ಆಧುನಿಕ ಭಾರತೀಯ ಗಣತಂತ್ರವನ್ನು ವಿರೂಪಗೊಳಿಸುವ ಪ್ರಯತ್ನಗಳು

ಸೀತಾರಾಮ್ ಯೆಚೂರಿ

ಕೋಮುವಾದಿ ಧ್ರುವೀಕರಣ ಹೆಚ್ಚೆಚ್ಚು ತೀಕ್ಷ್ಣವಾದಂತೆ, ಅದೇ ಅನುಪಾತದಲ್ಲಿ ಭಯೋತ್ಪಾದಕ ದಾಳಿಗಳೂ ಹೆಚ್ಚುತ್ತವೆ ಎಂಬ ಸಂಗತಿಯನ್ನು ಬೋ ಧಗಯಾ ಸ್ಫೋಟಗಳು ಭೀಕರ ಸ್ವರೂಪದಲ್ಲಿ ನೆನಪಿಸಿವೆ. ಈ ಸನ್ನಿವೇಶದಲ್ಲಿ ನೋಡಿದಾಗ, ಬಿಜೆಪಿ 2014ರ ಸಾರ್ವತ್ರಿಕ ಚುನಾವಣೆಗಳ ಸಿದ್ಧತೆಯಾಗಿ ತನ್ನ ಮೂಲಮಂತ್ರಗಳಿಗೆ ಮರಳಲು ನಿರ್ಧರಿಸಿರುವಂತೆ ಈಗ ಕಾಣುತ್ತಿರುವುದು ಒಂದು ಅನಿಷ್ಟಕಾರಿ ಸಂಕೇತ. ಭಾರತದ ಭವಿಷ್ಯತ್ತಿನ ದೃಷ್ಟಿಯಿಂದ, ಆಧುನಿಕ ಭಾರತೀಯ ಗಣತಂತ್ರದ ರೂಪಾಂತರಕ್ಕೆ ನಡೆಸಿರುವ ಪ್ರಯತ್ನಗಳನ್ನು ಎದುರಿಸಿ ಸೋಲಿಸಬೇಕು.

M_Id_399803_FP

ಗಯಾ ಬುದ್ಧನಿಗೆ ಜ್ಞಾನೋದಯವಾದ ಪವಿತ್ರ ಸ್ಥಳ. ಅದರ ಮೇಲೆ ಗುರಿಯಿಟ್ಟ ಇತ್ತೀಚಿನ ಸರಣಿ ಬಾಂಬ್ ಸ್ಫೋಟಗಳು, ಕೋಮುವಾದಿ ಧ್ರುವೀಕರಣ ಹೆಚ್ಚೆಚ್ಚು ತೀಕ್ಷ್ಣವಾದಂತೆ, ಅದೇ ಅನುಪಾತದಲ್ಲಿ ಭಯೋತ್ಪಾದಕ ದಾಳಿಗಳೂ ಹೆಚ್ಚುತ್ತವೆ ಎಂಬ ಸಂಗತಿಯನ್ನು ಭೀಕರ ಸ್ವರೂಪದಲ್ಲಿ ನೆನಪಿಸಿವೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಮತ್ತು ಇತರರು ಈ ಘೋರ ದಾಳಿಗಳನ್ನು ನಡೆಸಿದವರಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಈ ಬಗ್ಗೆ ಬಹಳಷ್ಟು ಊಹಾಪೋಹಗಳು ನಡೆದಿವೆ. ಬೋಧಗಯಾ ದೇವಾಲಯದ ಹತೋಟಿ ಕುರಿತಂತೆ ಬೌದ್ಧರು ಮತ್ತು ಹಿಂದೂಗಳ ನಡುವೆ ಬಹುಕಾಲದಿಂದ ಒಳಗೊಳಗೇ ಕುದಿಯುತ್ತಿರುವ ವಿವಾದವೊಂದಿದೆ.

ಇತ್ತೀಚೆಗೆ ಪಾಕಿಸ್ತಾನದ ಜಮಾತ್-ಉದ್-ದವಾದ ಮುಖ್ಯಸ್ಥ, ಹಾಫೀಝ್ ಸೈಯದ್, ಬೌದ್ಧರ ಪ್ರಾಬಲ್ಯ ಇರುವ ಮ್ಯಾನ್ಮಾರ್ ದೇಶದಲ್ಲಿ ಮುಸ್ಲಿಮರ ಮೇಲೆ ಅತ್ಯಾಚಾರಗಳನ್ನು ನಡೆಸುವಲ್ಲಿ ಭಾರತ ನೆರವಾಗುತ್ತಿದೆ ಎಂದು ಆಪಾದಿಸಿದ್ದ. ಬಂಗಾಲಿ ಭಾಷಿಕ ರೊಹಿಂಗ್ಯ ಮುಸ್ಲಿಮರು ಮ್ಯಾನ್ಮಾರಿನ ಒಂದು ಅಲ್ಪಸಂಖ್ಯಾತ ಸಮುದಾಯ. ಅವರು ಬಾಂಗ್ಲಾದೇಶದಿಂದ ಬಂದಿರುವ ಕಾನೂನುಬಾಹಿರ ವಲಸೆಗಾರರು ಎಂದು ಮ್ಯಾನ್ಮಾರ್ ಪರಿಗಣಿಸಿದೆ. ಬಾಂಗ್ಲಾದೇಶ್ ಇದನ್ನು ನಿರಾಕರಿಸಿ ಅವರು ಮ್ಯಾನ್ಮಾರಿಗಳು ಎನ್ನುತ್ತಿದೆ. ಇವರು ಮ್ಯಾನ್ಮಾರ್ನ 135 ಮಾನ್ಯತೆ ಪಡೆದ ಜನಾಂಗೀಯ ಗುಂಪುಗಳ ಪಟ್ಟಿಯಲ್ಲಿ ಇಲ್ಲ. 2012 ರಲ್ಲಿ ಅಲ್ಲಿ ನಡೆದ ಸತತ ಹಿಂಸಾಚಾರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೊಹಿಂಗ್ಯಾ ಜನರು ಸ್ಥಳಾಂತರಗೊಂಡರು. ಈ ವರ್ಷ ಮಾಚರ್್ನಲ್ಲಿ ನಡೆದ ಮುಸ್ಲಿಂ-ವಿರೋಧಿ ಗಲಭೆಗಳಲ್ಲಿ 40 ಮಂದಿ ಸತ್ತರು, ಸಾವಿರಾರು ಮಂದಿ ನಿರಾಶ್ರಿತರಾದರು.

ಯಾರೀ ಭಯೋತ್ಪಾದಕರು?
ಎನ್ಐಎ ವಿಚಾರಣೆಗಳ ನಂತರ ಮುಂಬೈಯ 26/11 ರ ಭಯೋತ್ಪಾದಕ ದಾಳಿಗಳಲ್ಲಿನ ಅಮೆರಿಕನ್- ಪಾಕಿಸ್ತಾನಿ ಡೇವಿಡ್ ಹೆಡ್ಲಿ, ಗಯಾದ ಮಹಾಬೋಧಿ ದೇವಾಲಯ ಭಯೋತ್ಪಾದಕರ ಪಟ್ಟಿಯಲ್ಲಿ ಇತ್ತು ಎಂದು ಹೇಳಿಕೊಂಡಿದ್ದಾನೆ. ಅದೇ ರೀತಿ ಒಬ್ಬ ಇಂಡಿಯನ್ ಮುಜಾಹಿದಿನ್ ಕಾರ್ಯಕರ್ತ ಕೂಡ ಬೋಧಗಯಾ ಭಯೋತ್ಪಾದಕರ ಗುರಿಗಳಲ್ಲಿ ಒಂದು ಎಂದು ತನಿಖಾಗಾರರಿಗೆ ಹೇಳಿದ್ದಾನೆ.

ಈ ಹಿಂದೆ ಅಜ್ಮೇರ್ ಶರೀಫ್, ಮಲೇಗಾಂವ್ ಮತ್ತು ಹೈದರಾಬಾದಿನ ಮಕ್ಕಾಮಸೀದಿಯಲ್ಲಿನ ಭಯೋತ್ಪಾದಕ ದಾಳಿಗಳ ತನಿಖೆಗಳ ಪ್ರಕಾರ ಕೆಲವು ಹಿಂದುತ್ವ ಗುಂಪುಗಳು ಇದಕ್ಕೆ ಹೊಣೆ ಎಂದು ಕಂಡು ಬಂದಿತ್ತು. ಮೊದಲಿಗೆ ಇವು ಮುಸ್ಲಿಂ ಗುಂಪುಗಳ ಕೃತ್ಯಗಳು ಎಂದು ಭಾವಿಸಲಾಗಿತ್ತು, ಆ ರೀತಿಯ ಆಪಾದನೆಗಳನ್ನು ಹಾಕಲಾಗಿತ್ತು. ಅದರ ಫಲಿತಾಂಶವಾಗಿ ದೊಡ್ಡ ಪ್ರಮಾಣದಲ್ಲಿ ಮುಸ್ಲಿಂ ಯುವಜನರನ್ನು ಬಂಧಿಸಲಾಗಿತ್ತು (ದುರದೃಷ್ಟವಶಾತ್, ಈಗಲೂ, ತನಿಖೆಗಳು ಬೇರೆಯೇ ತೀಮರ್ಾನಕ್ಕೆ ಬಂದ ನಂತರವೂ ಹಲವಾರು ಮಂದಿ ಪೋಲೀಸ್ ಕಸ್ಟಡಿಗಳಲ್ಲಿ ಕೊಳೆಯುತ್ತಿದ್ದಾರೆ). ಇತ್ತೀಚಿನ ಈ ಭಯೋತ್ಪಾದಕ ದಾಳಿಯಲ್ಲೂ ಹಿಂದುತ್ವ ಗುಂಪುಗಳ ಇಂತಹ ಒಂದು ಪಾತ್ರ ಇರುವ ಸಾಧ್ಯತೆಗಳಿವೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಸೂಚಿಸುತ್ತಿದ್ದಾರೆ.

ಇವೆಲ್ಲ, ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಶಿಕ್ಷಿಸಲು ಒಂದು ತ್ವರಿತವಾದ, ಆಮೂಲಾಗ್ರವಾದ ತನಿಖೆ ನಡೆಯಬೇಕಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಭಯೋತ್ಪಾದಕ ದಾಳಿಗಳು, ಅವು ಯಾವುದೇ ಬಣ್ಣ-ವಿಧದವುಗಳಾಗಿರಲಿ, ಅವುಗಳ ಉಗಮ ಎಲ್ಲಿಯೇ ಇರಲಿ, ಎಲ್ಲವೂ ರಾಷ್ಟ್ರ-ವಿರೋಧಿ ಕೃತ್ಯಗಳೇ. ಅದರಿಂದಾಗಿ ಅವು ಎಂದೂ ಸ್ವೀಕಾರಯೋಗ್ಯವಲ್ಲ. ಒಂದು ಆಮೂಲಾಗ್ರ ತನಿಖೆ ಯಾವ ತೀಮರ್ಾನಕ್ಕೆ ಬರುತ್ತದೋ, ಅದರ ಪ್ರಕಾರ ಅಪರಾಧಿಗಳನ್ನು ಶಿಕ್ಷಿಸಬೇಕು. ಮತ್ತು ಇದು ಕೋಮುದ್ವೇಷವನ್ನು ಮತ್ತು ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ಯತ್ನಿಸುವವರರಿಗೆ ಪಾಠವಾಗಬೇಕು. ಅವರು ಮತ್ತೆ ಅಂತಹ ಕೆಲಸಕ್ಕೆ ಕೈಹಾಕದಂತೆ ಮಾಡಬೇಕು.

ನಮ್ಮ ಭದ್ರತಾ ವ್ಯವಸ್ಥೆಯನ್ನು ಕೂಡ ತುತರ್ಾಗಿ ಗಟ್ಟಿಗೊಳಿಸಬೇಕಾಗಿದೆ ಎಂಬುದೂ ಸ್ಪಷ್ಟವಾಗಿದೆ. ಬೋಧಗಯಾ ಭಯೋತ್ಪಾದಕರ ದಾಳಿ ಪಟ್ಟಿಯಲ್ಲಿ ಇದೆ ಎಂದು ನಮ್ಮ ಬೇಹುಗಾರಿಕಾ ಸಂಸ್ಥೆ, ಐ.ಬಿ. ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಬಿಹಾರ ರಾಜ್ಯ ಸರಕಾರವನ್ನು ಎಚ್ಚರಿಸಿತ್ತು ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಆದರೂ ಈ ದಾಳಿಯನ್ನು ತಪ್ಪಿಸಲಾಗಲಿಲ್ಲ. ನಮ್ಮ ದೇಶದ ಐಕ್ಯತೆ, ಸಮಗ್ರತೆ ಮತ್ತು ಆಂತರಿಕ ಭದ್ರತೆಗಾಗಿ, ಇಂತಹ ದೌರ್ಬಲ್ಯಗಳನ್ನು ನಿವಾರಿಸಬೇಕಾಗಿದೆ. ಎಲ್ಲಾ ಬಣ್ಣಗಳ ಭಯೋತ್ಪಾದನೆಯನ್ನು ಎದುರಿಸಿ ನಿಲ್ಲಬೇಕು ಎಂಬ ಈ ಪ್ರಶ್ನೆಯಲ್ಲಿ ಯಾವ ಚಚರ್ೆಗೂ, ಯಾವ ರಾಜಿಗೂ ಅವಕಾಶವಿರಲು ಸಾಧ್ಯವಿಲ್ಲ.

ಅನಿಷ್ಟಕಾರಿ ಸಂಕೇತ
ಈ ಸನ್ನಿವೇಶದಲ್ಲಿ ನೋಡಿದಾಗ, ಬಿಜೆಪಿ, ಆರೆಸ್ಸೆಸ್ನ ರಾಜಕೀಯ ಅಂಗವಾಗಿ ಕಾರ್ಯನಿರ್ವಹಿಸುತ್ತ, 2014ರ ಸಾರ್ವತ್ರಿಕ ಚುನಾವಣೆಗಳ ಸಿದ್ಧತೆಯಾಗಿ ತನ್ನ ಮೂಲಮಂತ್ರಗಳಿಗೆ ಮರಳಲು ನಿರ್ಧರಿಸಿರುವಂತೆ ಈಗ ಕಾಣುತ್ತಿರುವುದು ಒಂದು ಅನಿಷ್ಟಕಾರಿ ಸಂಕೇತ. ಇದು ಕೋಮು ಧ್ರುವೀಕರಣವನ್ನು ಇನ್ನಷ್ಟು ತೀಕ್ಷ್ಣಗೊಳಿಸುತ್ತದೆ, ಆಮೂಲಕ ಎಲ್ಲ ತರದ ಭಯೋತ್ಪಾದನೆಗಳು ಸಮೃದ್ಧವಾಗಿ ಬೆಳೆಯಲು ಒಂದು ಫಲವತ್ತಾದ ನೆಲವನ್ನು ಹದಮಾಡಿ ಕೊಡುತ್ತದೆ. ಒಂದು ಹುಚ್ಚು ಅಸಹಿಷ್ಣುತೆಯ ಫ್ಯಾಸಿಸ್ಟ್ ಮಾದರಿಯ ‘ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಆರೆಸ್ಸೆಸ್ ಯೋಜನೆಯನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಸೋಲಿಸಲಾಯಿತು. ಸ್ವತಂತ್ರ ಭಾರತ ತನ್ನನ್ನು ಒಂದು ಆಧುನಿಕ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಪ್ರತಿಷ್ಠಾಪಿಸಿಕೊಂಡಿತು. ಈ ಸೋಲುಂಡ ಆರೆಸ್ಸೆಸ್ನ ಪ್ರತ್ಯಾಘಾತಕ್ಕೆ ಅತ್ಯಂತ ದುರದೃಷ್ಟಕರ ಆಹುತಿಯೆಂದರೆ ಮಹಾತ್ಮ ಗಾಂಧಿ.

ತನ್ನ ಗುರಿಸಾಧನೆಗಾಗಿ ಕೋಮು ಉದ್ವೇಗಗಳನ್ನು ತೀಕ್ಷ್ಣಗೊಳಿಸುವಲ್ಲಿ ತೊಡಗಿರುವ ಆರೆಸ್ಸೆಸ್ ಸ್ವಾತಂತ್ರ್ಯಕ್ಕಾಗಿ ಜನತೆ ನಡೆಸಿದ ಹೋರಾಟದಲ್ಲಿ ಯಾವ ಪಾತ್ರವನ್ನೂ ವಹಿಸಿರಲಿಲ್ಲ. ಆದರೆ ತನ್ನ ಗುರಿಸಾಧನೆಯ ಭಾಗವಾಗಿ ಸ್ವಾತಂತ್ರ್ಯ ಹೋರಾಟದ ಕೆಲವು ದಿಗ್ಗಜರನ್ನು ತಮ್ಮವರಾಗಿಸಿಕೊಳ್ಳುವ ಆತುರದಲ್ಲಿ ಅವರು ಸದರ್ಾರ್ ಪಟೇಲ್ ಬಳಿ ಸಾರುತ್ತಿದ್ದಾರೆ. ಇದೊಂದು ಅಪಹಾಸ್ಯ. ಏಕೆಂದರೆ ಮಹಾತ್ಮ ಗಾಂಧಿಯವರ ಹತ್ಯೆಯಾದಾಗ ಆರೆಸ್ಸೆಸ್ನ್ನು ನಿಷೇಧಿಸಿದವರು ಈ ಸದರ್ಾರ್ ಪಟೇಲ್ ಅವರೇ ಎಂಬುದನ್ನು ಈಗ ನೆನಪಿಸಿಕೊಳ್ಳುವುದು ಅಗತ್ಯ.

ಜನಸಂಘ-ಬಿಜೆಪಿ
ಆರೆಸ್ಸೆಸ್ ಮೇಲೆ ನಿಷೇಧವನ್ನು ಪ್ರಕಟಿಸುವ ಫೆಬ್ರುವರಿ 4, 1948ರ ಸರಕಾರೀ ಹೇಳಿಕೆ ಹೀಗಂದಿತ್ತು: “..ಆದರೆ ಸಂಘದ ಆಕ್ಷೇಪಾರ್ಹ ಮತ್ತು ಹಾನಿಕಾರೀ ಚಟುವಟಿಕೆಗಳು ಅವಿರತವಾಗಿ ಮುಂದುವರೆಯುತ್ತಿವೆ ಮತ್ತು ಸಂಘದ ಚಟುವಟಿಕೆಗಳು ಪ್ರಾಯೋಜಿಸುವ, ಅದರ ಸ್ಫೂತರ್ಿಯಿಂದ ನಡೆಯುತ್ತಿರುವ ಹಿಂಸಾಚಾರದ ಪಂಥ ಹಲವರನ್ನು ಆಹುತಿ ತೆಗೆದುಕೊಂಡಿದೆ. ಹೀಗೆ ಬಲಿಯಾದ ಇತ್ತೀಚಿನ ಮತ್ತು ಅತ್ಯಂತ ಅಮೂಲ್ಯವಾದ ಜೀವವೆಂದರೆ ಸ್ವತಃ ಗಾಂಧೀಜಿಯವರು.” ಈ ಹೇಳಿಕೆಯ ಕರಡು ಸಿದ್ಧಪಡಿಸಿದವರು ಸ್ವತಃ ಸದರ್ಾರ್ ಪಟೇಲ್.

ನಂತರ ಹಲವಾರು ವಂಚಕ ರಾಜಿಗಳ ಮೂಲಕ ಆರೆಸ್ಸೆಸ್ ತನ್ನ ಮೇಲಿನ ನಿಷೇಧವನ್ನು ಹಿಂತೆದುಕೊಳ್ಳುವ ಉದ್ದೇಶವನ್ನು ಸಾಧಿಸಿಕೊಂಡಿತು. ಅದಕ್ಕಾಗಿ ತಾನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಒಂದು ‘ಸಾಂಸ್ಕೃತಿಕ ಸಂಘಟನೆ’ಯಾಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಳ್ಳುವುದಾಗಿ ಭರವಸೆ ನೀಡಿ ನಿಷೇಧದಿಂದ ಹೊರಬಂತು. ಆದ್ದರಿಂದ, ಆಧುನಿಕ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಒಂದು ‘ಹಿಂದೂ ರಾಷ್ಟ್ರದ ತನ್ನ ಆವೃತ್ತಿಯಾಗಿ ಪರಿವತರ್ಿಸುವ ತನ್ನ ಗುರಿಸಾಧನೆಗೆ ಅದಕ್ಕೊಂದು ರಾಜಕೀಯ ಅಂಗ ಬೇಕಾಯಿತು. ಮೊದಲಿಗೆ, 1952ರಲ್ಲಿ ಜನಸಂಘ ಆ ಕೆಲಸ ಮಾಡಿತು ನಂತರ ಇದು ಜನತಾಪಕ್ಷದೊಳಗೆ ವಿಲೀನಗೊಂಡಿತು. ಆ ಪಕ್ಷ ವಿಘಟನೆಗೊಂಡ ನಂತರ 1980 ರಿಂದ ಬಿಜೆಪಿ ಆ ಕೆಲಸ ಮಾಡುತ್ತಿದೆ.

ಮತ್ತದೇ ಅಜೆಂಡಾ!
ಆರೆಸ್ಸೆಸ್ನ ಗುರಿಸಾಧನೆಯಲ್ಲಿ ತೊಡಗಿಕೊಂಡ ಬಿಜೆಪಿಗೆ ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದಲ್ಲದೆ, ದೊಡ್ಡ ಮಟ್ಟದಲ್ಲಿ ಇತಿಹಾಸದ ಮರು-ಬರವಣಿಗೆ ಮಾಡಬೇಕಾಗಿತ್ತು. ತಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಪಾಠ್ಯಕ್ರಮವನ್ನು ಬದಲಿಸಿದ ಬಗ್ಗೆ ಹೇಳುತ್ತ ಒಬ್ಬ ಮಾಜಿ ಬಿಜೆಪಿ ಅಧ್ಯಕ್ಷರು “ನಾವು ಈ ಹಿಂದೆಯೂ ಇದನ್ನು ಮಾಡಲು ಪ್ರಯತ್ನಿಸಿದ್ದೇವೆ, ಮುಂದೆಯೂ ನಾವು ಮತ್ತೆ ಪ್ರಯತ್ನಿಸುತ್ತೇವೆ” ಎಂದು ಹೇಳಿರುವುದಾಗಿ ಮಾಧ್ಯಮ ವರದಿಗಳು ತಿಳಿಸುತ್ತವೆ(ಹಿಂದುಸ್ತಾನ್ ಟೈಮ್ಸ್, ಜೂನ್ 24, 2013).

ಅದೇ ದಿನ ಅಡ್ವಾಣಿಯವರು “ದೇಶ ಈಗಲೂ ಕಲಮು 370ನ್ನು(ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ್ದು) ರದ್ದು ಮಾಡುವ ದಿನಕ್ಕೆ ಕಾಯುತ್ತಿದೆ” ಎಂದರು. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮುಖಂಡರು ಮತ್ತೊಮ್ಮೆ, ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ಒಂದು ಶ್ರೀರಾಮ ದೇವಸ್ಥಾನ ಕಟ್ಟುವ ಮಾತನ್ನು ಆಡಲಾರಂಭಿಸಿದ್ದಾರೆ. 1998ರಲ್ಲಿ ಎನ್ಡಿಎ ಸರಕಾರ ರಚಿಸಲು ಮಿತ್ರಪಕ್ಷಗಳನ್ನು ಆಕಷರ್ಿಸಲಿಕ್ಕಾಗಿ ಹಿನ್ನೆಲೆಗೆ ಸರಿಸಿದ್ದಂತೆ ಕಂಡಿದ್ದ ಮೂಲಮಂತ್ರಗಳಿಗೆ- ಕಟ್ಟಾ ಕೋಮುವಾದಿ ಅಜೆಂಡಾಕ್ಕೆ ಮರಳುವ ಕ್ರಿಯೆಯಿದು.

ಇಂತಹ ಒಂದು ಅಜೆಂಡಾ ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ತದ್ವಿರುದ್ಧವಾದದ್ದು, ಭಾರತದ ಅಪಾರ ಶ್ರೀಮಂತಿಕೆ ಹೊಂದಿರುವ ಸಾಮಾಜಿಕ-ಸಾಂಸ್ಕೃತಿಕ-ಧಾಮರ್ಿಕ ವೈವಿಧ್ಯತೆಯನ್ನು ಕಾಯ್ದುಕೊಂಡು, ಅದನ್ನು ಇನ್ನಷ್ಟು ಶ್ರೀಮಂತಗೊಳಿಸುವುದಕ್ಕೆ ತದ್ವಿರುದ್ಧವಾದದ್ದು. ಆಧುನಿಕ ಭಾರತೀಯ ಗಣತಂತ್ರವನ್ನು ಇನ್ನಷ್ಟು ಕ್ರೋಢೀಕರಿಸಲು ಸಾಧ್ಯವಾಗಬೇಕಾದರೆ ಇದಕ್ಕೆ ಅವಕಾಶ ಕೊಡಲಾಗದು. ಹೀಗೆ ಭಾರತದ ಭವಿಷ್ಯತ್ತಿನ ದೃಷ್ಟಿಯಿಂದ, ಆಧುನಿಕ ಭಾರತೀಯ ಗಣತಂತ್ರದ ರೂಪಾಂತರಕ್ಕೆ ಆರೆಸ್ಸೆಸ್/ಬಿಜೆಪಿಗಳು ನಡೆಸಿರುವ ಪ್ರಯತ್ನಗಳನು ಘಂಟಾಘೋಷವಾಗಿ ಎದುರಿಸಿ ಸೋಲಿಸಬೇಕು.
0

Donate Janashakthi Media

Leave a Reply

Your email address will not be published. Required fields are marked *