ಅದಾನಿ ಸಮೂಹ ಕೋಟ್ ಮಾಡಿದಷ್ಟೇ ಮೊತ್ತ ನೀಡುವ ಭರವಸೆ ನೀಡಿದರೂ ಗಮನಕ್ಕೆ ತೆಗೆದುಕೊಳ್ಳದ ಕೇಂದ್ರ ಸರ್ಕಾರ
ತಿರುವನಂತಪುರಂ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ಗೆ ಗುತ್ತಿಗೆ ನೀಡುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಕೇರಳ ವಿಧಾನಸಭೆಯಲ್ಲಿ ಸೋಮವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಲಾಗಿದೆ.
ವಿಧಾನಸಭೆಯು ಅದಾನಿ ಸಮೂಹಕ್ಕೆ ತಿರುವನಂತಪುರಂ ವಿಮಾನ ನಿಲ್ದಾಣವನ್ನು ನಿರ್ವಹಣೆಗೆ ನೀಡಲು ವಿರೋಧ ನಿರ್ಣಯವನ್ನು ಅಂಗೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಿಶೇಷ ಉದ್ದೇಶದ ಘಟಕದಲ್ಲಿ (ಸ್ಪೆಷಲ್ ಪರ್ಪಸ್ ವೆಹಿಕಲ್– ಎಸ್‌ಪಿವಿ) ರಾಜ್ಯ ಸರ್ಕಾರದ ಪಾಲೂ ಇದ್ದು, ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಹೇಳಿದರು.
ಪಿಣರಾಯಿ ವಿಜಯನ್, ಮುಖ್ಯಮಂತ್ರಿ
ವಿಮಾನ ನಿಲ್ದಾಣ ನಿರ್ವಹಣೆಗೆ ಅದಾನಿ ಎಂಟರ್‌ಪ್ರೈಸಸ್ ಉಲ್ಲೇಖಿಸಿದ ಮೊತ್ತವನ್ನು ರಾಜ್ಯ ಸರ್ಕಾರ ನೀಡಲು ಒಪ್ಪಿದ್ದರೂ, ಕೇಂದ್ರ ಸರ್ಕಾರ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ಸರಿಯಾದ ನಿರ್ಧಾರವಲ್ಲ.
ಪಿಣರಾಯಿ ವಿಜಯನ್, ಮುಖ್ಯಮಂತ್ರಿ
ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಥಾಲ್ ಅವರು ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವುದರ ವಿರುದ್ಧದ ನಿರ್ಣಯವನ್ನು ಸದನದಲ್ಲಿ ಬೆಂಬಲಿಸಿದ್ದರೂ, ಸದನದ ಹೊರಗೆ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.