- ಎನ್‌ಡಿಎ ಮೈತ್ರಿಕೂಟದ ವಿರುದ್ಧ ಮಹಾಘಟಬಂಧನ್ ರಚಿಸಿರುವ ಕಾಂಗ್ರೆಸ್, ಆರ್‌ಜೆಡಿ
- ಬಿಹಾರದಲ್ಲಿ ಶೇ.4 ಮತ ಹೊಂದಿರುವ ಎಡಪಕ್ಷಗಳು
ಪಾಟ್ನಾ: ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ಸ್ವಲ್ಪವೇ ತೆರೆದುಕೊಳ್ಳುತ್ತಿರುವ ಭಾರತದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಬಿಹಾರದ್ದು. ಕೇಂದ್ರ ಮತ್ತು ಬಿಹಾರ ಎರಡೂ ಕಡೆಗಳಲ್ಲಿ ಎನ್‌ಡಿಎ ಆಡಳಿತದಲ್ಲಿರುವುದರಿಂದ ಆಡಳಿತಾರೂಢ ಸರ್ಕಾರಗಳಿಗೆ ಬಿಹಾರ ಚುನಾವಣೆ ಗೆಲ್ಲುವುದು ಪ್ರತಿಷ್ಠೆ. ಈ ಪ್ರತಿಷ್ಠೆಗೆ ಎಡಪಕ್ಷಗಳು ಸವಾಲೆಸೆಯುವ ಸಾಧ್ಯತೆಯನ್ನು ಚುನಾವಣಾ ವಿಶ್ಲೇಷಕರು ಗಮನಿಸಿದ್ದಾರೆ.
ಜೆಡಿಯು ಮುಖ್ಯಸ್ಥ ನಿತೀಶ್‌ಕುಮಾರ್ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈಗಾಗಲೇ ಹೇಳಿದ್ದಾರೆ. ಮಹಾಘಟಬಂಧನ ಬಗ್ಗೆ ಕಾಂಗ್ರೆಸ್ ತನ್ನ ನಿಲುವನ್ನು ಇನ್ನಷ್ಟೆ ಪ್ರಕಟಿಸಬೇಕಿದೆ. ಆಂತರಿಕ ಗೊಂದಲಗಳಿರುವುದರಿಂದ ಅದು ನಿಲುವನ್ನು ಪ್ರಕಟಿಸಲು ತಡಮಾಡುತ್ತಿದೆ.
ಆರ್‌ಜೆಡಿ ಮತ್ತು ಕಾಂಗ್ರೆಸ್ ಹೊರತಾಗಿ ಉಳಿದ ಪಕ್ಷಗಳನ್ನು ಮಹಾಘಟಬಂಧನದೊಳಕ್ಕೆ ತರುವ ಕೆಲಸ ನಡೆಯುತ್ತಿದ್ದು, ಬಿಹಾರದಲ್ಲಿ ಶೇ.೪ ಮತಗಳನ್ನು ಹೊಂದಿರುವ ಎಡಪಕ್ಷಗಳನ್ನು ತರುವ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ. ಇದು ಜಿತನ್ ರಾಮ್ ಮಾಂಝಿ ಅವರು ಘಟಬಂಧನ ತೊರೆದು ಹೋಗಿದ್ದರಿಂದ ಆಗಿದ್ದ ಆರಂಭಿಕ ಹಿನ್ನಡೆಯನ್ನು ಎಡಪಕ್ಷಗಳ ಸೇರ್ಪಡೆ ತಡೆಯಲಿದೆ ಎನ್ನುವ ವಿಶ್ವಾಸ ಆರ್‌ಜೆಡಿ ನಾಯಕರದ್ದು.
ಎಡಪಕ್ಷಗಳಾದ ಸಿಪಿಐ, ಸಿಪಿಎಂ ಮತ್ತು ಸಿಪಿಐ(ಎಂಎಲ್)ಗಳು ಮಹಾಘಟಬಂಧನಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ. ಈ ಮೂಲಕ ಪ್ರತಿಪಕ್ಷಗಳ ಮತಗಳ ಕ್ರೂಢೀಕರಣದ ಮುನ್ಸೂಚನೆ ಸಿಕ್ಕಿದೆ. ಇದು ನೇರವಾಗಿ ಎನ್‌ಡಿಎಗೆ ಕಠಿಣ ಸವಾಲು ಎಸೆಯುವ ಬೆಳವಣಿಗೆಯೂ ಹೌದು.
ಎಡಪಕ್ಷಗಳು ಬಿಹಾರದಲ್ಲಿ ಒಂದಂಕಿ ಸ್ಥಾನಗಳನ್ನು ಗೆದ್ದರೂ ಕೂಡ ಬೆಗುಸರಾಯ್, ಮಧುಬಾನಿ, ಪೂರ್ನಿಯಾ , ಜೆಹಾನಾಬಾದ್, ಭೋಜ್‌ಪುರ ಮತ್ತು ಔರಂಗಾಬಾದ್ ಪ್ರದೇಶಗಳಲ್ಲಿ ಪ್ರಭಾವ ಹೊಂದಿವೆ. ಒಂದು ವೇಳೆ ಘಟಬಂಧನಕ್ಕೆ ಎಡಪಕ್ಷಗಳೂ ಸೇರಿದರೆ ಹೋರಾಟವು ಸಮತೋಲನ ಸಾಧಿಸಿಕೊಳ್ಳುವ ಅವಕಾಶಗಳಿವೆ.
ದೇಶ ಎದುರಿಸುತ್ತಿರುವ ಪರಿಸ್ಥಿತಿ ಮತ್ತು ಅದನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟ ನಿರ್ವಹಿಸುತ್ತಿರುವ ರೀತಿ, ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಆಡಳಿತ, ಸಂವಿಧಾನಬದ್ಧ ಸಂಸ್ಥೆಗಳ ಮೇಲಿನ ಅನುಚಿತ ಪ್ರಭಾವ ದೇಶಕ್ಕೆ ಅಪಾಯ ತಂದೊಡ್ಡಿದೆ ಎನ್ನುವ ಎಡಪಕ್ಷಗಳ ನಿಲುವು ಮತ್ತು ಬಿಜೆಪಿ ವಿರೋದಿ ರಾಜಕೀಯ ಶಕ್ತಿಗಳು ಎನ್‌ಡಿಎ ವಿರುದ್ಧ ಒಟ್ಟಾಗಬೇಕು ಎಂದು ರಾಹುಲ್ ಗಾಂಧಿ ಅವರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಎಡ ಪಕ್ಷಗಳು ಮಹಾಘಟಬಂಧನ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಚುನಾವಣಾ ಆಯೋಗ ನ್ಯಾಯಯುತವಾಗಿರಬೇಕಷ್ಟೇ ಅಲ್ಲ, ಸ್ಪಷ್ಟವಾಗಿ ಕಾಣುವಂತೆಯೂ ಇರಬೇಕು
‘ಎಡ ಪಕ್ಷಗಳು ಮಹಾಘಟಬಂಧನ ಸೇರುವ ಪ್ರಕ್ರಿಯೆಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಈಗಾಗಲೇ ಅನುಮೋದನೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್‌ನಿಂದ ಇನ್ನಷ್ಟೇ ಔಪಚಾರಿಕ ಅನುಮತಿ ಪಡೆಯಬೇಕಿದೆ. ರಾಷ್ಟ್ರದ ಹಳೇ ಪಕ್ಷವಾದ ಕಾಂಗ್ರೆಸ್, ತನ್ನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಗೊಂದಲದ ಗೂಡಾಗಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ,’ ಎಂದು ಮಹಾಘಟಬಂಧನದ ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ಜೆಡಿಯು, ಬಿಜೆಪಿ ಮತ್ತು ಎಲ್‌ಜೆಪಿ ಈ ಮೂರು ಪಕ್ಷಗಳು ಒಟ್ಟಾರೆ ಶೇ. 39 ಮತಗಳನ್ನು ಹೊಂದಿದ್ದು, ಬಹುಮತಕ್ಕೆ ಎನ್‌ಡಿಎ ಹತ್ತಿರದಲ್ಲಿದ್ದಂತೆ ಕಾಣುತ್ತದೆ. ಮತ್ತೊಂದೆಡೆ, ಆರ್‌ಜೆಡಿ, ಕಾಂಗ್ರೆಸ್, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮತ್ತು ಮುಖೇಶ್ ಸಾಹ್ನಿಯ ವಿಕಾಸ್-ಶೀಲ್ ಇನ್ಸಾನ್ ಪಕ್ಷವನ್ನು (ವಿಐಪಿ) ಒಳಗೊಂಡಿರುವ ಮಹಾಘಟಬಂಧನವು ಶೇ.32 ರಷ್ಟು ಮತಗಳನ್ನು ಹೊಂದಿದೆ. ಹಾಗೆಯೇ ಎಡಪಕ್ಷಗಳು ಶೇ.4 ಮತಗಳನ್ನು ಹೊಂದಿವೆ.
ಬಿಹಾರಾದ್ಯಂತ ಕಾರ್ಯಕರ್ತ ಪಡೆ ಹೊಂದಿರುವ, ಆದರೆ ಪ್ರತಿಪಕ್ಷಗಳ ಮತಗಳ ವಿಭಜನೆಯಿಂದಾಗಿ ಸ್ಥಾನಗಳನ್ನು ಪಡೆಯಲು ವಿಫಲವಾಗುತ್ತಿರುವ ಎಡ ಪಕ್ಷಗಳು ಘಟಬಂಧನ ಸೇರ್ಪಡೆಗೊಂಡರೆ ಮಹಾಮೈತ್ರಿ ಕೂಟದ ಬಾಹುಳ್ಯ ಹೆಚ್ಚಾಗಲಿದೆ. ಎಡಪಂಥೀಯರು ರಾಜ್ಯದಲ್ಲಿ ಕನಿಷ್ಠ ಶೇ.4 ಮತಗಳನ್ನು ಹೊಂದಿದ್ದಾರೆ. ಅವರ ಆಗಮನವು ಘಟಬಂಧನದ ಮತಗಳ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಆ ಮೂಲಕ ಚುನಾವಣೆಯಲ್ಲಿ ಎನ್‌ಡಿಎಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿವೆ’ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಅಜಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಘಟಕಬಂಧನದ ಮಿತ್ರಪಕ್ಷವಾಗಿದ್ದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಹವಾಮ್ ಮೋರ್ಚಾ ಇತ್ತೀಚೆಗಷ್ಟೇ ಮೈತ್ರಿ ಕೂಟ ತೊರೆದಿತ್ತು. ಈ ಮೂಲಕ ಮಹಾಮೈತ್ರಿಗೆ ಆಘಾತ ನೀಡಿತ್ತು. ಈ ಮಧ್ಯೆ ಎಡ ಪಕ್ಷಗಳು ಮೈತ್ರಿಕೂಟ ಸೇರುತ್ತಿರುವುದು ಘಟಬಂಧನಕ್ಕೆ ಬಲ ನೀಡಲಿದೆ.