ಆಮೂಲಾಗ್ರ ನ್ಯಾಯಾಂಗ ಬದಲಾವಣೆಗಳು : ಇಸ್ರೇಲ್ ಸಾಂವಿಧಾನಿಕ ಬಿಕ್ಕಟ್ಟು ಅಥವಾ ಆಂತರಿಕ ಯುದ್ಧದತ್ತ ?

 

ವಸಂತರಾಜ ಎನ್.ಕೆ.

ಕಳೆದ ಮೂರು ತಿಂಗಳುಗಳಿಂದ ಇಸ್ರೇಲಿನ ನೆತನ್ಯಾಹು ಸರಕಾರ ಪ್ರಸ್ತಾವಿಸಿರುವ ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳ ವಿರುದ್ಧ ಅಭೂತಪೂರ್ವವಾದ ತೀವ್ರ ಪ್ರತಿಭಟನೆ ಮತ್ತು ಪ್ರತಿರೋಧ ನಡೆಯುತ್ತಿದೆ. ಮೂರು ತಿಂಗಳುಗಳ ಸತತ ಪ್ರತಿಭಟನೆಗಳ ನಂತರ ಮಾರ್ಚ್ 27ರಂದು ಘೋಷಿಸಲಾದ ಅನಿರ್ದಿಷ್ಟ ಸಾರ್ವತ್ರಿಕ ಮುಷ್ಕರದಿಂದ ದೇಶ ಸ್ತಬ್ಧವಾದ ನಂತರ ನೆತನ್ಯಾಹು ನ್ಯಾಯಾಂಗದ ಬದಲಾವಣೆಗಳ ಕಾನೂನುಗಳ ಸರಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿದರು. ಆದರೆ ಹಲವರು ಕಾನೂನುಗಳ ಸರಣಿಯನ್ನು ವಾಪಸು ತೆಗೆದುಕೊಳ್ಳುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಹೇಳಿದ್ದಾರೆ. ಇಷ್ಟು ವಿವಾದಾಸ್ಪದವಾಗಿರುವ ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳಾದರೂ ಏನು? ಅವು ಇಸ್ರೇಲನ್ನು ಏಕೆ ಧ್ರುವೀಕರಿಸುತ್ತಿವೆ? ಈ ಧ್ರುವೀಕರಣ ಇಸ್ರೇಲನ್ನು ಸಾಂವಿಧಾನಿಕ ಬಿಕ್ಕಟ್ಟು ಅಥವಾ ಆಂತರಿಕ ಯುದ್ಧದತ್ತ  ಒಯ್ಯುತ್ತಿದೆಯೇ?

****************

ಇಸ್ರೇಲಿನ ನೆತನ್ಯಾಹು ಸರಕಾರ ಪ್ರಸ್ತಾವಿಸಿರುವ ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳ ವಿರುದ್ಧ ಅಭೂತಪೂರ್ವವಾದ ತೀವ್ರ ಪ್ರತಿಭಟನೆ ಮತ್ತು ಪ್ರತಿರೋಧ ನಡೆಯುತ್ತಿದೆ.  ಇಂತಹ ಪ್ರತಿಭಟನಾ ಸಭೆಯೊಂದರಲ್ಲಿ ಇಸ್ರೇಲಿನ ಪ್ರಸಿದ್ಧ ಲೇಖಕ ಚಿಂತಕ ಯುವಲ್ ನೋವಾ ಹರಾರಿ  “ನೆತನ್ಯಾಹು! ನಿನ್ನ ಕ್ಷಿಪ್ರಕ್ರಾಂತಿ ನಿಲ್ಲಿಸು, ಇಲ್ಲದಿದ್ರೆ ನಿನ್ನನ್ನೇ ನಿಲ್ಲಿಸುತ್ತೇವೆ” ಎಂಬ ಎಚ್ಚರಿಕೆ ಕೊಟ್ಟರಂತೆ. ಕಳೆದ ಸುಮಾರು ಮೂರು ತಿಂಗಳುಗಳಿಂದ ನಡೆಯುತ್ತಿರುವ ತೀವ್ರವಾದ ಸತತ ಪ್ರತಿಭಟನೆ ಮತ್ತು ನೆತನ್ಯಾಹು ಅವರ ಹಠಮಾರಿತನ ಇಸ್ರೇಲನ್ನು ಹಿಂದೆಂದೂ ಕಾಣದಂತೆ ಧ್ರುವೀಕರಿಸಿದೆ.  ಇಸ್ರೇಲನ್ನು ಒಂದು ಆಂತರಿಕ ಯುದ್ಧದ ಸ್ಥಿತಿಗೆ ತಂದು ನಿಲ್ಲಿಸಿದೆ.

ಈಗ ಅಧಿಕಾರ ವಹಿಸಿಕೊಂಡ ನೆತನ್ಯಾಹು ಸರಕಾರ ಇಸ್ರೇಲಿನ ಏಳು ದಶಕಗಳ ಇತಿಹಾಸದಲ್ಲೇ ಅತ್ಯಂತ ಉಗ್ರ ಬಲಪಂಥೀಯ ಸರಕಾರ. ಅವರ ಲಿಕುಡ್ ಪಕ್ಷ, ಎರಡು ಜ್ಯೂ ಧಾರ್ಮಿಕ ಉಗ್ರಗಾಮಿ ಪಕ್ಷಗಳ ಮತ್ತು ಇತರ ಪಕ್ಷಗಳ ಕೂಟದ ಸರಕಾರ. ನೆತನ್ಯಾಹು ಅಧಿಕಾರ ವಹಿಸಿಕೊಂಡ ಕೂಡಲೇ ಜನರ ಜೀವನ ವೆಚ್ಚ ತಗ್ಗಿಸುವ, ಅರಬ್ ದೇಶಗಳ ಜತೆ ಶಾಂತಿ ವರ್ತುಲವನ್ನು ವಿಸ್ತರಿಸುವುದು ಸೇರಿದಂತೆ ನಾಲ್ಕು ಮುಖ್ಯ ಗುರಿಗಳನ್ನು ಘೋಷಿಸಿದ್ದರು. ಆದರೆ ಅದೆಲ್ಲವನ್ನೂ ಬಿಟ್ಟು ತಕ್ಷಣ ಮಿಂಚಿನ ವೇಗದಲ್ಲಿ ಕೈಗೊಂಡಿದ್ದು ‘ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳನ್ನು’ ಮಾಡುವ ಸರಣಿ ಕಾನೂನುಗಳನ್ನು. ಇದರ ಮೊದಲು ಇಂತಹ ದೂರಗಾಮಿ ಪರಿಣಾಮ ಬೀರುವ ಕಾನೂನುಗಳ ಕುರಿತು ವಿರೋಧ ಪಕ್ಷಗಳೊಂದಿಗೆ ಅಥವಾ ಸಮಾಜದ ವಿವಿಧ ಜನವಿಭಾಗಗಳೊಂದಿಗೆ ಯಾವುದೇ  ಸಂವಾದ ನಡೆಸಲಿಲ್ಲ. ಈ ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳ ಮಾಹಿತಿ ದೊರೆಯುತ್ತಿದ್ದಂತೆ ಇದಕ್ಕೆ ವಿರೋಧ ಪಕ್ಷಗಳಿಂದ, ವಿವಿಧ ಜನವಿಭಾಗಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು. ನ್ಯಾಯಾಂಗ ಸಹ ಇದನ್ನು ತೀವ್ರವಾಗಿ ವಿರೋಧಿಸಿದೆ.

ಅಭೂತಪೂರ್ವ ದೀರ್ಘ ಪ್ರತಿಭಟನೆಗಳು

ಇಸ್ರೇಲಿನ ಹೆಚ್ಚು ಕಡಿಮೆ ಎಲ್ಲ ನಗರಗಳಲ್ಲಿ ಹಿಂದೆಂದೂ ಕಾಣದ ಭಾರಿ ಸಂಖ್ಯೆಯಲ್ಲಿ ಸಮಾಜದ ವಿವಿಧ ವಿಭಾಗಗಳ ಜನ ಬೀದಿಗಿಳಿದರು. ಕಳೆದ ಮೂರು ತಿಂಗಳುಗಳ ಕಾಲ ಪ್ರತಿದಿನ ಎಂಬಂತೆ ಭಾರಿ ಪ್ರದರ್ಶನಗಳು ನಡೆದವು. ರಸ್ತೆ ತಡೆಗಳು, ಪ್ರದರ್ಶನಗಳು ನಡೆದವು. ರಸ್ತೆ ತಡೆಗಳು ಎಷ್ಟು ತೀವ್ರವಾಗಿದ್ದವೆಂದರೆ ಸ್ವತಃ ನೆತನ್ಯಾಹು ಕೆಲವು ವಿದೇಶ ಪ್ರವಾಸಗಳನ್ನು ರದ್ದು ಮಾಡಬೇಕಾಯಿತು. ದೇಶದೊಳಗಿನ ಸಾರಿಗೆ ಸಾಗಾಣಿಕೆಗಳು ಸ್ತಬ್ಧವಾದವು. ವಿದ್ಯಾರ್ಥಿಗಳು, ಅಧ್ಯಾಪಕರು ತರಗತಿಗಳನ್ನು ಬಹಿಷ್ಕರಿಸಿ ವಿ.ವಿ. ಶಿಕ್ಷಣ ಸಂಸ್ಥೆಗಳೂ ಸ್ತಬ್ಧವಾದವು. ಹಲವು ಕಡೆ ಮಿಲಿಟರಿ ಮೀಸಲು ಪಡೆಗಳ ಸದಸ್ಯರ ಸಂಘಟನೆಗಳು ಅಧಿಕೃತವಾಗಿ ಪ್ರತಿಭಟನೆಗೆ ಕರೆ ಕೊಟ್ಟವು. ಹಲವು ಪ್ರಮುಖ ಲೇಖಕರು, ಕಲಾವಿದರು, ಬುದ್ಧಿಜೀವಿಗಳು ಪ್ರತಿಭಟನೆಗಳಲ್ಲಿ ಭಾಗವಹಿಸಿದರು. .  ಹಲವು ಹಿರಿಯ ಅಧಿಕಾರಿಗಳು ಸೇರಿದಂತೆ ಮಿಲಿಟರಿಯ ದೊಡ್ಡ ವಿಭಾಗ ಈ ಬದಲಾವಣೆಗಳಿಗೆ ವಿರುದ್ಧವಾಗಿದ್ದು, ಹಲವು ಹಿರಿಯ ನಿವೃತ್ತ ಅಧಿಕಾರಿಗಳು ಪ್ರತಿಭಟನೆಗಳಲ್ಲಿ  ಭಾಗವಹಿಸಿದರು.

ರಕ್ಷಣಾ ಮಂತ್ರಿ ಪ್ರಸ್ತಾವಿತ ನ್ಯಾಯಾಂಗ ಬದಲಾವಣೆಗಳು ರಾಷ್ಟ್ರೀಯ ಭದ್ರತೆಗೆ ಮಾರಕ ಎನ್ನುವ ಸಾರ್ವಜನಿಕ ಹೇಳಿಕೆ ನೀಡಿದ ಕೂಡಲೇ ಅವರನ್ನು ನೆತನ್ಯಾಹು ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದರು. ಇಸ್ರೇಲಿನ ಅಧ್ಯಕ್ಷರೇ ಈ ಕಾನೂನುಗಳ ಪ್ರಸ್ತಾವಗಳು ದೇಶವನ್ನು ಆಂತರಿಕ ಯುದ್ಧದತ್ತ ಒಯ್ಯುತ್ತಿವೆ, ಹಾಗಾಗಿ ಈ ಕಾನೂನುಗಳನ್ನು ತಡೆ ಹಿಡಿಯಬೇಕೆಂದು ಸಾರ್ವಜನಿಕವಾಗಿ ಮನವಿ ಮಾಡಿದರು. ಆದರೂ ನೆತನ್ಯಾಹು ತಮ್ಮ ಹಠ ಬಿಡಲಿಲ್ಲ. ಆಂತರಿಕ ವ್ಯವಹಾರಗಳ ಸಚಿವ ಮತ್ತು ಉಗ್ರ ಧಾರ್ಮಿಕ ಪಕ್ಷದ ನಾಯಕ “ಪ್ರತಿಭಟನಾಕಾರರು ಅರಾಜಕತಾವಾದಿಗಳು, ನ್ಯಾಯಾಂಗ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವುದು ಎಂದರೆ ಅವರಿಗೆ ಶರಣಾಗತರಾದಂತೆ” ಎಂದು ಹೇಳಿದ್ದು ಪ್ರತಿಭಟನೆಯ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿತು.  ಇಸ್ರೇಲಿನ ಟ್ರೇಡ್ ಯೂನಿಯನುಗಳು ಅನಿರ್ದಿಷ್ಟ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟವು. ಮಾರ್ಚ್ 27ರ ಹೊತ್ತಿಗೆ ಇಡೀ ದೇಶವೇ ಸ್ತಬ್ಧವಾಗುವ ಸೂಚನೆ ಕಂಡು ಬಂದವು. ದೇಶ ಆಂತರಿಕ ಯುದ್ಧದತ್ತ ಜಾರುವ ಸೂಚನೆ ಕಂಡು ಬಂದಾಗ ಮತ್ತು ಮಿಲಿಟರಿ ಸಹ ಸರಕಾರದ ನೆರವಿಗೆ ಬರದಿರುವ ಸಾಧ್ಯತೆ ಕಂಡು ಕೊನೆಗೂ ನೆತನ್ಯಾಹು ಹಿಂಜರಿದರು. ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳನ್ನು ಮಾಡುವ ಸರಣಿ ಕಾನೂನುಗಳನ್ನು, ಸಂವಾದದ ಮೂಲಕ ಹೆಚ್ಚಿನ ಸಾರ್ವತ್ರಿಕ ಸಹಮತ ಮೂಡುವ ವರೆಗೆ ಸ್ಥಗಿತಗೊಳಿಸುವ ಘೋಷಣೆ ಮಾಡಿದರು.

ಪ್ರತಿಭಟನೆ ನಡೆಸುತ್ತಿದ್ದ ಹಲವು ಸಂಘಟನೆಗಳ ಕೂಟದ ಹೆಚ್ಚಿನ ಸಂಘಟನೆಗಳು ನೆತನ್ಯಾಹು ಅವರನ್ನು ನಂಬುವುದಿಲ್ಲ. ಸ್ವಲ್ಪ ಸಮಯದ ನಂತರ ಮತ್ತೆ ಈ ಕಾನೂನುಗಳನ್ನು ಮುಂದೊತ್ತುತ್ತಾರೆ ಎಂಬುದರ ಬಗ್ಗೆ ಅವರಿಗೆ ಸಂಶಯವಿಲ್ಲ.  ಆದರೂ ರಾಷ್ಟ್ರೀಯ ಬಿಕ್ಕಟ್ಟನ್ನು ತಿಳಿಗೊಳಿಸುವ ಉದ್ದೇಶದಿಂದ ಸದ್ಯಕ್ಕೆ ಪ್ರತಿಭಟನೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಯಿತು. ಆದರೆ ಹಲವು ಮಾಜಿ ಮಿಲಿಟರಿ ಪಡೆಗಳ ಮತ್ತು ಮೀಸಲು ಪಡೆಗಳ ಸಿಬ್ಬಂದಿ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆಗಳನ್ನು ಮುಂದುವರೆಸಿವೆ. ನೆತನ್ಯಾಹು ಈ ಪ್ರಸ್ತಾವವನ್ನು ಪೂರ್ಣವಾಗಿ ವಾಪಸು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ಅವರ ವೈಯಕ್ತಿಕ ಭವಿ಼ಷ್ಯ ಈ ಕಾನೂನುಗಳನ್ನು ಜಾರಿಗೆ ಮಾಡುವುದರ ಮೇಲೆ ಅವಲಂಬಿಸಿದೆಯೆಂದು ಅವು ನಂಬಿವೆ. ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳನ್ನು ಮಾಡುವ ಸರಣಿ ಕಾನೂನುಗಳ ಪ್ರಸ್ತಾವವನ್ನು ಪೂರ್ಣವಾಗಿ ವಾಪಸು ತೆಗೆದುಕೊಳ್ಳುವವರೆಗೆ ಪ್ರತಿಭಟನೆಗಳನ್ನು ಮುಂದುವರೆಸುವುದಾಗಿ ಹೇಳಿವೆ.

ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳಾದರೂ ಏನು?

ನೆತನ್ಯಾಹು ಪ್ರಸ್ತಾವಿಸಿರುವ ಹೆಚ್ಚು ಕಡಿಮೆ ಆಂತರಿಕ ಯುದ್ಧಕ್ಕೆ ಕಾರಣವಾದ ನ್ಯಾಯಾಂಗದ ಆಮೂಲಾಗ್ರ ಬದಲಾವಣೆಗಳಾದರೂ ಏನು? ಮೊದಲನೆಯದಾಗಿ ಒಂದು ಕಾನೂನು ಪ್ರಕಾರ ಪ್ರಸಕ್ತ ಮತ್ತು ಯಾವುದೇ ಭವಿಷ್ಯದ ಪ್ರಧಾನಿಯ ವಿರುದ್ಧ ಪಾರ್ಲಿಮೆಂಟ್ ಅಥವಾ ಕೋರ್ಟುಗಳು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳ ಕಾರಣದಿಂದ ಪ್ರಧಾನಿಯನ್ನು ಪಟ್ಟದಿಂದ ತೆಗೆಯುವಂತಿಲ್ಲ. ಇದು ನೆತನ್ಯಾಹು ಅವರಿಗೆ ತುರ್ತಿನದು, ಏಕೆಂದರೆ ಅವರ ವಿರುದ್ಧವಿರುವ ಹಲವು ಗಂಭೀರ ಭ್ರಷ್ಟಾಚಾರದ ಪ್ರಕರಣಗಳು ಕೋರ್ಟಿನ ಮುಂದಿವೆ. ಅವರ ಮಡದಿಯನ್ನು ಈಗಾಗಲೇ ಸರಕಾರಿ ನಿಧಿಯ ದುರ್ಬಳಕೆಯಲ್ಲಿ ದೋಷಿಯಾಗಿ ಘೋಷಿಸಲಾಗಿದೆ. ಎರಡನೆಯದಾಗಿ ನ್ಯಾಯಾಧೀಶರನ್ನು ನೇಮಕ ಮಾಡುವ 9 ಸದಸ್ಯರ ಸಮಿತಿಯ ರಚನೆಯನ್ನು ಇನ್ನೊಂದು ಕಾನೂನು ಬದಲಾಯಿಸಲು ಹೊರಟಿದೆ. ಈ ಬದಲಾವಣೆಗಳ ನಂತರ ಸರಕಾರದ ಪ್ರತಿನಿಧಿಗಳು ಮತ್ತು ಅದರಿಂದ ನೇಮಕವಾದವರು ಈ ಸಮಿತಿಯಲ್ಲಿ ಬಹುಮತ ಹೊಂದಿರುತ್ತಾರೆ. ಹಾಗಾಗಿ ಕಾರ್ಯಾಂಗದ ಕೈಮೇಲಾಗುತ್ತದೆ. ನ್ಯಾಯಾಂಗದ ಸ್ವಾಯತ್ತತೆಗೆ ಹೊಡೆತ ಬೀಳುತ್ತದೆ. ಮಾತ್ರವಲ್ಲ, ಸರಕಾರದ ಆಡಳಿತಾತ್ಮಕ, ನೀತಿಯ ಧೋರಣೆಗಳು ಮತ್ತು ಕಾರ್ಯಾಚರಣೆಗಳನ್ನು ‘ಸಂವಿಧಾನ-ವಿರೋಧೀ’ ಎಂದು ವಜಾ ಮಾಡುವ ಕೋರ್ಟುಗಳ ಅಧಿಕಾರವನ್ನು ಗಮನಾರ್ಹವಾಗಿ ಮೊಟಕು ಮಾಡಲಾಗುತ್ತಿದೆ.

ಮುಂದುವರೆದು ನ್ಯಾಯಾಂಗದ ಇತರ ಸುಧಾರಣೆಗಳ ಭಾಗವಾಗಿ ‘ರಬ್ಬಿನಿಕಲ್’ (ಧಾರ್ಮಿಕ) ಕೋರ್ಟುಗಳ ವ್ಯಾಪ್ತಿಯನ್ನು ಧಾರ್ಮಿಕ ಕಾನೂಣು ಬಳಸಿ ಸಿವಿಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸುವತ್ತ ವಿಸ್ತರಿಸುವ, ಅವಿಶ್ವಾಸ ಮತದ ಮೂಲಕ ಸರಕಾರವನ್ನು ಬದಲಾಯಿಸುವ ಪಾರ್ಲಿಮೆಂಟನ್ನು ವಿಸರ್ಜಿಸುವುದನ್ನು ನಿರ್ಬಂಧಿಸುವ ಇತ್ಯಾದಿ ಕಾನೂನುಗಳ ಪ್ರಸ್ತಾವಗಳೂ ಸೇರಿವೆ.

ನ್ಯಾಯಾಂಗದ ಬದಲಾವಣೆಗಳು ಏಕೆ ಧ್ರುವೀಕರಿಸುತ್ತಿವೆ?

ಇಸ್ರೇಲಿನಲ್ಲಿ ವಿವರವಾದ ಲಿಖಿತ ಸಂವಿಧಾನವಿಲ್ಲದೆ ಬರಿಯ ಕೆಲವು ಮೂಲಭೂತ ಕಾನೂನುಗಳು ಮಾತ್ರವಿರುವುದರಿಂದ ನ್ಯಾಯಾಂಗಕ್ಕೆ ವಿಶೇ಼ಷ ಪಾತ್ರವಿದೆ. ವ್ಯಕ್ತಿಗಳ, ಅಲ್ಪಸಂಖ್ಯಾತರ  ಹಕ್ಕುಗಳನ್ನು ರಕ್ಷಿಸುವುದು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವುದು, ಸರಕಾರದ ಅತಿರೇಕಗಳನ್ನು ತಡೆಯುವುದು ನ್ಯಾಯಾಂಗದ ಕೆಲಸವಾಗಿದೆ. ನ್ಯಾಯಾಂಗ ಈ ಕೆಲಸಗಳನ್ನು ಮಾಡುತ್ತಾ ಬಂದಿದೆ. ವಿಶೇಷವಾಗಿ ಪ್ಯಾಲೆಸ್ಟೈನ್ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ, ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿ ಜ್ಯೂ ವಲಸೆಗಾರರ ದೌರ್ಜನ್ಯಗಳ ವಿರುದ್ಧ, ಜ್ಯೂ ಉಗ್ರ ಧಾರ್ಮಿಕ ವಾದಿಗಳ ರಾಜಕೀಯ ಪಾತ್ರದ ಮತ್ತು ಇಸ್ರೇಲಿ ಸರಕಾರದ ಉಗ್ರ ರಾಷ್ಟ್ರೀಯತೆಯ ಮೇಲೂ ಕಡಿವಾಣ ಹಾಕಿದೆ. ಇದನ್ನು ಬೆಳೆಯುತ್ತಿರುವ ಉಗ್ರ ಧಾರ್ಮಿಕ ಬಲಪಂಥೀಯ ಪಕ್ಷಗಳು ವಿರೋಧಿಸುತ್ತಿವೆ. ನ್ಯಾಯಾಂಗವು ರಾಷ್ಟ್ರೀಯತೆಯ ಮತ್ತು ಧಾರ್ಮಿಕತೆಯ ವಿರುದ್ಧ ಕೆಲಸ ಮಾಡುತ್ತಿದೆ. ಕಾರ್ಯಾಂಗದದ ಮೇಲೆ ಯಜಮಾನಿಕೆ ನಡೆಸುತ್ತಿದೆ. ಅದರ ಅಧಿಕಾರಗಳನ್ನು ಕಾರ್ಯಾಂಗದ ಜತೆ ‘ಸಮತೋಲನ’ಗೊಳಿಸಬೇಕು ಎಂದು ವಾದಿಸುತ್ತಿವೆ. ಪ್ರಸಕ್ತ ಸರಕಾರದಲ್ಲಿ ಈ ಶಕ್ತಿಗಳ ಪ್ರಭಾವ ಹೆಚ್ಚಾಗಿದ್ದು ಇವನ್ನು ಈಗಲೇ ಮಾಡಬೇಕೆಂದು ಪಟ್ಟು ಹಿಡಿದಿವೆ. ಇಲ್ಲದಿದ್ದರೆ ಬೆಂಬಲ ವಾಪಸು ತೆಗೆದು ನೆತನ್ಯಾಹು ಸರಕಾರವನ್ನು ಉರುಳಿಸುವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನೆತನ್ಯಾಹು ಗೆ ವೈಯಕ್ತಿಕವಾಗಿ ಅಪರಾಧ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು, ಸರಕಾರ ಉರುಳಿಸಿಕೊಳ್ಳಲು ಈ ಕಾನೂನುಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿತ್ತು.

ಆದರೆ ಈ ಕಾನೂನುಗಳನ್ನು ವಿರೊಧಿಸುವ ವಿಭಾಗಗಳು ಬಲವಾಗಿವೆ. ಪ್ರಜಾಪ್ರಭುತ್ವ ಬಯಸುವ ಉದಾರವಾದಿ ವಿಭಾಗಗಳು, ಮಹಿಳೆಯರು, ಮಧ್ಯಮ ವರ್ಗ, ಬುದ್ಧಿಜೀವಿಗಳು, ಅಲ್ಪಸಂಖ‍್ಯಾತರು, ಮುಖ್ಯವಾಗಿ ಮಿಲಿಟರಿ ಇಸ್ರೇಲ್ ಒಂದು ಬಹುತ್ವದ ನಡುಪಂಥೀಯ ಪ್ರಜಾತಂತ್ರವಾಗಿರಬೇಕೆಂದು ಬಯಸುತ್ತವೆ.  ಉಗ್ರ ರಾಷ್ಟ್ರವಾದಕ್ಕೂ ಅವರು ವಿರೋಧವಾಗಿದ್ದಾರೆ. ಉಗ್ರ ಧಾರ್ಮಿಕ ಶಕ್ತಿಗಳ ಕೈಮೇಲಾದರೆ ವೈಯಕ್ತಿಕ, ಮಹಿಳೆಯರ, ಅಲ್ಪಸಂಖ‍್ಯಾತರುಗಳ ಸ್ವಾತಂತ್ರ್ಯಕ್ಕೆ ತೀವ್ರ ಕುತ್ತು ಒದಗುತ್ತದೆ ಎಂಬ ತೀವ್ರ ಆತಂಕ ಅವರಿಗಿದೆ. ಹಾಗಾಗಿ ಅವರ ವಿರೋಧ, ಪ್ರತಿರೋಧ ತೀವ್ರವಾಗಿರುತ್ತದೆ. ನ್ಯಾಯಾಂಗದ ಬದಲಾವಣೆಗಳ ಪರವಾಗಿರುವವರು ರಾಜಕಾರಣದಲ್ಲೂ ಧಾರ್ಮಿಕತೆಯ ಅಧಿಪತ್ಯವನ್ನು ಒಪ್ಪುವವರು. ಇವರ ನಡುವೆ ತೀವ್ರ ಧ‍್ರುವೀಕರಣವಾಗಿದೆ. ಇಸ್ರೇಲಿನ ಬಹುಪಾಲು ಜನವಿಭಾಗಗಳು ವಿವಿಧ ದೇಶಗಳಿಂದ ವಲಸೆ ಬಂದವರು. ಈ ಧ್ರುವೀಕರಣದ ಹಿಂದೆ ವಲಸೆಗಾರರ ದೇಶಮೂಲವೂ ಒಂದು ಪ್ರಮುಖ ಅಂಶವೆಂದೂ ಹೇಳಲಾಗಿದೆ. ನ್ಯಾಯಾಂಗದ ಬದಲಾವಣೆಗಳನ್ನು ವಿರೋಧಿಸುವವರು ಹೆಚ್ಚಾಗಿ ಸೆಕ್ಯುಲರ್ ಗಣತಂತ್ರವಿರುವ ಪಾಶ್ಚಿಮಾತ್ಯ ದೇಶಗಳಿಂದ ಬಂದವರು, ನ್ಯಾಯಾಂಗದ ಬದಲಾವಣೆಗಳನ್ನು ಬೆಂಬಲಿಸುವವರು ಹೆಚ್ಚಾಗಿ ಸೆಕ್ಯುಲರ್ ಗಣತಂತ್ರ ದುರ್ಬಲವಾಗಿರುವ ಧಾರ್ಮಿಕತೆ ಪ್ರಧಾನವಾಗಿರುವ ದೇಶಗಳಿಂದ ಬಂದವರು ಎನ್ನಲಾಗಿದೆ.

ಹಾಗಿದ್ದರೆ ಮುಂದೇನು? ನೆತನ್ಯಾಹು, ಅವರ ಸರಕಾರ, ಉಗ್ರ ಧಾರ್ಮಿಕ ಶಕ್ತಿಗಳಿಗೆ ಇದು ಅಳಿವು-ಉಳಿವಿನ ಪ್ರಶ್ನೆ. ಅವರು ಈ ಕಾನೂನುಗಳನ್ನು ಜಾರಿ ಮಾಡಿದರೂ, ಕೋರ್ಟುಗಳು ಅದನ್ನು ವಜಾ ಮಾಡುವುದು ಖಂಡಿತ. ಆಗ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು. ಆದರೆ ಉಗ್ರ ಧಾರ್ಮಿಕ ಪಕಷ್ಗಳು ತಮ್ಮ ಒತ್ತಡ ಮುಂದುವರೆಸಿವೆ. ಅವುಗಳನ್ನು ಸಂತೃಪ್ತಿಪಡಿಸಲು ಆ ಪಕ್ಷದ ಆಂತರಿಕ ಸಚಿವರಿಗೆ  ಅವರ ನಾಯಕತ್ವದಲ್ಲಿ ರಾಷ್ಟ್ರೀಯ ಭದ್ರತಾ ಪಡೆ ರಚಿಸಲು ಅನುಮತಿ ನೀಡಲಾಗಿದೆ. ಅಂತರ್ರಾಷ್ಟ್ರೀಯವಾಗಿಯೂ ಪಾಶ್ಚಿಮಾತ್ಯ ದೇಶಗಳು ಈ ಕಾನೂನಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವುದರಿಂದ ನೆತನ್ಯಾಹು ಸರಕಾರ ಆತಂಕಗೊಂಡಿದೆ.. ಎರಡು ವಿಭಾಗಗಳ ನಡುವೆ ಸಂಘರ್ಷ ತೀವ್ರವಾದರೆ ಮಿಲಿಟರಿ ಸಹ ನೆತನ್ಯಾಹು ಸರಕಾರದ ರಕ್ಷಣೆಗೆ ನಿಲ್ಲುವ ಸಾಧ್ಯತೆ ಕಡಿಮೆ ಇರುವುದರಿಂದ ಆಂತರಿಕ ಯುದ್ಧದ ಪರಿಸ್ಥಿತಿ ಬರಬಹುದು.

ಭಾರತದಲ್ಲೂ ಕಾರ್ಯಾಂಗ ನ್ಯಾಯಾಂಗಗಳ ನಡುವೆ ಸಂಘರ್ಷ, ಸಮತೋಲನ ತಪ್ಪಿರುವಾಗ, ಇಸ್ರೇಲಿನ ವಿದ್ಯಮಾನಗಳು  ನಮ್ಮ ದೇಶದಲ್ಲೂ ಮುಂಬರುವ ಬೆಳವಣಿಗೆಗಳಿಗೆ ಮುನ್ಸೂಚನೆಯಾಗಿವೆಯೆ?

Donate Janashakthi Media

Leave a Reply

Your email address will not be published. Required fields are marked *