- ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾಂಗ್ರೆಸ್‍ಗೆ ಗೆಲುವು
ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯ ಜತೆಗೆ ದೇಶದ 11 ರಾಜ್ಯಗಳಲ್ಲಿನ 59 ವಿಧಾನಸಭೆ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ 40 ಸ್ಥಾನ ಜಯಿಸುವ ಮೂಲಕ ಭರ್ಜರಿ ಗೆಲುವು ದಾಖಲಿಸಿದೆ.
ಮುಖ್ಯವಾಗಿ ಮಧ್ಯಪ್ರದೇಶ, ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಕಮಲ ಮತ್ತೆ ಕಮಾಲ್ ಮಾಡಿದೆ. ಬಂಡಾಯದ ಮೂಲಕ ಕಮಲ್‌ನಾಥ್ ಸರಕಾರ ಉರುಳಿಸಿ ನಂತರ ಬಿಜೆಪಿ ಸೇರಿ ರಾಜ್ಯಸಭೆ ಸದಸ್ಯರಾದ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಸಾಮರ್ಥ್ಯವನ್ನು ನಿರೂಪಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಕಾಂಗ್ರೆಸ್‌ನ 28 ಶಾಸಕರ ರಾಜೀನಾಮೆ ಬಳಿಕ, ರಾಜಕೀಯ ಕಸರತ್ತಿನಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿಯು ಸರಕಾರ ರಚಿಸಿತು. ಸರಕಾರ 107 ಶಾಸಕರ ಬೆಂಬಲ ಹೊಂದಿದೆ. 229 ಸದಸ್ಯ ಬಲದ ಮಧ್ಯ ಪ್ರದೇಶ ವಿಧಾನ ಸಭೆಯಲ್ಲಿ ಬಹುಮತಕ್ಕೆ 115 ಶಾಸಕರ ಅಗತ್ಯವಿದ್ದು, ಈ ಮ್ಯಾಜಿಕ್ ನಂಬರ್ ತಲುಪಲು ಬೇಕಾಗಿದ್ದ 8 ಸ್ಥಾನಗಳನ್ನು ಸುಲಭವಾಗಿ ದಾಟುವ ಮೂಲಕ ಚೌಹಾಣ್ ಸರಕಾರ ಸೇಫ್ ಆಗಿದೆ. 28 ಸ್ಥಾನಗಳ ಪೈಕಿ 19ರಲ್ಲಿ ಬಿಜೆಪಿ ಗೆದ್ದು ಬೀಗಿದೆ. ಇನ್ನು 9 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ”ಒಂದೊಮ್ಮೆ ಬಿಜೆಪಿ ಸ್ಥಾನ ಗೆದ್ದರೂ ಪಕ್ಷೇತರರ ನೆರವಿನಿಂದ ಬಿಜೆಪಿ ಸರಕಾರ ಉರುಳಿಸುವೆ,” ಎಂದು ಗುಡುಗಿದ್ದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರು ಸೋಲೊಪ್ಪಿಕೊಂಡು, ಬಿಜೆಪಿಯನ್ನು ಅಭಿನಂದಿಸಿದ್ದಾರೆ.
ಉತ್ತರ ಪ್ರದೇಶ, ಗುಜರಾತ್ನಲ್ಲಿ ಕೇಸರಿ ಕಹಳೆ
ಗುಜರಾತಿನ ಎಂಟು ಕ್ಷೇತ್ರಗಳನ್ನೂ ಬಿಜೆಪಿ ತನ್ನದಾಗಿಸಿಕೊಂಡಿದೆ. ಉತ್ತರ ಪ್ರದೇಶದ 7 ಕ್ಷೇತ್ರಗಳ ಪೈಕಿ ಆರರಲ್ಲಿ ಗೆಲುವಿನ ನಗೆ ಬೀರಿದ್ದರೆ, ಒಂದರಲ್ಲಿ ಸಮಾಜವಾದಿ ಪಕ್ಷ ವಿಜಯ ಸಾಧಿಸಿದೆ. ಜಾರ್ಖಂಡ್‌ನ ಧುಮ್ಕಾ ಮತ್ತು ಬೆರ್ಮೊ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕ್ರಮವಾಗಿ ಎಂಎಂನ ಬಸಂತ್ ಸೊರೇನ್ ಮತ್ತು ಕಾಂಗ್ರೆಸ್‌ನ ಅನೂಪ್‌ಸಿಂಗ್ ಗೆಲುವು ದಾಖಲಿಸಿದ್ದಾರೆ. ಮಣಿಪುರದ ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ‘ಕಮಲ’ ಅರಳಿದೆ. ಒಂದರಲ್ಲಿ ಪಕ್ಷೇತರ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ.
ತೆಲಂಗಾಣದ ಏಕೈಕ ಕ್ಷೇತ್ರವು ಬಿಜೆಪಿ ಪಾಲು
ತೆಲಂಗಾಣದ ದುಬ್ಬಾಕ ಕ್ಷೇತ್ರದಲ್ಲಿ ಬಿಜೆಪಿಯ ಎಂ.ರಘುನಂದನ್ ರಾವ್ ಅವರು ಪ್ರತಿಸ್ಪರ್ಧಿ ಟಿಆರ್‌ಎಸ್‌ನ ಸೋಲಿಪೇಟಾ ಸುಜಾತ ಅವರನ್ನು 1,079 ಮತಗಳ ಅಂತರದೊಂದಿಗೆ ಸೋಲಿಸಿ, ಗೆಲುವು ದಾಖಲಿಸಿರುವುದು ವಿಶೇಷವಾಗಿದೆ. ನಾಗಾಲ್ಯಾಂಡ್‌ನ 2 ಕ್ಷೇತ್ರಗಳ ಪೈಕಿ ತಲಾ ಒಂದರಲ್ಲಿ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ ಮತ್ತು ಪಕ್ಷೇತರ ಅಭ್ಯರ್ಥಿಗೆ ಗೆಲುವು ಸಿಕ್ಕಿದೆ. ಆರ್.ಆರ್ ನಗರ ಮತ್ತು ಶಿರಾದಲ್ಲಿ ಬಿಜೆಪಿ ಜಯದ ನಗೆ ಬೀರಿದೆ. ಛತ್ತೀಸ್‌ಗಢದ ಮರ್ವಾಯಿ ಕ್ಷೇತ್ರವು ಕಾಂಗ್ರೆಸ್‌ನ ಡಾ.ಕೆ.ಕೆ.ಧ್ರುವ್ ಅವರ ಪಾಲಾಗಿದೆ. ಒಡಿಶಾದ ಎರಡು ಬಾಲಾಸೋರ್ (ಸ್ವರೂಪ್ ಕುಮಾರ್ ದಾಸ್), ತಿರ್ಥೋಲ್ (ಬಿಜಯ್ ಶಂಕರ್ ದಾಸ್) ಕ್ಷೇತ್ರಗಳನ್ನು ಆಡಳಿತಾರೂಢ ಬಿಜೆಡಿ ಗೆದ್ದುಕೊಂಡಿದೆ.
ಹರಿಯಾಣದಲ್ಲಿ ತಟ್ಟಿದ ಪ್ರತಿಭಟನೆ ಬಿಸಿ
ಈ 11 ರಾಜ್ಯಗಳ ಪೈಕಿ 7ರಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಚುನಾವಣೆ ನಡೆದಿರುವ ಬಹುತೇಕ ರಾಜ್ಯಗಳಲ್ಲಿ ಮತದಾರರು ಆಡಳಿತಾರೂಢ ಪಕ್ಷದ ಅಭ್ಯರ್ಥಿಗಳಿಗೆ ಒಲವು ತೋರಿರುವುದು ಕಂಡುಬಂದಿದೆ. ಕೇಂದ್ರವು ಜಾರಿಗೆ ತಂದಿರುವ ಕೃಷಿ ಕಾಯಿದೆಗಳ ವಿರುದ್ಧ ಉತ್ತರ ಭಾರತದಲ್ಲಿ ಪ್ರತಿಭಟನೆಗಳು ಜೋರಾಗಿ ನಡೆದಿದ್ದವು. ಪ್ರತಿಭಟನೆಯ ಕೇಂದ್ರ ಬಿಂದು ಎನಿಸಿದ್ದ ಹರಿಯಾಣದಲ್ಲಿ ಬಿಜೆಪಿ ಸರಕಾರವಿದ್ದರೂ ಬರೋಡಾ ಕ್ಷೇತ್ರದಿಂದ ಕಾಂಗ್ರೆಸ್‌ನ ರಾಜ್ ನರವಾಲ್ ಅವರು ಬಿಜೆಪಿಯ ಯೋಗೇಶ್ವರ ದತ್ ಅವರನ್ನು 12,300 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ. ಹರಿಯಾಣ ಹೊರತುಪಡಿಸಿದರೆ ಉಳಿದ ಕಡೆ ಕೃಷಿ ಕಾಯಿದೆ ವಿರೋಧಿ ಪ್ರತಿಭಟನೆ ಬಿಜೆಪಿಗೆ ಅಷ್ಟಾಗಿ ತಾಗಿದಂತೆ ಕಂಡುಬಂದಿಲ್ಲ.
ಗುಜರಾತಿನಲ್ಲಿ ಕ್ಲೀನ್ ಸ್ವೀಪ್
ಪ್ರಧಾನಿ ಮೋದಿ ತವರು ಗುಜರಾತಿನ 8 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಅಷ್ಟೂ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೊಮ್ಮೆ ತನ್ನ ತಾಕತ್ತನ್ನು ಪ್ರದರ್ಶಿಸಿದೆ. ಅಬ್ದಾಸಾ, ಮೊರ್ಬಿ, ಕರ್ಜನ್, ಧಾರಿ, ಗಡಾಡಾ, ಕಪ್ರಡಾ ಮತ್ತು ಲಿಂಬ್ಡಿ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. 2022ರ ವಿಧಾನಸಭೆ ಚುನಾವಣೆಗೆ ಇದು ಟ್ರೈಲರ್ ಎಂದು ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಜನ ಸಂಪರ್ಕ ಕಳೆದುಕೊಂಡಿದ್ದು, ಅದೊಂದು ಮುಳುಗುತ್ತಿರುವ ಹಡಗು ಎಂದಿದ್ದಾರೆ. ಜೂನ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರ ಪರಿಣಾಮ ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್ ಶಾಸಕರ ದಿಢೀರ್ ರಾಜೀನಾಮೆಯಿಂದ ಗುಜರಾತ್‌ನ 4 ರಾಜ್ಯಸಭಾ ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿತ್ತು.
ವಾಲ್ಮೀಕಿ ನಗರ ಉಳಿಸಿಕೊಂಡ ಜೆಡಿಯು
ಬಿಹಾರದ ವಾಲ್ಮೀಕಿ ನಗರ ಲೋಕಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಯು ಜಯ ದಾಖಲಿಸಿದೆ. ಜೆಡಿಯು ಅಭ್ಯರ್ಥಿ ಸುನೀಲ್ ಕುಮಾರ್ ಅವರು ಕಾಂಗ್ರೆಸ್ ಪ್ರತಿಸ್ಪರ್ಧಿ ಪರ್ವೇಶ್ ಕುಮಾರ ಮಿಶ್ರಾ ಅವರನ್ನು 23,605 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜೆಡಿಯು ಸಂಸದ ಬೈದ್ಯನಾಥ್ ಮಾಥೋ ಅವರ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನ.7ರಂದು ನಡೆದ ಚುನಾವಣೆಯಲ್ಲಿ ಮಾಥೋ ಅವರ ಪುತ್ರ ಸುನೀಲ್ ಕುಮಾರ್ ಅವರನ್ನು ಜೆಡಿಯು ಕಣಕ್ಕೆ ಇಳಿಸಿತ್ತು. ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಪಕ್ಷವು ಯಶಸ್ವಿಯಾಗಿದೆ.