ಅಫ್ಘಾನಿಸ್ತಾನದಲ್ಲಿ ಖಾಸಗೀ ಮಿಲಿಟರಿ ಕಂಪನಿಗಳ ದರ್ಬಾರು

ನಾಗರಾಜ ನಂಜುಡಯ್ಯ

ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ಮಿಲಿಟರಿಯನ್ನು ಕಡಿಮೆ ಮಾಡುವುದಾಗಿ ಹೇಳುತ್ತಿದೆ. ಅಫ್ಘಾನ್ ವಾಸ್ತವ ಗಮನಿಸಿದರೆ ಹಾಗೇನೂ ಕಾಣಸುತ್ತಿಲ್ಲ.  ಯು.ಎಸ್ ಮಿಲಿಟರಿ ಸಿಬ್ಬಂದಿಯ ಕಡಿತವಾಗಿರಬಹುದು, ಆದರೆ, ಅಫ್ಘಾನಿಸ್ತಾದಲ್ಲಿ ಅಮೆರಿಕನ್ ಖಾಸಗಿ ಮಿಲಿಟರಿ ಕಂಪನಿಗಳ ದರ್ಬಾರು ಹೆಚ್ಚುತ್ತಿರುವಂತೆ ಕಾಣುತ್ತಿದೆ.  ಟ್ರಂಪ್ ಆಡಳಿತದ ಅವಧಿಯಲ್ಲಿ, ಅಫ್ಘಾನಿಸ್ತಾನದಲ್ಲಿ ಖಾಸಗಿ ಭದ್ರತಾ ಗುತ್ತಿಗೆದಾರರ ಬಳಕೆಯು ಶೇ.65 ಕ್ಕಿಂತ ಹೆಚ್ಚಾಗಿದೆ, 6000 ಕ್ಕೂ ಹೆಚ್ಚು ಖಾಸಗಿ ಬಾಡಿಗೆ ಸೈನಿಕರು ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿದ್ದಾರೆ.

ಹಿಂದೆ ಇರಾಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ನಾಗರಿಕರ ಕಗ್ಗೊಲೆಗಳಲ್ಲಿ ದೊಡ್ಡ ಪಾತ್ರ ವಹಿಸಿದ ಬ್ಲ್ಯಾಕ್ ವಾಟರ್ ಸಂಸ್ಥಾಪಕ ಎರಿಕ್ ಪ್ರಿನ್ಸ್, ಅಫ್ಘಾನಿಸ್ತಾನದಲ್ಲಿ ಯುದ್ದ ಮತ್ತು ವಾಯು ಕಾರ್ಯಾಚರಣೆಯನ್ನು ಪೂರ್ಣವಾಗಿ ತನ್ನ ಕಂಪನಿಗೆ ಗುತ್ತಿಗೆ ಕೊಡಿ ಎಂದು ಯುಎಸ್ ಸರ್ಕಾರಕ್ಕೆ ಯೋಜನೆಯನ್ನು ಮುಂದಿಟ್ಟಿದ್ದಾನೆ. ಈತ ಪತ್ರಿಕೆಯೊಂದರಲ್ಲಿ ಬರೆದ ಲೇಖನವೊಂದರಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಸ್ಫೂರ್ತಿ ಮತ್ತು ಆದರ್ಶ ಎಂದಿದ್ದಾನೆ.

ಕೇವಲ 2 ಸಾವಿರ ಬ್ರಿಟಿಶ್ ಅಧಿಕಾರಿಗಳನ್ನು ಇಟ್ಟುಕೊಂಡು ಇಂಡಿಯಾ ದಂತಹ ದೊಡ್ಡ ವಸಾಹತುವನ್ನು 18-19ನೇ ಶತಮಾನದಲ್ಲಿ ನಿಭಾಯಿಸಲಿಕ್ಕೆ ಸಾಧ್ಯವಾಗಿದೆ. ಹೀಗಿರುವಾಗ  ಇಂದಿನ ಉಚ್ಛ ತಂತ್ರಜ್ಞಾನ ಮತ್ತು ಉತ್ಕಷ್ಟ ದೂರ ಸಂಪರ್ಕ ಇರುವಾಗ ಅಫ್ಘಾನಿಸ್ತಾನದಂತಹ ದೇಶವನ್ನು ಪೂರ್ಣವಾಗಿ ನಡೆಸುವುದು ಸಾಧ್ಯವಿಲ್ಲವೇ ಎಂದು ಹೇಳಿರುವುದು ಗಮನಾರ್ಹ ಅಂಶವಾಗಿದೆ.

ಸಾಮ್ರಾಜ್ಯಶಾಹಿ ಯು.ಎಸ್. ತನ್ನ ಪರವಾಗಿ ಖಾಸಗಿ ಕಾರ್ಪೊರೆಟ್‍ಗಳು ಕಡಲುದರೋಡೆ ಮಾಡುವುದು ಮತ್ತು ಇಡೀ ದೇಶಗಳನ್ನು ವಸಾಹತುವಾಗಿ ನಿರ್ವಹಿಸುವ ಬಂಡವಾಳಶಾಹಿಯ ಮುಂದಿನ ಹಂತಕ್ಕೆ ಜಗತ್ತನ್ನು ಎಳೆದೊಯ್ಯಲು ಕಾತುರವಾಗಿದೆ ಎಂಬಂತೆ ಕಾಣುತ್ತಿದೆ.

ಯುಎಸ್ ಕಳೆದ 19 ವರ್ಷಗಳಿಂದ ತಾಲಿಬಾನ್ ವಿರುದ್ದ ಯುದ್ಧದಲ್ಲಿ ತೊಡಗಿದೆ. ಇದಕ್ಕಾಗಿ 2 ಲಕ್ಷ ಕೋಟಿ  ಡಾಲರ್ ಗಿಂತ ಹೆಚ್ಚು ಹಣ ಖರ್ಚು ಮಾಡಿದೆ ಎಂದು ಅಂದಾಜಿಸಲಾಗಿದೆ. ಯುದ್ದ ಪೀಡಿತ ಅಫ್ಘಾನಿಸ್ತಾನಕ್ಕೆ ಶಾಂತಿಯನ್ನು ಮರಳಿ ತರುವಲ್ಲಿ, ತಾಲಿಬಾನ್ ಹೊಸ ಮಿತ್ರ ಎಂದು ಅಧ್ಯಕ್ಷ ಟ್ರಂಪ್ ನಂಬಿದ್ದಾರೆ. ಅಮೆರಿಕಾ ಮತ್ತು ತಾಲಿಬಾನ್ ನಡುವೆ 2020 ರ ಫೆಬ್ರವರಿ 29 ರಂದು ಕತಾರ್ ನ ದೋಹಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಮಾತುಕತೆಯಲ್ಲಿ ಅಫ್ಘಾನಿಸ್ತಾನ ಸರ್ಕಾರವನ್ನು ಉದ್ದೇಶ ಪೂರ್ವಕವಾಗಿಯೇ ಶಾಂತಿ ಪ್ರಕ್ರಿಯೆಯಿಂದ ದೂರವಿಡಲಾಗಿತ್ತು.

ಯುಎಸ್ ಸಮಾಲೋಚಕ ಜಲ್ಮೇ ಖಲೀಲ್ಜಾದ್ ಮತ್ತು ತಾಲಿಬಾನ್ ನ ಸ್ಥಾಪಕ ನಾಯಕ ಮುಲ್ಮಾ ಅಬ್ದುಲ್ ಘನಿ ಬರದಾರ್ ನಡುವೆ ಒಂದು ವರ್ಷದ ಕಾಲ ನಡೆದ ಸುದೀರ್ಘ ಮಾತುಕತೆಯ ನಂತರ ಈ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಆದರೆ ಈ ಒಪ್ಪಂದದ ಪಾಲನೆಯಾಗಿ ಶಾಂತಿ ಸ್ಥಾಪನೆಯಾಗುತ್ತಿದೆಯೇ?

ಆಗಸ್ಟ್ ಅಂತ್ಯದಲ್ಲಿ  ತಾಲಿಬಾನಿನ ಒಂದು ಬಣವು ಅಮೆರಿಕದ ದೊಡ್ಡ ಮಿಲಿಟರಿ ನೆಲೆ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಜಂಟಿ ಯುಎಸ್-ಅಫ್ಘಾನ್ ವಾಯು ನೆಲೆಯಾದ ಕ್ಯಾಂಪ್ ಡ್ವೈರ್ ಮೇಲೆ ಸುಮಾರು ಒಂದು ಡಜನ್ ರಾಕೆಟ್ ಗಳನ್ನು ಹಾರಿಸಿದಾಗ ಟ್ರಂಪ್ ತಾಲಿಬಾನ್ ಮೇಲೆ ಇಟ್ಟುಕೊಂಡಿದ್ದ ಭರವಸೆಗಳು ನಾಶವಾಗಿವೆ. ಹಾಗೆಯೇ, ಕೆಲವು ತಿಂಗಳ ಹಿಂದೆ, ತಾಲಿಬಾನ್ ಹೋರಾಟಗಾರರ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಯುಎಸ್ ಶಾಂತಿ ಒಪ್ಪಂದವನ್ನು ಉಲಂಘಿಸಿತ್ತು.

ಅಮೆರಿಕನ್ ಮಿಲಿಟರಿ ಬಲ ನಿಜವಾಗಿ ತಗ್ಗುತ್ತಿದೆಯಾ? ಹೌದು ಅಮೇರಿಕನ್ ಮಿಲಟರಿ ಬಲ ತಗ್ಗುತ್ತಿದೆ. 2016 ರಲ್ಲಿ ಟ್ರಂಪ್ ಅಧ್ಯಕ್ಷರಾದಾಗ, ಅಫ್ಘಾನಿಸ್ತಾನ ದಲ್ಲಿ ಸುಮಾರು 10 ಸಾವಿರ ಯುಎಸ್ ಮಿಲಿಟರಿ ಸಿಬ್ಬಂದಿ ಇದ್ದರು. ಈ ಸಂಖ್ಯೆ 2011-12ರಲ್ಲಿನ 1 ಲಕ್ಷಕ್ಕೆ ಹೋಲಿಸಿದರೆ ಸಾಕಷ್ಟು ಪ್ರಮಾಣದಲ್ಲಿ ತಗ್ಗಿದೆ.  ಆದರೀಗ ಟ್ರಂಪ್ ರ ತಾಲಿಬಾನ್ ಜೊತೆ ಶಾಂತಿ ಒಪ್ಪಂದದ ಭಾಗವಾಗಿ, ಮತ್ತಷ್ಟು ಕಡಿಮೆಯಾಗುವ ಸಂಭವ ಹೆಚ್ಚಾಗಿದೆ.

2017ರಲ್ಲಿ 10 ಸಾವಿರಕ್ಕೆ ತಗ್ಗಿಸಲಾಗಿತ್ತು. 2018 ರಲ್ಲಿ, 8,600 ಕ್ಕೆ ಇಳಿಸಲಾಯಿತು. ಈ ವರ್ಷ ಅದನ್ನು 4,000 ಕ್ಕೆ ಇಳಿಸಲಾಗುವುದು ಎಂದು ಟ್ರಂಪ್ ಹೇಳಿದ್ದು ನಿಜವಾದೀತೇ ಎಂಬುದರ ಕುರಿತು ಈಗ ಸಂಶಯ ಮೂಡಿದೆ. ಆದರೆ, ಅಮೆರಿಕನ್ ಸಾಮ್ರಾಜ್ಯಶಾಹಿಯನ್ನು 19 ವರ್ಷದಿಂದ ಅನುಭವಿಸುತ್ತಿರುವ ಅಫ್ಘಾನರಿಗೆ ಇದರಲ್ಲಿ ನಂಬಿಕೆ ಮೂಡಿಲ್ಲ.  ಇದು ಟ್ರಂಪ್ ರ ಅಧ್ಯಕ್ಷೀಯ ಚುನಾವಣೆಯ ತಂತ್ರವೆಂಬ ಅನುಮಾನ ಅಮೆರಿಕನರನ್ನೂ  ಕಾಡುತ್ತಿದೆ. ವಿದೇಶಗಳಲ್ಲಿ ಮಿಲಿಟರಿ ದುಸ್ಸಾಹಸಗಳ ಕಾರಣದಿಂದ ಆಗುವ ಯುಎಸ್ ಮಿಲಿಟರಿಯ ಖರ್ಚುಗಳನ್ನು ಕಡಿಮೆ ಮಾಡಲು ತಾನು ಬದ್ದನಾಗಿದ್ದೇನೆ ಎಂದು ಅಮೆರಿಕದ ಮತದಾರರಿಗೆ ಮನವರಿಕೆ ಮಾಡಲು ಟ್ರಂಪ್ ಇಂತಹ ಘೋಷಣೆ ಮಾಡುತ್ತಿದ್ದಾರೆ. ಅಮೆರಿಕಾ ಮತ್ತು ತಾಲಿಬಾನ್ ನಡುವಿನ ದೋಹಾ ಶಾಂತಿ ಒಪ್ಪಂದ ವಾಸ್ತವದಲ್ಲಿ ಕುಂಟುತ್ತಿದ್ದರೂ ಅದು ಕೆಲಸ ಮಾಡುತ್ತಿದೆ. ಇವು ತನ್ನ ವಿದೇಶ ನೀತಿಯ ವಿಜಯ ಎಂದು ತೋರಿಸಿಕೊಳ್ಳಲೂ ಸಹ ಈ ಘೋಷಣೆ ಬೇಕಾಗಿದೆ.

ಈ ಒಪ್ಪಂದದ ಪ್ರಕಾರ ಯುಎಸ್ ಮಿಲಿಟರಿ 2021 ರ ಮಧ್ಯ ಭಾಗದಲ್ಲಿ ಅಫ್ಘಾನಿಸ್ತಾನದಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕು.  ಹಾಗೆಯೇ, ತಾಲಿಬಾನ್ ಸಂಪೂರ್ಣವಾಗಿ ಭಯೋತ್ಪಾದಕ ಅಲ್ ಖೈದಾದಿಂದ ತನ್ನ ಸಂಪರ್ಕವನ್ನು ಕೊನೆಗಾಣಿಸಬೇಕು.  ಆದರೆ, ಎರಡು ಕಡೆಯಿಂದಲೂ ಈ ಬದ್ಧತೆಯನ್ನು ಪೂರೈಸಲಾಗುತ್ತಿಲ್ಲ.

ಬದಲಿಗೆ  ಆ ಘರ್ಷಣೆಗಳು ಮುಂದುವರೆದಿವೆ. ಆದಾಗ್ಯೂ, ಅಫ್ಘಾನಿಸ್ತಾನ ಸರ್ಕಾರ 400 ತಾಲಿಬಾನ್ ಖೈದಿಗಳನ್ನು ಬಿಡುಗಡೆ ಮಾಡಿ, ಸ್ವಲ್ಪ ಮಟ್ಟಿನ  ಪ್ರಗತಿಯನ್ನು ಸಾಧಿಸಿದೆ. ಆದರೆ, ತಾಲಿಬಾನ್ ವಶದಲ್ಲಿರುವ ಸಾವಿರ ಅಫ್ಘಾನ್ ಸರ್ಕಾರಿ ಖೈದಿಗಳನ್ನು ಮತ್ತು  ಪ್ರತಿಯಾಗಿ 5 ಸಾವಿರ ತಾಲಿಬಾನ್ ಯೋಧರನ್ನು ಬಿಡುಗಡೆ ಮಾಡಬೇಕೆಂಬ ಒಪ್ಪಂದದ ಜಾರಿ ಆಮೆಗತಿಯಲ್ಲಿದೆ.

ಅಫ್ಘಾನಿಸ್ತಾನದ ಮತ್ತು ಮಧ್ಯ ಏಷ್ಯಾದ ಪ್ರಾದೇಶೀಕ ವ್ಯೂಹಾತ್ಮಕ ಪರಿಸ್ಥಿತಿಯನ್ನು ಗಮನಿಸಿದರೆ ಅಮೆರಿಕಾವು ತನ್ನ ಮಿಲಿಟರಿ ನೆಲೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಸಂಭವ ಕಡಿಮೆ. ತಾಲಿಬಾನ್ ಮತ್ತು ರಶ್ಯನ್ನರು ಅಫ್ಘಾನಿಸ್ತಾನವನ್ನು ನಿಯಂತ್ರಿಸಲು ಮತ್ತು ಚೀನಿಯರು ತಮ್ಮ ಮೂಲ ಸೌಕರ್ಯ ಯೋಜನೆಗಳನ್ನು ಅಲ್ಲಿ ಪ್ರಾರಂಭಿಸಲು ಅಮೆರಿಕ ಬಿಡುವುದಿಲ್ಲ. ಯುಎಸ್ ಸೈನಿಕರನ್ನು ಕೊಲ್ಲಲು ಅಫ್ಘಾನ್ ದಂಗೆಕೋರರಿಗೆ ರಶ್ಯಾ ಹಣವನ್ನು ನೀಡುತ್ತಿದೆ ಎಂಬ ಯುಎಸ್ ನ ಆಪಾದನೆ ಇಂತಹ ಸೂಚನೆ ನೀಡುತ್ತಿದೆ.

ಮಧ್ಯ ಏಷ್ಯಾದ ಆಯಕಟ್ಟಿನ ಪ್ರದೇಶದಲ್ಲಿ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳಲು ಇರಾನ್, ರಶ್ಯಾ ಮತ್ತು ಚೀನಾ ದೇಶಗಳು  ಸೇರಿಕೊಂಡಿರುವುದು ಹೆಚ್ಚು ಸ್ಪಷ್ಟವಾಗಿ ಗೋಚರಿಸಿರುವ ಈ ಸಮಯದಲ್ಲಿ ಯುಎಸ್  ಮಿಲಿಟರಿ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ಬಿಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಆದ್ದರಿಂದ, ಅಫ್ಘಾನ್ ಭದ್ರತಾ ಪಡೆಗಳನ್ನು ನಿಯಂತ್ರಿಸಲು ಮತ್ತು ತನ್ನ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ಅಫ್ಘಾನಿಸ್ತಾನದಲ್ಲಿ ಯುಎಸ್ ಹೆಚ್ಚಾಗಿ ತನ್ನ “ಖಾಸಗಿ ಸೇನೆ” ಮತ್ತು “ಗೂಢಚಾರಿಕೆ ಸಂಗ್ರಹ ತಂತ್ರಜ್ಞಾನ” ಗಳನ್ನು ಬಳಸಿಕೊಳ್ಳುವ ಯೋಜನೆ ಹೊಂದಿದೆ.

“ಯುದ್ಧ ವಿಮಾನಗಳು, ಗೂಢಚಾರಿಕೆ ವಾಯುದಾಳಿ ನಿಯಂತ್ರಣ ಮತ್ತು ವಿಶೇಷ ಕಮಾಂಡೊ ಪಡೆಗಳ ಕೇಂದ್ರವಾಗಿರುವ” ಎರಡು-ಮೂರು ನೆಲೆಗಳನ್ನು ಮಾತ್ರ ಯು.ಎಸ್ ಮಿಲಿಟರಿ ನೇರವಾಗಿ ನಿರ್ವಹಿಸುವ ಯೋಜನೆ ಇದೆ ಎಂದು ಬ್ರೂಕಿಂಗ್ಸ್ ಇನ್ಸ್ಟಿಟ್ಯೂಟ್ ಹೇಳಿದೆ. ಉಳಿದದ್ದನ್ನು ಖಾಸಗಿ ಮಿಲಿಟರಿ ಕಂಪನಿಗಳಿಗೆ ಹೊರಗುತ್ತಿಗೆ ಕೊಡಲಿದೆಯಂತೆ.

ಒಂದು ಕಡೆ ಮಿಲಿಟರಿ ವಾಪಾಸಾತಿ ಒಪ್ಪಂದ, ಮತ್ತೊಂದು ಕಡೆ ಪೆಂಟಗಾನ್ ನಿಂದ ಖಾಸಗಿ ಮಿಲಿಟರಿ ಗುತ್ತಿಗೆದಾರರಿಗೆ ಕೆಲಸದ ವರ್ಗಾವಣೆ, ಇದು ಟ್ರಂಪ್ ನ ಗೋಸುಂಬೆ ನೀತಿಗೆ ಸಾಕ್ಷಿಯಾಗಿದೆ. ಟ್ರಂಪ್ ಆಡಳಿತದ ಅವಧಿಯಲ್ಲಿ, ಅಫ್ಘಾನಿಸ್ತಾನದಲ್ಲಿ ಖಾಸಗಿ ಭದ್ರತಾ ಗುತ್ತಿಗೆದಾರರ ಬಳಕೆಯು ಶೇ.65 ಕ್ಕಿಂತ ಹೆಚ್ಚಾಗಿದೆ ಅಥವಾ 6000 ಕ್ಕೂ ಹೆಚ್ಚು ಖಾಸಗಿ ಬಾಡಿಗೆ ಸೈನಿಕರು ಅಫ್ಘಾನಿಸ್ತಾನದಲ್ಲಿ ನೆಲೆಗೊಂಡಿದ್ದಾರೆ. ಇವರನ್ನು ಯುಎಸ್ ಖಾಸಗಿ ಮಿಲಿಟರಿ ಕಂಪನಿಗಳು ಬಳಸಿಕೊಳ್ಳುತ್ತವೆ. ಯುಎಸ್ ಮಿಲಿಟರಿಗೆ ಮೂಲಸೌಕರ್ಯದ ಸೇವೆಗಳನ್ನು ಒದಗಿಸುವುದು ಮಾತ್ರವಲ್ಲದೆ ಯುದ್ದ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಕಂಪನಿಗಳಿಗೆ ಗುತ್ತಿಗೆ ಕೊಡಲಾಗುತ್ತಿದೆ. ಆ ಮೂಲಕ ಸಂಘಟಿತದ ಹಿಂಸಾಚಾರದಲ್ಲಿ ಖಾಸಗಿ ಭದ್ರತಾ ಕಂಪನಿಗಳನ್ನು ಇಳಿಸಲಾಗಿದೆ. ಈ ಹಿಂದೆ, ಇರಾಕ್ ಮತ್ತು ಅಫ್ಘಾನ್ ಯುದ್ದಗಳಲ್ಲಿ ಅವು ಭಾಗವಹಿಸಿವೆ. ಖಾಸಗಿ ಬಾಡಿಗೆ ಸೈನಿಕರನ್ನು ಬಳಸಿಕೊಂಡು ವೆನೆಜುವೆಲಾದಲ್ಲಿ ಕ್ಷಿಪ್ರ ದಾಳಿ ನಡೆಸಿದ್ದು, ಅಲ್ಲಿನ ಭದ್ರತಾ ಪಡೆಗಳ ಮುಂಜಾಗ್ರತೆ ಕ್ರಮದಿಂದ, ಕ್ಷಿಪ್ರ ದಾಳಿಯನ್ನು ಹಿಮೆಟ್ಟಿಸಿದ್ದು ಇತ್ತೀಚಿನ ಸಾಕ್ಷಿಯಾಗಿದೆ.

ಇಂತಹ ಖಾಸಗೀ ಮಿಲಿಟರಿ ಕಂಪನಿಗಳಿಗೆ ಯುಎಸ್ ನೀಡುವ ಪ್ರೋತ್ಸಾಹ ಎಷ್ಟಿದೆ ಎಂದರೆ, ಹಿಂದೆ ಇರಾಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ನಾಗರಿಕರ ಕಗ್ಗೊಲೆಗಳಲ್ಲಿ ದೊಡ್ಡ ಪಾತ್ರ ವಹಿಸಿದ ಬ್ಲ್ಯಾಕ್ ವಾಟರ್ ಸಂಸ್ಥಾಪಕ ಎರಿಕ್ ಪ್ರಿನ್ಸ್, ಅಫ್ಘಾನಿಸ್ತಾನದಲ್ಲಿ ಯುದ್ದ ಮತ್ತು ವಾಯು ಕಾರ್ಯಾಚರಣೆಯನ್ನು ಸಹ ಪೂರ್ಣವಾಗಿ ತನ್ನ ಕಂಪನಿಗೆ ಗುತ್ತಿಗೆ ಕೊಡಿ ಎಂದು ಯುಎಸ್ ಸರ್ಕಾರಕ್ಕೆ ಯೋಜನೆಯನ್ನು ಮುಂದಿಟ್ಟಿದ್ದಾನೆ.

ಇತ್ತೀಚೆಗೆ ಯು.ಎಸ್ ಸರಕಾರದ ನ್ಯಾಯ ಇಲಾಖೆ ತಾನು ಕಡಲ ಮಧ್ಯದಲ್ಲಿ ದೊಡ್ಡ ಹಡಗೊಂದರಲ್ಲಿ ಇರಾನ್ ರಫ್ತು ಮಾಡುತ್ತಿದ್ದ 11.2 ಲಕ್ಷ ಬ್ಯಾರೆಲ್ ತೈಲವನ್ನು, ತನ್ನ ಮಿಲಿಟರಿ ಬಳಸದೆ,  ಸಶಸ್ತ್ರ ಬಾಡಿಗೆ ಸೈನ್ಯವನ್ನು ಬಳಸಿ ಕಸಿದುಕೊಂಡಿದ್ದೇವೆ ಎಂದು ಕೊಚ್ಚಿಕೊಂಡಿದೆ. ಅಂತರ್ರಾಷ್ಟ್ರೀಯ ಕಾನೂನುಗಳ ಪ್ರಕಾರ ‘ಕಡಲುಗಳ್ಳತದ ಅಪರಾಧ’ ಎಂದು ಕರೆಯಲಾಗುವ ಈ ಕ್ರಮವನ್ನು ಯು.ಎಸ್ ಕೋರ್ಟು ಎತ್ತಿ ಹಿಡಿದಿದೆ.  ಈ ತೈಲ ಯು.ಎಸ್ ಸರಕಾರ ‘ಭಯೋತ್ಪಾದಕ ಸಂಘಟನೆ’ಎಂದು ಘೋಷಿಸಿರುವ ಇರಾನಿನ ಸೈನ್ಯದ ಪ್ರಭಾವವನ್ನು ಹೆಚ್ಚಿಸುತ್ತದೆ.

ನಿಯಮಗಳನ್ನು,  ಒಪ್ಪಂದಗಳನ್ನು ಒಳಗೊಂಡ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ನಾಶಮಾಡಲು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳನ್ನು ದುರ್ಬಲಗೊಳಿಸಲು ಯು,ಎಸ್ ಶತಪ್ರಯತ್ನ ಮಾಡುತ್ತಿದೆ. ಯು.ಎಸ್ ಸಾಮ್ರಾಜ್ಯಶಾಹಿ ತನ್ನ ಪರವಾಗಿ ಖಾಸಗಿ ಕಾರ್ಪೊರೆಟುಗಳು ಕಡಲುದರೋಡೆ ಮಾಡುವುದು ಮತ್ತು ಇಡೀ ದೇಶಗಳನ್ನು ವಸಾಹತುವಾಗಿ ನಿರ್ವಹಿಸುವ ಬಂಡವಾಳಶಾಹಿಯ ಮುಂದಿನ ಹಂತಕ್ಕೆ ಜಗತ್ತನ್ನು ಎಳೆದೊಯ್ಯಲು ಕಾತುರವಾಗಿದೆ.

ಭಾರತದ ಆಳುವ ವರ್ಗ ‘ಚೀನಿ ವಿಸ್ತರಣವಾದ’ದ ವಿರುದ್ಧ ಹೋರಾಡುವ ಮತ್ತು ‘ಸಾಂಸ್ಕøತಿಕ ರಾಷ್ಟ್ರವಾದ’ವನ್ನು ಉತ್ತೇಜಿಸುವ ಭರದಲ್ಲಿ, ಯು.ಎಸ್ ಸಾಮ್ರಾಜ್ಯಸಾಹಿ ಅಂತರ್ರಾಷ್ಟ್ರೀಯ ವ್ಯವಸ್ಥೆಯ ನಿಯಮಗಳನ್ನು ತಲೆಕೆಳಗೆ ಮಾಡುತ್ತಿದೆ  ಎಂಬುದನ್ನು ಗುರುತಿಸದಷ್ಟು ಕುರುಡಾಗಿದೆ.

Donate Janashakthi Media

Leave a Reply

Your email address will not be published. Required fields are marked *