ಅನನ್ಯ ಭೂಮಿ
ಉರಿವ ಸೂರ‍್ಯ
ಶಕ್ತಿ ಮೂಲವೆಂದು ಎಲ್ಲ ಹೇಳುತ್ತಾರೆ
ಸೂರ್ಯನಿಂದಲೇ ಬೆಳಕು ಬಿಸಿಲು ಸುಗ್ಗಿ
ಸೂರ್ಯನಿಂದಲೇ ಎಲ್ಲ ಎಲ್ಲ.
ಈ ಬೆಳಕು ಈ ಬಿಸಿಲು
ಬುವಿಯ ತಾವರೆಯನರಳಿಸುವ
ನೀಲಲೋಹಿತ ಜಾಲ
ಎಲ್ಲ ಸೂರ‍್ಯನದೇ ದೇಣಿಗೆ.
ಇದೆಲ್ಲ ಸತ್ಯವೇ ಸರಿ
ಆದರೆ
ಸೂರ್‍ಯ ತೇಜದಸಾಧ್ಯ ಪ್ರೀತಿ
ತಾಳಲಾರದೆ ಓಡಿ ಹೋದಳು ಮಡದಿ
ನೆರಳ ನಿಲಿಸಿ ಗೊತ್ತೆ ನಿಮಗೆ.
ಈ ಅನಂತ ವಿಶ್ವದಲ್ಲಿ
ಸೂರ್ಯನೊಬ್ಬನೇ ಏನು
ಅನಂತ ಸೂರ್ಯರಿದ್ದಾರೆ.
ಆದರೆ ಭೂಮಿ
ಇರುವುದೊಂದೇ
ಸೂರ್ಯನುಗುಳುವ ವಿಷವ
ತನ್ನ ಗಾಳಿಸೆರಗಿನಲಿ ಸೋಸಿ
ಜೀವ ಸಂಕುಲಕೆ ಹಾಲೆರೆವ
ಬಣ್ಣವಿಲ್ಲದ ಸೂರ್ಯನ ಬೆಳಕಿಗೆ
ಕಾಮನಬಿಲ್ಲಿನೇಳು ಬಣ್ಣ ತರುವ
ಗಂಧವತೀ ಜೀವಪಾಲಿನಿ
ಗಾಳಿ ನೀರಿನಮೃತವರ್ಷಿಣಿ
ಇಳಾ
ಒಬ್ಬಳೇ
ನೀನೊಬ್ಬಳೇ
ಕ್ಷಮಿಸು ಸೂರ್‍ಯ
ನಿನ್ನೊಳಗನಂತ ಶಕ್ತಿಯಿದೆ
ಮೊಳೆವ ಬೀಜಗಳನದು ಸುಟ್ಟುಹಾಕದ ಹಾಗೆ
ಗಾಳಿ ಸೆರಗ ಮುಚ್ಚಿ
ತೇಜೋ ಬಿಂದು
ಮೊಗ್ಗಾಗಿ ಹೂವಾಗಿ
ರೂಪಿಸಿತಾವ ತಾಯೊಡಲೆ ಭೂಮಿ
ಅಹಂಕಾರ ನಿನ್ನದು ಗೆಲವು ಅವಳದು
– ಸ. ಉಷಾ