ಉತ್ತರಾಖಂಡ ದುರಂತದಿಂದ ಪಾಠ ಕಲಿಯಬೇಕು

 ಇಂಥ ದುರಂತ ಸಂಭವಿಸಲು ಎರಡು ಅಂಶಗಳು ಕಾರಣವಾಗುತ್ತವೆ ಮತ್ತು ಅದಕ್ಕೆ ಕೊಡುಗೆ ನೀಡುತ್ತವೆ ಎಂಬುದು ಎದ್ದು ಕಾಣುತ್ತದೆ: ಒಂದು: ತಾಪಮಾನ ಬದಲಾವಣೆ ಎರಡು: ವಲಯದಲ್ಲಿ ಯೋಚನೆಯಿಲ್ಲದ ಮೂಲಸೌಕರ್ಯ ಹಾಗೂ ಇತರ ನಿರ್ಮಾಣ ಯೋಜನೆಗಳನ್ನು ಕೈಗೊಳ್ಳುವುದು. ಅಸ್ಥಿರವಾದ ವಲಯದಲ್ಲಿ ಪಟ್ಟಣಗಳು ಮತ್ತು ಜನವಸತಿ ಪ್ರದೇಶಗಳ ತಾಳಿಕೆಯ ಸಾಮರ್ಥ್ಯದ ಬಗ್ಗೆ ಕೂಡ ಸ್ವಲ್ಪವೂ ಚಿಂತನೆ ನಡೆಸಿಲ್ಲ. ಜನರ ಸುರಕ್ಷತೆಗಿಂತ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಂಪೆನಿಗಳಿಗೆ ತ್ವರಿತವಾಗಿ ಲಾಭ ಮಾಡಿಕೊಡುವುದಕ್ಕೆ ಸರ್ಕಾರ ಆದ್ಯತೆ ನೀಡಿದಂತಿದೆ. ಉತ್ತರಾಖಂಡದ ಬೆಟ್ಟ ಪ್ರದೇಶಗಳ ಎಲ್ಲ ಪರಿಯೋಜನೆಗಳ ಸಂಪೂರ್ಣ ಸುರಕ್ಷತಾ ವ್ಯವಸ್ಥೆ ಮತ್ತು ಪಾರಿಸರಿಕ ಪರಿಶೀಲನೆ ನಡೆಸಬೇಕಾಗಿದೆ. ಪ್ರಸಕ್ತ ವಿನಾಶಕಾರಿ ಪಥವನ್ನು ಯಾವುದೇ ವಿಳಂಬವಿಲ್ಲದೆ ಬದಲಾಯಿಸುವುದು ಅಗತ್ಯ.

ಪ್ರಕಾಶ ಕಾರಟ್

ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ 2021 ಫೆಬ್ರವರಿ ಏಳರಂದು ಇಡೀ ದೇಶದ ಜನರ ಮನಕಲಕುವಂಥ ದುರಂತವೊಂದು ಸಂಭವಿಸಿದೆ. ಈ ಭೀಕರ ಅವಘಡದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 150ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಅಥವಾ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ. ದುರಂತದ ಇನ್ನೂ ಆಘಾತಕಾರಿ ಸಂಗತಿಯೆಂದರೆ ಮೃತಪಟ್ಟವರಲ್ಲಿ ಹೆಚ್ಚಿನವರು ಮೂಲಸೌಕರ್ಯ ಹಾಗೂ ವಿದ್ಯುತ್ ಯೋಜನೆಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು. ರೈಣಿ ಗ್ರಾಮದ ಹತ್ತಿರ ಋಷಿಗಂಗಾ ನದಿ ಮೇಲಿನ ಸಣ್ಣ 13.2 ಮೆಗಾವ್ಯಾಟ್ ವಿದ್ಯುತ್ ಯೋಜನೆ ಅದರಲ್ಲಿ ಒಂದಾಗಿದ್ದು ಅದು ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಧೌಲಿಗಂಗಾ ನದಿಯ ಮೇಲಿನ 520 ಮೆಗಾವ್ಯಾಟ್ ತಪೋವನ ವಿದ್ಯುತ್ ಯೋಜನೆ ಇನ್ನೊಂದು ಪ್ರಮುಖ ಯೋಜನೆಯಾಗಿದೆ. ಅದಕ್ಕೂ ಭಾರಿ ಹಾನಿಯಾಗಿದ್ದು ಅದರ ಬಹಳಷ್ಟು ಕಾರ್ಮಿಕರು ಒಳಗಡೆ ಸಿಲುಕಿಕೊಂಡಿದ್ದಾರೆ. ಈ ಯೋಜನೆಗಳಿಂದ ಈ ವಲಯಕ್ಕೆ ಅನುಕೂಲ ಆಗಬೇಕಿತ್ತು. ಆದರೆ ದುರಂತಕ್ಕೆ ಬಲಿಯಾಗಿವೆ. ಇದು ನಿಜಕ್ಕೂ ವಿಪರ್ಯಾಸ. ಯಾಕೆಂದರೆ ಇಂತಹ ತೀರಾ ನಿರ್ಲಕ್ಷ್ಯಯದಿಂದ ಕೂಡಿದ ‘ಅಭಿವೃದ್ಧಿ’ ಚಟುವಟಿಕೆಗಳೇ ಈ ರೀತಿಯ ಮಹಾ ದುರಂತಗಳಿಗೆ ಪ್ರಮುಖ ಕಾರಣವಾಗುತ್ತವೆ. ಯಾವಾಗಲೂ ಅದೇ ಪ್ರಾಥಮಿಕ ಕಾರಣ ಆಗಿರಲಾರದು ಎನ್ನುವುದೇನೋ ಹೌದು.

ಇದನ್ನು ಓದಿ : ಉತ್ತರಾಖಂಡ ಪ್ರವಾಹ ಕುಸಿತ ಪ್ರದೇಶಕ್ಕೆ ರೈತ-ಕಾರ್ಮಿಕ-ವಿದ್ಯಾರ್ಥಿಗಳ ನಿಯೋಗ ಭೇಟಿ

ಪ್ರಸ್ತುತ ದುರಂತಕ್ಕೆ ನಿಜವಾದ ಕಾರಣ ಏನೆಂಬುದು ನಿಧಾನವಾಗಿ ಅನಾವರಣಗೊಳ್ಳುತ್ತಿದೆ. ಹಿಮಬಂಡೆಯ ಸ್ಫೋಟದಿಂದ ಈ ದುರಂತ ಸಂಭವಿಸಿದೆ ಎಂಬ ಊಹಾಪೋಹಗಳು ನಿಜವಾದ ಕಾರಣವಲ್ಲ ಎಂದನಿಸುತ್ತದೆ. ಬಂಡೆಯಿಂದ ಕೂಡಿದ ಬೆಟ್ಟದ ತುದಿ ಭಾಗದ ಒಂದು ದೊಡ್ಡ ವಿಭಾಗ ತುಂಡರಿಸಿದ್ದರಿಂದ ಸಂಭವಿಸಿರಬಹುದಾದ ಭಾರಿ ಭೂಕುಸಿತ, ಜತೆಗೆ ಇದರಿಂದಾಗಿ ಇತ್ತೀಚೆಗೆ ಸಂಗ್ರಹಗಗೊಂಡ ಹಿಮ ಮತ್ತು ಬಂಡೆಗಳ ಭಾರೀ ಪ್ರವಾಹದಿಂದಾಗಿ ಈ ದುರಂತ ಸಂಭವಿಸಿರಬಹುದೆಂದು ಭಾರತ ಮತ್ತು ವಿದೇಶಗಳ ಉಪಗ್ರಹ ಚಿತ್ರಗಳ ಅಧ್ಯಯನ, ಭಾರತೀಯ ತಜ್ಞರ ತಂಡದ ಪ್ರಾಥಮಿಕ ಅಧ್ಯಯನದಿಂದ ಕಾಣಬರುತ್ತಿದೆ. ಅಸ್ಥಿರವಾದ ಬಂಡೆಯ ಮೇಲ್ಮೈಯ ಮೇಲೆ ಒಂದು ಹಿಮನದಿಯ ಒಂದು ತುಂಡರಿಸಿದ ಭಾಗ ಬಿದ್ದುದು ಈ ಸಮಸ್ತ ಘಟನಾವಳಿಗಳಿಗೆ ಕಾರಣವಾಗಿದ್ದಿರಬಹುದು ಎಂಬ ಅನುಮಾನವೂ ಇದೆ.

ಈ ದುರಂತದಲ್ಲಿ ಮಡಿದವರ ಸಂಖ್ಯೆ ಫೆ.16 ರಂದು 58ಕ್ಕೆ ಏರಿದೆ.

ಎಚ್ಚರಿಕೆಗಳ ಪರಮ ನಿರ್ಲಕ್ಷ್ಯ

ನಿರ್ದಿಷ್ಟ ಕಾರಣಗಳು ಏನೇ ಇರಲಿ; ಎಲ್ಲ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಮತ್ತು ಪರಿಣಾಮಗಳ ಬಗ್ಗೆ ಕಿಂಚಿತ್ತೂ ಚಿಂತಿಸದೆ ನಡೆಸಿದ ಯೋಚನಾ ರಹಿತ ಮಾನವ ನಿರ್ಮಿತ “ಅಭಿವೃದ್ಧಿ’ಯನ್ನು ಈ ದುರಂತ ನೆನಪಿಸುತ್ತದೆ ಎನ್ನುವುದು ಮಾತ್ರ ಸತ್ಯ. ಒಟ್ಟಾರೆಯಾಗಿ ಪರ್ವತ ಪ್ರದೇಶಗಳಲ್ಲಿ, ವಿಶೇಷವಾಗಿ ಪಶ್ಚಿಮ ಹಿಮಾಲಯಗಳಲ್ಲಿ ಇಂಥ ದುರಂತ ಸಂಭವಿಸಲು ಎರಡು ಅಂಶಗಳು ಕಾರಣವಾಗುತ್ತವೆ ಮತ್ತು ಅದಕ್ಕೆ ಕೊಡುಗೆ ನೀಡುತ್ತವೆ ಎಂಬುದು ಎದ್ದು ಕಾಣುತ್ತದೆ: ಒಂದು: ತಾಪಮಾನ ಬದಲಾವಣೆ ಅಂದರೆ ವಾತಾವರಣದ ಉಷ್ಣತೆ ಹೆಚ್ಚುವುದು. ಎರಡು: ಈ ವಲಯದಲ್ಲಿ ಯೋಚನೆಯಿಲ್ಲದ ಮೂಲಸೌಕರ್ಯ ಹಾಗೂ ಇತರ ನಿರ್ಮಾಣ ಯೋಜನೆಗಳನ್ನು ಕೈಗೊಳ್ಳುವುದು.

ಮಾನವ-ನಿರ್ಮಿತ ಜಾಗತಿಕ ತಾಪಮಾನ ಏರಿಕೆ (ಗ್ಲೋಬಲ್ ವಾರ್ಮಿಂಗ್) ಹಿಮಧಾರೆಗಳು (ಗ್ಲೇಷಿಯರ್) ಮತ್ತು ಧ್ರುವೀಯ ಹಿಮ ಆವರಣ ಕರಗುವಿಕೆಗೆ ಕಾರಣವಾಗುತ್ತದೆ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಷಯವೇ. ಅಂತಾರಾಷ್ಟ್ರೀಯವಾಗಿ ಮತ್ತು ಭಾರತದಲ್ಲಿಯೂ ಇತ್ತೀಚೆಗೆ ನಡೆಸಿದ ಅಧ್ಯಯನಗಳ ಪ್ರಕಾರ ಕಳೆದ ಕೆಲ ದಶಕಗಳಿಗಿಂತ ಈಗೀಗ ಮಂಜುಗಡ್ಡೆಗಳ ಕರಗುವಿಕೆಯ ದರ ಹೆಚ್ಚಾಗಿದೆ. ಭಾರತದಲ್ಲಿ, ಪೂರ್ವಕ್ಕಿಂತ ಪಶ್ಚಿಮ ಹಿಮಾಲಯ ವಲಯದಲ್ಲಿ ಗ್ಲೇಷಿಯರ್‌ಗಳು ಬಹಳ ವೇಗದಿಂದ ಕರಗುತ್ತಿವೆ. ಹಿಮಧಾರೆಗಳ ಕರಗುವಿಕೆಯಿಂದ ದೊಡ್ಡ ಕೆರೆಗಳು ಅಥವ ‘ಹಿಮ ಸರೋವರಗಳು ಉಂಟಾಗುತ್ತವೆ. ಕೆಲವೊಮ್ಮೆ ಇವುಗಳ ಕಟ್ಟೆಯೊಡೆದು ದೊಡ್ಡ ಪ್ರಮಾಣದಲ್ಲಿ ನೀರು ಕೆಳಕ್ಕೆ ಧುಮ್ಮಿಕ್ಕುತ್ತದೆ. ಪ್ರಸ್ತುತ ದುರಂತದಲ್ಲಿ ಹಾಗಾಗಿರಬಹುದು ಎಂದು ಮೊದಲಿಗೆ ಊಹಿಸಲಾಗಿತ್ತು. ಇದರಿಂದ, ವಿಶೇಷವಾಗಿ ಪಶ್ಚಿಮ ಹಿಮಾಲಯದಲ್ಲಿ ಅಸ್ಥಿರತೆ ಮತ್ತು ದಿಢೀರ್ ಪ್ರವಾಹದ ಸಂಭಾವ್ಯತೆ ಹೆಚ್ಚಾಗಿದೆ.

ಬೇಜವಾಬ್ದಾರಿ ಧಾವಂತದಿಂದ ಇನ್ನಷ್ಟು ಅಪಾಯ

ಈ ಸಮಸ್ಯೆಯು ಈ ವಲಯದಲ್ಲಿ ಹಲವು ರಸ್ತೆಗಳ ನಿರ್ಮಾಣ, ವಿದ್ಯುಚ್ಛಕ್ತಿ ಯೋಜನೆಗಳು ಮತ್ತಿತರ ಕಾಮಗಾರಿಗಳ ಬೇಜವಾಬ್ದಾರಿ ಧಾವಂತದಿಂದಾಗಿ ಉಲ್ಬಣಗೊಂಡಿದೆ. ಹಿಮಾಲಯವು ಒಂದು ಯುವ ಹಾಗೂ ಅಸ್ಥಿರವಾದ ಪರ್ವತ ಶ್ರೇಣಿಯಾಗಿದ್ದು ಪದೇ ಪದೇ ಭೂಕುಸಿತ, ಮೇಘಸ್ಫೋಟ ಮತ್ತು ದಿಢೀರ್ ಪ್ರವಾಹಗಳು ಉಂಟಾಗಿ ಟನ್‌ಗಟ್ಟಲೆ ಬಂಡೆ ಮತ್ತು ಇತರ ತ್ಯಾಜ್ಯಗಳು ಸಾಮಾನ್ಯ ಸನ್ನಿವೇಶದಲ್ಲಿ ಕೂಡ ಉರುಳಿ ಬರುತ್ತವೆ. ಬೆಟ್ಟ ಪ್ರದೇಶಗಳಲ್ಲಿ ಮಾನವ ವಸತಿಗಳನ್ನು ವಿಸ್ತರಿಸುತ್ತಿರುವುದರಿಂದ ಪ್ರಾದೇಶಿಕ ಪರಿಸರದ ಮೇಲೆ ಈಗಾಗಲೇ ಒತ್ತಡ ಹೆಚ್ಚುತ್ತಿದೆ. ರಸ್ತೆ ನಿರ್ಮಾಣ, ಜಲಮೂಲ ಕಡಿಮೆಯಾಗುವುದು, ಮರ ಕಡಿಯುವುದರಿಂದ ಮಣ್ಣಿನ ಸವಕಳಿ ಹೆಚ್ಚುವುದು ಹಾಗೂ ಬಂಡೆಗಳ ಹಿಡಿತದ ಬಲ ಕುಂದುವುದು ಭೂಕುಸಿತಕ್ಕೆ ಕಾರಣವಾಗುತ್ತವೆ. ಇವೆಲ್ಲವೂ ಒತ್ತಡಕ್ಕೆ ಕಾರಣ. ಮಳೆ ನೀರಿನಿಂದ ಸ್ಥಳೀಯ ನದಿ ಮತ್ತು ಹಳ್ಳ-ತೊರೆಗಳಲ್ಲಿ ಪ್ರವಾಹ ಉಂಟಾಗುತ್ತದೆ. ವಿಶೇಷವಾಗಿ ಪ್ರಸಕ್ತ ಸರ್ಕಾರದ ಅಡಿಯಲ್ಲಿ ವಿವೇಚನಾರಹಿತ ನಿರ್ಮಾಣ ಕಾರ್ಯಗಳ ಧಾವಂತ ಇಂಥ ವಿನಾಶಗಳು ಹೊಸ ಹಾಗೂ ಅಪಾಯಕಾರಿ ಮಟ್ಟಗಳಿಗೆ ಒಯ್ಯುತ್ತಿದೆ.

ತಪೋವನ ವಿದ್ಯುತ್ ಪರಿಯೋಜನೆ

ಈ ವಲಯದಲ್ಲಿ ಭಾರಿ ಸಂಖ್ಯೆಯ ಜಲ ವಿದ್ಯುತ್ ಯೋಜನೆಗಳ ನಿರ್ಮಾಣ ಆಗುತ್ತಿದೆ. ಉತ್ತರಾಖಂಡ ರಾಜ್ಯದಲ್ಲಿ ಆಗಲೇ ಸುಮಾರು 100 ಅಣೆಕಟ್ಟುಗಳಿವೆ. ಇನ್ನೂ ಹಲವು ಡ್ಯಾಮ್‌ಗಳ ನಿರ್ಮಾಣ ಆಗುತ್ತದೆ. ಇವುಗಳಲ್ಲಿ ಅನೇಕ ಅಣೆಗಳು ನದಿ ಹರಿವಿನ ಯೋಜನೆಗಳು ಎಂದು ಹೇಳಲಾಗಿದ್ದರೂ, ಕೆಲವದರಲ್ಲಿ ನೀರನ್ನು ತಡೆದು ನಿಲ್ಲಿಸುವ ಹಾಗೂ ನಿರ್ಮಾಣ ಚಟುವಟಿಕೆಗಳೂ ಒಳಗೊಂಡಿವೆ. ಒಂದು ಅಂದಾಜಿನ ಪ್ರಕಾರ 450ಕ್ಕೂ ಹೆಚ್ಚು ಜಲ ವಿದ್ಯುತ್ ಯೋಜನೆಗಳ ಪ್ರಸ್ತಾಪನೆಯಿದೆ. ಅಂದರೆ ಕೆಲವೇ ಡಜನ್ ಕಿಲೋ ಮೀಟರ್‌ಗೆ ಒಂದು ಜಲವಿದ್ಯುತ್ ಯೋಜನೆ ಇರುತ್ತದೆ ಎಂದಾಯಿತು!. ಈ ಅಣೆಕಟ್ಟು ಮತ್ತು ಜಲ ವಿದ್ಯುತ್ ಯೋಜನೆಗಳಿಗಾಗಿ ಮರಗಳನ್ನು ಕೂಡ ಕಡಿಯಲಾಗುತದೆ. ಆದರೆ ಅದಕ್ಕೆ ಸರಿಸಮನಾಗಿ ಅರಣ್ಯೀಕರಣದ ಯೋಜನೆ ಸರ್ಕಾರದ ಬಳಿಯಿಲ್ಲ. ಡೈನಮೈಟ್ ಮತ್ತು ಇತರ ಕೆಲವು ಪ್ರಶ್ನಾರ್ಹ ತಂತ್ರಗಳನ್ನು ಬಳಸುತ್ತಿರುವುದರಿಂದ ಈಗಾಗಲೇ ಅಸ್ಥಿರವಾದ ವಲಯದಲ್ಲಿ ಹೆಚ್ಚಿನ ಅಪಾಯ ಉಂಟಾಗಲಿದ್ದು ಗ್ರಾಮಸ್ಥರು ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ.

ನಿರ್ಮಾಣ ಕಾರ್ಯದ ತ್ಯಾಜ್ಯಗಳನ್ನು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನದಿಗಳಿಗೆ ಸುರಿಯಲಾಗುತ್ತಿದೆ. ಅಥವಾ ರಸ್ತೆ ಬದಿ ರಾಶಿ ಹಾಕಲಾಗುತ್ತದೆ. ಅಂತಿಮವಾಗಿ ಅವು ಕೂಡ ನದಿಯ ಒಡಲು ಸೇರುತ್ತವೆ.

ಕುತಂತ್ರದ ಪರಿಸರ ಅನುಮತಿ

ಬೃಹತ್‌ಪ್ರಮಾಣದ ರಸ್ತೆ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಉತ್ತರಾಖಂಡದಲ್ಲಿರುವ ನಾಲ್ಕು ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ 14,000 ಕೋಟಿ ರೂಪಾಯಿ ವೆಚ್ಚದ, 2016ರಲ್ಲಿ ಆರಂಭವಾದ ಚಾರ್ ಧಾಮ್ ಯೋಜನೆ ಅನ್ವಯ ಈ ರಸ್ತೆಗಳ ನಿರ್ಮಾಣ ಕಾರ್ಯ ಸಾಗಿದೆ. ಚಾರ್‌ಧಾಮ್ ಮಹಾಮಾರ್ಗ್ ಹೆದ್ದಾರಿ ಸಹಿತ 800 ಕಿಲೋಮೀಟರ್‌ಗೂ ಅಧಿಕ ಉದ್ದದ ರಸ್ತೆ, ಹೋಟೆಲ್‌ಗಳು ಮತ್ತಿತರ ಮೂಲಸೌಕರ್ಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಇಡೀ ಯೋಜನೆಯನ್ನು 100 ಕಿಲೋ ಮೀಟರ್‌ಗಿಂತ ಕಡಿಮೆ ಉದ್ದದ 53 ಯೋಜನೆಗಳಾಗಿ ವಿಭಜಿಸಿ ಕುತಂತ್ರದಿಂದ ಪರಿಸರ ಅನುಮತಿಯನ್ನು ಪಡೆಯಲಾಗಿದೆ. ಸಣ್ಣ ವಿಭಾಗಗಳಾಗಿ ಮಾಡಿದ್ದರಿಂದ ಪರಿಸರ ಇಲಾಖೆಯ ಅನುಮತಿ ಪಡೆಯುವುದು ಸುಲಭವಾಗಿತ್ತು. ಬೇಕಾದವರನ್ನೇ ತುಂಬಿಸಿದ್ದ ಪರಿಶೀಲನಾ ಸಮಿತಿ ಕೂಡ ರಸ್ತೆಗಳ ಅಗಲವನ್ನು 10 ಮೀಟರ್‌ಗೆ ಹೆಚ್ಚಿಸಿತ್ತು. ಇದರಿಂದಾಗಿ ಬೆಟ್ಟಗಳನ್ನು 24 ಮೀಟರ್‌ವರೆಗೆ ಕಡಿಯುವ ಅಗತ್ಯ ಉಂಟಾಗಿದೆ. ಡೈನಮೈಟ್ ಬಳಕೆ ಸಹಿತ ತುಂಬಾ ಒರಟು ರೀತಿಯಲ್ಲಿ ರಸ್ತೆ ಕಡಿಯುವ ಹಾಗೂ ಬೆಟ್ಟದ ಬದಿಗಳನ್ನು ಸವರುವ ಕೆಲಸ ನಡೆಸಲಾಗುತ್ತಿದ್ದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಬೆಟ್ಟ ಸವರಿ ಇಳಿಜಾರುಗೊಳಿಸಿದ ಪ್ರದೇಶಗಳಲ್ಲಿ ಭೂಕುಸಿತವಾಗಲಿದೆ. ಅಲ್ಲಿ ಹೊಸದಾಗಿ ಮರಗಳನ್ನು ಬೆಳೆಸದಿರುವುದರಿಂದಲೂ ಅನಾಹುತಕ್ಕೆ ಎಡೆಯಾಗಲಿದೆ.

ಇದನ್ನು ಓದಿ : ಉತ್ತರಾಖಂಡ ಹಿಮಪ್ರವಾಹ : 150 ಕ್ಕೂ ಹೆಚ್ಚು ಮಂದಿ ನಾಪತ್ತೆ

ಜನರ ಸುರಕ್ಷತೆಗಿಂತ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಂಪೆನಿಗಳಿಗೆ ತ್ವರಿತವಾಗಿ ಲಾಭ ಮಾಡಿಕೊಡುವುದಕ್ಕೆ ಸರ್ಕಾರ ಆದ್ಯತೆ ನೀಡಿದಂತಿದೆ.

ವಿನಾಶಕಾರಿ ಪಥವನ್ನು ಬದಲಾಯಿಸಬೇಕು

ಇವೆಲ್ಲವೂ ಈಗಾಗಲೇ ಅಸ್ಥಿರಗೊಂಡಿರುವ ವಲಯದಲ್ಲಿ ಆಗಿರುವ ನೇರ ಹಾನಿಯಲ್ಲದೆ, ಭವಿಷ್ಯದ ಪ್ರವಾಹಗಳಿಂದ ಹಾನಿಗಳನ್ನು ಇನ್ನಷ್ಟು ಹೆಚ್ಚಿಸಲಿವೆ. ತ್ಯಾಜ್ಯಗಳ ಸುರಿಯುವಿಕೆಯಿಂದ ನದಿ ತಳಗಳ ಎತ್ತರ ಹೆಚ್ಚಾಗಿ ಪ್ರವಾಹ ಉಂಟಾಗಿ ನದಿ ಬಳಿಯಿರುವ ಕಟ್ಟಡಗಳು ಹಾಗೂ ಊರುಗಳು ಮುಳುಗಡೆ ಆಗುವ ಅಪಾಯವಿದೆ. 2013ರಲ್ಲಿ ಸಂಭವಿಸಿದ ರೀತಿಯಲ್ಲೇ ದುರಂತ ಮರುಕಳಿಸಬಹುದು.

2013ರಲ್ಲಿ ವ್ಯಾಪಕವಾಗಿ ಹಾನಿಗೊಂಡ ಕೇದಾರನಾಥ ಪಟ್ಟಣವನ್ನು ಸುತ್ತಮುತ್ತಲಿನ ಪರಿಸರದ ಮೇಲೆ ಬೀರುವ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳದೆ ಮರುನಿರ್ಮಾಣ ಮಾಡಲಾಗುತ್ತಿದೆ. 2013ರಲ್ಲಾದಂತೆ ಪಟ್ಟಣದಲ್ಲಿ ಮತ್ತೆ ಪ್ರವಾಹ ಸಂಭವಿಸೀತು ಎನ್ನುವುದನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗಿಲ್ಲ.

ಈ ಅಸ್ಥಿರವಾದ ವಲಯದಲ್ಲಿ ಪಟ್ಟಣಗಳು ಮತ್ತು ಜನವಸತಿ ಪ್ರದೇಶಗಳ ತಾಳಿಕೆಯ ಸಾಮರ್ಥ್ಯದ ಬಗ್ಗೆ ಕೂಡ ಸ್ವಲ್ಪವೂ ಚಿಂತನೆ ನಡೆಸಿಲ್ಲ. ಕೆಳ ಪ್ರದೇಶಗಳಲ್ಲಿ ವಸತಿ ಮೂಲಸೌಕರ್ಯ ನಿರ್ಮಾಣ, ದೇವಸ್ಥಾನಕ್ಕೆ ಯಾತ್ರಿಗಳ ಸಂಖ್ಯೆ ನಿಯಂತ್ರಣ ಮೊದಲಾದ ಪರ್ಯಾಯ ಸಲಹೆಗಳನ್ನು ಆಡಳಿತ ನಡೆಸುವವರು ಕಿವಿ ಮೇಲೆ ಹಾಕಿಕೊಂಡೇ ಇಲ್ಲ.

ಈ ಪ್ರದೇಶದಲ್ಲಿ ತೀವ್ರ ಸ್ವರೂಪದ ಹವಾಮಾನ ಘಟನೆಗಳು, ಭೂಕುಸಿತಗಳು ಮತ್ತು ಇಳಿಜಾರಿನ ಅಸ್ಥಿರತೆ, ಅಲ್ಲದೆ ಹಿಮಧಾರೆಗಳ ನಿರೀಕ್ಷಣೆ ಮುಂತಾದವುಗಳ ಮೇಲೆ ನಿಗಾ ಮತ್ತು ಉಸ್ತುವಾರಿಗೆ ಸುಮಾರಾಗಿ ಯಾವ ವ್ಯವಸ್ಥೆಯೂ ಇಲ್ಲ.

ಇದನ್ನು ಓದಿ : ಹಿಮನದಿ ದುರಂತ : ಮುಂದುವರೆದ ಕಾರ್ಯಚರಣೆ

ಉತ್ತರಾಖಂಡದ ಬೆಟ್ಟ ಪ್ರದೇಶಗಳ ಎಲ್ಲ ಪರಿಯೋಜನೆಗಳ ಸಂಪೂರ್ಣ ಸುರಕ್ಷತಾ ವ್ಯವಸ್ಥೆ ಮತ್ತು ಪಾರಿಸರಿಕ ಪರಿಶೀಲನೆ ನಡೆಸಬೇಕಾಗಿದೆ. ಪ್ರಸಕ್ತ ವಿನಾಶಕಾರಿ ಪಥವನ್ನು ಯಾವುದೇ ವಿಳಂಬವಿಲ್ಲದೆ ಬದಲಾಯಿಸುವುದು ಅಗತ್ಯ. ಇಲ್ಲದಿದ್ದರೆ ಭವಿಷ್ಯದಲ್ಲೂ ಇಂಥ ಅನಾಹುತಗಳು ಸಂಭವಿಸುವುದು ನಿಶ್ಚಿತ.

 ಅನು: ವಿಶ್ವ

ವ್ಯಂಗ್ಯಚಿತ್ರ: ಸಂದೀಪ್‍, ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ

 

 

ಜೀವಿ ಪರಿಸರ ಶಾಸ್ತ್ರಜ್ಞರು ನಾಜೂಕಿನ ಪರಿಸರ ವ್ಯವಸ್ಥೆಗಳಲ್ಲಿ ಇಂತಹ ಅಭಿವೃದ್ಧಿ ಮಾದರಿಗಳನ್ನು ಪ್ರತಿಭಟಿಸುತ್ತಾರೆ, ಸ್ವಾಮಿ

ಆರಾಮವಾಗಿರು ವಿಕಾಸಪ್ಪಾ,

 ಅವರು  ಆಂದೋಲನ ಜೀವಿಗಳಷ್ಟೇ

Donate Janashakthi Media

Leave a Reply

Your email address will not be published. Required fields are marked *