾಗುವಷ್ಟು ವೇಗದಲ್ಲಿ ದೇಶ ದೇಶಗಳ ನಡುವೆ ಹರಿದಾಡುತ್ತಿರುವ ಜೂಜುಕೋರ ಬಂಡವಾಳದ ವೇಗವನ್ನು ತಗ್ಗಿಸಲು ಅಂತÀಹ ವ್ಯವಹಾರಗಳ ಮೇಲೆ 0.5% ತೆರಿಗೆ ವಿಧಿಸಬೇಕೆಂದು ಜೇಮ್ಸ್ ಟೊಬಿನ್ ಎಂಬ ಒಬ್ಬ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞ ಪ್ರತಿಪಾದಿಸಿದ್ದ. ಇಲ್ಲಿ ಸೂಚಿಸಿರುವ ತೆರಿಗೆಯ ಪ್ರಮಾಣ ಅದಕ್ಕಿಂತಲೂ ಕಡಿಮೆ ಇದೆ.
“ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಒದಗಿಸುವ ಒಂದು ಕಲ್ಯಾಣ ಯೋಜನೆಯ ಸಲುವಾಗಿ ಕೆಲವೇ ಕೆಲವು ಕಾರ್ಪೊರೇಟ್‍ಗಳ ಹಿಡಿತದಲ್ಲಿರುವ ಹಣ ಕಾಸು ಬಂಡವಾಳಶಾಹಿಯ ಗುಲಾಮಗಿರಿಯ ವಿರುದ್ಧ ಒಮ್ಮೆಯಾದರೂ ಮೈ ಕೊಡವಿ ಎದ್ದು ನಿಲ್ಲುವುದು ಬೇಡವೇ?” ಎಂದು ಪ್ರೊ. ಪಟ್ನಾಯಕ್ ಕೇಳುತ್ತಾರೆ.
ಜನ ಸಾಮಾನ್ಯರಿಗೆ ಆರೋಗ್ಯ ರಕ್ಷಣೆ ಒದಗಿಸುವುದು ಹೇಗೆ? ವಿಮಾ ಕಂಪನಿಗಳ ಆರೋಗ್ಯ ವಿಮಾ ಯೋಜನೆಯ ಮೂಲಕ ಎನ್ನುವುದು ನವ-ಉದಾರವಾದಿ ಸರಕಾರಗಳ ಧೋರಣೆ. ಆದರೆ ಇದು ಎಲ್ಲರಿಗೂ ಆರೋಗ್ಯ ರಕ್ಷಣೆ ನಿಡಬಲ್ಲುದೇ? ಖಂಡಿತ ಇಲ್ಲ ಎಂಬುದು ಇದುವರೆಗಿನ ಅನುಭವ.
ಹಾಗಾದರೆ ಬೇರೆ ದಾರಿ ಯಾವುದು? ವಿಮಾ ಕಂಪೆನಿಗಳನ್ನಾಗಲಿ ಅಥವಾ ಬೇರೆ ಮಧ್ಯವರ್ತಿಗಳನ್ನಾಗಲಿ ಬಳಸುವ ಬದಲು ಸಾರ್ವಜನಿಕ ಆರೋಗ್ಯ ಸೇವೆಗಳ ಮೂಲಕವೇ ಎಲ್ಲರಿಗೂ ಆರೋಗ್ಯ ರಕ್ಷಣೆಯ ಗುರಿ ಸಾಧಿಸಬಹುದೇ? ಸಾಧಿಸಬಹುದು. ಆದರೆ ಅದಕ್ಕೆ ಕೆಲವೇ ಕೆಲವು ಕಾರ್ಪೊರೇಟ್‍ಗಳ ಹಿಡಿತದಲ್ಲಿರುವ ಹಣ ಕಾಸು ಬಂಡವಾಳಶಾಹಿಯ ಗುಲಾಮಗಿರಿಯ ವಿರುದ್ಧ ಒಮ್ಮೆಯಾದರೂ ಮೈ ಕೊಡವಿ ಎದ್ದು ನಿಲ್ಲುವುದು ಅಗತ್ಯ.