ಎರಡು ಪ್ಲೇಗುಗಳು ಕಾಶ್ಮೀರವನ್ನು ಕಾಡುತ್ತಿವೆ

ಪ್ರಕಾಶ ಕಾರಟ್

ಜಮ್ಮು ಮತ್ತು ಕಾಶ್ಮೀರದಲ್ಲಿ ಲಾಕ್‌ಡೌನ್ ಭಾರತಕ್ಕಿಂತ ಪೂರ್ಣ ಎಂಟು ತಿಂಗಳ ಮೊದಲೇ ಆರಂಭವಾಯಿತು. ಅದು ಯಾವುದೇ ಸಾಂಕ್ರಾಮಿಕ ಅಥವ ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಬಂದದ್ದಲ್ಲ. ಅದೊಂದು ರಾಜಕೀಯ ಲಾಕ್‌ಡೌನ್, ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಒಂದು ಪ್ರಹಾರದೊಂದಿಗೆ ಅದು ಬಂತು. ಭಾರತದ ಇತರ ಭಾಗಗಳೊಡನೆ ಮಾರ್ಚ್ ೨೫ರಂದು ಆರಂಭವಾದ ಎರಡನೇ ಲಾಕ್‌ಡೌನಿನಲ್ಲಿ ಈ ಪ್ರಹಾರ ತೀವ್ರಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಜನತೆಯ ಅಸ್ಮತೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಬದಲಿಸುವ  ಕ್ರಮಗಳನ್ನು ಬಲವಂತದಿಂದ ತರಲಿಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಕಾಶ್ಮೀರದ ಜನತೆ ತಮ್ಮನ್ನು ಕಾಡುತ್ತಿರುವ ಎರಡು ಪೀಡೆಗಳಾದ ಕೊರೊನ ವೈರಸ್ ಮತ್ತು ಪ್ರಜಾಪ್ರಭುತ್ವದ ದಮನದ ನಡುವೆ ವ್ಯತ್ಯಾಸವನ್ನೇ ಕಾಣಲಾರದವರಾಗಿದ್ದಾರೆ.

ಈ ಮಹಾಮಾರಿಯ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಏನಾಗುತ್ತಿದೆ ಎಂದು ಹೆಚ್ಚೇನೂ ಕೇಳ ಬರುತ್ತಿಲ್ಲ. ಆದರೆ ಅಲ್ಲಿನ ಜನಗಳು ಕೊರೊನ ವೈರಸ್ ಹರಡಿಕೆಯ ಬಗ್ಗೆ ಗಂಭೀರ ಆತಂಕಕ್ಕೆ ಒಳಗಾಗಿರುವಾಗಲೂ  ಆಳುವ ಹಿಂದುತ್ವ ಮಂದಿ ಈಗ ಜಮ್ಮು ಮತ್ತು ಕಾಶ್ಮಿರದ ಕೇಂದ್ರಾಡಳಿತ ಪ್ರದೇಶ ಎಂದೇನು ಹೇಳುತ್ತಿದ್ದಾರೋ ಅದನ್ನು ರೂಪಿಸುವಲ್ಲಿ ಮಗ್ನರಾಗಿದ್ದಾರೆ. ಕಾಶ್ಮೀರ ಕಣಿವೆಯ ಜನಗಳ ಮಟ್ಟಿಗೆ, ಆಗಸ್ಟ್ ೨೦೧೯ರಿಂದ ಅವರು ಅನುಭವಿಸುತ್ತಿರುವ ದಮನ-ದಬ್ಬಾಳಿಕೆಗಳು ಹಾಗೆಯೇ ಮುಂದುವರೆಯುತ್ತಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಲಾಕ್‌ಡೌನ್ ಭಾರತಕ್ಕಿಂತ ಪೂರ್ಣ ಎಂಟು ತಿಂಗಳ ಮೊದಲೇ ಆರಂಭವಾಯಿತು. ಅದು ಯಾವುದೇ ಸಾಂಕ್ರಾಮಿಕ ಅಥವ ಆರೋಗ್ಯ ತುರ್ತು ಪರಿಸ್ಥಿತಿಯಿಂದಾಗಿ ಬಂದದ್ದಲ್ಲ. ಅದೊಂದು ರಾಜಕೀಯ ಲಾಕ್‌ಡೌನ್, ಜಮ್ಮು ಮತ್ತು ಕಾಶ್ಮೀರದ ಜನಗಳ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ಒಂದು ಪ್ರಹಾರದೊಂದಿಗೆ ಅದು ಬಂತು. ಅದರ ಫಲಿತಾಂಶವಾಗಿ ಮೋದಿ ಸರಕಾರ ಈ ರಾಜ್ಯವನ್ನು ಮತ್ತು ಕಲಮು ೩೭೦ರ ಅಡಿಯಲ್ಲಿ ಅದಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕಳಚಿ ಹಾಕಿತು. ಮೂಲಭೂತ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳ ಮೇಲೆ ಸಂಪೂರ್ಣ ನಿರ್ಬಂಧ, ಸಾವಿರಾರು ರಾಜಕೀಯ ಮುಖಂಡರುಗಳು ಮತ್ತು ಕಾರ್ಯಕರ್ತರ ಬಂಧನ, ಇಂಟರ್ನೆಟ್ ಬಂದ್ ಮತ್ತು ಪತ್ರಿಕೆಗಳ ಬಾಯಿಗೆ ಬೀಗ ಹಾಗೂ ಶಾಲೆಗಳ, ಜನಗಳ ಚಲನವಲನ ಬಂದ್ ಇವೆಲ್ಲ ಈ ಅವಧಿಯಲ್ಲಿ ಎದ್ದು ಕಂಡಿರುವ ಸಂಗತಿಗಳು.

ಭಾರತದ ಇತರ ಭಾಗಗಳೊಡನೆ ಮಾರ್ಚ್ ೨೫ರಂದು ಆರಂಭವಾದ ಎರಡನೇ ಲಾಕ್‌ಡೌನಿನಲ್ಲಿ ಈ ಪ್ರಹಾರ ತೀವ್ರಗೊಂಡಿದೆ. ಜನಗಳು ವೈರಸ್ ವಿರುದ್ಧ ಹೆಣಗುತ್ತಿರುವ ಸಮಯದಲ್ಲಿ ಕೇಂದ್ರ ಗೃಹ ಮಂತ್ರಾಲಯ ನೇರವಾಗಿ ನಡೆಸುತ್ತಿರುವ ಈ ಕೇಂದ್ರಾಡಳಿತ ಪ್ರದೇಶದ ಆಡಳಿತ ಕಾಶ್ಮೀರಿ ಅಸ್ಮಿತೆಯನ್ನು ಮತ್ತು ರಾಜಕೀಯ ವ್ಯವಸ್ಥೆಯನ್ನು ಕಳಚಿ ಹಾಕುವಲ್ಲಿ ಮಗ್ನವಾಗಿದೆ, ಅದಕ್ಕಾಗಿ ಜನಸಂಖ್ಯೆಯ ಸಂಯೋಜನೆಯಲ್ಲಿ ಬದಲಾವಣೆಗೆ ಅಡಿಗಲ್ಲು ಹಾಕುತ್ತಿದೆ. ಭವಿಷ್ಯದ ಮೊಟಕು ವಿಧಾನಸಭೆಯ ಕ್ಷೇತ್ರಗಳ ಮರುವಿಂಗಡಣೆಯ ಮೂಲಕ ರಾಜಕೀಯ ಸ್ವರೂಪವನ್ನು ಪುನರ್ರಚಿಸುವ ಮತ್ತು ಒಂದು ಕೈಗೊಂಬೆ ರಾಜಕೀಯ ಪಕ್ಷವನ್ನು ಕಡೆದು ನಿಲ್ಲಿಸುವ ರಾಜಕೀಯ ಪರಿಯೋಜನೆಯೂ ಜಾರಿಯಲ್ಲಿದೆ.

ಸಂಪೂರ್ಣ ಸಂವೇದನಾಶೂನ್ಯ:

 ಕೊರೊನ ಮಹಾಮಾರಿಯನ್ನು ನಿಭಾಯಿಸುವ ಆಡಳಿತವು ಜನಗಳ ಸಂಕಟಗಳಿಗೆ ಸಂಪೂರ್ಣವಾಗಿ ಸಂವೇದನಾಶೂನ್ಯವಾಗಿದೆ. ಎಪ್ರಿಲ್ ೨೨ ರ ವರೆಗೆ ಇಲ್ಲಿ ೪೦೭ ಸೋಂಕಿತರನ್ನು ಗುರುತಿಸಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಜನಸಂಖ್ಯೆಯ ಪ್ರಮಾಣದಲ್ಲಿ ಇದು ಬಹಳ ಹೆಚ್ಚೇ. ಇಲ್ಲಿನ ಆರೋಗ್ಯ ವ್ಯವಸ್ಥೆ ಸಾಂಕ್ರಾಮಿಕವೊಂದನ್ನು ನಿಭಾಯಿಸಲು ಏನೇನೂ ಸಾಲದು. ೭೦ ಲಕ್ಷ ಜನಸಂಖ್ಯೆಯಿರುವ ಕಣಿವೆ ಪ್ರದೇಶದಲ್ಲಿ ಲಭ್ಯವಿರುವ ವೆಂಟಿಲೇಟರುಗಳು ಕೇವಲ ೯೭ ಎಂದು ವರದಿಯಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಒದಗಿಸಿರುವ ಆರ್ಥಿಕ ಪರಿಹಾರವು ಅಲ್ಪವೇ. ದೇಶದ ಬೇರೆ ರಾಜ್ಯಗಳಿಗೆ ಕೊಟ್ಟಿರುವುದಕ್ಕಿಂತಲೂ ಬಹಳ ಕಡಿಮೆ. ಬಿಪಿಎಲ್ ಕುಟುಂಬಗಳಿಗೆ ಉಚಿತ ರೇಷನ್ ಮತ್ತು ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿಯಿಂದ ಅವರಿಗೆ ೧೦೦೦ರೂ. ಮಾತ್ರ ಪ್ರಕಟಿಸಲಾಗಿದೆ ಮತ್ತು ಭಾಗಶಃ ಜಾರಿಯಾಗಿದೆ. ತಮ್ಮ ಜೀವನೋಪಾಯವನ್ನು ಕಳಕೊಂಡಿರುವ ಸಾವಿರಾರು ಕಾರ್ಮಿಕರು ಮತ್ತು ಕುಶಲಕರ್ಮಿಗಳಿಗೆ ನಗದು ಅನುದಾನವಿಲ್ಲ, ಬಡಕುಟುಂಬಗಳಿಗೆ ಯಾವುದೇ ರೀತಿಯ ಆದಾಯ ಬೆಂಬಲವಿಲ್ಲ.

ಮೊದಲ ಲಾಕ್‌ಡೌನ್ ನಲ್ಲೇ ಪ್ರವಾಸೋದ್ಯಮ ಮತ್ತು ಕರಕುಶಲ ವಲಯಗಳಲ್ಲಿ ಹತ್ತಾರು ಸಾವಿರ ಮಂದಿ ಕೆಲಸ ಕಳಕೊಂಡರು. ಹವಾಮಾನ ವೈಪರೀತ್ಯ, ಸಾಗಾಣಿಕೆ ಮತ್ತು ಮಾರಾಟದ ಸೌಲಭ್ಯಗಳ ಕೊರತೆಯಿಂದಾಗಿ ಸೇಬು, ಕೇಸರಿ ಮುಂತಾದ ತೋಟದ ಉತ್ಪನ್ನಗಳು ತೀವ್ರ ನಷ್ಟಗಳನ್ನು ಅನುಭವಿಸಿದವು.

ಎರಡನೇ ಲಾಕ್‌ಡೌನ್ ಈ ಬಿಕ್ಕಟ್ಟು ಮತ್ತು ನಷ್ಟಗಳನ್ನು ಇನ್ನಷ್ಟು ಆಳಗೊಳಿಸಿದೆಯಷ್ಟೇ. ಆದರೂ ಕೇಂದ್ರದಿಂದ ನಡೆಯುವ ಆಡಳಿತ ಕೇವಲ ಜನಗಳ ಮೇಲೆ ಪೋಲಿಸ್ ನಿಗಾ ಇಡುವ ಮತ್ತು ಭಿನ್ನಮತದ ಎಲ್ಲ ಸಂಕೇತಗಳನ್ನೂ ಹೊಸಕಿ ಹಾಕುವದರ ಮೇಲೆಯೇ ಗಮನ ಕೇಂದ್ರೀಕರಿಸಿದೆ.

ಕಳೆದ ವಾರ ಮೂವರು ಪತ್ರಕರ್ತರ ಮೇಲೆ ಗುರಿಯಿಡಲಾಗಿದೆ, ಅವರಲ್ಲಿ ಒಬ್ಬರು ಮಹಿಳಾ ಫೊಟೋ-ಪತ್ರಕರ್ತೆ ಮಸ್ರತ್ ಝಹ್ರಾ ಅವರ ಮೇಲೆ ಕರಾಳ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಅಡಿಯಲ್ಲಿ ಯಾವುದೋ ನಿರ್ದಿಷ್ಟಪಡಿಸದ ಫೇಸ್‌ಬುಕ್ ಪೋಸ್ಟಿಗಾಗಿ ಮೊಕದ್ದಮೆ ಹಾಕಲಾಗಿದೆ. ಕಾಶ್ಮೀರದಲ್ಲಿ ಕೇಂದ್ರ ಸರಕಾರವನ್ನು  ಅಥವ ಮೋದಿ-ಷಾ ಜೋಡಿಯನ್ನು ಟೀಕಿಸಿದರೆ ಅದು ಪತ್ರಕರ್ತರಿಗೆ ಭಯೋತ್ಪಾದನೆಯ ಆರೋಪವನ್ನು ತರುತ್ತದೆ.

ಜನಸಂಖ್ಯಾ ಸಂಯೊಜನೆಯನ್ನೇ ಬದಲಿಸಲು:

ಕಣಿವೆಯಲ್ಲಿ ಜನಸಂಖ್ಯಾ ಸಂಯೊಜನೆಯನ್ನೇ ಬದಲಿಸಲು ಅನುವು ಮಾಡಿಕೊಡುವ ಒಂದು ಕ್ರಮವನ್ನು ಕೈಗೊಂಡಿರುವಾಗ ಮಾಧ್ಯಮಗಳ ಕತ್ತು ಹಿಸುಕುವ ಈ ಪ್ರಯತ್ನ ನಡೆಯುತ್ತಿದೆ. ಎಪ್ರಿಲ್ ೧ ರಂದು ಹೊರಡಿಸಿದ ಒಂದು ಅಧಿಸೂಚನೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಸದ ಸ್ಥಾನಮಾನದ ಸ್ವರೂಪ ಮತ್ತು ವ್ಯಾಪ್ತಿಯನ್ನು ಬದಲಿಸಿದೆ. ಈ ಮೊದಲು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಮಾತ್ರವೇ ಯಾರು ಖಾಯಂ ನಿವಾಸಿಗಳು ಎಂದು ನಿರ್ಧರಿಸಲು ಸಾಧ್ಯವಿತ್ತು. ಅದನ್ನೀಗ ಬದಲಿಸಲಾಗಿದೆ, ಆಡಳಿತ ಮಟ್ಟದಲ್ಲೇ ವಾಸದ ಸ್ಥಾನಮಾನವನ್ನು ಕೊಡಬಹುದಾಗಿದೆ. ನಿಯಮಗಳನ್ನು ಬದಲಿಸಲಾಗಿದೆ. ೧೫ ವರ್ಷಗಳ ಕಾಲ ಈ ಪ್ರದೇಶದಲ್ಲಿ ವಾಸವಾಗಿದ್ದವರು ವಾಸದ ಸ್ಥಾನಮಾನವನ್ನು ಪಡೆಯಬಹುದಾಗಿದೆ. ಅದೇ ರೀತಿಯಲ್ಲಿ ಕೇಂದ್ರ ಸರಕಾರ ಅಥವ ಕೇಂದ್ರೀಯ ಸಾರ್ವಜನಿಕ ವಲಯದ ಘಟಕದ ಒಬ್ಬ ನೌಕರ ಹತ್ತು ವರ್ಷ ಇಲ್ಲಿದ್ದರೆ ಆತ ಅಥವ ಆಕೆ ವಾಸದ ಸ್ಥಾನಮಾನವನ್ನು ಪಡೆಯಲು ಅರ್ಹರಾಗುತ್ತಾರೆ, ಅವರ ಮಕ್ಕಳೂ ಅರ್ಹರಾಗುತ್ತಾರೆ. ನಾಲ್ಕನೇ ದರ್ಜೆಯ ನೌಕರಿಗಳು ವಾಸದ ಸ್ಥಾನಮಾನ ಪಡೆದ ವ್ಯಕ್ತಿಗಳಿಗೆ ಮೀಸಲಾಗಿರುತ್ತವೆ ಎಂದು ಈ ಅಧಿಸೂಚನೆ ಹೇಳಿದೆ. ಇದರ ಅರ್ಥ ಈ ಪ್ರದೇಶದ ಹೊರಗಿನವರನ್ನು ಇತರ ಹುದ್ದೆಗಳಿಗೆ ನೇಮಿಸಿಕೊಳ್ಳಬಹುದಾಗಿದೆ.

 ಈ ಅಧಿಸೂಚನೆ ಅಲ್ಲೋಲ ಕಲ್ಲೋಲ ಉಂಟು ಮಾಡಿತು. ಜಮ್ಮುವಿನಿಂದಲೂ ಸೇರಿದಂತೆ ಎಲ್ಲ ವಿಭಾಗಗಳ ಜನರು ಇದನ್ನು ವಿರೋಧಿಸಿದರು. ಅದರಿಂದಾಗಿ, ಎರಡು ದಿನಗಳ ನಂತರ ನಿಯಮಗಳನ್ನ ತಿದ್ದುಪಡಿ ಮಾಡಲಾಯಿತು, ಆ ಮೂಲಕ ಎಲ್ಲ ದರ್ಜೇಗಳ ನೌಕರಿಗಳು ಸ್ಥಳೀಯರಿಗೆ iತ್ತು ವಾಸದ ಸ್ಥಾನಮಾನ ಪಡೆದವರಿಗೆ ಮೀಸಲಾಯಿತು. ಆದರೆ ವಾಸದ ಸ್ಥಾನಮಾನದ ನಿರೂಪಣೆಯನ್ನು ಮಾತ್ರ ಬದಲಿಸಲಿಲ್ಲ. ಈ ಹೊಸ ಕಾನೂನಿನ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಹೊರಗಿನ ಜನಗಳು ವಾಸದ ಸ್ಥಾನಮಾನ ಪಡೆಯಬಹುದು, ಉದ್ಯೋಗಗಳನ್ನು ಪಡೆಯಬಹುದು ಮತ್ತು ಜಮೀನನ್ನೂ ಖರೀದಿಸಬಹುದು. ಇದು ಮಾಜಿ ಸೈನಿಕರು ಇಲ್ಲಿ ನೆಲೆಯೂರಲು ಮತ್ತು ಜಮೀನು ಖರೀದಿಸಲು ದಾರಿ ತೆರೆದು ಕೊಡುತ್ತದೆ. ಇದು ಬಿಜೆಪಿ ಮತ್ತು ಆರೆಸ್ಸೆಸ್ ಬಹಳ ಕಾಲದಿಂದ ಪ್ರಯತ್ನಿಸುತ್ತಿದ್ದ ಯೋಜನೆ.

ಆಕ್ರಮಿಸಿಕೊಂಡ ಆಡಳಿತದ ರೀತಿ:

ಲಾಕ್‌ಡೌನನ್ನು ಇಂತಹ ಕ್ರಮಗಳನ್ನು ಬಲವಂತದಿಂದ ತರಲಿಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ನೌಕರಶಾಹಿ-ಸರ್ವಾಧಿಕಾರಶಾಹಿ ಆಳ್ವಿಕೆ ಒಂದು ಆಕ್ರಮಿಸಿಕೊಂಡ ಆಡಳಿತದ ರೀತಿಯಲ್ಲಿ ವರ್ತಿಸುತ್ತಿದೆ. ಬಂಧನಕ್ಕೊಳಗಾದವರಲ್ಲಿ ನೂರಾರು ಮಂದಿಯನ್ನು ಹೊರಗಿನ, ಮುಖ್ಯವಾಗಿ ಉತ್ತರಪ್ರದೇಶ ಮತ್ತು ಹರ‍್ಯಾಣದ ಜೈಲುಗಳಿಗೆ ಕಳಿಸಲಾಗಿದೆ. ಕೊರೊನ ಮಹಾಮಾರಿಯ ನಂತರ ಅವರನ್ನೆಲ್ಲ ಬಿಡುಗಡೆ ಮಾಡಬೇಕೆಂಬ ಸಾರ್ವಜನಿಕ ಒತ್ತಾಯ ಹೆಚ್ಚುತ್ತಿದೆ. ಕಳೆದ ತಿಂಗಳಿಂದ ಸಾರ್ವಜನಿಕ ಸುರಕ್ಷತೆಯ ಕಾಯ್ದೆಯ ಅಡಿಯಲ್ಲಿ ಮಾಡಿದ ಬಂಧನದ ಆದೇಶಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಯಿತು, ಉತ್ತರಪ್ರದೇಶ ಮತ್ತು ಹರ‍್ಯಾಣದಲ್ಲಿದ್ದ ನೂರಕ್ಕೂ ಹೆಚ್ಚು ಬಂಧಿಗಳು ಬಿಡುಗಡೆ ಆದೇಶಗಳನ್ನು ಪಡೆದರು.

ಆದರೆ ಇಲ್ಲಿಯೂ ಅಮಾನವೀಯತೆ ಕಾಣಬರುತ್ತಿದೆ. ಉತ್ತರಪ್ರದೇಶದಲ್ಲಿ ಬಂಧಿಗಳ ಕುಟುಂಬದವರು ಬಿಡುಗಡೆ ಆದೇಶದೊಂದಿಗೆ ಬರಬೇಕು, ಮತ್ತು ಕಾಶ್ಮೀರಕ್ಕೆ ಬಿಡುಗಡೆಯಾದವರೊಂದಿಗೆ ಹಿಂದಿರುಗಲು ತಾವೇ ವ್ಯವಸ್ಥೆಮಾಡಬೇಕು ಎಂದು ಹೇಳಲಾಯಿತು. ಹತ್ತಾರು ಇಂತಹ ಕುಟಂಬಗಳು ರಸ್ತೆ ಮಾರ್ಗವಾಗಿ ಉತ್ತರಪ್ರದೇಶಕ್ಕೆ ಹೋಗಲು ಮತ್ತು ಬಿಡುಗಡೆ ಹೊಂದಿದವರೊಂದಿಗೆ ಮರಳಲು ಬಹಳಷ್ಟು ಕಷ್ಟ ಪಡಬೇಕಾಯಯಿತು. ಅಂತರ-ರಾಜ್ಯ ನಿರ್ಬಂಧಗಳನ್ನು ನಿವಾರಿಸಕೊಳ್ಳಬೇಕು, ಸಾರಿಗೆಗೆ ಬಹಳಷ್ಟು ಹಣ ಖರ್ಚು ಮಾಡಬೇಕು. ಅವರನ್ನು ಬಂಧಿಸಿದ್ದು ಮತ್ತು ದೂರದ ಜೈಲುಗಳಿಗೆ ರವಾನೆ ಮಾಡಿದ್ದು ಸರಕಾರ. ಆದ್ದರಿಂದ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಹೊಣೆ ಸರಕಾರದ್ದೇ ಆಗಬೇಕಿತ್ತು. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಜೈಲುಗಳಲ್ಲಿ ಬಂಧನದಲ್ಲಿ ಇರುವವರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇದು ವೈರಸ್‌ನ ಹರಡಿಕೆಯಿಂದ ಅವರ ಜೀವಕ್ಕೆ ಅಪಾಯವನ್ನು ಉಂಟುಮಾಡಿದೆ.

ಈ ನಡುವೆ, ಉಗ್ರಗಾಮಿ ಚಟುವಟಿಕೆಗಳು, ದಾಳಿಗಳು ಭುಗಿಲೆದ್ದಿವೆ, ಎಲ್ಲ ಪ್ರಜಾಪ್ರಭುತ್ವ ಹಕ್ಕುಗಳ ಅಮಾನುಷ ದಮನದ ಹಿನ್ನೆಲೆಯಲ್ಲಿ ಇದು ನಿರೀಕ್ಷಿತವೇ. ಯಾವುದೇ ರಾಜಕಿಯ ಪ್ರಕ್ರಿಯೆಯ ಮತ್ತು ಪ್ರಜಾಪ್ರಭುತ್ವ ಚಟುವಟಿಕೆಗಳ ಅಭಾವ ಹಿಂಸೆ ಮತ್ತು ಪ್ರತಿಹಿಂಸೆಯ ವಿಷ ವರ್ತುಲಕ್ಕೆ ಈಡು ಮಾಡುತ್ತದೆ. ಇದರಿಂದ ಕಷ್ಟ-ನಷ್ಟಗಳನ್ನು ಅನುಭವಿಸುವವರು ಸಾಮಾನ್ಯ ಜನರೇ. ಕಾಶ್ಮೀರದ ಜನತೆ ತಮ್ಮನ್ನು ಕಾಡುತ್ತಿರುವ ಎರಡು ಪೀಡೆಗಳಾದ ಕೊರೊನ ವೈರಸ್ ಮತ್ತು ಪ್ರಜಾಪ್ರಭುತ್ವದ ದಮನದ ನಡುವೆ ವ್ಯತ್ಯಾಸವನ್ನೇ ಕಾಣಲಾರದವರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *