ಆತ್ಮ ನಿರ್ಭರ ಭಾರತ ಎಂದರೆ ಆತ್ಮಗಳ ಮಾರಾಟವೇ?..

ದೇಶವೀಗ ಆತ್ಮನಿರ್ಭರ ಜಪ ಮಾಡುತ್ತಿದೆ. ಚೀನಾ ಗಡಿ ಕಿರಿಕ್ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ಆತ್ಮನಿರ್ಭರ ಅಂದರೆ ಸ್ವಾವಲಂಬನೆ ಅಚ್ಚುಮೆಚ್ಚಿನದಾಗಿ ಕಾಣಿಸಿತ್ತು. ದೇಶವು ಎಲ್ಲದರಲ್ಲೂ ಸ್ವಾವಲಂಬಿ ಆಗುತ್ತದೆ ಎಂದು  ಜನರು ಖುಷಿ ಪಡುತ್ತಿರುವಾಗಲೇ ಈ ಸ್ವಾವಲಂಬಿ ಅಥವಾ ಆತ್ಮ ನಿರ್ಭರ್ ಅಂದರೆ ಸಾರ್ವಜನಿಕ ಉದ್ದಿಮೆಗಳನ್ನು ದೇಶದೊಳಗಿನ ಆಪ್ತ ಬಂಡವಾಳಿಗರಿಗೆ ನೀಡುವುದು ಎಂದು ಬಹುಬೇಗ ಅರ್ಥವಾಗಿಬಿಟ್ಟಿದೆ. ಈಗ ಈ ಆತ್ಮ ನಿರ್ಭರಕ್ಕೆ ಹೊಸ ಸೇರ್ಪಡೆ ವಿಮಾನ ನಿಲ್ದಾಣಗಳ ಖಾಸಗೀಕರಣ. ವಿಮಾನ ನಿಲ್ದಾಣಗಳ ಖಾಸಗೀಕರಣ ಇಂದಿನ ಬಿಜೆಪಿ ಸರ್ಕಾರದ ಯೋಜನೆ ಅಲ್ಲದಿದ್ದರೂ ಯುಪಿಎಗಿಂದ ಅತಿವೇಗವಾಗಿ ಮೋದಿ ಖಾಸಗೀಕರಣದಲ್ಲಿ ಸಾಗುತ್ತಿದ್ದಾರೆ.

ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಡುವ ರೈಲ್ವೆ, ವಿಮಾನಯಾನ ವಿಭಾಗದಲ್ಲಿ ಮೊದಲಿಗೆ ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಿ ನಿರ್ವಹಣೆ ಮಾಡುತ್ತಿತ್ತು. ಬಳಿಕ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ರಾಜ್ಯಗಳು ಯೋಜನೆಗೆ ಅಗತ್ಯವಾಗಿರುವ ಭೂಮಿಯನ್ನು ನೀಡುವ ಒಪ್ಪಂದ ಮಾಡಿಕೊಳ್ಳತೊಡಗಿದವು. ನಂತರ ಸಮಪಾಲು ನೀಡುವ ಯೋಜನೆಯನ್ನು ರಾಜ್ಯಗಳ ಎದುರು ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸತೊಡಗಿತ್ತು. ಅಂದರೆ ಕೇಂದ್ರದ ಇಂತಹ ಯೋಜನೆಗಳಲ್ಲಿ ಕೇಂದ್ರದಷ್ಟೆ ಹಣವನ್ನು ರಾಜ್ಯಗಳೂ ಪಾಲು  ಹೊಂದಿದ್ದವು. ಅಂದರೆ ಇದು ಕೇವಲ ಹೂಡಿಕೆ ಮಾತ್ರ. ಬರುವ ಲಾಭದಲ್ಲಿ ಯಾವ ಪಾಲೂ ಇರುತ್ತಿರಲಿಲ್ಲ.

ಈಗ ಕೇಂದ್ರ ಸರ್ಕಾರವು ಅಂತಹ ಯೋಜನೆಗಳನ್ನು ಖಾಸಗೀಕರಣ ಮಾಡುತ್ತಿದೆ. ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯದೆ ಈ ನಿರ್ಧಾರಕ್ಕೆ ಮುಂದಾಗಿದೆ.

ಒಂದು ಖಾಸಗಿ ಉದ್ದಿಮೆಯನ್ನು ಇಬ್ಬರು ಪಾಲುದಾರರು ಹೊಂದಿದ್ದು, ಅದನ್ನು ಮಾರಾಟ ಮಾಡಬಯಸಿದರೆ ಪಾಲುದಾರರಿಬ್ಬರೂ ಸಹಮತ ಹೊಂದಿರಬೇಕಾಗುತ್ತದೆ. ಅದೇ ರೀತಿ ಸರ್ಕಾರವು ನಿಗಮಗಳ ಮೂಲಕ ಸ್ಥಾಪಿಸಿದ ಉದ್ದಿಮೆಯನ್ನು ಮಾರಾಟ ಮಾಡುವುದು ಸೇರಿದಂತೆ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವಾಗ ಸಮಪಾಲು ಹೊಂದಿರುವ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿಲ್ಲವೇ ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ.

ಈ ಪ್ರಶ್ನೆ ಎದ್ದಿರುವುದು ಕೇರಳದಲ್ಲಿ, ವಿಷಯ ಏನು ಅಂದರೆ ಕೇರಳದ ರಾಜಧಾನಿ ತಿರುವನಂತಪುರದ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅದಾನಿ ಎಂಟರ್ಪ್ರೈಸಸ್ಗೆ ನೀಡುತ್ತಿದೆ.  ಮೊದಲಿಗೆ ನಿರ್ವಹಣೆಗೆ ಮಾತ್ರ  ಎಂದು ಹೇಳಲಾಗಿತ್ತು ಈಗ ಖಾಸಗೀಕರಣವೇ ಆಗುತ್ತಿದೆ. ತಿರುವನಂತಪುರದ ಜೊತೆಗೆ ಗೌಹಾತಿ ಮತ್ತು ಜೈಪುರ ವಿಮಾನ ನಿಲ್ದಾಣಗಳೂ ಅದಾನಿ ಸಮೂಹದ ಪಾಲಾಗುತ್ತಿದೆ. 50 ವರ್ಷಗಳ ಲೀಸ್ ನೀಡಲಾಗುತ್ತಿದೆ. ಈ ಮೂರು ವಿಮಾನ ನಿಲ್ದಾನಗಳ ಅಭಿವೃದ್ಧಿ, ಆಡಳಿತ ನಿರ್ವಹಣೆ ಮತ್ತು ಕಾರ್ಯಾಚರಣೆಯ ಗುತ್ತಿಗೆ ಅವಧಿ 50 ವರ್ಷದ್ದಾಗಿರುತ್ತದೆ.  ಸೇವೆಯಲ್ಲಿ ದಕ್ಷತೆ, ಪರಿಣತಿ ಹಾಗೂ ವೃತ್ತಿಪರತೆಗೆ ಈ ಖಾಸಗೀಕರಣ ಪ್ರಕ್ರಿಯೆ ನೆರವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಅಗತ್ಯವಾದ ಬಂಡವಾಳ ಹೂಡಿಕೆಗೂ ಸಹಾಯಕವಾಗಲಿದೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ತಿರುವನಂತಪುರದ ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಕೇರಳ ಸರ್ಕಾರ ತೀವ್ರ ವಿರೋಧ ಮಾಡುತ್ತಿದೆ. ಅಲ್ಲದೆ ವಿಧಾನಸಭೆಯಲ್ಲಿಯೇ ಒಮ್ಮತದ ನಿರ್ಣಯವೊಂದನ್ನು ಅಂಗೀಕರಿಸಿದೆ.  ಈ ವೇಳೆ ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಮಾತನಾಡುತ್ತಾ, ‘ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಿಶೇಷ ಉದ್ದೇಶದ ಘಟಕದಲ್ಲಿ (ಸ್ಪೆಷಲ್ ಪರ್ಪಸ್ ವೆಹಿಕಲ್– ಎಸ್ಪಿವಿ) ರಾಜ್ಯ ಸರ್ಕಾರದ ಪಾಲೂ ಇದ್ದು, ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಹೇಳಿದ್ದಾರೆ. ‘ವಿಮಾನ ನಿಲ್ದಾಣ ನಿರ್ವಹಣೆಗೆ ಅದಾನಿ ಎಂಟರ್ಪ್ರೈಸಸ್ ಉಲ್ಲೇಖಿಸಿದ ಮೊತ್ತವನ್ನು ರಾಜ್ಯ ಸರ್ಕಾರ ನೀಡಲು ಒಪ್ಪಿದ್ದರೂ, ಕೇಂದ್ರ ಸರ್ಕಾರ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ಸರಿಯಾದ ನಿರ್ಧಾರವಲ್ಲ’ ಎಂದು  ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಖಾಸಗೀಕರಣ ಮಾಡಿ ಬಂಡವಾಳ ಸಂಗ್ರಹ ಮಾಡುವುದೇ ನಿಜವಾದ ಉದ್ದೇಶವಾಗಿದ್ದಲ್ಲಿ ಆ ಮೊತ್ತವನ್ನು ಕೇರಳ ಸರ್ಕಾರ ಯಾಕೆ ಕೊಡಬೇಕು? ಅದಾನಿ ಕಂಪನಿಯೇ ಯಾಕೆ ಆಗಬೇಕು? ಕೇರಳ ಸರ್ಕಾರ ಅಷ್ಟು ಮೊತ್ತವನ್ನು ಕೊಡುತ್ತೇನೆ ಎಂದರೂ ಕೇಂದ್ರ ಸರ್ಕಾರ ಕೊಡದಿರಲು ಕಾರಣವೇನು? ಉದ್ದೇಶಪೂರ್ವಕವಾಗಿಯೇ ಅದಾನಿ ಗುಂಪಿಗೆ ನೀಡಿದೆಯೇ.? ವಿಮಾನ ನಿಲ್ದಾಣ ನಡೆಸುವ ಅನುಭವವಿಲ್ಲದ ಅದಾನಿ ಕಂಪನಿಗೆ  ಯಾಕೆ ಹಠ ಮಾಡಿಕೊಡುತ್ತಿದೆ ಎಂಬೆಲ್ಲಾ ಚರ್ಚೆಗಳು ಕೇರಳದಲ್ಲಿ ಕೇಳಿ ಬರುತ್ತಿವೆ.

ಈ ಸಂಬಂಧ ಕೇರಳದಿಂದ 2 ಲಕ್ಷ ಇ–ಮೇಲ್‌ಗಳು ಪ್ರಧಾನಿ ಕಚೇರಿಗೆ ತಲುಪಿವೆ. ಯಾವುದೇ ಕಾರಣಕ್ಕೂ ತಿರುವನಂತಪುರ ವಿಮಾನನಿಲ್ದಾಣವನ್ನು ಖಾಸಗಿಯವರಿಗೆ ನೀಡಬಾರದು ಎಂಬುದು  ಇ–ಮೇಲ್‌ಗಳ ಮೂಲಕ ರವಾನೆ ಮಾಡಿದ್ದಾರೆ.  ಅದಾನಿ ಕಂಪನಿಗೆ ಕೊಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಮಂಗಳೂರು ವಿಮಾನ ನಿಲ್ದಾಣವನ್ನೂ ಅದಾನಿ ಕಂಪನಿಗೆ ನೀಡಿತ್ತು. ಆದರೆ ಅದಾನಿ ಕಂಪನಿಯು ಜರ್ಮನ್‌ ಕಂಪನಿ ಫ್ಲಘಫನ್‌ ಮೂಂಚನ್‌ ಜಿಎಂಬಿಎಚ್‌ ಎಂಬ ಕಂಪನಿಗೆ ನೀಡಿದೆ. 2020ರ ಫೆಬ್ರವರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣಗಳ ಜೊತೆಗೆ ಅಹ್ಮದಾಬಾದ್‌ ಮತ್ತು ಲಕ್ನೋ ವಿಮಾನ ನಿಲ್ದಾಣಗಳನ್ನು ಅದಾನಿ ಕಂಪನಿಯು ನಿರ್ವಹಣೆಗೆ ನೀಡಿದೆ.

ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಸಂಬಂಧ ಪಟ್ಟಂತೆ ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಕುರಿತ ಸಂಸದೀಯ ಸ್ಥಾಯಿ ಸಮಿತಿ-2013 ರ ನೇತೃತ್ವ ವಹಿಸಿದ್ದ ಅಂದಿನ ರಾಜ್ಯಸಭಾ ಸದಸ್ಯ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ತಾವು ನೀಡಿದ್ದ ವರದಿಯನ್ನು ಈಗ ಅವರು ನೆನಪಿಸಿಕೊಂಡಿದ್ದಾರೆ.  ಸ್ಥಾಯಿ ಸಮಿತಿಯು ವಿಮಾನ ನಿಲ್ದಾಣಲ್ಲಿಗಳ ಖಾಸಗೀಕರಣದ ವಿರುದ್ಧ ಸರ್ವಾನುಮತದಿಂದ ಎಚ್ಚರಿಕೆ ನೀಡಿತ್ತು. ಕುತೂಹಲವೆಂದರೆ ಈ ಸಮಿತಿಯ ಬಿಜೆಪಿಯ ಹಿರಿಯ ಮುಖಂಡ ಮತ್ತು ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಇದ್ದರು.   ಆದರೆ ಈಗ ಲಕ್ನೋ ವಿಮಾನ ನಿಲ್ದಾಣ ಅದಾನಿ ಪಾಲಾದಾಗ ಅವರು ಮೌನವಹಿಸಿದ್ದಾರೆ.

ವಾಯುಪ್ರದೇಶ ಮತ್ತು ಟರ್ಮಿನಲ್ಗಳಲ್ಲಿನ ಸೇವೆಗಳನ್ನು ಖಾಸಗಿ ವಲಯಕ್ಕೆ ನಿಯೋಜಿಸಲು ಮಾದರಿ ರಿಯಾಯಿತಿ ಒಪ್ಪಂದಕ್ಕೆ ತಿದ್ದುಪಡಿ ಮಾಡುವುದರ ವಿರುದ್ಧ ಸ್ಥಾಯಿ ಸಮಿತಿ ವರದಿಯನ್ನು ನೀಡಿತ್ತು, ವರದಿಯು ಸಾರಾಂಶ ಏನಿತ್ತು ಎಂದರೆ “ಮೆಟ್ರೋ ಮತ್ತು ಇತರ ಲಾಭ ಗಳಿಸುವ ವಿಮಾನ ನಿಲ್ದಾಣಗಳು ಖಾಸಗಿಯವರಿಗೆ ಹೋಗುವುದರಿಂದ, ಎಎಐ ಆರ್ಥಿಕವಾಗಿ ಅಶಕ್ತವಾಗುತ್ತದೆ.  ಈ ಮೊದಲು, ಮೆಟ್ರೊ ವಿಮಾನ ನಿಲ್ದಾಣಗಳಿಂದ ಕ್ರಾಸ್ ಸಬ್ಸಿಡಿ ಮೂಲಕ ಗಳಿಸಿದ ಆದಾಯದಿಂದ ಮೆಟ್ರೊ ಅಲ್ಲದ ವಿಮಾನ ನಿಲ್ದಾಣಗಳ ನಷ್ಟವನ್ನು ಸರಿದೂಗಿಸುವ ಸ್ಥಿತಿಯಲ್ಲಿ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಇತ್ತು. ಎಎಐನ ಇತರ ಲಾಭದಾಯಕ ಚಟುವಟಿಕೆಗಳನ್ನು ಹೊರತೆಗೆಯಲಾಗುತ್ತಿದೆ ಮತ್ತು ಪ್ರತ್ಯೇಕ ನಿಗಮಕ್ಕೆ ನೀಡಲಾಗುತ್ತಿದೆ. ಹೀಗೆ ಖಾಲಿಯಾದ ಸಂಪನ್ಮೂಲಗಳೊಂದಿಗೆ ಎಎಐ  ಹೇಗೆ ನಿರ್ವಹಿಸಲು ಸಾಧ್ಯವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಹೇಳಲಾಗಿತ್ತು ಎಂದು ಯೆಚುರಿ ನೆನಪಿಸಿಕೊಂಡಿದ್ದಾರೆ.

2013ರಲ್ಲಿ ಯುಪಿಎ–2 ಸರ್ಕಾರ ಇತ್ತು. ಹಾಗಾಗಿ ಬಿಜೆಪಿ–ಸಂಘ ಪರಿವಾರದ ಟ್ರೇಡ್ ಯೂನಿಯನ್, ಭಾರತೀಯ ಮಜ್ದೂರ್ ಸಂಘ ಕೂಡ ವಿಮಾನ ನಿಲ್ದಾಣಗಳ ಖಾಸಗೀಕರಣದ ಕ್ರಮವನ್ನು ವಿರೋಧಿಸಿತ್ತು. ಜೊತೆಗೆ  ಈ ವಿಷಯದಲ್ಲಿ ಪ್ರತಿಪಕ್ಷಗಳ ಒಕ್ಕೂಟಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿತ್ತು. ಈಗ ಅವರದೇ ಸರ್ಕಾರ ವಿಮಾನ ನಿಲ್ದಾಣಗಳ ಮಾರಾಟದಲ್ಲಿ ತೊಡಗಿದ್ದರೂ ಬಿಎಂಎಸ್ ತುಟಿ ಬಿಚ್ಚುತ್ತಿಲ್ಲ. ಸ್ಥಾಯಿ ಸಮಿತಿ ವರದಿಯಲ್ಲಿ ಬಂದ ಸಾಮೂಹಿಕ ಅಭಿಪ್ರಾಯದಿಂದ ಬಿಜೆಪಿ ಈಗ ದೂರ ಸರಿಯುತ್ತಿದೆ ಎಂದು ಸಿಪಿಐ (ಎಂ) ಮಾಜಿ ಸಂಸದ ಎಂ.ಬಿ.ರಾಜೇಶ್ ಹೇಳಿದ್ದಾರೆ. “ಇದು ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿದ ನಂತರ ಬರೆದ ಉತ್ತಮ ವರದಿಯಾಗಿದೆ. ವಿಮಾನ ನಿಲ್ದಾಣಗಳ ಖಾಸಗೀಕರಣದಲ್ಲಿ ಯೋಗಿ ಆದಿತ್ಯನಾಥ್ ಅವರ ಸ್ಥಾನವೇನು, ”ಎಂದು ರಾಜೇಶ್ ಪ್ರಶ್ನಿಸಿದ್ದಾರೆ.

ತಿರುವನಂತಪುರಂ ಲಾಭ ಗಳಿಸುವ ವಿಮಾನ ನಿಲ್ದಾಣವಾಗಿದೆ ಮತ್ತು ಲಾಭ ಗಳಿಸುವ ವಿಮಾನ ನಿಲ್ದಾಣಗಳ “ಖಾಸಗೀಕರಣದ ಪ್ರಕ್ರಿಯೆಯಲ್ಲಿ ಅಸಾಮಾನ್ಯ ಆತುರವನ್ನು ತೋರಿಸಲಾಗಿದೆ” ಎಂದು  ಎಂ.ಬಿ.ರಾಜೇಶ್ ಆರೋಪಿಸಿದ್ದಾರೆ.

ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳ ಖಾಸಗೀಕರಣವು ಎಎಐಗೆ ಸಾಕಷ್ಟು ಸಂಪನ್ಮೂಲಗಳನ್ನು ಗಳಿಸಲು ಸಹಾಯ ಮಾಡಿದೆ ಎಂಬ ಅಂದಿನ ಯುಪಿಎ ಸರ್ಕಾರದ ವಾದವನ್ನು ಸಮಿತಿ ಒಪ್ಪಿಕೊಂಡಿರಲಿಲ್ಲ,   ಖಾಸಗೀಕರಣದ ಪರವಾಗಿ ಪದೇ ಪದೇ ವಾದಿಸುವಾಗ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳನ್ನು ನಡೆಸಲು ಎಎಐಗೆ ಅವಕಾಶ ನೀಡಿದ್ದರೆ, ಅವರ ಗಳಿಕೆಯ ಪ್ರಮಾಣವು ಇನ್ನೂ ಹೆಚ್ಚಿನದಾಗಿರಬಹುದು ಎಂಬ ಅಂಶವನ್ನು ಕಡೆಗಣಿಸಲು ಸರ್ಕಾರ ಅನುಕೂಲಕರವಾಗಿ ಪ್ರಯತ್ನಿಸುತ್ತದೆ” ಎಂದು ಸಮಿತಿ  ಹೇಳಿದೆ.

ಸಮಿತಿ ವರದಿಯಲ್ಲಿ ಕಂಡುಬರುವುದೇನೆಂದರೆ ವಿಮಾನನಿಲ್ದಾಣಗಳ ಖಾಸಗೀಕರಣದಿಂದ ಭಾರತೀಯ ವಿಮಾನಯಾನ ಸಂಸ್ಥೆಗೆ ಲಾಭ ತರುವಂತದ್ದು ಏನೂ ಇಲ್ಲ ಎಂಬುದು. ಹಾಗಿದ್ದರೂ ಸರ್ಕಾರ ಮಾರಾಟ ಮಾಡಲು ತುದಿಗಾಲಲ್ಲಿ ನಿಲ್ಲುವುದೇಕೆ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು.

Donate Janashakthi Media

Leave a Reply

Your email address will not be published. Required fields are marked *