ವಿದೇಶಿ ಬಂಡವಾಳವನ್ನು ಆಕರ್ಷಿಸಲು, ಪ್ರಧಾನ ಮಂತ್ರಿ ಮೋದಿಯವರು ನವೆಂಬರ್ 12ರಿಂದ ವಿದೇಶ ಪ್ರವಾಸಕ್ಕೆ ಹೊರಡುವ ಹಿಂದಿನ ದಿನ, ನಿಯಂತ್ರಣಗಳೆಲ್ಲ ಸಂಪೂರ್ಣವಾಗಿ ರದ್ದಾಗಿವೆಯೇನೋ ಎನ್ನುವಷ್ಟು ಮಟ್ಟಿಗೆ ವಿದೇಶಿ ಬಂಡವಾಳ ಹೂಡಿಕೆಯ ನೀತಿ ನಿಯಮಗಳನ್ನು ಸಡಿಲಗೊಳಿಸುವುದಾಗಿ ಪ್ರಕಟಿಸಿದ್ದಾರೆ. ಈ ಕ್ರಮವನ್ನು ಅಭಿವೃದ್ಧಿಯ ಬಗ್ಗೆ ಮತ್ತು ಸುಧಾರಣೆಗಳ ಬಗ್ಗೆ ತಮಗಿರುವ ಬದ್ಧತೆಯ ಪ್ರತೀಕವೆಂದೂ ಹಾಗೂ ಅದರ ಲಾಭ ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಲಿದೆಯೆಂದೂ ಹೇಳಿದ್ದಾರೆ. ಆದರೆ ಇದರಲ್ಲಿ ಸಂಭ್ರಮ ಪಡುವಂತದ್ದೇನೂ ಇಲ್ಲ ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಇಲ್ಲಿ ಕೆಲವು ನಿರ್ದಿಷ್ಟ ವಲಯಗಳಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಏನು ಲಾಭ ದಕ್ಕಲಿದೆ ಎಂದು ಪರಿಶೀಲಿಸಲಾಗಿದೆ.
ಚಿಲ್ಲರೆ ವ್ಯಾಪಾರ
ಸಂಘಟಿತರಲ್ಲದ ಸುಮಾರು ನಾಲ್ಕು ಕೋಟಿ ಮಂದಿಗೆ ಚಿಲ್ಲರೆ ವ್ಯಾಪಾರ ಜೀವನಾಧಾರವಾಗಿದೆ. ಒಟ್ಟು ವಹಿವಾಟಿನಲ್ಲಿ 92% ಭಾಗವನ್ನು ಅವರು ನಿರ್ವಹಿಸುತ್ತಿದ್ದಾರೆ. ಇಂತಹ ಬೃಹತ್ ವಹಿವಾಟನ್ನು ವಾಲ್‍ಮಾರ್ಟ್ ನಂತಹ ದೈತ್ಯರಿಗೆ ಒಪ್ಪಿಸುವ ನೀತಿಯನ್ನು ಅವರು ಪ್ರತಿಭಟಿಸಿದರು. ದೇಶಾದ್ಯಂತ ನಡೆದ ಬೃಹತ್ ಪ್ರತಿಭಟನೆಯನ್ನು ಲೆಕ್ಕಿಸದೆ ಯುಪಿಎ ಸರ್ಕಾರವು ಚಿಲ್ಲರೆ ವ್ಯಾಪಾರ ವಲಯದಲ್ಲಿ ವಿದೇಶಿ ಹೂಡಿಕೆ ಮಾಡಲು ವಿದೇಶಿ ಕಂಪೆನಿಯು ತನ್ನ ‘ವಹಿವಾಟಿನ ಶೇ.30 ರಷ್ಟು ಮೌಲ್ಯದ ವಸ್ತ್ತುಗಳನ್ನು ಸ್ಥಳೀಯ ಮೂಲಗಳಿಂದ ಪಡೆಯಬೇಕು’ ಎಂಬ ಶರತ್ತಿನ ಮೇಲೆ ಅನುಮತಿ ಕೊಟ್ಟಿತ್ತು. ಈ ಕ್ರಮವು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಲ್ಲಿ ಉದ್ಯೋಗ ಸೃಷ್ಟಿಗೆ ನೆರವಾಗುತ್ತದೆಂದು ಹೇಳಿತ್ತು. ನಂತರ 2012ರಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಬದಲು ಯಾವುದೇ ಭಾರತೀಯ ಕಂಪೆನಿ ಎಂದು ಬದಲಾವಣೆ ಮಾಡಲಾಗಿತ್ತು. ಈಗ ಎನ್‍ಡಿಎ ಸರ್ಕಾರವು ಶೇ.30 ರಷ್ಟು ಮೌಲ್ಯದ ಸ್ಥಳೀಯ ಮೂಲದ ವಸ್ತ್ತುಗಳನ್ನು ಪಡೆಯುವ ಶರತ್ತನ್ನು ಸಂಪೂರ್ಣವಾಗಿ ರದ್ದು ಮಾಡಿದೆ. ಉದ್ಯೋಗ ಸೃಷ್ಟಿ ಮತ್ತು ದೇಶಿ ಉದ್ದಿಮೆಗಳಿಗೆ ಉತ್ತೇಜನ ಕೊಡುವ ಮೂಲ ಉದ್ದೇಶಗಳ ಹೆಸರಿನಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ವಿದೇಶಿ ಬಂಡವಾಳಕ್ಕೆ ತೆರೆಯಲಾಗಿತ್ತು. ಈಗ ಅದೇ ಉದ್ದೇಶಗಳನ್ನು ಹೂತು ಹಾಕಲಾಗಿದೆ.
ಯುಪಿಎ ಸರ್ಕಾರವು ಚಿಲ್ಲರೆ ವ್ಯಾಪಾರ ವಲಯದಲ್ಲಿ ವಿದೇಶಿ ಹೂಡಿಕೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಬಿಜೆಪಿ ಅದನ್ನು ಕಟುವಾಗಿ ವಿರೋಧಿಸಿತ್ತು. ತಾನು ಈಗ ಅನುಸರಿಸುತ್ತಿರುವ ನೀತಿಗಳ ಮೂಲಕ ಬಿಜೆಪಿ ತನ್ನ ಗೋಸುಂಬೆತನವನ್ನು ಬಯಲು ಮಾಡಿಕೊಂಡಿದೆ.
ಮೋದಿಯವರು ತಮ್ಮ ಇತ್ತೀಚಿನ ಅಮೆರಿಕಾ ಪ್ರವಾಸದ ಸಂದರ್ಭದಲ್ಲಿ ಆ್ಯಪಲ್ ಕಂಪೆನಿಯ ಬಾಸ್ ಟಿಮ್ ಕುಕ್ ಅವರನ್ನು ಭೇಟಿಯಾಗಿ ‘ಮೇಕ್ ಇನ್ ಇಂಡಿಯಾ’ದಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದರು. ಅಂಗೈ ಹುಣ್ಣು ನೋಡಲು ಕನ್ನಡಿ ಬೇಕಿಲ್ಲ ಎನ್ನುವಂತೆ ಆ್ಯಪಲ್ ಕಂಪೆನಿಯ ಮುಂದಿನ ನಡೆ ‘ಮೇಕ್ ಇನ್ ಇಂಡಿಯಾ’ ಮತ್ತು ಚಿಲ್ಲರೆ ವ್ಯಾಪಾರಗಳ ವೈಖರಿಯನ್ನು ತೋರಿಸಲಿದೆ. ಟೈವಾನ್‍ನಲ್ಲಿರುವ ಫಾಕ್ಸಕಾನ್ ಎಂಬ ಕಂಪೆನಿಯು ಈಗ ಆ್ಯಪಲ್ ಕಂಪೆನಿಯ ಫೋನ್‍ಗಳನ್ನು ತಯಾಸಿಕೊಡುತ್ತ್ತಿದೆ. ತನ್ನ ಆ್ಯಪಲ್ ಬ್ರ್ಯಾಂಡ್ ಫೋನ್‍ಗಳನ್ನು ಆ್ಯಪಲ್ ಕಂಪೆನಿ ಮಾರಾಟಮಾಡುತ್ತದೆ. ಇತ್ತೀಚೆಗೆ ಫಾಕ್ಸಕಾನ್ ಕಂಪೆನಿಯು ಭಾರತದಲ್ಲಿ ಐದು ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಅದು ತನ್ನದೇ ಬ್ರ್ಯಾಂಡ್ ಫೋನ್‍ಗಳನ್ನು ತಯಾರಿಸಿ ಮಾರುತ್ತದೆ. ಇತ್ತ ಆ್ಯಪಲ್ ತನ್ನ ಮಳಿಗೆ ತೆರೆದು ಫೋನ್‍ಗಳನ್ನು ಆಮದು ಮಾಡಿಕೊಂಡು ಮಾರಾಟಮಾಡುತ್ತದೆ. ಆ್ಯಪಲ್ ಮಳಿಗೆಯಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗುವುದಿಲ್ಲ. ಈಗಾಗಲೇ ಆ್ಯಪಲ್ ಫ್ರ್ಯಾಂಚೈಸಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ತುಸು ಹೆಚ್ಚಿಗೆ ಸಂಬಳ ಕೊಟ್ಟು ಅವರನ್ನು ನೇಮಕ ಮಾಡಿಕೊಳ್ಳುತ್ತದೆ. ಈ ಎರಡೂ ಹೂಡಿಕೆಗಳಿಂದ ತಂತ್ರಜ್ಞಾನವೂ ಇಲ್ಲದ, ಉದ್ಯೋಗಗಳೂ ಇಲ್ಲದ ‘ಮೇಕ್ ಇನ್ ಇಂಡಿಯಾ’ದ ಅರ್ಥವಾದರೂ ಏನು?
ನಿರ್ಮಾಣ ವಲಯ
ನಿರ್ಮಾಣ ವಲಯದಲ್ಲಿ ವಿದೇಶಿ ಹೂಡಿಕೆಯ ಉದಾರೀಕರಣವು ಕೆರೆಯ ತೂಬು ತೆರೆದಂತಾಗಿದೆ. ಬಡವರಿಗೆ ಐವತ್ತು ಕೋಟಿ ಮನೆಗಳನ್ನು ನಿರ್ಮಿಸುವ ನೆಪದಲ್ಲಿ ಈವರೆಗೆ ಜಾರಿಯಲ್ಲಿದ್ದ ಕೆಲವು ಕಟ್ಟುಪಾಡುಗಳನ್ನು ಗಾಳಿಗೆ ತೂರಲಾಗಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕಡು ಬಡವರಿಗೆ ಆರು ತಿಂಗಳು ಕಳೆದರೂ ಬಿಡಿಗಾಸು ಕೂಲಿ ಕೊಡಲು ನಿರಾಕರಿಸಿ ಸುಪ್ರೀಂ ಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡ ಕೇಂದ್ರ ಸರ್ಕಾರ ಬಡವರಿಗೆ ಮನೆ ಕಟ್ಟಿಕೊಡುವುದು ನಂಬುವ ಮಾತೆ? ಹೆಪ್ಪಿಗೆ ಮಜ್ಜಿಗೆ ಹಾಕದವರು ಕರೆದು ಹಾಲು ಕೊಡುತ್ತಾರೆಯೆ? ಅದೂ ಹೋಗಲಿ. ಮನೆಗಳನ್ನು ಕಟ್ಟಲು ವಿದೇಶಗಳಿಂದ ಹಣ ತರುವ ಭೂಪರು ಯಾರು? ವಿದೇಶಗಳಲ್ಲಿ ಹೇರಳವಾಗಿ ಬಚ್ಚಿಟ್ಟಿರುವ ಕಪ್ಪು ಹಣವನ್ನು ಬಿಳಿ ಮಾಡಲು ನಿರ್ಮಾಣ ವಲಯದ ಬಳಕೆಯಾಗುತ್ತಿದೆ. ಈ ರಾಜ ಮಾರ್ಗದಲ್ಲಿ ತೊಡಗಿಸಿರುವ ಹಣದ ಹೆಚ್ಚಿನ ಪಾಲು ಭಾರತೀಯ ಭೂಪರಿಗೆ ಸೇರಿದೆ. ಇವರಲ್ಲದೆ, ಬೃಹತ್ ರಿಯಲ್ ಎಸ್ಟೇಟ್ ಕಂಪೆನಿಗಳಲ್ಲಿ ಈಕ್ವಿಟಿ ಹೂಡಿಕೆ ಮಾಡುವ ವಿದೇಶಿಯರೂ ಇದ್ದಾರೆ. ದೊಡ್ಡ ಪ್ರಮಾಣದ ಲಾಭ ಗಳಿಸುವ ಉದ್ದೇಶದಿಂದ ಮಾಡಿದ ಹೂಡಿಕೆಯ ಹಣದಲ್ಲಿ ಅವರು ಬಡವರಿಗೆ ಬೇಕಾಗುವ ಗುಡಿಸಲು ಕಟ್ಟುತ್ತಾರೋ? ಅಥವಾ, ಭಾರಿ ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರಿಗೆ ಬೇಕಾಗುವ ಫ್ಲ್ಯಾಟ್‍ಗಳು ಮತ್ತು ಟೌನ್‍ಶಿಪ್‍ಗಳನ್ನು ಕಟ್ಟುತ್ತಾರೋ? ಅಥವಾ, ಕಮರ್ಶಿಯಲ್ ಕಾಂಪ್ಲೆಕ್ಸ್‍ಗಳನ್ನು ಕಟ್ಟುತ್ತಾರೋ?
ಟೀ ಪ್ಲಾಂಟೇಷನ್
ಪಶ್ಚಿಮ ಬಂಗಾಳದ ಅನೇಕ ಟೀ ಪ್ಲಾಂಟೇಷನ್‍ಗಳು ರೋಗಗ್ರಸ್ತವಾಗಿವೆ. ಅಲ್ಲಿ ಕೆಲಸಮಾಡುವ ಕಾರ್ಮಿಕರು ಕೂಲಿ ಕೆಲಸ ನಿಂತಿರುವ ಕಾರಣ ಹಸಿವಿನಿಂದ ನರಳುತ್ತಿದ್ದಾರೆ. ಅವರಿಗೆ ಪರಿಹಾರ ಒದಗಿಸಲು ಮನಸ್ಸಿಲ್ಲದ ಸರ್ಕಾರವು ಟೀ ಪ್ಲಾಂಟೇಷನ್‍ಗಳನ್ನು ಕೊಳ್ಳಲು ವಿದೇಶಿ ಕಂಪೆನಿಗಳಿಗೆ ಅನುಮತಿ ಕೊಟ್ಟಿದೆ. ದೇಶಪ್ರೇಮದ ಗುತ್ತಿಗೆ ಹಿಡಿದಿರುವವರಂತೆ ಬಡಾಯಿ ಕೊಚ್ಚಿಕೊಳ್ಳುವವರ ಪಕ್ಷದ ಸರ್ಕಾರ ಸಾಮ್ರಾಜ್ಯಶಾಹಿ ಶಕ್ತಿಗಳ ಏಜೆಂಟರಂತೆ ಕೆಲಸಮಾಡುತ್ತಿದೆ. ಇಂತಹ ನೀತಿಗಳಿಂದಾಗಿ ಜಿಂಬಾಬ್ವೆ, ಕೆನ್ಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಬ್ರೆಜಿಲ್ ಮುಂತಾದ ದೇಶಗಳಲ್ಲಿ ದುಡಿಯುವ ಜನತೆಯ ಕಷ್ಟ ಕಾರ್ಪಣ್ಯಗಳು ಹೆಚ್ಚಾಗಿವೆ. ಅವರ ಅನುಭವಗಳಿಂದ ನಮ್ಮ ದೇಶದ ಸರ್ಕಾರ ಪಾಠ ಕಲಿಯಬಹುದಿತ್ತು. ಆದರೆ, ಅದು ಸುಲಿಗೆ ಮಾಡುವವರಿಗೆ ರತ್ನಗಂಬಳಿ ಹಾಸುತ್ತಿದೆ.
ರಕ್ಷಣಾ ವಲಯ
1,60,000ಕೋಟಿ ರೂಪಾಯಿಗಳ ಮೌಲ್ಯದ ರಕ್ಷಣಾ ಸಲಕರಣೆಗಳನ್ನು ಆಮದು ಮಾಡಿಕೊಳ್ಳುವ ದೇಶ ನಮ್ಮದು. ಅತಿ ದೊಡ್ಡ ಪ್ರಮಾಣದ ಅಸ್ತ್ರ ಆಯುಧಗಳನ್ನು ಆಮದು ಮಾಡಿಕೊಳ್ಳುವ ದೇಶ ಭಾರತ. ‘ಮೇಕ್ ಇನ್ ಇಂಡಿಯಾ’ದ ಪ್ರಯೋಜನ ಆಗುವುದಿದ್ದರೆ ಅದು ರಕ್ಷಣಾ ವಲಯದಲ್ಲಿ. ವಿದೇಶಿ ಬಂಡವಾಳ ಮತ್ತು ತಂತ್ರಜ್ಞಾನದ ಬಳಕೆ ಮಾಡಿಕೊಂಡು ಅನೇಕ ರಕ್ಷಣಾ ಉಪಕರಣಗಳನ್ನು ದೇಶದಲ್ಲೇ ತಯಾರಿಸಬಹುದು. ರಿಲೈಯನ್ಸ್, ಟಾಟಾ, ಮಹಿಂದ್ರಾ, ಅದಾನಿ ಮುಂತಾದ ಕಂಪೆನಿಗಳು ವಿದೇಶಿ ಪಾಲುದಾರಿಕೆಯೊಂದಿಗೆ ದೇಶದ ಭೂ ಸೇನೆ, ನೌಕಾ ಬಲ ಮತ್ತು ವಾಯು ಸೇನೆಯ ರಕ್ಷಣಾ ಅಗತ್ಯಗಳನ್ನು ಪೂರೈಸಲು ತುದಿಗಾಲಲ್ಲಿ ನಿಂತಿವೆ. ಸರ್ಕಾರಗಳು ಬೃಹತ್ ಪ್ರಮಾಣದ ಭ್ರಷ್ಟಾಚಾರಗಳಲ್ಲಿ ತೊಡಗಲು ದೊಡ್ಡ ಅವಕಾಶಗಳಿರುವುದು ರಕ್ಷಣಾ ವಲಯದ ಅಗತ್ಯ ಉಪಕರಣಗಳ ಪೂರೈಕೆಯಲ್ಲಿದೆ ಎಂಬ ಅಂಶವನ್ನು ಗುರುತಿಸಿರುವ ಪಾರದರ್ಶಕ ಅಂತರಾಷ್ಟ್ರೀಯ ಎಂಬ ಸಂಸ್ಥೆಯು ತನ್ನ ಸೂಚ್ಯಂಕದಲ್ಲಿ ಅತಿ ಕೆಳಗಿನ ಸ್ಥಾನವನ್ನು ಭಾರತಕ್ಕೆ ಕೊಟ್ಟಿದೆ. ಆದ್ದರಿಂದ, ಘನ ಸರ್ಕಾರವು ಈ ನಿಟ್ಟಿನಲ್ಲಿ ಪಾರದರ್ಶಕವಾಗಿರಬೇಕೆಂಬ ಸೂಚನೆ ಕೊಟ್ಟಿದೆ.