ದಾವಣಗೆರೆ : ಆದಿವಾಸಿ ಜನಾಂಗ ಇಂದಿಗೂ ಹಿಂದುಳಿದಿದೆ, ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಬೇಕು, ಸರ್ಕಾರದಿಂದ ಸೂಕ್ತ ಸೌಲಭ್ಯ ಸಿಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ತಿಳಿಸಿದರು.
ನಗರದ ಬಂಬೂ ಬಜಾರ್ ನ ಶ್ರೀಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ 30 ನೇ ಆದಿವಾಸಿ ವಿಶ್ವ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಾ, ಇಂದಿಗೂ ರಾಜ್ಯದ ಬಹುತೇಕ ಕಡೆ ಬುಡಕಟ್ಟು ಜನರು ಪ್ಲಾಸ್ಟಿಕ್ ಗುಡಿಸಲುಗಳಲ್ಲಿ ವಾಸ ಮಾಡುವುದನ್ನು ಕಾಣುತ್ತಿದ್ದೇವೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಅಸಮರ್ಪಕ ಯೋಜನೆಗಳು ಇದಕ್ಕೆ ಕಾರಣ ಎಂದು ತಿಳಿಸಿದರು. ನ್ಯಾಷನಲ್ ಪಾರ್ಕ್, ಹುಲಿ ರಕ್ಷಣೆ ಯೋಜನೆ ಸೇರಿ ಸರ್ಕಾರದ ಹಲವು ಯೋಜನೆಗಳಿಗೆ ಗಿರಿಜನರನ್ನು ಕಾಡಿನಿಂದ ಹೊರಹಾಕಲಾಗಿದೆ. ಪುನರ್ವಸತಿ ಕೇಂದ್ರಗಳು ಸರಿಯಾಗಿ ಜಾರಿಯಾಗಿಲ್ಲ. ಭೂಮಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಬಗೆ ಹರಿದಿಲ್ಲ. ಅನುದಾನ ನೀಡಲು ಹಲವು ತೊಡಕುಗಳಿವೆ ಎಂದರು.
ಜಿಪಂ, ತಾಪಂ ಚುನಾವಣೆ ನಡೆಯದಿರುವುದರಿಂದ ಎಲ್ಲ ಕಡೆಗಳಲ್ಲಿ ಅರಣ್ಯ ಹಕ್ಕು ಕಾಯ್ದೆ ಸಮಿತಿಗಳಿಗೆ ಕೋರಂ ಆಗದೇ ಯೋಜನೆಗಳನ್ನು ನಿಲ್ಲಿಸಲಾಗಿದೆ. ಆದಿವಾಸಿಗಳ ದಿನದಂದು ಸಮಸ್ಯೆಗಳ ಬಗ್ಗೆ ಅವಲೋಕನ ಮಾಡಬೇಕು. ಅರಣ್ಯ ಜಿಲ್ಲೆಗಳ ಬುಡಕಟ್ಟು ಜನರ ಬಗ್ಗೆ ಹೆಚ್ಚು ಲಕ್ಷೃ ಕೊಡಬೇಕು. ಹಕ್ಕುಗಳನ್ನು ಕೊಡಿಸಲು ಪ್ರಯತ್ನಿಸಬೇಕು ಎಂದು ಹೇಳಿದರು. ಹರಿಹರ ಶಾಸಕ ಬಿ.ಪಿ. ಹರೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಆದಿವಾಸಿಗಳ ಅಭಿವೃದ್ಧಿಗೆ 24 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗೆ ಅನೇಕ ಯೋಜನೆ ಜಾರಿಗೊಳಿಸಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕೇವಲ 3% ಭರವಸೆಗಳನ್ನು ಮಾತ್ರ ಪೂರೈಸಿದೆ – ಸಿಆರ್ಸಿ ವರದಿ
ಆದಿವಾಸಿಗಳು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಸಮಾವೇಶದಲ್ಲಿ ತೀರ್ಮಾನ ಮಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಸಮಾಜದ ಮುಖ್ಯವಾಹಿನಿಗೆ ಬಂದು ಆರೋಗ್ಯಕರ ಸ್ಪರ್ಧೆ ಮಾಡುವ ಶಕ್ತಿ ಬರಲಿದೆ ಎಂದರು. ವೀರಗೋಟ ಸಿದ್ದರಾಮಾನಂದ ಶ್ರೀಗಳು ಬೆಳ್ಳೂಡಿಯ ರಾಜಗೊಂಡಂ ಕಾಲನಿಯಲ್ಲಿ ಅನೇಕರಿಗೆ ಮನೆ ಇಲ್ಲ. ಅವರಿಗೆ ಮನೆ ಕೊಡಿಸುವಂತೆ ನನಗೆ ಹೇಳಿದರು. ರಾಜ್ಯ ಸರ್ಕಾರದಲ್ಲಿ ಹಣ ಇಲ್ಲದಿರುವ ಬಗ್ಗೆ ಶ್ರೀಗಳ ಗಮನ ಸೆಳೆದಾಗ ನೀವು ಪತ್ರ ಕೊಟ್ಟರೆ ಸರ್ಕಾರದಿಂದ ಅನುದಾನ ಕೊಡಿಸುತ್ತೇನೆ ಎಂದಿದ್ದಾರೆ ಎಂದು ಹೇಳಿದರು. ಪರಿಷತ್ ಖಜಾಂಚಿ ಶ್ರೀನಿವಾಸಗೌಡ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ಸುಮಾರು 49 ಬುಡಕಟ್ಟುಗಳೊಂದಿಗೆ ಪರಿಷತ್ ಕಾರ್ಯ ನಿರ್ವಹಿಸುತ್ತಿದ್ದು, ಆದಿವಾಸಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವೀರಗೋಟ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಅಧ್ಯಕ್ಷ ಎಂ.ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಕೆ.ಎಂ.ಮೇತ್ರಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನವೀನ್, ನಿವೃತ್ತ ಅರಣ್ಯಾಧಿಕಾರಿ ಸುಂದರನಾಯ್ಕ, ಮುಖಂಡರಾದ ಚಂದ್ರಶೇಖರ, ಕೆ.ರಮೇಶ್, ಸೋಮಶೇಖರ್, ಭರಮಣ್ಣ ರಾನೇಬೆನ್ನೂರು, ಜಿಲ್ಲಾಧ್ಯಕ್ಷ ರವಿಕುಮಾರ್ ಎಂ. ಮೇದಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ 20ಕ್ಕೂ ಅಧಿಕ ಆದಿವಾಸಿ ಪಿಎಚ್ಡಿ ಪದವೀಧರರಿಗೆ ಆದಿವಾಸಿ ಸಿರಿ ಪ್ರಶಸ್ತಿ ಪ್ರದಾನಿಸಲಾಯಿತು.
ಇದನ್ನೂ ನೋಡಿ: ಕೃಷಿ ಇಲಾಖೆಯಲ್ಲಿ ಕಳೆದ 8 ವರ್ಷದಿಂದ ಯಾವುದೇ ನೇಮಕಾತಿ ನಡೆದಿಲ್ಲJanashakthi Media