ಆರ್ಥಿಕತೆಯು ಸಮೃದ್ಧತೆಯ ಕಡೆಗೆ: ಜನರ ಬದುಕು ದುಸ್ಥಿತಿಯ ಕಡೆಗೆ

janashakthi 15-1
ಅತಿಥಿ ಅಂಕಣ – ಡಾ. ಟಿ. ಆರ್ ಚಂದ್ರಶೇಖರ್
ಸಂಪುಟ 9 ಸಂಚಿಕೆ 48, 29 ನವೆಂಬರ್ 2015

ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಗದೀಶ್ ಭಗವತಿ ಅವರು ಪ್ರತಿಪಾದಿಸುತ್ತಿರುವ ವರಮಾನ ಏರಿಕೆ ಮೂಲಕ ಆರ್ಥಿಕ ಬೆಳವಣಿಗೆ ಪ್ರಣಾಳಿಕೆಯನ್ನು ಪ್ರಸ್ತುತ ಕೇಂದ್ರ ಸರ್ಕಾರ ಪಾಲಿಸುತ್ತಿದೆ. ಸಾಮಾಜಿಕ ನ್ಯಾಯದ ಮೂಲಕ ಅಭಿವೃದ್ಧಿ ಅನ್ನುವ ನೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ನಂಬಿಕೆಯಿದ್ದಂತೆ ಕಾಣುವುದಿಲ್ಲ. ನಮ್ಮ ದೇಶದಲ್ಲಿ ಉದ್ದಿಮೆಗಳ ಲಾಭದ ಪ್ರಮಾಣ ಏರಿಕೆಯಾಗುತ್ತಿದೆ. ಜಿಡಿಪಿಯ ಬೆಳವಣಿಗೆ ಏರಿಕೆಯಾಗುತ್ತಿದೆ. ಉದ್ದಿಮೆಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ಕ್ರಮಗಳನ್ನು ಸರಳಗೊಳಿಸುವುದಕ್ಕೆ ಸಂಬಂಧಿಸಿದಂತೆ ಜಾಗತಿಕಮಟ್ಟದಲ್ಲಿ ಭಾರತದ ಸ್ಥಾನ ಉತ್ತಮಗೊಂಡಿದೆ. ವಿದೇಶಗಳಿಂದ ಹರಿದು ಬರುವ ನೇರ ಬಂಡವಾಳದ ಪ್ರಮಾಣ ಅದೆಷ್ಟೋ ಪಟ್ಟು ಹೆಚ್ಚಾಗಿದೆ. ಆರ್ಥಿಕತೆಯು ಸಮೃದ್ಧತೆಯ ಕಡೆಗೆ ಶರವೇಗದಲ್ಲಿ ಸಾಗುತ್ತಿದೆ. ಮತ್ತೆ ಮತ್ತೆ ಸರ್ಕಾರವು ವರಮಾನದಲ್ಲಿ ಏರಿಕೆಯಾದರೆ, ಉತ್ಪಾದನೆಯಲ್ಲಿ ಏರಿಕೆಯಾದರೆ, ಬಂಡವಾಳ ಹೂಡಿಕೆ ಅಧಿಕಗೊಂಡರೆ ಬಡತನ, ಹಸಿವು, ಅಸಮಾನತೆ ಮುಂತಾದವು ತನ್ನಷ್ಟಕ್ಕೆ ಪರಿಹಾರವಾಗಿ ಬಿಡುತ್ತವೆ ಎಂದು ಹೇಳುತ್ತಿದೆ. ‘ಮೊದಲು ಉತ್ಪಾದನೆ: ನಂತರ ವಿತರಣೆ’ ಎಂಬುದು ಸದ್ಯದ ಸರ್ಕಾರದ ನೀತಿಯಾಗಿದೆ. ಸರ್ಕಾರವು ಆರ್ಥಿಕ ಚಟುವಟಿಕೆಗಳಿಂದ ಹಿಂದೆ ಸರಿಯುತ್ತಿದೆ. ಖಾಸಗಿ ವಲಯಕ್ಕೆ/ಮಾರುಕಟ್ಟೆಗೆ ಆದ್ಯತೆಯ ಸ್ಥಾನ ನೀಡಲಾಗುತ್ತಿದೆ. ಉದ್ದಿಮೆದಾರರಿಗೆ ಸರ್ಕಾರವು ಎಲ್ಲ ರೀತಿಯ ಅವಕಾಶ ಮತ್ತು ಅವಧಾರಣೆ ನೀಡುತ್ತಿದೆ. ಇಂದು ನಮ್ಮ ದೇಶದಲ್ಲಿ ಮೇಕ್ ಇನ್ ಇಂಡಿಯಾ, ಸ್ಮಾರ್ಟ್ ಸಿಟಿಗಳು, ಡಿಜಿಟಲ್ ಇಂಡಿಯಾ, ಮಾರ್ಕ್ ಜುಕರ್‍ಬರ್ಗ್, ಸತ್ಯ ನಾದೆಲ್ಲ, ಈ-ಕಾರ್ಮಸ್ ಅಭಿವೃದ್ಧಿಯ ಚಾಲಕ ಶಕ್ತಿಯೆಂದು ಸರ್ಕಾರ ಪರಿಗಣಿಸಿದೆ.

ಸಾಮಾಜಿಕ ನ್ಯಾಯದ ಶಬ್ದವನ್ನು ಉಚ್ಚರಿಸುವುದು ಪಾಪ ಅನ್ನುವಂತೆ ನಮ್ಮ ಆಳುವ ವರ್ಗ ನಡೆದುಕೊಳ್ಳುತ್ತಿದೆ. ರೈತರು, ರೈತಾಪಿ ವರ್ಗ, ಕೃಷಿ, ಗ್ರಾಮೀಣ ಬದುಕು, ದಲಿತರ ಬವಣೆ, ಮಹಿಳೆಯರ ಆಕ್ರಂದನ, ಭೂರಹಿತ ದಿನಗೂಲಿ ದುಡಿಮೆಗಾರರ ಕಾರ್ಪಣ್ಯಗಳು— ಇಂದಿನ ಆಳುವ ವರ್ಗದ ಶಬ್ದಕೋಶದಲ್ಲಿ ಸ್ಥಾನ ಪಡೆದಂತೆ ಕಾಣುತ್ತಿಲ್ಲ. ಸರ್ಕಾರದ ಕ್ರಮಗಳಿಗೆ ನಾಡಿನ ಮಧ್ಯಮವರ್ಗ, ಕಾರ್ಪೊರೇಟ್ ದಿಗ್ಗಜರು, ಎನ್.ಆರ್.ಐ.ಗಳು, ವ್ಯಾಪಾರಿ ವರ್ಗಗಳಿಂದ ಉತ್ತೇಜನ ದೊರೆಯುತ್ತಿದೆ. ಪ್ರಸ್ತುತ ಸರ್ಕಾರ ತಾನು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಘೋಷಿಸಿದ್ದ ‘ಮಿನಿಮಮ್ ಗವರ್ನ್‍ಮೆಂಟ್: ಮ್ಯಾಕ್ಸಿಮಮ್ ಗವರ್ನೆನ್ಸ್’ ಎಂಬ ನೀತಿಯನ್ನು ಅಕ್ಷರಶಃ ಪಾಲಿಸುತ್ತಿದೆ. ಇದೀಗ ಕೇಂದ್ರ ಸರ್ಕಾರ ದೊಡ್ಡ ರೀತಿಯಲ್ಲಿ ಸಣ್ಣ ಪುಟ್ಟ ವಲಯಗಳನ್ನು ಸೇರಿಸಿಕೊಂಡು ವಿದೇಶಿ ನೇರ ಖಾಸಗಿ ಬಂಡವಾಳದ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ. ನೇರ ವಿದೇಶಿ ಖಾಸಗಿ ಬಂಡವಾಳಕ್ಕೆ ಪ್ರಧಾನ 15 ವಲಯಗಳ ಬಾಗಿಲುಗಳನ್ನು ದೊಡ್ಡದಾಗಿ ತೆರೆಯಲಾಗಿದೆ. ಸ್ಥಳೀಯ ಸಾರಿಗೆ ವಲಯವನ್ನು ಅದು ಬಿಟ್ಟಿಲ್ಲ. ಕೆ.ಎಸ್.ಆರ್.ಟಿ.ಸಿ ಅಂತಹ ಜನರ ಸಾರಿಗೆ ಸಂಸ್ಥೆಯ ಆಡಳಿತ ಇನ್ನು ಮುಂದೆ ಕರ್ನಾಟಕ ಸರ್ಕಾರದ ಹಿಡಿತದಲ್ಲಿರುತ್ತದೆ ಎಂದು ಹೇಳಲು ಬರುವುದಿಲ್ಲ.

ಇಂದು ನಾವು ಅನುಸರಿಸುತ್ತಿರುವ ಅಭಿವೃದ್ಧಿ ಪ್ರಣಾಳಿಕೆಯ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಅಲ್ಲಿ ಸಮೃದ್ಧತೆ ಅನ್ನುವುದು ಯಾರ ಹಿತಾಸಕ್ತಿಗಳನ್ನು ಪೋಷಿಸುತ್ತಿದೆ ಮತ್ತು ಯಾರ ಬದುಕನ್ನು ಅದು ದುಸ್ಥಿತಿಗೆ ತಳ್ಳುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಾಗಿದೆ. ಅಭಿವೃದ್ಧಿಯನ್ನು ವರಮಾನದ ಏರಿಕೆಗೆ ಸಂವಾದಿಯನ್ನಾಗಿ ಮಾಡಿಕೊಂಡು ನಿರ್ವಹಿಸಿದರೆ ಬಡತನವು ನಿವಾರಣೆಯಾಗಿ ಬಿಡುತ್ತದೆ ಎಂಬ ತತ್ವ ವಿಫಲವಾಗಿರುವುದರ ಬಗ್ಗೆ ನಮಗೆ ಅನೇಕ ನಿದರ್ಶನಗಳು ದೊರೆಯುತ್ತವೆ. ಈ ಕಾರಣಕ್ಕೆ 1990ರಲ್ಲಿ ಯು.ಎನ್.ಡಿ.ಪಿ.ಯ ಪ್ರಥಮ ಮಾನವ ಅಭಿವೃದ್ಧಿ ವರದಿಯಲ್ಲಿ ಅದರ ರೂವಾರಿ ಮೆಹಬೂಬ್ ಉಲ್ ಹಕ್ ‘ವರಮಾನವೇ ಜನರ ಬದುಕಿನ ಮೊತ್ತವಲ್ಲ’ ಎಂದು ಘೋಷಿಸಿದರು. ಈ ಪ್ರಣಾಳಿಕೆಯ ಉಗ್ರ ಟೀಕಾಕಾರರಾದ ಜಗದೀಶ್ ಭಗವತಿ ಪ್ರತಿಪಾದಿಸುತ್ತಿರುವ ‘ವರಮಾನದ ಏರಿಕೆಯೇ ಅಭಿವೃದ್ಧಿ ಮತ್ತು ಬಡತನ-ದುಸ್ಥಿತಿಗಳ ನಿವಾರಣೆಗೆ ಅದೇ ಪರಿಹಾರ’ ಎಂಬ ಕ್ರಮವನ್ನು ಇಂದು ಪಾಲಿಸಲಾಗುತ್ತಿದೆ. ಸಾಮಾಜಿಕ ನ್ಯಾಯದ ಪ್ರತಿಪಾದಕರನ್ನು ಅಪಹಾಸ್ಯ ಮಾಡಲಾಗುತ್ತಿದೆ. ಉದಾಹರಣೆಗೆ ಇತ್ತೀಚಿಗೆ ಕೇಂದ್ರದ ಹಣಕಾಸು ಸಚಿವಾಲಯ ಮತ್ತು ನೀತಿ ಆಯೋಗಗಳು ಸಂಯುಕ್ತವಾಗಿ ದೆಹಲಿಯಲ್ಲಿ ಆಯೋಚಿಸಿದ್ದ ಅರ್ಥಶಾಸ್ತ್ರಜ್ಞರ ಸಮಾವೇಶದಲ್ಲಿ ಮಾತನಾಡಲು ಆಹ್ವಾನ ಪಡೆದಿದ್ದ ಖ್ಯಾತ ಅರ್ಥಶಾಸ್ತ್ರಜ್ಞ (ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಮ್ ಅವರು ಡ್ರೀಜ್ ಅವರಿಗೆ ಪತ್ರ ಬರೆದು ಆಹ್ವಾನ ನೀಡಿದ್ದರು)ಮತ್ತು ಅಮತ್ರ್ಯ ಸೆನ್ ಜೊತೆಯಲ್ಲಿ ಭಾರತವನ್ನು ಕುರಿತಂತೆ ಅನೇಕ ಕೃತಿಗಳನ್ನು ರಚಿಸಿರುವ ಸಹಲೇಖಕ ಹಾಗೂ ಸಾಮಾಜಿಕ ನ್ಯಾಯದ ಪ್ರತಿಪಾದಕ ಜೀನ್ ಡ್ರೀಜ್(ಭಾರತೀಯ ನಾಗರಿಕ) ಅವರ ಪ್ರವೇಶವನ್ನು ಕೊನೆಯ ಕ್ಷಣದಲ್ಲಿ ನಿರಾಕರಿಸಲಾಗಿದೆ ಮತ್ತು ಅವರೇನಾದರೂ ಒಂದು ವೇಳೆ ಸಮಾವೇಶಕ್ಕೆ ಬಂದರೆ ಅವರ ಪ್ರವೇಶವನ್ನು ತಡೆಯಲಾಗುವುದು ಎಂದು ಹಣಕಾಸು ಸಚಿವಾಲಯದ ವಕ್ತಾರರು ಅಸಹನೆ ತೋರಿದ್ದಾರೆ (ಹಿಂದೂಸ್ಥಾನ್ ಟೈಮ್ಸ್, ನವೆಂಬರ್ 07, 2015).

ಇಂದು ಅನುಸರಿಸುತ್ತಿರುವ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಉಳ್ಳವರು ಮತ್ತು ಉಳಿದವರ ನಡುವಿನ ಭಿನ್ನತೆಗೆ ಅವಕಾಶವಿಲ್ಲ. ಬಡವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮುಂತಾದವರನ್ನು ಸದರಿ ಪ್ರಣಾಳಿಕೆಯಲ್ಲಿ ಒಟ್ಟು ಜನಸಂಖ್ಯೆಯ ಅಖಂಡ ಭಾಗವನ್ನಾಗಿ ಮಾಡಿಕೊಂಡು ಅಭಿವೃದ್ಧಿಯನ್ನು ನಿರ್ವಹಿಸಲಾಗುತ್ತ್ತದೆ. ಇಲ್ಲಿ ಲಿಂಗ ಸಮಾನತೆಯನ್ನು ವಿಶಿಷ್ಟವಾಗಿ ಎದುರಿಸುವ ಅಗತ್ಯ ಬೀಳುವುದಿಲ್ಲ. ಈ ಅಭಿವೃದ್ಧಿ ಮಾದರಿಯು ಲಿಂಗ ನಿರಪೇಕ್ಷ ಪ್ರಣಾಳಿಕೆಯಾಗಿದೆ. ಈ ಬಗೆಯ ಅಭಿವೃದ್ಧಿ ಪ್ರಣಾಣಿಕೆಯು ಉಳ್ಳವರನ್ನು ಮಾತ್ರ ಪೋಷಿಸಬಹುದು. ‘ಎಲ್ಲರ ಅಭಿವೃದ್ಧಿ’ (ಸಬ್ ಕ ಸಾಥ್: ಸಬ್ ಕ ವಿಕಾಸ್) ಅನ್ನುವುದು ಮೂಲತಃ ಉಳ್ಳವರ ಅಭಿವೃದ್ಧಿಯಾಗಿದೆ. ಏಕೆಂದರೆ ಏರಿಕೆಯಾದ ವರಮಾನವನ್ನು, ಏರಿಕೆಯಾದ ಉತ್ಪಾದನೆಯನ್ನು, ವಿಸ್ತರಣೆಗೊಂಡ ಬಂಡವಾಳವನ್ನು ದಕ್ಕಿಸಿಕೊಳ್ಳುವ-ಧಾರಣೆ ಮಾಡಿಕೊಳ್ಳುವ ಸಾಮಥ್ರ್ಯ ಉಳ್ಳವರಿಗೆ ಇರುತ್ತದೆ. ಆದರೆ ಧಾರಣ ಸಾಮಥ್ರ್ಯ ದುರ್ಬಲವಾಗಿರುವ ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ವಂಚಿತರಿಗೆ ಏರಿಕೆಯಾದ ವರಮಾನದ ಮೇಲೆ ತಮ್ಮ ಅಧಿಕಾರವನ್ನು ಪ್ರತಿಷ್ಟಾಪಿಸುವುದು ಕಷ್ಟಸಾಧ್ಯ.

ಅಭಿವೃದ್ಧಿ ಅನ್ನುವುದು ಆರ್ಥಿಕ ಸಮೃದ್ಧತೆಗೆ ಪ್ರತಿಯಾಗಿ ಜನರ ಬದುಕಿನ ಸಮೃದ್ಧತೆಗೆ ಸಂಬಂಧಿಸಿದ ಸಂಗತಿಯಾಗಿದೆ. ಅಭಿವೃದ್ಧಿ ಅನ್ನುವುದು ಮಹಿಳೆಯರನ್ನು ಸೇರಿಸಿಕೊಂಡು ಜನರಿಗೆ ಸಂಬಂಧಿಸಿದ ಪ್ರಕ್ರಿಯೆಯಾಗಿದೆ. ಸಮಾಜದಲ್ಲಿನ ಬಡವರು, ವಂಚಿತರು, ಅಂಚಿನಲ್ಲಿರುವವರು, ಮಹಿಳೆಯರು ಮುಂತಾದವರ ಧಾರಣ ಸಾಮಥ್ರ್ಯವನ್ನು ಸಮೃದ್ಧಗೊಳಿಸುವ ಪ್ರಕ್ರಿಯೆಯೇ ಅಭಿವೃದ್ಧಿ. ಧಾರಣ ಸಾಮಥ್ರ್ಯ ಅಂದರೆ ಏರಿಕೆಯಾದ ವರಮಾನದ ಮೇಲೆ ತಮ್ಮ ಹಕ್ಕನ್ನು ಪ್ರತಿಷ್ಟಾಪಿಸುವ ಜನರ ಶಕ್ತಿ ಮತ್ತು ಅಭಿವೃದ್ಧಿಯನ್ನು ಅನುಭವಿಸುವ ಪ್ರಕ್ರಿಯೆ. ಆದರೆ ‘ವರಮಾನದ ಏರಿಕೆಯ ಮೂಲಕ ಆರ್ಥಿಕ ಬೆಳವಣಿಗೆ’ ಎಂಬ ಪ್ರಣಾಳಿಕೆಯಲ್ಲಿ ಜನರಿಗೆ ಸ್ಥಾನವಿಲ್ಲವಾಗಿದೆ. ವರಮಾನ, ಉತ್ಪಾದನೆ, ಬಂಡವಾಳ, ತಂತ್ರಜ್ಞಾನ ಮುಂತಾದವು ಅಭಿವೃದ್ಧಿಯ ಸಾಧನಗಳು. ಅವು ಅಭಿವೃದ್ಧಿಗೆ ಬೇಕು. ಆದರೆ ಅವೇ ಅಭಿವೃದ್ಧಿಯಲ್ಲ. ಈ ಬಗೆಯ ಅಖಂಡವಾದಿ ಅಭಿವೃದ್ಧಿ ಪ್ರಣಾಳಿಕೆಯಲ್ಲಿ ಪ್ರಬಲ ವರ್ಗದ ಬದುಕು ಉತ್ತಮವಾಗಬಲ್ಲುದೆ ವಿನಾ ದುಡಿಮೆಗಾರರ ಬದುಕು ಸುಧಾರಿಸುವುದು ಸಾಧ್ಯವಿಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ದಲಿತೇತರರ(ಒಟ್ಟು ಜನಸಂಖ್ಯೆ-ಪ.ಜಾ+ಪ.ಪಂ ಜನಸಂಖ್ಯೆ=ದಲಿತೇತರರ ಜನಸಂಖ್ಯೆ) ಸಾಕ್ಷರತಾ ಪ್ರಮಾಣ ಶೇ 78.56. ಆದರೆ ಪರಿಶಿಷ್ಟರ ಸಾಕ್ಷರತಾ ಪ್ರಮಾಣ ಶೇ64.41. ಅದರಲ್ಲೂ ಪ.ಜಾ. ಮಹಿಳೆಯರ ಸಾಕ್ಷರತಾ ಪ್ರಮಾಣ 2011ರಲ್ಲಿ ಶೇ 56.57 ಮತ್ತು ಪ.ಪಂ. ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ50.91. ಇಂತಹ ಸ್ಥಿತಿಯಲ್ಲಿ ಶಿಕ್ಷಣದ ಖಾಸಗೀಕರಣ, ಖಾಸಗಿ ವಿಶ್ವವಿದ್ಯಾಲಯಗಳ ಪ್ರವೇಶ ಉಳ್ಳವರ ಬದುಕನ್ನು ದಷ್ಟಪುಷ್ಟಗೊಳಿಸಬಲ್ಲುದೆ ವಿನಾ ಪರಿಶಿಷ್ಟ ಮಹಿಳೆಯರ ಬದುಕು ಅಲ್ಲಿ ಉತ್ತಮವಾಗುವುದು ಸಾಧ್ಯವಿಲ್ಲ.

ಬಡತನ, ಅಪೌಷ್ಟಿಕತೆ ಕುರಿತಂತೆ 2015ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಅಗಸ್ ಡೇಟನ್ ಹೇಳುವುದೇನು?

ಅಗಸ್ ಡೇಟನ್ ಅವರ ಭಾರತದ ಆರ್ಥಿಕ ಸಮಸ್ಯೆಗಳ ಬಗ್ಗೆ ಅನೇಕ ವರ್ಷಗಳಿಂದ ಅಧ್ಯಯನ ನಡೆಸಿಕೊಂಡು ಬಂದಿದ್ದಾರೆ. ಜೀನ್ ಡ್ರೀಜ್ ಜೊತೆಯಲ್ಲಿ ಅವರು ಪ್ರಕಟಿಸಿರುವ ಭಾರತದಲ್ಲಿನ ಆರೋಗ್ಯ, ಪೌಷ್ಟಿಕತೆ, ಬಡತನ ಕುರಿತ ಅಧ್ಯಯನ ಪ್ರಬಂಧಗಳು ವ್ಯಾಪಕವಾಗಿ ವಿದ್ವಾಂಸರ ಮತ್ತು ನೀತಿ ನಿರೂಪಕರ ಗಮನ ಸೆಳೆದಿವೆ. ಆರ್ಥಿಕ ವಿಷಯಗಳಲ್ಲಿ ಕಾರಣ ಮತ್ತು ಪರಿಣಾಮಗಳ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ವರಮಾನ ಮತ್ತು ಪೌಷ್ಟಿಕತೆ ನಡುವಿನ ಸಂಬಂಧದ ಬಗ್ಗೆ ಅಧ್ಯಯನ ನಡೆಸಿದ ಡೇಟನ್ ಪ್ರಕಾರ ಅಪೌಷ್ಟಿಕತೆಗೆ ವರಮಾನದ ಕೊರತೆಯು ಕಾರಣವೇ ವಿನಾ ಅದು ಅದರ ಪರಿಣಾಮವಲ್ಲ. ಅಂದರೆ ನೀತಿ ನಿರೂಪಕರು ಅಪೌಷ್ಟಿಕತೆಯನ್ನು ನಿವಾರಣೆ ಮಾಡುವುದರ ಮೂಲಕ ಜನರ ವರಮಾನವನ್ನು ಗಳಿಸುವ ಸಾಮಥ್ರ್ಯವನ್ನು ಉತ್ತಮ ಪಡಿಸಬಹುದು ಎಂಬುದು ಡೇಟನ್ ಅವರ ಪ್ರತಿಪಾದನೆಯಾಗಿದೆ.

ಭಾರತದಲ್ಲಿ ಮಕ್ಕಳ ದೈಹಿಕ ಎತ್ತರವು ಅವರ ವಯಸ್ಸಿನ ಪ್ರಮಾಣಕ್ಕನುಗುಣವಾಗಿಲ್ಲ ಎಂಬುದು ಡೇಟನ್ ಅವರ ಅಧ್ಯಯನದ ಒಂದು ಫಲಿತವಾಗಿದೆ. ಇದನ್ನು ಪೌಷ್ಟಿಕತೆ ಪರಿಭಾಷೆಯಲ್ಲಿ ‘ಸ್ಟಂಟಿಂಗ್’ ಎಂದು ಕರೆಯಲಾಗಿದೆ. ಅವರ ಪ್ರಕಾರ ಇದಕ್ಕೆ ಮುಖ್ಯ ಕಾರಣ ಮಕ್ಕಳು ಎದುರಿಸುವ ರೋಗಗಳು ಮತ್ತು ರೋಗಗಳ ವಾತಾವರಣ. ಅವರ ಪ್ರಕಾರ ಇದಕ್ಕೆ ಮತ್ತೊಂದು ಕಾರಣ ಜನರು ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದು. ಇದು ಅನೇಕರು ಭಾವಿಸಿರುವಂತೆ(ಅರವಿಂದ್ ಮಾಣಿಗಾರಿಯಾ, ನೀತಿ ಆಯೋಗದ ಉಪಾಧ್ಯಕ್ಷ) ಜೈವಿಕ ಕಾರಣಗಳಿಂದ ಉಂಟಾಗಿರುವ ಸಮಸ್ಯೆಯಲ್ಲ. ಮೂಲತಃ ಜೈವಿಕವಾಗಿಯೇ ಭಾರತೀಯರು ಕುಳ್ಳರು ಎಂಬ ವಾದವನ್ನು ಡೇಟನ್ ತಳ್ಳಿ ಹಾಕಿದ್ದಾರೆ. ಇದನ್ನು ಪ್ರಜ್ಞಾಪೂರ್ವಕ ಪ್ರಯತ್ನದಿಂದ ಪರಿಹರಿಸಬಹುದು.

ಬಡತನ, ಹಸಿವು, ದುಸ್ಥಿತಿಗಳಿಗೆ ಸಂಬಂಧಿಸದ ದೇಶಗಳ ಸರ್ಕಾರಗಳು ಕ್ರಿಯಾಶೀಲವಾಗಿ ಪ್ರಯತ್ನ ನಡೆಸದಿರುವುದು ಕಾರಣ ಎಂಬುದನ್ನು ಅವರು ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದಾರೆ. ಜನರಿಗೆ ಶಿಕ್ಷಣ, ಆರೋಗ್ಯ, ಆಹಾರ ಮುಂತಾದವುಗಳಿಗೆ ಸಂಬಂಧಿಸಿದಂತೆ ಸರ್ಕಾರಗಳು ಭದ್ರತೆಯನ್ನು ನೀಡುವುದರ ಮೂಲಕ ಬಡತನ, ಹಸಿವು, ದುಸ್ಥಿತಿ ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು. ಡೇಟನ್ ಪ್ರಕಾರ ಅಭಿವೃದ್ಧಿಯನ್ನು ಕುರಿತ ಅಧ್ಯಯನವು ದುಸ್ಥಿತಿಯನ್ನು ಕುರಿತ ಅಧ್ಯಯನವೂ ಆಗಿರುತ್ತದೆ.

ಅಭಿವೃದ್ಧಿ ಕುರಿತ ಅಧ್ಯಯನಗಳಲ್ಲಿ ಅಖಂಡವಾದಿ ವಿಧಾನಕ್ಕೆ ಹೆಚ್ಚಿನ ಮನ್ನಣೆಯಿದೆ. ಇದರ ಬಗ್ಗೆ ಡೇಟನ್ ಅವರಿಗೆ ಅನುಮಾನಗಳಿವೆ. ಆದ್ದರಿಂದ ಅವರು ಬೃಹತ್ ಅಖಂಡ ನೆಲೆಯಲ್ಲಿ ಅಧ್ಯಯನಗಳನ್ನು ಕೈಗೊಳ್ಳುವುದಕ್ಕೆ ಪ್ರತಿಯಾಗಿ ಆರ್ಥಿಕತೆಯ ಬಿಡಿ ಬಿಡಿ ಭಾಗಗಳ ಬಗ್ಗೆ ಅಧ್ಯಯನ ನಡೆಸುತ್ತಾ ಬಂದಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಆಯ್ಕೆಗಳು ವಿವಿಧ ಸಂಗತಿಗಳಿಂದ ನಿರ್ಧರಿಸಲ್ಪಡುತ್ತವೆ. ಏಕಾಕಾರಿ ಅಧ್ಯಯನಗಳ ಬಗ್ಗೆ ಅವರಿಗೆ ನಂಬಿಕೆಯಿಲ್ಲ. ಸಮಸ್ಯೆಗಳು ಬಹುಮುಖಿಯಾಗಿರುತ್ತವೆ ಎಂಬುದು ಅವರ ನಂಬಿಕೆ.

ಡೇಟನ್ ಪ್ರಕಾರ ಅಭಿವೃದ್ದಿ ಅನ್ನುವುದು ಬಡವರಿಗೆ, ವಂಚಿತರಿಗೆ, ಮಹಿಳೆಯರಿಗೆ, ದಲಿತರಿಗೆ ಅಭಿಮುಖವಾಗಿರಬೇಕು. ವರಮಾನ ಏರಿಕೆಯೇ ಅಭಿವೃದ್ಧಿಯಲ್ಲ. ಅಭಿವೃದ್ಧಿಯ ಫಲಗಳು ಸಮಾಜದಲ್ಲಿ ಯಾರಿಗೆ ದೊರೆಯುತ್ತಿವೆ ಎಂಬುದು ಮುಖ್ಯ. ಡೇಟನ್, ಅಮತ್ರ್ಯ ಸೆನ್, ಜೀನ್ ಡ್ರೀಜ್, ಮಾರ್ತಾ ನುಸ್‍ಬಮ್ ಮುಂತಾದವರ ಅಧ್ಯಯನಗಳಿಂದ ನಾವು ಅನೇಕ ಪಾಠ ಕಲಿಯಬಹುದು. ಆದರೆ ಇಂದು ನಮ್ಮ ಆಳುವ ವರ್ಗವು ಈ ಬಗೆಯ ಅಭಿವೃದ್ಧಿ ಮಾದರಿಯಿಂದ ದೂರ ಸರಿಯುತ್ತಿದೆ. ಅಭಿವೃದ್ಧಿ ನೀತಿಗಳು ಜನತಂತ್ರ ಕ್ರಮದಲ್ಲಿ ಜನರ ಅಭಿಮತಕ್ಕನುಗುಣವಾಗಿ ನಿರ್ಧಾರವಾಗಬೇಕು. ಅದು ತಜ್ಞರ ಮತ್ತು ತಜ್ಞರನ್ನು ಒಳಗೊಂಡ ಸಂಸ್ಥೆಗಳ ನಿರ್ದೇಶನದಲ್ಲಿ ನಡೆಯುವುದು ಸರಿಯಲ್ಲ. ಆದರೆ ಇಂದು ನಮ್ಮ ದೇಶದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆಯಿಲ್ಲ. ತಜ್ಞರು, ತಜ್ಞರ ಸಂಸ್ಥೆಗಳು, ಸಂವಿಧಾನೇತರ ಸಂಘಟನೆಗಳು, ಜನತಂತ್ರ ವ್ಯವಸ್ಥೆಯ ಹೊರಗಿನ ಶಕ್ತಿಗಳು ಅಭಿವೃದ್ಧಿ ನೀತಿಯನ್ನು ನಿರ್ಧರಿಸುತ್ತಿವೆ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಎಲ್ಲ ಸಂಗತಿಗಳ ಬಗ್ಗೆ ನಾವು ಎಚ್ಚರವಹಿಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *