ಆಗಸ್ಟ್ 9: ದೇಶಾದ್ಯಂತ ಕಾರ್ಮಿಕರು, ರೈತರಿಂದ  ಕ್ವಿಟ್ ಇಂಡಿಯಾ ದಿನಾಚರಣೆ

ಜನವಿರೋಧಿ, ದೇಶ-ವಿರೋಧಿ ಸರ್ಕಾರದ ವಿರುದ್ಧ ದೃಢ ಹೋರಾಟದ ಪಣ

2023 ರ ಜನವರಿ 30 ರಂದು ನವದೆಹಲಿಯಲ್ಲಿ ನಡೆದ ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಒಕ್ಕೂಟಗಳು/ಸಂಘಗಳ ವೇದಿಕೆಯಿಂದ ಜಂಟಿಯಾಗಿ ಆಯೋಜಿಸಲಾದ ಕಾರ್ಮಿಕರ ರಾಷ್ಟ್ರೀಯ ಸಮಾವೇಶವು ನೀಡಿದ ಕರೆಯ ಮೇರೆಗೆ, ಶ್ರಮಜೀವಿಗಳು ಆಗಸ್ಟ್ 9ರಂದು ದೇಶಾದ್ಯಂತ “ದೇಶವನ್ನು ಉಳಿಸಿ, ಜನರನ್ನು ಉಳಿಸಿ” ಎಂಬ ಘೋಷಣೆಯೊಂದಿಗೆ ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು ಎಂದು ವೇದಿಕೆ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದ ಇತಿಹಾಸದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಇದು ತಮ್ಮ ಗಂಟು ಮೂಟೆ ಕಟ್ಟಿಕೊಂಡು ಭಾರತ ಬಿಟ್ಟು ತೊಲಗುವಂತೆ  ವಸಾಹತುಶಾಹಿಗಳಿಗೆ ಕೊನೆಯ ಎಚ್ಚರಿಕೆ ನೀಡಿದ್ದ “ಕ್ವಿಟ್ ಇಂಡಿಯಾ” ದಿನ.

ಇಂದು ಬಿಜೆಪಿ ಆಡಳಿತದಲ್ಲಿ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹೀಗೆ ದುಡಿಯುವ ಜನಸಾಮಾನ್ಯರ ಬದುಕು ಪ್ರತಿಯೊಂದು ಹಂತದಲ್ಲೂ ಹದಗೆಟ್ಟಿದೆ.

ರಾಷ್ಟ್ರೀಯ ಸಂಪನ್ಮೂಲಗಳು ಮತ್ತು ಆಸ್ತಿಗಳು, ಆಯಕಟ್ಟಿನ ಕ್ಷೇತ್ರಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿನ ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಮತ್ತು ಭಾರತೀಯ ಮತ್ತು ವಿದೇಶಿ ಬ್ರ್ಯಾಂಡ್‌ನ ದೊಡ್ಡ ಕಾರ್ಪೊರೇಟ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಸಮಾನತೆಗಳು ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರ ಬದುಕು ದುಸ್ತರವಾಗಿದೆ. ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಮತ್ತು ನಿರುದ್ಯೋಗ, ಉದ್ಯೋಗ ನಷ್ಟ, ವೇತನ ಕುಸಿತ, ನಮ್ಮ ಬಹುಪಾಲು ಜನರಿಗೆ ಸಾಮಾಜಿಕ ಭದ್ರತೆ ಇಲ್ಲದಿರುವ ಸನ್ನಿವೇಶ. ಕಾರ್ಪೊರೇಟ್ ಪರ, ಜನವಿರೋಧಿ, ರಾಷ್ಟ್ರವಿರೋಧಿ ಸರ್ಕಾರದ ವಿರುದ್ಧ ಜನಸಾಮಾನ್ಯರು ಹೋರಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.

ಹೀಗೆಂದು ಗಮನಿಸಿದ್ದ ಕಾರ್ಮಿಕ ಸಂಘಟನೆಗಳು ಜನವರಿ 30 ರಂದು “ದೇಶವನ್ನು ಉಳಿಸಿ, ಜನರನ್ನು ಉಳಿಸಿ” ಕರೆ ನೀಡಿದ್ದವು.  ಅಂದಿನಿಂದಲೇ ದೇಶದ ಮೂಲೆ ಮೂಲೆಗೆ ಈ ಸಂದೇಶವನ್ನು ಹರಡಲು ನಿರತವಾಗಿವೆ, ಜಂಟಿ ಸಭೆಗಳು, ಜಾಥಾಗಳು (ಪಾದಯಾತ್ರೆಗಳು, ಸೈಕಲ್ / ಮೋಟಾರ್ ಸೈಕಲ್ / ಜೀಪ್ ಜಾಥಾಗಳು), ಗೇಟ್ ಸಭೆಗಳು, ಪ್ರದರ್ಶನಗಳು, ಶಾಸಕರು, ಸಂಸದರು ಮುಂತಾದ ಚುನಾಯಿತ ಪ್ರತಿನಿಧಿಗಳಿಗೆ ಮನವಿ,  ಕರಪತ್ರಗಳನ್ನು ಹಂಚುವುದು ಹೀಗೆ ಹತ್ತು ಹಲವು ವಿಧಗಳಲ್ಲಿ ಬುಡಮಟ್ಟದಲ್ಲಿ ಶ್ರಮಜೀವಿಗಳನ್ನು ಈ ಸಂದೇಶವನ್ನು ತಲುಪಿಸಲಾಗಿದೆ.

ಆಗಸ್ಟ್ 9ರಂದು, ಈ ಪತ್ರಿಕಾಹೇಳಿಕೆ ಪ್ರಕಟಿಸುವ ವೇಳೆಗೆ 700 ಕ್ಕೂ ಹೆಚ್ಚು ಜಿಲ್ಲೆಗಳು, 26 ರಾಜ್ಯಗಳ ರಾಜಧಾನಿಗಳಿಂದ ಹಲವಾರು ಸಾವಿರ ತಾಲೂಕುಗಳು/ಮಂಡಲಗಳು ಪ್ರದರ್ಶನಗಳು/ಧರಣಿಗಳು ನಡೆದ ವರದಿಗಳು ಬರುತ್ತಿವೆ ಎಂದು ಹೇಳಿಕೆ ತಿಳಿಸುತ್ತದೆ.

ದೆಹಲಿಯಲ್ಲಿ ಜಂತರ್ ಮಂತರ್ ನಲ್ಲಿ ಜಂಟಿ ಪ್ರತಿಭಟನೆಯನ್ನು ಕೇಂದ್ರ ಮತ್ತು ರಾಜ್ಯ ನಾಯಕರು ಉದ್ದೇಶಿಸಿ ಮಾತನಾಡಿದರು. ಶೆಹನಾಜ್-ಐಎನ್‌ಟಿಯುಸಿ, ಅಮರ್‌ಜೀತ್ ಕೌರ್-ಎಐಟಿಯುಸಿ, ಹರ್ಭಜನ್ ಸಿಂಗ್-ಎಚ್‌ಎಂಎಸ್, ತಪನ್ ಸೇನ್-ಸಿಐಟಿಯು, ಹರೀಶ್ ತ್ಯಾಗಿ-ಎಐಯುಟಿಯುಸಿ, ಲತಾ ಬೆನ್-ಸೇವಾ, ರಾಜೀವ್ ಡಿಮ್ರಿ-ಎಐಸಿಸಿಟಿಯು, ರಶೀದ್ ಖಾನ್-ಎಲ್‌ಪಿಎಫ್, ಶತ್ರುಜಿತ್ ಸಿಂಗ್-ಯುಟಿಯುಸಿ ಸೇರಿದಂತೆ ಕೇಂದ್ರ ನಾಯಕರು ಮಾತನಾಡಿದರು. ಇತರರಲ್ಲಿ ಸಂತೋಷ್ ಕುಮಾರ್-ಎಂಇಸಿ, ನರೇಶ್ ಕುಮಾರ್-ಐಸಿಟಿಯು ಕೂಡ ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ಸರ್ಕಾರದ ನೀತಿಗಳು ಗಾಯಗಳಿಗೆ ಉಪ್ಪು ಸವರುವ ಕೆಲಸವನ್ನೇ ಮಾಡುತ್ತಿವೆ. “ಡಬಲ್ ಇಂಜಿನ್ ಅಭಿವೃದ್ಧಿ” ಎಂದು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿರುವುದರಿಂದ ಎಲ್ಲೆಡೆ ಪ್ರದರ್ಶನಗಳು ಉಗ್ರಗೊಳ್ಳುತ್ತಿವೆ. ಮಣಿಪುರ ಹೊತ್ತಿ ಉರಿಯುತ್ತಿದೆ, ನಮ್ಮ ಪದಕ-ವಿಜೇತೆ  ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ಕೊಡುತ್ತಿರುವವರು ಮುಕ್ತವಾಗಿ ಅಡ್ಡಾಡುತ್ತಿದ್ದಾರೆ, ಮತ್ತು ಈಗ ಹರಿಯಾಣವನ್ನು ಯೋಜಿತ ರೀತಿಯಲ್ಲಿ ಹಿಂಸಾಚಾರಕ್ಕೆ ತಳ್ಳಲಾಗಿದೆ. ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳಿಗೆ ಸವಾಲು ಬಂದಿದೆ. ಈ ಬಿಜೆಪಿ ಸರ್ಕಾರದಿಂದ ಯಾವುದೇ ನಿರೀಕ್ಷೆ ಇಲ್ಲ. ಇದು ಹೋಗಬೇಕು, ರಾಷ್ಟ್ರಕ್ಕೆ ಒಂದು ಉಲ್ಲಾಸಕರ ಬದಲಾವಣೆಯ ಅಗತ್ಯವಿದೆ. ಇದಕ್ಕಾಗಿ ಕಾರ್ಮಿಕ ವರ್ಗ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಆಗಸ್ಟ್ 9ರ ಹೇಳಿಕೆ ತಿಳಿಸಿದೆ.

ಕಾರ್ಪೊರೇಟ್‍ ಲೂಟಿಕೋರರು ಭಾರತ ಬಿಟ್ಟು ತೊಲಗಲಿ, ಕೃಷಿಯಿಂದ ತೊಲಗಲಿ

-ರಾಷ್ಟ್ರಾಧ್ಯಕ್ಷರಿಗೆ ಸಂಯುಕ್ತ ಕಿಸಾನ್‍ ಮೋರ್ಚಾ ಮನವಿ

‘ಕ್ವಿಟ್‍ ಇಂಡಿಯಾ’ ದಿನಾಚರಣೆಯಲ್ಲಿ ದೇಶಾದ್ಯಂತ ರೈತರು ಮತ್ತು ಕೃಷಿ ಕೂಲಿಕಾರರೂ ಭಾಗವಹಿಸಿದ್ದಾರೆ. ಸಂಯುಕ್ರ ಕಿಸಾನ್‍ ಮೋರ್ಚಾ ಈ ಸಂದರ್ಭದಲ್ಲಿ ರಾಷ್ಟ್ರಾಧ್ಯಕ್ಷರಾಗಿರುವ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದ್ದು ಅದರಲ್ಲಿ ಕಾರ್ಪೊರೇಟ್‍ ಲೂಟಿಕೋರರು ಭಾರತ ಬಿಟ್ಟು ತೊಲಗಲಿ, ಕೃಷಿಯಿಂ ದ ತೊಲಗಲಿ ಎಂದು ಆಗ್ರಹಿಸಲಾಗಿದೆ.

ಇದರಲ್ಲಿ ಈ ಕೆಳಗಿನ ಹಕ್ಕೊತ್ತಾಯಗಳನ್ನು  ಮುಂದಿಡಲಾಗಿದೆ:

  • ಒಕ್ಕೂಟ ಸರಕಾರಕ್ಕೆ  ಸಿ2+ 50% ಸೂತ್ರದ ಪ್ರಕಾರ ಎಲ್ಲ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ  ಮತ್ತು ಖಾತರಿ ಖರೀದಿಯ ಕಾನೂನನ್ನು ತರುವಂತೆ ಹೇಳಬೇಕು.
  • ಎಲ್ಲ ಕೃಷಿಕುಟುಂಬಗಳನ್ನು ಕಿರುಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಲೇವಾದೇವಿಗಾರರ ಸಾಲಗಳು ಸೇರಿದಂತೆ ಎಲ್ಲ ಸಾಲಭಾರದಿಂದ ಮುಕ್ರಗೊಳಿಸುವ ಸಮಗ್ರ ಸಾಲಮನ್ನಾ ಯೋಜನೆಯನ್ನು ಘೋಷಿಸಬೇಕು.
  • ವಿದ್ಯುಚ್ಛಕ್ತಿ ಮಸೂದೆ, 2022ನ್ನು ಹಿಂದಕ್ಕೆ ಪಡೆಯಬೇಕು.
  • ರೈತರ ಮತ್ತು ಒಬ್ಬ ಪತ್ರಕರ್ತರ ಹತ್ಯಾಕಾಂಡದ ಪ್ರಧಾನ ಪಿತೂರಿಗಾರ ಕೇಂದ್ರ ಗೃಹ ಖಾತೆಯ ರಾಜ್ಯಮಂತ್ರಿ ಅಜಯ್‍ಮಿಶ್ರ ಟೇನಿಯನ್ನು ವಜಾ ಮಾಡಿ ವಿಚಾರಣೆಗೆ ಗುರಿಪಡಿಸಬೇಕು.
  • ರೈತರ ಹೋರಾಟದಲ್ಲಿ ಹುತಾತ್ಮರಾದ ಎಲ್ಲ ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಮರುವಸತಿ ಕಲ್ಪಿಸಬೇಕು.
  • ಕಾರ್ಪೊರೇಟ್‍ -ಪರವಾದ ಪ್ರಧಾನ ಮಂತ್ರಿ ಫಸಲ್‍ ಬಿಮಾ ಯೋಜನಾವನ್ನು ಹಿಂತೆಗೆದುಕೊಂಡು, ಎಲ್ಲ ಬೆಳೆಗಳಿಗೆ ಸಮಗ್ರವಾದ ಸಾರ್ವಜನಿಕ ವಲಯ ಬೆಳೆ ವಿಮಾ ಯೋಜನೆಯನ್ನು ಸ್ಥಾಪಿಸಬೇಕು.
  • ಎಲ್ಲ ಮಧ್ಯಮ , ಸಣ್ಣ ಮತ್ತು ಅಂಚಿನ ಪರುಷ ಮತ್ತು ಮಹಿಳಾ ರೈತರಿಗೆ, ಮತ್ತು ಕೃಷಿ ಕೂಲಿಕಾರರಿಗೆ ರೂ. 10,000  ರೈತ ಪಿಂಚಣಿ ಯೋಜನೆಯನ್ನು ಘೋಷಿಸಬೇಕು.
Donate Janashakthi Media

Leave a Reply

Your email address will not be published. Required fields are marked *